ಕೆನ್‌ ಲೋಚ್‌ರ ಸಂವೇದನೆಗಳ ʼ ದಿ ಓಲ್ಡ್‌ ಓಕ್‌ ʼ ಸಿನಿಮಾ

– ಮ ಶ್ರೀ ಮುರಳಿ ಕೃಷ್ಣ

 

ಕಳೆದ ವರ್ಷ ಲೋಕಾರ್ಪಣೆಗೊಂಡ ʼ ದಿ ಓಲ್ಡ್ಓಕ್ ʼ ಸಿನಿಮಾ ಇತ್ತೀಚೆಗೆ ಜರುಗಿದ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (BIFFES-15)ದಲ್ಲಿ  ಪ್ರದರ್ಶಿತಗೊಂಡಿತ್ತು.  ಇದನ್ನು ನಿರ್ದೇಶಿಸಿರುವ ಇಂಗ್ಲೆಂಡಿನ ಪ್ರಸಿದ್ಧ ನಿರ್ದೇಶಕ ಕೆನ್‌ ಲೋಚ್‌ ಅವರಿಗೆ ಪ್ರಸ್ತುತ 87ರ ಹರೆಯ! ಅವರ ಪ್ರಥಮ ಫೀಚರ್‌ ಫಿಲ್ಮ್‌ ʼ ಪೂರ್ಕೌ ʼ ಸುಮಾರು 57 ವರ್ಷಗಳ ಹಿಂದೆ ಬಿಡುಗಡೆಯಾಯಿತು! ಅಂದಿನಿಂದ ಇಂದಿನವರೆಗೂ ಒಂದು ಮೂಲದ ಅನ್ವಯ ಅವರು 28 ಫೀಚರ್‌, 30 ಟೆಲಿ ಮತ್ತು 4 ಡಾಕ್ಯುಮೆಂಟರಿ ಫಿಲ್ಮ್ ಗಳನ್ನು ನಿರ್ದೇಶಿಸಿದ್ದಾರೆ!  ಅವರು ನಿರಂತರವಾಗಿ ಇಂಗ್ಲೆಂಡಿನ ದುಡಿಯುವ ಮಂದಿಗೆ ಸಂಬಂಧಿಸಿದ ವಸ್ತುಗಳ ಸುತ್ತ ಸಾಮಾಜಿಕ ವಾಸ್ತವತೆಯ ಸಿನಿಮಾಗಳನ್ನು ಕಟ್ಟುತ್ತ ಬಂದಿದ್ದಾರೆ.   ʼ ದಿ ಓಲ್ಡ್ಓಕ್‌ ʼ ಬಹುಶಃ ಅವರ ಕೊನೆಯ ಸಿನಿಮಾ ಎಂದು ಕೆನ್‌ ಲೋಚ್‌ ಅವರೇ ಕಾನ್‌ ಚೊನಚಿತ್ರೋತ್ಸವದಲ್ಲಿ ಹೇಳಿದ್ದಾರೆ.  ಅವರ ಬಗೆಗೆ ಪ್ರಸ್ತಾಪಿಸುವಾಗ ಫಿನ್‌ಲ್ಯಾಂಡಿನ ಹೆಸರುವಾಸಿ ಸಿನಿಮಾ ನಿರ್ದೇಶಕ ಅಕಿ ಕೌರಸ್‌ಮಕಿ ನೆನಪಿಗೆ ಬರುತ್ತಾರೆ.  ಅವರ ಅನೇಕ ಸಿನಿಮಾಗಳು ಫಿನ್‌ಲ್ಯಾಂಡಿನ ಡುಡಿಯುವ ಮಂದಿಯ ಕಥೆಗಳನ್ನು ಹೊಂದಿವೆ.  BIFFES-15ರಲ್ಲಿ ನಮ್ಮ ದೇಶದ ಪರ್ಯಾಯ ಸಿನಿಮಾರಂಗದಲ್ಲಿ ಹೆಸರನ್ನು ಗಳಿಸಿರುವ 94 ವರ್ಷದ ಎಂ ಎಸ್‌ ಸತ್ಯು ಅವರಿಗೆ ಜೀವಮಾನದ ಸಾಧನೆ ಪ್ರಶಸ್ತಿಯನ್ನು ನೀಡಲಾಯಿತು.  ಆ ಸಂದರ್ಭದಲ್ಲಿ ಅವರು ಯಾರಾದರೂ ಹಣವನ್ನು ಹಾಕಿದರೇ, ಇಂದು ಸಹ  ನಾನು ಸಿನಿಮಾ ನಿರ್ದೇಶಿಸಲು ರೆಡಿ…..” ಎಂದು ಹೇಳಿದರು! ಇಂತಹವರ ಕ್ರಿಯಾಶೀಲತೆ/ಸೃಜನಶೀಲತೆಗೆ ಒಂದು ಸಲಾಮು. ದಿ ಓಲ್ಡ್‌ ಓಕ್‌

ಕೆನ್‌ ಲೋಚ್‌ರ ಸಂವೇದನೆಗಳ ʼ ದಿ ಓಲ್ಡ್‌ ಓಕ್‌ ʼ ಸಿನಿಮಾ

ʼ ದಿ ಓಲ್ಡ್ಓಕ್ ʼ ಸಿನಿಮಾ ಸಿರಿಯಾದ ವಲಸಿಗ ಯುವತಿ(ಆಕೆ, ಆಕೆಯ ತಾಯಿ ಮತ್ತು ಒಡಹುಟ್ಟಿದವರು ಇಂಗ್ಲೆಂಡಿಗೆ ವಲಸೆ ಬಂದಿರುತ್ತಾರೆ. ಆಕೆಯ ತಂದೆ ಸಿರಿಯಾದಲ್ಲಿ ಬಂಧನದಲ್ಲಿರುತ್ತಾನೆ) ಯಾರ( ಎಬ್ಲಾ ಮಾರಿ) ತೆಗೆಯುವ ಪೋಟೊಗಳ ಸ್ವೀಕೆನ್ಸ್‌ ಮೂಲಕ ಶುರುವಾಗುತ್ತದೆ.  ಜನರು ಮಾತನಾಡುವುದು ಕೇಳಿ ಬರುತ್ತದೆ.  ಆಕೆಯ ಕ್ಯಾಮರ ಸ್ಥಳೀಯ ಪುಂಡರ ಗುಂಪಿನ ಒಬ್ಬನಿಂದ ಜಖಂಗೆ ಒಳಗಾಗುತ್ತದೆ.  ಸಿನಿಮಾದ ಮುಂದಿನ ನಡೆಗಳ ಬಗೆಗೆ ಸೂಕ್ಷ್ಮವಾಗಿ ಸೂಚಿಸುತ್ತದೆ ಈ ಘಟನೆ.  ಇಂಗ್ಲೆಂಡಿನ ಈಶಾನ್ಯ ಭಾಗದ ಡರ್ಹಂ ಕೌಂಟಿಯ ಒಂದು ನಿಶ್ಚೇತನಗೊಂಡ ಹಳ್ಳಿಯಲ್ಲಿ ಈ ಸಿನಿಮಾದ ಕಥೆ ಜರಗುತ್ತದೆ(2016). ಕೆಲವು ದಶಕಗಳ ಹಿಂದೆ ಇದೇ ಸ್ಥಳದಲ್ಲಿ ಗಣಿಗಾರಿಕೆ ಜೋರಾಗಿ ನಡೆದಿರುತ್ತದೆ.  ಹಳ್ಳಿ, ಹಳ್ಳಿಗರು ಅಭಿವೃದ್ಧಿಯನ್ನು ಹೊಂದಿರುತ್ತಾರೆ.  ಆದರೆ ತರುವಾಯ ಇಳಿಕೆಯ ಹಾದಿ ಶುರುವಾಗುತ್ತದೆ.  ಹಳೆಯ ಉತ್ತಮ ದಿನಗಳನ್ನು ನೆನಪಿಸುವ ʼದಿ ಓಲ್ಡ್‌ ಓಕ್‌ ʼಎಂಬ ಒಂದು ಪಬ್ ಮಾತ್ರ ಹಳೆಯ ಕಟ್ಟಡವೊಂದರಲ್ಲಿ ಇರುತ್ತದೆ.  ಪ್ರಾರಂಭದ ಹಂತದಲ್ಲೇ ಅದರ ಮಾಲೀಕ ಟಿ ಜೆ ಬಲ್ಲನ್‌ಟೈನ್(ಡೆವ್‌ ಟರ್ನರ್) ಪಬ್‌ ಮುಂದೆ ದೊಡ್ಡ ಅಕ್ಷರಗಳ ʼದಿ ಓಲ್ಡ್ಓಕ್ʼನ  ಕೆಳಕ್ಕೆ ವಾಲಿರುವ ʼ ಕೆ ʼ ಅಕ್ಷರವನ್ನು ಒಂದು ಉದ್ದನೆಯ ಕೋಲಿನ ಮೂಲಕ ಸರಿಪಡಿಸುತ್ತಾನೆ. ಆತನ ದುಸ್ಥಿತಿಯಲ್ಲಿರುವ ಕಟ್ಟಡ, ಹಳ್ಳಿ ಮತ್ತು ಸಿರಿಯಾದ ವಲಸಿಗರ ಬಗೆಗೆ ಅನೇಕ ಹಳ್ಳಿಗರು ತೋರಿಸುವ ಕ್ಝೆನೊಫೋಬಿಯಾ(Xenophobia), ಜನಾಂಗವಾದ ಇತ್ಯಾದಿಗಳ ಮುನ್ಸೂಚನಾ ಮೆಟಫರ್‌ ಅಗಿ ಇದು  ಕಾಣಿಸುತ್ತದೆ. ಟಿ ಜೆ ಬಲ್ಲನ್‌ಟೈನ್ ನನ್ನು  ಎಲ್ಲರೂ ಟಿ ಜೆ ಎಂದೇ ಸಂಬೋಧಿಸುತ್ತಿರುತ್ತಾರೆ. ದಿ ಓಲ್ಡ್‌ ಓಕ್‌

ಟಿ ಜೆ ಮತ್ತು ಇತರ ಕೆಲವು ಮಂದಿ ಸಿರಿಯಾದ ಯುದ್ಧಭೂಮಿಯಿಂದ ತಮ್ಮ ಹಳ್ಳಿಗೆ ವಲಸೆ ಬಂದ ಮಂದಿಗೆ ಕೆಲವು ಸಾಮಾನು ಸರಂಜಾಮುಗಳ ಮತ್ತು ಇತರ ಪದಾರ್ಥಗಳನ್ನು ನೀಡುವುದರ ಮೂಲಕ ಸಹಾಯವನ್ನು ಮಾಡುತ್ತಿರುತ್ತಾರೆ.  ಆ ಪ್ರಕ್ರಿಯೆಯಲ್ಲಿ ಟಿ ಜೆ  ಯಾರಾಳ ಕ್ಯಾಮರಾವನ್ನು ರಿಪೇರಿ ಮಾಡಿಕೊಡುತ್ತಾನೆ.  ಅವರೀರ್ವರ ನಡುವೆ ಸ್ನೇಹ ಬೆಳೆಯುತ್ತದೆ.  ಒಮ್ಮೆ ಆಕೆ ಪಬ್‌ ಗೆ ಭೇಟಿ ನೀಡಿದಾಗ, ಪಬ್‌ ನ ಹಿಂದೆ ಉಪಯೋಗಿಸದೇ ಇದ್ದ ದೊಡ್ಡ ಕೊಠಡಿಯಲ್ಲಿ 1984ರಲ್ಲಿ ಜರುಗಿದ ಗಣಿ ಕಾರ್ಮಿಕರ ಮುಷ್ಕರಗಳ  ಫೋಟೊಗಳನ್ನು ತೋರಿಸುತ್ತಾನೆ. ಆಗ ಅಲ್ಲಿ ಒಂದು ಫಲಕದಲ್ಲಿ  – “ If you eat together, you stick together “ ಎಂಬ ಬರಹ ಕಾಣುತ್ತದೆ.  ಅವು ತನ್ನ ತಾಯಿಯ ನುಡಿಗಳು ಎಂದು ಟಿಜೆ ಯಾರಾಳಿಗೆ ತಿಳಿಸುತ್ತಾನೆ. ದಿ ಓಲ್ಡ್‌ ಓಕ್‌

ಇದ್ನನು ಓದಿ : ಮಹಾಡ್ ಸತ್ಯಾಗ್ರಹ ನೆನಪು : ‘ಅಸ್ಪೃಶ್ಯತೆ ಬೇರುಗಳನ್ನು ಸಡಿಲಿಸಿದ ಬಂಡಾಯʼ

ಕೆನ್‌ ಲೋಚ್‌ರ ಸಂವೇದನೆಗಳ ʼ ದಿ ಓಲ್ಡ್‌ ಓಕ್‌ ʼ ಸಿನಿಮಾ

ಪಬ್‌ ಗೆ ಬರುವ ಸ್ಥಳೀಯರು, ಟಿ ಜೆ ಸಿರಿಯಾದ ವಲಸಿಗರು ಮತ್ತು ಯಾರಾಳ ಬಗೆಗೆ ತೋರಿಸುವ ಎಂಪಥಿ ಕಂಡು ಅಸಮಾಧಾನಗೊಳ್ಳುತ್ತಾರೆ.  ಆ ಹಳ್ಳಿಯ ಯುವಕರು ತಮಗೆ ಬರುವ ಅಷ್ಟೋ ಇಷ್ಟೋ ಸೌಲಭ್ಯಗಳು ವಲಸಿಗರು ಕಸಿದುಕೊಳ್ಳುತ್ತಿದ್ದಾರೆ ಎಂಬ ಒಳಗುದಿಯನ್ನು ಹೊಂದಿರುತ್ತಾರೆ.  ಅದು ಕೆಲವೊಮ್ಮೆ ಹಿಂಸಾ ಕೃತ್ಯಗಳಾಗಿ ಮಾರ್ಪಾಡಾಗುತ್ತವೆ ಕೂಡ. ಟಿ ಜೆಯ ನಾಯಿಯನ್ನು ಕೊಲ್ಲಲಾಗುತ್ತದೆ.  ಆದರೆ ಒಂದರ್ಥದಲ್ಲಿ ಸಿರಿಯಾದ ವಲಸಿಗರು ಮತ್ತು ಸರ್ಕಾರ ಮೊಟಕುಗೊಳಿಸಿದ ಕಲ್ಯಾಣ ನೀತಿಗಳ ಕಾರಣದಿಂದ ಬವಣೆಗಳನ್ನು ಎದುರಿಸುತ್ತಿರುವ ಆ ಹಳ್ಳಿಗರು ಸಮಾನ ದಃಖಿಗಳಾಗಿರುತ್ತಾರೆ; ಒಂದೇ ದೋಣಿಯ ಪಯಣಿಗರಾಗಿರುತ್ತಾರೆ! (ಇದಕ್ಕೆ ಕೆನ್‌ ಲೋಚ್‌ ಅವರ ಜೊತೆ ದೀರ್ಘ ಕಾಲ ದುಡಿದಿರುವ ಈ ಸಿನಿಮಾದ ಚಿತ್ರಕಥಾಕಾರರಾದ ಪಾಲ್‌ ಲಾವರ್ಟಿ ಕೂಡ ಕಾರಣರು).  ಒಮ್ಮೆ ಯಾರಾ ತನ್ನ ದೇಶದ ಬಗೆಗೆ  ಮಾತನಾಡುತ್ತ ನಾವು ಏನೋ ಹೊಸತು ಮತ್ತು ಸುಂದರವಾದದ್ದನ್ನು ಕಟ್ಟಲು ಪ್ರಯತ್ನಿಸಿದೆವು.  ಈಗ ನೋಡಿ ನಾವು ತೋಳಗಳಿಗೆ ಆಹಾರವಾಗಿದ್ದೇವೆ…” ಎನ್ನತ್ತಾಳೆ.  ಇವುಗಳ ಮಧ್ಯೆ ಯಾರಾ ಟಿ ಜೆ ಪಬ್‌ ಹಿಂದಿದ್ದ ದೊಡ್ಡ ಕೊಠಡಿಯಲ್ಲಿ “ If you eat together, you stick together “ ಎಂಬ ಟಿ ಜೆಯ ತಾಯಿಯ ಮಾತುಗಳ ಅನುಸಾರ ಎಲ್ಲ ಸಮುದಾಯಗಳನ್ನೊಳಗೊಂಡ ಸಹ ಭೋಜನದ ವ್ಯವಸ್ಥೆಯನ್ನು ಮಾಡುತ್ತಾಳೆ. ಒಮ್ಮೆ ಟಿ ಜೆ ಯಾರಾಳ ಮನೆಗೆ ಆಗಮಿಸಿ ಒಂದು ಗಿಫ್ಟನ್ನು ನೀಡುತ್ತಾನೆ.  ಆಗ ಯಾರಾ ಶುಕ್ರಾನ್‌ “ ಎಂದು ಹೇಳುತ್ತಾಳೆ. ಶುಕ್ರಾನ್‌ “ ಎಂದರೆ Thanks ” ಎಂಬ ವಿವರಣೆಯನ್ನು ನೀಡುತ್ತಾಳೆ. ದಿ ಓಲ್ಡ್‌ ಓಕ್‌

ಸಿನಿಮಾದ ಕೊನೆಯ ದೃಶ್ಯದಲ್ಲಿ ಲಾಂಗ್‌ ಶಾಟ್‌, ಓಕ್‌ ಮರದ ಚಿತ್ರವಿರುವ ಐಕ್ಯತಾ ಬ್ಯಾನರನ್ನು ಯೂನಿಯನ್‌ ಗಳು ಮತ್ತು ಅವರ ಸದಸ್ಯರು ಮರವಣಿಗೆಯಲ್ಲಿ ಹೋಗುತ್ತಿರುವಾಗ ಪ್ರೊಟೊಗಾನಿಸ್ಟ್‌ಗಳನ್ನು ಹುಡುಕುವಂತೆ ತೋರಿಸಲಾಗಿದೆ.  ವಲಸಿಗರ ಸಂಸ್ಥೆ ಈ ಬ್ಯಾನರನ್ನು ನೀಡಿರುತ್ತದೆ.  ಅಂದರೆ ʼ ನಾವು ʼ ಮತ್ತು ʼ ಅವರು ʼ ಎಂಬ ಅಂತರಕ್ಕೆ ವಿರುದ್ಧವಾಗಿ ಭರವಸೆ ಮತ್ತು ಐಕ್ಯತೆಯನ್ನು  ಸಿನಿಮಾ ರವಾನಿಸುತ್ತದೆ!

ಫ್ರೇಮ್‌ ಕಾಂಪೋಸೀಷನ್‌, ಸಂಗೀತ ಮತ್ತು ಶಬ್ದದ ಬಳೆಕಯಲ್ಲಿ ಯಾವುದೇ ಕುಸುರಿ ಕೆಲಸಗಳು ಕಾಣುವುದಿಲ್ಲ.  ನಿರ್ದೇಶಕರು ಹೆಚ್ಚಾಗಿ ಸ್ಥಳೀಯರು ಮತ್ತು ಸಿರಿಯಾದ ವಲಸಿಗರನ್ನೇ ನಟನೆಗೆ ಬಳಸಿಕೊಂಡಿದ್ದಾರೆ.  ಸಿನಿಮಾದಲ್ಲಿ  ಕೆಲವು ಕಡೆ  ಡಾಕ್ಯುಮೆಂಟರಿ ಫೀಲ್‌ ನ ಅನುಭವವಾಗುತ್ತದೆ.  ಕೆನ್‌ ಲೋಚ್‌ ರ ಮುಂಚಿನ ಎರಡು ಸಿನಿಮಾಗಳು ʼ ಐ ಡೇನಿಯಲ್ಬ್ಲೇಕ್‌ ʼ( 2016) ಮತ್ತು ʼ ಸಾರಿ ವಿ ಮಿಸ್ಡ್ಯೂ ʼ(2019)  ಕಥೆ ಕೂಡ ಈಶಾನ್ಯ ಇಂಗ್ಲೆಂಡಿನಲ್ಲಿ ನಡೆಯುವುದರಿಂದ ಮತ್ತು ದುಡಿಯುವ ಮಂದಿಯ ವಸ್ತುವನ್ನು ಹೊಂದಿರುವುದರಿಂದ ʼ ದಿ ಓಲ್ಡ್ಓಕ್‌ ʼ  ಜೊತೆಗೆ ಮೇಲೆ ಪ್ರಸ್ತಾಪಿಸಿರುವ ಸಿನಿಮಾಗಳನ್ನು ʼ ತ್ರಿವಳಿʼ ಸಿನಿಮಾಗಳೆಂದು ಕರೆಯಬಹುದು. ದಿ ಓಲ್ಡ್‌ ಓಕ್‌

ʼ ದಿ ಓಲ್ಡ್ಓಕ್‌ ʼ   ನೀಡಿದ್ದಕ್ಕೆ ಕೆನ್‌ ಲೋಚ್‌ ಅವರಿಗೆ ಶುಕ್ರಾನ್‌ “ !

ಇದನ್ನು ನೋಡಿ : ಪಿಚ್ಚರ್ ಪಯಣ. ಪಯಣ : 8 ಸಿನಿಮಾ : ಕುಂಬಳಂಗಿ ನೈಟ್ಸ್ (ಮಲಯಾಳಂ) ವಿಶ್ಲೇಷಣೆ: ಸಬಿತಾ ಬನ್ನಾಡಿ

Donate Janashakthi Media

Leave a Reply

Your email address will not be published. Required fields are marked *