ರಾಜ್ಯ ಸರಕಾರದ ಮೇಲೆ ಕೇಂದ್ರ ಸರ್ಕಾರದ ಆರ್ಥಿಕ ದಿಗ್ಬಂಧನ : ಈ ಕೇರಳ ಸ್ಟೋರಿ

ಮೂಲ ಲೇಖನ :  ಟಿ ಎಂ ಥಾಮಸ್ ಐಸಾಕ್, ಅನು: ಜಿ.ಎಸ್.ಮಣಿ

ರಾಜ್ಯದ ಜನತೆಗೆ ನೀಡಿದ ವಾಗ್ದಾನಗಳನ್ನು ಅನುಷ್ಠಾನಕ್ಕೆ ತರುವ ರಾಜ್ಯ ಸರಕಾರಗಳ ಪ್ರಯತ್ನಗಳಿಗೆ ಕೇಂದ್ರ ಸರಕಾರ ಅಡ್ಡಿ-ಆತಂಕಗಳನ್ನು ಒಡ್ಡುವುದನ್ನು ಈ ದಿನಗಳಲ್ಲಿ ದೇಶ ಕಾಣುತ್ತಿದೆ. ಇದಕ್ಕೆ ಇತ್ತೀಚಿನ ಉದಾಹರಣೆಯನ್ನು ನಾವು ಕರ್ನಾಟಕದಲ್ಲಿ ಕಾಣುತ್ತಿದ್ದೇವೆ. ಇದಕ್ಕೆ ಮೊದಲು  ತನ್ನ ಯೋಜನೆಗಳಿಗೆ ತಾನೇ ಹಣಕಾಸು ಎತ್ತುವ ಕೇರಳದ ಎಲ್‍ಡಿಎಫ್ ಸರಕಾರದ ಪ್ರಯತ್ನಗಳಿಗೂ ಹೆಚ್ಚೆಚ್ಚು ಮಿತಿ ಹೇರುತ್ತ ಕೇಂದ್ರ ಸರಕಾರ ಆರ್ಥಿಕ ದಿಗ್ಬಂಧನ ಹೇರಲು ಹೊರಟಿದ್ದು ಬಹಳಷ್ಟು ಮಂದಿಯ ಗಮನಕ್ಕೆ ಬಂದಂತಿಲ್ಲ. ಸಾರ್ವಜನಿಕ ಸಾಲ ಎತ್ತುವಳಿಯ ವ್ಯಾಖ್ಯಾನವನ್ನೇ ಬದಲಿಸಿ ಕಳೆದ ವರ್ಷ ಸಾಲ ಎತ್ತಲು ಇರುವ 3.5%ಮಿತಿಯನ್ನು 2.2%ಕ್ಕೆ ಇಳಿಸಿತ್ತು.  ಈ ಬಾರಿ ಅದನ್ನು 2%ಕ್ಕೆ ಇಳಿಸಿದೆ. ಸಾಲ ಎತ್ತುವಳಿ, ವಿತ್ತೀಯ ಕೊರತೆ ಇತ್ಯಾದಿ ಹಣಕಾಸು ನಿರ್ವಹಣೆಗಳ ನಿಯಮಾವಳಿಗಳು ಕೇಂದ್ರ ಸರಕಾರಕ್ಕೂ ಮತ್ತು ರಾಜ್ಯ ಸರಕಾರಕ್ಕೂ ಸಮಾನವಾಗಿ ಅನ್ವಯವಾಗುತ್ತವೆ. ಆದರೆ ಈ ನಿಯಮಾವಳಿಗಳನ್ನು ಸ್ವತ: ಎಂದೂ ಪಾಲಿಸದ ಕೇಂದ್ರ ಸರಕಾರ, ಅವನ್ನು ಪಾಲಿಸುವ ರಾಜ್ಯ ಸರಕಾರಗಳ ವಿರುದ್ಧ ಮನಬಂದಂತೆ ನಿಯಮಗಳನ್ನು ಬದಲಿಸುತ್ತ, ಅವನ್ನು ಹಿಂದಿನಿಂದಲೇ ಜಾರಿಯಾಗುವಂತೆ ಅನ್ವಯಿಸುತ್ತ  ಬಾರುಕೋಲು ಎತ್ತುತ್ತದೆ ಎನ್ನುತ್ತಾರೆ ಈ ವಿದ್ಯಮಾನವನ್ನು ವಿಶ್ಲೇಷಿಸಿರುವ  ಕೇರಳದ ಮಾಜಿ ಹಣಕಾಸು ಮಂತ್ರಿಗಳು.

ಕೇರಳ ರಾಜ್ಯದ ಸಾರ್ವಜನಿಕ ಸಾಲ ಎತ್ತುವಳಿಯ ಮೇಲೆ ಕಡಿತ ಹೇರಿದ ಕೇಂದ್ರ ಸರ್ಕಾರದ ಕ್ರಮ ಕೇರಳದ ಸಾರ್ವಜನಿಕ ಹಣಕಾಸಿನ ಮೇಲೆ ಮಾಡಿದ ಒಂದು ದುರಾಕ್ರಮಣ. ‘ಹಣಕಾಸು ಜವಾಬ್ದಾರಿ ಮತ್ತು ಬಜೆಟ್ ನಿರ್ವಹಣೆ ಕಾನೂನಿ’ನ ಪ್ರಕಾರ ರಾಜ್ಯದ ಒಟ್ಟು ಆಂತರಿಕ ಉತ್ಪಾದನೆ(ಜಿ.ಎಸ್‍.ಡಿ.ಪಿ.)ಯ ಶೇ 3 ರಷ್ಟನ್ನು ಸಾಲ ಎತ್ತುವ ಹಕ್ಕು ರಾಜ್ಯ ಸರ್ಕಾರಗಳಿಗಿವೆ. ವಿದ್ಯುತ್ ವಲಯದ ಕೆಲವು ಶರತ್ತುಗಳನ್ನು ಪಾಲಿಸಿದರೆ ಜಿ.ಎಸ್‍.ಡಿ.ಪಿ.ಯ ಶೇ 0.5 ರಷ್ಟನ್ನು ಅಧಿಕವಾಗಿ ಎರವಲು ಪಡೆವ ಹಕ್ಕಿದೆ. ಆದರೆ ಕೇಂದ್ರದ ಇತ್ತೀಚಿನ ಪತ್ರವೊಂದು ಕೇರಳ ರಾಜ್ಯದ ಎರವಲು ಪಡೆವ ಹಕ್ಕು ರಾಜ್ಯದ ಜಿ.ಎಸ್‍.ಡಿ.ಪಿ.ಯ ಶೇ 2 ರಷ್ಟು ಮಾತ್ರ ಎನ್ನುತ್ತದೆ. ಇದು ಕಳೆದ ವರ್ಷ ರಾಜ್ಯದ ಸಾಲ ಎತ್ತುವ  ಮಿತಿಯನ್ನು ಶೇ 3.5 ರಿಂದ ಶೇ 2.2 ಕ್ಕೆ ಇಳಿಸಿದ್ದರ ಮುಂದುವರಿಕೆಯಂತೆ ಕಾಣುತ್ತದೆ. ಈ ವರ್ಷಕ್ಕೆ ಇದನ್ನು ಶೇ 2 ಕ್ಕೆ ಇಳಿಸಲಾಗಿದೆ.

ಕೇರಳದ ಒಟ್ಟು ಉತ್ಪಾದನೆ (ಜಿ.ಎಸ್‍.ಡಿ.ಪಿ.) ಸುಮಾರು 11 ಲಕ್ಷ ಕೋಟಿ ರೂಪಾಯಿಗಳಷ್ಟಾಗಬಹುದು ಎಂದು ನಿರೀಕ್ಷಿಸಲಾಗಿದೆ. ಶೇ 3.5 ರಷ್ಟು ಎರವಲು ಪಡೆಯಬಹುದು ಎಂದರೆ ಅದು 38000 ಕೋಟಿ ರೂಪಾಯಿಗಳಷ್ಟಾಗುತ್ತದೆ. ಶೇ 3 ರಷ್ಟು ಎಂದರೂ 33000 ಕೋಟಿ ರೂಪಾಯಿಗಳಷ್ಟಾಗುತ್ತದೆ. ಕೇಂದ್ರ ಸರ್ಕಾರ ಮೊದಲ ಒಂಬತ್ತು ತಿಂಗಳುಗಳ ಅವಧಿಗೆ 15390 ಕೋಟಿ ರೂಪಾಯಿಗಳ ಸಾರ್ವಜನಿಕ ಸಾಲ ಎತ್ತಬಹುದೆಂಬ ಮತ್ತು ನಂತರದ ಮೂರು ತಿಂಗಳುಗಳಲ್ಲಿ 5131 ಕೋಟಿ ರೂಪಾಯಿಗಳ ಸಾರ್ವಜನಿಕ ಸಾಲ ಎತ್ತಬಹುದೆಂಬ ಆಜ್ಞೆ ಹೊರಡಿಸಿದೆ. ಇದರ ಪರಿಣಾಮವಾಗಿ 2023-24 ರ ಹಣಕಾಸು ವರ್ಷದಲ್ಲಿ 20690 ಕೋಟಿ ರೂಪಾಯಿಗಳ ಸಾಲ ಎತ್ತುವಳಿ ಮಾಡಬಹುದೆಂದಾಗುತ್ತದೆ. ಕೇರಳ ವಿಧಾನಸಭೆ ಅನುಮೋದಿಸಿದ ಆಯ- ವ್ಯಯದಲ್ಲಿ 17310 ಕೋಟಿ ರೂಪಾಯಿಗಳ ಬೃಹತ್ ಕೊರತೆಯನ್ನು ಇದು ಉಂಟುಮಾಡುತ್ತದೆ!

ವ್ಯಾಖ್ಯಾನವನ್ನೇ ಬದಲಿಸುವ ತಂತ್ರ

ಕೇಂದ್ರ ಸರ್ಕಾರ ಮಾಡಿರುವುದು ಸರಳವಾದದ್ದು. ಸಾರ್ವಜನಿಕ ಸಾಲ ಎತ್ತುವಳಿಯ ವ್ಯಾಖ್ಯಾನವನ್ನೇ ಅದು ಬದಲಿಸಿದೆ. ಈ ಕುಟಿಲ ತಂತ್ರವನ್ನು ಅರ್ಥ ಮಾಡಿಕೊಳ್ಳಲು ನಾವು ಸರ್ಕಾರಿ ಸಾಲ ಎತ್ತುವಳಿಯ ಪ್ರವರ್ಗಗಳನ್ನು ಸ್ವಲ್ಪ ಆಳಕ್ಕಿಳಿದು ನೋಡಬೇಕು. ಇದರಲ್ಲಿ ಸ್ಥೂಲವಾಗಿ ಐದು ಪ್ರವರ್ಗಗಳಿವೆ.

  1. ಕ್ರೋಢೀಕೃತ ನಿಧಿ(Consolidated Fund)ಗೆ ಸಾಲ ಎತ್ತುವಳಿ ಮಾಡಿ ಸೇರಿಸುವುದು: ಇದರಲ್ಲಿ ರಾಜ್ಯ ಸರ್ಕಾರಗಳು ಮಾರುಕಟ್ಟೆಯಲ್ಲಿ ಬಾಂಡುಗಳನ್ನು ನೀಡಿ ಎತ್ತುವಳಿ ಮಾಡುತ್ತವೆ. ಅವು ದೇಶದ ಆಂತರಿಕ ಹಣಕಾಸು ಸಂಸ್ಥೆಗಳಿಂದ ನೇರ ಸಾಲ ಪಡೆಯಬಹುದು ಅಥವಾ ಕೇಂದ್ರ ಸರ್ಕಾರದ ಸಹಾಯದಿಂದ ಹೊರದೇಶಗಳಿಂದ ಸಾಲ ಪಡೆಯಬಹುದು. ಇದಲ್ಲದೆ ಕೇಂದ್ರ ಸರ್ಕಾರವೂ ರಾಜ್ಯಗಳಿಗೆ ಸಾಲ ನೀಡಬಹುದು. ಈ ಎಲ್ಲ ಸಾಲಗಳು ಕ್ರೋಢೀಕೃತ ನಿಧಿಗೆ ಬರುತ್ತವೆ ಮತ್ತು ಅವನ್ನು ಬಂಡವಾಳ ಸ್ವೀಕೃತಿ ಎಂದು ಪರಿಗಣಿಸಲಾಗುತ್ತದೆ.
  2. ಸಾರ್ವಜನಿಕ ಖಾತೆಯಲ್ಲಿ ಸಾಲ ಎತ್ತುವಳಿ: ಕ್ರೋಢೀಕೃತ ನಿಧಿಯಲ್ಲದೆ ರಾಜ್ಯ ಸರ್ಕಾರಗಳು ಒಂದು ಸಾರ್ವಜನಿಕ ಖಾತೆಯನ್ನು ಹೊಂದಿರುತ್ತವೆ. ಭದ್ರತಾ ಠೇವಣಿ, ಪ್ರಾವಿಡೆಂಟ್ ಫಂಡ್, ಇತರೆ ಖಜಾನೆ ಠೇವಣಿಗಳನ್ನು ಸರ್ಕಾರಿ ಸ್ವೀಕೃತಿಗಳೆಂದು ಪರಿಗಣಿಸಲಾಗುವುದಿಲ್ಲ. ಈ ಠೇವಣಿಗಳನ್ನು ತಾತ್ಕಾಲಿಕವಾಗಿ ಭದ್ರತೆಗೆಂದು ಸರ್ಕಾರದ ವಶಕ್ಕೆ ನೀಡಲಾಗಿರುತ್ತದೆ. ಈ ಸಾರ್ವಜನಿಕ ಖಾತೆಯಲ್ಲಿ ನಿವ್ವಳ ಹೆಚ್ಚಳ ವನ್ನು ಮಾತ್ರ ಸರ್ಕಾರಿ ಬಂಡವಾಳ ಸ್ವೀಕೃತಿ ಎಂದು ಪರಿಗಣಿಸಲಾಗುತ್ತದೆ.
  3. ಬಜೆಟ್ಟಿನ ಹೊರಗೆ ಸಾಲ ಎತ್ತುವಳಿ: ಕೆಲವು ಸಂದರ್ಭಗಳಲ್ಲಿ ಬಜೆಟ್ಟಿನಲ್ಲಿ ಅನುಮೋದಿಸಲಾದ ಯೋಜನೆಗಳಿಗೆ ಸಾಕಷ್ಟು ಹಣಕಾಸಿನ ಒದಗಣೆ ಇಲ್ಲದಿರಬಹುದು. ಖಜಾನೆಯಲ್ಲಿ ತಾತ್ಕಾಲಿಕವಾಗಿ ಸಂಪನ್ಮೂಲ ಇಲ್ಲದೇ ಇರಬಹುದು. ಇಂತಹ ಸಂದರ್ಭಗಳಲ್ಲಿ ಸರ್ಕಾರ ಯೋಜನೆ ಅನುಷ್ಟಾನಗೊಳಿಸುವ ಸಂಸ್ಥೆಯ ಮೂಲಕ ಸಾಲ ಎತ್ತುವಳಿ ಮಾಡಬಹುದು. ಉದಾಹರಣೆಗೆ ಭಾರತೀಯ ಆಹಾರ ನಿಗಮ ಧಾನ್ಯಗಳ ಖರೀದಿಗೆ ಸಾಲ ಪಡೆಯುತ್ತದೆ. ಸರ್ಕಾರ ತದನಂತರದಲ್ಲಿ ಈ ಹಣವನ್ನು ಅದಕ್ಕೆ ಪಾವತಿ ಮಾಡುತ್ತದೆ. ಇದು ಬಜೆಟ್ಟಿನ ಹೊರಗಡೆ ಮಾಡುವ ಎತ್ತುವಳಿ. ಕೇರಳ ರಾಜ್ಯ ಸರ್ಕಾರದ ಉದಾಹರಣೆ ತೆಗೆದುಕೊಳ್ಳುವುದಾದರೆ ಅದು ತನ್ನ ಪಿಂಚಣಿ ಪಾವತಿ ಕಂಪನಿಗಾಗಿ ಪಡೆವ ಸಾಲ. ಕೇರಳದಲ್ಲಿ 50 ಲಕ್ಷಕ್ಕೂ ಹೆಚ್ಚು ಜನ ಹಿರಿಯ ವಯಸ್ಕರು, ವಿಕಲಚೇತನರು, ವಿಧವೆಯರು ತಿಂಗಳಿಗೆ 1600 ರೂಪಾಯಿಗಳ ಪಿಂಚಣಿ ಪಡೆಯುತ್ತಾರೆ. ಖಜಾನೆಯ ಪರಿಸ್ಥಿತಿ ಸರಿ ಇಲ್ಲದಿದ್ದರೂ ಇವರ ಪಿಂಚಣಿ ತಪ್ಪಿಸುವಂತಿಲ್ಲ. ರಾಜ್ಯ ಸರ್ಕಾರ ಈ ಕಂಪನಿ ಪಡೆದ ಸಾಲ ಮತ್ತು ಅದರ ಬಡ್ಡಿ ಎರಡನ್ನೂ ಮರು ಪಾವತಿಸುತ್ತದೆ. ಹೀಗೆ ಈ ಕಲ್ಯಾಣ ಪಿಂಚಣಿ ಯಾವುದೇ ಅಡೆ- ತಡೆ ಇಲ್ಲದೇ ತಿಂಗಳು ತಿಂಗಳು ಪಾವತಿಯಾಗುತ್ತಿರುತ್ತದೆ. ಈ ಪಿಂಚಣಿಗಳಲ್ಲಿನ ಅರ್ಧಕ್ಕು ಹೆಚ್ಚನ್ನು ಸಹಕಾರಿ ಬ್ಯಾಂಕುಗಳ ಮೂಲಕ ಪಿಂಚಣಿದಾರರ ಮನೆಬಾಗಿಲಿಗೆ ತಲುಪಿಸಲಾಗುತ್ತದೆ.
  4. ಬಜೆಟ್ಟಿನಲ್ಲಿ ಸೇರಿರದ ಹೆಚ್ಚುವರಿ ಸಾಲ ಎತ್ತುವಳಿ: ಈ ಸಾಲಗಳು ಸಾರ್ವಜನಿಕ ವಲಯದ ಸಂಸ್ಥೆಗಳು ಬಜೆಟ್ಟಿನಲ್ಲಿ ಸೇರಿಲ್ಲದಿರುವ ತಮ್ಮ ಯೋಜನೆಗಳ ಅನುಷ್ಟಾನಕ್ಕಾಗಿ ಸಾಲ ಎತ್ತುವಳಿ ಮಾಡುವುದು. ಇದಕ್ಕೆ ರಾಜ್ಯ ಸರ್ಕಾರ ಜಾಮೀನು ನೀಡುತ್ತದೆ. ಇದಲ್ಲದೆ ಭಾಗಶಃ ಅಥವಾ ಪೂರ್ತಿ ಹಣಕಾಸಿನ ಬೆಂಬಲವನ್ನು ಒಂದು ಒಪ್ಪಿತ ಕರಾರಿನ ಪ್ರಕಾರ ನೀಡುತ್ತದೆ. ಉದಾಹರಣೆಗೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ನಿಗಮ ತನ್ನ ಯೋಜನೆಗಳ ಅನುಷ್ಟಾನಕ್ಕಾಗಿ ಪಡೆವ ಸಾಲಗಳು. ಕೇರಳ ರಾಜ್ಯ ಸರ್ಕಾರ “ಕೇರಳ ಮೂಲ ಸೌಕರ್ಯ ಹೂಡಿಕೆ ನಿಧಿ ಮಂಡಳಿ’ (KIIFB) ಎಂಬ ಸಂಸ್ಥೆಯನ್ನು ಸ್ಥಾಪಿಸಿದೆ. ಈ ಮಂಡಳಿ ಬಹು ಮುಖ್ಯ ದೊಡ್ಡ ದೊಡ್ಡ ಮೂಲ ಸೌಕರ್ಯ ಯೋಜನೆಗಳಿಗೆ ಸಾಲ ಎತ್ತುವಳಿ ಮಾಡಿ ಅನುಸ್ಥಾನಕ್ಕೆ ಅನುವು ಮಾಡಿಕೊಡುತ್ತದೆ. ಈ ಯೋಜನೆಗಳು ಮತ್ತು ಅವುಗಳಿಗೆ ಸಂಬಂಧಪಟ್ಟ ಇತರೆ ಖರ್ಚುಗಳು ಬಜೆಟ್ಟಿನಲ್ಲಿ ಸೇರಿರುವುದಿಲ್ಲ. ಸರ್ಕಾರ ಈ KIIFB ಗೆ ಕೆಲವು ಯೋಜನೆಗಳನ್ನು ಅನುಷ್ಟಾನಗೊಳಿಸುವ ಜವಾಬುದಾರಿ ಕೊಟ್ಟಿರುತ್ತದೆ. ಅದಕ್ಕೆ ಬೆಂಬಲವಾಗಿ ಮೋಟಾರು ವಾಹಗಳ ತೆರಿಗೆಯ ಅರ್ಧ ಭಾಗದಷ್ಟು ಪ್ರಮಾಣದಲ್ಲಿ ವರ್ಷಾಶನವನ್ನು ಅದು ಈ ಮಂಡಳಿಗೆ ನೀಡುತ್ತದೆ.
  5. ಸಾರ್ವಜನಿಕ ವಲಯದ ನೇರ ಸಾಲ ಎತ್ತುವಳಿ: ಸಾರ್ವಜನೀಕ ವಲಯದ ಘಟಕಗಳು ಮತ್ತು ಏಜೆನ್ಸಿಗಳು ತಮ್ಮ ಯೋಜನೆಗಳ ಅನುಷ್ಟಾನಕ್ಕೆ ಬೇಕಾಗುವ ಹಣಕಾಸನ್ನು ನೇರವಾಗಿ ಯಾವುದೇ ಸರಕಾರದ ಗ್ಯಾರಂಟಿ ಅಥವಾ ಹಣಕಾಸಿನ ನೆರವು ಇಲ್ಲದೇ ಸಾಲವಾಗಿ ಎತ್ತಬಹುದು. ಹೀಗೆ ಎತ್ತಿದ ಸಾಲವನ್ನು ಈ ಸಂಸ್ಥೆಗಳು ಮರುಪಾವತಿಸಲು ವಿಫಲವಾದಲ್ಲಿ ಅದು ಸರ್ಕಾರದ ತಲೆಯ ಮೇಲೆ ಬೀಳುವುದಿಲ್ಲ. ಬಜೆಟ್ಟಿನ ಹೊರಗಿನ ಸಾಲ ಮತ್ತು ಬಜೆಟ್ಟಿನ ಹೆಚ್ಚುವರಿ ಸಾಲಗಳು ಈ ನೇರ ಸಾಲಗಳಿಂಗಿಂತ ಭಿನ್ನವಾಗಿವೆ. ಒಪ್ಪಿತ ಲೆಕ್ಕ ಪತ್ರ ವಿಧಾನಗಳ ಪ್ರಕಾರ ಸರ್ಕಾರದ ಸಾಲ ಸೋಲಗಳನ್ನು ಎರಡು ವಿಧವಾಗಿ ವಿಂಗಡಿಸಲಾಗುತ್ತದೆ: ಮೊದಲನೆಯದು ಸಾರ್ವಜನಿಕ ಸಾಲ ಎತ್ತುವಳಿ ಮತ್ತು ಎರಡನೆಯದು ಸಾರ್ವಜನಿಕ ಖಾತೆ ಸಾಲ ಎತ್ತುವಳಿ. ಕೇಂದ್ರ ಸರ್ಕಾರದ ವಿಷಯಕ್ಕೆ ಬಂದಾಗ ಇಂದಿಗೂ ಈ ಎರಡು ವಿಧಗಳನ್ನು ಮಾತ್ರ ಸರ್ಕಾರಿ ಬಾಧ್ಯತೆಗಳೆಂದು ಪರಿಗಣಿಸಲಾಗುತ್ತದೆ ಅಲ್ಲದೆ ಇದನ್ನು ಹಣಕಾಸು ಕೊರತೆಯನ್ನು ಲೆಕ್ಕ ಹಾಕಲು ಪರಿಗಣಿಸಲಾಗುತ್ತದೆ. ರಾಜ್ಯ ಸರ್ಕಾರಗಳ ವಿಷಯದಲ್ಲಿ ಕೇಂದ್ರ ಸರ್ಕಾರ ಈಗ ಮೂರನೇ (ಬಜೆಟ್ಟಿನ ಹೊರಗಿನ ಸಾಲಎತ್ತುವಳಿ) ಮತ್ತು ನಾಲ್ಕನೇ (ಬಜೆಟ್ ಹೆಚ್ಚುವರಿ ಸಾಲ ಎತ್ತುವಳಿ) ಗಳನ್ನು ರಾಜ್ಯ  ಸರ್ಕಾರಗಳ ಸಾರ್ವಜನಿಕ ಸಾಲ ಎತ್ತುವಳಿ ಎಂದು ಪರಿಗಣಿಸಿ ಜಾರಿಗೆ ತರಲು ಉದ್ದೇಶಿಸಿದೆ. ಹೀಗೆ ವ್ಯಾಖ್ಯಾನಗಳನ್ನು ಬದಲಿಸಿ ಅದೇ ಅನುಪಾತದಲ್ಲಿ ರಾಜ್ಯ ಸರ್ಕಾರಗಳ ಸಾಲದ ಮಿತಿಯನ್ನು ಶೇ 3ಕ್ಕೆ  ಇಳಿಸಲು ಅದು ಹುನ್ನಾರ ನಡೆಸಿದೆ.

ಇದನ್ನೂ ಓದಿ : ಸುರಕ್ಷತೆ ಮರೆತು ವಿಸ್ತರಣೆ, ಐಷಾರಮಿತನ, ವಾಣಿಜ್ಯೀಕರಣ ಮೆರೆಯುತ್ತಿರುವ ಭಾರತೀಯ ರೈಲ್ವೆ

 

ಕೇಂದ್ರ ಸರ್ಕಾರ ಮತ್ತು ಬಜೆಟ್ ಹೊರಗಿನ ಸಾಲ ಎತ್ತುವಳಿ

ಕೇಂದ್ರ ಸರ್ಕಾರದ ವಿತ್ತೀಯ ಕೊರತೆ FRBM ನ ಮಿತಿಯನ್ನು ಮೀರಿ ಹೋಗಿದೆ ಅಷ್ಟೇ ಅಲ್ಲ ಅದು ಬಜೆಟ್ಟಿನ ಹೊರಗೂ ಬಹಳ ದೊಡ್ಡ ಪ್ರಮಾಣದಲ್ಲಿ ಸಾಲ ಎತ್ತುವಳಿ ಮಾಡಿದೆ. ಶ್ರೀಮತಿ ನಿರ್ಮಲ ಸೀತಾರಾಮನ್ ಅವರು ಹಣಕಾಸು ಮಂತ್ರಿಯಾದ ಮೇಲೆ ಹೀಗೆ ಬಜೆಟ್ಟಿನ ಹೊರಗೆ ಮಾಡಿದ ಸಾಲ ಎತ್ತುವಳಿಯ ಒಂದು ಅನುಬಂಧವನ್ನೇ ಬಜೆಟ್ ಭಾಷಣದ ಜೊತೆಗೆ ಕೊಡುವ ಪದ್ದತಿಯನ್ನು ಅನುಸರಿಸಿದ್ದಾರೆ. ಹಣಕಾಸು ಸಾಲು 2019-20ರಲ್ಲಿ ಈ ಸಾಲ ಎತ್ತುವಳಿ ಮೊತ್ತ 1.48 ಲಕ್ಷ ಕೋಟಿಗಳಷ್ಟಾಗಿತ್ತು. ಈ ಅನುಬಂಧದಲ್ಲಿ ಸೇರಿಸದೆಯೇ 1.69 ಲಕ್ಷ ಕೋಟಿ ರೂಪಾಯಿಗಳ ಸಾಲವನ್ನು ಎತ್ತಲಾಗಿದೆ ಎಂದು ಸಿ.ಎ.ಜಿ. ವರದಿಯಲ್ಲಿ ಹೇಳಲಾಗಿದೆ!! ಪರಿಣಾಮವಾಗಿ ನಾವು ಲೆಕ್ಕ ಹಾಕಿದರೆ 2019-20ರ ಸಾಲಿನಲ್ಲಿ ಬಜೆಟ್ ಹೊರಿಗಿನ ಸಾಲ 3.17 ಲಕ್ಷ ಕೋಟಿಗಳಷ್ಟಾಗುತ್ತದೆ!!

ಕೇರಳವನ್ನು ಟೀಕಿಸುತ್ತ ಅದು ಎತ್ತಿದ ಬಜೆಟ್ಟಿನ ಹೊರಗಿನ ಸಾಲಗಳನ್ನು ಅದು ಎತ್ತಬಹುದಾದ ಸಾಲದ ಒಟ್ಟು ಮಿತಿಯೊಳಗೆ ಸೇರಿಸಬೇಕು ಎಂಬ ಸಲಹೆ ನೀಡುವ ಈ ಸಿ.ಎ.ಜಿ. ಇದೇ ಮಾನದಂಡವನ್ನು ಕೇಂದ್ರ ಸರ್ಕಾರಕ್ಕೆ ಅನ್ವಯಿಸುವುದಿಲ್ಲ. ಇದಲ್ಲದೆ ಕೇಂದ್ರ ಸರ್ಕಾರದ ಈ ಬಜೆಟ್ಟಿನ ಹೊರಗಿನ ಸಾಲ ಎತ್ತುವಳಿಯನ್ನು ವಿತ್ತೀಯ ಕೊರತೆಯ ಲೆಕ್ಕಾಚಾರದಲ್ಲೂ ಸೇರಿಸುವುದಿಲ್ಲ! ಎಂಥ ಗೋಸುಂಬೆತನ!! ಇದಲ್ಲದೆ ಕೇರಳ ಪಿಂಚಣಿ ಕಂಪನಿಯ ನಿವ್ವಳ ಸಾಲವನ್ನು ಪರಿಗಣಿಸುವ ಬದಲು ಒಟ್ಟು ಸಾಲವನ್ನು ಪರಿಗಣಿಸಲಾಗಿದೆ.

KIIFB ಯ ಯಾವುದೇ ಯೋಜನೆಯೂ ಬಜೆಟ್ಟಿನ ಭಾಗವಾಗಿಲ್ಲದಿರುವಾಗ, ಮತ್ತು KIIFB ಎತ್ತುವ ಒಂದು ಪೈಸೆ ಸಾಲವೂ ಖಜಾನೆಯ ಲೆಕ್ಕದಲ್ಲಿ ಸೇರದಿರುವಾಗ ಕೇಂದ್ರ ಸರ್ಕಾರ ಇದನ್ನು ಬಜೆಟ್ಟಿನ ಹೊರಗಿನ ಸಾಲ ಎತ್ತುವಳಿ ಎಂದು ಪರಿಗಣಿಸುವುದಿಲ್ಲ. ಕೇಂದ್ರದ ಪ್ರತಿವಾದ ಏನೆಂದರೆ KIIFB ಎಲ್ಲ ಸಾಲಗಳನ್ನು ಸರ್ಕಾರಿ ಅನುದಾನಗಳಿಂದ ಮರುಪಾವತಿಸಲಾಗುತ್ತದೆ ಎಂಬುದು. ಇದು ಹಸೀ ಸುಳ್ಳು. KIIFB ಯ ಶೇ 30 ರಷ್ಟು ಯೋಜನೆಗಳು ಸ್ವಯಂ-ಹಣಕಾಸು ಒದಗಿಸಿಕೊಳ್ಳುವ ಕಂದಾಯ-ಮಾದರಿ ಯೋಜನೆಗಳು.

ಈ KIIFB ಯ ಯೋಜನೆಗಳು ಕೇಂದ್ರ ಮತ್ತು ರಾಜ್ಯ ಸರ್ಕಾರಗಳೂ ಸಾಮಾನ್ಯವಾಗಿ ಆಯ್ದುಕೊಳ್ಳುವಂಥ ವಾರ್ಷಿಕ ಪಾವತಿ(ಅನ್ಯುಟಿ) ಮಾದರಿಯ ಯೋಜನೆಗಳು. ಈ ಯೋಜನೆಗಳಡಿ ಸಾಮಾನ್ಯವಾಗಿ ಗುತ್ತಿಗೆದಾರರು ಮೂಲ ಸೌಕರ್ಯ ಯೋಜನೆ ಅನುಷ್ಟಾನಗೊಳಿಸಲು ಸಾಲ ಪಡೆಯುತ್ತಾರೆ. ರಾಜ್ಯ ಸರ್ಕಾರ ವಾರ್ಷಿಕ ಪಾವತಿ ರೂಪದಲ್ಲಿ 15-20 ವರ್ಷಗಳಲ್ಲಿ ಅವರ ಹಣವನ್ನು ಸಂದಾಯ ಮಾಡುತ್ತದೆ. ಈ ಅವಧಿಯ ಬಡ್ಡಿಯನ್ನೂ ಗುತ್ತಿಗೆದಾರರ ಬಿಡ್ ಬೆಲೆಯಲ್ಲಿ ಸೇರಿಸಲಾಗಿರುತ್ತದೆ. ಈ ರೀತಿ ಸಾಲ ಎತ್ತುವಳಿ ಬಜೆಟ್ಟಿನ ಹೊರಗಿನ ಸಾಲ ಎತ್ತುವಳಿ ಎಂದು ಯಾರೂ ಹೇಳಿಲ್ಲ.

2019 ರ ಕೊನೆಯ ವೇಳೆಗೆ ಕೇಂದ್ರ ಸರ್ಕಾರ 93 ಇಂತಹ ವಾರ್ಷಿಕ ಪಾವತಿಯ ಯೋಜನೆಗಳನ್ನು ಹೊಂದಿತ್ತು. ಈ ಯೋಜನೆಗಳ ವೆಚ್ಚ 1 ಲಕ್ಷ ಕೋಟಿ ರೂಪಾಯಿಗಳಿಗಿಂತಲೂ ಹೆಚ್ಚು! ಇಲ್ಲಿಯವರೆಗೆ ಸಿ.ಎ.ಜಿ. ಯ ಯಾವುದೇ ವರದಿ ಈ ಯೋಜನೆಗಳ ವಿಷಯದಲ್ಲಿ ತಕಾರಾರು ಎತ್ತಿಲ್ಲ ಅಥವಾ ಆತಂಕ ವ್ಯಕ್ತಪಡಿಸಿಲ್ಲ.

KIIFB ಮೇಲೆ ಕಣ್ಣು

KIIFB ಸಹ ಇಂತಹುದೇ ವಾರ್ಷಿಕ ಪಾವತಿಯ ಯೋಜನೆ. ಕೇರಳ ರಾಜ್ಯ ಸರ್ಕಾರ 70000 ಕೋಟಿ ರೂಪಾಯಿಗಳ ಯೋಜನೆಗಳನ್ನು KIIFB ಗೆ ಅನುಷ್ಠಾನ ಮಾಡಲು ನೀಡಿದೆ. ಇಲ್ಲಿ ವಾರ್ಷಿಕ ಪಾವತಿ ಮೋಟಾರು ವಾಹನಗಳ ತೆರಿಗೆಯ ಅರ್ಧದಷ್ಟು. ಆದ್ದರಿಂದ KIIFB ಯನ್ನು ಹೆಚ್ಚುತ್ತಿರುವ ವಾರ್ಷಿಕ ಪಾವತಿ ಯೋಜನೆ ಎಂದು ಪರಿಗಣಿಸಬಹುದು. ಈ ವ್ಯವಸ್ಥೆ  ಬಜೆಟ್ ಹೊರಗಿನ ಸಾಲ ಎತ್ತುವಳಿಯಾಗಲಿ ಅಥವಾ FRBM ಕಾನೂನಿನ ಉಲ್ಲಂಘನೆಯಾಗಲಿ ಆಗುವುದಿಲ್ಲ ಎಂಬುದನ್ನೂ ಗಮನಿಸಬೇಕು.

ಯಾವುದೇ ವಾರ್ಷಿಕ ಪಾವತಿ ಯೋಜನೆಯಲ್ಲಿ ಭವಿಷ್ಯದ ಮರುಪಾವತಿಯ ಬಾಧ್ಯತೆ ಸರಕಾರದ ಮೇಲೆ ಇದ್ದೇ ಇರುತ್ತದೆ ಎಂಬುದನ್ನು ಇಲ್ಲಿ ಹೇಳಲೇಬೇಕು. ಆದರೆ ಇಂತಹ ಹೊಣೆಗಾರಿಕೆಯನ್ನು ವಿತ್ತೀಯ ಲೆಕ್ಕಾಚಾರದಲ್ಲಿ ಸೇರಿಸಲಾಗುವುದಿಲ್ಲ ಅಥವಾ ಇದನ್ನು ಪ್ರಸಕ್ತ ಸಾರ್ವಜನಿಕ ಸಾಲ ಎತ್ತುವಳಿಯ ಭಾಗ ಎಂದೂ ಪರಿಗಣಿಸುವುದಿಲ್ಲ.

ನಿಜ, ಈ ಸ್ವಯಂ-ಹಣಕಾಸಿನ ಯೋಜನೆಗಳ ಅಸಲು ಮತ್ತು  ಬಡ್ಡಿ ಮರು ಪಾವತಿಸಲು ವಾರ್ಷಿಕ ಪಾವತಿಗಳು ಸಾಕಾಗುತ್ತವೆ ಎಂಬುದನ್ನು ಖಚಿತಪಡಿಸುವುದು ಹೇಗೆ ಎಂಬ ಪ್ರಶ್ನೆ ಎದ್ದೇ ಏಳುತ್ತದೆ.

KIIFB ಯ ದತ್ತಾಂಶಗಳು ಸಮಗ್ರವಾಗಿದ್ದು ಅವು ಯೋಜನೆಯ ಎಲ್ಲಾ ವಿವರಗಳನ್ನು, ಅಂದರೆ, ಬಜೆಟ್ಟಿನಲ್ಲಿ ಹಂಚಿಕೆ, ಮಾರುಕಟ್ಟೆಯಿಂದ ಎತ್ತಿದ ಹಣಕಾಸು, ಯೋಜನೆಯಿಂದ ಉತ್ಪನ್ನಗೊಳ್ಳುವ ಆದಾಯ, ಯೋಜನೆಯಿಂದ ಹೊರ ಹರಿವ ಹಣ ಮತ್ತು ಋಣ ಸಂದಾಯಕ್ಕೆ ಹೋಗುವ ಹಣ ಹೀಗೆ ಎಲ್ಲವನ್ನೂ ಈ ದತ್ತಾಂಶಗಳು ಸೆರೆ ಹಿಡಿಯುತ್ತವೆ. KIIFB ತನ್ನದೇ ಆದ ‘ಆಸ್ತಿ ಬಾಧ್ಯತೆ ನಿರ್ವಹಣೆ’(ಎಎಲ್‍ಎಂ) ಮಾದರಿಯನ್ನು ರೂಪಿಸಿಕೊಂಡಿದೆ. ಇದರಲ್ಲಿ ಮುನ್ಸೂಚಕ ವಿಶ್ಲೇಷಣಾ ಕ್ರಮಗಳು, ಕೃತ್ರಿಮ ಬುದ್ದಿಮತ್ತೆ, ಯಂತ್ರ ಕಲಿಕೆ  ಇತ್ಯಾದಿಗಳನ್ನು ಬಳಸಿಕೊಳ್ಳಲಾಗಿದೆ. ಇಂತಹ ಮಾದರಿಯಿಂದಾಗಿ KIIFB ಯಾವುದೇ ಸಮಯದಲ್ಲಿ ಆಸ್ತಿ ಮತ್ತು ಬಾಧ್ಯತೆಗಳ ಸಮತೋಲ ಏನಿರುತ್ತದೆ ಎಂಬುದನ್ನು ಖಚಿತವಾಗಿ ಹೇಳಬಲ್ಲುದು. ಯಾವುದೇ ಸಂದರ್ಭದಲ್ಲೂ ಬಾಧ್ಯತೆಗಳು ಆಸ್ತಿಗಳಿಗಿಂತ ಹೆಚ್ಚಿಗೆ ಇರದಂತೆ ಇದು ನೋಡಿಕೊಳ್ಳುತ್ತದೆ. ಈ ಯೋಜನೆಗಳನ್ನು ತಾನೇ ಹಾಕಿಕೊಂಡ ಮಿತಿಗಳ ಒಳಗೇ ಅನುಷ್ಟಾನಗೊಳಿಸಲಾಗುತ್ತದೆ. ಸರ್ಕಾರ ವಾರ್ಷಿಕ ಪಾವತಿಯ ತನ್ನ ಕಾನೂನಾತ್ಮಕ ಬಾಧ್ಯತೆಯನ್ನು ಪಾಲಿಸುವ ವರೆಗೆ KIIFB ಬಾಧ್ಯತೆಗಳು ಸರ್ಕಾರದ ತೆಕ್ಕೆಗೆ ಬಂದು ಬೀಳುವ ಸಾಧ್ಯತೆ ಇಲ್ಲದಂತೆ ನೋಡಿಕೊಳ್ಳಲಾಗುತ್ತದೆ.

ಕೇಂದ್ರ ಸರ್ಕಾರದ ಸಾರ್ವಜನಿಕ ಎತ್ತುವಳಿ ಅಥವಾ ವಿತ್ತೀಯ ಕೊರತೆಯನ್ನು ಲೆಕ್ಕ ಹಾಕುವಾಗ ಬಜೆಟ್ಟಿನ ಒಳಗೆ ಮತ್ತು ಬಜೆಟ್ಟಿನ ಹೊರಗೆ ಮಾಡಿದ ಸಾಲಗಳನ್ನು ಪರಿಗಣಿಸಲಾಗುತ್ತಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಬಗೆಗಿನ ಈ ಮೂಲಭೂತ ಅಸಮತೆ ವ್ಯಾಪಕವಾಗಿದೆ. FRBM ಕಾನೂನಿನ ಪ್ರಕಾರ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ತಂತಮ್ಮ ಜಿ.ಡಿ.ಪಿ.ಯ ಶೇ 3 ಕ್ಕಿಂತ ಹೆಚ್ಚಿಗೆ ಸಾಲ ಎತ್ತುವಳಿ ಮಾಡುವಂತಿಲ್ಲ. ವಿತ್ತೀಯ ಕೊರತೆಯನ್ನೂ ಶೇ 3 ಕ್ಕೆ ಸೀಮಿತಗೊಳಿಸಬೇಕು. ಇದರ ಜೊತೆಗೆ ಸಾಲ ಎತ್ತಿದ ಹಣವನ್ನು ಕಂದಾಯ ವ್ಯಯಕ್ಕೆ ಬಳಸುವಂತಿಲ್ಲ. ಕಂದಾಯ ಕೊರತೆ(ರೆವಿನ್ಯೂ ಡೆಫಿಸಿಟ್)ಯನ್ನು ಶೂನ್ಯದ ಮಟ್ಟದಲ್ಲಿರಿಸಬೇಕು.

ಆದರೆ, ಕೇಂದ್ರ ಸರ್ಕಾರ ಇಲ್ಲಿಯವರೆಗೆ ಈ ನಿಯಯಾವಳಿಗಳನ್ನು ಪಾಲಿಸಿಲ್ಲ. ವಿತ್ತೀಯ ಕೊರತೆಯನ್ನು ಸತತವಾಗಿ ಶೇ 4 ರಿಂದ 6 ರ ಮಟ್ಟದಲ್ಲೇ ಇರಿಸಲಾಗಿದೆ. ಇದಕ್ಕೆ ವ್ಯತಿರಿಕ್ತವಾಗಿ ರಾಜ್ಯ ಸರ್ಕಾರಗಳು ಬಹುತೇಕ ಈ ನಿಯಮಗಳನ್ನು ಪಾಲಿಸಿವೆ. ಹೀಗೆ ಸ್ವತಃ ನಿಯಮಾವಳಿಯನ್ನು ಪಾಲಿಸದ ಈ ಕೇಂದ್ರ ಸರ್ಕಾರವೇ ಮನಬಂದಂತೆ ನಿಯಮಗಳನ್ನು ಬದಲಿಸುತ್ತ, ಅವನ್ನು ಹಿಂದಿನಿಂದಲೇ ಜಾರಿಯಾಗುವಂತೆ ಅನ್ವಯಿಸುತ್ತ  ರಾಜ್ಯ ಸರಕಾರಗಳ ವಿರುದ್ಧ ಬಾರುಕೋಲು ಎತ್ತುತ್ತದೆ!!

 

Donate Janashakthi Media

Leave a Reply

Your email address will not be published. Required fields are marked *