ಪ್ರತಿಭಟನೆ ತೀವ್ರಗೊಳಿಸಲು ರೈತರ ಸಂಘಟನೆಗಳ ನಿರ್ಧಾರ
ನವದೆಹಲಿ, ಜ 07: ಕೇಂದ್ರ ಸರ್ಕಾರ ತಂದಿರುವ ಮೂರು ರೈತ ವಿರೋಧಿ ಕೃಷಿ ಕಾನೂನುಗಳನ್ನು (Agricultural Laws) ವಾಪಸ್ ಪಡೆಯುವಂತೆ ಒತ್ತಾಯಿಸಿ 42ಕ್ಕೂ ಹೆಚ್ಚು ರೈತ ಸಂಘಟನೆಗಳು ದೆಹಲಿಯ ಗಡಿಗಳಲ್ಲಿ ನಡೆಸುತ್ತಿರುವ ಹೋರಾಟ 44 ನೇ ದಿನಕ್ಕೆ ಕಾಲಿಟ್ಟಿದೆ. ಈ ನಡುವೆ ರೈತ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಕೇಂದ್ರ ಸರ್ಕಾರದ ಮಧ್ಯೆ 7 ಸುತ್ತು ಮಾತುಕತೆಗಳು ನಡೆದು 7 ಸಭೆಗಳೂ ವಿಫಲವಾಗಿವೆ. ಈ ಹಿನ್ನೆಲೆಯಲ್ಲಿ ರೈತರು ಪ್ರತಿಭಟನೆಯನ್ನು ತೀವ್ರಗೊಳಿಸಲು ನಿರ್ಧರಿಸಿದ್ದು ಇಂದು ಪೂರ್ವ ಮತ್ತು ಪಶ್ಚಿಮ ಪೆರಿಫೆರಲ್ ಸೇರಿದಂತೆ ದೆಹಲಿಯ ನಾಲ್ಕು ಗಡಿಗಳಲ್ಲಿ ಟ್ರ್ಯಾಕ್ಟರ್ ಮೆರವಣಿಗೆಯನ್ನು ನಡೆಸಿದರು.
ವಿಶೇಷ ಎಂದರೆ ಮಹಿಳೆಯರು ಟ್ರ್ಯಾಕ್ಟರ್ ಚಾಲನೆ ಮಾಡಿದ್ದು ಮೆರವಣಿಗೆಯ ಮೆರಗನ್ನು ಹೆಚ್ಚಿಸಿದರು. ಈ ಮೂಲಕ ರೈತ ಹೋರಾಟಕ್ಕೆ ಮಹಿಳೆಯರು ಬಲವನ್ನು ತುಂಬಿದ್ದಾ ರೈತರ ಟ್ರ್ಯಾಕ್ಟರ ಮೆರವಣಿಗೆಗೆ ಅಖಿಲ ಭಾರತ ಕಿಸಾನ್ ಸಭಾದ (AIKS) ಪ್ರಧಾನ ಕಾರ್ಯದರ್ಶಿ ಹನನ್ ಮುಲ್ಲಾರವರು ತ್ರಿವರ್ಣ ಧ್ವಜ ತೋರಿಸುವ ಮೂಲಕ ಉಧ್ಘಾಟನೆಯನ್ನು ಮಾಡಿದರು. ಇಂದಿನ ರ‍್ಯಾಲಿಯು ಕೇವಲ ತಾಲೀಮು ಮಾತ್ರ. ಜನವರಿ 26ರಂದು ನಿಗದಿಯಂತೆ ದೊಡ್ಡ ಪ್ರಮಾಣದಲ್ಲಿ ಟ್ರ್ಯಾಕ್ಟರ್ ರ‍್ಯಾಲಿ ನಡೆಯಲಿದೆ. ಹರಿಯಾಣ, ಪಂಜಾಬ್, ಮಹಾರಾಷ್ಟ್ರ, ರಾಜಸ್ಥಾನ, ಉತ್ತರ ಪ್ರದೇಶದ ವಿವಿಧೆಡೆಗಳಿಂದ ಕೃಷಿಕರು ರಾಷ್ಟ್ರ ರಾಜಧಾನಿಗೆ ಲಗ್ಗೆ ಇಡಲಿದ್ದಾರೆ ಎಂದು ಹನನ್ ಮುಲ್ಲಾ ತಿಳಿಸಿದರು.
ಭಾರತಿ ಕಿಸಾನ್ ಯುನಿಯನ್ (ಬಿಕೆಯು) ನಾಯಕ ರಾಕೇಶ್ ಟಿಕಾಯತ್ ನೇತೃತ್ವದ ರ‍್ಯಾಲಿಯು ಪಾಲ್ವಾಲ್‌ನತ್ತ ಸಾಗಿತು. ಮುಂದಿನ ದಿನಗಳಲ್ಲಿ ನಾವು ಪ್ರತಿಭಟನೆಯನ್ನು ಇನ್ನಷ್ಟು ಚುರುಕುಗೊಳಿಸಲಿದ್ದೇವೆ. ಇಂದಿನ ರ‍್ಯಾಲಿಯಲ್ಲಿ ಹರಿಯಾಣದಿಂದಲೇ ಸುಮಾರು 2,500 ಟ್ರ್ಯಾಕ್ಟರ್‌ಗಳು ಭಾಗಿಯಾಗಿದ್ದವು ಎಂದು ಅವರು ತಿಳಿಸಿದರು. ಕೃಷಿ ಕಾಯ್ದೆಗಳಿಗೆ ಸಂಬಂಧಿಸಿ ಸರ್ಕಾರ ನಮ್ಮ ಬೇಡಿಕೆಯನ್ನು ಒಪ್ಪದೇ ಇದ್ದರೆ ಬರುವ ದಿನಗಳಲ್ಲಿ ಪ್ರತಿಭಟನೆಯು ಇನ್ನಷ್ಟು ತೀವ್ರಗೊಳ್ಳಲಿದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾದ ಹಿರಿಯ ಸದಸ್ಯ ಅಭಿಮನ್ಯು ಕೊಹರ್ ತಿಳಿಸಿದರು.
ಕೊರೆಯುವ ಚಳಿಯನ್ನೂ ಲೆಕ್ಕಿಸದೇ ಸಾವಿರಾರು ಸಂಖ್ಯೆಯಲ್ಲಿ ರೈತರು ಪಂಜಾಬ್, ಹರಿಯಾಣ ಮತ್ತು ದೇಶದ ವಿವಿಧೆಡೆಯಿಂದ ಆಗಮಿಸಿರುವ ರೈತರು ದೆಹಲಿಯಲ್ಲಿ 44 ದಿನಗಳಿಂದ ಬೀಡುಬಿಟ್ಟಿದ್ದು, ಕೃಷಿಕಾಯ್ದೆಗಳ ವಾಪಸಾತಿಗೆ ಆಗ್ರಹಿಸಿದ್ದಾರೆ. ಕಾಯ್ದೆ ವಾಪಸಾತಿ ಜೊತೆಗೆ ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಮಾನ್ಯತೆ ನೀಡಬೇಕು ಎಂಬುದು ರೈತರ ಬೇಡಿಕೆಯಾಗಿದೆ.