ಕೆಲವರ ಸ್ವಾರ್ಥಕ್ಕಾಗಿ ಜಾತಿ ವ್ಯವಸ್ಥೆ ಇನ್ನೂ ಜೀವಂತ: ಸಿದ್ದರಾಮಯ್ಯ

ಬೆಂಗಳೂರು: ಕೆಲವರ ಸ್ವಾರ್ಥಕ್ಕಾಗಿ ಜಾತಿ ವ್ಯವಸ್ಥೆಯನ್ನು ಇನ್ನೂ ಜೀವಂತವಾಗಿಟ್ಟಿದ್ದಾರೆ. ಈ ಹಿಂದೆ ಬ್ರಾಹ್ಮಣ, ಕ್ಷತ್ರಿಯ, ವೈಶ್ಯರಿಗೆ ಮಾತ್ರ ಓದುವ ಅವಕಾಶವಿತ್ತು. ಇದು ಕೂಡ ಮೀಸಲಾತಿ ಅಲ್ಲವೇ…? ಶೂದ್ರರು ತಾವು ಉತ್ಪಾದನೆ ಮಾಡಿದ ವಸ್ತುಗಳನ್ನು ಅನುಭವಿಸುವಂತಿರಲಿಲ್ಲ. ಶೂದ್ರರನ್ನು ಕೊಳಕು ಕೆಲಸಕ್ಕೆ ಬಿಟ್ಟು ಮೇಲ್ಜಾತಿಯವರು ಸುಖ ಅನುಭವಿಸುತ್ತಿದ್ದರು. ಇವತ್ತು ಅಸಮಾನತೆ ನಿರ್ಮಾಣ ಮಾಡೋಕೆ ಕಾರಣರಾದವರೇ, ಏಕೆ ಮೀಸಲಾತಿ ಕೊಡಬೇಕೆಂದು ಪ್ರಶ್ನೆ ಮಾಡುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಇಂದು(ಜೂನ್‌ 26) ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನದಾಸ್ ರಚಿಸಿದ ”ಮೀಸಲಾತಿ ಭ್ರಮೆ ಮತ್ತು ವಾಸ್ತವ” ಕನ್ನಡ ಮತ್ತು ಇಂಗ್ಲಿಷ್ ಆವೃತ್ತಿ ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡಿದ ಸಿದ್ದರಾಮಯ್ಯ ಅವರು, ನಾಗಮೋಹನದಾಸ್ ನ್ಯಾಯಮೂರ್ತಿಗಳಾಗಿದ್ದರಿಂದ ದೇಶದ ಸಂವಿಧಾನ ಓದಿದ್ದಾರೆ. ʻಸಂವಿಧಾನ ಓದುʼ ಅನ್ನೋ ಕಿರುಹೊತ್ತಿಗೆ ಮುಂದಿಟ್ಟಿದ್ದರು ಅದನ್ನ ನಾನು ಕೂಡ ಓದಿದ್ದೇನೆ. ಪ್ರತಿಯೊಬ್ಬರು ಸಂವಿಧಾನದ ಓದಿ ತಿಳಿದುಕೊಳ್ಳಬೇಕು. ಸರಳವಾದ ಭಾಷೆಯಲ್ಲಿ ಸರಳವಾಗಿ ಸಂವಿಧಾನ ಓದು ಏನ್ನುವ ಕಿರುಹೊತ್ತಿಗೆ ಕೊಟ್ಟಿದ್ದರು. ಆ ಪುಸ್ತಕದ ಕುರಿತು ಸಂವಾದದ ಸಂದರ್ಭದಲ್ಲಿ ಹೆಚ್ಚು ಮೀಸಲಾತಿ ಸಂಬಂಧ ಪ್ರಶ್ನೆಗಳನ್ನು ಕೇಳುತ್ತಿದ್ದರು. ಆಗ ಮೀಸಲಾತಿ ಬಗ್ಗೆ ಅರಿವಿಲ್ಲ ಅನ್ನೋದನ್ನು ಅರಿತಿದ್ದರು. ಹೀಗಾಗಿ ಈ ಪುಸ್ತಕ ರಚನೆ ಮಾಡಿದ್ದಾರೆ. ಜಾತಿ ವ್ಯವಸ್ಥೆ ಕಾರಣದಿಂದಾಗಿ ನಮ್ಮ ಸಮಾಜ ಅಸಮಾನತೆಯಿಂದ ಕೂಡಿದೆ ಎಂದು ತಿಳಿಸಿದರು.

ಜಾತಿವ್ಯವಸ್ಥೆ ಬಗ್ಗೆ ಉದಾಹರಣೆ ಸಮೇತ ವಿವರಿಸಿದ ಸಿದ್ದರಾಮಯ್ಯ, ಒಮ್ಮೆ ರಾಮಕೃಷ್ಣ ಹೆಗಡೆ, ಬಿ.ರಾಚಯ್ಯ, ಜೆ.ಹೆಚ್.ಪಟೇಲ್ ಸೇರಿ ಮೂವರ ನಡುವೆ ಸ್ವಾರಸ್ಯಕರ ಚರ್ಚೆ ನಡೆದಿದ್ದನ್ನು ಉಲ್ಲೇಖಿಸಿದರು.  ರಾಮಕೃಷ್ಣ ಹೆಗಡೆಯವರನ್ನು ಬಿ.ರಾಚಯ್ಯ ಬಹಳ ಮೇಧಾವಿಗಳು ಎಂದಿದ್ದರು. ಆಗ ಜೆ.ಹೆಚ್.ಪಟೇಲ್​​  ‘ರೀ ರಾಚಯ್ಯನವರೇ ರಾಮಕೃಷ್ಣ ಹೆಗಡೆಯವರಿಗೆ 5 ಸಾವಿರ ವರ್ಷಗಳ ಇತಿಹಾಸವಿದೆ. ನಮಗೆ ಬಸವಣ್ಣ ಬಂದ ಮೇಲೆ 800 ವರ್ಷಗಳ ಇತಿಹಾಸವಿದೆ. ಸಂವಿಧಾನ ಬಂದ ಮೇಲೆ ನಿಮಗೆ ಇತಿಹಾಸ ಶುರುವಾಗಿದ್ದು.  ಸಂವಿಧಾನ ಜಾರಿಯಾದ ಮೇಲೆ ತಳಸಮುದಾಯದವರಿಗೆ ಓದುವ ಅವಕಾಶ ಸಿಕ್ತು ಎಂದು ಘಟನೆ ಮೆಲಕು ಹಾಕಿದರು.

ಆರ್ಯರು ಮಧ್ಯಪ್ರಾಚ್ಯದಿಂದ ಬಂದವರು ಎಂದಿದ್ದಕ್ಕೆ, ನಮ್ಮನ್ನೇ ಪ್ರಶ್ನೆ ಮಾಡುತ್ತೀರಾ ಅಂತಾರೆ. ದ್ರಾವಿಡರನ್ನ ದಬ್ಬಾಳಿಕೆ ಮಾಡಿದರು ಅಂದರೆ ಅವರಿಗೆ ಕೋಪ ಬರುತ್ತದೆ. ಇದ್ದದ್ದು ಇದ್ದಂಗೆ ಹೇಳಿದರೆ ಎದ್ದು ಬಂದು ಎದೆಗೆ ಒದೀತಾರೆ. ಮೀಸಲಾತಿ ಕರ್ನಾಟಕದಲ್ಲಿ ಸುಮಾರು 100 ವರ್ಷಗಳಿಂದ ಇದೆ. ಬಹುಸಂಖ್ಯಾತರ ಪರ ಮಾತಾಡಿದರೆ, ಯಾರು ನನ್ನ ಪರ ಮಾತಾಡಲ್ಲ.  ಸಿದ್ದರಾಮಯ್ಯ ತಾನೇ ಮಾತಾಡೋದು ಬೈಸಿಕೊಳ್ಳಲಿ ಬಿಡು ಅಂತಾರೆ. ಅಸಮಾನತೆ ವಿರುದ್ಧ ನಾನು ಮಾತನಾಡುವುದು ತಪ್ಪಾ..? ಎಂದು ಪ್ರಶ್ನಿಸಿದರು.

ದಕ್ಷಿಣ ಭಾರತದಲ್ಲಿ ಮೀಸಲಾತಿ ಇದೆ. ಆದರೆ ಉತ್ತರ ಭಾರತದಲ್ಲಿ ಬರಲಿಲ್ಲ. 1990ರಲ್ಲಿ ವಿಪಿ ಸಿಂಗ್ ಪ್ರಧಾನ ಮಂತ್ರಿಯಾದಾಗ ಹಿಂದುಳಿದ ಜಾತಿಯವರಿಗೆ  ಮೀಸಲಾತಿ ಬಂತು. 1950ರಲ್ಲಿ ಸಂವಿಧಾನ ಬಂದರೂ, 1990ರವರಗೆ ಹಿಂದುಳಿದ ವರ್ಗದವರಿಗೆ ಮೀಸಲಾತಿ ಸಿಕ್ಕಿರಲಿಲ್ಲ. ಮೀಸಲಾತಿ ಸಂಬಂಧ ನ್ಯಾಯಮೂರ್ತಿ ನಾಗಮೋಹನದಾಸ್ ಪುಸ್ತಕ ಬರೆದಿದ್ದಾರೆ. ಈ ಪುಸ್ತಕ ಬಹಳ ದೊಡ್ಡ ಪುಸ್ತಕವಲ್ಲ ಚಿಕ್ಕದಾಗಿ ಚೊಕ್ಕದಾಗಿ ಹೆಚ್ಚು ಮಾಹಿತಿಯುಳ್ಳ ಪುಸ್ತಕವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಸಂಗೀತ ನಿರ್ದೇಶಕ ಹಂಸಲೇಖ ಅವರು, ಸಿದ್ದರಾಮಯ್ಯ ಪ್ರಜಾಪ್ರಭುತ್ವಕ್ಕೆ ದೊಡ್ಡ ಧ್ವನಿಯಾಗಿದ್ದಾರೆ. ನನ್ನದು ಚಿಕ್ಕ ಬಾಯಿ, ಇಲ್ಲಿ ದೊಡ್ಡ ದೊಡ್ಡ ಮಾತು ಆಡಬೇಕಿದೆ.ಪ್ರತಿಭೆ ಎಂದರೇನು? ಎಂದು ಕೇಳುತ್ತಿದ್ದರು. ಪ್ರತಿಭೆ ಎಂದರೆ ನಾನೇ. ನಾನೇದಾದರೂ ಆರ್ಯರ ತರ ಕಾಣುತ್ತಿದ್ದೇನಾ? ನಾನು ಸಂಪೂರ್ಣವಾಗಿ ದ್ರಾವಿಡನ್ ಎಂದರು.

ನಾವು ಹಾಡಬೇಕಿರುವುದು ಹರಿಕಥೆಯಲ್ಲ ಸರ್, ನಾವು ಸಂವಿಧಾನವನ್ನು ಹಾಡುಗಳಾಗಿ ಹಾಡಬೇಕಿದೆ. ಸಂವಿಧಾನದಲ್ಲಿ 22 ಕಲಮುಗಳಿವೆ. ಪತ್ರಿ ಕಲಮಿಗೆ 20ರಂತೆ ಕವಿಗಳು ಸೇರಿ  ಹಾಡುಗಳ ರಚಿಸುವ ಕೆಲಸ ಮಾಡುತ್ತೇವೆ. ನಾವೇ ಹಣ ಹಾಕಿ ಈ ಕಾರ್ಯಕ್ರಮ ರೂಪಿಸುತ್ತೇವೆ. ಸಂವಿಧಾನದ ಪುಸ್ತಕವನ್ನು ಹಾಡುಗಳ ಮೂಲಕ ಜನರಲ್ಲಿ ಪ್ರಚಾರ ಮಾಡುತ್ತೇವೆ. ಇದಕ್ಕೆ ನಾಗಮೋಹನ ದಾಸ್ ಅವರು ಮಾರ್ಗದರ್ಶನ ಮಾಡಬೇಕು ಎಂದರು.

ಅನುಭವ ಮಂಟಪ ಹಂಗಿಲ್ಲದ ಮೀಸಲಾತಿ ನೀಡಿತ್ತು. ಸಂವಿಧಾನ ಗೀತೆ, ಬಡವರ ಗೀತೆಯನ್ನ ಹಾಡಬೇಕು. ನಾನು ಯಾವ ಜಾತಿ ಎಂದು ಗೊತ್ತಿರಲಿಲ್ಲ. ಈ ಪುಸ್ತಕ ಕೈಗೆ ಬಂದಾಗ ನಾನು ಯಾವ ಜಾತಿ ಎಂದು ಕೇಳಿದೆ. ಆಗ ನೇಕಾರ ಎಂದು ಗೊತ್ತಾಯಿತು. ನೇಕಾರ ಯಾವುದರಲ್ಲಿ ಬರುತ್ತೆ ಎಂದು ಕೇಳಿದಾಗ ಓಬಿಸಿ ಎಂದರು. ಓಬಿಸಿ ಎಂದರೆ? ಎಷ್ಟು ಓದಿದರು ಓದಿದ್ದೇವೆ ಎಂದು ಯಾರು ಹೇಳುವುದಿಲ್ಲ. ನಾನು ಮೂರು ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಬರೆದಿದ್ದೇನೆ, ಆದರೂ ಓದಿದ್ದೇನೆ ಎಂದು, ಬೆಳೆದರೂ ಬೆಳೆದಿದ್ದೇನೆ ಎಂದು ಒಪ್ಪುವುದಿಲ್ಲ. ಕ್ಯಾಶ್ ಇದ್ದರೂ ಕ್ಯಾಸ್ಟ್ ಬಿಡುವುದಿಲ್ಲ. ಇದು ಒಬಿಸಿ ಎಂದರು.

ನ್ಯಾಯಾಂಗ ನಡೆದುಕೊಳ್ಳುತ್ತಿರುವ ರೀತಿ ನನಗೆ ನೋವಾಗಿದೆ

ನ್ಯಾಯಮೂರ್ತಿ ಹೆಚ್.ಎನ್ ನಾಗಮೋಹನದಾಸ್ ಮಾತನಾಡಿ, ಅಕ್ಷರಸ್ಥರಿಗೆ ಸಂವಿಧಾನ ಓದಿ ಅರಿಯುವುದು ಸಾಧ್ಯ. ಆದರೆ ಅನಕ್ಷರಸ್ಥರಿಗೆ  ಸಂವಿಧಾನ ತಿಳಿಸುವುದು ಹೇಗೆ? ಮಹಾಭಾರತ, ರಾಮಾಯಣದಂತಹ ಮಹಾನ್ ಕಾವ್ಯಗಳನ್ನು ಧಾರವಾಹಿ, ಸಿನಿಮಾ, ಹಾಡು, ನಾಟಕಗಳ ಮೂಲಕ ತಿಳಿಸಲು ಸಾಧ್ಯವಾಗಿದೆ.  ಅನಕ್ಷರಸ್ಥರಿಗೆ ಸಂವಿಧಾನವನ್ನು ನಾವು ಇದೆ‌ ಮಾದರಿಯಲ್ಲಿ ಯಾಕೆ ತಿಳಿಸಬಾರದು? ಅದನ್ನು ಮಾಡಲು ಈಗ ಹಂಸಲೇಖ ಮುಂದೆ ಬಂದಿದ್ದಾರೆ. ಸಂವಿಧಾನದ ಬಗ್ಗೆ ಹಾಡು, ನಾಟಕ, ಧಾರವಾಹಿ ಏನೇ ಮಾಡಿದರೂ ನಮ್ಮ ಸಂಪೂರ್ಣ ಸಹಾಯ ಇರಲಿದೆ ಎಂದು ಹೇಳಿದರು.

ಸಾಮಾಜಿಕ ನ್ಯಾಯದ ಭಾಗವಾದ ಮೀಸಲಾತಿಯ ಮತ್ತು ಜನತೆಯ ಇತರ ಹಕ್ಕುಗಳ ಕುರಿತು ನ್ಯಾಯಾಂಗ ನಡೆದುಕೊಳ್ಳುತ್ತಿರುವ ರೀತಿ ನನಗೆ ನೋವಾಗಿದೆ. ಜನತೆಯ ಹಕ್ಕುಗಳನ್ನು ಉಲ್ಲಂಘಿಸಲಾಗುತ್ತಿದೆ ಎಂದು ನ್ಯಾಯಾಂಗಕ್ಕೆ ಬಂದವರನ್ನು ನಡೆಸಿಕೊಂಡ ರೀತಿಯೂ ನ್ಯಾಯಾಂಗದಿಂದ ಬಂದ ನನಗೆ ನೋವು ತಂದಿದೆ ಎಂದು ತೀಸ್ತಾ ಸೆಟಲ್ ವಾಡ್ ಬಂಧನದ ಕುರಿತು ಪ್ರತಿಕ್ರಿಯಿಸಿದರು.

ಪುಸ್ತಕ ಪರಿಚಯ ಮಾಡಿದ ಚಿಂತಕ ಬಂಜೆಗೆರೆ ಜಯಪ್ರಕಾಶ್ – ಜಾತಿ ವ್ಯವಸ್ಥೆ, ಅದರ ವಿರುದ್ಧ ಬಂಡಾಯಗಳ ಚುಟುಕು ಇತಿಹಾಸ, ಸಾಮಾಜಿಕ ನ್ಯಾಯ ಮತ್ತು ಮೀಸಲಾತಿಯ ಅರ್ಥ, ಮೀಸಲಾತಿಯ ಜಾರಿಯ ವಾಸ್ತವ, ಅದರ ಕುರಿತು ಇರುವ ಭ್ರಮೆ, ಅದರ ವಿರುದ್ಧ ಎತ್ತಲಾಗುತ್ತಿರುವ ಪ್ರಶ‍್ನೆಗಳಿಗೆ ಉತ್ತರ, ಮೀಸಲಾತಿ ಎಲ್ಲ ಸಮಸ್ಯೆಗಳಿಗೆ ಪರಿಹಾರವಲ್ಲ – ಇವೆಲ್ಲದರ ಕುರಿತು ಅಂಕೆಸಂಖ್ಯೆಗಳ ಸಮೇತ ಮಾಹಿತಿ ನೀಡುವ ಸಮಗ್ರ ಪುಸ್ತಕ ಎಂದು ವಿವರಿಸಿದರು. ಇದು ‘ಸಂವಿಧಾನ ಓದು’ ಪುಸ್ತಕದಂತೆ ರಾಜ್ಯದ ಜನತೆಯ ಬಳಿ ಎಲ್ಲ ವೇದಿಕೆಗಳನ್ನು ಬಳಸಿ ಅಭಿಯಾನದ ರೀತಿಯಲ್ಲಿ ತಲುಪಬೇಕಾದ ಚಿಕ್ಕ ಚೊಕ್ಕ ಪುಸ್ತಕ ಎಂದರು.  ಸಂವಿಧಾನದ ಕುರಿತು ಒಟ್ಟಾರೆಯಾಗಿ ಮತ್ತು ಮೀಸಲಾತಿಯ ಕುರಿತು ವಿಶೇಷವಾಗಿ  ದಾಳಿ ಮಾಡುತ್ತಿರುವ ಶಕ್ತಿಗಳನ್ನು ಟೀಕಿಸಿದ ಅವರು ಸಹ ತೀಸ್ತಾ ಸೆಟಲ್ ವಾಡ್ ಬಂಧನದ ಕುರಿತು ಆಕ್ರೋಶವನ್ನು ವ್ಯಕ್ತಪಡಿಸಿದರು.

ಉದ್ಯೋಗಗಳ ಕೇವಲ ಶೇ.2 ಮಾತ್ರವಿರುವ ಮೀಸಲಾತಿಯ ಜಾರಿಯಲ್ಲದೆ, ಮುಸ್ಲಿಮರು ಸೇರಿದಂತೆ ಅವರ ಜನಸಂಖ್ಯೆಯ ಅನುಪಾತದಲ್ಲಿ ಮೀಸಲಾತಿ ಒದಗಿಸುವ, ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿಯ ಪ್ರಶ್ನೆಗಳನ್ನು ಸಂವಾದದಲ್ಲಿ  ಪತ್ರಕರ್ತ ಬಿ.ಎಂ.ಹನೀಫ್ ಎತ್ತಿದರು.

ಅರ್ಥಸಾಸ್ತ್ರಜ್ಞ ಮತ್ತು ಪುಸ್ತಕದ ಇಂಗ್ಲಿಷ್ ಆವೃತ್ತಿಯಲ್ಲಿ ಭಾಗವಹಿಸಿದ ಪ್ರೊ.ಟಿ.ಆರ್.ಚಂದ್ರಶೇಖರ್ ಮಾತನಾಡಿ ಸಾಮಾಜಿಕ ನ್ಯಾಯ ಮತ್ತು ಮೀಸಲಾತಿ ಭಿಕ್ಷೆಯಲ್ಲ, ಹಕ್ಕು ನಿಜವಾದ ಸಮಗ್ರ ಅಭಿವೃದ್ಧಿಗೆ ಅಗತ್ಯವಾದ ಕ್ರಮವೆಂದು ಒತ್ತಿ ಹೇಳಿದರು.

ಪುಸ್ತಕವನ್ನು ಪ್ರಕಟಿಸಿದ ಜನಪ್ರಕಾಶನದ ರಾಜಶೇಖರ ಮೂರ್ತಿ ಅವರು ಪ್ರಸ್ತಾವನೆಯ ಮಾತುಗಳನ್ನಾಡಿದರು. ರಾಜಶೇಖರ ಕಿಗ್ಗ ಅವರು ಕಾರ್ಯಕ್ರಮದ ನಿರ್ವಹಣೆ ಮಾಡಿದರು.

*****

Donate Janashakthi Media

Leave a Reply

Your email address will not be published. Required fields are marked *