ನವದೆಹಲಿ: ಇಂದು ಮಂಡನೆಯಾದ ಕೇಂದ್ರ ಬಜೆಟ್- 2023-24ರ ಪ್ರಕಾರ ಕೇಂದ್ರದ ನರೇಂದ್ರ ಮೋದಿ ಸರ್ಕಾರ ಕೆಲವು ಹೊಸ ಯೋಜನೆಗಳನ್ನು ಘೋಷಣೆ ಮಾಡಿದೆ. ಅದರಲ್ಲಿ ಪ್ರಮುಖವಾಗಿ ‘ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಯೋಜನೆ ಸೇರಿದಂತೆ ಆದಿವಾಸಿ ಬುಡಕಟ್ಟು ಗುಂಪುಗಳ ಸುಧಾರಣೆಗೆ ಸಂಬಂಧಿಸಿ, ಯೋಜನೆ ಪ್ರಾರಂಭಿಸಲಾಗುವುದೆಂದು ತಿಳಿಸಿದೆ.
ಸಂಸತ್ತಿನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಮಾಡಿದ್ದು, ದುರ್ಬಲ ಆದಿವಾಸಿ ಬುಡಕಟ್ಟು ಗುಂಪುಗಳ ಸಾಮಾಜಿಕ- ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಯೋಜನೆ ಪ್ರಾರಂಭವಾಗಲಿದೆ ಎಂದು ತಿಳಿಸಿದರು. ಈ ಯೋಜನೆ ಅನುಷ್ಠಾನಕ್ಕಾಗಿ 15000 ಕೋಟಿ ರೂಪಾಯಿ ಮೀಸಲಿರಿಸಲಾಗಿದೆ.
ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಕ್ರಿಯಾ ಯೋಜನೆಯಡಿ ಮುಂದಿನ ಮೂರು ವರ್ಷಗಳಲ್ಲಿ ವಿಶೇಷವಾಗಿ ದುರ್ಬಲ ಬುಡಕಟ್ಟು ಗುಂಪುಗಳ ಅಭಿವೃದ್ಧಿ ಮಿಷನ್ ಅನ್ನು ಅನುಷ್ಠಾನಗೊಳ್ಳಲಿದೆ. ಇದು ದುರ್ಬಲ ಬುಡಕಟ್ಟು ಗುಂಪುಗಳ ಸಾಮಾಜಿಕ-ಆರ್ಥಿಕ ಪರಿಸ್ಥಿತಿಗಳನ್ನು ಸುಧಾರಿಸಲು ಪ್ರಧಾನ ಮಂತ್ರಿ ವಿಶೇಷವಾಗಿ ಬುಡಕಟ್ಟು ಗುಂಪುಗಳ ಅಭಿವೃದ್ಧಿ ಕಾರ್ಯಾಚರಣೆಯ ಭಾಗವಾಗಿದೆ ಎಂದರು.
ಈ ಯೋಜನೆ ಮೂಲಕ ಸುರಕ್ಷಿತ ವಸತಿ, ಶುದ್ಧ ಕುಡಿಯುವ ನೀರು ಮತ್ತು ನೈರ್ಮಲ್ಯ, ಆರೋಗ್ಯ, ಶಿಕ್ಷಣ, ಪೋಷಣೆ, ರಸ್ತೆ ಮತ್ತು ಟೆಲಿಕಾಂ ಸಂಪರ್ಕಕ್ಕೆ ಸುಧಾರಿತ ಪ್ರವೇಶ ಮತ್ತು ಸುಸ್ಥಿರ ಜೀವನೋಪಾಯದ ಅವಕಾಶಗಳಂತಹ ಮೂಲಭೂತ ಸೌಲಭ್ಯಗಳೊಂದಿಗೆ ಪಿವಿಟಿಜಿ ಕುಟುಂಬಗಳು ಮತ್ತು ವಾಸಸ್ಥಾನಗಳನ್ನು ಗುರಿ ಮಾಡುತ್ತದೆ ಎಂದು ವಿವರಿಸಿದರು.
ಮುಂದಿನ ಮೂರು ವರ್ಷಗಳಲ್ಲಿ ಮಿಷನ್ ಅನ್ನು ಕಾರ್ಯಗತಗೊಳಿಸಲು 15,000 ಕೋಟಿ ರೂಪಾಯಿಗಳ ಅನುದಾನ ನೀಡಲಾಗುವುದು. ಮುಂದಿನ ಮೂರು ವರ್ಷಗಳಲ್ಲಿ, ಕೇಂದ್ರವು 3.5 ಲಕ್ಷ ಬುಡಕಟ್ಟು ವಿದ್ಯಾರ್ಥಿಗಳಿಗೆ ಸೇವೆ ಸಲ್ಲಿಸುವ 749 ಏಕಲವ್ಯ ಮಾದರಿ ವಸತಿ ಶಾಲೆಗಳಿಗೆ 38,800 ಶಿಕ್ಷಕರು ಮತ್ತು ಸಹಾಯಕ ಸಿಬ್ಬಂದಿಯನ್ನು ನೇಮಿಸಿಕೊಳ್ಳಲಿದೆ ಎಂದರು.
‘ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ’ವನ್ನು ಯೋಜನೆ ಬಗ್ಗೆಯೂ ಮಂಡನೆ ಮಾಡಲಾಯಿತು. ದೀನದಯಾಳ್ ಅಂತ್ಯೋದಯ ಯೋಜನೆ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಅಡಿಯಲ್ಲಿ ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ, ಗ್ರಾಮೀಣ ಮಹಿಳೆಯರನ್ನು ಸಜ್ಜುಗೊಳಿಸುವ ಮೂಲಕ 81 ಲಕ್ಷ ಸ್ವಸಹಾಯ ಗುಂಪುಗಳನ್ನು ರಚಿಸಲಾಗಿದೆ.
ಪಿಎಂ-ಕಿಸಾನ್ ಸಮ್ಮಾನ್ ನಿಧಿ ಅಡಿಯಲ್ಲಿ ಸಣ್ಣ ರೈತರಿಗೆ ₹ 2.25 ಲಕ್ಷ ಕೋಟಿಗೂ ಹೆಚ್ಚು ಆರ್ಥಿಕ ನೆರವು ನೀಡಲಾಗಿದೆ. ಈ ಯೋಜನೆಯಡಿ ಸುಮಾರು ಮೂರು ಕೋಟಿ ಮಹಿಳಾ ರೈತರಿಗೆ ₹ 54,000 ಕೋಟಿ ನೀಡಲಾಗಿದೆ ಎಂದು ಹಣಕಾಸು ಸಚಿವರು ಹೇಳಿದರು.
ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡಬಹುದಾದ ಗರಿಷ್ಠ ಮೊತ್ತವನ್ನು 30 ಲಕ್ಷ ರೂಪಾಯಿಗೆ ಹೆಚ್ಚಿಸುವುದಾಗಿ ಘೋಷಿಸಿದರು. ಅಂಚೆ ಮಾಸಿಕ ಆದಾಯ ಯೋಜನೆಯು ಮಿತಿಯನ್ನು ಹೆಚ್ಚಿಸಿದ್ದು ಒಂದೇ ಹೆಸರಿನಲ್ಲಿ ₹ 4.5 ಲಕ್ಷಕ್ಕೆ ಮೀಸಲಿದ್ದ ಮಿತಿಯನ್ನು ₹ 9 ಲಕ್ಷದವರೆಗೂ ಹೂಡಿಕೆ ಮಾಡಬಹುದು ಎಂದು ತಿಳಿಸಿದರು.
ಹಣಕಾಸು ಸಚಿವರು ಮಿಶ್ತಿ ಯೋಜನೆಯನ್ನು ಘೋಷಿಸಿದರು. ಇದು ಸರ್ಕಾರವು ಕರಾವಳಿಯುದ್ದಕ್ಕೂ ಮ್ಯಾಂಗ್ರೋವ್ ತೋಟಗಳನ್ನು ಬೆಳೆಸುವ ಒಂದು ಯೋಜನೆಯಾಗಿದೆ ಎಂದು ನಿರ್ಮಲ ಸೀತಾರಾಮನ್ ಹೇಳಿದರು. ಮಿಶ್ತಿ ಎಂದರೆ ಬೆಂಗಾಲಿಯಲ್ಲಿ ಸಿಹಿತಿಂಡಿಗಳು ಎಂದರ್ಥ. ಮಿಷ್ಟಿ ಯೋಜನೆಯು ಮ್ಯಾಂಗ್ರೋವ್‌ಗಳನ್ನು ಸಂರಕ್ಷಿಸುವ ಗುರಿಯನ್ನು ಹೊಂದಿದೆ.
‘ಅಮೃತ್ ಕಾಲ’ದ ಮೊದಲ ಬಜೆಟ್ ಅಭಿವೃದ್ಧಿ ಭಾರತಕ್ಕಾಗಿ ಸಂಕಲ್ಪವನ್ನು ಪೂರೈಸುವ ಅಡಿಪಾಯವನ್ನು ಒದಗಿಸುತ್ತದೆ ಮತ್ತು ಸಮಾಜದ ವಂಚಿತ ವರ್ಗಗಳಿಗೆ ಆದ್ಯತೆಯನ್ನು ನೀಡುತ್ತದೆ. ಇದು ಮಹತ್ವಾಕಾಂಕ್ಷೆಯ ಸಮಾಜ, ರೈತರು ಮತ್ತು ಮಧ್ಯಮ ವರ್ಗದ ಕನಸುಗಳನ್ನು ನನಸಾಗಿಸುತ್ತದೆ. ಮಧ್ಯಮ ವರ್ಗವು ಸಮೃದ್ಧ ಮತ್ತು ಅಭಿವೃದ್ಧಿ ಹೊಂದಿದ ಭಾರತದ ಕನಸುಗಳನ್ನು ನನಸಾಗಿಸಲು ದೊಡ್ಡ ಶಕ್ತಿಯಾಗಿದೆ ಮತ್ತು ನಮ್ಮ ಸರ್ಕಾರವು ಅದನ್ನು ಸಬಲೀಕರಣಗೊಳಿಸಲು ಹಲವು ನಿರ್ಧಾರಗಳನ್ನು ತೆಗೆದುಕೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಹೇಳಿದ್ದಾರೆ.