-ಅಹಮದ್ ಹಗರೆ
ವಿವೇಕಾನಂದರ ಜನ್ಮ ದಿನಾಚರಣೆಯನ್ನು ರಾಷ್ಟ್ತ್ರೀಯ ಯುವದಿನ ಎಂದೂ ಕೂಡ ಕರೆಯಲಾಗುತ್ತಿದೆ. ಈ ವಿವೇಕಾನಂದರಿಗೂ ಯುವಕರಿಗೂ ಏನು ಸಂಬಂಧ? ಮಕ್ಕಳ ಮೇಲಿನ ಮಮತೆಗಾಗಿ ನೆಹರು ಜನ್ಮದಿನವನ್ನು ಮಕ್ಕಳ ದಿನವೆಂದೂ, ಶಿಕ್ಷಕರಾಗಿದ್ದರಿಂದ ರಾಧಾಕೃಷ್ಣನ್ ಜನ್ಮ ದಿನವನ್ನು ಶಿಕ್ಷಕರ ದಿನವೆಂದೂ, ಇಂಜಿನೀಯರ್ ಆಗಿದ್ದರಿಂದ ವಿಶ್ವೇಶ್ವರಯ್ಯನವರ ಜನ್ಮ ದಿನವನ್ನು ಇಂಜಿನೀಯರಿಂಗ್ ದಿನವೆಂದೂ ಕರೆಯುತ್ತಾರಲ್ಲ ಹಾಗೆ ಏನಾದರು ಥಳುಕು ವಿವೇಕಾನಂದರಲ್ಲಿ ಯುವಜನರೊಂದಿಗೆ ಇದೆಯ? ನಾನು ಡಿವೈಎಫೈ ಅವರ ಸದಸ್ಯತ್ವದ ಆಂದೋಲನದಲ್ಲಿ ಯುವಕರು ಎಂದರೆ ಯಾರು ಎಂದು ಅವರು ಹೀಗೆ ನಿರೂಪಿಸುತ್ತಾರೆ, 18ರ ವಯೋಮಾನದಿಂದ 40ರೊಳಗಿನ ಎಲ್ಲಾ ವಯೋಮಾನದ ಮಾನವ ಪಿಳ್ಳೆಗಳನ್ನೆಲ್ಲಾ ಯುವಕರೆಂದೇ ಕರೆಯುತ್ತಾರೆ, ರಾಜಕಾರಣ ಹಾಗಲ್ಲ 60ರ ಆಸು ಪಾಸಿನಲ್ಲಿರುವವರನ್ನೂ ಕೂಡ ಯುವ ನಾಯಕ ಎಂದೇ ಕರೆಯುತ್ತಾರೆ. ಮಾನವತೆ
ನಾನು ವಿದ್ಯಾರ್ಥಿಯಾಗಿದ್ದಾಗ ವಿವೇಕಾನಂದ ಎಂದರೆ ಸಾಕು ಎರೆಡು ಶಬ್ಧಗಳು ಕಿವಿಯೊಳಗೆ ಸಂಚಯನಗೊಳಿಸುತ್ತಿದ್ದವು ಈಗಲೂ ಕೂಡ ಹುಡುಗರಿಗೆ ಆ ಸಂಚಲನ ಮೂಡಿಸಿರಲಿಕ್ಕೂ ಸಾಕು. ಒಂದು ಯುವಜನರೇ ಏಳಿ, ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ ಇನ್ನೊಂದು ಅಣ್ಣ ತಮ್ಮಂದಿರೆ, ಅಕ್ಕ ತೆಂಗಿಯರೆ ಆಥವ ಸೋದರ ಸೋದರಿಯರೆ ಶಬ್ಧವನ್ನು ಭೂಲೋಕದೊಳಗೆೆ ಒಕ್ಕಣೆಯಾಗಿ ಪರಿಚಯಿಸಿದ ಮೊದಲ ಮಾನವ ಜೀವಿ ಸ್ವಾಮಿ ವಿವೇಕಾನಂದ. ಈ ಎರೆಡೂ ಶಬ್ಧಗಳು ಭಿನ್ನ ಭಿನ್ನ ಅಭಿವ್ಯಕ್ತಿಯನ್ನು ಪ್ರತಿನಿಧಿಸುತ್ತದೆ. ಮೊದಲ ಶಬ್ಧ ಯುವಜನರೇ ಏಳಿ, ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ ಎನ್ನುವುದು; ಮೈಮನಗಳನ್ನು ರೋಮಾಂಚನಗೊಳಿಸುವ ಕರೆ, ಅಪಾಯ ಬಂದೊದಗಿದೆ ಭಾರತಕ್ಕೆ, ಭಾರತದ ಜನಸಮುದಾಯಕ್ಕೆ, ಭಾರತೀಯತ್ವಕ್ಕೆ. ಈ ಭಾರತದ ಮಾನಮರ್ಯಾದೆಯನ್ನ ಹಸಿವು-ರೋಗ, ಅಸಮಾನತೆ-ಅಸ್ಪೃಷ್ಯತೆ, ಕಂದಾಚಾರ-ಮೂಢನಂಬಿಕೆ, ಜಾತಿ-ದಬ್ಬಾಳಿಕೆಗಳ ಗುಲಾಮಗಿರಿಯಿಂದ ಮುಕ್ತಗೊಳಿಸಿ ನವ ಸಮಾಜವ ಕಟ್ಟಲು ಮುನ್ನುಗ್ಗಿ ಎಂದು ಸ್ಪಷ್ಠ ಮತ್ತು ಬಿರುಸು ಹಾಗೂ ರಾಜಿಯಿಲ್ಲದ ಎಚ್ಚರಿಕೆಯನ್ನು ವಿಶೇಷವಾಗಿ ಯುವ ಜನಾಂಗಕ್ಕೆ ನೀಡಿದರು. ಮಾನವತೆ
ಇದನ್ನೂ ಓದಿ: ಸಾಮಾಜಿಕ ವಿವೇಕವೂ ವಿವೇಕರ ಸಂದೇಶವೂ ವಿವೇಕಾನಂದರ ಜನ್ಮದಿನದಂದು ಕಳೆದುಕೊಂಡ ವಿವೇಚನೆಯನ್ನು ಮರಳಿ ಪಡೆಯಬೇಕಿದೆ
ಏಕೆಂದರೆ ನವ ಸಮಾಜವನ್ನು ಕಟ್ಟುವ ಹೊಣೆ ಯುವಜನರದ್ದು. ಅಪ್ಪನ ಆಲದ ಮರಕ್ಕೆ ಬಿಗಿದುಕೊಂಡಿದ್ದ ಯುವಜನ ಸಮುದಾಯ ಬದಲಾದ ಕಾಲಕ್ಕನುಗುಣವಾಗಿ ದೇಶವನ್ನು ಕಟ್ಟ ಬೇಕಾಗಿದ್ದುದು ಅನಿವಾರ್ಯವಾಗಿತ್ತು. ಈ ಯುವ ಜನ ವೈಚಾರಿಕತೆಯ ಅಸ್ತ್ರವನ್ನಿಡಿದು, ಮಾನವತ್ವದ ಮಂತ್ರದಿಂದ ಭಾರತದೊಳಗೆ ನುಸುಳಿರುವ ಅಮಾನವೀಯ ಪರಂಪರೆಗಳೆನ್ನೆಲ್ಲಾ ನುಚ್ಚುನೂರುಗೊಳಿಸಿ ಜಾತಿಯೇ ಇಲ್ಲದ ಪ್ರೀತಿ-ಪ್ರೇಮದ ನಾಡನ್ನು ಕಟ್ಟಲಿ ಎನ್ನುವ ಘೋಷಮಂತ್ರ ಅದರಲ್ಲಡಗಿತ್ತು. ಅದಕ್ಕಾಗಿ ಯುವಜನರನ್ನೆ ಅವರು ನೆಚ್ಚಿಕೊಂಡಿದ್ದು. ಮಾನವತೆ
ಎರಡನೆಯ ವಾಣಿ ಅಣ್ಣ ತಮ್ಮಂದಿರೆ, ಅಕ್ಕ ತೆಂಗಿಯರೆ ಆಥವ ಸೋದರ ಸೋದರಿಯರೆ ಮಾನವ ಕುಲ ತಾನೆಲ್ಲಾ ಒಂದೇ ವಲಂ ಎನ್ನುವ ಪಂಪನ ವಿಚಾರಧಾರೆಯ ಮುಂದಿನ ಭಾಗ ಇಡೀ ಮಾನವ ಕುಲ ಹುಟ್ಟಿನಿಂದ ಸಮಾನರು ಎಂದು ನಿರೂಪಿಸಿದ ಇಂಗ್ಲೇಂಡಿನ ಚಿಂತಕ ವಿಜ್ಞಾನಿ ಫ್ರಾನ್ಸಿಸ್ ಬೇಕನ್ನನ ಕ್ರಾಂತಿಕಾರಿ ವಿಚಾರ ಸರಣಿಯ ಸ್ಪೂರ್ತಿಯ ಮುಂದುವರಿಕೆಯ ಭಾಗ ಮನುಷ್ಯ ಮನುಷ್ಯನನ್ನ ಪ್ರೀತಿಯಿಂದ ಗೌರವದಿಂದ ಕಾಣುವ ಎಲ್ಲರೂ ಒಂದೇ ಎಂಬ ಸಮಾನತಾ ಭಾವವನ್ನು ತೋರುವುದೇ ಮಾನವ ಜನಾಂಗದ ಗುರಿ ಹಾಗೂ ಬೆಳವಣಿಗೆ ಮೂಲ ಎಂದು ಖಾತ್ರಿಪಡಿಸಿದ ಶಬ್ಧಗಳು. ಮಾನವತೆ
ಈ ಎರೆಡು ಶಬ್ಧಗಳು ಜಗದಾದ್ಯಾಂತ ಭಾರತದ ಸಾಂಸ್ಕೃತಿಕತೆಯನ್ನು ವಿವೇಕಾನಂದರ ಜೊತೆ ಸಾಕ್ಷ್ಷೀಕರಿಸಲು ಮೊಳಗಿಸಿತು. ಮತ್ತು ವಿವೇಕಾನಂದ ಮಾನವತೆಗಾಗಿ ಖಾವಿಯೊಳಗೇ ಕುದಿದ ಭಾರತದ ಏಕೈಕ ಸಂತ ಎಂದು ಪ್ರಚುರಪಡಿಸಿತು, ಮಾತ್ರವಲ್ಲ ಮಾನವ ಕಲ್ಯಾಣದಲ್ಲಿ ಧರ್ಮ ಮತ್ತು ಧಾರ್ಮಿಕತೆಯ ನೆಲೆಗಟ್ಟನ್ನೂ ಸಹ ಒದಗಿಸಿಕೊಟ್ಟ ಶಬ್ಧ ಶಕ್ತಿಗಳು. ಹಿಂದೆಂದೂ ಹಿಂದೂ ಧರ್ಮದ ವಕ್ತಾರರು ಈ ಶಬ್ಧಗಳನ್ನು ಎಲ್ಲಿಯೂ ಬಳಸಿಲ್ಲ ಈಗಲೂ ಬಳಸುತ್ತಿಲ್ಲ.
ಹಿಂದೂ ಧರ್ಮವನ್ನು ಅದರ ಮಹತ್ವವನ್ನೂ ಜಗತ್ತಿಗೆ ತೋರಿಸಿಕೊಟ್ಟ ಭಯಂಕರ ಭಾಷಣಕಾರ ಎಂದೂ ಕೂಡ ಕೆಲ ಪುರೋಹಿತ ಮನಸ್ಸಿನ ಹಿಂದುತ್ವವಾದಿಗಳು ಪ್ರಚಾರ ಮಾಡಿದ್ದಾರೆ ಅದೇ ವಾಕ್ಯ ನಮ್ಮ ಕಿವಿಗೂ ಆ ದಿನಗಳಲ್ಲಿ ಬಿದ್ದಿದ್ದು. ಭಾರತವನ್ನು ಕಂಡರೆ ಹೀನ ಮನೋಭಾವದಿಂದ ಕಾಣುತ್ತಿದ್ದ ಪರಕೀಯರು ಕಡೆಗಳಿಗೆಯಲ್ಲಿ ಭಾರತಕ್ಕೆ 5ನಿಮಿಷಗಳ ಅವಕಾಶ ನೀಡಿದರು ಜನ ಎದ್ದೆದ್ದು ಹೋಗುತ್ತಿದ್ದರು ಆಗ ವಿವೇಕಾನಂದರ ಈ ಎರೆಡು ಶಬ್ಧಗಳು ಎಲ್ಲರನ್ನು ಅಲ್ಲಿಯೇ ಕೂರಿಸಿತು ಎಂದು ಭಾವನಾತ್ಮಕವಾಗಿ ಅವರು ತುರುಕಿದ್ದ ಭಾಷಣ ಅರ್ಧ ಸತ್ಯ ಎಂದು ಅರಿತದ್ದು ನಾವು ದೊಡ್ಡವರಾದ ಮೇಲೆಯೇ. ಮಾನವತೆ
ಖಾವಿಗೇನಾದರೂ ಗೌರವ, ಘನತೆ ಬಂದಿದ್ದರೆ ಅದು ವಿವೇಕಾನಂದ ಒಬ್ಬರಿಂದಲೇ, ಖಾವಿಯೊಳಗೆ ಹುದುಗಿರುವ ಮಾನವಪ್ರೇಮವನ್ನು ಜಗತ್ತಿಗೆ ಅವರೊಬ್ಬರನ್ನುಳಿದು ಇನ್ನಾವ ಖಾವಿಧಾರಿಯೂ ಮಾಡಿಲ್ಲ ಎನ್ನುವುದು ಬೆಳಕಿನಷ್ಟೇ ಸತ್ಯ (ಖಾವಿ ಧರಿಸದವರು ನೂರಾರು ಜನ ಮಾಡಿದ್ದಾರೆ)
ಸ್ವಾಮೀಜಿ ಎನ್ನುವ ಶಬ್ಧಕ್ಕೆ ಭಕ್ತಿ ಹಾಗೂ ಗೌರವ ತಂದುಕೊಟ್ಟವರು, ಧರ್ಮಕ್ಕೆ ನಿಜವಾದ ಜವಾಬ್ಧಾರಿಯನ್ನು ತಿಳಿಸಿದವರು ನಮ್ಮ ವಿವೇಕಾನಂದರು.
ತೀವ್ರ ಸಂಕಷ್ಠ ಹಾಗೂ ಬರಗಾಲದ ಕಾಲಘಟ್ಟದಲ್ಲಿ ಭಾರತದಲ್ಲಿ ಅದೂ ಕಲ್ಕತ್ತಾದ ಬಡ ಹಾಗೂ ಶೋಷಣಾ ಪ್ರದೇಶದಲ್ಲಿ ಜನಿಸಿದ ವಿವೇಕಾನಂದ ಮಾನವ ಕಲ್ಯಾಣಕ್ಕಾಗಿ ಪ್ರತಿನಿತ್ಯ ಪೂಜೆ, ಪುನಸ್ಕಾರ, ಹೋಮ, ಮಂತ್ರಗಳು, ಪುರಾಣಗಳ ಪಠನಾ ಕಾರ್ಯ ಜರುಗಿದ್ದರೂ ಹಸಿವು ನೀಗಿಸದ ಧರ್ಮ-ದೇವರ ಕುರಿತು ಬಾಲ್ಯದಲ್ಲೇ ಜಿಗುಪ್ಸೆ ಹೊಂದಿದ್ದ ನರೇಂದ್ರದತ್ತ ವಿವೇಕಾನಂದನಾಗಿ ಬೆಳೆದದ್ದು ಬುದ್ಧ ಅರಮನೆಯಿಂದ ಜನರ ಕಷ್ಠ-ಕಾರ್ಪಣ್ಯಗಳಿಗೆ ಬೀದಿಗೆ ಅರಸಿಬಂದಂತೆ. ಅಸ್ಪೃಷ್ಯತೆ, ಅಸಮಾನತೆ, ಕಂದಾಚಾರ, ಅಮಾನವೀಯತೆಯ ಸಿದ್ಧಾಂತವನ್ನು ಸೀಳಿ. ಹಳ್ಳಿ-ಹಳ್ಳಿ ಸುತ್ತಿ, ದೇಶ-ವಿದೇಶ ಪ್ರಯಾಣಿಸಿ ಜನರ ಸಮಸ್ಯೆಯ ಮೂಲ ಹಸಿವು ಎಂದು ಅರಿತುಕೊಂಡ ಭಾರತದ ಕಾರ್ಲ್ ಮಾರ್ಕ್ಸ್. ವ್ಯತ್ಯಾಸ ಇಷ್ಠೆ ಈತ ಭಾವವಾದಿ, ಮಾರ್ಕ್ಸ ಭೌತವಾದಿ. ಹೀಗಾಗಿ ತನ್ನ ವೇದಾಂತದ ಜ್ಞಾನವನ್ನೆಲ್ಲಾ ಭಾರತದ ಧರಿದ್ರನಾರಾಯಣರ ಸೇವೆಗಾಗಿ ಅರ್ಪಿಸಲು ಹಗಲಿರುಳು ಯೋಚಿಸಿದ ಮಾಹನುಭಾವ. ಭಾರತದ ನೋವನ್ನು ಎದೆಯಾಳದಲ್ಲಿ ತುಂಬಿಕೊಂಡು ಕನ್ಯಾಕುಮಾರಿಯ ಕಡಲನ್ನು ಈಜಿ ಈಜಿ ಬಂಡೆಗಲ್ಲನ್ನೇರಿ ಧ್ಯಾನಸ್ಥನಾಗಿ ಯೋಚಿಸಿದ್ದು ಶಿವನ ಕುರಿತಲ್ಲ, ವಿಷ್ಣುವಿನ ಕುರಿತೂ ಅಲ್ಲ, ಬ್ರಹ್ಮ ಜ್ಞಾನಕ್ಕಂತೂ ಅಲ್ಲವೇ ಅಲ್ಲ. ವಿವೇಕಾನಂದ ಧ್ಯಾನಿಸಿದ್ದು ಏನು ಅನ್ನುವುದನ್ನು ರಾಷ್ಟ್ರಕವಿ ಕುವೆಂಪು ತಮ್ಮ ಸ್ವಾಮಿ ವಿವೇಕಾನಂದ ಪುಸ್ತಕದಲ್ಲಿ ಹೀಗೆ ದಾಖಲಿಸಿದ್ದಾರೆ.
ಅರಸರ ಅರಮನೆಗಳಲ್ಲಿ ಸಜ್ಜೆಗಳ ಮೇಲೆ ಪವಡಿಸಿದ್ದೇನೆ.
ತಿರುಕರ ಗುಡಿಸಲುಗಳಲ್ಲಿ ನೆಲದ ಮೇಲೆ ಮಲಗಿದ್ದೇನೆ.
ಭಾರತಮಾತೆಯನ್ನು ಅಪಾದಮಸ್ತಕ ಅರಿತಿದ್ದೇನೆ.
ಐಶ್ವರ್ಯದಲ್ಲಿ ಓಲಾಡುತ್ತಿರುವ ಪಶ್ಚಿಮ ದೇಶಗಳಿಗೆ ಹೋಗುವೆನು ನನ್ನ ಮೇಧಾ ಶಕ್ತಿಯಿಂದ ಧನಾರ್ಜನೆ ಮಾಡುವೆನು, ಸನ್ಯಾಸಿ ಧರ್ಮಕ್ಕೆ ವಿರುದ್ಧವಾಗಿ ಧನ ಸಂಪಾದನೆ ಮಾಡುವೆನು, ಧರಿದ್ರನಾರಾಯಣರ ಸೇವೆ ಮಾಡುವೆನು. ಮಾನವತೆ
ವಿವೇಕಾನಂದ ವಿದೇಶ ಯಾತ್ರೆ ಮಾಡಿದ್ದು ಸರ್ವಧರ್ಮ ಸಮ್ಮೇಳನದ ಪ್ರತಿನಿಧಿಯಾಗಿ ಅಲ್ಲ ಕನ್ಯಾಕುಮಾರಿಯ ಬಂಡೆಯ ಮೇಲೆ ಭಾರತದ ಬಡತನಕ್ಕೆ ಸಿಕ್ಕು ಸೊರಗುತ್ತಿರುವ ದೀನ-ದಲಿತರ ಮತ್ತು ಮಹಿಳೆಯರ ಸೇವೆಗಾಗಿ ಹಣ ಸಂಪಾದಿಸಲು. ವಿವೇಕಾನಂದ ವಿದೇಶಕ್ಕೆ ಹೋಗಲು ಧನ ಸಹಾಯ ಮಾಡಿದ್ದು ಅಂದಿನ ಭಾರತ ಸರ್ಕಾರವೂ ಅಲ್ಲ, ಹಿಂದೂ ಧರ್ಮ ಸಂಸ್ಥೆಗಳೂ ಅಲ್ಲ (ಹಿಂದೂ ಧರ್ಮ ಸಂಸ್ಥೆಗಳು ಆಗಿನ್ನೂ ವಿವೇಕಾನಂದನ್ನು ಸ್ವಾಮಿ ಎಂದು ಮಾನ್ಯವೂ ಮಾಡಿರಲಿಲ್ಲ) ಒಬ್ಬ ಸಾವಂತ ರಾಜ ಮೇತ್ರಿ ಮಹರಾಯರು ವಿಶೇಷ ಎಂದರೆ ಅಮೇರಿಕದ ಚಿಕಾಗೋದಲ್ಲಿ ನಡೆಯಬೇಕಿದ್ದ ವಿಶ್ವ ಧರ್ಮಸಮ್ಮೇಳನ ಮೂರುತಿಂಗಳು ಮುಂದೂಡಿದ್ದು ಅವರನ್ನು ಅನಿವಾರ್ಯವಾಗಿ ಅಲ್ಲೇ ಉಳಿಯುವಂತೆ ಮಾಡುತ್ತದೆ ಹಣಕಾಸಿನ ಅಭಾವದಲ್ಲಿ ಒದ್ದಾಡುತ್ತಿರುವಾಗ ವಿದೇಶಿ ಮಹಿಳೆ ಕಾಟೆಸಾನ್ಬಾರ್ನ್ ಹಾಗೂ ಜೆ.ಎಚ್ ರೈಸರ ಸಹಾಯದಿಂದ ವಿಶ್ವ ಧರ್ಮ ಸಮ್ಮೇಳನದಲ್ಲಿ ಭಾಗಿಯಾಗಲು ಅವಕಾಶ ಲಭಿಸುತ್ತದೆ. ಮಾನವತೆ
ಅಲ್ಲಿ ವಿವೇಕಾನಂದರ ಭಾಷಣ ಆಕಸ್ಮಿಕ ಭಾರತವನ್ನು ಪ್ರತಿನಿಧಿಸಿದ್ದ ಧರ್ಮ ಬೀರುಗಳು ಆಗಲೇ ತಮ್ಮ ಪ್ರವಚನ ನೀಡಿಯಾಗಿರುತ್ತದೆ. ವಿವೇಕಾನಂದ ಚಿಕಾಗೋದಲ್ಲಿ ಮಾಡಿದ ಆಕಸ್ಮಿಕ ಭಾಷಣ ಹಿಂದೂಧರ್ಮದ ಸರ್ವ ಶ್ರೇಷ್ಠತೆಯದ್ದಲ್ಲಾ ಭಾರತ ದೇಶದ ಪರಂಪರೆ, ಈ ಪರಂಪರೆಯಲ್ಲಿ ಎಲ್ಲಾ ಧರ್ಮಗಳನ್ನು ಸಾಕಿ ಬೆಳೆಸಿದ ಭಾರತ ಎಂಬ ನೆಲದ ವೈಶಾಲ್ಯತೆ ಹಾಗೂ ಸರ್ವಧರ್ಮ ಸಮನ್ವಯದ ಏಕೈಕ ನಾಡು ಹೇಗಾಯಿತೆಂದು ಅಂಕಿ ಅಂಶ ಸಮೇತ ಎಳೆ ಎಳೆಯಾಗಿ ಬಿಡಿಸಿ ಹೇಳಿದ ಪರಿ ಅಲ್ಲಿದ್ದ ದಾರ್ಶನಿಕರನ್ನ ಬೆರೆಗುಗೊಳಿಸಿದ್ದು; ನಂತರವೇ ವಿವೇಕಾನಂದ ಮನೆಮಾತಾಗಿದ್ದು. ಮಾನವತೆ
ವಿವೇಕಾನಂದ ತೀವ್ರಗಾಮಿ ಸನ್ಯಾಸಿಯಾಗಲು ಪ್ರಮುಖ ವೈಜ್ಞಾನಿಕ ಕಾರಣ ಬುದ್ದನ ತರುವಾಯ ಭಾರತದ ತುಂಬ ಪುರೋಹಿತಶಾಹಿಗಳ ಮನುಧರ್ಮದ ಕರ್ಮಸಿದ್ಧಾಂತ ಮಾನವರ ಪುರೋಗಾಮಿ ಬೆಳವಣಿಗೆಗೆ ತಡೆ ಒಡ್ಡಿತು. 8ನೇ ಶತಮಾನದಲ್ಲಿ ಶಂಕರಾಚಾರ್ಯರ ವೇದಾಂತದ ಸಿದ್ಧಾಂತವನ್ನು ಅದ್ವೆತಗೊಳಿಸಿ ಮಿಥ್ಯಾವಾದ ತತ್ವವನ್ನು ಜನಮಾನಸದಲ್ಲಿ ರಾಜಾಶ್ರಯದ ಮೂಲಕ ಬಿತ್ತಿ ಭಾರತದ ತತ್ವಶಾಸ್ತ್ರವನ್ನು ಅಕ್ಷರಶಃ ನಿರ್ವೀರ್ಯಗೊಳಿಸಿತು. ಜಾತಿಪದ್ಧತಿ, ಅಸ್ಪೃಷ್ಯತೆ ಮತ್ತು ಮಹಿಳಾ ದಮನ ನೈತಿಕತೆಯಾಯಿತು. ಸುಮಾರು 300ವರ್ಷಗಳ ಕಾಲ ಭಾರತವನ್ನು ತುಳಿದು ಹಾಕಿದ ಆದಿಶಂಕರರ ವೇದಾಂತ ಸಿದ್ಧಾಂತ ಮುಸಲ್ಮಾನರು ಭಾರತವನ್ನು ಆಳಲು ಸಲಭದಾರಿ ಮಾಡಿಕೊಟ್ಟಿತು. ಜನಸಾಮಾನ್ಯರಿಗೆ ಭಾರತದಲ್ಲಿ ಮಹಮದಿಯರ ವಿಜಯ ದೀನ-ದುರ್ಬಲರಿಗೆ ಮುಕ್ತಿಯಂತೆ ಬಂತು ಜಮೀನ್ದಾರರ ಉಪಟಳ, ಪುರೋಹಿತರ ಹಿಂಸೆಯಿಂದ ಮುಸಲ್ಮಾನರಾದರು ಎಂದು ವಿವೇಕಾನಂದ ವಿವರಿಸಿದ್ದಾರೆ. ಮಾನವತೆ
ಮುಸ್ಲಿಂ ಅರಸರ ಧರ್ಮಾಂಧತೆ ಮತ್ತು ಭಾರತೀಯ ಹಿಂದೂ ಪಾಳೆಗಾರರ ಹಾಗೂ ಪುರೋಹಿತರ ದಮನಕಾರಿ ಸಿದ್ಧಾಂತ ಬ್ರಿಟೀಷರು ಈ ಭಾರತವನ್ನು ನಿರಾಯಾಸವಾಗಿ ವಶಪಡಿಸಿಕೊಳ್ಳಲು ಸಾಧ್ಯವಾಯಿತು. ಇಂಗ್ಲೀಷರ ಹೊಸ ಶಿಕ್ಷಣ, ಯೂರೋಪಿನ ವೈಚಾರಿಕ ಕ್ರಾಂತಿ ಭಾರತದ ಹೊಸಪೀಳಿಗೆಗೆ ಪ್ರಾಚೀನ ಸ್ಥಗಿತ ಭಾರತದ ಹಂಗು ಮುರಿದು ಹೊಸ ಸಮಾಜ ಕಟ್ಟುವ ಅನಿವಾರ್ಯತೆಯನ್ನು ಸೃಷ್ಠಿಸಿತು. ಆ ಹಿನ್ನಲೆಯಲ್ಲೇ ರಾಜರಾಂ ಮೋಹನರಾಯ್, ಈಶ್ವರಚಂದ್ರವಿದ್ಯಾಸಾಗರ್, ರಾನಡೆಯಂತಹವರು ಆಧುನಿಕ ಭಾರತ ನಿರ್ಮಾಣಕ್ಕೆ ಭಾರತದ ಸಂಸ್ಕೃತಿಯಲ್ಲಿ ಹಾಸು ಹೊಕ್ಕಾಗಿ ಬೆಳೆದು ನಿಂತಿದ್ದ ಅಸ್ಪೃಷ್ಯತೆ, ಜಾತಿ ಪದ್ಧತಿ, ಸತಿ-ಸಹಗಮನ, ಬಾಲ್ಯವಿವಾಹದಂತಹ ಅನಿಷ್ಠಗಳ ವಿರುದ್ಧ ಸಾಮಾಜಿಕ ಮತ್ತು ಸಾಂಸ್ಕೃತಿಕ ಯುದ್ಧ ಸಾರಿದರು. ಈ ಪುನರುಜ್ಜೀವನದ ಆಂದೋಲನದ ಅತ್ಯಂತ ಪ್ರಬುದ್ಧ ಸುಧಾರಕನಂತೆ ವಿವೇಕಾನಂದ ಬೆಳೆದು ಬಂದರು. ಮಾನವತೆ
ಯಾವ ವೇದಾಂತ ಶಂಕರಾಚಾರ್ಯರಿಗೆ ಭಾರತವನ್ನು ಜಾತಿ ವ್ಯವಸ್ಥೆಯ ಶ್ರೇಣೀಕೃತ ಪಾಳೆಗಾರಿ ವ್ಯವಸ್ಥೆ ಕಟ್ಟಲು ಸಾಧ್ಯವಾಯಿತೋ ಅದೇ ವೇದಾಂತವನ್ನು ವಿವೇಕಾನಂದ ಜಾತಿ ನಿರ್ಮೂಲನೆ ಮಾಡಿ ಉದಾರವಾದಿ ಬಂಡವಾಳಶಾಹಿ ಸಮಾಜ ನಿರ್ಮಾಣಕ್ಕೆ ಬಳಸಿಕೊಂಡರು. ಯಾವ ಧರ್ಮವನ್ನು ಅಸ್ಪೃಷ್ಯತೆ ಮತ್ತು ಉಚ್ಚ-ನೀಚ ಎಂದು ವರ್ಗೀಕರಿಸಲು ಹಿಂದೂ ಧರ್ಮದ ಋಷಿಮುನಿಗಳು ದರ್ಮಕ್ಕೆ ವರ್ಣಬೇಧದ ಪರಿಭಾಷೆ ನೀಡಿದರೋ ಅದೇ ಧರ್ಮಕ್ಕೆ ವಿವೇಕಾನಂದ “ಆತ್ಮ”ದ ಪರಿಭಾಷೆ ನೀಡಿದರು. ಚಿಕಾಗೋದಲ್ಲಿ ಅವರು ಮಾಡಿದ ಭಾಷಣದಲ್ಲಿ ಹಿಂದೂ ಎಂಬ ಶಬ್ಧ ಎಲ್ಲಿಯೂ ಬಳಸಲಿಲ್ಲ ಭಾರತೀಯ ಧರ್ಮವನ್ನಷ್ಟೇ ಬಳಸಿದ್ದು ಅಲ್ಲಿ “ಆತ್ಮ”ಕ್ಕೆ ಅನಾದಿ, ಅನಂತ, ನಿತ್ಯಶುದ್ಧ, ನಿತ್ಯಮುಕ್ತ ಎಂದು ನಿರ್ವಚಿಸಿ ಆತ್ಮವು ವಿಶ್ವದ ಸರ್ವ ಜೀವಿಗಳಲ್ಲಿ ನೆಲೆಸಿದೆ ಎಂದು ಸಾವ್ರತ್ರೀಕರಿಸುತ್ತಾರೆ. ಮಾನವತೆ
ಧರ್ಮ ದೇವಸ್ಥಾನ ಕಟ್ಟುವುದರಲ್ಲಿಲ್ಲ ಅಥವ ಸಾಮಾಜಿಕ ಪೂಜೆಗೆ ಹೋಗುವದರಲ್ಲಿಯೂ ಇಲ್ಲ ಅದು ಗ್ರಂಥದಲ್ಲಿಲ್ಲ ಮಾತಿನಲ್ಲೂ ಇಲ್ಲ, ಉಪವಾಸದಲ್ಲಿಲ್ಲ ಅಥವ ಸಂಸ್ಥೆಯಲ್ಲೂ ಇಲ್ಲ ಧರ್ಮವೆಂದರೆ ಸಾಕ್ಷಾತ್ಕಾರ(ಬರಗೂರರ ಲೇಖನದ ಉಲ್ಲೇಖ) ಎಂದು ವಿವರಿಸಿ ಮೂರ್ತಿ ಪೂಜೆ ಹಾಗೂ ಮಠ ಸಂಸ್ಕೃತಿಯನ್ನು ವಿರೋಧಿಸಿ ಸುಂದರ ಪದಸಂಯೋಜನೆಯಿದ ಧರ್ಮದ ಪರಿಭಾಷೆಯನ್ನು ವಿವರಿಸಿ ಮತಸಿದ್ಧಾಂತವೆಂದು ತಿಳಿಸಿರುವ ಮಾತಿನ ಮಲ್ಲರಿಂದ ಬಹುದೂರ ಹೋಗಬೇಕು ಎಂದು ಸರ್ವಧರ್ಮ ಸಮ್ಮೇಳನದಲ್ಲಿ ಕರೆಕೊಡುತ್ತಾರೆ. ಮಾನವತೆ
ಚಿಕಾಗೋದಲ್ಲಿ ಮತಾಂತರಕ್ಕಾಗಿ ಭಾರತಕ್ಕೆ ಪಾದ್ರಿಗಳನ್ನು ಕಳುಹಿಸುವ ಯೂರೋಪಿನ ದೇಶದ ಧರ್ಮ ಮುಖಂಡರಿಗೆ ಕೇಳುತ್ತಾರೆ ನೀವು ಕ್ರಿಶ್ಚಿಯನ್ನರು ಭಾರತೀಯರ ಆತ್ಮ ಸಂರಕ್ಷಣೆಗೋಸ್ಕರ ಪಾದ್ರಿಗಳನ್ನು ಕಳುಹಿಸುತ್ತೀರಿ ಆದರೆ ಹೊಟ್ಟೆಗಿಲ್ಲದೆ ಸಾಯುವವರ ದೇಹ ಸಂರಕ್ಷಣೆಯೇಕೆ ಮಾಡಲು ಪ್ರಯತ್ನಿಸುವುದಿಲ್ಲವೆಂದು ಪ್ರಶ್ನಿಸುತ್ತಾರೆ. ಅಲ್ಲಿ ನೆರೆದ ಯೂರೋಪಿಯನ್ನರಿಗೆ ಈ ಮಾತು ನಾಚಿಕೆಯಿಂದ ತತ್ತರಿಸುವಂತೆ ಮಾಡುತ್ತದೆ ಬಹುಶಃ ಈ ಕಾರಣಕ್ಕಾಗೇ ಮಿಷನರಿ ಶಿಕ್ಷಣ ಸಂಸ್ಥೆಗಳು ನಂತರದಲ್ಲಿ ಭಾರತಕ್ಕೆ ಬಂದಿರಬೇಕು. ಮಹಾಜನರೇ ಭಾರತಕ್ಕೆ ಬೇಕಾಗಿರುವುದು ಧರ್ಮೋಪದೇಶವಲ್ಲ ಹಸಿದ ಹೊಟ್ಟೆಗೆ ಅನ್ನ ಎಂದು ಮಾರ್ಮಿಕವಾಗಿ ನುಡಿಯುತ್ತಾರೆ ಹಾಗಾಗಿಯೇ ಹಸಿದ ಹೊಟ್ಟೆಗೆ ಧರ್ಮೋಪದೇಶ ಒಂದು ಮಹಾ ನೀಚ ಕಾರ್ಯ ಹಾಗೆಯೇ ವೇದಾಂತ ಬೋದಿಸುವುದೂ ಒಂದು ಅಧಮ ಪಾಪ ಎಂದು ಭಿನ್ನವಿಸುತ್ತಾರೆ. ಮಾನವತೆ
ಅಪ್ಪಟ ಪ್ರಜಾಪ್ರಭುತ್ವವಾದಿಯಾಗಿದ್ದ ವಿವೇಕಾನಂದ ಧರ್ಮವನ್ನು ರಾಜಕೀಯದ ಜೊತೆ ಬೆರೆಸುವುದನ್ನು ಬಲವಾಗಿ ವಿರೋಧಿಸುತ್ತಿದ್ದರು, ಭಾರತ ಹಾಳಾಗಿದ್ದೇ ಧರ್ಮರಾಜಕಾರಣದಿಂದ ಎಂದು ಅರ್ಥಮಾಡಿಕೊಂಡಿದ್ದರು. ಹಾಗಾಗಿ ಶೂದ್ರರಾಜ್ಯದ ಕನಸನ್ನು ಕಂಡಿದ್ದ ಅವರು ಸಮಾಜವಾದ(ಸೋಷಿಯಲಿಸಂ), ಶೂನ್ಯವಾದ(ನಿಹಿಲಿಸಂ), ಅರಾಜಕತವಾದ(ಅನಾರ್ಕಿಸಂ) ಮುಂದಾಗಲಿರುವ ಸಾಮಾಜಿಕ ಕ್ರಾಂತಿಯ ಅರುಣೋದಯ ಎಂದು ಭವಿಷ್ಯ ನುಡಿಯುತ್ತಾರೆ.
ಭಾರತವನ್ನು ಜಾತಿಹೀನತೆಯಿಂದ ಮುಕ್ತಗೊಳಿಸಲು ಅಹರ್ನಿಶಿ ದುಡಿದ ಸಾಮಾಜಿಕ ಕಾರ್ಯಕರ್ತ, ಮಹಿಳೆಯರ ಸಮಾನತೆಗಾಗಿ ನಿರಂತರ ಹೋರಾಡಿದ ಹೋರಾಟಗಾರ, ಕರ್ಮಸಿದ್ಧಾಂತವನ್ನು ಕಿತ್ತು ಹಾಕಿ ಮಾನವತ್ವದ ನೆಲೆಗಟ್ಟಿನಲ್ಲಿ ಸಮಾಜಕಟ್ಟಲು ಶ್ರಮಿಸಿದ ಕ್ರಾಂತಿಕಾರಿ, ಧರ್ಮ ಸಾಮರಸ್ಯಕ್ಕಾಗಿ ಹಗಲಿರುಳು ದುಡಿದ ಸಂತ ಆತ ಕಂಡಿದ್ದು “ಬಾರತದ ಏಳಿಗೆಗೆ ವೇದಾಂತದ ಮೆದುಳು ಇಸ್ಲಾಮಿನ ದೇಹಬೇಕು” ಎಂದು ಪರಿಭಾವಿಸಿ ದುಡಿದ ಮಹಾತ್ಯಾಗಿಯ ಭಾವಚಿತ್ರವನ್ನು ಧರ್ಮಗಳನಡುವೆ ಕಿಚ್ಚನ್ನಚ್ಚಿ ಕೋಮುಕಲಹವೆಬ್ಬಿಸುವವವರು ಧಂಡಿಯಾಗಿ ಬಳಸುತ್ತಿರುವುದು ಮಾನವಂತರೆಲ್ಲಾ ನಾಚಿಕೆ ಪಟ್ಟುಕೊಳ್ಳಬೇಕಾದ ಸ್ಥಿತಿ. ಕೋಮುವಾದಿಗಳ ತೆಕ್ಕೆಗೆ ಹೋಗುತ್ತಿರುವ ಸರ್ವಜನಾಂಗದ ಏಕೈಕ ಸಂತ ವಿವೇಕಾನಂದರನ್ನು ಜಾತ್ಯಾತೀತವಾದಿಗಳು, ಪ್ರಜಾಪ್ರಭುತ್ವವಾದಿಗಳು, ಮಾನವತಾವಾದಿಗಳು ಹೊರತರಬೇಕಾಗಿದೆ. ಜಾತೀ ದ್ರುವೀಕರಣಗೊಳ್ಳುತ್ತಿರುವ ಇಂದಿನ ಭಾರತದ ಸಂದರ್ಭದಲ್ಲಿ ವಿವೇಕರ ವಿಚಾರಧಾರೆ ಭಾರತವನ್ನು ರಕ್ಷಿಸಲು ಸಾದ್ಯ.
ಇದನ್ನೂ ನೋಡಿ: ದೇಶದ ಮೊದಲ ಮುಸ್ಲಿಂ ಶಿಕ್ಷಕಿ | ಫಾತಿಮಾ ಶೇಖ್ : ಶಿಕ್ಷಣಕ್ಕೆ ಅವರ ಕೊಡುಗೆಗಳೇನು? ವಿಶ್ಲೇಷಣೆ : ಕೆ. ಪರೀಫಾ