ಕೇಂದ್ರ ಬಜೆಟ್ 2021-22 : ಕಾಣೆಯಾದ ಲಿಂಗತ್ವ ಸ್ಪಂದನ

2021-22ರ ಬಜೆಟ್ ಪ್ರಸ್ತಾವಗಳು  ಆರು ಸ್ತಂಭಗಳ ಮೇಲೆ ನಿಂತಿವೆ ಎಂದು ಬಣ್ಣಿಸಲಾಗಿದೆ.  ‘ಆಶೋತ್ತರಗಳನ್ನು ಹೊಂದಿದ ಭಾರತಕ್ಕಾಗಿ ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಿ’ ಹಾಗೂ ‘ಮಾನವ ಬಂಡವಾಳದ ಪುನಶ್ಚೇತನ’ ಎಂಬ ಎರಡು ಸ್ತಂಭಗಳೂ ಇದರಲ್ಲಿ ಸೇರಿದ್ದು  ಮಹಿಳಾ ವಿಚಾರಗಳು ಇವುಗಳಲ್ಲಿ ಪ್ರಸ್ತಾಪವೇ ಆಗದಿರುವುದು ಅಚ್ಚರಿಯ ಸಂಗತಿ.

                                                                                                                                     ಸಿ. ಜಿ. ಮಂಜುಳಾ

2005-06ರಲ್ಲಿ ಭಾರತದಲ್ಲಿ ಜೆಂಡರ್ ಸ್ಪಂದನಶೀಲ ಬಜೆಟಿಂಗ್ ( ಜಿಆರ್ ಬಿ ) ಅಳವಡಿಸಿಕೊಳ್ಳಲಾಯಿತು. ಈ ಉಪಕ್ರಮಕ್ಕೆ ನಾಂದಿ ಹಾಡಿದ ಆಯೋಗದ ಭಾಗವಾಗಿದ್ದವರು ನಿರ್ಮಲಾ ಸೀತಾರಾಮನ್.  ಇಂತಹ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಹಣಕಾಸು ಸಚಿವೆ ಹುದ್ದೆಗೇರಿ ಕೇಂದ್ರ ಬಜೆಟ್ ಮಂಡಿಸುತ್ತಿರುವುದು ಈ ಸಲ ಮೂರನೇ ಬಾರಿ. ಕೋವಿಡ್ 19 ಪಿಡುಗಿನ ದುರ್ಭರ ದಿನಗಳಲ್ಲಿನ ಈ ಬಜೆಟ್,  ‘ನ ಭೂತೋ’ – ಹಿಂದೆಂದೂ ಕಾಣದಂತಹ  ಬಜೆಟ್ ಎಂದೆಲ್ಲಾ ಬಿಂಬಿಸಲಾಯಿತು. ಆದರೆ, ಮಹಿಳೆಯ ಬದುಕಿನ ಮೇಲೆ ಕೋವಿಡ್ -19 ಬೀರಿದ ಘೋರ ಪರಿಣಾಮಗಳ ಮಧ್ಯೆ, ಕೇಂದ್ರ ಬಜೆಟ್  ಮಹಿಳೆಗೆ ನೀಡಿದ್ದಾದರೂ  ಏನು? ಎಂದು ಅವಲೋಕಿಸಿದಲ್ಲಿ, ಇರುವುದನ್ನೂ ಕಿತ್ತುಕೊಂಡಿರುವಂತಹ ವೈಪರೀತ್ಯ ಗೋಚರ.

ಮಹಿಳೆಯರ ಹಕ್ಕುಗಳಿಗೆ ಮೂಲವಾಗಿರುವ ಅನೇಕ ಯೋಜನೆಗಳಿಗೆ  ಕಡಿತವಾಗಿರುವುದು ಈ ಬಾರಿಯ ಬಜೆಟ್ ನಲ್ಲಿ ಎದ್ದು ಕಾಣಿಸುವ ಅಂಶ. ಮಹಿಳಾ ಕ್ಷೇಮಾಭಿವೃದ್ಧಿಗಾಗಿ ಸದ್ಯದ ಹಂಚಿಕೆ ರೂ 1,53,326 ಕೋಟಿ. ಇದು ಈ ಕ್ಷೇತ್ರಕ್ಕೆ  ಕಳೆದ ಸಾಲಿನ ಬಜೆಟ್ ನ ಪರಿಷ್ಕೃತ ಅಂದಾಜಿನಲ್ಲಿದ್ದ ಪ್ರಮಾಣಕ್ಕಿಂತ 26% ಕಡಿಮೆ. ಎಂದರೆ,  2020-21ರ ಸಾಲಿನಲ್ಲಿ ಈ ಬಾಬ್ತಿಗೆ ಬಜೆಟ್ ಹಂಚಿಕೆ ರೂ1,43,461.72 ಕೋಟಿ ಇದ್ದದ್ದು ನಂತರ ಪರಿಷ್ಕೃತ  ಅಂದಾಜಿನಲ್ಲಿ  ರೂ2,07,261 ಕೋಟಿಯಷ್ಟಿತ್ತು ಎಂಬುದನ್ನು ಗಮನಿಸಬೇಕು. ಹೀಗಾಗಿ, 2021-22ರ  ಕೇಂದ್ರ ಬಜೆಟ್ ನಲ್ಲಿ ಯೋಜನೆಗಳು ಹಾಗೂ ಉಪ ಯೋಜನೆಗಳಿಗೆ ಹಣ ಹಂಚಿಕೆಯಲ್ಲಿ  ಈ ಪ್ರಮಾಣದ ಕುಸಿತ ಮಹಿಳೆಯರ ಬದುಕಿನ ಮೇಲೆ ತೀವ್ರ ಪರಿಣಾಮಗಳನ್ನುಂಟು ಮಾಡುವಂತಹದ್ದು.

ಸದ್ಯದ ಜೆಂಡರ್ ಬಜೆಟ್ (ಮಹಿಳಾ ನಿರ್ದಿಷ್ಟ ಯೋಜನೆಗಳಿಗೆ ಹಂಚಿಕೆಯಾದ ಹಣ) ಒಟ್ಟು ಕೇಂದ್ರ ಬಜೆಟ್ ನಲ್ಲಿ ಕೇವಲ 4.3%.  ಇದು, ಕಳೆದ ವರ್ಷದಲ್ಲಿದ್ದ  4.7%  ಹಾಗೂ ಜುಲೈ 2019ರಲ್ಲಿ ಮಂಡಿತವಾದ 2019-20ರ ಕೇಂದ್ರ ಬಜೆಟ್ ನಲ್ಲಿದ್ದ 4.9%ಗಿಂತ ಕಡಿಮೆ. ಜೊತೆಗೆ, ಇದು ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) 1% ಗಿಂತಲೂ ಕಡಿಮೆ.

ಜೆಂಡರ್ ಬಜೆಟ್ ನಲ್ಲಿ ಎರಡು ಭಾಗಗಳಿವೆ. ಮೊದಲ ಭಾಗ, ಪಾರ್ಟ್ ಎ – ಮಹಿಳೆಯರಿಗೆ 100% ಹಂಚಿಕೆ ಇರುವ ಯೋಜನೆಗಳಿಗೆ ಸಂಬಂಧಿಸಿದೆ.  ಎರಡನೆಯ ಭಾಗ ಪಾರ್ಟ್ ಬಿ – ಕನಿಷ್ಠ ಮೂರನೇ ಒಂದರಷ್ಟು ಹಣ ಮಹಿಳೆಯರಿಗೆ ಹಂಚಿಕೆಯಾಗಿರುವ ಯೋಜನೆಗಳನ್ನು ಒಳಗೊಂಡಿರುತ್ತದೆ.

ಮೊದಲ ‘ಎ’ ಭಾಗದಲ್ಲಿ ಈ ಬಾರಿ ಕಳವಳಕಾರಿ ವ್ಯತ್ಯಾಸಗಳು ಕಂಡು ಬಂದಿವೆ.  ಕೇಂದ್ರ ಪ್ರಾಯೋಜಿತ ಬಾಲಕಿಯರ ಸೆಕೆಂಡರಿ ಎಜುಕೇಷನ್ ಪ್ರೋತ್ಸಾಹಕಗಳ ರಾಷ್ಟ್ರೀಯ ಯೋಜನೆಗೆ (ನ್ಯಾಷನಲ್ ಸ್ಕೀಮ್ ಆಫ್ ಇನ್ ಸೆಂಟಿವ್ಸ್ ಟು ಗರ್ಲ್ಸ್ ಫಾರ್ ಸೆಕೆಂಡರಿ ಎಜುಕೇಷನ್) ಬಜೆಟ್ ಹಂಚಿಕೆಯನ್ನು ಪ್ರಸಕ್ತ ಸಾಲಿನಲ್ಲಿ ಒಂದು ಕೋಟಿ ರೂಪಾಯಿಗೆ ಇಳಿಸಲಾಗಿದೆ. ಕಳೆದ ಸಾಲಿನಲ್ಲಿ ಇದು 110 ಕೋಟಿ ಇತ್ತು. ಸೆಕೆಂಡರಿ ಹಂತದಲ್ಲಿ 14ರಿಂದ 18ರ ವಯೋಮಾನದ ಹೆಣ್ಣುಮಕ್ಕಳ ಶಾಲಾ ದಾಖಲಾತಿಗೆ ಉತ್ತೇಜನ ನೀಡುವ ಯೋಜನೆ ಇದು.  ಕೋವಿಡ್ 19ರ ಸಂಕಷ್ಟದ ದಿನಗಳಲ್ಲಿ ಬಾಲ್ಯವಿವಾಹಗಳು ಹೆಚ್ಚುತ್ತಿರುವ ಬಗ್ಗೆ ವರದಿಗಳು ಬರುತ್ತಲೇ ಇರುವ ಈ ಕಾಲದಲ್ಲಿ ಈ ಇಳಿಕೆ ನಿಜಕ್ಕೂ ನಿರುತ್ಸಾಹಕರ.

ಹಾಗೆಯೇ ಮಹಿಳೆಯ ಘನತೆ ಹಾಗೂ ಸುರಕ್ಷತೆಗೆ ಸಂಬಂಧಿಸಿದ ಉಪಕ್ರಮಗಳಿಗೆ ನೆರವು ನೀಡುವ ‘ನಿರ್ಭಯಾ ನಿಧಿ’ಗೆ ಹಣಹಂಚಿಕೆಯನ್ನು ರೂ10 ಕೋಟಿಗೆ ಇಳಿಸಲಾಗಿದೆ. 2020-21ರ ಸಾಲಿನಲ್ಲಿ ಇದು ರೂ855 ಕೋಟಿ ಇತ್ತು. ಮಹಿಳೆಯರ ರಕ್ಷಣೆ ಹಾಗೂ ಸಬಲೀಕರಣ ರಾಷ್ಟ್ರೀಯ ಮಿಷನ್ ನ ಹಂಚಿಕೆಯನ್ನು ಪ್ರಸಕ್ತ ಸಾಲಿನಲ್ಲಿ ರೂ 48 ಕೋಟಿಗೆ ಇಳಿಸಲಾಗಿದೆ. ಕಳೆದ ಸಾಲಿನಲ್ಲಿ ಇದು ರೂ 1,163 ಕೋಟಿ ಇತ್ತು.

ಇತ್ತೀಚಿನ ಆಕ್ಸ್ ಫಾಮ್ ಇಂಡಿಯಾ ವರದಿಯ ಪ್ರಕಾರ, ಕೋವಿಡ್ 19 ಲಾಕ್ ಡೌನ್ ನಿಂದಾಗಿ ಲಿಂಗತ್ವ ಅಸಮಾನತೆ ವಿವಿಧ ಆಯಾಮಗಳಲ್ಲಿ ಹೆಚ್ಚಾಗಿದೆ. ಮನೆಗಳಲ್ಲೇ ದೌರ್ಜನ್ಯದ ವಾತಾವರಣಗಳಲ್ಲಿ ಸಿಲುಕಿಕೊಂಡ ಮಹಿಳೆಯರು ಎದುರಿಸಿದ ಹಿಂಸೆ ಪ್ರಕರಣಗಳು ಕಳೆದ 10 ವರ್ಷಗಳಲ್ಲೇ ಹೆಚ್ಚಿನ ಮಟ್ಟದ್ದು. ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಗೆ ಕಾನೂನಿನ ರಕ್ಷಣೆ ಇದೆ ಎಂಬುದೇನೋ ನಿಜ. ಆದರೆ ಕಾಯಿದೆಯ ಅನ್ವಯ ಇರುವ ಅವಕಾಶಗಳೂ ಲಾಕ್ ಡೌನ್ ಸಂದರ್ಭದಲ್ಲಿ ಮಹಿಳೆಯರಿಗೆ ಅಲಭ್ಯವಾಗಿದ್ದವು. ಇಂತಹ ಬೆಳವಣಿಗೆಗಳ ನಡುವೆ ಈ ಕುರಿತಾದ ಲಿಂಗತ್ವ ಸಂವೇದನಾಶೀಲತೆ  ಬಜೆಟ್ ಪ್ರಸ್ತಾವಗಳಲ್ಲಿ ಪ್ರದರ್ಶಿತವಾಗದಿರುವುದು ವಿಷಾದನೀಯ.

2021-22ರ ಬಜೆಟ್ ಪ್ರಸ್ತಾವಗಳು  ಆರು ಸ್ತಂಭಗಳ ಮೇಲೆ ನಿಂತಿವೆ ಎಂದು ಬಣ್ಣಿಸಲಾಗಿದೆ.  ‘ಆಶೋತ್ತರಗಳನ್ನು ಹೊಂದಿದ ಭಾರತಕ್ಕಾಗಿ ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಿ’ ಹಾಗೂ ‘ಮಾನವ ಬಂಡವಾಳದ ಪುನಶ್ಚೇತನ’ ಎಂಬ ಎರಡು ಸ್ತಂಭಗಳೂ ಇದರಲ್ಲಿ ಸೇರಿದ್ದು  ಮಹಿಳಾ ವಿಚಾರಗಳು ಇವುಗಳಲ್ಲಿ ಪ್ರಸ್ತಾಪವೇ ಆಗದಿರುವುದು ಅಚ್ಚರಿಯ ಸಂಗತಿ.

ಕೋವಿಡ್ -19 ಪಿಡುಗಿನಿಂದಾಗಿ 2019ರ ಡಿಸೆಂಬರ್ ನಿಂದ 2020ರ ಡಿಸೆಂಬರ್ ವರೆಗೆ ಔದ್ಯೋಗಿಕ ರಂಗದ ಕುಸಿತದ ಪ್ರಮಾಣ ಮಹಿಳೆಗೆ 14% ಇದ್ದರೆ ಪುರುಷನಿಗೆ 1% ಇದೆ ಎಂಬುದನ್ನು ಸಮೀಕ್ಷೆಗಳು ಹೇಳುತ್ತಿವೆ. ಈ ಅಂತರಗಳು ಹಾಗೂ ಇವನ್ನು ಮುಚ್ಚುವ ಬಗೆಗಳ ಕುರಿತಾದ ಸೂಕ್ಷ್ಮತೆ ಬಜೆಟ್ ಪ್ರಸ್ತಾವಗಳಲ್ಲಿ ಇಲ್ಲ.

ಕೋವಿಡ್ 19 ವೈರಸ್ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದವರು ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು. ಈ ಸಮುದಾಯದ ಅಸಮಾನ ವೇತನಗಳ ಬಗ್ಗೆ ಬಜೆಟ್ ಮೌನ ತಾಳಿದೆ.

ಬಜೆಟ್ ಎನ್ನುವುದು ಹಣಕಾಸು ಹಂಚಿಕೆಗೆ ಸಂಬಂಧಿಸಿದ ಪ್ರಸ್ತಾವಗಳು ಎಂಬುದು ಸರಿ. ಆದರೆ, ವಿಸ್ತೃತ ಸರ್ಕಾರಿ ನೀತಿ ಹಾಗೂ ಸರ್ಕಾರದ ಆದ್ಯತೆಗಳನ್ನೂ ಬಿಂಬಿಸುತ್ತದೆ ಇದು ಎಂಬುದು ನಮ್ಮ ನೆನಪಿನಲ್ಲಿರಬೇಕು.

ನಾವು  2025ರೊಳಗೆ ಐದು ಟ್ರಿಲಿಯನ್ ಡಾಲರ್ ಆರ್ಥಿಕತೆಯತ್ತ ಹೆಜ್ಜೆ ಹಾಕುತ್ತಿದ್ದು ಹೊಸ ವಿಶ್ವ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸಲಿದ್ದೇವೆ ಎಂಬಂಥ ಮಾತುಗಳನ್ನಾಡುತ್ತಿರುವ ಸಂದರ್ಭದಲ್ಲಿಯೇ ಔದ್ಯೋಗಿಕ ರಂಗದಲ್ಲಿ   ಮಹಿಳೆಯರ ಪಾಲ್ಗೊಳ್ಳುವಿಕೆ (ಫೀಮೇಲ್ ಲೇಬರ್ ಫೋರ್ಸ್ ಪಾರ್ಟಿಸಿಪೇಷನ್ – ಎಫ್ ಎಲ್ ಎಫ್ ಪಿ) ಆತಂಕಕಾರಿ ಪ್ರಮಾಣದಲ್ಲಿ ಕಡಿಮೆಯಾಗುತ್ತಿರುವುದನ್ನು ನೋಡುತ್ತಿದ್ದೇವೆ. ವಿಶ್ವಬ್ಯಾಂಕ್ ವರದಿ ಪ್ರಕಾರ, ಔದ್ಯೋಗಿಕ ರಂಗದಲ್ಲಿ  ಮಹಿಳೆಯರ ಪಾಲ್ಗೊಳ್ಳುವಿಕೆ ಪ್ರಮಾಣ 1990ರಲ್ಲಿ ಶೇಕಡಾ 30.3ರಷ್ಟಿದ್ದು 2020ರಲ್ಲಿ ಶೇಕಡಾ 20.3ಕ್ಕೆ ಕುಸಿದಿದೆ. ಇಂತಹ ನಿರಾಶಾದಾಯಕ ವಾತಾವರಣದಲ್ಲಿ, ಲಿಂಗತ್ವ ಸಂವೇದಿ ಸ್ಪಂದನಗಳಿಂದ  ಬಜೆಟ್ ಮೂಲಕ  ತುಂಬಬಹುದಾಗಿದ್ದ ಚೈತನ್ಯ ಕಾಣೆಯಾಗಿದೆ.

ಪ್ರಧಾನಮಂತ್ರಿ ಆವಾಸ್ ಯೋಜನಾ ( ಪಿಎಂಎವೈ – ನಗರ ಮತ್ತು ಗ್ರಾಮೀಣ), ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಯೋಜನೆ (ಎಂಜಿಎನ್ ಆರ್ ಇ ಜಿಎಸ್) ,  ಸಮಗ್ರ ಶಿಕ್ಷಾ,  ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ – ಈ ಯೋಜನೆಗಳೇ ಜೆಂಡರ್  ಬಜೆಟ್ ನ ಬಹುಪಾಲನ್ನು ಸಾಮಾನ್ಯವಾಗಿ ಒಳಗೊಂಡಿರುತ್ತವೆ. ಜೊತೆಗೆ, ಸಮಗ್ರ ಶಿಶು ಅಭಿವೃದ್ಧಿ ಯೋಜನೆ, ಅಂಗನವಾಡಿ ಸೇವೆ, ಪೋಷಣ್ ಅಭಿಯಾನ, ಹದಿಹರೆಯದ ಬಾಲಕಿಯರ ಯೋಜನೆ ಹಾಗೂ ರಾಷ್ಟ್ರೀಯ ಕ್ರೆಷ್ ಸ್ಕೀಮ್ ನಂತಹ ಯೋಜನೆಗಳನ್ನೆಲ್ಲಾ ಒಳಗೊಂಡ ಹೊಸದೊಂದು ಉಪಕ್ರಮ ಈ ಬಾರಿ  ‘ಸಕ್ಷಮ ಅಂಗನವಾಡಿ ಮತ್ತು ಪೋಷಣ್ 2.0’  ಹೆಸರಲ್ಲಿ  ಸೇರ್ಪಡೆಯಾಗಿದೆ. 2018-19ರಿಂದ 2020-21ರವರೆಗಿನ ಜೆಂಡರ್ ಬಜೆಟ್ ಗಳಲ್ಲಿ  ಅರ್ಧದಷ್ಟನ್ನು ಈ ಯೋಜನೆಗಳೇ  ಆಕ್ರಮಿಸಿಕೊಂಡಿದ್ದವು. ಈಗ ಮತ್ತೆ 2021-22ರ ಸಾಲಿನ ಜೆಂಡರ್ ಬಜೆಟ್ ನಲ್ಲೂ ಈ  ಯೋಜನೆಗಳಿಗೆ ಹಣ ಹಂಚಿಕೆ, ಮೇಲುಗೈ ಪಡೆದಿದೆ.

ಪ್ರಧಾನ ಮಂತ್ರಿ ಆವಾಸ್ ಯೋಜನೆಯಲ್ಲಿ ( ಪಿಎಂಎವೈ –  ನಗರ)  2020-21ರಲ್ಲಿದ್ದ 32.4% ನಷ್ಟು ಮಹಿಳಾ ನಿರ್ದಿಷ್ಟ  ಭಾಗವನ್ನು  ಪ್ರಸಕ್ತ ಸಾಲಿನಲ್ಲಿ  90.7%ಗೆ ಏರಿಸಲಾಗಿದೆ. ಆಸ್ತಿ ಮಾಲೀಕತ್ವದ ಮೂಲಕ ಮಹಿಳಾ ಆರ್ಥಿಕ ಸಶಕ್ತೀಕರಣಕ್ಕೆ ನೆರವಾಗುವ ಕ್ರಮ ಇದು ಎನ್ನಬಹುದು. ಹಾಗೆಯೇ ಪಶ್ಚಿಮ ಬಂಗಾಳ ಹಾಗೂ ಅಸ್ಸಾಂ ರಾಜ್ಯಗಳ ಚಹಾ ಕಾರ್ಮಿಕರ ಕ್ಷೇಮಾಭಿವೃದ್ಧಿಗೆ  ವಿಶೇಷವಾಗಿ ಮಹಿಳೆಯರು ಹಾಗೂ ಮಕ್ಕಳಿಗೆ  ರೂ1000 ಕೋಟಿ ಹಣ ಹಂಚಿಕೆಯಾಗಿದೆ. ಈ ರಾಜ್ಯಗಳಲ್ಲಿ ಚುನಾವಣೆ ಸನಿಹದಲ್ಲಿರುವುದರಿಂದ ರಾಜಕೀಯ  ಉದ್ದೇಶಗಳನ್ನು ತಳ್ಳಿಹಾಕುವಂತಿಲ್ಲ. ಚಹಾ ತೋಟಗಳಲ್ಲಿ ಕೆಲಸ ಮಾಡುವವರಲ್ಲಿ 50%ಗಿಂತ ಹೆಚ್ಚಿನವರು ಮಹಿಳೆಯರು ಎಂಬುದಿಲ್ಲಿ ಮುಖ್ಯ.

ಮಹಿಳೆಯರ ಜೀವನೋಪಾಯಕ್ಕೆ ಭದ್ರತೆ ನೀಡಬಹುದಾದ ಎಂಜಿಎನ್ಆರ್ ಇ ಜಿಎಸ್  ಗೆ ಹಣ ಹಂಚಿಕೆಯು 2020-21ರ ಪರಿಷ್ಕೃತ ಅಂದಾಜಿಗೆ ಹೋಲಿಸಿದಲ್ಲಿ 34.5% ಇಳಿಕೆಯಾಗಿದೆ.

ಈ ಬಾರಿಯ ಬಜೆಟ್  ಇದೇ ಮೊದಲ ಬಾರಿಗೆ ಪೂರ್ಣ ಕಾಗದ ರಹಿತವಾಗಿತ್ತು. ಮೇಡ್ ಇನ್ ಇಂಡಿಯಾ ಟ್ಯಾಬ್ಲೆಟ್ ನಲ್ಲಿ ಅಳವಡಿಸಿದ ಪ್ರತಿಯನ್ನು ಓದುವ ಮೂಲಕ  ಸಂಸತ್ ನಲ್ಲಿ ಹಣಕಾಸು ಸಚಿವೆ  ಬಜೆಟ್ ಮಂಡಿಸಿದರು.

 

ಡಿಜಿಟಲ್ ಸಂಪರ್ಕ ಹಾಗೂ ಬಳಕೆಯ ಕೌಶಲಗಳಲ್ಲಿ ಹೆಣ್ಣುಮಕ್ಕಳು ಹಿಂದಿ ದ್ದಾರೆ ಎಂಬುದು ಕಹಿ ವಾಸ್ತವ. 2017 -18ರಲ್ಲಿ ನಡೆಸಲಾದ 75ನೇ ರಾಷ್ಟ್ರೀಯ ಸ್ಯಾಂಪಲ್ ಸರ್ವೆ ಪ್ರಕಾರ,  20% ಪುರುಷರಿಗೆ ಕಂಪ್ಯೂಟರ್ ಬಳಕೆ ಗೊತ್ತಿತ್ತು. ಮಹಿಳೆಯರಲ್ಲಿ ಈ ಪ್ರಮಾಣ 12.8%. 14.9% ಮಹಿಳೆಯರಿಗೆ ಅಂತರ್ಜಾಲ ಬಳಕೆ ಗೊತ್ತಿತ್ತು. ಇವರಿಗೆ ಹೋಲಿಸಿದಲ್ಲಿ ಅಂತರ್ಜಾಲ ಬಳಕೆ ಗೊತ್ತಿದ್ದ ಪುರುಷರ ಪ್ರಮಾಣ 25%. ಭಾರತದಲ್ಲಿ 71% ಪುರುಷರು ಮೊಬೈಲ್ ಫೋನ್ ಹೊಂದಿದ್ದರೆ ಮೊಬೈಲ್ ಫೋನ್ ಹೊಂದಿರುವ ಮಹಿಳೆಯರ ಪ್ರಮಾಣ 38%. ಹೀಗಾಗಿ, ಡಿಜಿಟಲ್ ಮೂಲ ಸೌಕರ್ಯ, ಸೈಬರ್ ಭದ್ರತಾ ವ್ಯವಸ್ಥೆ , ಅಂತರ್ಜಾಲ ಹಾಗೂ ಸಾಧನಗಳ ಲಭ್ಯತೆಗೆ ಸಂಬಂಧಿಸಿದಂತೆ ವಾಸ್ತವತೆಗಳನ್ನು ಅರ್ಥ ಮಾಡಿಕೊಳ್ಳಬೇಕು. ಇವುಗಳ ನಿರ್ವಹಣೆಯಾಗದಿದ್ದಲ್ಲಿ ಮಹಿಳೆಯರು ಮತ್ತಷ್ಟು ಹಿನ್ನಡೆ ಅನುಭವಿಸಲಿದ್ದಾರೆ.

ಕೊರೊನಾದಿಂದಾಗಿ ಮಹಿಳೆ ಬದುಕಿನ ಮೇಲಾದ ತೀವ್ರತರ ಪರಿಣಾಮಗಳನ್ನು ಪರಿಗಣಿಸಿ ಸರ್ಕಾರಗಳು ಕ್ರಮಗಳನ್ನು ಕೈಗೊಳ್ಳಲು ಜಾಗತಿಕ ನೆಲೆಯಲ್ಲಿ ಕೆಲವೊಂದು ಅಲ್ಪಾವಧಿ ಆದ್ಯತಾ ಕ್ಷೇತ್ರಗಳನ್ನು ವಿಶ್ವಸಂಸ್ಥೆ ಗುರುತಿಸಿದೆ.  ಸಾಮಾಜಿಕ ರಕ್ಷಣೆ, ಕೌಟುಂಬಿಕೆ ಹಿಂಸೆ ತಡೆ, ಕೌಶಲ ತರಬೇತಿ, ಸಾರ್ವಜನಿಕ ಸಾರಿಗೆ, ಡಿಜಿಟಲ್ ಸಾಕ್ಷರತೆ  ಹಾಗೂ ವೇತನರಹಿತ ಕೆಲಸಕ್ಕೆ ಬೆಂಬಲ ದಂತಹ ಕ್ಷೇತ್ರಗಳು ಇವುಗಳಲ್ಲಿ ಸೇರಿವೆ ಎಂಬುದನ್ನು ನಾವು ಗಮನಿಸಬೇಕು.

ಆದರೆ, ಸಂಬಲ್ ಯೋಜನೆ ಅಡಿ –  ಈ ಬಾರಿ ಅನೇಕ ಯೋಜನೆಗಳನ್ನೇ ಒಟ್ಟುಗೂಡಿಸಿಬಿಡಲಾಗಿದೆ.  ಒನ್ ಸ್ಟಾಪ್ ಸೆಂಟರ್, ಮಹಿಳಾ ಪೊಲೀಸ್ ವಾಲಂಟಿಯರ್,  ಮಹಿಳಾ ಸಹಾಯವಾಣಿ, ಸ್ವಾಧಾರ್  ಗೃಹ್, ಉಜ್ವಲಾ ,  ವಿಧವಾ ಗೃಹಗಳು,  ದುಡಿಯುವ ಮಹಿಳೆಯರ ಹಾಸ್ಟೆಲ್ ಯೋಜನೆಗಳು ‘ಸಂಬಲ್’ಗೆ  ಸೇರ್ಪಡೆಯಾಗುತ್ತವೆ.  ಹಾಗೆಯೇ ಕೌಟುಂಬಿಕ ದೌರ್ಜನ್ಯ, ಮಕ್ಕಳಿಗೆ ಕ್ರೆಷ್ ಸೌಲಭ್ಯ ಗಳನ್ನೂ  ‘ಸಂಬಲ್’ ಹಾಗೂ ‘ಸಾಮರ್ಥ್ಯ ‘ದಂತಹ ಹೊಸ ವರ್ಗದಡಿ ಒಟ್ಟಾಗಿ ತರಲಾಗಿದೆ. ಈ ವಿಸ್ತೃತ ಶೀರ್ಷಿಕೆ – ವರ್ಗಗಳಡಿ ನಿರ್ದಿಷ್ಟ ಯೋಜನೆಗಳಿಗೆ ಎಷ್ಟು ಹಣಹಂಚಿಕೆ ಆಗುತ್ತದೆ ಎಂದು  ಊಹಿಸುವುದು ಕಷ್ಟ.

ಉದಾಹರಣೆಗೆ,  ಹೆಣ್ಣುಮಗುವಿಗೆ ಸಂಬಂಧಿಸಿದಂತೆ ರೂ100 ಕೋಟಿಗಳ ಆರಂಭದ ನಿಧಿಯೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರು 2015ರಲ್ಲಿ ಆರಂಭಿಸಿದ  ‘ಬೇಟಿ ಬಚಾವೊ ಬೇಟಿ  ಪಢಾವೊ’ ಯೋಜನೆ ತೆಗೆದುಕೊಳ್ಳಬಹುದು. ಪ್ರತಿವರ್ಷ ಭಾರಿ ಹಂಚಿಕೆ ಪಡೆದುಕೊಂಡ ಈ ಯೋಜನೆಗೆ 2018 ಹಾಗೂ 2019ರಲ್ಲಿ ಹಂಚಿಕೆಯಾದದ್ದು ತಲಾ ರೂ280 ಕೋಟಿ. 2020ರಲ್ಲಿ ರೂ220  ಕೋಟಿ ಹಂಚಿಕೆಯಾಗಿತ್ತು.  ಈಗ, ಈ ಸಾಲಿನ  ಬಜೆಟ್ ನಲ್ಲಿ ಈ ಯೋಜನೆಗೆ ನಿರ್ದಿಷ್ಟವಾಗಿ ಹಣ ಹಂಚಿಕೆಯಾಗಿಲ್ಲ. ಜೊತೆಗೆ, ಇದನ್ನು  ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ, ಜೆಂಡರ್ ರಿಸರ್ಚ್,  ಸ್ಕಿಲಿಂಗ್ ಹಾಗೂ ಟ್ರೇನಿಂಗ್  ನಂತಹ ಯೋಜನೆಗಳ ಜೊತೆಗೆ ಸೇರಿಸಲಾಗಿದೆ. ಇಂತಹ ಸಂದರ್ಭದಲ್ಲಿ  ಯೋಜನೆಗಳಿಗೆ ನಿರ್ದಿಷ್ಟ ಹಣಹಂಚಿಕೆಗೆ ಹಗ್ಗಜಗ್ಗಾಟ ಶುರುವಾಗಬಹುದು.

ಜವಳಿ ಉದ್ಯಮ ರಂಗದಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹೀಗಾಗಿ,  ಮುಂದಿನ ಮೂರು ವರ್ಷಗಳಲ್ಲಿ ಏಳು ಬೃಹತ್ ಹೂಡಿಕೆಯ ಜವಳಿ ಪಾರ್ಕ್ ಗಳ    ಪ್ರಸ್ತಾವ – ಮಹಿಳಾ ಉದ್ಯೋಗಕ್ಕೆ ಇಂಬು ನೀಡಬಹುದೆಂಬುದು ನಿರೀಕ್ಷೆ ಹಾಗೂ ಆಶಯ. ಎಲ್ಲಾ ವಲಯಗಳಲ್ಲಿ ‘ಸೂಕ್ತ ರಕ್ಷಣಾ ಕ್ರಮ’ಗಳೊಂದಿಗೆ ರಾತ್ರಿ ಪಾಳಿಗಳ ಕೆಲಸಗಳಿಗೂ ಮಹಿಳೆಗೆ ಅವಕಾಶ ನೀಡಿರುವುದು ಸಕಾರಾತ್ಮಕ.

ಆರೋಗ್ಯ ವಲಯದ ಮಹಿಳಾ ಕೆಲಸಗಾರರಿಗೆ ಸಂಬಂಧಿಸಿದಂತೆ ಮಾಡಿರುವ  ಏಕೈಕ ಪ್ರಕಟಣೆ ಎಂದರೆ ರಾಷ್ಟ್ರೀಯ ನರ್ಸಿಂಗ್ ಮತ್ತು ಮಿಡ್ ವೈಫ್ ರಿ ಆಯೋಗ ಮಸೂದೆ. ನರ್ಸಿಂಗ್ ವೃತ್ತಿಯಲ್ಲಿ ಪಾರದರ್ಶಕತೆ, ದಕ್ಷತೆ ಹಾಗೂ ಆಡಳಿತ ಸುಧಾರಣೆ ಉತ್ತೇಜನಕ್ಕೆ ಇದು ಅನುವು ಮಾಡಿಕೊಡುತ್ತದೆ.  ಆತ್ಮ ನಿರ್ಭರ ಭಾರತದ 6 ಪ್ರಮುಖ ಸ್ತಂಭಗಳಲ್ಲಿ ‘ಆರೋಗ್ಯ ಹಾಗೂ ಯೋಗಕ್ಷೇಮ’ವೂ ಒಂದಾಗಿದೆ ಎಂಬುದನ್ನು ಗಮನಿಸಬೇಕು.  ‘ಸ್ವಚ್ಛ ಭಾರತ , ಸ್ವಸ್ಥ ಭಾರತ’ದ  ಆದ್ಯತೆ ಎಂದರೆ ನಗರ ಪ್ರದೇಶಗಳಲ್ಲಿ ಕಸದ ಸೂಕ್ತ ನಿರ್ವಹಣೆ ಹಾಗೂ ಶುದ್ಧ ಗಾಳಿ. ಇವೆರಡೂ ಬಹು ಮುಖ್ಯ ಎಂಬುದು ನಿಜ. ಆದರೆ ಸಾರ್ವಜನಿಕ ಸ್ವಚ್ಛ ಶೌಚಾಲಯಗಳೂ ಮನೆಯಿಂದ ಹೊರ ಬರುವ ಮಹಿಳೆಯರಿಗೆ ಮೂಲಭೂತವಾದದ್ದು ಎಂಬುದನ್ನೂ ನಾವು ಮರೆಯಬಾರದು.

ಜೆಂಡರ್ ಸ್ಪಂದನಶೀಲ ಬಜೆಟ್  (ಜಿಆರ್‌ಬಿ) ಎಂದರೆ,  ವಿವಿಧ ವಲಯಗಳಿಗೆ ಬರೀ ಹಣ ಹಂಚಿಕೆ ಮಾಡುವಂತಹದ್ದಲ್ಲ. ಜೆಂಡರ್ ಕಣ್ಣಿನಿಂದ ಅಥವಾ ಹೆಣ್ಣು ನೋಟದಿಂದ ಇಡೀ ಬಜೆಟ್ ಅನ್ನು ಪರಿಶೀಲಿಸುವ ಕಸರತ್ತು ಇಲ್ಲಿರಬೇಕು.

ಮಹಿಳೆ ಹಾಗೂ ಪುರುಷನ ಮೇಲೆ ರಾಷ್ಟ್ರೀಯ ಬಜೆಟ್ ಗಳು ಭಿನ್ನವಾಗಿ ಪರಿಣಾಮ ಬೀರುತ್ತವೆ ಹಾಗೂ ಇವು ಪಿತೃಪ್ರಧಾನ ಸಾಮಾಜಿಕ ಮೌಲ್ಯಗಳು ಹಾಗೂ ಪೂರ್ವಗ್ರಹಗಳನ್ನು ಪುಷ್ಟೀಕರಿಸಬಹುದು ಎಂಬ ಗ್ರಹಿಕೆಯನ್ನು ಆಧರಿಸಿ ಜಿಆರ್ ಬಿ ಪರಿಕಲ್ಪನೆ ಸೃಷ್ಟಿಯಾಯಿತು ಎಂಬುದು ನಮಗೆ ನೆನಪಿರಬೇಕು.  2005-06ರಿಂದ ಜೆಂಡರ್ ಬಜೆಟಿಂಗ್ ಆರಂಭವಾಯಿತು.  2019 ರ ಬಜೆಟ್ ಭಾಷಣದಲ್ಲಿ ಸಚಿವೆ ನಿರ್ಮಲಾ ಸೀತಾರಾಮನ್ ಅವರು ನಾರಿ ಯನ್ನು ನಾರಾಯಣಿ ಎಂದು ಬಣ್ಣಿಸಿ ,15 ವರ್ಷಗಳ ಜೆಂಡರ್ ಬಜೆಟಿಂಗ್ ನ ಮೌಲ್ಯ ಮಾಪನಕ್ಕೆ ಸಮಿತಿಯೊಂದನ್ನು ರಚಿಸುವುದಾಗಿ ಪ್ರಕಟಿಸಿದ್ದರು. ಈ ಸಮಿತಿ ಈಗ ಜೆಂಡರ್ ಬಜೆಟಿಂಗ್ ಸುಧಾರಿಸಲು ಶಿಫಾರಸುಗಳ ವರದಿಯನ್ನು ಸಲ್ಲಿಸಿದೆ ಎನ್ನಲಾಗಿದ್ದು ಈ ಬಗ್ಗೆ ಹೆಚ್ಚಿನ ವಿವರಗಳು ಪ್ರಕಟವಾಗಿಲ್ಲ. ಈ  ಶಿಫಾರಸುಗಳು ಜೆಂಡರ್ ಬಜೆಟಿಂಗ್ ಪ್ರಕ್ರಿಯೆಯಲ್ಲಿ ಹೆಚ್ಚಿನ ಸೂಕ್ಷ್ಮತೆ ತರಬಹುದೇ?  ಕಾಯೋಣ..

Donate Janashakthi Media

Leave a Reply

Your email address will not be published. Required fields are marked *