“ಛೋಟಾ ಕಿಸಾನ್ ಬಿಜೆಪಿ ರಾಜ್ ಮೇಂ ಪರೇಶಾನ್”: ಎ.ಐ.ಕೆ.ಎಸ್.
“ಛೋಟಾ ಕಿಸಾನ್ ಬನೇ ದೇಶ ಕಾ ಶಾನ್” ಎಂದು ಪ್ರಧಾನಿ ಮೋದಿಯವರು ತಮ್ಮ ಈ ಭಾರಿಯ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಇನ್ನೊಂದು ಘೋಷಣೆ ಕೊಟ್ಟಿದ್ದಾರೆ. ಇದು ‘ಶಾನ್’(ಗೌರವ) ಅಲ್ಲ, ‘ಪರೇಶಾನ್’ (ಸುಸ್ತು) ಎಂದಿರಬೇಕಿತ್ತು ಎಂದು ಅಖಿಲ ಭಾರತ ಕಿಸಾನ್ ಸಭಾ (ಎ.ಐ.ಕೆ.ಎಸ್.) ಇದನ್ನು ಬಲವಾಗಿ ಖಂಡಿಸಿದೆ. ಇದು ಕೆಂಪು ಕೋಟೆಯಿಂದ ಪ್ರಧಾನಿಗಳು ರೈತರ ಬಗ್ಗೆ ನೀಡಿರುವ ಇನ್ನೊಂದು ಸುಳ್ಳು-ವಂಚಕ ಘೋಷಣೆ ಎಂದಿರುವ ಅದು “ಛೋಟಾ ಕಿಸಾನ್-ಬಿಜೆಪಿ ರಾಜ್ ಮೇಂ ಪರೇಶಾನ್”(ಸಣ್ಣ ರೈತರು ಬಿಜೆಪಿ ರಾಜ್ಯಭಾರದಲ್ಲಿ ಸುಸ್ತಾಗಿದ್ದಾರೆ” ಎಂದು ಹೇಳಿದೆ.
ಸಂಸತ್ತಿನಲ್ಲಿ ರೈತರ ಶೋಚನೀಯ ಪರಿಸ್ಥಿತಿಯ ಬಗ್ಗೆ ಮಾತನಾಡಲು ಅಥವ ಅವರು ಎತ್ತಿದ ಪ್ರಶ್ನೆಗಳನ್ನು ಪರಿಹರಿಸಲು ನಿರಾಕರಿಸಿರುವ ಪ್ರಧಾನ ಮಂತ್ರಿಗಳು ದೇಶದ ಕಣ್ಣಿಗೆ ಮಣ್ಣೆರಚಲು ಸ್ವಾತಂತ್ರ್ಯ ದಿನದ ವಿಧ್ಯುಕ್ತ ಸಮಾರಂಭವನ್ನು ಬಳಸಿಕೊಂಡಿದ್ದಾರೆ ಎಂದು ಎ.ಐ.ಕೆ.ಎಸ್. ಖೇದ ವ್ಯಕ್ತಪಡಿಸಿದೆ. ಬಿಜೆಪಿ ಸರಕಾರ ರೈತರಿಗಾಗಿ ಬಹಳಷ್ಟು ಮಾಡುತ್ತಿದೆ ಎಂದು ಸುಳ್ಳು ಚಿತ್ರ ನೀಡಿದ್ದಾರೆ. ಪ್ರಧಾನ ಮಂತ್ರಿಗಳಿಗೆ ನಿಜವಾಗಿಯೂ ಸಣ್ಣ ರೈತರ ಬಗ್ಗೆ ಕಾಳಜಿ ಇದ್ದಿದ್ದರೆ ದಿಲ್ಲಿಯ ಗಡಿಗಳಲ್ಲಿ ಮತ್ತು ದೇಶಾದ್ಯಂತ ಒಂಭತ್ತು ತಿಂಗಳಿಂದ ಅವರೆಲ್ಲರೂ ಪ್ರತಿಭಟಿಸುತ್ತಿದ್ದರೂ ಕಾರ್ಪೊರೇಟ್ ಲಾಭಕೋರತನವನ್ನು ಪ್ರೋತ್ಸಾಹಿಸುವ ಧೋರಣೆಗಳನ್ನೇ ಪಟ್ಟು ಹಿಡಿದು ಅನುಸರಿಸುತ್ತಿರುವುದೇಕೆ ಎಂದು ಪ್ರಶ್ನಿಸಿರುವ ಎ.ಐ.ಕೆ.ಎಸ್. ಅಂತಹ ಕಾಳಜಿಯಿದ್ದರೆ ಮೂರು ಕೃಷಿ ಕಾಯ್ದೆಗಳನ್ನು ರದ್ದು ಮಾಡುವ, ವಿದ್ಯುತ್ ತಿದ್ದುಪಡಿ ಮಸೂದೆಯನ್ನು ಹಿಂದಕ್ಕೆ ಪಡೆಯುವ ಮತ್ತು ಕನಿಷ್ಟ ಬೆಂಬಲ ಬೆಲೆಯನ್ನು ಒಂದು ಕಾನೂನಾತ್ಮಕ ಹಕ್ಕಾಗಿ ಮಾಡುವ ಪ್ರಕಟಣೆಯನ್ನು ಅವರ ಸರಕಾರ ಮಾಡಬೇಕಿತ್ತು ಎಂದು ಹೇಳಿದೆ.
ಇದನ್ನು ಓದಿ: ಸ್ವಾತಂತ್ರ್ಯ ದಿನದ ಮೋದಿ ಭಾಷಣದಲ್ಲಿ ಮತ್ತೆ ಮತ್ತೆ ಅದೇ ರಾಗ: ವ್ಯಾಪಕ ಟೀಕೆ
ಕಹಿ ಸತ್ಯವೇನೆಂದರೆ, ಕಳೆದ 7 ವರ್ಷಗಳಲ್ಲಿ, ನರೇಂದ್ರ ಮೋದಿಯವರು ಆಶ್ವಾಸನೆ ನೀಡಿದಂತೆ ರೈತರ ಆದಾಯ ದುಪ್ಪಟ್ಟು ಆಗುವ ಬದಲು, ಅದು ಇಳಿಯುತ್ತಲೇ ಬರುತ್ತಿದೆ, ರೈತರ ಆತ್ಮಹತ್ಯೆಗಳ ಸಂಖ್ಯೆ 1 ಲಕ್ಷವನ್ನು ದಾಟಿದೆ. ನಿರ್ದಿಷ್ಟವಾಗಿ ಸಣ್ಣ ರೈತರಿಗೆ ನೆರವಾಗುತ್ತದೆ ಎಂದು ಅವರು ಒತ್ತಿ-ಒತ್ತಿ ಹೇಳುತ್ತಿರುವ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ವಾಸ್ತವವಾಗಿ ಒಂದು ಸಾಧನೆಯ ಬದಲು ದೊಡ್ಡ ವಿಫಲತೆಯಾಗಿ ಬಿಟ್ಟಿದೆ. ರಾಜ್ಯ ಮತ್ತು ಕೇಂದ್ರ ಸರಕಾರಗಳ ಜೊತೆಗೆ ರೈತರೂ ಇದಕ್ಕೆ ಪ್ರೀಮಿಯಂ ತೆರುತ್ತಿದ್ದರೂ, ಅವರ ದಾವೆಗಳು ಇತ್ಯರ್ಥವಾಗುತ್ತಿಲ್ಲ. ಗುಜರಾತ್ ಸೇರಿದಂತೆ ಹಲವು ರಾಜ್ಯಗಳು ಆಂಧ್ರಪ್ರದೇಶ, ಬಿಹಾರ, ಪಂಜಾಬ್, ತೆಲಂಗಾಣ, ಪಶ್ಚಿಮ ಬಂಗಾಲ ಮುಂತಾದವು ಈ ಯೋಜನೆಯ ಅದಕ್ಷತೆಯಿಂದಾಗಿ ಅದರಿಂದ ಹೊರಬಂದಿವೆ.
ದೇಶದಲ್ಲಿ ಎರಡು ಎಕರೆಗಿಂತ ಕಡಿಮೆ ಭೂಮಿ ಹೊಂದಿರುವ ರೈತರ ಪ್ರಮಾಣ 80ಶೇ. ಇದ್ದು, ಇವರ ಹಿತಗಳಿಗೆ ಆದ್ಯತೆ ನೀಡಲಾಗುತ್ತಿದೆ ಎನ್ನುತ್ತ ಪ್ರಧಾನ ಮಂತ್ರಿಗಳು ಸಣ್ಣ ರೈತರಿಗೆ ಅಗ್ಗದ ಸಾಲಗಳನ್ನು ಲಭ್ಯಗೊಳಿಸಲಾಗುತ್ತಿದೆ ಎಂದಿದ್ದಾರೆ. ಆದರೆ ಅವರು ಪ್ರಧಾನ ಮಂತ್ರಿಗಳಾಗುವ ಮೊದಲಿನಿಂದಲೂ ಜಾರಿಯಲ್ಲಿರುವ ಈ ಸ್ಕೀಮು ಕೋಟ್ಯಂತರ ಗೇಣಿ ಸಾಗುವಳಿದಾರರನ್ನು ಈಗಲೂ ಹೊರಗಿಟ್ಟಿದೆ. ಕೋವಿಡ್ ಮಹಾಸಾಂಕ್ರಾಮಿಕದಿಂದಾಗಿ ರೈತರು ಅಪಾರ ಆದಾಯ ನಷ್ಟಗಳನ್ನು ಅನುಭವಿಸಿರುವಾಗಲೂ ಯಾವುದೇ ಪರಿಹಾರ, ಸಾಲಮನ್ನಾವನ್ನು ರೈತರಿಗೆ ಕೊಟ್ಟಿಲ್ಲ.
ಇದನ್ನು ಓದಿ: ಕೃಷಿಕಾಯ್ದೆ ವಿರುದ್ಧ ರೈತರ ಹೋರಾಟಕ್ಕೆ 150 ನೇ ದಿನ
ಕನಿಷ್ಟ ಬೆಂಬಲ ಬೆಲೆ(ಎಂ.ಎಸ್.ಪಿ)ಗಳನ್ನು ಉತ್ಪಾದನಾ ಖರ್ಚಿನ ಒಂದೂವರೆ ಪಟ್ಟಿಗೆ ಹೆಚ್ಚಿಸಲಾಗಿದೆ ಎಂದು ಅದೇ ಕೆಂಪು ಕೋಟೆಯಿಂದ ಸಾರಿದ ಇನ್ನೊಂದು ಘೋಷಣೆಯೂ ಸುಳ್ಳಾಗಿದೆ. ಅವರ ಸರಕಾರ ರಾಷ್ಟ್ರೀಯ ರೈತರ ಆಯೋಗ ಶಿಫಾರಸು ಮಾಡಿದಂತೆ ಸಿ2+50% ಸೂತ್ರವನ್ನು ಜಾರಿಗೊಳಿಸಿಲ್ಲ. ಇದರಿಂದ ರೈತರಿಗೆ ಭಾರೀ ನಷ್ಟವಾಗುತ್ತಿದೆ. ಉದಾ: ಭತ್ತಕ್ಕೆ ಈ ಸೂತ್ರವನ್ನು ಅನ್ವಯಿಸದೇ ಇರುವುದರಿಂದ ಘೋಷಿತ ಎಂಎಸ್‌ಪಿ ಬೆಲೆಗಳು ದೊರೆತರೂ ರೈತರು ಪ್ರತಿ ಕ್ಷಿಂಟಾಲಿನಲ್ಲಿ 650 ರೂ. ಕಳಕೊಳ್ಳುತ್ತಿದ್ದಾರೆ. ಇನ್ನೊಂದು ಸಂಗತಿಯೆಂದರೆ ಈ ಇಳಿಸಿದ ಎಂಎಸ್‌ಪಿಯೂ ರೈತರಿಗೆ ಸಿಗುತ್ತಿಲ್ಲ. ಅಕ್ಟೊಬರ್-ನವಂಬರ್ 2020 ರಲ್ಲಿ ಧಾನ್ಯ ಮಾರಾಟ ಕುರಿತ ಒಂದು ವರದಿಯ ಪ್ರಕಾರ 11 ಪ್ರಮುಖ ಕೃಷಿ ರಾಜ್ಯಗಳಲ್ಲಿ ರೈತರು ಮಾರಿದ ಜೋಳಕ್ಕೆ ಎಂ.ಎಸ್.ಪಿ.ಗಿಂತ ರೂ.1900 ಕೋಟಿಯಷ್ಟು ಕಡಿಮೆ ಬೆಲೆ ಸಿಕ್ಕಿದೆ. ಆದರೆ ಅತ್ತ ಬೀಜಗಳು, ರಸಗೊಬ್ಬರ ಮುಂತಾದ ಲಾಗುವಾಡುಗಳ ಬೆಲೆಗಳು ಪೆಟ್ರೋಲ್-ಡೀಸೆಲ್ ಸತತ ಬೆಲೆಯೇರಿಕೆಗಳಿಂದಾಗಿ ಹೆಚ್ಚೆಚ್ಚು ವೆಚ್ಚದಾಯಕವಾಗುತ್ತಿವೆ.
ನಿಜ ಹೇಳಬೇಕೆಂದರೆ, ಬಿಜೆಪಿ ಸರಕಾರದ ಧೋರಣೆಗಳಿಂದ ಅತಿ ಹೆಚ್ಚು ತೊಂದರೆಗಳಿಗೆ ಒಳಗಾಗಿರುವವರು ಸಣ್ಣ ರೈತರು ಮತ್ತು ಗೇಣಿ ಸಾಗುವಳಿದಾರರು. ಆದರೂ ಪ್ರಧಾನ ಮಂತ್ರಿಗಳು ಹರಿಯ ಬಿಡುತ್ತಿರುವ ಈ ಸುಳ್ಳು-ವಂಚನೆಗಳನ್ನು ಬಯಲಿಗೆಳೆಯಲು ಒಂದು ಪ್ರಚಾರಾಂದೋಲನವನ್ನು ನಡೆಸಲಾಗುವುದು ಎಂದು ಎ.ಐ.ಕೆ.ಎಸ್. ಹೇಳಿದೆ.