ಕೇಂದ್ರ ಸರ್ಕಾರ ಕೈಗಾರಿಕೆಗಳ ಖಾಸಗೀಕರಣ ಕೈಬಿಡಬೇಕು: ಡಾ. ಎಲ್‌. ಹನುಮಂತಯ್ಯ

ವರದಿ: ಈಶ್ವರಪ್ಪ ಎಲ್‌ ಎನ್‌

 

ಗುಡಿಬಂಡೆ: ಕೇಂದ್ರದ ಬಿಜೆಪಿ ಸರ್ಕಾರವು ದೇಶದ ಸಂಪತ್ತಾದ ಕೈಗಾರಿಕೆಗಳ ಖಾಸಗೀಕರಣಕ್ಕೆ ಮುಂದಾಗಿದ್ದು ಇದರಿಂದ ಬಡವ ಕಾರ್ಮಿಕರ, ಶೋಷಿತ ವರ್ಗದವರ ಬದುಕು ಅತಂತ್ರವಾಗಲಿದೆ ಎಂದು ರಾಜ್ಯಸಭಾ ಸದಸ್ಯ ಡಾ. ಎಲ್‌. ಹನುಮಂತಯ್ಯ ಕಳವಳ ವ್ಯಕ್ತಪಡಿಸಿದರು.

ಪಟ್ಟಣದಲ್ಲಿ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಹಮ್ಮಿಕೊಂಡಿದ್ದ ಡಾ.ಬಿ.ಆರ್. ಅಂಬೇಡ್ಕರ್ ರವರ ಕಂಚಿನ ಪುತ್ಥಳಿ ಅನಾವರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡ ಅವರು, ಈ ದೇಶದ ಸಂವಿಧಾನವನ್ನು ಪ್ರತಿಯೊಬ್ಬರೂ ಗೌರವಿಸಬೇಕು. ದೇಶವನ್ನು ಕಟ್ಟಿದ ಕೆಲವೇ ಕೆಲವರಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ರವರು ಒಬ್ಬರು. ಭಾರತ ದೇಶವು ಸರ್ವ ಧರ್ಮಗಳ ರಾಷ್ಟ್ರವಾಗಿದೆ, ಅದರೆ ಮಠಾಧೀಶರು ಮತ ಕಲಹಗಳನ್ನು ಹುಟ್ಟುಹಾಕಲು ಹೊರಟು ಹಿಂದೂ ಮುಸ್ಲಿಂ ಕ್ರೈಸ್ತರ ನಡುವೆ ಒಡಕು ಮೂಡಿಸುವಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ. ನಾವು ದಲಿತ ಶೋಷಿತ ವರ್ಗದವರಾದ ನಾವುಗಳು ಇವರು ಹೇಳಿಕೆಗಳನ್ನು ವಿರೋಧಿಸಿ ಅವರಿಗೆ ತಕ್ಕಪಾಠ ಕಲಿಸಬೇಕು. ಮಹಾನ್ ನಾಯಕರುಗಳು ಪುತ್ಥಳಿಗಳು, ಜನ್ಮ ದಿನಾಚರಣೆಗಳು ಕೇವಲ ವೇದಿಕೆಗೆ ಸೀಮಿತವಾಗಿದೆ ಅವರುಗಳ ಆದರ್ಶಗಳನ್ನು ಮೈಗೂಡಿಸಿಕೊಂಡಾಗ ಮಾತ್ರ ಈ ಕಾರ್ಯಕ್ರಮಕ್ಕೆ ಅರ್ಥಸಿಗುತ್ತದೆ ಎಂದರು.

ಆದಿಮ ಸಂಸ್ಥೆ ಸಂಸ್ಥಾಪಕ ದಲಿತ ಕವಿ ರಂಗಭೂಮಿ ಕಲಾವಿದರು, ನಾಟಕಕಾರರು ಕೋಟಿಗಾನಹಳ್ಳಿ ರಾಮಯ್ಯ ಮಾತನಾಡಿ, ಭಾರತ ಎರಡು ಭಾಗಗಳಾಗಿವೆ. ಒಂದು ಪ್ರಬುದ್ದ ಭಾರತ, ಮತ್ತೊಂದು ಪೇಶ್ವ ಭಾರತ ನಾವೆಲ್ಲ ಪ್ರಬುದ್ಧ ಭಾರತದ ಕಡೆ ಹೋಗಬೇಕು. ಡಾ. ಬಿ.ಆರ್. ಅಂಬೇಡ್ಕರ್ ರವರನ್ನು ಕಾಣಬೇಕು ಅಂದರೆ ಪ್ಲೆಕ್ಸ್ ಗಳಲ್ಲಿ ಪ್ರಚಾರದಲ್ಲಿ ಅಲ್ಲ. ಅವರನ್ನು ಕಾಣಬೇಕಾದರು ಅದು ಸಂವಿಧಾನದ ಪುಸ್ತಕಗಳನ್ನು ಓದುವ ಮೂಲಕ ಕಾಣಬೇಕು ಎಂದರು.

ಮೈಸೂರಿನ ಉರಿಲಿಂಗ ಪೆದ್ದಿಮಠದ ಜ್ಞಾನಪ್ರಕಾಶ್ ಸ್ವಾಮೀಜಿ ಮಾತನಾಡಿ, ಶೇ.3ರಷ್ಟು ಇರುವ ಜನರು ಸಂವಿಧಾನದ ಆಶಯಗಳಿಗೆ ಅಪಚಾರ ಎಸಗಿ ಶಾಸನ ರೂಪಿಸುವ ಜಾಗದಲ್ಲಿದ್ದು, ಪ್ರಬುದ್ಧವಾಗಿರುವ ಭಾರತವನ್ನು ಮತ್ತೆ ಮನುವಾದಿ ಪೇಶ್ವೆಗಳ ಭಾರತವನ್ನಾಗಿಸುವ ಹುನ್ನಾರಕ್ಕೆ ಮುಂದಾಗಿದ್ದಾರೆ. ಇಂದಿನ ಪೇಶ್ವೆಗಳ ಭಾರತದಲ್ಲಿ ಮನುಷ್ಯರು ಬದುಕಿಲ್ಲ. ಜಾತಿಗಳು ಜೀವಂತವಾಗಿವೆ. ಹೋರಾಟಗಾರರನ್ನು ರಾಷ್ಟ್ರದ್ರೋಹಿಗಳೆಂದು ಬಿಂಬಿಸಲಾಗುತ್ತಿದೆ. ಧರ್ಮದ ಹೆಸರಿನಲ್ಲಿ ದೇಶವನ್ನು ಒಡೆದು ಆಳುವ ನೀತಿ ಅನುಸರಿಸಲಾಗುತ್ತಿದೆ. ದೇಶದಲ್ಲಿ ಆಯುಧಗಳು ಮಾತನಾಡಬಾರದು. ಆದರ್ಶಗಳು ಮಾತನಾಡಬೇಕು ಎಂದರು. ಅಂಬೇಡ್ಕರ್ ಜಯಂತಿ ಎಂದರೆ ಉಪಚಾರದ, ಪುಷ್ಪಗುಚ್ಚದ ಜಯಂತಿ ಅಲ್ಲ, ಸಾಮಾಜಿಕ ನ್ಯಾಯದ ಜಯಂತಿಯಾಗಬೇಕು.

ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಮಾತನಾಡಿ, ಅಂಬೇಡ್ಕರ್ ರಚಿಸಿರುವ ಸಂವಿಧಾನವನ್ನು ಇಡೀ ವಿಶ್ವವೇ ಗೌರವಸುತ್ತಿದೆ. ಅವರು ಒಂದು ಜಾತಿ ಸಮುದಾಯಕ್ಕೆ ಸೀಮಿತವಾಗಿ ಸಂವಿಧಾನ ರಚನೆ ಮಾಡಿಲ್ಲ ಹೊರೆತು ಎಲ್ಲಾ ಜಾತಿ ಧರ್ಮದವರಿಗೆ ಅನುಕೂಲವಾಗುವ ಸಂವಿಧಾನವನ್ನು ರಚನೆ ಮಾಡಿದ್ದಾರೆ. ಪ್ರತಿಯೊಬ್ಬರು ಮಕ್ಕಳಿಗೆ ಶಿಕ್ಷಣವನ್ನು ನೀಡಬೇಕು. ಅಂಬೇಡ್ಕರ್‌ ರವರು ಶಿಕ್ಷಣದ ಮೂಲಕವೇ ಸಮಾಜದಲ್ಲಿ ಕ್ರಾಂತಿಕಾರಿ ಬದಲಾವಣೆಯನ್ನು ತಂದರು. ಶಿಕ್ಷಣದಿಂದ ಮಾತ್ರ ಬದಲಾವಣೆ ಸಾಧ್ಯ ಎಂದು ಹೇಳಿದ್ದಾರೆ. ಅವರ ಆಶಯಗಳನ್ನು ಈಡೇರಿಸಬೇಕು ಎಂದು ತಿಳಿಸಿದರು.

ಇದೇ ವೇಳೆ ವಿದ್ಯಾರ್ಥಿಗಳನ್ನು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರನ್ನು ಸನ್ಮಾನಿಸಲಾಯಿತು.

ಪಟ್ಟಣ ಪಂಚಾಯತಿ ಅಧ್ಯಕ್ಷೆ ಬಷೀರಾ ರಿಜ್ವಾನ್, ಉಪಾಧ್ಯಕ್ಷ ಅನಿಲ್ ಕುಮಾರ್, ಮುಖ್ಯಾಧಿಕಾರಿ ರಾಜಶೇಖರ್,  ಗ್ರೇಡ್ 2 ತಹಶೀಲ್ದಾರ್ ಮಹೇಶ್ ಪತ್ರಿ, ತಾ.ಪಂ ಇಒ ರವೀಂದ್ರ, ಬಿಇಓ ಸಿದ್ದಪ್ಪ, ಸರ್ಕಲ್ ಇನ್ಸ್ ಪೆಕ್ಟರ್ ಲಿಂಗರಾಜು, ಸಮಾಜ ಕಲ್ಯಾಣ ಇಲಾಖೆಯ ಕೆ.ರವಿ,   ಕಛೇರಿ ಮೇಲ್ವಿಚಾರಕ ದಾಸಪ್ಪ , ನೌಕರರ ಸಂಘದ ಅಧ್ಯಕ್ಷ ಕೆ.ವಿ. ನಾರಾಯಣ ಸ್ವಾಮಿ, ಕ.ಸಾ.ಪ ಅಧ್ಯಕ್ಷ ಸುಬ್ಬರಾಯಪ್ಪ, ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಕೃಷ್ಣಪ್ಪ ತಾಲೂಕು ಮಟ್ಟದ ಅಧಿಕಾರಿಗಳು, ತಾಲೂಕಿನ ದಲಿತ ಸಂಘಟನೆಗಳ ಒಕ್ಕೂಟ ಸಮನ್ವಯ ಸಮಿತಿಯ ಕಾರ್ಯಕರ್ತರು, ವಿವಿಧ ಸಂಘಟನೆ ಗಳ ಮುಖಂಡರು, ವಿವಿಧ ಗ್ರಾ.ಪಂ ನ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಸೇರಿದಂತೆ ದಲಿತ ಸಂಘಟನೆಗಳ ಮುಖಂಡರು, ವಾಲ್ಮೀಕಿ ಸಮುದಾಯದ ಮುಖಂಡರು, ವಿವಿಧ ಪಕ್ಷಗಳ ಮುಖಂಡರುಗಳು ಭಾಗವಹಿಸಿದ್ದರು.

 

Donate Janashakthi Media

Leave a Reply

Your email address will not be published. Required fields are marked *