ಟಿಕೇಟ್‌ ಸಿಗದಕ್ಕೆ ಕೇಶಮುಂಡನ! 33 ಶಾಸಕರು ಸ್ಪರ್ಧೆಯಲ್ಲಿಲ್ಲ!! ಅಭ್ಯರ್ಥಿಯನ್ನು ಕೇಳದೆ ಟಿಕೆಟ್‌ ಘೋಷಣೆ!!!

  • ಕೇರಳ ವಿಧಾನಸಭೆಯ ನಡೆಯುತ್ತಿರುವ ಚುನಾವಣೆಯಲ್ಲಿ ಮೈತ್ರಿ ಪಕ್ಷಗಳಿಂದ ಈಗಾಗಲೇ ಅಭ್ಯರ್ಥಿಗಳು ಪ್ರಚಾರವನ್ನು ಜೋರಾಗಿಯೇ ಹಮ್ಮಿಕೊಂಡಿದ್ದಾರೆ.
  • ಈ ಹಿಂದಿನಿಂದಲೂ ಇಲ್ಲಿ ಎಡರಂಗ (ಎಲ್‌ಡಿಎಫ್‌) ಮತ್ತು ಸಂಯುಕ್ತ ರಂಗ (ಯುಡಿಎಫ್‌) ರಾಷ್ಟ್ರೀಯ ಪಕ್ಷಗಳು ಮತ್ತು ರಾಜ್ಯದ ಪ್ರಮುಖ ಪಕ್ಷಗಳು ಚುನಾವಣಾ ಮೈತ್ರಿ ಮಾಡಿಕೊಂಡು ಅಧಿಕಾರವನ್ನು ಹಿಡಿಯುತ್ತಿದೆ.
  • ಕಳೆದ ಐದು ವರ್ಷಗಳು ಅಧಿಕಾರವನ್ನು ನಡೆಸಿರುವುದು ಎಡರಂಗ ಮೈತ್ರಿಕೂಟ.

ಬಿಜೆಪಿ :  ಕೇಂದ್ರದಲ್ಲಿ ಅಧಿಕಾರವನ್ನು ನಡೆಸುತ್ತಿರುವ ಭಾರತೀಯ ಜನತಾ ಪಕ್ಷ(ಬಿಜೆಪಿ)ವು ಕೇರಳದಲ್ಲಿ ಚುನಾವಣಾ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಬಿಜೆಪಿ 115 ಕ್ಷೇತ್ರದಲ್ಲಿ ಇತರೆ ಎನ್‌ಡಿಎ ಮೈತ್ರಿ ಪಕ್ಷಗಳು 25 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದ್ದಾರೆ.

ಅತ್ಯಂತ ಅಚ್ಚರಿಯ ವಿಚಾರವೆಂದರೆ, ಬಿಜೆಪಿ ಅಭ್ಯರ್ಥಿಯೆಂದು ಘೋಷಣೆಯಾದೊಡನೆ ಆಚ್ಚರಿಗೊಂಡ ಎಂಬಿಎ ಪದವೀಧರ ತಾನು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಘೋಷಣೆ ಮಾಡಿರುವುದು ಬಿಜೆಪಿ ಪಕ್ಷಕ್ಕೆ ಭಾರಿ ಮುಖಭಂಗವಾಗಿದೆ.

ಪರಿಶಿಷ್ಟ ಪಂಗಡಕ್ಕೆ ಮೀಸಲಾದ ವಯನಾಡ್‌ ಜಿಲ್ಲೆಯ ಮಾನಂದವಾಡಿ ಕ್ಷೇತ್ರದಿಂದ 31 ವರ್ಷದ ಎಂಬಿಎ ಪದವೀಧರ ಸಿ.ಮಣಿಕುಟ್ಟನ್‌ ಅಭ್ಯರ್ಥಿಯೆಂದು ಘೋಷಣೆ ಮಾಡಿತು. ಅವರು ಚುನಾವಣಾ ಕಣದಿಂದ ಹಿಂದೆ ಸರಿದು ಬಿಜೆಪಿಗೆ ಕೈಕೊಟ್ಟಿದ್ದಾರೆ.

ಪನಿಯ ಸಮುದಾಯಕ್ಕೆ ಸೇರಿದ ಮಣಿಕುಟ್ಟನ್‌ ʻʻಬಿಜೆಪಿ ಪಕ್ಷವು ಅಭ್ಯರ್ಥಿಯಾಗಿ ಘೋಷಣೆ ಮಾಡಿದೆ. ಆದರೆ ನನಗೆ ರಾಜಕಾರಣದಲ್ಲಿ ಭಾಗವಹಿಸಲು ಇಷ್ಟಪಡುವುದಿಲ್ಲ. ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ನನಗೆ ಕೆಲಸ ಮತ್ತು ಕುಟುಂಬ ನಿರ್ವಹಣೆಯೇ ಪ್ರಮುಖವಾದದ್ದು, ನಮ್ಮ ಕುಟುಂಬದವರಿಗೂ ರಾಜಕೀಯದಲ್ಲಿ ಆಸಕ್ತಿಯಿಲ್ಲ ಇಲ್ಲʼʼ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಹಾಗೆಯೇ, ಮೆಟ್ರೋಮ್ಯಾನ್‌ ಎಂದೇ ಖ್ಯಾತರಾದ ಇ.ಶ್ರೀಧರನ್‌ ಬಿಜೆಪಿ ಪಕ್ಷ ಸೇರಿ ಚುನಾವಣೆ ಸ್ಪರ್ಧಿಸುತ್ತಿರುವು ನಿರ್ಧಾರವಾಗುತ್ತಿದ್ದಂತೆ ಶ್ರೀಧರನ್‌ ಅವರೇ ಮುಂದಿನ ಮುಖ್ಯಮಂತ್ರಿ ಎಂದು ಬಿಂಬಿಸಲು ಕೆಲವರು ಪ್ರಯತ್ನಿಸಿದ್ದರು. ನಂತರದಲ್ಲಿ ಶ್ರೀಧರನ್‌ ಮುಖ್ಯಮಂತ್ರಿ ಅಭ್ಯರ್ಥಿಯಲ್ಲವೆಂದು ಸಮಜಾಯಿಸಿ ನೀಡಬೇಕಾಗಿ ಬಂದಿತು.

ಕಾಂಗ್ರೆಸ್‌ :  ಸಂಯುಕ್ತ ರಂಗ ಮೈತ್ರಿಕೂಟದ ಕಾಂಗ್ರೆಸ್‌ ಪಕ್ಷವು 86 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಿತು. ಚುನಾವಣೆಯಲ್ಲಿ ತನಗೂ ಟಿಕೇಟ್‌ ಸಿಗಬಹುದೆಂಬ ಬಹುನಿರೀಕ್ಷೆಯಲ್ಲಿದ್ದ ಮಹಿಳಾ ವಿಭಾಗದ ಮುಖ್ಯಸ್ಥರೊಬ್ಬರು ತಮ್ಮನ್ನು ಅಭ್ಯರ್ಥಿಯೆಂದು ಘೋಷಣೆ ಮಾಡದಿರುವುದನ್ನು ಪ್ರತಿಭಟಿಸಿದ್ದಾರೆ.

ಲತಿಕಾ ಸುಭಾಷ್‌ ರವರು ಪಕ್ಷವು ತಮಗೆ ಟಿಕೇಟ್‌ ನೀಡದಿರುವುದನ್ನು ಖಂಡಿಸಿ ಕೇರಳ ಕಾಂಗ್ರೆಸ್‌ ಪಕ್ಷದ ಕಚೇರಿ ಮುಂಭಾಗ ತಲೆ ಬೋಳಿಸಿಕೊಳ್ಳುವ ಮೂಲಕ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

ಕೇರಳ ಕಾಂಗ್ರೆಸ್‌ ಇತಿಹಾಸದಲ್ಲಿ ಇದೇ ಮೊಟ್ಟಮೊದಲ ಬಾರಿಗೆ ಈ ರೀತಿ ನಡೆದಿರುವುದು. ಪಕ್ಷದ ನಾಯಕತ್ವದ ವಿರುದ್ಧ ಈ ರೀತಿಯ ಪ್ರತಿಭಟನೆ ವ್ಯಕ್ತವಾಗಿರುವುದು ಸಹ ಇದೇ ಮೊದಲಾಗಿದೆ. ಎಟ್ಟುಮಣ್ಣೂರು ಕ್ಷೇತ್ರದಿಂದ ಸ್ಪರ್ಧಿಸಲು ಆಸಕ್ತರಾಗಿದ್ದ ಲತಿಕಾ ಸುಭಾಷ್‌ ಕಾಂಗ್ರೆಸ್‌ ಪಕ್ಷಕ್ಕೆ ರಾಜೀನಾಮೆ ನೀಡಿ, ಪಕ್ಷದ ಕಚೇರಿ ಮುಂಭಾಗದ ಅಂಗಳದಲ್ಲಿ ತಲೆ ಬೋಲಿಸಿಕೊಳ್ಳುವ ಮೂಲಕ ಪ್ರತಿಭಟನೆ ನಡೆಸಿದ್ದಾರೆ.

ಚುನಾವಣೆ ಹತ್ತಿರವಾಗುತ್ತಿದ್ದಂತೆ ಕೇರಳ ಕಾಂಗ್ರೆಸ್‌ ಪಕ್ಷಕ್ಕೆ ಮತ್ತೊಂದು ಅಘಾತವಾಗಿದ್ದು ದಶಕಗಳ ಕಾಲ ಕಾಂಗ್ರೆಸ್‌ ಪಕ್ಷದಲ್ಲಿ ಹಲವು ಪ್ರಮುಖ ಸ್ಥಾನಗಳನ್ನು ಅಲಂಕಿರಿಸಿದ್ದ ಪಿಸಿ ಚಾಕೋ ಮತ್ತು ವಿಜಯನ್ ಥೋಮಸ್ ಕಾಂಗ್ರೆಸ್ ತೊರೆದು ಕಮಲ ಹಿಡಿದ್ದಾರೆ. ಕಾಂಗ್ರೆಸ್‌ ನಲ್ಲಿ ಎರಡು ಗುಂಪುಗಳಿದ್ದು ಮಾಜಿ ಮುಖ್ಯಮಂತ್ರಿ ಉಮ್ಮನ್‌ ಚಾಂಡಿ ಮತ್ತು ರಮೇಶ್‌ ಚೆನ್ನಿತಲ ಅವರ ಗುಂಪುಗಾರಿಕೆಯಿಂದ ಕೇರಳ ಕಾಂಗ್ರೆಸ್‌ ನಲ್ಲಿ ಹಲವು ನಾಯಕರಲ್ಲಿ ಅಸಮಾಧಾನದ ಹೊಗೆಯಾಡುತ್ತಿದೆ.

ಬಿಜೆಪಿ-ಕಾಂಗ್ರೆಸ್‌ ಪಕ್ಷಗಳಲ್ಲಿ ಅತ್ಯಂತ ಭಿನ್ನವಾಗಿ ಸಾಕಷ್ಟು ಬೆಳವಣಿಗೆಯಾಗುತ್ತಿರುವ ನಡುವೆಯೇ ದೇಶದಲ್ಲಿ ಸ್ವಾತಂತ್ರ್ಯ ನಂತರದಲ್ಲಿ ಕಾಂಗ್ರೆಸ್‌ಯೇತರ ರಾಜಕೀಯ ಪಕ್ಷದ ಅಧಿಕಾರ ನಡೆಸಿದ ಖ್ಯಾತಿ ಕೇರಳ ರಾಜ್ಯಕ್ಕೆ ಸಲ್ಲುತ್ತದೆ. ಆಗ ಕಮ್ಯೂನಿಸ್ಟ್‌ ಪಕ್ಷ ಮುಖ್ಯಮಂತ್ರಿ ಇ.ಎಂ.ಎಸ್‌.ನಂಬೂದರಿಪಾಡ್‌ ನೇತೃತ್ವದ ಪಕ್ಷ ಅಧಿಕಾರ ಹಿಡಿಯಿತು. ಪ್ರಸಕ್ತ ಐದು ವರ್ಷ ಅಧಿಕಾರವನ್ನು ನಡೆಸಿದ ಪಿಣರಾಯಿ ವಿಜಯನ್‌ ಅವರು ಸಹ ಸಿಪಿಐ(ಎಂ) ಪಕ್ಷದವರು. ಚುನಾವಣೆಯಲ್ಲಿ ಈ ಪಕ್ಷದ್ದು ಅತ್ಯಂತ ಭಿನ್ನತೆಯನ್ನು ತೋರಿಸುತ್ತದೆ.

ಸಿಪಿಐ(ಎಂ) :  ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪಕ್ಷವು ಈಗಾಗಲೇ 83 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಮುಖ್ಯಮಂತ್ರಿ ಒಳಗೊಂಡು ಪ್ರಮುಖ ಸಚಿವರು ಚುನಾವಣಾ ಕಣದಲ್ಲಿ ಇದ್ದಾರೆ. ಅದಕ್ಕಿಂತ ಪ್ರಮುಖ ವಿಚಾರವೆಂದರೆ, ಈ ಬಾರಿ ಸಿಪಿಐ(ಎಂ) ಪಕ್ಷದಿಂದ ಶಾಸಕರಾಗಿದ್ದ 33 ಜನ ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸುತ್ತಿಲ್ಲ. ಅದರಲ್ಲಿ ಐದು ಜನ ಸಚಿವರು ಒಳಗೊಂಡಿದ್ದಾರೆ.

ಎರಡು ಬಾರಿ ಶಾಸಕರಾಗಿ ಅಥವಾ ಸಚಿವರಾಗಿ ಕೆಲಸ ಮಾಡಿರುವವರು ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ ಎಂಬುದು ಸಿಪಿಐ(ಎಂ) ಪಕ್ಷದ ನಿಲುವಾಗಿದೆ. ಹೀಗಾಗಿ ಹಿಂದಿನ ಚುನಾವಣೆಯಲ್ಲಿ ಗೆದ್ದ ಶಾಸಕರು ಕೇರಳ ವಿಧಾನಸಭೆಗೆ ಸ್ಪರ್ಧಿಸುತ್ತಿರುವ ಅಭ್ಯರ್ಥಿಯನ್ನಾಗಿ ತಮ್ಮನ್ನು ಮತ್ತೆ ಘೋಷಣೆ ಮಾಡದಿರುವ ಬಗ್ಗೆ ಯಾರೊಬ್ಬರೂ ಪಕ್ಷದ ವಿರುದ್ದ ತಮ್ಮ ಹೇಳಿಕೆಯನ್ನು ನೀಡಲಿಲ್ಲ ಮತ್ತು ಚುನಾವಣಾ ಪ್ರಚಾರದಲ್ಲಿ ನಿರಾಸಕ್ತಿಯನ್ನು ಸಹ ವಹಿಸದಿರುವುದು ಕೇರಳದ ಚುಣಾವಣಾ ಕಣದಲ್ಲಿ ಅತ್ಯಂತ ಆಕರ್ಷಕವಾದ ವಿಷಯವಾಗಿದೆ.

ಪಕ್ಷದ ತೀರ್ಮಾನಕ್ಕೆ ಬದ್ಧರಾಗಿರುವ ಇವರುಗಳು ಸಿಪಿಐ(ಎಂ) ಪಕ್ಷದ ನಿರ್ಣಯದಂತೆ ನಾವು ಕೆಲಸ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಪಕ್ಷವು ತಮಗೆ ನೀಡಿರುವ ಜವಾಬ್ದಾರಿಯನ್ನು ವಹಿಸಿಕೊಂಡಿರುವ ಇವರು ತಮ್ಮ ಕ್ಷೇತ್ರಗಳಲ್ಲಿ ಸ್ಪರ್ಧೆಮಾಡಿರುವ ಸಿಪಿಐ(ಎಂ) ಅಭ್ಯರ್ಥಿಗಳ ಪರವಾಗಿ ಪ್ರಚಾರದಲ್ಲಿ ತೊಡಗಿದ್ದಾರೆ.

ಕಾಂಗ್ರೆಸ್‌ ಎಂ :  ರಾಜ್ಯದಲ್ಲಿ ಕಾಂಗ್ರೆಸ್‌‌ ಎಂ ಪಕ್ಷವು ತನ್ನದೇ ಪ್ರಭಾವವನ್ನು ಹೊಂದಿರುವ ಪಕ್ಷ. ಈ ಪಕ್ಷವು ಈ ಹಿಂದೆ ಸಂಯುಕ್ತ ರಂಗದ ಭಾಗವಾಗಿತ್ತು. ಪ್ರಸಕ್ತ ಚುನಾವಣೆಯಲ್ಲಿ ಎಡರಂಗದೊಂದಿಗೆ ಮೈತ್ರಿ ಮಾಡಿಕೊಂಡಿದೆ. ಎಡರಂಗ ಮೈತ್ರಿಯ ಭಾಗವಾಗಿ ಕೇರಳದಲ್ಲಿ 13 ಕ್ಷೇತ್ರಗಳಲ್ಲಿ ಈ ಪಕ್ಷ ಸ್ಪರ್ಧೆಯಲ್ಲಿದೆ.

ಕಾಂಗ್ರೆಸ್‌ ಎಂ ಪಕ್ಷದ ಸ್ಥಾಪಕ ಕೆ.ಎಂ.ಮಣಿ ನಿಧನದ ನಂತರ ಪಿ.ಜೆ.ಜೋಸೆಫ್‌ ಮತ್ತು ಜೋಸ್‌ ಕೆ.ಮಾಣಿ ನೇತೃತ್ವದ ಬಣವಿದೆ. ಪಕ್ಷದ ನೇತೃತ್ವದಲ್ಲಿನ ಭಿನ್ನಾಭಿಪ್ರಾಯದಿಂದಾಗಿ ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿರುವ ಈ ಸಂದರ್ಭದಲ್ಲಿ ಜೋಸ್‌‌ ಕೆ.ಮಾಣಿ ನೇತೃತ್ವದ ಕಾಂಗ್ರೆಸ್‌‌ ಎಂ ಪಕ್ಷವು ಎರಡೆಲೆ ಚಿಹ್ನೆಯಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಬಹುದೆಂದು ಚುನಾವಣೆ ಆಯೋಗ ತಿಳಿಸಿದೆ.

ಇದರ ವಿರುದ್ಧ ಪಿ.ಜೆ.ಜೋಸೆಫ್‌ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತು. ನ್ಯಾಯಾಲಯವು ಅವರ ಅರ್ಜಿಯನ್ನು ತಿರಸ್ಕರಿಸಿದೆ.

ಕೇರಳದಲ್ಲಿ ಏಪ್ರಿಲ್‌ 06 ರಂದು ಚುನಾವಣೆ ನಡೆಯಲಿದ್ದು, ಮೇ 02 ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.

Donate Janashakthi Media

One thought on “ಟಿಕೇಟ್‌ ಸಿಗದಕ್ಕೆ ಕೇಶಮುಂಡನ! 33 ಶಾಸಕರು ಸ್ಪರ್ಧೆಯಲ್ಲಿಲ್ಲ!! ಅಭ್ಯರ್ಥಿಯನ್ನು ಕೇಳದೆ ಟಿಕೆಟ್‌ ಘೋಷಣೆ!!!

  1. ಸ್ವಾಭಿಮಾನದಿಂದ ಬಾಳ್ವೆ ಮಾಡಬೇಕೆಂದರೆ ಕಮ್ಯುನಿಸ್ಟ್ ಅಥವಾ ಸಿಪಿಐ, ಎಂ ಆಳ್ವಿಕೆ ದೇಶದಲ್ಲಿರಬೇಕು. ಸ್ವಯಂ ದುಡಿದು ಹಣ ಗಳಿಸದ ಸೋಮಾರಿಗಳು ಯಾರ ಹಣ ಎಲ್ಲಿ ಸಿಗುತ್ತದೆ ಎಂದು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾಯ್ತಾಇರ್ತಾರೆ. ಇಂತಹ ಮೋಸಗಾರರಿಗೆ ಕಮ್ಯುನಿಸ್ಟ್ ಅಥವಾ ಸಿಪಿಐ, ಎಂ, ಆಡಳಿತದಲ್ಲಿ ಬದುಕಲು ಸಾಧ್ಯವಿಲ್ಲ. ಇದು ಮೆಚ್ಚುಗೆ ಅದ ವಿಷಯ.

Leave a Reply

Your email address will not be published. Required fields are marked *