ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಮಂಡಿಸಿದ 2023-24ನೇ ಆರ್ಥಿಕ ವರ್ಷದ ಆಯವ್ಯಯದಲ್ಲಿ 157 ಹೊಸ ನರ್ಸಿಂಗ್ ಕಾಲೇಜುಗಳನ್ನು ಸ್ಥಾಪಿಸಲಾಗುವುದೆಂದು ಘೋಷಿಸಿದ್ದಾರೆ.
ಈ ಬಾರಿಯ ಕೇಂದ್ರ ಬಜೆಟ್‍ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿ ವಿಚಾರವಾಗಿ ಪ್ರಸ್ತಾನಿಸಿದ ಅವರು, ಕೊರೊನಾ ಸಾಂಕ್ರಾಮಿಕತೆ ನಂತರದಲ್ಲಿ ಶಿಕ್ಷಣ ಕ್ಷೇತ್ರ ಚೇತರಿಸಿಕೊಳ್ಳಲು ಬೇಕಾದ ಕೆಲವು ಅಗತ್ಯ ಅಂಶಗಳನ್ನು ಬಜೆಟ್‍ನಲ್ಲಿ ನೀಡಲಾಗಿದೆ. ಹೊಸದಾಗಿ 157 ನರ್ಸಿಂಗ್ ಕಾಲೇಜುಗಳನ್ನು ಸ್ಥಾಪಿಸಲಾಗುವುದು ಎಂದರು.
ಮಕ್ಕಳು ಮತ್ತು ಹದಿಹರೆಯದವರಿಗಾಗಿ ರಾಷ್ಟ್ರೀಯ ಡಿಜಿಟಲ್ ಲೈಬ್ರರಿ ಸ್ಥಾಪನೆ. ಗ್ರಂಥಾಲಯಗಳಲ್ಲಿ ಭೌಗೋಳಿಕತೆ, ಭಾಷೆಗಳ ಪ್ರಕಾರಗಳನ್ನು ಆಧರಿಸಿ ಗುಣಮಟ್ಟದ ಪುಸ್ತಕಗಳು ಲಭ್ಯವಾಗುವಂತೆ ಕ್ರಮ. ರಾಷ್ಟ್ರೀಯ ಡಿಜಿಟಲ್ ಲೈಬ್ರರಿ ಸಂಪನ್ಮೂಲಗಳನ್ನು ಪ್ರವೇಶಿಸಲು ಪಂಚಾಯತ್ ಮತ್ತು ಎಲ್ಲಾ ಹಂತಗಳಲ್ಲಿ ಭೌತಿಕ ಗ್ರಂಥಾಲಯಗಳನ್ನು ಸ್ಥಾಪಿಸುವ ಮೂಲಕ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ರಾಜ್ಯಗಳು ಆದ್ಯತೆ ನೀಡಬೇಕೆಂದು ತಿಳಿಸಿದರು.
ಓದುವ ಸಂಸ್ಕೃತಿ ಹೆಚ್ಚುಸುವ ಹಿನ್ನೆಲೆಯಲ್ಲಿ ಮತ್ತು ಸಾಂಕ್ರಾಮಿಕ ಸಮಯದ ಕಲಿಕೆಯ ನಷ್ಟವನ್ನು ಸರಿದೂಗಿಸಲು, ರಾಷ್ಟ್ರೀಯ ಪುಸ್ತಕ ಟ್ರಸ್ಟ್, ಮಕ್ಕಳ ಪುಸ್ತಕ ಟ್ರಸ್ಟ್ ಮತ್ತು ಇತರ ಮೂಲಗಳಿಗೆ ಈ ಭೌತಿಕ ಗ್ರಂಥಾಲಯಗಳಿಗೆ ಪ್ರಾದೇಶಿಕ ಭಾಷೆಗಳಲ್ಲಿ ಮತ್ತು ಇಂಗ್ಲಿಷ್‌ನಲ್ಲಿ ಪುಸ್ತಕಗಳು ಮತ್ತು ಇತರ ವಸ್ತುಗಳನ್ನು ಒದಗಿಸಲು ಪ್ರೋತ್ಸಾಹಿಸಲಾಗುತ್ತದೆ ಎಂದೂ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.