ಕೇರಳ ಬಜೆಟ್: ‘ನವ ಸಹಜತೆ’ ಗೆ ಆರ್ಥಿಕತೆಯನ್ನು ತಯಾರಿ ಮಾಡುವತ್ತ……

ಕೇರಳ ರಾಜ್ಯದ 2021-22 ರ ಬಜೆಟ್, ಮಹಾಸೋಂಕಿನ ನಂತರದ ನವ ಸಹಜತೆ ಒಡ್ಡುತ್ತಿರುವ ಸವಾಲುಗಳನ್ನು ಎದುರಿಸುವ ಮತ್ತು ಎಡ ಪರ್ಯಾಯವನ್ನು ವಿಸ್ತರಿಸುವ ಭಾಗವಾಗಿ ಹಲವು ಕ್ರಮಗಳನ್ನು ಕೈಗೊಂಡಿದೆ. ಹೆಚ್ಚು ಆದಾಯ ನೀಡುವ ಮೌಲ್ಯ-ಸರಣಿಯಲ್ಲಿ ಮೇಲು ಹಂತದಲ್ಲಿರುವ ಉದ್ಯೋಗಗಳು ವಿದ್ಯಾವಂತ ಯುವ ಜನತೆಗೆ ನಿಲುಕುವಂತಾಗಲು ಉತ್ತಮ ಗುಣಮಟ್ಟದ ಸಾಂಸ್ಥಿಕ ವ್ಯವಸ್ಥೆಗಳನ್ನು ಸ್ಥಾಪಿಸುವುದು; ಮರಳಿ ಬಂದ ವಲಸೆ ಕಾರ್ಮಿಕರಿಗೆ ಸರಕಾರದ ವಿವಿಧ ವಿಭಾಗಗಳು ಮತ್ತು ಸ್ಥಳೀಯ ಸರ್ಕಾರಗಳು ನಡೆಸುವ ಹಲವು ಉದ್ಯೋಗ ಮತ್ತು ಉದ್ಯಮಶೀಲತೆಗೆ ಪ್ರೋತ್ಸಾಹ ನೀಡುವ ಯೋಜನೆಗಳು; `ಹೆಚ್ಚು ಆಹಾರ ಬೆಳೆಯುವ ಯೋಜನೆ’ಯನ್ನು ಬಲಪಡಿಸಿ, ಅದನ್ನು ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯೊಂದಿಗೆ ಜೋಡಿಸುವುದು; ಅಯ್ಯಂಕಾಳಿ ಅವರ ಹೆಸರಿನಲ್ಲಿ ಸ್ಥಾಪಿಸಿರುವ ವಿಶಿಷ್ಟ ನಗರ ಉದ್ಯೋಗ ಯೋಜನೆಯನ್ನು ಬಲಪಡಿಸುವುದು; ‘ನವಕೇರಳ ಮಿಷನ್’ ಗಳನ್ನು ಮತ್ತು KIIFB ಹೂಡಿಕೆಯ ಮೂಲಕ ಮೂಲಸೌಕರ್ಯ ಯೋಜನೆಗಳನ್ನು ಮುಂದುವರೆಸುವ ಮತ್ತು ಬಲಪಡಿಸುವುದು– ಮುಂತಾದ ಕ್ರಮಗಳನ್ನು ಬಜೆಟ್ ಪ್ರಸ್ತಾವಗಳು ಹೊಂದಿವೆ.

– ಕೆ.ಎನ್.ಹರಿಲಾಲ್ (ಅನು: ಶೃ.ಶಂ.ನಾ.)

ಮಹಾಸೋಂಕು, ಪರಿಸರ ವಿನಾಶಗಳು ಮತ್ತು ಜಾಗತಿಕ ಆರ್ಥಿಕ ಬಿಕ್ಕಟ್ಟನಿಂದಾಗಿ ನಮ್ಮ ಜೀವನವನ್ನು ನಡೆಸುವ ವಿಧಾನಗಳು ವೇಗವಾಗಿ ಬದಲಾಗುತ್ತಿದೆ. ನಮಗಿಷ್ಟವಿರಲಿ, ಇಲ್ಲದಿರಲಿ ಜೀವನದ ಬಹುತೇಕ ಎಲ್ಲಾ ಆಯಾಮಗಳಲ್ಲಿ ಒಂದು ನವ ಸಹಜತೆಯು ಹೊಮ್ಮುತ್ತಿರುವುದನ್ನು ಕಾಣಬಹುದು. ಹಿಂದಿನ ಸಹಜತೆಗೆ ಹಿಂದಿರುಗುವ ಪ್ರಶ್ನೆಯೇ ಇಲ್ಲ. ಈ ಸಮಯದಲ್ಲಿ ಕೇರಳ ರಾಜ್ಯದ 2021-22 ರ ಬಜೆಟ್, ಮಹಾಸೋಂಕಿನ ನಂತರದ ನವ ಸಹಜತೆ ಒಡ್ಡುತ್ತಿರುವ ಸವಾಲುಗಳನ್ನು ಎದುರಿಸುವ ಪ್ರಬಲ ಪ್ರಯತ್ನವಾಗಿದೆ. ರಾಜ್ಯದ ಆರ್ಥಿಕತೆ ಮತ್ತು ಸಮಾಜವನ್ನು ಬದಲಾಗುತ್ತಿರುವ ಸಮಯ ಒಡ್ಡಿರುವ ಸವಾಲುಗಳನ್ನು ಎದುರಿಸುವಂತೆ ತಯಾರಿ ಮಾಡಲು ಮತ್ತು ಕೇರಳ ಮಾದರಿ ಆಭಿವೃದ್ಧಿಯ ಸಾಧನೆಗಳನ್ನು ಕಾಯ್ದುಕೊಂಡು ರಾಜ್ಯದ ಬೆಳವಣಿಗೆಯ ನಡಿಗೆಯನ್ನು ಮುಂದುವರಿಸಲು ಸ್ವಷ್ಟರಣ ನೀತಿಗಳನ್ನು ಈ ಬಜೆಟ್ ತೆರೆದಿಟ್ಟಿದೆ.

ಈ ಬಜೆಟ್ ಜನಗಳಿಗಾಗಿಯೂ ಅಲ್ಲ, ದೇಶದ ಅರ್ಥವ್ಯವಸ್ಥೆಗಾಗಿಯೂ ಅಲ್ಲ: ಯೆಚುರಿ

ಮಹಾಸೋಂಕಿನ ನಂತರದ ಅವಧಿಯ ಕೇಂದ್ರ ಲಕ್ಷಣಗಳಲ್ಲಿ ಆರ್ಥಿಕತೆಯ ಡಿಜಿಟಲೀಕರಣ ಪ್ರಮುಖವಾದುದು. ಈ ಮಹಾಸೋಂಕಿನ ಮೊದಲೇ ನಿಜವಾದ ಆರ್ಥಿಕತೆ ಮತ್ತು ಡಿಜಿಟಲ್ ಆರ್ಥಿಕತೆಗಳ ನಡುವಿನ ಕಂದಕ ಸಾಕಷ್ಟಿತ್ತು. ಡಿಜಿಟಲ್ ಆರ್ಥಿಕತೆಯ ತಂತಜ್ಞಾನಗಳು ಆಗಲೇ ಬಳಕೆಯಲ್ಲಿದ್ದವು. ಆದರೆ ಮಹಾಸೋಂಕು ತಂತ್ರಜ್ಞಾನಗಳ ಹರಡುವಿಕೆಯನ್ನು ವೇಗವಾಗಿಸಿತು. ಹೀಗಾಗಿ, ಬೋಧನೆ, ಕಲಿಕೆ, ತರಬೇತಿ, ಸಭೆಗಳು, ವೈದ್ಯಕೀಯ ಸಮಾಲೋಚನೆಗಳು, ಶೇರು ವ್ಯವಹಾರಗಳು, ಬಂಡವಾಳ ಹೂಡಿಕೆ, ಮನರಂಜನೆ ಮತ್ತಿತರ ಹಲವು ದೈನಂದಿನ ಚಟುವಟಿಕೆಗಳನ್ನು ಈಗ ಆನ್-ಲೈನಿನಲ್ಲಿ ಮಾಡಬಹುದು.

ಇದನ್ನು ಓದಿ :  ಜನಶಕ್ತಿ ಮೀಡಿಯಾ ವಾಟ್ಸಪ್ ಸೇರಿಕೊಳ್ಳಲು ಈ ಲಿಂಕ್ ಕ್ಲಿಕ್ ಮಾಡಿ

ಇದು ಕೆಲಸದ ವಿಧಾನಗಳ ಮೇಲೆ ಬಹಳ ಪರಿಣಾಮ ಬೀರುತ್ತಿದೆ. ದುಡಿಯುವ ಪ್ರಕ್ರಿಯೆಯು ಪೂರ್ಣವಾಗಿ ಅಥವಾ ಭಾಗಶಃ ಆನ್-ಲೈನ್ ವೇದಿಕೆಗಳಿಗೆ ಬದಲಾಯಿಸಲ್ಪಟಿದೆ. ‘ಮನೆಯಿಂದಲೇ ಕೆಲಸ’ ಅಥವಾ ‘ಸ್ಥಳೀಯ ಕೇಂದ್ರಗಳಿಂದ ಕೆಲಸ’ ಸಂಸ್ಕೃತಿಯು ವೇಗವಾಗಿ ಹರಡುತ್ತಿದೆ. ಕೆಲವು ವೀಕ್ಷಕರು ಹೇಳುವಂತೆ ಮಹಾಸೋಂಕಿನ ನಂತರ ಈ ವಿಧಾನಗಳನ್ನು ಹಿಂಪಡೆಯಲಾಗುವುದಿಲ್ಲ, ಬದಲಾಗಿ ಇನ್ನಷ್ಟು ಕೆಲಸಗಳು ಈ ವಿಧಾನಕ್ಕೆ ಸೇರ್ಪಡೆಯಾಗಬಹುದು. ಕೇರಳ ಬಜೆಟ್ ಈ ಸವಾಲನ್ನು ಒಂದು ಅವಕಾಶವಾಗಿ ಮಾರ್ಪಡಿಸಲು ಮುಂದಾಗಿದೆ. ವಿದ್ಯಾವಂತ ಯುವಜನತೆಯ ನಿರುದ್ಯೋಗ ಸಮಸ್ಯೆಯನ್ನು ಪರಿಹರಿಸಲು ದುಡಿಮೆಯ ಹೊಸ ವಿಧಾನಗಳನ್ನು ಬಳಸಿಕೊಳ್ಳುವ ಉದೇಶವನ್ನುಇದು ಹೊಂದಿದೆ. ರಾಜ್ಯವು ವಿದ್ಯಾವಂತ ಯುವಜನತೆಯ ಹೆಚ್ಚಿನ ಮಟ್ಟದ ನಿರುದ್ಯೋಗ ಪ್ರಮಾಣ ಮತ್ತು ಕೆಲಸದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಯ ಕಡಿಮೆ ಪ್ರಮಾಣವನ್ನು ಹೊಂದಿದೆ. ಆನ್ಲೈನ್ ಸೇವಾ ಕ್ಷೇತ್ರಗಳನ್ನು ಬಳಸಿಕೊಂಡು ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಬಹುದು.

ಈ ಯೋಜನೆ ಸಫಲವಾಗಬೇಕಿದ್ದಲ್ಲಿ ಮನೆಯಿಂದ ಅಥವಾ ಸ್ಥಳೀಯ ಕೇಂದ್ರಗಳಿಂದ ಕೆಲಸ ಮಾಡಲು ಅಗತ್ಯವಿರುವ ಸೌಲಭ್ಯಗಳು ಇರಬೇಕು. ಉಚಿತ ಮತ್ತು ಅನಿರ್ಬಂಧಿತ ನೆಟ್ ಸಂಪರ್ಕ, ಕಂಪ್ಯೂಟರ್ಗಳ ವಿತರಣೆ, ಸ್ಥಳೀಯ ಕೆಲಸದ ಕೇಂದ್ರಗಳ ಸುಧಾರಣೆ ಮತ್ತು ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಪ್ಯಾಕೇಜ್ ಅನ್ನು ಕೇರಳ ಬಜೆಟ್ ಘೋಷಿಸಿದೆ. ಅವಶ್ಯವಿರುವ ಕೌಶಲ್ಯದ ತರಬೇತಿ ಒದಗಿಸಲು ಸಹ ಬಜೆಟ್ ಕ್ರಮಗಳನ್ನು ಘೋಷಿಸಿದೆ. ಹಾಗೆಯೇ ಉದ್ಯೋಗದಾತರು ಮತ್ತು ಉದ್ಯೋಗ ಬಯಸುವವರ ನಡುವೆ ನಿರಂತರ ಮಾಹಿತಿ ಹರಿಯುವಂತೆ ಮಾಡಲು ಸಹ ಈ ಯೋಜನೆ ಮುಂದಾಗಿದೆ ಮತ್ತುಇದಕ್ಕಾಗಿ ಉತ್ತಮಗುಣ ಮಟ್ಟದ ಸಾಂಸ್ಥಿಕ ವ್ಯವಸ್ಥೆಗಳನ್ನು ರೂಪಿಸಿದೆ.

ಈ ಉದ್ದೇಶವು ದತ್ತಾಂಶ ದಾಖಲಿಸುವ ಆಪರೇಟರ್ಗಳಂತಹ ಕಡಿಮೆ ಆದಾಯದ ಮೌಲ್ಯ-ಸರಣಿಯಲ್ಲಿ(ವ್ಯಾಲ್ಯೂಚೈನ್) ಕೆಳಹಂತದಲ್ಲಿರುವ ಕೆಲಸದಲ್ಲಿ ಪರಿಣತಿ ನೀಡುವುದನ್ನು ಹೊಂದಿರದೆ, ಹೆಚ್ಚು ಆದಾಯ ನೀಡುವ ಮೌಲ್ಯ-ಸರಣಿಯಲ್ಲಿ ಮೇಲು ಹಂತದಲ್ಲಿರುವ ಉದ್ಯೋಗಗಳು ವಿದ್ಯಾವಂತ ಯುವಜನತೆಗೆ ನಿಲುಕುವಂತಾಬೇಕು ಎಂಬ ಆಶಯ ಹೊಂದಿದೆ. ಇದಾಗಬೇಕಾದರೆ ಉದ್ಯೋಗಾಕಾಂಕ್ಷಿಗಳ ಅಥವಾ ಭಾಗವಹಿಸುವ ಉದ್ದಿಮೆಗಳ ಜ್ಞಾನ ಕೌಶಲ್ಯ ಮಟ್ಟವನ್ನು ಹೆಚ್ಚಿಸಬೇಕು. ಆದ್ದರಿಂದಲೇ ರಾಜ್ಯವನ್ನು ಒಂದು ಜ್ಞಾನ-ಆರ್ಥಿಕತೆಯ ರಾಜ್ಯವಾಗಿ ಪರಿವರ್ತಿಸುವ ತಂತ್ರವನ್ನು ಬಜೆಟ್ ರೂಪಿಸಿದೆ. ಜ್ಷಾನ-ಆರ್ಥಿಕತೆಯ ಸ್ಥಾಪನೆಯು ದೀರ್ಘಕಾಲೀನ ಪ್ರಕ್ರಿಯೆ ಹೊಂದಿದೆ ಎನ್ನುವುದು ನಿಜವೇ. ಈ ದಿಸೆಯಲ್ಲಿ 30 ಶ್ರೇಷ್ಠ ಕೇಂದ್ರಗಳ ಸ್ಥಾಪನೆ, ವಿಶ್ವವಿದ್ಯಾನಿಲಯಗಳಿಗೆ ನೀಡುವ ಸಂಪನ್ಮೂಲದಲ್ಲಿ ಹೆಚ್ಚಳ ಮತ್ತು ನೂರಾರು ಹೊಸ ಬೋಧನಾ ಸ್ಥಾನಗಳು ಮತ್ತು ಸಂಶೋಧನಾ ಫೆಲೋಶಿಪ್ ಗಳನ್ನು ಸ್ಥಾಪಿಸುವ ನೀಲನಕ್ಷೆಯನ್ನು ಬಜೆಟ್ ಹೊಂದಿದೆ.

ಮತ್ತೊಂದು ಅಷ್ಟೇ ಮಹತ್ವದ ಯೋಜನೆಯಾಗಿ ಮರಳಿ ಬಂದ ವಲಸಿಗರಿಗೆ ಪುನರ್ ಸೌಲಭ್ಯ ಒದಗಿಸುವ ಘೋಷಣೆಯನ್ನು ಈ ಬಜೆಟ್ ಮಾಡಿದೆ. ಜಾಗತಿಕ ಹಿನ್ನಡೆತ ಮತ್ತು ಮಹಾಸೋಂಕುಗಳಿಂದಾಗಿ ವಲಸಿಗರ ವಾಪಸಾತಿಯಲ್ಲಿ ಹೆಚ್ಚಳವಾಗಿದ್ದು, ಸರಿಸುಮಾರು ನಾಲ್ಕು ಲಕ್ಷ ವಲಸಿಗರು ವಿದೇಶದ ತಮ್ಮ ಕೆಲಸಗಳನ್ನು ಕಳೆದುಕೊಂಡಿದ್ದಾರೆ. ಇವರು ಪುನರ್ವಸಿತರಾಗಬೇಕು. ದುರದೃಷ್ಟವೆಂದರೆ ನಮ್ಮ ದೇಶಕ್ಕೆ ಮೌಲ್ಯಯುತ ವಿದೇಶಿ ವಿನಿಮಯ ಗಳಿಸಿಕೊಟ್ಟಿದ್ದ ವಲಸಿಗ ಕಾರ್ಮಿಕರನ್ನು ಪುನರ್ವಸತಿಗೊಳ್ಳಬೇಕೆಂಬ ಅಗತ್ಯತೆಯನ್ನು ಕೇಂದ್ರ ಸರ್ಕಾರವು ಒಪ್ಪುತ್ತಲೇ ಇಲ್ಲ. ಅನಿವಾಸಿ ಭಾರತೀಯ ಕೆಲಸಗಾರರು ಹಣರವಾನಿಸುವ ಮೊತ್ತದ ದೇಶಗಳ ಪಟ್ಟಿಯಲ್ಲಿ ಭಾರತವು ವಿಶ್ವದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ ಎನ್ನುವುದು ಗಮನಾರ್ಹ.

ಇದನ್ನು ಓದಿ : ಕೇಂದ್ರ ಬಜೆಟ್ 2021 : ಯಾವುದು ದುಬಾರಿ?! ಯಾವುದು ಅಗ್ಗ?!!

ಆದರೆ ಕೇರಳ ರಾಜ್ಯದಎಲ್.ಡಿ.ಎಫ್ ಸರ್ಕಾರವು ಕಾರ್ಮಿಕರ ಸಮಸ್ಯೆಗಳಿಗೆ ಕೇಂದ್ರ ಸರಕಾರದಂತಹ ವಿಮುಖ ಧೋರಣೆ ಹೊಂದಲಾಗುವುದಿಲ್ಲ. ಈ ನಿಟ್ಟಿನಲ್ಲಿ ಸ್ಥಳೀಯ ಸರ್ಕಾರಗಳು ಮತ್ತುಸರ್ಕಾರಿ ಇಲಾಖೆಗಳನ್ನು ಒಳಗೊಂಡು ಒಂದು ಬೃಹತ್ ಪ್ರಮಾಣದ ಯೋಜನೆಯನ್ನು ಜಾರಿ ಮಾಡಲು ಮುಂದಾಗುತ್ತಿದೆ. ವಿವಿಧ ಏಜೆನ್ಸಿಗಳ ನಡುವೆ ಹೊಂದಾಣಿಕೆಗಾಗಿ ಬಜೆಟ್ನಲ್ಲಿ ರೂ. 100 ಕೋಟಿ ಎತ್ತಿಡಲಾಗಿದೆ. ಮರಳಿ ಬಂದ ವಲಸೆ ಕಾರ್ಮಿಕರಿಗೆ ವಿವಿಧ ವಿಭಾಗಗಳು ಮತ್ತು ಸ್ಥಳೀಯ ಸರ್ಕಾರಗಳು ನಡೆಸುವ ಹಲವು ಉದ್ಯೋಗ ಮತ್ತು ಉದ್ಯಮಶೀಲತೆಗೆ ಪ್ರೋತ್ಸಾಹ ನೀಡುವ ಯೋಜನೆಗಳ ನೆರವು ಪಡೆಯಲು ವಿಶೇಷ ಸಹಾಯ ಒದಗಿಸಲಾಗುತ್ತದೆ. ಬಜೆಟ್ನಲ್ಲಿ ಹೊಸದಾಗಿ ಘೋಷಿಸುವ ಆನ್ಲೈನ್ ಮತ್ತು ವರ್ಚುವಲ್ ಕ್ಷೇತ್ರದ ಉದ್ಯೋಗ ಯೋಜನೆಗಳನ್ನು ಸೇರುವಂತೆಯೂ ಇವರುಗಳಿಗೆ ಪ್ರೋತ್ಸಾಹಿಸಲಾಗುತ್ತದೆ.

ಮಹಾಸೋಂಕಿನ ಆರಂಭದ ದಿನಗಳಲ್ಲಿ ಆಹಾರ ದರಗಳ ಹೆಚ್ಚಳ ಮತ್ತುಆಹಾರ-ವಾಣಿಜ್ಯ ಸರಣಿಗಳಲ್ಲಿ ವ್ಯತ್ಯಯದಿಂದಾಗಿ ಆಹಾರ ಕೊರತೆ ಉಂಟಾಗಬಹುದೆಂಬ ಮುಂದಾಲೋಚನೆಯಿಂದ ‘ಸುಭಿಕ್ಷ ಕೇರಳಂ’ನ ಭಾಗವಾಗಿ ಆರಂಭಿಸಿದ್ದ `ಹೆಚ್ಚು ಆಹಾರ ಬೆಳೆಯುವ ಯೋಜನೆ’ಯನ್ನು ಇನ್ನಷ್ಟು ಬಲಪಡಿಸಲು ಬಜೆಟ್ ಮುಂದಾಗಿದೆ. ಸ್ಥಳೀಯ ಸರ್ಕಾರಗಳು ಮತ್ತು ಯುವಜನಾಂಗದ ಪಾಲ್ಗೊಳ್ಳುವಿಕೆಯಿಂದಾಗಿ ಈ ಯೋಜನೆಯು ಹೆಚ್ಚಿಸುವುದು. ಜೊತೆಗೆ ಇವನ್ನು ಗ್ರಾಮೀಣ ಉದ್ಯೋಗಖಾತ್ರಿ ಯೋಜನೆಯೊಂದಿಗೆ ಜೋಡಿಸಬಹುದು.

ಕೇರಳ ರಾಜ್ಯವು ಉದ್ಯೋಗ ಯೋಜನೆಗಳ ಜಾರಿಯಲ್ಲಿಅತ್ಯದ್ಭುತ ಸಾಧನೆ ಮಾಡಿದೆ. ಮಹಾತ್ಮ ಅಯ್ಯಂಕಾಳಿ ಅವರ ಹೆಸರಿನಲ್ಲಿ ಸ್ಥಾಪಿಸಿರುವ ವಿಶಿಷ್ಟ ನಗರ ಉದ್ಯೋಗ ಯೋಜನೆಗೆ ನಿಗದಿಪಡಿಸಿರುವ ಮೊತ್ತವನ್ನು ಈ ಬಜೆಟ್ ಹೆಚ್ಚಿಸಿದೆ.

ಇದನ್ನು ಓದಿ : ಕೊವಿಡ್‍ ಕಾಲದ ಬಜೆಟ್

ವಿಶ್ವದಾದ್ಯಂತ ಈ ಮಹಾಸೊಂಕಿನಿಂದಾದ ಬಹಳ ಮಹತ್ವದ ದುಷ್ಪರಿಣಾಮವೆಂದರೆ ಅಸಮಾನತೆಯು ಇನ್ನಷ್ಟು ಕೆಟ್ಟದಾಗಿ ವಿಸ್ತರಿಸಿರುವುದು. ಕೋವಿಡ್-19 ವೈರಾಣುವಿಗಿಂತಲೂ ಕೆಟ್ಟ ಪರಿಣಾಮ ಈ ಅಸಮಾನತೆಯಿಂದಾಗಿದೆ ಎಂಬ ದಿಗಿಲು ಉಂಟಾಗಿದೆ. ಹೆಚ್ಚು ಉದ್ಯೋಗಾವಕಾಶಗಳನ್ನು, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ, ಕಲ್ಪಿಸಲು ಒತ್ತು ನೀಡಿದಲ್ಲಿಅಸಮಾನತೆ ಮತ್ತು ಅವಕಾಶವಂಚನೆಯ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗಬಹುದು. ಸಾಮಾಜಿಕ ನ್ಯಾಯ ಮತ್ತು ಸಾಮಾಜಿಕ ಕಲ್ಯಾಣಗಳನ್ನು ಬಲಪಡಿಸುವ ಹಿನ್ನೆಲೆಯಲ್ಲಿ ಇದನ್ನು ಗಮನಿಸಬೇಕು. ಕೇರಳದ ಎಲ್.ಡಿ.ಎಫ್ ಸರ್ಕಾರಗಳು 1957 ರಿಂದಲೂ ಈ ಅಂಶಕ್ಕೆ ಒತ್ತುಕೊಟ್ಟಿದ್ದುಇದು ಎಲ್ಲರ ಗಮನ ಸೆಳೆದ ಪ್ರಮುಖ ಗುಣಲಕ್ಷಣವಾಗಿದೆ. ಸಾಮಾಜಿಕ ನ್ಯಾಯದ ಜಾಲವನ್ನು ವಿಸ್ತಾರಗೊಳಿಸಲು ಈ ಬಜೆಟ್ ವಿಶೇಷ ಶ್ರಮ ವಹಿಸಿದೆ. ಉದಾ: ಸುಮಾರು 60 ಲಕ್ಷ ಜನರಿಗೆ ನೆರವಾಗುವ ಕಲ್ಯಾಣ ಪಿಂಚಣಿಯನ್ನು ಪ್ರತಿ ತಿಂಗಳಿಗೆ ರೂ. 1600 ಕ್ಕೆ ಹೆಚ್ಚಿಸಿದೆ. ಆಶಾ ಕಾರ್ಯಕರ್ತೆಯರೂ ಅಂಗನವಾಡಿ ಸಹಾಯಕಿಯರು ಮತ್ತು ಶಿಕ್ಷಕರು, ಕುಟುಂಬಶ್ರೀ ಕಾರ್ಯಕರ್ತರು ಮುಂತಾದವರಿಗೆ ನೀಡುವ ಗೌರವಧನದಲ್ಲಿ ಗಣನೀಯ ಹೆಚ್ಚಳವನ್ನು ಬಜೆಟ್ ನೀಡಿದೆ.

ಕೇರಳ ರಾಜ್ಯವು ಪ್ರಜಾಸತ್ತಾತ್ಮಕ ವಿಕೇಂದ್ರೀಕರಣಕ್ಕೆ ತನ್ನ ಬದ್ಧತೆಯನ್ನು ಎಂದಿನಿಂದಲೂ ಪ್ರತಿಪಾದಿಸುತ್ತಾ ಬಂದಿದೆ. ಇತ್ತೀಚೆಗೆ ಸ್ಥಳೀಯ ಸರ್ಕಾರಗಳಿಗೆ ನಡೆದ ಚುನಾವಣೆಗಳಲ್ಲಿ ಇದು ಪ್ರತಿಫಲನಗೊಂಡಿದೆ. ಹಿಂದಿನ ಸ್ಥಳೀಯ ಆಡಳಿತಗಳಿಗೆ ಚುನಾವಣಾ ತೀರ್ಪು ನೀಡಿದ ಗೆಲುವು ಸ್ಥಳೀಯ ಮಟ್ಟದಲ್ಲಿ ನಡೆಸುತ್ತಿರುವ ಉತ್ತಮ ಕೆಲಸಕ್ಕೆ ನೀಡಿರುವ ಮನ್ನಣೆಯಾಗಿದೆ. ರಾಜ್ಯ ಸರ್ಕಾರವು ಆರನೇ ರಾಜ್ಯ ಹಣಕಾಸು ಆಯೋಗ ನೀಡಿರುವ ಶಿಫಾರಸ್ಸನ್ನು ಇತ್ತೀಚಿಗೆ ಅಂಗೀಕರಿಸಿದೆ. ಹಾಗೂ ಸ್ಥಳೀಯ ಸರ್ಕಾರಗಳಿಗೆ ನಿಗದಿಪಡಿಸುವ ಯೋಜನಾ ಮತ್ತುಯೋಜನಾರಹಿತ ಹಂಚಿಕೆಯನ್ನು ಗಣನೀಯವಾಗಿ ಹೆಚ್ಚಿಸಿದೆ.

ಕೇರಳದ ರಾಜ್ಯದ ಆರೋಗ್ಯ ವ್ಯವಸ್ಥೆ(ಆರ್ದ್ರಂ), ಶಿಕ್ಷಣ (ಪೊತುವಿದ್ಯಾಭ್ಯಾಸಯುಜ್ಞಂ), ಬಡವರಿಗೆ ವಸತಿ(LIFE) ಮತ್ತು ಪರಿಸರ ಹಾಗೂ ತ್ಯಾಜ್ಯ ನಿರ್ವಹಣೆ (ಹರಿತ ಕೇರಳಂ) ಕ್ಷೇತ್ರಗಳಲ್ಲಿ ‘ನವಕೇರಳ ಮಿಷನ್’ ಗಳನ್ನು ಮುಂದುವರೆಸುವ ಮತ್ತು ಬಲಪಡಿಸುವ ರಾಜ್ಯ ಸರ್ಕಾರದ ಬದ್ಧತೆಯನ್ನು ಸಹ ಬಜೆಟ್ ವ್ಯಕ್ತಪಡಿಸುತ್ತದೆ. ಸ್ವಾರಸ್ಯವೆಂದರೆ ತಾವು ಈ ಮಿಷನ್ ಕಾರ್ಯಕ್ರಮಗಳನ್ನು ರದ್ದು ಮಾಡುತ್ತೇವೆ ಎಂದು ಘೋಷಿಸಿದ್ದ ಯುಡಿಎಫ್ ನಾಯಕತ್ವವು ಸ್ಥಳೀಯ ಸರ್ಕಾರಗಳ ಚುನಾವಣೆಗಳ ನಂತರ ಈ ರೀತಿಯ ಹೇಳಿಕೆಗಳನ್ನು ಹಿಂಪಡೆಯಬೇಕಾಯಿತು. ಹಾಗೆಯೇ, ರಾಜ್ಯದ ಬೃಹತ್ ಮಟ್ಟದ ಮೂಲಭೂತ ಸೌಕರ್ಯ ಅಭಿವೃದ್ಧಿ ಯೋಜನೆಯ ಕುರಿತು ತಾವು ನೀಡಿದ್ದ ವಿರೋಧದ ಹೇಳಿಕೆಗಳನ್ನು ಸಹ ಯುಡಿಎಫ್ ಹಿಂಪಡೆಯಬೇಕಾಯಿತು.

ಕೇರಳ ಮೂಲಭೂತ ಸೌಕರ್ಯ ಹೂಡಿಕೆ ನಿಧಿ ನಿಗಮ (KIIFB)ದ ಸಹಾಯದೊಂದಿಗೆ ಪ್ರಾರಂಭಿಸಿದ ಈ ಯೋಜನೆ ಉತ್ತಮ ಬೆಳವಣಿಗೆ ತೋರಿಸುತ್ತಿದೆ. ಮೇಲಾಗಿ, ಸಾರ್ವಜನಿಕ ಅಭಿಪ್ರಾಯವು KIIFB ಹಾಗೂ ಅಭಿವೃದ್ಧಿ ಮಿಷನ್ಗಳ ಪರವಾಗಿಯೇ ಇದೆ. ನವ ಉದಾರವಾದಿ ಗೊಡ್ಡು ಧೋರಣೆಗಳನ್ನು ಎದುರಿಸಲು ಈ ಯೋಜನೆಗಳು ಹಲವು ವಿಶಿಷ್ಟ ವಿಧಾನಗಳನ್ನು ಹೊಂದಿವೆ. ಮಾರುಕಟ್ಟೆ ಮೂಲಭೂತವಾದಿಗಳು ಸಣ್ಣ ಸರ್ಕಾರಗಳು ಮತ್ತು ಕನಿಷ್ಟ ಸಾರ್ವಜನಿಕ ಕಾರ್ಯಾಚರಣೆಯ ಪರವಾಗಿವೆ. ಆದರೆ ಇದಕ್ಕೆ ವಿರುದ್ಧವಾದ ಮಾರ್ಗದಲ್ಲಿ ಮುನ್ನಡೆಯಲು ಬದ್ಧವಾಗಿರುವ ಎಲ್.ಡಿ.ಎಫ್ ಸರ್ಕಾರವು ಅಗತ್ಯವಿದ್ದಾಗಲೆಲ್ಲ ಸಾರ್ವಜನಿಕ ಕ್ರಮ ಕೈಗೊಳ್ಳುತ್ತದೆ.

ಕೇರಳದ ಇತ್ತೀಚಿನ ಬಜೆಟ್ ಮಹಾಸೋಂಕಿನ ನಂತರದ ಜಗತ್ತಿನ ನವ ಸಹಜತೆ ಒಡ್ಡಿರುವ ಸವಾಲುಗಳನ್ನು ಎದುರಿಸಲು ಎಡ ಪರ್ಯಾಯವನ್ನು ವಿಸ್ತರಿಸುವ ಒಂದು ಪ್ರಯತ್ನವಾಗಿದೆ.

Donate Janashakthi Media

Leave a Reply

Your email address will not be published. Required fields are marked *