ಕೇಂದ್ರ ಸರಕಾರ ಸಾರ್ವತ್ರಿಕ ಉಚಿತ ಲಸಿಕೀಕರಣದ ಕ್ರಮ ಕೈಗೊಳ್ಳುವಂತೆ ರಾಜ್ಯಗಳ ಕಡೆಯಿಂದ ಐಕ್ಯ ಪ್ರಯತ್ನ ಅಗತ್ಯವಾಗಿದೆ – 11 ಮುಖ್ಯಮಂತ್ರಿಗಳಿಗೆ ಪಿಣರಾಯಿ ವಿಜಯನ್ ಪತ್ರ

ಇಡೀ ದೇಶ ಎರಡನೇ ಕೋವಿಡ್ ಅಲೆಯನ್ನು ಎದುರಿಸುತ್ತಿರುವಾಗ, ಅದಕ್ಕೆ ಸಾರ್ವತ್ರಿಕ ಲಸಿಕೀಕರಣ ಅತ್ಯಗತ್ಯವಾಗಿರುವಾಗ, ಕೇಂದ್ರ ಸರಕಾರ ಲಸಿಕೆಗಳನ್ನು ಪಡೆಯುವ ಮತ್ತು ಉಚಿತ ಸಾರ್ವತ್ರಿಕ ಲಸಿಕೀಕರಣವನ್ನು ಖಾತ್ರಿಪಡಿಸುವ ತನ್ನ ಕರ್ತವ್ಯದಿಂದ ನುಣುಚಿಕೊಳ್ಳುತ್ತಿದೆ. ಇದು ದುರದೃಷ್ಟದ ಸಂಗತಿ. ಇಂತಹ ಸಂದರ್ಭದಲ್ಲಿ ರಾಜ್ಯಗಳ ಕಡೆಯಿಂದ ತಮ್ಮ ನೈಜ ಆಗ್ರಹವನ್ನು ಕೇಂದ್ರ ಸರಕಾರದ ಮುಂದಿಡುವ ಐಕ್ಯ ಪ್ರಯತ್ನ ನಡೆಸಬೇಕಾಗಿದೆ ಎಂದು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹನ್ನೊಂದು ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.

ಇದನ್ನು ಓದಿ: ದೇಶದೆಲ್ಲೆಡೆ ಉಚಿತ ಲಸಿಕೆಗಾಗಿ ಕೇಂದ್ರಕ್ಕೆ ಒತ್ತಾಯ: ಕೇರಳ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕಾರ

ಸಮೂಹ ಸೋಂಕು-ಪ್ರತಿರೋಧವನ್ನು ಕಟ್ಟಲು ಅತ್ಯುತ್ತಮ ದಾರಿಯೆಂದರೆ ಸಾರ್ವತ್ರಿಕ ಲಸಿಕೀಕರಣ ಎಂದು ಎಲ್ಲರಿಗೂ ಗೊತ್ತಿದೆ. ಆದರೆ ಈಗ ಲಸಿಕೆಗಳ ಬೇಡಿಕೆಗೆ ಹೋಲಿಸಿದರೆ ಪೂರೈಕೆಯ ಕೊರತೆ ಇದೆ. ಕೇಂದ್ರ ಸರಕಾರ ಕೋವಿಡ್-19 ಲಸಿಕೆಗಳನ್ನು ಪಡೆಯಲು ರಾಜ್ಯಗಳು ತಾವೇ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ನಿಲುವನ್ನು ತಳೆದಿದೆ.

“ಕೇಂದ್ರ ಸರಕಾರ ರಾಜ್ಯಗಳ ಲಸಿಕೆ ಆವಶ್ಯಕತೆಗಳನ್ನು ಗಮನಕ್ಕೆ ತಗೊಂಡು ಒಂದು ಜಾಗತಿಕ ಟೆಂಡರ್ ಕರೆಯುವ ನೇತೃತ್ವವನ್ನು ವಹಿಸಬೇಕಾಗಿದೆ ಎಂದು ನಾನು ಈಗಾಗಲೆ ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದಿದ್ದೇನೆ” ಎಂದು ತಿಳಿಸಿರುವ ಪಿಣರಾಯಿ ವಿಜಯನ್ ಲಸಿಕೆ ಒಂದು ಸಾರ್ವಜನಿಕ ಒಳಿತಿನ ವಸ್ತುವಾದ್ದರಿಂದ ಅದನ್ನು ಉಚಿತವಾಗಿ ಕೊಡಬೇಕಾಗಿದೆ, ಹಣಕಾಸು ಸೌಕರ್ಯ ಇಲ್ಲ ಎಂಬ ಕಾರಣಕ್ಕೆ ಯಾರೂ ಅದರಿಂದ ವಂಚಿತರಾಗಬಾರದು ಎಂದು ಅವರು ತಮ್ಮ ಪತ್ರದಲ್ಲಿ ಅಭಿಪ್ರಾಯ ಪಟ್ಟಿದ್ದಾರೆ.

ಎರಡನೇ ಅಲೆಯ ಪರಿಣಾಮ ಅಭೂತಪೂರ್ವ, ಇದು ನಾವೆಲ್ಲರೂ ಎಚ್ಚರಿಕೆಯಿಂದ ಇರುವಂತೆ ಮಾಡಿದೆ. ಅಲ್ಲದೆ, ಪರಿಣಿತರು ಮೂರನೇ ಅಲೆ ಬಂದೆರಗುವ ಬಗ್ಗೆಯೂ ಎಚ್ಚರಿಸಿದ್ದಾರೆ. ಇಂತಹ ಸಂದರ್ಭದಲ್ಲಿ, ಲಸಿಕೆಗಳನ್ನು ಪಡೆಯುವ ಹೊರೆಯನ್ನು ಪೂರ್ಣವಾಗಿ, ಅಥವ ಭಾಗಶಃವಾಗಿಯಾದರೂ ರಾಜ್ಯಗಳ ಮೇಲೆಯೇ ಬಿಟ್ಟಿರುವುದು ಅವುಗಳ ಹಣಕಾಸು ಪರಿಸ್ಥಿತಿಯನ್ನು ಶೋಚನೀಯಗೊಳಿಸುತ್ತದೆ. ಒಂದು ಆರೋಗ್ಯಕರ ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳ ಹಣಕಾಸು ಶಕ್ತಿ ಒಂದು ಅಗತ್ಯ ಭಾಗ. ರಾಜ್ಯಗಳ ಹಣಕಾಸು ಬಲಕ್ಕೆ ಕುಂದು ಬಂದರೆ ಅದರಿಂದ ಒಕ್ಕೂಟತತ್ವವೇ ದುರ್ಬಲಗೊಳ್ಳುತ್ತದೆ, ಇದು ನಮ್ಮಂತಹ ಪ್ರಜಾಪ್ರಭುತ್ವ ರಾಜಕೀಯ ವ್ಯವಸ್ಥೆಗೆ ಒಳ್ಳೆಯದಲ್ಲ.

ಇದನ್ನು ಓದಿ: ಕೋವಿಡ್‌-19: ಲಸಿಕೆಯೇ ಅಂತಿಮ ಅಸ್ತ್ರ

ಅಲ್ಲದೆ ಸಮೂಹ ಸೋಂಕು-ಪ್ರತಿರೋಧವನ್ನು ಬೇಗನೇ ಕಟ್ಟುವುದಕ್ಕೂ ಇದು ಅಡ್ಡಿಯಾಗುತ್ತದೆ; ಏಕೆಂದರೆ ಅದು ಪರಿಣಾಮಕಾರಿಯಾಗುವುದು ಜನಸಂಖ್ಯೆಯ ಒಂದು ಗಮನಾರ್ಹ ವಿಭಾಗ ಲಸಿಕೆ ಪಡೆದಾಗ ಮಾತ್ರ. ಆದರೆ ಇದುವರೆಗೆ ಕೇವಲ 3.1% ಜನಗಳಿಗೆ ಮಾತ್ರ ಲಸಿಕೆಗಳ ಎರಡು ಡೋಸುಗಳನ್ನು ಹಾಕಲಾಗಿದೆ ಎಂದು ಪಿಣರಾಯಿ ವಿಜಯನ್ ಮುಖ್ಯಮಂತ್ರಿಗಳಿಗೆ ಬರೆದಿರುವ ಪತ್ರದಲ್ಲಿ ನೆನಪಿಸಿದ್ದಾರೆ.

ಲಸಿಕೆ ತಯಾರಕ ಕಂಪೆನಿಗಳು ಲಸಿಕೆಗಳ ಕೊರತೆಯಿಂದ ಹಣಕಾಸು ಪ್ರಯೋಜನ ಪಡೆಯುವಲ್ಲಿ ತೊಡಗಿವೆ. ವಿದೇಶಿ ಔಷಧಿ ಕಂಪನಿಗಳು ರಾಜ್ಯ ಸರಕಾರಗಳೊಂದಿಗೆ ಲಸಿಕೆ ಖರೀದಿ ಬಗ್ಗೆ ಒಪ್ಪಂದಗಳನ್ನು ಮಾಡಿಕೊಳ್ಳಲು ಹಿಂಜರಿಯುತ್ತಿವೆ. ಇಂತಹ ಸಂದರ್ಭದಲ್ಲಿ, ಸಾರ್ವಜನಿಕ ವಲಯದಲ್ಲಿ ಲಸಿಕೆಗಳನ್ನು ತಯಾರಿಸುವ ಸಾಮರ್ಥ್ಯವುಳ್ಳ ಕಂಪನಿಗಳನ್ನು ಹೊಂದಿರುವ ಭಾರತದ ಸರಕಾರ ಕೋವಿಡ್-19 ಲಸಿಕೆಗಳನ್ನು ತಯಾರಿಸಲು ಬೌದ್ಧಿಕ ಹಕ್ಕುಗಳು, ಪೇಟೆಂಟ್ ಕಾಯ್ದೆಗಳು ಮತ್ತು ವಿಧಿ-ವಿಧಾನಗಳು ಅಡ್ಡಿಯಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಏಕೆಂದರೆ ಈ ಲಸಿಕೆ ಒಂದು ಸಾರ್ವಜನಿಕ ಒಳಿತಿನ ಸ್ಥಾನಮಾನ ಹೊಂದಬೇಕಾಗಿದೆ. ಕೇಂದ್ರ ಸರಕಾರ ಕಡ್ಡಾಯ ಲೈಸೆನ್ಸಿಂಗ್‌ನ ಸಾಧ್ಯತೆಗಳನ್ನು ಅನ್ವೇಷಿಸುವಂತೆ ಆಗ್ರಹಿಸಬೇಕು ಎಂದು ಕೇರಳದ ಮುಖ್ಯಮಂತ್ರಿಗಳು ತಮ್ಮ ಪತ್ರದಲ್ಲಿ ಹೇಳಿದ್ದಾರೆ.

ಇದನ್ನು ಓದಿ: ಅತಿ ದೊಡ್ಡ ಲಸಿಕೆ ಉತ್ಪಾದನೆ ಸಾಮರ್ಥ್ಯವಿದ್ದರೂ ಭಾರತದ ಜನಗಳಿಗೆ ಲಸಿಕೆ ಹಾಕಲು ಆಗಿಲ್ಲ ಏಕೆ?

“ಲಸಿಕೆಗಳನ್ನು ಒದಗಿಸುವ ಹೊಣೆಗಾರಿಕೆ ಸಂಪೂರ್ಣವಾಗಿ ರಾಜ್ಯಗಳ ವ್ಯಾಪ್ತಿಗೆ ಬರುತ್ತದೆ ಎಂಬಂತಹ ಹೇಳಿಕೆಗಳನ್ನು ಕೊಡಲಾಗುತ್ತಿದೆ. ಇದು ಸಹಕಾರಿ ಒಕ್ಕೂಟ ವ್ಯವಸ್ಥೆಯ ಆಧಾರವನ್ನೇ ನಿರಾಕರಿಸುತ್ತದೆ. ಈ ಕ್ಷಣದ ಆವಶ್ಯಕತೆಯೆಂದರೆ, ಕೇಂದ್ರ ಸರಕಾರ ರಾಜ್ಯಗಳಿಗೆ ಬೇಕಾದ ಲಸಿಕೆಗಳನ್ನು ಪಡೆಯಬೇಕು ಮತ್ತು ಅವನ್ನು ಉಚಿತವಾಗಿ ಹಂಚಬೇಕು ಎಂಬ ನೈಜ ಬೇಡಿಕೆಯನ್ನು ನಮ್ಮ ಕಡೆಯಿಂದ ಮುಂದಿಡಲು ಐಕ್ಯ ಪ್ರಯತ್ನ ನಡೆಯಬೇಕಾಗಿದೆ. ಇದರಿಂದ ಖರ್ಚು ಕೂಡ ಕಡಿಮೆಯಾಗುತ್ತದೆ” ಎಂದು ಪಿಣರಾಯಿ ವಿಜಯನ್ ಹನ್ನೊಂದು ಮುಖ್ಯಮಂತ್ರಿಗಳಿಗೆ ಬರೆದ ಪತ್ರದಲ್ಲಿ ಹೆಳಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *