ಒಕ್ಕೂಟವಾದದ ಬಹುಮುಖ್ಯ ಅಂಶವಾದ ಕೇಂದ್ರ-ರಾಜ್ಯ ಸಂಬಂಧಗಳು, ಅಂದರೆ, ತಮ್ಮ ಅಧಿಕಾರಗಳು, ಕಾರ್ಯಗಳು ಮತ್ತು ಕರ್ತವ್ಯಗಳಿಗೆ ಸಂಬಂಧಿಸಿ ಕೇಂದ್ರ ಸರ್ಕಾರ ಮತ್ತು ರಾಜ್ಯಗಳ ನಡುವಿನ ಹೊಂದಾಣಿಕೆಯು, ಯಾವಾಗಲೂ ಪ್ರಮುಖ ವಿಷಯವಾಗಿದೆ.
ಡಾ.ಪ್ರಕಾಶ್ ಕೆ.
ಚಾರಿತ್ರಿಕ ಹಿನ್ನೆಲೆ : ಭಾರತವೆಂಬ ಒಕ್ಕೂಟವು ಸಂವಿಧಾನಿಕವಾಗಿ ಜನ್ಮ ತಾಳುವ ಮೊದಲು, ಒಕ್ಕೂಟ ತತ್ವವು ಅದರ ಬೇರುಗಳನ್ನು ಬ್ರಿಟಿಷ್ ಆಡಳಿತದಲ್ಲೇ ಪಡೆದುಕೊಂಡಿತ್ತು. ಆದರೆ ಅದು ಅದೊಂದು ಸ್ಪಷ್ಟವಾದ ಪ್ರಜಾಪ್ರಭುತ್ವದ ನೆಲೆಗಟ್ಟಿನಲ್ಲೇನೂ ಸಂಭವಿಸಿರಲಿಲ್ಲ. ಬ್ರಿಟಿಷರು 500 ಕ್ಕೂ ಹೆಚ್ಚು ರಾಜರು ಮತ್ತು ನವಾಬರ ರಾಜ್ಯಗಳನ್ನೂ ಒಳಗೊಂಡು ದೇಶವನ್ನು ಹಲವು ಪ್ರಾಂತ್ಯಗಳಾಗಿ ವಿಂಗಡಿಸಿದ್ದರು. ಈ ವಿಭಜನೆಗಳು ಜನರ ಪ್ರಜಾಸತ್ತಾತ್ಮಕ ಆಶೋತ್ತರಗಳ ಆಧಾರದಲ್ಲಿ, ಭಾಷಾವಾರು ರಾಜ್ಯಗಳಾಗಿಯೂ ಆಗಿರಲಿಲ್ಲ. ಬ್ರಿಟಿಷ್ ಬಂಡವಾಳದ ಚಲನೆ ಮತ್ತು ಲಾಭದ ಅನುಕೂಲಕರ ಆಯಕಟ್ಟಿನ ಆಧಾರದಲ್ಲಿ, ಬಂಡವಾಳಶಾಹಿ ಪ್ರಜಾಪ್ರಭುತ್ವದ ಭಾಗವಾಗಿ ಸಂಭವಿಸಿತ್ತು. ಇದರ ಭಾಗವಾಗಿ 1909 ಮತ್ತು 1919 ರ ಸುಧಾರಣೆಗಳು ಮತ್ತು 1935 ರ ಗವರ್ನಮೆಂಟ್ ಆಫ್ ಇಂಡಿಯಾ ಆಕ್ಟ್ ಮೂಲಕ ಜಾರಿ ಮಾಡಲಾದ ಬಂಡವಾಳಶಾಹಿ ಪ್ರಜಾಪ್ರಭುತ್ವೀಯ ಪ್ರಕ್ರಿಯೆಯ ಲಾಭವನ್ನು ಮೊದಲಿಗೆ ಪಡೆದದ್ದು ಈ ರಾಜ್ಯಗಳು ಮತ್ತು ಪ್ರಾಂತ್ಯಗಳು. ಇವೆಲ್ಲವೂ ಮುಂದೆ ಭಾರತದ ಸಂವಿಧಾನದ ಚೌಕಟ್ಟಿನಲ್ಲಿ ನಿರ್ದಿಷ್ಟ ರೂಪವನ್ನು ಪಡೆದುಕೊಂಡವು. ಒಟ್ಟಾರೆ ಭಾರತದ ಒಕ್ಕೂಟವಾದವು ಭಾರತದ ಭಾಷಾವಾರು ವೈವಿಧ್ಯತೆಯೊಳಗಿನಿಂದ ರೂಪುಗೊಂಡ ಉತ್ಪನ್ನವಾಗಿದೆ.
ಭಾರತದ ರಾಷ್ಟ್ರೀಯತೆಯು ಏಕ ಭಾಷೆ, ಏಕ ಮತಧರ್ಮ, ಏಕ ಸಂಸ್ಕೃತಿ ಹಿನ್ನೆಲೆಯ ಯೂರೋಪಿಯನ್ ಮಾದರಿಯದ್ದಲ್ಲ. ಬದಲಿಗೆ ಬಹುಭಾಷೆಗಳ, ಬಹು ಮತಧರ್ಮಗಳ, ಬಹು ಸಂಸ್ಕೃತಿಗಳ, ಒಟ್ಟಾರೆಯಾಗಿ ಬಹುತ್ವದ ನೆಲೆಗಟ್ಟಿನ ರಾಷ್ಟ್ರೀಯತೆ. ಬ್ರಿಟಿಷ್ ವಿರೋಧಿ ಹೋರಾಟದಲ್ಲಿ ರೂಪುಗೊಂಡ ಆಧುನಿಕವಾದ ಬಹುತ್ವದ ರಾಷ್ಟ್ರೀಯತೆ. ಹೀಗಾಗಿ ಭಾರತವು ಹಲವು ರಾಷ್ಟ್ರೀಯತೆಗಳ ಒಂದು ದೇಶ. ಭಾರತದ ಒಕ್ಕೂಟ ತತ್ವವು ಮೂಲತಃ ಇಂತಹ ಪರಿಸ್ತಿತಿಯಿಂದ ಹೊರಹೊಮ್ಮಿದೆ.
ಒಕ್ಕೂಟವಾದದ ಬಹುಮುಖ್ಯ ಅಂಶವಾದ ಕೇಂದ್ರ-ರಾಜ್ಯ ಸಂಬಂಧಗಳು, ಅಂದರೆ, ತಮ್ಮ ಅಧಿಕಾರಗಳು, ಕಾರ್ಯಗಳು ಮತ್ತು ಕರ್ತವ್ಯಗಳಿಗೆ ಸಂಬಂಧಿಸಿ ಕೇಂದ್ರ ಸರ್ಕಾರ ಮತ್ತು ರಾಜ್ಯಗಳ ನಡುವಿನ ಹೊಂದಾಣಿಕೆಯು, ಯಾವಾಗಲೂ ಪ್ರಮುಖ ವಿಷಯವಾಗಿದೆ.
ಪ್ರಜಾಪ್ರಭುತ್ವದ ಒಂದು ಪ್ರಮುಖ ಲಕ್ಷಣ ವಿಕೇಂದ್ರೀಕರಣ. ಹೆಚ್ಚೆಚ್ಚು ಜನರಿಗೆ ಪ್ರಜಾಪ್ರಭುತ್ವವನ್ನು ವಿಸ್ತರಿಸುವುದು ಎಂದು ಇದರರ್ಥ – ಕೆಲವರು ಇದನ್ನು ಕೆಲವು ನಾಗರಿಕ ಕೆಲಸಗಳನ್ನೋ ಅಥವಾ ಕೆಲವು ಅಭಿವೃದ್ಧಿ ಕೆಲಸಗಳನ್ನೋ ಸ್ಥಳೀಯವಾಗಿ ನಿರ್ವಹಿಸುವುದು ಎಂದೂ ಅರ್ಥೈಸುತ್ತಾರೆ, ಆದರೆ ಅದು ಸಮಗ್ರವಾದುದಲ್ಲ – ಕೇಂದ್ರದಿಂದ ರಾಜ್ಯಗಳಿಗೆ, ರಾಜ್ಯಗಳಿಂದ ಜಿಲ್ಲೆಗಳಿಗೆ, ಜಿಲ್ಲೆಗಳಿಂದ ಗ್ರಾಮಗಳಿಗೆ, ವಾರ್ಡ್ಗಳಿಗೆ; ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ಹಕ್ಕು ಮತ್ತು ಅಧಿಕಾರಗಳ ವಿಕೇಂದ್ರೀಕರಣ. ಇಂತಹ ಒಂದು ವಿಕೇಂದ್ರೀಕರಣ ಕಾರ್ಮಿಕರಿಗೆ, ಕೂಲಿಕಾರರಿಗೆ, ರೈತರಿಗೆ, ಇತರೆ ದುಡಿಯುವ ಜನ ವಿಭಾಗಗಳಿಗೆ ಅತ್ಯಗತ್ಯ. ಮಾರ್ಕ್ಸ್ವಾದಿಗಳಿಗೆ ಪ್ರಜಾಪ್ರಭುತ್ವದ ವಿಕೇಂದ್ರೀಕರಣವನ್ನು ಹೀಗಲ್ಲದೆ ಬೇರೆ ರೀತಿ ಅರ್ಥೈಸಲು ಸಾಧ್ಯವಿಲ್ಲ.
ಭಾರತ ರಾಷ್ಟ್ರೀಯ ಕಾಂಗ್ರೆಸಿನ ನಾಯಕರಿಗೆ ಫೆಡರಲ್ ತತ್ವದ ಬಗ್ಗೆ ಒಲವೇನೂ ಇರಲಿಲ್ಲ. ಅದಕ್ಕೆ ಅವರ ಒಪ್ಪಿಗೆ ಎಂಬುದು ಒಂದು ಹೊಂದಾಣಿಕೆಯ ತತ್ವವಾಗಿ ಮಾತ್ರವಿತ್ತು. ಮಾತಿನಲ್ಲಿ ಒಕ್ಕೂಟ ತತ್ವಕ್ಕೆ ಬದ್ಧವಾದರೂ, ಆಚರಣೆಯಲ್ಲಿ ಬಲಿಷ್ಟವಾದ ಫೆಡರಲ್ ಕೇಂದ್ರವನ್ನಾಗಿ ಪರಿವರ್ತಿಸಿದರು ಮತ್ತು ಏಕೀಕೃತ ವ್ಯವಸ್ಥೆಗಿಂತ ತೀರಾ ಭಿನ್ನವಲ್ಲದ ಪ್ರಭುತ್ವವನ್ನು ರಚಿಸಿದರು. ಅಧಿಕಾರಗಳ ವಿಂಗಡಣೆ, ಸಂಪನ್ಮೂಲಗಳ ನಿಯಂತ್ರಣ, ನಾಗರಿಕ ಸೇವೆಗಳ ನಿಯಂತ್ರಣ ಮತ್ತು ಸಮನ್ವಯದ ಹೆಸರಲ್ಲಿ ರಾಜ್ಯದಲ್ಲಿ ಮಧ್ಯ ಪ್ರವೇಶ ಮಾಡಲು ಕೇಂದ್ರಕ್ಕೆ ಏಕಪಕ್ಷೀಯ ಅಧಿಕಾರ, ಮುಂತಾದವುಗಳು ಕಾಂಗ್ರೆಸ್ ಆಡಳಿತದಲ್ಲಿ ಮತ್ತಷ್ಟು ಹದಗೆಡುವ ಹಾಗೆ ಇಡೀ ಪ್ರಭುತ್ವದ ರಚನೆಯಲ್ಲೆ ಅತ್ಯಂತ ಕೇಂದ್ರೀಕೃತ ವ್ಯವಸ್ಥೆ ಅಸ್ಥಿತ್ವಕ್ಕೆ ಬಂದಿತ್ತು.
ಸಿಪಿಐ(ಎಂ) ಪಕ್ಷವು ಪ್ರಸ್ತುತ ಭಾರತದ ಪ್ರಭುತ್ವವು, “ಬಂಡವಾಳಶಾಹಿ ಅಭಿವೃದ್ಧಿಯ ಮಾರ್ಗವನ್ನು ಅನುಸರಿಸುವಲ್ಲಿ ವಿದೇಶೀ ಹಣಕಾಸು ಬಂಡವಾಳದೊಂದಿಗೆ ಹೆಚ್ಚೆಚ್ಚು ಸಹಕರಿಸುತ್ತಿರುವ ದೊಡ್ಡ ಬಂಡವಾಳಶಾಹಿಗಳ ನೇತೃತ್ವದ, ಬಂಡವಾಳಶಾಹಿಗಳ ಮತ್ತು ಭೂಮಾಲಕರ ವರ್ಗ ಆಳ್ವಿಕೆಯ ಅಂಗವಾಗಿದೆ” ಎಂದು ವಿಶ್ಲೇಷಿಸುತ್ತದೆ. ಪ್ರಭುತ್ವದ ಈ ಸ್ವರೂಪವು ಸಹಜವಾಗಿಯೇ ರಾಜ್ಯಗಳಿಗೆ ಅಧಿಕಾರಗಳನ್ನು ತೋರಿಕೆಗಾದರೂ ಪ್ರತಿಪಾದಿಸುವ ಕೇಂದ್ರೀಕೃತ ಪ್ರಭುತ್ವವೇ ಆಗಿದೆ.
ಸ್ವಾತಂತ್ರ್ಯ ಹೋರಾಟದಲ್ಲಿ ಮೂಡಿಬಂದ ಜನತೆಯ ಆಶಯಗಳ ಭಾಗವಾಗಿ ಒಕ್ಕೂಟವಾದವು ಜಾರಿಗೆ ಬಂದಿದೆ. ಸ್ವಾತಂತ್ರ್ಯನಂತರದಲ್ಲಿ ಅಪಾರವಾದ ಸಾಮಾಜಿಕ-ಆರ್ಥಿಕ-ರಾಜಕೀಯ ಬದಲಾವಣೆಗಳು ಸಂಭವಿಸಿದ್ದು, ಅದರ ಪರಿಣಾಮವಾಗಿ ಕೇಂದ್ರ-ರಾಜ್ಯ ಸಂಬಂಧಗಳಲ್ಲೂ ಬದಲಾವಣೆಗಳಾಗಿವೆ. 1991 ರ ನಂತರದಲ್ಲಿ ಬಂಡವಾಳಶಾಹಿ ಯೋಜಿತ ಆರ್ಥಿಕ ಬೆಳವಣಿಗೆ ಪಥದಿಂದ ಪೂರ್ಣವಾಗಿ ಮುಕ್ತ ಮಾರುಕಟ್ಟೆ ಆಧಾರಿತ ಪಥಕ್ಕೆ ಹೊರಳಿದ್ದರಿಂದ ಒಕ್ಕೂಟ ವ್ಯವಸ್ಥೆಗೆ ನೂತನವಾದ ಸಮಸ್ಯೆಗಳು ಮತ್ತು ಸವಾಲುಗಳು ಎದುರಾಗಿದೆ. ಇವು ಭಾರತದ ಜನತೆಯ ಜೀವನಗಳ ಮೇಲೆ ಮತ್ತು ಪ್ರಜಾಪ್ರಭುತ್ವದ ಕಾರ್ಯಾಚರಣೆಯ ಮೇಲೆ ಗಂಭೀರವಾದ ಪರಿಣಾಮ ಬೀರಿವೆ.
ಶಾಸನಾತ್ಮಕ, ಆಡಳಿತಾತ್ಮಕ ಮತ್ತು ಹಣಕಾಸಿನ (legislative, administrative and financial) ಅಧಿಕಾರಗಳು ಅಳತೆ ಮೀರಿ ಕೇಂದ್ರ ಸರ್ಕಾರದಲ್ಲಿ ಕೇಂದ್ರೀಕೃತವಾಗಿವೆ. ಆದರೆ ರಾಜ್ಯ ಸರ್ಕಾರಗಳ ಮೇಲೆ ಅತಿ ಹೆಚ್ಚಿನ ಹೊಣೆಗಾರಿಕೆಗಳು ಇವೆ. ರಾಜ್ಯಗಳಿಗೆ ಅಗತ್ಯವಾದ ಸ್ವಾಯತ್ತತೆ ಇಲ್ಲದಂತಾಗಿದೆ. ಹೀಗಾಗಿ ಕೇಂದ್ರ-ರಾಜ್ಯ ಸಂಬಂಧಗಳನ್ನು ಸಂಪೂರ್ಣವಾಗಿ ಪುನರ್ ರಚಿಸುವ, ಈಗಿರುವ ಅಸಮತೋಲನಗಳನ್ನು ಸರಿಪಡಿಸುವ ಮತ್ತು ಒಕ್ಕೂಟ ವ್ಯವಸ್ಥೆಯನ್ನು ಗಟ್ಟಿಗೊಳಿಸುವ ಮತ್ತು ಆಮೂಲಕ ರಾಜ್ಯಗಳನ್ನು ನ್ಯಾಯಬದ್ಧವಾಗಿ ಸಬಲೀಕರಿಸುವ ಅಗತ್ಯ ನಿರ್ಮಾಣವಾಗಿದೆ.
ಈ ಕುರಿತು ಸಿಪಿಐ(ಎಂ) ಪಕ್ಷವು 2008 ಅಕ್ಟೋಬರ್ 12-14 ಕೊಲ್ಕೊತ್ತಾದಲ್ಲಿ ನಡೆದ ಕೇಂದ್ರ ಸಮಿತಿ ಸಭೆಯಲ್ಲಿ “ಅಪ್ರೋಚ್ ಪೇಪರ್ ಆನ್ ರಿಸ್ರ್ಚಕ್ಚರಿಂಗ್ ಆಫ್ ಸೆಂಟರ್-ಸ್ಟೇಟ್ ರಿಲೇಷನ್ಸ್” (Approach Paper On Restructuring of Centre-State Relations)ಎಂಬ ದಸ್ತಾವೇಜನ್ನು ಅಂಗೀಕರಿಸಿದೆ.ಈ ದಸ್ತಾವೇಜನ್ನು ಸಿಪಿಐ(ಎಂ)ನ ಕಾರ್ಯಕ್ರಮದಲ್ಲಿ ಹೇಳಲಾಗಿರುವ (ಪ್ಯಾರಾ5.2 ರಿಂದ 5.5) ಆಧಾರದಲ್ಲಿ ರೂಪಿಸಲಾಗಿದೆ.
“2 ಪ್ರಭುತ್ವ ರಚನೆಯು ಹೆಸರಿಗೆ ಒಕ್ಕೂಟ ಸ್ವರೂಪದ್ದಾದರೂ ಹೆಚ್ಚಿನ ಅಧಿಕಾರಗಳು ಮತ್ತು ಸಂಪನ್ಮೂಲಗಳು ಕೇಂದ್ರ ಸರ್ಕಾರದ ಕೈಗಳಲ್ಲಿ ಕೇಂದ್ರೀಕೃತವಾಗಿವೆ. ದೊಡ್ಡ ಬಂಡವಾಳಶಾಹಿಗಳು ಆರಂಭದಲ್ಲಿ ಭಾಷೆಯ ಸಾಮಾನ್ಯತೆಯ ಆಧಾರದಲ್ಲಿ ರಾಜ್ಯಗಳ ರಚನೆಯ ಬೇಡಿಕೆಯನ್ನು ವಿರೋಧಿಸದರೂ, ಸಾಮೂಹಿಕ ಆಂದೋಲನಗಳ ಹಾಗೂ ಚಳುವಳಿಗಳ ತೀವ್ರ ಒತ್ತಡವು ಭಾಷಾವಾರು ರಾಜ್ಯಗಳ ರಚನೆಗೆ ಒಪ್ಪುವಂತೆ ಒತ್ತಾಯ ಹೇರಿತು. ಭಾಷಾವಾರು ರಾಜ್ಯಗಳ ನೀತಿಯ ಮೇಲೆ ಬಿಜೆಪಿ ನೇತೃತ್ವದ ಸರ್ಕಾರವು ಹೊಸ ದಾಳಿ ನಡೆಸಿತು. ಅದು ಆಡಳಿತಾತ್ಮಕ ಅನುಕೂಲತೆಯ ಆಧಾರದಲ್ಲಿ ಸಣ್ಣ ರಾಜ್ಯಗಳಿರಬೇಕೆಂದು ಪ್ರತಿಪಾದಿಸುತ್ತದೆ. ಇದು ಒಕ್ಕೂಟ ರಚನೆಯನ್ನು ಮತ್ತಷ್ಟು ದುರ್ಬಲಗೊಳಿಸುತ್ತದೆ. ಕೇಂದ್ರ ಸರ್ಕಾರದಿಂದ, ಚುನಾಯಿತ ರಾಜ್ಯ ಸರ್ಕಾರಗಳನ್ನು ವಜಾ ಮಾಡಲು ಮತ್ತು ಚುನಾಯಿತ ರಾಜ್ಯ ವಿಧಾನಸಭೆಗಳನ್ನು ವಿಸರ್ಜಿಸಲು ಮತ್ತೆ ಮತ್ತೆ ಸಂವಿಧಾನದ 356 ನೇ ಕಲಮಿನಲ್ಲೇ ಅಡಕವಾಗಿರುವ ಪ್ರಜಾಪ್ರಭುತ್ವ-ವಿರೋಧಿ ಅವಕಾಶಗಳ ಬಳಕೆಯ ಒಕ್ಕೂಟ ವ್ಯವಸ್ಥೆಯನ್ನು ಬುಡಮೇಲು ಮಾಡುವಲ್ಲಿ ಮತ್ತು ರಾಜ್ಯಗಳ ಸ್ವಾಯತ್ತತೆಯ ಮೇಲೆ ದಾಳಿ ಮಾಡುವಲ್ಲಿ ಒಂದು ಪ್ರಮುಖ ಸಾಧನವಾಗಿದೆ. ಅಂಗ ರಾಜ್ಯಗಳಿಗೆ ಹೆಚ್ಚಿನ ಅಧಿಕಾರವಿಲ್ಲದೆ, ಅವು ಕೇಂದ್ರ ಸರ್ಕಾರದ ಮೇಲೆ ಅವಲಂಬಿಸುವಂತಾಗಿ ಅವುಗಳ ಅಭಿವೃದ್ಧಿ ಸೀಮಿತಗೊಳ್ಳುವಂತಾಗಿದೆ.
3 ಇಂತಹ ಒಂದು ಸನ್ನಿವೇಶದಲ್ಲಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ನಡುವಿನ ವೈರುಧ್ಯಗಳು ಸಹಜವಾಗಿಯೇ ಬೆಳೆದಿವೆ. ಈ ವೈರುಧ್ಯಗಳ ಹಿಂದೆ ಅನೇಕ ಬಾರಿ ಒಂದೆಡೆ ದೊಡ್ಡ ಬಂಡವಾಳಶಾಹಿಗಳು ಮತ್ತು ಇನ್ನೊಂದೆಡೆ ಈ ರಾಜ್ಯ ಅಥವಾ ಆ ರಾಜ್ಯದ ನಡುವಿನ ಆಳವಾದ ವೈರುಧ್ಯವೂ ಇರುತ್ತದೆ. ಈ ವೈರುಧ್ಯವು ಬಂಡವಾಳವಾದದಡಿಯಲ್ಲಿ ತೀವ್ರಗೊಳ್ಳುತಿರುವ ಅಸಮಾನ ಆರ್ಥಿಕ ಬೆಳವಣಿಗೆಯಿಂದಾಗಿ ಸತತವಾಗಿ ಉಲ್ಬಣಗೊಳ್ಳುತ್ತಿರುತ್ತದೆ. ಪ್ರಾದೇಶಿಕ ರಾಜಕೀಯ ಪಕ್ಷಗಳ ಉದಯವು ಇದರ ಒಂದು ರಾಜಕೀಯ ಅಭಿವ್ಯಕ್ತಿಯಾಗಿದೆ. ಇವು ಆ ರಾಜ್ಯಗಳ ಜನತೆಯ ಭಾಷಾವಾರು-ದೇಶೀಯತೆಯ ಭಾವನೆಗಳನ್ನು ಬಿಂಬಿಸುತ್ತವೆ ಮತ್ತು ಸಾಮಾನ್ಯವಾಗಿ ಆ ಪ್ರದೇಶದ ಬಂಡವಾಳಶಾಹಿ-ಜಮೀನ್ದಾರಿ ವರ್ಗಗಳನ್ನು ಪ್ರತಿನಿಧಿಸುತ್ತವೆ.
4 ರಾಷ್ಟ್ರೀಯ ಐಕ್ಯತೆಯ ಸಮಸ್ಯೆಗಳು, ಸ್ವಾತಂತ್ರ್ಯದ ನಂತರ ಅನುಸರಿಸಲಾದ ಬಂಡವಾಳಶಾಹಿ-ಭೂಮಾಲಕ ಧೋರಣೆಗಳಿಂದಾಗಿ ಉಲ್ಬಣಗೊಂಡಿದೆ. ಹಲವಾರು ಅಲ್ಪಸಂಖ್ಯಾತ ದೇಶೀಯತೆಗಳ ಮತ್ತು ಜನಾಂಗೀಯ ಗುಂಪುಗಳ ನೆಲೆಯಾಗಿರುವ ದೇಶದ ಈಶಾನ್ಯ ಪ್ರದೇಶವು ಬಂಡವಾಳಶಾಹಿ ಬೆಳವಣಿಗೆಯಿಂದ ಪೋಷಿಸಲ್ಪಟ್ಟ ಅಸಮಾನ ಬೆಳವಣಿಗೆ ಮತ್ತು ಪ್ರಾದೇಶಿಕ ಅಸಮತೋಲನಗಳಿಂದ ಅತಿ ಹೆಚ್ಚು ಸಂಕಷ್ಟಕ್ಕೆ ಒಳಗಾಗಿದೆ. ಇದು ಪ್ರತ್ಯೇಕತಾವಾದವನ್ನು ಪ್ರತಿಪಾದಿಸುತ್ತಿರುವ ಮತ್ತು ಸಾಮ್ರಾಜ್ಯಶಾಹಿ ಏಜೆನ್ಸಿಗಳು ಬಳಸಿಕೊಳ್ಳುತ್ತಿರುವ ಉಗ್ರಗಾಮಿಗಳ ಬೆಳವಣಿಗೆಗೆ ಫಲವತ್ತಾದ ನೆಲವನ್ನು ಒದಗಿಸಿದೆ. ಉಗ್ರಗಾಮಿಗಳ ಹಿಂಸಾತ್ಮಕ ಚಟುವಟಿಕೆಗಳು ಮತ್ತು ಜನಾಂಗೀಯ ಕಲಹಗಳು ಅಭಿವೃದ್ಧಿಯ ಕೆಲಸಕ್ಕೆ ಮತ್ತು ಪ್ರಜಾಸತ್ತಾತ್ಮಕ ಚಟುವಟಿಕೆಗಳಿಗೆ ಅಡ್ಡಿಯಾಗುತ್ತವೆ.
5.5 ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನದ 370 ನೇ ಕಲಮಿನಡಿ ವಿಶೇಷ ಸ್ಥಾನಮಾನ ಮತ್ತು ಸ್ವಾಯತ್ತತೆಯನ್ನು ಒದಗಿಸಲಾಗಿತ್ತು. ಆದರೆ ದಶಕಗಳಿಂದಾಚೆಯಿಂದ ಸ್ವಾಯತ್ತತೆಯ ಏರ್ಪಾಡುಗಳನ್ನು ತೀವ್ರವಾಗಿ ಕಡಿತ ಮಾಡಲಾಯಿತು ಮತ್ತು ರಾಜ್ಯದ ಜನಗಳಲ್ಲಿ ಪರಕೀಯ ಭಾವನೆ ಹೆಚ್ಚುವಂತಾಯಿತು. ಇದನ್ನು ಪಾಕಿಸ್ತನ ಬೆಂಬಲಿತ ಪ್ರತ್ಯೇಕತಾವಾದಿ ಶಕ್ತಿಗಳು ಬಳಸಿಕೊಂಡಿವೆ. ಅಮೇರಿಕಾ ಸಂಯುಕ್ತ ಸಂಸ್ಥಾನಗಳ ನೇತೃತ್ವದ ಸಾಮ್ರಾಜ್ಯವಾದವು ಈ ವಿವಾದವನ್ನು ಭಾರತದ ಮೇಲೆ ಒತ್ತಡ ತರಲು ಮತ್ತು ಈ ಪ್ರದೇಶದಲ್ಲಿ ತನ್ನ ಮಧ್ಯಪ್ರವೇಶವನ್ನು ಹೆಚ್ಚಿಸಲು ಉಪಯೋಗಿಸಿಕೊಳ್ಳುತ್ತಿದೆ. ರಾಷ್ಟ್ರೀಯ ಐಕ್ಯತೆಯ ಮಹತ್ವದ ಪ್ರಶ್ನೆಯನ್ನು ಒಂದು ಪ್ರಜಾಸತ್ತಾತ್ಮಕ ರೀತಿಯಲ್ಲಿ ಪರಿಹರಿಸುವಲ್ಲಿ ಬಂಡವಾಳಶಾಹಿ-ಜಮೀನ್ದಾರಿ ವರ್ಗಗಳ ವಿಫಲತೆಗೆ ಈಶಾನ್ಯ ಪ್ರದೇಶದ ಮತ್ತು ಕಾಶ್ಮೀರದ ಸಮಸ್ಯೆಗಳು ಉದಾಹರಣೆಗಳಾಗಿವೆ.”
ಸಿಪಿಐ(ಎಂ) ಪಕ್ಷದ ಕಾರ್ಯಕ್ರಮದ ತಿಳುವಳಿಕೆಯನ್ನು ಅನುಸರಿಸಿ, 1977 ರಲ್ಲಿ ಮೊದಲ ಬಾರಿಗೆ ಪಶ್ಚಿಮ ಬಂಗಾಳದ ಎಡರಂಗ ಸರ್ಕಾರವು ಕೇಂದ್ರ-ರಾಜ್ಯ ಸಂಬಂಧಗಳ ಪುನರ್ ರಚನೆಗೆ ಒತ್ತಾಯಿಸಿ 15 ಅಂಶಗಳ ಮನವಿಯನ್ನು ನೀಡಿತು.ಹಲವು ರಾಜ್ಯ ಸರ್ಕಾರಗಳನ್ನು ಅಣಿನೆರೆಸಿತು.
ನಂತರ 1983 ರಲ್ಲಿ ಶ್ರೀನಗರ ಸಮಾವೇಶವು ನಡೆದು, ಇದರಲ್ಲಿ ಎಡಪಕ್ಷಗಳು, ಟಿಡಿಪಿ, ಡಿಎಂಕೆ, ಆರ್‌ಪಿಐ, ನ್ಯಾಷನಲ್ ಕಾನ್ಫರೆನ್ಸ್ ಮುಂತಾದ ಪಕ್ಷಗಳು ಭಾಗವಹಿಸಿದ್ದವು. ಇದು ಮುಂದುವರಿದು ಮುಖ್ಯಮಂತ್ರಿಗಳ ಸಭೆಗಳು ನಡೆದವು. ಇಂತಹ ಎಲ್ಲಾ ಸಭೆಗಳ ಪರಿಣಾಮವಾಗಿ ಹಲವಾರು ಪ್ರಶ್ನೆಗಳನ್ನು ಎತ್ತಲಾಯಿತು.
ಇಂತಹ ಹಲವಾರು ಪ್ರಯತ್ನಗಳು ಮತ್ತು ಚರ್ಚೆಗಳಿಂದ ಮೂಡಿಬಂದ ಅಂಶಗಳು ಮುಖ್ಯವಾಗಿ ೩ ವಲಯಗಳಲ್ಲಿ ವಿಂಗಡನೆಯಾಗಿದ್ದವು: 1. ಆಡಳಿತಾತ್ಮಕ, 2. ಶಾಸನಾತ್ಮಕ, ಮತ್ತು 3, ಹಣಕಾಸು.
ಆಡಳಿತಾತ್ಮಕ: ಅ). ಪರಿಚ್ಛೇದ 356 ರ ದುರ್ಬಳಕೆ, ಆ). ರಾಜ್ಯಗಳ ಒಪ್ಪಿಗೆ ಪಡೆಯದೆ ಕೇಂದ್ರ ಪಡೆಗಳನ್ನು ಕಳುಹಿಸುವುದು, ಇ). ರಾಜ್ಯಪಾಲರ ಪಾತ್ರ, ಇತ್ಯಾದಿ,
ಶಾಸನಾತ್ಮಕ: ಅ). ರಾಜ್ಯ ಪಟ್ಟಿಯ ಅಧಿಕಾರಗಳಲ್ಲಿ ನುಸುಳುವಿಕೆ, ಆ). ರಾಜ್ಯ ವಿಧಾನಸಭೆಗಳು ಪಾಸು ಮಾಡಿದ ಪ್ರಮುಖವಾದ ಮಸೂದೆಗಳಿಗೆ ಅಂಕಿತವನ್ನು ಹಾಕಲು ನಿಧಾನಿಸುವುದು, ಇತ್ಯಾದಿ,
ಹಣಕಾಸು: ಸಂಪನ್ಮೂಲ ಕೂಡಿಸುವಿಕೆ, ಹಂಚಿಕೆ ಮತ್ತು ಯೋಜನೆಯಂತಹ ವಿಚಾರಗಳಲ್ಲಿ ಹೆಚ್ಚಿದ ಕೇಂದ್ರೀಕರಣ, ಇತ್ಯಾದಿ.
ಇಂತಹ ಪ್ರಶ್ನೆಗಳಲ್ಲಿ ಅಭಿಪ್ರಾಯ ಮತ್ತು ಒತ್ತಡ ಹೆಚ್ಚಾಗುತ್ತಿದ್ದಂತೆ, ಇಂದಿರಾಗಾಂಧಿ ಸರ್ಕಾರ 1983 ರಲ್ಲಿ ಕೇಂದ್ರ ರಾಜ್ಯಗಳ ಸಂಬಂಧಗಳ ಬಗ್ಗೆ ವರದಿ ನೀಡಲು ಜಸ್ಟೀಸ್ ಸರ್ಕಾರಿಯಾ ಆಯೋಗವನ್ನು ರಚಿಸಿತು. ಇದು ಐದು ವರ್ಷಗಳ ನಂತರ 1988 ರಲ್ಲಿ ವರದಿಯನ್ನು ನೀಡಿತು. ರಾಜ್ಯಗಳು ಕೇಳುತ್ತಿದ್ದ ಬೇಡಿಕೆಯ ಮುಖ್ಯವಾದ ಅಂಶಗಳನ್ನು ಈ ಆಯೋಗವು ಪರಿಹರಿಸುವಲ್ಲಿ ವಿಫಲವಾಯಿತು.
ಹಣಕಾಸು ವಲಯದಲ್ಲಿ ಕೆಲವು ಸಣ್ಣಪುಟ್ಟ ಸುಧಾರಣೆಗಳಿಗೆ ಇದು ಸೀಮಿತವಾಯಿತು: 1. ಟ್ಯಾಕ್ಸ್-ಫ್ರೀ ಬಾಂಡ್‌ಗಳನ್ನು ವಿತರಿಸಲು ಮುನಿಸಿಪಾಲಿಟಿಗಳಿಗೆ ಅಧಿಕಾರ, 2. ಸರಕು ರವಾನೆ ತೆರಿಗೆಗೆ ಮುಖ್ಯಮಂತ್ರಿಯ ತೀರ್ಮಾನಕ್ಕೆ ಒಪ್ಪಿಗೆ, 3. ಓವರ್‌ಡ್ರಾಫ್ಟ್ ಸಾಲ ಮುಂತಾದವುಗಳಿಗೆ ಸಮಯ ವಿಸ್ತರಣೆ ಇತ್ಯಾದಿ. ಇದನ್ನು ಜಾರಿ ಮಾಡುವುದಕ್ಕೇ ಕೇಂದ್ರ ಸರ್ಕಾರ 2 ದಶಕಗಳನ್ನು ತೆಗೆದುಕೊಂಡಿತು.
1990 ರಲ್ಲಿ ರಾಷ್ಟ್ರೀಯ ರಂಗ ಸರ್ಕಾರ ಅಂತರ-ರಾಜ್ಯ ಮಂಡಳಿ (ISC)ಸ್ಥಾಪಿಸಿತು. ಇದರ ಹಲವು ಸಭೆಗಳು ನಡೆದವು. ಆದರೆ ಸಮಸ್ಯೆಗಳ ಪರಿಹಾರಕ್ಕೆ ಬದಲಾಗಿ ಇನ್ನಷ್ಟು ಹೆಚ್ಚಾದವು.
2007 ಏಪ್ರಿಲ್‌ನಲ್ಲಿ ಯುಪಿಎ ಸರ್ಕಾರ ಕೇಂದ್ರ-ರಾಜ್ಯಗಳ ಸಂಬಂಧಗಳ ಬಗ್ಗೆ ಜಸ್ಟೀಸ್ ಎಂ.ಎಂ.ಪುಂಚಿ ಅಧ್ಯಕ್ಷತೆಯಲ್ಲಿ ಆಯೋಗವನ್ನು ರಚಿಸಿತು. ಆದರೆ ಇದರ ಟರ್ಮ್ಸ್ ಆಫ್ ರೆಫರೆನ್ಸ್ (ToR) ಅಲ್ಲಿಯವರೆಗಿನ ಬೇಡಿಕೆಗಳನ್ನು ಪ್ರತಿನಿಧಿಸಲಿಲ್ಲ. ಮುಖ್ಯವಾಗಿ; 1. ತೆರಿಗೆ ಆದಾಯದಲ್ಲಿ ರಾಜ್ಯಗಳ ಪಾಲು ಹೆಚ್ಚಿಸುವಿಕೆ, 2. ಕೇಂದ್ರ ಪ್ರಾಯೋಜಿತ ಸ್ಕೀಂಗಳನ್ನು (CSS) ರಾಜ್ಯಗಳಿಗೆ ವರ್ಗಾಯಿಸುವುದು, 3. ರಾಜ್ಯಗಳ ಸಾಲದ ಹೊರೆಯನ್ನು ಕಳಚುವುದು, ಇವ್ಯಾವುವೂ ಇರಲಿಲ್ಲ. ಬದಲಿಗೆ, ಕಾನೂನು ಮತ್ತು ಸುವ್ಯವಸ್ಥೆಯಲ್ಲಿ ತಾನಾಗಿಯೇ ಮಧ್ಯಪ್ರವೇಶಿಸುವುದು ಮತ್ತು ಕೇಂದ್ರ ಪಡೆಗಳ ನಿಯೋಜನೆ ಇಂತಹ ವಿಚಾರಗಳು ToR ನಲ್ಲಿದ್ದವು.
ಆಡಳಿತಾತ್ಮಕ ಮತ್ತು ಶಾಸನಾತ್ಮಕ ವಿಚಾರಗಳು
1. ಪ.356 ಮತ್ತು 355 ರ ದುರ್ಬಳಕೆ: ಪ.356ನ್ನು ಬಳಸಿ ರಾಜ್ಯ ಸರ್ಕಾರಗಳನ್ನು ವಜಾಗೊಳಿಸಿ ಕೇಂದ್ರದ ನೇರ ಆಡಳಿತವನ್ನು 131 ಬಾರಿ ಹೇರಲಾಗಿರುವ ಪ್ರಕರಣಗಳು ಇದುವರೆಗೆ ನಡೆದಿವೆ. ಆಂಧ್ರ ಪ್ರದೇಶ-2 ಬಾರಿ, ಅರುಣಾಚಲ ಪ್ರದೇಶ-2, ಅಸ್ಸಾಂ-4, ಬಿಹಾರ-8, ದೆಹಲಿ-1, ಗೋವಾ-5, ಗುಜರಾತ್-5, ಹರಿಯಾಣ-3, ಹಿಮಾಚಲ-2, ಜಮ್ಮು ಕಾಶ್ಮೀರ-9, ಜಾರ್ಖಂಡ್-3, ಕರ್ನಾಟಕ-6, ಕೇರಳ-4, ಮಧ್ಯಪ್ರದೇಶ-3, ಮಹಾರಾಷ್ಟ್ರ-3, ಮಣಿಪುರ-10, ಮೇಘಾಲಯ-2, ಮಿಜೋರಾಂ-3, ನಾಗಾಲ್ಯಾಂಡ್-4, ಒರಿಸ್ಸಾ-6, ಪೆಪ್ಸು-1, ಪುದುಚೇರಿ-6, ಪಂಜಾಬ್-8, ರಾಜಾಸ್ಥಾನ್-4, ಸಿಕ್ಕಿಂ-2, ತಮಿಳುನಾಡು-5, ಟ್ರವಾಂಕೂರ್-ಕೊಚ್ಚಿನ್-1, ತ್ರಿಪುರ-3, ಉತ್ತರಪ್ರದೇಶ-9, ಉತ್ತರಾಖಾಂಡ್-2, ವಿಂಧ್ಯಪ್ರದೇಶ-1, ಪಶ್ಚಿಮ ಬಂಗಾಳ-4.
ಇವುಗಳಲ್ಲಿ ಬಹುತೇಕ ರಾಜ್ಯಗಳನ್ನು ಮತ್ತು ಅವುಗಳ ಅಧಿಕಾರವನ್ನು ದುರ್ಬಲಗೊಳಿಸುವ ಪ್ರಯತ್ನಗಳಾಗಿವೆ ಎಂಬುದನ್ನು ಗಮನಿಸಬಹುದು. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಐಕ್ಯತೆಗೆ ಗಂಡಾಂತರ ಮತ್ತು ದೇಶದ ಜಾತ್ಯಾತೀತ ಹಂದರಕ್ಕೆ ಧಕ್ಕೆಯಂತಹ ಸಂದರ್ಭಗಳಲ್ಲಿ ಮಾತ್ರ 356ನ್ನು ಸೀಮಿತಗೊಳಿಸಬೇಕು ಎಂದು ISC ಸಭೆಗಳಲ್ಲಿ ಸಿಪಿಐ(ಎಂ) ಬೇಡಿಕೆಯನ್ನು ಮಂಡಿಸಿತು. ಆದರೆ ಇದುವರೆಗೂ ಕೇಂದ್ರ ಸರ್ಕಾರಗಳು ಹಾಗೆ ಮಾಡಲಿಲ್ಲ. ಈಗ ಹೆಚ್ಚೆಚ್ಚು ರಾಜ್ಯ ಸರ್ಕಾರಗಳನ್ನು ಉರುಳಿಸಲು ಹೊಸ ಟ್ರೆಂಡ್ ಶುರುವಾಗಿದೆ. ಆಳುವ ವರ್ಗಗಳು ನೂತನ ವಿಧಾನಗಳನ್ನು ಕಂಡುಕೊಂಡಿವೆ. ಶಾಸಕರ ಪಕ್ಷಾಂತರ, ರಾಜೀನಾಮೆ ಕೊಡಿಸುವುದು, ಮುಂತಾದ ಕ್ರಮಗಳಿಂದ ರಾಜ್ಯ ಸರ್ಕಾರಗಳನ್ನು ಉರುಳಿಸುವುದು ಹೆಚ್ಚಾಗಿದೆ. ಇದರ ಹೆಚ್ಚಿನ ಶ್ರೇಯಸ್ಸು ಬಿಜೆಪಿಗೆ ಸಲ್ಲುತ್ತದೆ.
ಒಂದು ರಾಜ್ಯದೊಳಗೆ “ಆಂತರಿಕ ಗಲಭೆ” ಎಂಬುದಾಗಿ ಯಾವ ಪರಿಸ್ಥಿತಿಯನ್ನು ಕೇಂದ್ರ ಪರಿಗಣಿಸುತ್ತದೆಯೋ ಅಲ್ಲಿಗೆ, ರಾಜ್ಯಗಳ ಸಮ್ಮತಿ ಇಲ್ಲದೆ ಪ.355 ನ್ನು ಬಳಸಿ ಪ್ಯಾರಾಮಿಲಿಟರಿ ಪಡೆಗಳನ್ನು ನಿಯೋಜಿಸುವ ಕ್ರಮವನ್ನು ಒಪ್ಪಲು ಸಾಧ್ಯವಿಲ್ಲ – ಬಾಹ್ಯ ಆಕ್ರಮಣದ ಸಂದರ್ಭವನ್ನು ಹೊರತುಪಡಿಸಿ, ಪ.356 ರ ರೀತಿಯಲ್ಲೇ ರಾಷ್ಟ್ರೀಯ ಐಕ್ಯತೆಗೆ ಗಂಡಾಂತರ ಮತ್ತು ದೇಶದ ಜಾತ್ಯಾತೀತ ಹಂದರಕ್ಕೆ ಧಕ್ಕೆಯಂತಹ ಸಂದರ್ಭಗಳಲ್ಲಿ ಮಾತ್ರ ಪ.355 ನ್ನು ಬಳಸುವುದಕ್ಕೆ ಸೀಮಿತವಾಗಿರಬೇಕೆಂದು ಸಿಪಿಐ(ಎಂ) ಒತ್ತಾಯಿಸುತ್ತದೆ.
2. ರಾಜ್ಯಪಾಲರ ನೇಮಕ ಮತ್ತು ಪಾತ್ರ
ರಾಜ್ಯಪಾಲರನ್ನು ಕೇಂದ್ರ ನೇಮಿಸುವ ಪದ್ಧತಿಯೇ ಒಕ್ಕೂಟ ಪ್ರಜಾಪ್ರಭುತ್ವ ರಾಜಕಾರಣಕ್ಕೆ ವಿರೋಧವಾದುದು.ರಾಜ್ಯಪಾಲರು ಎಂಬ ಹುದ್ದೆಯೇ ಇರಬೇಕಾಗಿಲ್ಲ. ರಾಜ್ಯಪಾಲ ವ್ಯವಸ್ಥೆ ಇರಬೇಕು ಎಂದಾದಲ್ಲಿ ರಾಜ್ಯದ ಮುಖ್ಯಮಂತ್ರಿ ಕಳಿಸುವ ಸಮರ್ಥ 3 ಜನರ ಹೆಸರುಗಳ ಪೈಕಿ ಒಬ್ಬರಾಗಿರಬೇಕು. ಸರ್ಕಾರಿಯಾ ಅಯೋಗದಲ್ಲಿ ಹೇಳಿರುವ ಮಾನದಂಡ ಪೂರೈಸಬೇಕೆಂದು ಸಿಪಿಐ(ಎಂ) ಪ್ರತಿಪಾದಿಸುತ್ತದೆ.
ರಾಜ್ಯ ಅಸೆಂಬ್ಲಿಗಳು ಅಂಗೀಕರಿಸುವ ಮಸೂದೆಗಳಿಗೆ ರಾಜ್ಯಪಾಲರು ಸಹಿ ಹಾಕಲು ಸಮಯ ಮಿತಿ ಇರಬೇಕು.
ರಾಜ್ಯಪಾಲರು ರಾಜ್ಯದ ವಿಶ್ವವಿದ್ಯಾಲಯಗಳ ಪದನಿಮಿತ್ತ ಕುಲಾಧಿಪತಿ ಎಂಬ ಪದ್ಧತಿಯನ್ನು ತೆಗೆದುಹಾಕುವ ಬಗ್ಗೆ ಪರಿಶೀಲಿಸಬೇಕು.
3. ರಾಜ್ಯಗಳ ಪಟ್ಟಿಯ ಸಬ್ಜೆಕ್ಟ್ಗಳಲ್ಲಿ ಕೇಂದ್ರದ ನುಸುಳುವಿಕೆ
ಕೇಂದ್ರ ಮತ್ತು ರಾಜ್ಯಗಳ ನಡುವೆ ಹಂಚಿಕೆ ಮಾಡಲಾದ 3 ರೀತಿಯ ಅಧಿಕಾರಗಳ ಹಂಚಿಕೆಯು ಸಂವಿಧಾನದ ಏಳನೇ ಷೆಡ್ಯೂಲಿನಲ್ಲಿದ್ದು, ಇದನ್ನು ಆರ್ಟಿಕಲ್ 246 ರಲ್ಲಿ ಪ್ರಸ್ತಾಪಿಸಲಾಗಿದೆ.
1. ಕೇಂದ್ರ ಪಟ್ಟಿ: ಆರಂಭದಲ್ಲಿ 97 ವಿಷಯಗಳಿದ್ದವು, ಈಗ 100 ಇವೆ. ರಾಷ್ಟ್ರೀಯ ರಕ್ಷಣೆ, ಅಂತರರಾಷ್ಟ್ರೀಯ ವಿಚಾರಗಳು, ಸಂಪರ್ಕ, ಹಣ, ಇತ್ಯಾದಿ.2. ರಾಜ್ಯ ಪಟ್ಟಿ: ಆರಂಭದಲ್ಲಿ 66 ವಿಷಯಗಳು ಈ ಪಟ್ಟಿಯಲ್ಲಿದ್ದವು. 1976 ರಲ್ಲಿ ಸಂವಿಧಾನಕ್ಕೆ 42 ನೇ ತಿದ್ದುಪಡಿಯನ್ನು ತರುವುದರ ಮೂಲಕ ರಾಜ್ಯಗಳ ಪಟ್ಟಿಯಲ್ಲಿದ್ದ 5 ಅಧಿಕಾರಗಳನ್ನು ಸಮವರ್ತಿ ಪಟ್ಟಿಗೆ ವರ್ಗಾಯಿಸಲಾಯಿತು. 1. ಶಿಕ್ಷಣ,2. ಅರಣ್ಯ, 3. ತೂಕ ಮತ್ತು ಅಳತೆ, 4. ಕಾಡು ಪ್ರಾಣಿಗಳು ಮತ್ತು ಪಕ್ಷಿಗಳ ರಕ್ಷಣೆ, 5. ನ್ಯಾಯಾಂಗದ ಆಡಳಿತ (ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟುಗಳನ್ನು ಹೊರತುಪಡಿಸಿ, ಉಳಿದೆಲ್ಲಾ ಕೋರ್ಟುಗಳ ನ್ಯಾಯಾಡಳಿತ, ಸಂರಚನೆ ಮತ್ತು ಸಂಘಟನೆ).
2016 ರಲ್ಲಿ ಸಂವಿಧಾನಕ್ಕೆ 101 ನೇ ತಿದ್ದುಪಡಿಯ ಮೂಲಕ ಐಟಂ ನಂಬರ್ 52 (ಅನುಭೋಗ, ಬಳಕೆ ಅಥವಾ ಮಾರಾಟಕ್ಕೆ ಸ್ಥಳೀಯ ಪ್ರದೇಶಗಳಿಗೆ ಸರಕುಗಳ ಪ್ರವೇಶದ ಮೇಲಿನ ತೆರಿಗೆ) ಮತ್ತು 55 ನ್ನು (ಮಾಧ್ಯಮಗಳನ್ನು ಹೊರತುಪಡಿಸಿದ ಜಾಹೀರಾತುಗಳ ಮೇಲಿನ ತೆರಿಗೆ) ತೆಗೆದು ಹಾಕಲಾಗಿದೆ.
3. ಸಮವರ್ತಿ ಪಟ್ಟಿ: ಇದರಲ್ಲಿ ಈಗ 47 ವಿಷಯಗಳಿವೆ. ಕೇಂದ್ರ ಮತ್ತು ರಾಜ್ಯ ಎರಡೂ ಸರ್ಕಾರಗಳು ಈ ಪಟ್ಟಿಯ ವಿಷಯಗಳ ಬಗ್ಗೆ ಶಾಸನಗಳನ್ನು ಮಾಡಬಹುದು. ಸಂಘರ್ಷ ಏರ್ಪಟ್ಟರೆ ಕೇಂದ್ರದ ಶಾಸನ ಊರ್ಜಿತವಾಗುತ್ತದೆ.
ವರ್ಗಾವಣೆಯಾಗಿದ್ದ ರಾಜ್ಯ ಪಟ್ಟಿಯಲ್ಲಿದ್ದ ಸಬ್ಜೆಕ್ಟ್ಗಳು ಸಮವರ್ತಿ ಪಟ್ಟಿಗೆ ವಾಪಸಾಗಲಿಲ್ಲ. ಮಾತ್ರವಲ್ಲ, ರಾಜ್ಯಗಳ ಸಬ್ಜೆಕ್ಟ್ಗಳನ್ನು ಕೇಂದ್ರ ಅತಿಕ್ರಮಿಸುವ ಮತ್ತು ವಶಪಡಿಸಿಕೊಳ್ಳುವ ಪ್ರಕ್ರಿಯೆ ಹೆಚ್ಚುತ್ತಲೇ ಇದೆ. ಮೋದಿ ಸರ್ಕಾರದ ಅವಧಿಯಲ್ಲಂತೂ ಇದು ಮೇರೆ ಮೀರಿದೆ. ಇತ್ತಿಚೆಗಿನ ೩ ಕೃಷಿ ಕಾಯ್ದೆಗಳ ಜಾರಿಯಂತೂ ಸಂಪೂರ್ಣವಾಗಿ ರಾಜ್ಯಗಳ ಶಾಸನಾತ್ಮಕ ಹಕ್ಕಿನ ಸ್ಪಷ್ಟ ಉಲ್ಲಂಘನೆಯಾಗಿದೆ.
4. ಕೇಂದ್ರ ಪ್ರಾಯೋಜಿತ ಸ್ಕೀಂಗಳು (Centrally Sponsored Schemes – CSS) ಉದಾಹರಣೆಗೆ: ಎಂಎನ್‌ರೇಗಾ, ಮುಂತಾದವುಗಳ ಹೆಸರಲ್ಲಿ ರಾಜ್ಯ ಸಬ್ಜೆಕ್ಟ್ಗಳಲ್ಲಿ ಒಳತೂರುವುದನ್ನು ಮತ್ತು ವಿಸ್ತರಿಸುವುದನ್ನು ಕೇಂದ್ರ ಮಾಡುತ್ತಿದೆ. 1969 ರಲ್ಲಿ 45 CSS ಗಳು ಇದ್ದವು. ಐದನೇ ಪಂ.ವಾ.ಯೋ. ಹೊತ್ತಿಗೆ 190 CSS ಆಗಿದ್ದವು. ಇದಕ್ಕೆ ರಾಜ್ಯಗಳಿಂದ ಸಾಕಷ್ಟು ವಿರೋಧ ಬಂದದ್ದರಿಂದ ಆರನೇ ಪಂ.ವಾ.ಯೋ. ಹೊತ್ತಿಗೆ 72 CSS ಗಳನ್ನು ರಾಜ್ಯಗಳಿಗೆ ವರ್ಗಾಯಿಸಲಾಯಿತು. ಕಾಲಾನುಕ್ರಮದಲ್ಲಿ ಮತ್ತೆ ಕೇಂದ್ರದ ನುಸುಳುವಿಕೆ ಜಾಸ್ತಿಯಾಯ್ತು. ಈ ಬಗ್ಗೆ ಅಧ್ಯಯನ ಮಾಡಲು 1985 ರಲ್ಲಿ ಮೊದಲಿಗೆ ಕೆ.ರಾಮಮೂರ್ತಿ ಸಮಿತಿ, ನಂತರ ಪಿ.ವಿ.ನರಸಿಂಹರಾವ್ ಸಮಿತಿ ರಚಿಸಲಾಯಿತು. 51 ನೇ NDC ಸಭೆಯ ತೀರ್ಮಾನದ ಪ್ರಕಾರ 2006 ರಲ್ಲಿ ವರ್ಮಾ ಸಮಿತಿಯನ್ನು ನೇಮಿಸಲಾಯಿತು. ಯೋಜನಾ ಆಯೋಗದ ಮತ್ತು ರಾಜ್ಯಗಳ ಒಪ್ಪಿಗೆ ಇಲ್ಲದೆ CSS ಗಳನ್ನು ಜಾರಿ ಮಾಡದಿರಲು ಮತ್ತು ರಾಜ್ಯ ಬಜೆಟ್‌ಗಳ ಭಾಗವಾಗಿ ಜಾರಿ ಮಾಡಲು ಇದು ಶಿಫಾರಸು ಮಾಡಿತು.
ಶಿವರಾಜ್‌ಸಿಂಗ್ ಚೌಹಾನ್ ನೇತೃತ್ವದ ಮುಖ್ಯಮಂತ್ರಿಗಳ ಸಮಿತಿಯ ವರದಿಯ ಪ್ರಕಾರ, ಕೇಂದ್ರವು 2013 ರಲ್ಲಿದ್ದ ಒಟ್ಟು 66 CSS ಗಳನ್ನು 28 ಕ್ಕೆ ಇಳಿಸಿತು. ಈಗ ಅಂತಿಮವಾಗಿ 29 ಸ್ಕೀಂಗಳಿದ್ದು ಅದರಲ್ಲಿ 6 ಸ್ಕೀಂಗಳು ಕೋರ್ ಆಫ್ ದಿ ಕೋರ್ ಸ್ಕೀಂಗಳಾದರೆ (ರೇಗಾ, ಎಸ್‌ಸಿ, ಎಸ್‌ಟಿ, ಮೈನಾರಿಟಿ, ದುರ್ಬಲ ವರ್ಗಗಳು), ಉಳಿದವುಗಳು ಕೋರ್ (ಹಸಿರು ಕ್ರಾಂತಿ, ನೀಲಿ ಕ್ರಾಂತಿ, ಬಿಳಿ ಕ್ರಾಂತಿ, ಆರ್‌ಎಸ್‌ಬಿವೈ, ಸ್ವಚ್ಛ ಭಾರತ್, ಗ್ರಾಮ ಸಡಕ್, ಇತ್ಯಾದಿ) ಸ್ಕೀಂಗಳಾಗಿವೆ. ಇವುಗಳಲ್ಲಿ ಬಹುತೇಕ ಕೇಂದ್ರ ಮತ್ತು ರಾಜ್ಯದ ನಡುವೆ 60:40 ಅನುಪಾತದಲ್ಲಿಜಾರಿಗೊಂಡವು. ಇದು ಹೀಗೇ ಏರುಪೇರಾಗುತ್ತಾ ಬಂದು, ಕೇಂದ್ರವು ತನ್ನ ಪೂರ್ಣ ಪ್ರಾಯೋಜಿತ ಸ್ಕೀಂಗಳ ಹಣದ ಪಾಲನ್ನು ಕ್ರಮೇಣ ಕಡಿತಗೊಳಿಸಿದೆ ಮತ್ತು ಇದನ್ನು ರಾಜ್ಯಗಳ ಹೊಣೆಗಾರಿಕೆಯನ್ನಾಗಿ ಮಾಡಿದೆ. ಬೇಕಾದ ಸ್ಕೀಂಗಳಿಗೆ ಮತ್ತು ಬೇಕಾದ ರಾಜ್ಯಗಳಿಗೆ ನಿಧಿಯನ್ನು ಹೆಚ್ಚು ವಿನಿಯೋಗಿಸುವ ರಾಜಕೀಯ ಆಟವನ್ನು ಕೇಂದ್ರ ಆಡುತ್ತಿದೆ.
CSS ಗಳನ್ನು ಜಾರಿ ಮಾಡುವಾಗ ರಾಜ್ಯ ಪಟ್ಟಿಯ ವಿಷಯಗಳ ಮೇಲೆ ಕಠಿಣ ನಿಯಮಗಳನ್ನು ವಿಧಿಸಲಾಗಿದೆ. ಇದು ರಾಜ್ಯಗಳ ಹಣಕಾಸು ಮತ್ತು ಸ್ವಾಯತ್ತತೆಯ ಮೇಲೆ ದುಷ್ಪರಿಣಾಮವನ್ನು ಬೀರುತ್ತದೆ. ರಾಜ್ಯಗಳ ಅಭಿವೃದ್ಧಿಯ ಆದ್ಯತೆಯನ್ನು ವ್ಯತ್ಯಾಸ ಮಾಡುತ್ತದೆ. ಆದ್ದರಿಂದಲೇ ರಾಜ್ಯ ಪಟ್ಟಿಯಡಿಯಲ್ಲಿ ಬರುವ ಈಗಿರುವ ಎಲ್ಲಾ ಕೇಂದ್ರ ಸ್ಕೀಂಗಳ ರಚನೆ ಮತ್ತು ಜಾರಿಯನ್ನು ನಿಧಿ ಸಮೇತ ರಾಜ್ಯಗಳಿಗೆ ವರ್ಗಾಯಿಸಬೇಕೆಂದು ಸಿಪಿಐ(ಎಂ) ಒತ್ತಾಯಿಸುತ್ತದೆ.
ರಾಜ್ಯಗಳಿಗೆ ಶಾಸನಗಳನ್ನು ಮಾಡುವ ರೆಸಿಡ್ಯುಯರಿ ಪವರ್ (ರಾಜ್ಯ ಪಟ್ಟಿಯಲ್ಲಿ ಇಲ್ಲದಿರುವ ಸಬ್ಜೆಕ್ಟ್ನಲ್ಲಿ ಶಾಸನ ಮಾಡುವ ಅಧಿಕಾರ) ನೀಡಬೇಕೆಂಬ ಬೇಡಿಕೆಯನ್ನು ಕೇಂದ್ರ ಇದುವರೆಗೂ ಒಪ್ಪಿಲ್ಲ – ಸೇವಾ ವಲಯದಲ್ಲಿ ತೆರಿಗೆ ವಿಧಿಸುವ ರೆಸಿಡ್ಯುಯರಿ ಅಧಿಕಾರವನ್ನು ಸಂಪೂರ್ಣವಾಗಿ ಕೇಂದ್ರವೇ ಬಳಸುತ್ತಿದೆ.
ರಾಜ್ಯ ಅಸೆಂಬ್ಲಿಗಳು ಪಾಸು ಮಾಡಿದ ಮಸೂದೆಗಳ ವಿಚಾರದಲ್ಲಿ ರಾಜ್ಯಪಾಲ/ರಾಷ್ಟ್ರಪತಿ ಅಂಕಿತ ಹಾಕಲು ಖಚಿತ ಕಾಲಮಿತಿ ಇರಬೇಕೆಂಬ ಬೇಡಿಕೆ ಪರಿಗಣನೆ ಆಗಿಲ್ಲ.ಸಮವರ್ತಿ ಪಟ್ಟಿಯಲ್ಲಿನ ಶಾಸನಗಳಿಗೆ ಸಂಬಂಧಿಸಿ ರಾಜ್ಯಗಳು ಮತ್ತು ಕೇಂದ್ರದ ನಡುವೆ ಕಡ್ಡಾಯ ಸಮಾಲೋಚನೆಗೆ ಬೇಕಾದ ಔಪಚಾರಿಕ ಸಾಂಸ್ಥಿಕ ಸಂರಚನೆ ಮಾಡಲಾಗಿಲ್ಲ ಎಂಬುದನ್ನು ಗಮನಿಸಬೇಕು.
5. ಒಪ್ಪಂದಗಳನ್ನು ಮಾಡುವ ಅಧಿಕಾರ
ಈಗ ಅಂತರರಾಷ್ಟಿçÃಯ ಒಪ್ಪಂದಗಳನ್ನು ಮಾಡುವುದು ಪೂರ್ಣವಾಗಿ ಕೇಂದ್ರ ಕಾರ್ಯಾಂಗದ ಅಧಿಕಾರವಾಗಿದೆ. ಇದನ್ನು ಪೂರ್ಣವಾಗಿ ಪುರ‍್ರಚಿಸಬೇಕು. ಅಂತರರಾಷ್ಟಿçÃಯ ಒಪ್ಪಂದಗಳಿಗೆ ಶಾಸನಾತ್ಮಕ ಒಪ್ಪಿಗೆ ಕಡ್ಡಾಯ ಎಂಬುದಾಗಿ ಸಂವಿಧಾನಕ್ಕೆ ತಿದ್ದುಪಡಿ ಮಾಡಬೇಕು. Wಖಿಔ ತರಹದ ಅಂ.ರಾ. ಒಪ್ಪಂದಗಳು “ಕೃಷಿ”ಯಂತಹ ರಾಜ್ಯ ಸಬ್ಜೆಕ್ಟ್ಗಳ ಮೇಲೆ ತೀವ್ರ ಪರಿಣಾಮವನ್ನು ಬೀರುತ್ತದೆ.
ಇಂತಹ ಎಲ್ಲಾ ಸಂದರ್ಭಗಳಲ್ಲಿ ರಾಜ್ಯಗಳ ಜೊತೆ ಸಮಾಲೋಚನೆ ಮತ್ತು ISಅಯ ಸಹಮತವನ್ನು ಕಡ್ಡಾಯ ಮಾಡಬೇಕು.
6. ಅಖಿಲ ಭಾರತ ಸೇವೆಗಳು
ಐಎಎಸ್, ಐಪಿಎಸ್ ಮುಂತಾದ ಸೇವೆಗಳು ಈಗ ಸಂಪೂರ್ಣವಾಗಿ ಕೇಂದ್ರದ ಡೊಮೈನ್‌ನಲ್ಲಿವೆ. ಕೆಲವು ಅಧಿಕಾರಗಳನ್ನು ರಾಜ್ಯಗಳಿಗೆ ವರ್ಗಾಯಿಸಬೇಕು, ಮುಖ್ಯವಾಗಿ ಅಖಿಲ ಭಾರತ ಸೇವೆಗಳ ರೂಲ್ಸ್ ಅಂಡ್ ರೆಗ್ಯುಲೇಷನ್ಸ್ನ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರಗಳಿಗೆ ಹೆಚ್ಚಿನ ಪಾತ್ರ ನೀಡಬೇಕು.
ಹಣಕಾಸು ವಲಯ: ಪರಿಹಾರವಾಗದ ಪ್ರಶ್ನೆಗಳು
ಈ ಪ್ರಶ್ನೆ ಯಾವಾಗಲೂ ಸಮಸ್ಯಾತ್ಮಕವಾದುದಾಗಿದೆ. ನೀರಾವರಿ, ರಸ್ತೆ, ವಿದ್ಯುತ್, ಶಿಕ್ಷಣ, ಆರೋಗ್ಯ ಮುಂತಾದ ಅಭಿವೃದ್ಧಿ ವೆಚ್ಚಗಳು, ಕಾನೂನು ಮತ್ತು ಸುವ್ಯವಸ್ಥೆ, ಸಾಮಾನ್ಯ ಆಡಳಿತ ಮುಂತಾದ ಆಡಳಿತಾತ್ಮಕ ವೆಚ್ಚಗಳಂತಹ ಮುಖ್ಯ ಜವಾಬ್ದಾರಿಗಳು ರಾಜ್ಯ ಸರ್ಕಾರಗಳ ಮೇಲಿವೆ. ರಾಜ್ಯಗಳು ಹಣವಿಲ್ಲದೇ, ಸಂಪನ್ಮೂಲವಿಲ್ಲದೇ ಸೊರಗುತ್ತಿವೆ. ಆದರೆ ಆದಾಯವನ್ನು ಕ್ರೋಢೀಕರಿಸುವ ಹೆಚ್ಚಿನ ಅಧಿಕಾರ ಮತ್ತು ಸಂಪನ್ಮೂಲದ ಕೇಂದ್ರೀಕರಣ ಕೇಂದ್ರದಲ್ಲಿದೆ. ರಾಜ್ಯಗಳು ಹಣಕಾಸು ಮತ್ತು ಆರ್ಥಿಕ ತೀರ್ಮಾನಗಳನ್ನು ಮಾಡುವಲ್ಲಿ ಮೊದಲೇ ಹಲವಾರು ಕೊರತೆಗಳಿದ್ದವು, ಈಗ LPG ನೀತಿಗಳ ನಂತರ ತೀವ್ರಗೊಂಡಿದೆ.
1. ರಾಜ್ಯಗಳಿಗೆ ಕೇಂದ್ರ ತೆರಿಗೆಗಳ ಹಂಚಿಕೆ: ಕೇಂದ್ರ ತೆರಿಗೆ ಪೂಲ್‌ನಿಂದ ಶೇ.50 ರಷ್ಟು ರಾಜ್ಯಗಳಿಗೆ ನೀಡಬೇಕೆಂಬುದು ಬಹಳ ಹಳೆಯ ಬೇಡಿಕೆ.2008 ರಲ್ಲಿ ಇದು ಶೇ.30.5 ರಷ್ಟಿತ್ತು. 14 ನೇ ಹಣಕಾಸು ಆಯೋಗದ ಶಿಫಾರಸಿನ ಪ್ರಕಾರ ಶೇ.32 ರಿಂದ ಶೇ.42 ಕ್ಕೆ ಹೆಚ್ಚಿಸಲಾಗಿದೆ. ಬಹಳ ಪ್ರಚಾರ ನೀಡಿ ಮಾಡಲಾದ ಈ ಘೋಷಣೆಯು ಅಷ್ಟೇನೂ ಪ್ರಯೋಜನವಾಗಲಿಲ್ಲ. ಕೇಂದ್ರ ಸರ್ಕಾರವು ಯೋಜನಾ ಅನುದಾನಗಳಲ್ಲಿ ಕಡಿತ ಮತ್ತು CSS ಗಳ ಕೇಂದ್ರದ ವೆಚ್ಚವನ್ನು ವಿಪರೀತವಾಗಿ ಇಳಿಕೆ ಮಾಡಿತು. ಇದರಿಂದ ರಾಜ್ಯಗಳಿಗೆ ಹೆಚ್ಚು ಮಾಡಲಾದ ಶೇ.10 ತೆರಿಗೆ ಪಾಲನ್ನು ಮತ್ತೊಂದು ರೀತಿಯಲ್ಲಿ ಕಿತ್ತುಕೊಂಡಿತು.
ರಾಜ್ಯಗಳ ನ್ಯಾಯಬದ್ಧ ತೆರಿಗೆ ಪಾಲನ್ನು ವಂಚಿಸಲು ಮೋದಿ ಸರ್ಕಾರ ಈಗ ಮತ್ತೊಂದು ದಾರಿಯನ್ನು ಕಂಡುಕೊಂಡಿದೆ. ಹಣಕಾಸು ಆಯೋಗದ ಆದೇಶದ ಪ್ರಕಾರ ತೆರಿಗೆ ಆದಾಯಗಳನ್ನು ಹಂಚಿಕೊಳ್ಳಬಹುದಾಗಿದ್ದರೂ, ಸೆಸ್ ಮತ್ತು ಸರ್ಚಾರ್ಜ್ಗಳನ್ನು ಇದರಿಂದ ಹೊರಗಿಡಲಾಗಿದ್ದು, ಇದನ್ನು ಪೂರ್ಣವಾಗಿ ಕೇಂದ್ರವೇ ಇಟ್ಟುಕೊಳ್ಳಬಹುದಾಗಿದೆ. (To illustrate, the 2018 budget had reduced the basic excise duty on petrol and diesel by ₹2 per litre and instead raised the road cess levied on petrol and diesel by the same amount. This year, the special additional excise duty and road cess on petrol and diesel have been raised by Re 1 per litre each, both of which will accrue exclusively to the Centre.) ಈ ಪಾರುಗುಂಡಿಯನ್ನು ಬಳಸಿ ಮೋದಿ ಸರ್ಕಾರ ಅಳತೆ ಮೀರಿ ಇಂತಹ ವಿಧಾನವನ್ನು ಅನುಸರಿಸುತ್ತಿದೆ. ಇದರಿಂದ ರಾಜ್ಯಗಳಿಗೆ ಶೇ.10 ಹೆಚ್ಚಿನ ತೆರಿಗೆ ಪಾಲು ಎಂಬುದು ಹಾಸ್ಯಾಸ್ಪದವಾಗಿದೆ. 2018-19 ರಲ್ಲಿ ಅಸಲಿಗೆ ರಾಜ್ಯಗಳಿಗೆ ಸಂದಾಯವಾದ ತೆರಿಗೆ ಪಾಲು ವಾಸ್ತವದಲ್ಲಿ ಶೇ.34 ಮಾತ್ರವಾಗಿದೆ.
2. ತೆರಿಗೆ ವಿಧಿಸುವ ರೆಸಿಡ್ಯುಯಲ್ ಅಧಿಕಾರ: ಈಗ ಕೇಂದ್ರ ವಿಧಿಸುತ್ತಿರುವುದೂ ಸೇರಿದಂತೆ, ಕೆಲವು ಸೇವೆಗಳಿಗೆ ತೆರಿಗೆ ವಿಧಿಸಲು ರಾಜ್ಯಗಳಿಗೆ ಅವಕಾಶ ನೀಡಬೇಕು. ಕೇಂದ್ರ ಸರ್ಚಾರ್ಜ್ಗಳು ಮತ್ತು ಸೆಸ್‌ಗಳನ್ನು ವಿಭಜನಾ (ಡಿವಿಸಿಬಲ್) ಪೂಲ್‌ನ ಭಾಗವಾಗಿಸಬೇಕು. ಕೇಂದ್ರದ ಒಟ್ಟಾರೆ ರೆವಿನ್ಯೂ ಸ್ವೀಕೃತಿ (GTR) ಯಲ್ಲಿ ರಾಜ್ಯಗಳಿಗೆ ಪಾಲು ಸಿಗಬೇಕು.
ಉದಾಹರಣೆಗೆ: 2019-20 ರ ಬಜೆಟ್ ವೆಚ್ಚ (ಕೋಟಿ ರೂಗಳಲ್ಲಿ)
|
164,648 |
|
369,111 |
|
2,461,195 |
|
2,092,084 |
|
15.0 |
|
809,133 |
|
32.9 |
3. ಮಾರುಕಟ್ಟೆಯಿಂದ ಸಾಲ ಎತ್ತುವುದು: ಮಾರುಕಟ್ಟೆಯಿಂದ ಸಾಲ ಪಡೆಯುವ ವಿಚಾರದಲ್ಲಿ ರಾಜ್ಯಗಳಿಗೆ ಹೆಚ್ಚಿನ ಫ್ಲೆಕ್ಸಿಬಿಲಿಟಿ ಮತ್ತು ಸ್ವಾಯತ್ತತೆಯನ್ನು ಒದಗಿಸಲು ಸಂವಿಧಾನದ ಪ.293ನ್ನು ತಿದ್ದುಪಡಿ ಮಾಡಬೇಕು. ಮಾರುಕಟ್ಟೆ ಸಾಲದ ಪ್ರಮಾಣವನ್ನು ಹೆಚ್ಚಿಸಬೇಕು. ಈಗ ರಾಜ್ಯಗಳ ಸಾಲ ಎತ್ತುವ ಮಿತಿಯನ್ನು FRBM ಕಾಯ್ದೆಯಡಿಯಲ್ಲಿ ಕಟ್ಟಿಹಾಕಲಾಗಿದೆ. (1950’ರಲ್ಲಿ ಒಟ್ಟಾರೆ ಮಾರುಕಟ್ಟೆ ಎತ್ತುವಳಿಯಲ್ಲಿ ರಾಜ್ಯಗಳಿಗೆ ಮತ್ತು ಕೇಂದ್ರಕ್ಕೆ ಸಮನಾದ ಪ್ರಮಾಣವಿತ್ತು).
ಕೋವಿಡ್-19 ರ ಪ್ಯಾಕೇಜ್‌ನಲ್ಲಿ ರಾಜ್ಯಗಳು ಈ ವರ್ಷ ತಮ್ಮ ಎಸ್‌ಜಿಡಿಪಿಯ ಶೇ.3 ರ ಮಿತಿಯ ಬದಲಿಗೆ ಶೇ.5 ರಷ್ಟನ್ನು ಮಾರುಕಟ್ಟೆಯಿಂದ ಸಾಲ ಪಡೆಯಲು ಮೋದಿ ಸರ್ಕಾರ ಅವಕಾಶ ನೀಡಿದೆ. ಆದರೆ ರಾಜ್ಯಗಳು ತಾವೇ ತೀರಿಸಬೇಕಾದ ಸಾಲವನ್ನು ಪಡೆಯಲೂ, ಕೇಂದ್ರದ 4 ಷರತ್ತುಗಳನ್ನು ಪೂರೈಸಬೇಕೆಂದು ಹೇಳಿದೆ.
ಇದರ ಪ್ರಕಾರ ಹೆಚ್ಚುವರಿ ಶೇ.2 ರಷ್ಟು ಸಾಲದಲ್ಲಿ ಮೊದಲ ಕಂತಿನ ಶೇ.೦.5 ರಷ್ಟು ಸಾಲ ಎತ್ತಲು ಯಾವುದೇ ಷರತ್ತಿಲ್ಲ. ಮುಂದಿನ ಶೇ.1 ರಷ್ಟು ಸಾಲವನ್ನು ಶೇ.೦.25 ರ ರೀತಿಯಲ್ಲಿ ನಾಲ್ಕು ಕಂತುಗಳಲ್ಲಿ ಪಡೆಯಲು, ಕೇಂದ್ರ ಸರ್ಕಾರ ವಿಧಿಸಿರುವ ನಾಲ್ಕು ಕ್ಷೇತ್ರಗಳಲ್ಲಿನ ಸುಧಾರಣೆಯನ್ನು ಯಾವ ರೀತಿಯಲ್ಲಿ ರಾಜ್ಯ ಸರ್ಕಾರ ಮಾಡುತ್ತದೋ ಅದನ್ನು ಅನುಸರಿಸಿ ಬಿಡುಗಡೆ ಮಾಡಲಾಗುವುದು. ನಾಲ್ಕು ಷರತ್ತುಗಳೆಂದರೆ: 1. ಪಡಿತರ ವ್ಯವಸ್ಥೆ (ಒಂದು ದೇಶ ಒಂದು ರೇಷನ್ ಕಾರ್ಡ್) ಸುಧಾರಣೆ,2. ವ್ಯಾಪಾರ ಸರಳೀಕರಣ ನೀತಿಗಳು (Ease of Doing Business),3. ವಿದ್ಯುತ್ ವಿತರಣಾ ಕಂಪನಿಗಳ ಖಾಸಗೀಕರಣ, ಮತ್ತು 4. ನಗರ ಸ್ಥಳೀಯ ಆಡಳಿತ ಸುಧಾರಣೆಗಳು. ಈ ಕಂತುಗಳನ್ನು ಬಿಡುಗಡೆ ಮಾಡಲು ಈ ಷರತ್ತುಗಳಲ್ಲಿ “ನಿರ್ದಿಷ್ಟ ಪ್ರಮಾಣ”ದ ಸುಧಾರಣೆಗಳು ಅಗತ್ಯ.ಮೇಲಿನ ನಾಲ್ಕು ಷರತ್ತುಗಳಲ್ಲಿ ಮೂರನ್ನು ಜಾರಿ ಮಾಡಿದರೆ ಮಾತ್ರ ನಂತರದ ಶೇ.೦.5 ರಷ್ಟು ಸಾಲ ಎತ್ತಲು ರಾಜ್ಯಗಳಿಗೆ ಅವಕಾಶ.
ಹೀಗಾಗಿ ಹಣಕಾಸು ಕೊರತೆಯಿಂದ ಬಳಲುತ್ತಿರುವ ರಾಜ್ಯಗಳು ಎಷ್ಟು ವೇಗವಾಗಿ ಮತ್ತು ಎಷ್ಟು ಪ್ರಮಾಣದಲ್ಲಿ ನವ-ಉದಾರವಾದಿ ಷರತ್ತುಗಳನ್ನು ಪೂರೈಸುತ್ತವೆ ಎನ್ನುವ ಸಾಮರ್ಥ್ಯದ ಮೇಲೆ ಸಾಲ ಸಿಗುತ್ತದೆ. ಈ ರೀತಿಯಾಗಿ ರಾಜ್ಯಗಳನ್ನು ಅಡಕತ್ತರಿಗೆ ಸಿಕ್ಕಿಸುವ, ದುರ್ಬಲಗೊಳಿಸುವ ಪ್ರಯತ್ನಗಳನ್ನು ಕೇಂದ್ರ ಮಾಡುತ್ತಿದೆ. ವಿಚಿತ್ರವೆಂದರೆ ಈ ರೀತಿ ಮಾರುಕಟ್ಟೆಯಿಂದ ಸಾಲವನ್ನು ಎತ್ತಲು ಕೇಂದ್ರಕ್ಕೆ ಯಾವುದೇ ಅಡ್ಡಿಯಿಲ್ಲ.
4. ತೆರಿಗೆ ವಿನಾಯಿತಿಗಳು: ಕೇಂದ್ರವು ಶ್ರೀಮಂತ ಮತ್ತು ಕಾರ್ಪೊರೇಟ್ ವರ್ಗಗಳಿಗೆನೀಡುವ ತೆರಿಗೆ ವಿನಾಯಿತಿಗಳನ್ನು ಕ್ರಮೇಣ ತೆಗೆದುಹಾಕಬೇಕೆಂದು ಸಿಪಿಐ(ಎಂ) ಪ್ರತಿಪಾದಿಸುತ್ತದೆ. ಉದಾಗೆ: 2018-19 ರ ಕೇಂದ್ರ ಬಜೆಟ್‌ನಲ್ಲಿ ರೂ.1,08,785 ಕೋಟಿಗಳನ್ನು ಕಾರ್ಪೊರೇಟ್‌ಗಳಿಗೆ ಇನ್ಸೆಂಟೀವ್ ಮತ್ತು (ನೇರ ತೆರಿಗೆ, ರಫ್ತು, ಕಂಪನಿ ತೆರಿಗೆ, ಮುಂತಾದ) ತೆರಿಗೆ ವಿನಾಯಿತಿಗಳಾಗಿನೀಡಲಾಗಿದೆ. 2019 ರಲ್ಲಿ ಭಾರತ ತೀವ್ರವಾದ ಆರ್ಥಿಕ ಹಿಂಜರಿತವನ್ನು ಅನುಭವಿಸಲು ಆರಂಭಿಸಿದಾಗ ಮೋದಿ ಸರ್ಕಾರ ಕಾರ್ಪೊರೇಟ್ ತೆರಿಗೆಯನ್ನು ಶೇ.33.5 ರಿಂದ ಶೇ.24 ಕ್ಕೆ ಇಳಿಸಿತು. ಇದರಿಂದ ಸುಮಾರು 1.45 ಲಕ್ಷ ಕೋಟಿ ರೂಗಳನ್ನು ಕಂಪನಿಗಳಿಗೆ ಬಿಟ್ಟುಕೊಡಲಾಯಿತು. ಇದರಿಂದ ಆರ್ಥಿಕತೆಗೆ ನಯಾ ಪೈಸೆ ಪ್ರಯೋಜನವಾಗಲಿಲ್ಲ. ಕಳೆದ ಆರು ವರ್ಷಗಳ ಬಜೆಟ್‌ಗಳಲ್ಲಿ ಮೋದಿ ಸರ್ಕಾರ ಈ ರೀತಿಯಾಗಿ ಬಿಟ್ಟುಕೊಟ್ಟ ತೆರಿಗೆ ಒಟ್ಟಾರೆ 4,32,000 ಕೋಟಿ ರೂಗಳಾಗಿದೆ. (2014-15: ರೂ.65,607 – 2015-16: ರೂ.76,858 – 2016-17: ರೂ.86,146 – 2017-18: ರೂ.93,643 – 2018-19: ರೂ.1,08,785).
ಕೇಂದ್ರದ ಇಂತಹ ಶ್ರೀಮಂತ ಕಾರ್ಪೊರೇಟ್ ಪರವಾದ ನೀತಿಗಳಿಂದಾಗಿ ರಾಜ್ಯಗಳ ತೆರಿಗೆ ಪಾಲು ನಷ್ಟವಾಗುತ್ತದೆ. ಇದನ್ನು ರಾಜ್ಯಗಳಿಗೆ ತುಂಬಿಕೊಡಬೇಕು ಮತ್ತು ಕೇಂದ್ರ ಮತ್ತು ರಾಜ್ಯಗಳು ತೆರಿಗೆ ವಿನಾಯಿತಿಗಳಿಗೆ ಸಂಬಂಧಿಸಿ ಕೆಲವು ಸಾಮೂಹಿಕ ಮಿತಿಗಳನ್ನು ವಿಧಿಸಿಕೊಳ್ಳಬೇಕೆಂಬುದು ಸಿಪಿಐ(ಎಂ)ನ ವಾದವಾಗಿದೆ.
5. ಸಾಲ ಪರಿಹಾರ ಮತ್ತು ಷರತ್ತುಗಳು: ಕೇಂದ್ರ ಸಾಲಗಳಿಗೆ ಸಂಬಂಧಿಸಿ ರಾಜ್ಯಗಳಿಗೆ ನೀಡಲಾಗುವ ಸಾಲ ಪರಿಹಾರವನ್ನು ಯಾವುದೇ ಷರತ್ತುಗಳೊಂದಿಗೆ ಜೋಡಿಸಬಾರದು. (ಈಗ ಅಸ್ಥಿತ್ವದಲ್ಲಿರುವ FRBM ಕಾಯ್ದೆ 2003 ಇಂತಹ ದುರುಪಯೋಗಕ್ಕೆ ಸಹಕಾರಿಯಾಗಿದೆ). ಸಾಲ ಪರಿಹಾರವನ್ನು ನಿರ್ದಿಷ್ಟ ರಾಜ್ಯ ಕೇಂದ್ರಿತವಾಗಿ ರೂಪಿಸಬೇಕು.
6. ಸ್ಥಳೀಯ ಸ್ವಯಂ-ಆಡಳಿತಗಳಿಗೆ ಹಂಚಿಕೆ: GDP ಯ ಒಂದು ಕನಿಷ್ಟ ಮಟ್ಟಕ್ಕೆ ಸ್ಥಳೀಯ ಸ್ವಯಂ ಆಡಳಿತಗಳ ವೆಚ್ಚವನ್ನು ನಿಗದಿಪಡಿಸಬೇಕು. ಈ ರೀತಿ ನಿಗದಿಪಡಿಸಿದ ಹಣವನ್ನು ರಾಜ್ಯ ಸರ್ಕಾರಗಳ ಮೂಲಕವೇ ಹಂಚಬೇಕು.
7. ಹೊಣೆಗಾರಿಕೆ ಮತ್ತು ಪಾರದರ್ಶಕತೆ: ಜನರ ಭಾಗವಹಿಸುವಿಕೆಯ ಮೂಲಕ ಯೋಜನೆ ಮತ್ತು ಜಾರಿ ಉತ್ತಮಪಡಿಸಬೇಕು. ಖಾಸಗಿ ಕಾರ್ಪೊರೇಟ್ ಗುಂಪುಗಳು ಮತ್ತು ಎನ್‌ಜಿಓಗಳನ್ನು, ಯಾರಿಗೆ ಹೊಣೆಗಾರಿಕೆಯಿಲ್ಲವೋ, ಅವರನ್ನು ಆಡಳಿತದಲ್ಲಿ ನೇರ ಪಾಲ್ಗೊಳ್ಳಲು ಅವಕಾಶ ಕೊಡಬಾರದು.
8. ಸಾಂಸ್ಥಿಕ ಪ್ರಶ್ನೆಗಳು: ಸಿಪಿಐ(ಎಂ) ISC ಯ ತೀರ್ಮಾನಗಳು (ಕೇಂದ್ರ ರಾಜ್ಯಗಳಿಗೆ ಸಂಬAಧಿಸಿದ ಎಲ್ಲಾ ವಿಚಾರಗಳೂ ಇಲ್ಲಿ ಚರ್ಚೆಯಾಗಿ ತೀರ್ಮಾನವಾಗಬೇಕು, ವರ್ಷಕ್ಕೆ ಎರಡು ಬಾರಿ ಇದರ ಸಭೆ ಕರೆಯಬೇಕು, ಇತ್ಯಾದಿ) ಕೇಂದ್ರ ಸರ್ಕಾರದ ಮೇಲೆ ಬೈಂಡಿಂಗ್ ಆಗಿರುವ ಹಾಗೆ ಸಂವಿಧಾನಕ್ಕೆ ತಿದ್ದುಪಡಿ ತರಬೇಕೆಂದು ಒತ್ತಾಯಿಸಿತ್ತು.
NDC ಮತ್ತು ISC ಗೆ ಸಂಬಂಧಿಸಿ ಬಿಜೆಪಿ 2014 ರ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿದ್ದು, “ಕೇಂದ್ರ-ರಾಜ್ಯ ಸಂಬಂಧಗಳನ್ನು ಸಮನಾದ ಹಲಗೆಯ ಮೇಲಿಡಲು” ಬಿಜೆಪಿ ಬದ್ಧವಾಗಿದೆ, “ಸೌಹಾರ್ದಯುತ ಕೇಂದ್ರ-ರಾಜ್ಯ ಸಂಬಂಧಗಳಿಗಾಗಿ” ಮತ್ತು “ಮರಣಾವಸ್ಥೆಯಲ್ಲಿರುವ NDC ಮತ್ತು ISC ಯಂತಹ ವೇದಿಕೆಗಳನ್ನು ಪುನಶ್ಚೇತನಗೊಳಿಸಲು ಮತ್ತು ಹೆಚ್ಚು ಕ್ರಿಯಾಶೀಲಗೊಳಿಸಲು ಪ್ರಯತ್ನಿಸುತ್ತದೆ”. ಆದರೆ ಬಿಜೆಪಿ ತನ್ನದೇ ಮಾತುಗಳಿಗೆ ವಿರುದ್ಧವಾಗಿ ನಡೆದುಕೊಂಡಿರುವುದು ನಂತರದ ವರ್ಷಗಳಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ.
9. ರಾಷ್ಟ್ರೀಯ ಅಭಿವೃದ್ಧಿ ಮಂಡಳಿ (NDC) ಮತ್ತು ಯೋಜನಾ ಆಯೋಗ (PC): NDCಗೆ ಸಂವಿಧಾನಿಕ ಸ್ಥಾನಮಾನ ನೀಡಬೇಕು ಮತ್ತು PC ಇದರ ಎಕ್ಸಿಕ್ಯುಟಿವ್ ಆಗಿ ಕಾರ್ಯನಿರ್ವಹಿಸಬೇಕು ಎಂದು ಸಿಪಿಐ(ಎಂ) ಒತ್ತಾಯಿಸಿತ್ತು.
ಕೇಂದ್ರ ಸಾರ್ವಜನಿಕ ರಂಗದ ಉದ್ದಮೆಗಳು, ರೈಲ್ವೆ, ರಾಷ್ಟ್ರೀಯ ಹೆದ್ದಾರಿ, ಬಂದರುಗಳು, ಏರ್‌ಪೋರ್ಟ್ಗಳು ಮುಂತಾದವುಗಳಲ್ಲಿ ಕೇಂದ್ರವು ಹೂಡುವ ಬಂಡವಾಳದಲ್ಲಿ ಅಂತರ್-ರಾಜ್ಯ ಸಮತೋಲನ ಕಾಪಾಡುವ ರೀತಿಯಲ್ಲಿ ಯೋಜನಾ ಆಯೋಗ ಹಣ ಹಂಚಿಕೆ ಮಾಡಬೇಕು ಎಂದು ಹೇಳಿತ್ತು. ಇದು ಇಂದಿಗೂ ಬಹಳ ಮುಖ್ಯವಾದ ಪ್ರಶ್ನೆಯಾಗಿದೆ. ರಾಜ್ಯಗಳ ನಡುವಿನ ಅಸಮತೋಲನ, ಅನಗತ್ಯ ಪೈಪೋಟಿ ಮತ್ತು ರಾಜಕೀಯ ದುರ್ಲಾಭಗಳಿಗೆ ಕಾರಣವಾಗಿದೆ.
ಪಡಿತರ ಹಂಚಿಕೆಯು ರಾಜ್ಯಗಳ ಅಗತ್ಯಕ್ಕೆ ತಕ್ಕ ಹಾಗಿರಬೇಕು. ಏಕಪಕ್ಷೀಯವಾಗಿ ಕೇಂದ್ರ ತೀರ್ಮಾನಿಸುವಂತಿರಬಾರದು. ಇವೆಲ್ಲವುಗಳನ್ನು ಜಾರಿಗೊಳಿಸಲು ಯೋಜನಾ ಆಯೋಗದಲ್ಲಿ ರಾಜ್ಯಗಳ ಪ್ರಾತಿನಿಧ್ಯ ಸಮರ್ಪಕವಾಗಿರಬೇಕು.
ಆದರೆ ಮೋದಿ ಸರ್ಕಾರದ ಪ್ರಸಕ್ತ ಸಂದರ್ಭದಲ್ಲಿ ಯೋಜನಾ ಆಯೋಗ ಹೋಗಿ NITI ಆಯೋಗ ಬಂದಿದೆ. NDC ಸಭೆಗಳೇ ನಡೆಯುತ್ತಿಲ್ಲ. ಮೋದಿ ಇವೆಲ್ಲವನ್ನೂ ಕಳಚಿ ಹಾಕಿದ್ದಾರೆ. ಪರಿಣಾಮವಾಗಿ ಏಕಪಕ್ಷೀಯ ಮತ್ತು ಅತ್ಯಂತ ಕೇಂದ್ರೀಕೃತ ಪರಿಸ್ಥಿತಿ ನಿರ್ಮಾಣವಾಗಿದೆ.
ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿಯವರು ಈ ಬಗ್ಗೆ ಹೇಳಿದ್ದನ್ನು ಇಲ್ಲಿ ಗಮನಿಸಬಹುದು: “With no provision of the National Development Council (NDC), where the chief ministers were making demands for the welfare of their states and with abolition of Planning Commission, now the states will have to go to the PMO with “begging bowl”..
10. ಹಣಕಾಸು ಆಯೋಗ (FC): ಹಣಕಾಸು ಆಯೋಗದ ToR ರೂಪಿಸುವಾಗ ರಾಜ್ಯಗಳ ಅಭಿಪ್ರಾಯ ಪಡೆಯಬೇಕು, ಭಿನ್ನಾಭಿಪ್ರಾಯವಿದ್ದರೆ ಅಂತರ ರಾಜ್ಯ ಮಂಡಳಿ (ISC)ಕರೆದು ತೀರ್ಮಾನಿಸಬೇಕು, ಇದರಲ್ಲಿ ರಾಜ್ಯಗಳ ಪ್ರಾತಿನಿಧ್ಯ ಸಮರ್ಪಕವಾಗಿರಬೇಕು ಎಂದು ಸಿಪಿಐ(ಎಂ) ಒತ್ತಾಯಿಸಿತ್ತು. ರಾಜ್ಯಗಳಇಂತಹ ಒತ್ತಾಯಗಳ ಭಾಗವಾಗಿ 14 ನೇ ಹಣಕಾಸು ಆಯೋಗದ ಶಿಫಾರಸ್ಸನ್ನು ಅನುಸರಿಸಿ 2015 ರಲ್ಲಿ ಡಿವಿಸಿಬಲ್ ಪೂಲ್‌ನಿಂದ ರಾಜ್ಯಗಳ ಪಾಲು ಶೇ.32 ರಿಂದ ಶೇ.42 ಕ್ಕೆ ಹೆಚ್ಚಳ ಮಾಡಲಾಯ್ತು. ಇದನ್ನು ನ್ಯೂಟ್ರಲೈಜ್ ಮಾಡಿರುವ ಅಂಶವನ್ನು ಮೇಲೆ ಚರ್ಚಿಸಲಾಗಿದೆ.
ಆದರೆ ಮುಂದೆ ಮತ್ತೊಂದು ಸಮಸ್ಯೆ ಉದ್ಭವವಾಯ್ತು:15 ನೇ FC ನ ToR 2011 ರ ಜನಸಂಖ್ಯೆಯ ಮಾನದಂಡ ಬಳಸಲು ಉದ್ದೇಶಿಸಿತು. ಇದರಿಂದಾಗಿ ಜನಸಂಖ್ಯೆಯನ್ನು ನಿಯಂತ್ರಿಸಲು ಪ್ರಯತ್ನಗಳನ್ನು ನಡೆಸುತ್ತಿರುವ ಪ್ರಕಾರ ದಕ್ಷಿಣದ ರಾಜ್ಯಗಳಿಗೆ ಸಮಸ್ಯೆಯಾಯಿತು. ಇದರ ಪರಿಣಾಮವಾಗಿ ದಕ್ಷಿಣದ ರಾಜ್ಯಗಳಿಂದ ಸಂಗ್ರಹವಾಗುವ 1 ರೂಪಾಯಿ ತೆರಿಗೆ ಆದಾಯಕ್ಕೆ ಪ್ರತಿಯಾಗಿ ಕೇಂದ್ರದಿಂದ ಕರ್ನಾಟಕ 47 ಪೈಸೆ, ಕೇರಳ 25 ಪೈಸೆ, ತಮಿಳುನಾಡು 40 ಪೈಸೆಮಾತ್ರ ವಾಪಸ್ ಪಡೆದರೆ, ಉತ್ತರ ಪ್ರದೇಶ 1 ರೂ 79 ಪೈಸೆ ಪಡೆಯುತ್ತದೆ. ಇದರ ವಿರುದ್ಧವಾಗಿ 2018 ಏಪ್ರಿಲ್‌ನಲ್ಲಿ ಕರ್ನಾಟಕ, ಆಂಧ್ರಪ್ರದೇಶ, ಕೇರಳ, ಪುದುಚೇರಿ ರಾಜ್ಯಗಳು ಸಭೆ ಸೇರಿ ಪ್ರತಿಭಟಿಸಿದವು. ನಂತರ ಪ.ಬಂಗಾಳ, ದೆಹಲಿ, ಪಂಜಾಬ್ ರಾಜ್ಯಗಳೂ ಸೇರಿಕೊಂಡು ರಾಷ್ಟ್ರಾಧ್ಯಕ್ಷರಿಗೆ ಪತ್ರ ಬರೆದವು.
ಮತ್ತೊಂದು ದೀರ್ಘಾವಧಿ ಪರಿಣಾಮ ಬೀರುವ ToR ಎಂದರೆ, ಹೆಚ್ಚಿನ ಬಂಡವಾಳ ವೆಚ್ಚ, ವಿದ್ಯುತ್ ಕ್ಷೇತ್ರದ ನಷ್ಟವನ್ನು ಇಲ್ಲವಾಗಿಸುವುದು, ನೇರ ಫಲಾನುಭವಿ ವರ್ಗಾವಣೆ (DBT) ಅಳವಡಿಸುವ ಮೂಲಕ “ಉಳಿತಾಯ”ವನ್ನು ಹೆಚ್ಚಿಸುವುದು, ಡಿಜಿಟಲ್ ಆರ್ಥಿಕತೆಯನ್ನು ಉತ್ತೇಜಿಸುವುದು ಇತ್ಯಾದಿ, ವಿವಿಧ ಸೂಚಕಗಳ ಆಧಾರದಲ್ಲಿ ರಾಜ್ಯಗಳ (ಇದು ಕೇವಲ ರಾಜ್ಯಗಳಿಗೆ ಮಾತ್ರ, ಕೇಂದ್ರಕ್ಕೆ ಅನ್ವಯವಲ್ಲ!), ಸಾಧನೆಯನ್ನು ಅಳತೆ ಮಾಡುವುದು. ಆಹಾರ ಸಬ್ಸಿಡಿಗಳು, ರೈತರಿಗೆ ಸಬ್ಸಿಡಿಗಳು, ಇತ್ಯಾದಿಗಳನ್ನು ಕಡಿತ ಮಾಡಿ, ಫಲಾನುಭವಿಗಳನ್ನು ಹೊರಹಾಕಿದ ಹಾಗೆಲ್ಲಾ ರಾಜ್ಯಗಳ ಸಾಧನೆಯನ್ನು ಉತ್ತಮವೆಂದು ಹೇಳುವ ಪ್ರಸ್ತಾವ ಇದಾಗಿದೆ. (ಇತ್ತೀಚಿನ ವಿದ್ಯುತ್ ತಿದ್ದುಪಡಿ ಸುಗ್ರೀವಾಜ್ಞೆ ಇದರ ಮುಂದುವರಿದ ಭಾಗವಾಗಿದೆ – RBI ನ ವರದಿಯನ್ನು ಇಲ್ಲಿ ಗಮನಿಸಬಹುದು).
ToR ನ ಕಂಡಕ 7(viii) ವು, “ರಾಜ್ಯಗಳ ಜನಪ್ರಿಯ ಕ್ರಮಗಳನ್ನು” ನಿಯಂತ್ರಿಸುವ ಬಗ್ಗೆ ಹೇಳುತ್ತದೆ. ಇದು ಸ್ವೇಚ್ಛಾನುಸಾರ ಮಾತ್ರವಲ್ಲ, ರಾಜ್ಯಗಳ ಪಾಲಿಸಿ ತೀರ್ಮಾನಗಳ ಮೇಲೆ ನೇರವಾದ ಮಧ್ಯಪ್ರವೇಶವಾಗಿದೆ. ಜನತೆಗೆ ವಾಗ್ಧಾನಗಳನ್ನು ಪೂರೈಸಲು ಮತ್ತು ಜನತೆಗೆ ಬದ್ಧವಾಗಿರಲು ರಾಜ್ಯಗಳನ್ನು ಇದು ನಿಯಂತ್ರಿಸುವ ಗಂಭೀರವಾದ ಪ್ರಸ್ತಾಪವಾಗಿದೆ.
ಹೊಸ ಪದ್ಧತಿಯೆಂಬಂತೆ ಮೋದಿ ಸರ್ಕಾರ, 15 ನೇ ಈ ಅವರದಿ ನೀಡಲು ಕೆಲವೇ ತಿಂಗಳಿರುವಾಗ ಮತ್ತೊಂದು ಖಿoಖ ನ್ನು ಘೋಷಿಸಿ, “ರಕ್ಷಣೆ ಮತ್ತು ಆಂತರಿಕ ಭದ್ರತೆಗೆ ಪ್ರತ್ಯೇಕವಾದ ಫಂಡಿಂಗ್ ರಚನೆಯನ್ನು ಸ್ಥಾಪಿಸುವ ಬಗ್ಗೆ ಮತ್ತು ಹಾಗಾದಲ್ಲಿ ಅಂತಹ ರಚನೆಯನ್ನು ಕಾರ್ಯಾಚರಿಸುವುದು ಹೇಗೆಂಬ ಬಗ್ಗೆ” ಪರಿಶೀಲಿಸಲು ಮೋದಿ ಸರ್ಕಾರ ಹೇಳಿತು. ಕೇಂದ್ರವು ರಕ್ಷಣೆ-ಆಂತರಿಕ ಭದ್ರತೆಗೆ ಬೇಕಾದ ಹಣವನ್ನು ತನ್ನ ವಾರ್ಷಿಕ ಬಜೆಟ್‌ನಲ್ಲಿ ನೀಡುತ್ತಿದೆ. ಆದರೆ ಹೊಸ ಪ್ರಸ್ತಾಪದ ಪ್ರಕಾರ ಪ್ರತ್ಯೇಕ ಫಂಡಿಂಗ್ ಹೆಸರಲ್ಲಿ ಇರಿಸಲಾಗುವ ಮೊತ್ತವನ್ನು ತೆರಿಗೆಯ ಡಿವಿಸಿಬಲ್ ಪೂಲ್‌ನಿಂದ ಹೊರಗಿಡಲಾಗುವುದು ಮತ್ತು ಆ ಮೂಲಕ ರಾಜ್ಯಗಳಿಗೆ ಸಿಗಬೇಕಾದ ಹಣವನ್ನು ಖೋತಾ ಮಾಡಲಾಗುವುದು. ಇವೆಲ್ಲವೂ ಫೆಡರಲ್ ರಚನೆಯನ್ನು ನಾಶ ಮಾಡುತ್ತಾ ಕೇಂದ್ರೀಕೃತ ವ್ಯವಸ್ಥೆಯನ್ನು ಅಸ್ಥಿತ್ವಕ್ಕೆ ತರುವ ಯೋಜನೆಗಳಾಗಿವೆ. ಇದು ಸಹಕಾರಿ ಫೆಡರಲಿಸಂ ಅಲ್ಲ ಬದಲಿಗೆ ಬೆದರಿಕೆಯ ಫೆಡರಲಿಸಂ ಆಗಿದೆ.
11. RBI ಮತ್ತು ಸಾರ್ವಜನಿಕ ಸಂಸ್ಥೆಗಳು: RBI, NABARD, IDBI, PSU ಬ್ಯಾಂಕ್‌ಗಳ ಕಾರ್ಯನಿರ್ವಹಣೆಯಲ್ಲಿ ರಾಜ್ಯಗಳನ್ನು ಒಳಗೊಳ್ಳಬೇಕು. ಎಲ್ಲಾ ಕೇಂದ್ರೀಯ ಮಂಡಳಿಗಳಲ್ಲಿ ರಾಜ್ಯಗಳ ಪ್ರಾತಿನಿಧ್ಯ ಇರಬೇಕು.
12. ಖನಿಜ ನೀತಿ: ಖನಿಜ ಸಂಪನ್ಮೂಲಗಳಿಗೆ ಸಂಬAಧಿಸಿ, ಅಂತರ್-ರಾಜ್ಯಪೈಪೋಟಿ ಇರುವ ಹಿನ್ನೆಲೆಯಲ್ಲಿ, ಖನಿಜ ಹೊರತೆಗೆಯುವಿಕೆಗೆ ಸಂಬAಧಿಸಿ ಕೆಲವು ಸಾಮಾನ್ಯ ಮಾನದಂಡಗಳನ್ನು ರೂಪಿಸಬೇಕು, ಖನಿಜದ ರಾಯಲ್ಟಿ ದರಗಳನ್ನು ನಿರಂತರವಾಗಿ ಪುನರ್ ನಿಗದಿಪಡಿಸಬೇಕು.
13. ರಾಷ್ಟ್ರೀಯ ವಿಪತ್ತು ನಿಧಿ: ರಾಜ್ಯಗಳಿಗೆ ಕಾರ್ಪಸ್ ನಿಧಿಯನ್ನು ಹೆಚ್ಚಿಸುವಂತೆ ಬದಲಾಯಿಸಬೇಕು.
ಮೋದಿ ಸರ್ಕಾರದ ಒಕ್ಕೂಟ ವಿರೋಧಿ ಪ್ರವೃತ್ತಿಗಳು
ಭಾರತದ ಪ್ರಜಾಪ್ರಭುತ್ವದ ತಳಹದಿಯಾಗಿದ್ದ ಹಲವಾರು ಸಾಂಸ್ಥಿಕ ಮತ್ತು ನಿಯಂತ್ರಣ ಸಂರಚನೆಗಳನ್ನು ಮೋದಿ ಸರ್ಕಾರ ಅತ್ಯಂತ ವೇಗವಾಗಿ ಕಳಚಿಹಾಕುತ್ತಿದೆ.
2014 ರ ಚುನಾವಣೆಯಲ್ಲಿ ಕೇಂದ್ರ-ರಾಜ್ಯಗಳ ಸಂಬಂಧಗಳ ಕುರಿತು ಒಂದು ರೀತಿ ಹೇಳಿದ್ದ ಮೋದಿ, ಒಮ್ಮೆ ಅಧಿಕಾರಕ್ಕೆ ಬಂದ ನಂತರ ಸಂಪೂರ್ಣ ವಿರುದ್ಧವಾಗಿ ನಡೆಯಲು ಆರಂಭಿಸಿದರು. 2014 ಆಗಸ್ಟ್ 15 ರಂದು ತಮ್ಮ ಮೊದಲ ಸ್ವಾತಂತ್ರ್ಯ ಭಾಷಣ ಮಾಡುತ್ತಾ, ಯೋಜನಾ ಆಯೋಗವನ್ನು ಕಳಚಿಹಾಕುವ ತಮ್ಮ ಯೋಜನೆಯನ್ನು ಪ್ರಕಟಿಸಿದರು: ಅದಕ್ಕೆ ಕಾರಣ ಹೇಳಿದ್ದೇನೆಂದರೆ, ಯೋಜನಾ ಆಯೋಗವು, “ಅಪರಿಮಿತವಾದ ಅಧಿಕಾರ ಕೇಂದ್ರೀಕರಣಕ್ಕೆ ಕಾರಣವಾಗಿದೆ” ಎಂದು.
2015 ಜನವರಿಯಲ್ಲಿ ಯೋಜನಾ ಆಯೋಗದ ಬದಲಿಗೆ NITI (National Institute for Transforming India) ಆಯೋಗವನ್ನು ಸ್ಥಾಪಿಸಿದರು. “ರಾಷ್ಟ್ರೀಯ ಹಿತಾಸಕ್ತಿಗಾಗಿ ಒಟ್ಟಾಗಿ ಕಾರ್ಯಾಚರಿಸಲು ರಾಜ್ಯಗಳನ್ನು ತರಲು ಮತ್ತು ಆ ಮೂಲಕ ಸಹಕಾರಿ-ಒಕ್ಕೂಟತ್ವವನ್ನು ಸಾಧಿಸಲು”ಎಂದು ಹೇಳಲಾಯಿತು. ಕ್ಯಾಬಿನೆಟ್ ನಿರ್ಣಯ ಈ ರೀತಿ ಹೇಳಿತು: “ಒಕ್ಕೂಟದ ರಾಜ್ಯಗಳು ಕೇವಲ ಕೇಂದ್ರದ ಅಪೆಂಡೇಜ್‌ಗಳಾಗಿ ಇರಲು ಬಯಸುವುದಿಲ್ಲ”.
ಆದರೆ ಮೋದಿ ಸರ್ಕಾರದ ಸಾಂಸ್ಥಿಕ ಬದಲಾವಣೆಗಳನ್ನು ಮತ್ತು ರಾಜಕೀಯ ಆಚರಣೆಗಳನ್ನು ನೋಡಿದಾಗ, ಹೆಚ್ಚೆಚ್ಚು ಅಧಿಕಾರ ಕೇಂದ್ರೀಕರಣ ಮಾಡುತ್ತಿರುವುದನ್ನು ಕಾಣಬಹುದು.
NITI ಆಯೋಗವು ಅತ್ಯಂತ ದುರ್ಬಲ, ಅಧಿಕಾರಹೀನ ಸಂಸ್ಥೆಯಾಗಿದೆ. ಇದು ಯೋಜನಾ ಆಯೋಗಕ್ಕಿಂತಾ ಸಣ್ಣ ಸಂಸ್ಥೆ. ಬಹುತೇಕ ಡೊಮೈನ್‌ಗಳಲ್ಲಿ ತಜ್ಞತೆಯನ್ನು ಹೊಂದಿಲ್ಲ. ಇದಕ್ಕೆ ಸಂಪನ್ಮೂಲನಗಳಿಲ್ಲ ಮತ್ತು ಗ್ರಾಂಟ್‌ಗಳನ್ನು ನೀಡಲು ಅಧಿಕಾರವಿಲ್ಲ. ಹೀಗಾಗಿ ಹಿಂದೆ ಯೋಜನಾ ಆಯೋಗಕ್ಕಿದ್ದ ಎಲ್ಲಾ ಅಧಿಕಾರಗಳನ್ನುಹಣಕಾಸು ಮಂತ್ರಾಲಯಕ್ಕೆ ಹಸ್ತಾಂತರಿಸಲಾಗಿದೆ.
GST: ಸಂವಿಧಾನದ 101 ನೇ ತಿದ್ದುಪಡಿಯ ಮೂಲಕ 2017 ಜುಲೈನಲ್ಲಿ ಜಾರಿಗೆ ತರಲಾದ ಜಿಎಸ್‌ಟಿ ಬಹಳ ಸ್ಪಷ್ಟವಾದ ಕೇಂದ್ರೀಕೃತ ಪರಿಣಾಮವನ್ನು ಬೀರಿದೆ. ರಾಜ್ಯಗಳ ಮಾರಾಟ ತೆರಿಗೆ, ಸೇವಾ ತೆರಿಗೆ, ಅಬಕಾರಿ ತೆರಿಗೆ ಮುಂತಾದ ಪರೋಕ್ಷ ತೆರಿಗೆಗಳನ್ನು ಒಂದುಗೂಡಿಸಿ, ಎಲ್ಲಾ ಸರಕು ಮತ್ತು ಸೇವೆಗಳಿಗೆ ಕೇಂದ್ರ ತೆರಿಗೆ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ.
ಆರ್ಥಿಕ ನಿಯಮಗಳನ್ನೆಲ್ಲಾ (Fiscal rules) ಸಮನ್ವಯಗೊಳಿಸಿ ರಾಷ್ಟ್ರೀಯ ಮಾರುಕಟ್ಟೆಯನ್ನು ಒಗ್ಗೂಡಿಸುವ ಉದ್ದೇಶವನ್ನು ಇದು ಹೊಂದಿದೆಯೆಂದು ಹೇಳಲಾಯಿತು. ಆದರೆ ರಾಜ್ಯಗಳ ಹಣಕಾಸು ಸ್ವಾಯತ್ತತೆಯನ್ನು ಕಡಿತಗೊಳಿಸಲಾಯಿತು. ಅಲ್ಲಿಯವರೆಗೂ ರಾಜ್ಯಗಳಿಗೆ ತಮ್ಮ ಮಾರಾಟ ತೆರಿಗೆಯ ಪೂರ್ಣ ಜವಾಬ್ದಾರಿಯಿತ್ತು. ಅದನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಏರುಪೇರು ಮಾಡಬಹುದಿತ್ತು.
ಹೆಸರಿಗೆ “ಹಂಚಲ್ಪಟ್ಟ ಸಾರ್ವಭೌಮತೆ ಅಥವಾ ಪರಮಾಧಿಕಾರ” (Shared Sovereignty) ಎನ್ನಲಾಗಿದೆ. ಆದರೆ ಜಿಎಸ್‌ಟಿಯನ್ನು ಒಂದು ಕೌನ್ಸಿಲ್ ನಿಯಂತ್ರಿಸುತ್ತದೆ. ಇದರಲ್ಲಿ ರಾಜ್ಯಗಳಿಗೆ 2/3 ಓಟುಗಳಿವೆ. ಕೇಂದ್ರಕ್ಕೆ 1/3 ಓಟುಗಳಿವೆ. ಇದನ್ನೇ “ಒಕ್ಕೂಟ ತತ್ವಕ್ಕೆ ಬದ್ಧತೆ” ಎನ್ನಲಾಗಿದೆ. ಅಸಲಿ ಸಮಸ್ಯೆ ಏನೆಂದರೆ, ಜಿಎಸ್‌ಟಿ ಕೌನ್ಸಿಲ್‌ನಲ್ಲಿ ತೀರ್ಮಾನವಾಗಬೇಕಾದರೆ 78% ಓಟುಗಳು ಬೇಕು. ಅಂದರೆ, ಕೇಂದ್ರದ 1/3 ಓಟುಗಳಿಲ್ಲದೆ ಯಾವುದೇ ತೀರ್ಮಾನ ಅಸಾಧ್ಯ, ಆಥವಾ 19 ರಾಜ್ಯಗಳು ಸಮ್ಮತಿಸಬೇಕು, ಹೆಚ್ಚಿನ ಸಣ್ಣ ರಾಜ್ಯಗಳನ್ನು ಕೈತಿರುಚಬಹುದು. ಈ ರೀತಿಯಾಗಿ ಜಿಎಸ್‌ಟಿ ಕೌನ್ಸಿಲ್ ವಾಸ್ತವದಲ್ಲಿ ಕೇಂದ್ರೀಕೃತವಾದ ಯಂತ್ರವಾಗಿದೆ.
ISC:ಮೋದಿಯ ಐದು ವರ್ಷಗಳ ಮೊದಲ ಅವಧಿಯಲ್ಲಿ ಇದು ನಾಮಕಾವಸ್ಥೆಗೆ ಒಮ್ಮೆ ಮಾತ್ರ ಸಭೆ ನಡೆಯಿತು. ಇದನ್ನು ವ್ಯವಸ್ಥಿತವಾಗಿ ನಿಷ್ಟ್ರಯೋಜಕವನ್ನಾಗಿ ಮಾಡಲಾಗಿದೆ.
ರಾಜಕೀಯ ಕೇಂದ್ರೀಕರಣ: ಮೋದಿ ಕೇಂದ್ರ ಸರ್ಕಾರ ಮತ್ತು ವಿರೋಧ ಪಕ್ಷಗಳ ನೇತೃತ್ವದ ರಾಜ್ಯ ಸರ್ಕಾರಗಳ ನಡುವಿನ ವೈರುಧ್ಯವು ತೀವ್ರಗೊಂಡಿರುವುದನ್ನು ಈ ಅವಧಿಯಲ್ಲಿ ಕಾಣಬಹುದು. ಉದಾಹರಣೆಗೆ: ಕಳೆದ ವರ್ಷ ಕೇರಳದಲ್ಲಿ ಸಂಭವಿಸಿದ ತೀವ್ರ ನೆರೆ ಹಾವಳಿ ಸಂದರ್ಭದಲ್ಲಿ ಸಂಯುಕ್ತ ಅರಬ್ ಎಮಿರೇಟ್ಸ್ ಸರ್ಕಾರವು (ಕೇರಳದ ವಲಸಿಗ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ದೇಶದಲ್ಲಿದ್ದಾರೆ ಎಂಬ ಕಾರಣಕ್ಕೆ ಕೇರಳದೊಂದಿಗೆ ಉತ್ತಮ ಸಂಬಂಧವಿದೆ) ನೀಡಲು ಬಂದ ಸಹಾಯವನ್ನು ಕೇರಳ ಪಡೆಯಲು ಅವಕಾಶ ಕೊಡಲಿಲ್ಲ.
ಜಮ್ಮು-ಕಾಶ್ಮೀರ: ಜಮ್ಮು-ಕಾಶ್ಮೀರದ ವಿಚಾರದಲ್ಲಿ ಮೋದಿ ಸರ್ಕಾರವು ರಾಜ್ಯವನ್ನು 2 ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಮಾರ್ಪಡಿಸಿತು. ಅಲ್ಲಿದ್ದ ಚುನಾಯಿತ ಶಾಸಕಾಂಗದ ಒಪ್ಪಿಗೆ ಪಡೆಯದೇ ಮಾಡಲಾದ ಈ ತೀರ್ಮಾನ ಒಕ್ಕೂಟ ವ್ಯವಸ್ಥೆ ದೇಶದಲ್ಲಿ ಅಸ್ಥಿತ್ವದಲ್ಲಿ ಇರುವ ಬಗ್ಗೆಯೇ ಅನುಮಾನ ಮೂಡಿಸಿದೆ.
ಹಿಂದೂ ರಾಷ್ಟ್ರಕ್ಕೆ ಬೇಕಾಗಿದೆ ಬಲಿಷ್ಟ ಕೇಂದ್ರದ ಸರ್ವಾಧಿಕಾರಿ ಪ್ರಭುತ್ವ: ಆರ್‌ಎಸ್‌ಎಸ್‌ನ ಹಿಂದೂ ರಾಷ್ಟ್ರವು ಅತ್ಯಂತ ಕೇಂದ್ರೀಕೃತವಾದ ರಾಜಕೀಯ ಸೈದ್ಧಾಂತಿಕ ಪ್ರತಿಪಾದನೆಯಾಗಿದೆ. ಇದಕ್ಕೆ ಪೂರಕವಾದ ಪ್ರಭುತ್ವ ರಚನೆ ಅದಕ್ಕೆ ಅನಿವಾರ್ಯವಾಗಿದೆ. ಹೀಗಾಗಿ, ಸಂವಿಧಾನದಲ್ಲಿ ಅಡಕವಾಗಿರುವ ಅಲ್ಪಸ್ವಲ್ಪ ಮತ್ತು ತೋರಿಕೆಗಾದರೂ ಇರುವ ಒಕ್ಕೂಟದ ಲಕ್ಷಣಗಳನ್ನು ಹಿಂದೆಂದಿಗಿಂತಲೂ ಆಕ್ರಮಣಕಾರಿಯಾಗಿ ನಾಶ ಮಾಡಲು ಪ್ರಯತ್ನಿಸುತ್ತಿದೆ.
ಕಾರ್ಮಿಕ ಕಾನೂನುಗಳ ತಿದ್ದುಪಡಿ, ಕೃಷಿ ಕಾಯ್ದೆಗಳ ತಿದ್ದುಪಡಿ, ಸಂವಿಧಾನಿಕ ಸಂಸ್ಥೆಗಳನ್ನು ದುರ್ಬಲಗೊಳಿಸುವುದು, ಭೂಸುಧಾರಣಾ ಕಾಯ್ದೆಗಳ ತಿದ್ದುಪಡಿ, ಎಪಿಎಂಸಿ ಕಾಯ್ದೆ ತಿದ್ದುಪಡಿ, ವಿದ್ಯುತ್ ಕಾಯ್ದೆ ತಿದ್ದುಪಡಿ, ರಾಜ್ಯಗಳ ಅಧಿಕಾರವನ್ನು ಕಳಚಿ ಹಾಕುವುದು, ಶಿಕ್ಷಣವನ್ನು ಪೂರ್ಣವಾಗಿ ಕೇಂದ್ರೀಕರಿಸಲು ನೂತನ ಶಿಕ್ಷಣ ನೀತಿ- HECI ನ ಸ್ಥಾಪನೆ, ಭಾಷಾ ನೀತಿ-ಒಕ್ಕೂಟದ ಎಲ್ಲಾ ಭಾಷೆಗಳಿಗೆ ಸಮಾನ ಸ್ಥಾನಮಾನ, ಹೀಗೆ ಎಲ್ಲಾ ರಂಗಗಳಲ್ಲೂ ಅತ್ಯಂತ ಕೇಂದ್ರೀಕೃತವಾದ ಪ್ರಭುತ್ವ ಸ್ಥಾಪನೆಗೆ ಮೋದಿ ಸರ್ಕಾರ ಪ್ರಯತ್ನಿಸುತ್ತಿದೆ.
2019-20 ರ ಬಜೆಟ್ ವೆಚ್ಚ (ಕೋಟಿ ರೂಗಳಲ್ಲಿ)
|
204,463 |
|
164,648 |
|
369,111 |
|
2,461,195 |
|
2,092,084 |
|
15.0 |
|
809,133 |
|
32.9 |