ವಿಶ್ವವಿದ್ಯಾಲಯಗಳ ಕುಲಪತಿ ಸ್ಥಾನದಿಂದ ರಾಜ್ಯಪಾಲರ ವಜಾ, ಮಸೂದೆ ಅಂಗೀಕರಿಸಿದ ಕೇರಳ ವಿಧಾನಸಭೆ!

ತಿರುವನಂತಪುರ: ರಾಜ್ಯ ವಿಶ್ವವಿದ್ಯಾನಿಲಯಗಳ ಕುಲಪತಿ ಹುದ್ದೆಯಿಂದ ರಾಜ್ಯಪಾಲರನ್ನು ವಜಾಗೊಳಿಸುವ ಮಸೂದೆಯನ್ನು ಕೇರಳ ವಿಧಾನಸಭೆ ಅಂಗೀಕರಿಸಿದೆ. ಮಸೂದೆ ಅಂಗೀಕಾರವಾಗಿದೆ ಎಂದು ವಿಧಾನಸಭೆ ಸ್ಪೀಕರ್ ಎಎನ್ ಶಂಸೀರ್ ಹೇಳಿದ್ದಾರೆ.

ರಾಜ್ಯದಲ್ಲಿರುವ ವಿಶ್ವವಿದ್ಯಾನಿಲಯಗಳ ಕುಲಪತಿಯಾಗಿ ರಾಜ್ಯಪಾಲರನ್ನು ಬದಲಿಸುವ ಮತ್ತು ಉನ್ನತ ಹುದ್ದೆಗೆ ಖ್ಯಾತ ಶಿಕ್ಷಣತಜ್ಞರನ್ನು ನೇಮಿಸುವ ವಿಶ್ವವಿದ್ಯಾಲಯ ಕಾನೂನುಗಳ (ತಿದ್ದುಪಡಿ) ಮಸೂದೆಯನ್ನು ಕೇರಳ ವಿಧಾನಸಭೆ ಇಂದು ಅಂಗೀಕರಿಸಿದೆ. ಸದನದಲ್ಲಿ ಮಸೂದೆಯ ಬಗ್ಗೆ ಚರ್ಚೆಗಳು ನಡೆದವು. ಈ ವೇಳೆ ಪ್ರತಿಪಕ್ಷ ಯುಡಿಎಫ್ ಮಸೂದೆಗೆ ಸಂಬಂಧಿಸಿದಂತೆ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿ ಸಲಹೆಗಳನ್ನು ನೀಡಿತು. ಆದರೆ, ಆಡಳಿತ ಪಕ್ಷವು ಸಲಹೆಗಳನ್ನು ಸ್ವೀಕರಿಸದ ಕಾರಣ ಪ್ರತಿಪಕ್ಷದ ಸದಸ್ಯರು ಸದನವನ್ನು ಬಹಿಷ್ಕರಿಸಿದರು. ಆದರೆ, ಅಂತಿಮವಾಗಿ ವಿಧಾನಸಭೆ ಸ್ಪೀಕರ್ ಎಎನ್ ಶಂಸೀರ್ ಮಸೂದೆ ಅಂಗೀಕಾರವಾಗಿದೆ ಎಂದು ಘೋಷಿಸಿದ್ದಾರೆ.

ಇದನ್ನೂ ಓದಿ : ವಿಶ್ವವಿದ್ಯಾಲಯಗಳ ಕುಲಪತಿ ಹುದ್ದೆಯಿಂದ ರಾಜ್ಯಪಾಲರನ್ನು ವಜಾಗೊಳಿಸಲು ಕೇರಳ ಸರಕಾರ ನಿರ್ಧಾರ

ಸದನದಲ್ಲಿ ಕೆಲ ಗಂಟೆಗಳ ಸುದೀರ್ಘ ಚರ್ಚೆಯ ಬಳಿಕ ಮಸೂದೆಯನ್ನು ಅಂಗೀಕರಿಸಲಾಯಿತು. ಕಾಂಗ್ರೆಸ್ ನೇತೃತ್ವದ ಯುಡಿಎಫ್, ರಾಜ್ಯಪಾಲರನ್ನು ಕುಲಪತಿ ಹುದ್ದೆಯಿಂದ ತೆಗೆದುಹಾಕುವುದಕ್ಕೆ ನಮ್ಮ ವಿರೋಧವಿಲ್ಲ ಎಂದು ಹೇಳಿತು. ಆದರೆ, ಆ ಹುದ್ದೆಗೆ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳು ಮತ್ತು ಮಾಜಿ ಕೇರಳ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳನ್ನು ಆಯ್ಕೆ ಮಾಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿತು.

ಪ್ರತಿ ವಿಶ್ವವಿದ್ಯಾನಿಲಯಗಳಿಗೆ ವಿಭಿನ್ನ ಕುಲಪತಿಗಳು ಇರಬೇಕಾಗಿಲ್ಲ. ಇದನ್ನು ಆಯ್ಕೆ ಮಾಡುವ ಆಯ್ಕೆ ಸಮಿತಿಯು ಮುಖ್ಯಮಂತ್ರಿ, ಪ್ರತಿಪಕ್ಷದ ನಾಯಕ ಮತ್ತು ಕೇರಳ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳನ್ನು ಒಳಗೊಂಡಿರಬೇಕು ಎಂದು ವಿರೋಧ ಪಕ್ಷದಿಂದ ಒಕ್ಕೊರಲ ಅಭಿಪ್ರಾಯ ವ್ಯಕ್ತವಾಯ್ತು.

ನ್ಯಾಯಾಧೀಶರು ಆಯ್ಕೆ ಸಮಿತಿಯ ಭಾಗವಾಗಲು ಸಾಧ್ಯವಿಲ್ಲ ಮತ್ತು ಸ್ಪೀಕರ್ ಉತ್ತಮ ಆಯ್ಕೆಯಾಗುತ್ತಾರೆ ಎಂದು ರಾಜ್ಯ ಕಾನೂನು ಸಚಿವ ಪಿ.ರಾಜೀವ್ ಹೇಳಿದ್ದಾರೆ. ನಿವೃತ್ತ ನ್ಯಾಯಮೂರ್ತಿ ಎನ್ನುವ ಏಕೈಕ ಕಾರಣಕ್ಕೆ ಯಾರೇ ಆಗಲಿ ವಿಶ್ವವಿದ್ಯಾಲಯಗಳ ಕುಲಪತಿಗಳಾಗಳು ಮಾನದಂಡವಾಗಿರುವುದಿಲ್ಲ ಎಂದು ಸಚಿವರು ಹೇಳಿದ್ದಾರೆ.

ಈ ನಿರ್ಧಾರಕ್ಕೆ ಕಾರಣವೇನು?: ಕೇರಳದ ರಾಜ್ಯಪಾಲರಾದ ಶ್ರೀ ಆರಿಫ್ ಮೊಹಮ್ಮದ್ ಖಾನ್ ಅವರು ತಾವು ಹೊಂದಿರುವ ಸಾಂವಿಧಾನಿಕ ಹುದ್ದೆಗೆ ತಕ್ಕುದಲ್ಲದ ರೀತಿಯಲ್ಲಿ ವರ್ತಿನೆ ಮಾಡುತ್ತಿದ್ದರು.  ಸಂವಿಧಾನ ವಿರೋಧಿ ಮತ್ತು ಪ್ರಜಾಪ್ರಭುತ್ವ ವಿರೋಧಿ ಹೇಳಿಕೆಗಳನ್ನು ನೀಡುತ್ತಿದ್ದರು. ತನ್ನನ್ನು ಟೀಕಿಸಿದರೆ ಸಚಿವ ಸ್ಥಾನದಿಂದ ವಜಾ ಮಾಡುವುದಾಗಿ ರಾಜ್ಯಪಾಲರು ಬೆದರಿಕೆ ಹಾಕಿತ್ತಿದ್ದರು. ವಿಶ್ವವಿದ್ಯಾಲಯಗಳಲ್ಲಿ ಅನಗತ್ಯ ಹಸ್ತಕ್ಷೇಪ ಮಾಡುತ್ತಿದ್ದರು. ಇದರಿಂದಾಗಿ ಸರಕಾರ ಮತ್ತು ರಾಜ್ಯಪಾಲರ ನಡುವೆ ಆಗಾಗ ಜಗಳಗಳು ತಾರಕಕ್ಕೆ ಏರುತ್ತಿದ್ದವು.

Donate Janashakthi Media

Leave a Reply

Your email address will not be published. Required fields are marked *