ಕೆಲಸ ನಿಲ್ಲುವ ಭೀತಿಯಲ್ಲಿ ಕಟ್ಟಡ ಕಾರ್ಮಿಕರು: ಸರಕಾರ ನೆರವು ನೀಡಬೇಕೆಂದು ಆಗ್ರಹ

ಬೆಂಗಳೂರು: ಕೋವಿಡ್‌ ನಿಯಂತ್ರಣ ಹಿನ್ನೆಲೆಯಲ್ಲಿ ರಾಜ್ಯ ಸರಕಾರವು ಮೇ 4ರವರೆಗೆ ಲಾಕ್ ಡೌನ್ ಘೋಷಿಸಿರುವುದರಿಂದ ಕಟ್ಠಡ‌ ನಿರ್ಮಾಣ ಕಾಮಗಾರಿಗಳು ಮತ್ತೆ ಸ್ಥಗಿತಗೊಳ್ಳುವ ಭೀತಿಯಲ್ಲಿರುವ ಕಾರ್ಮಿಕರಿಗೆ ಪರಿಹಾರ ಘೋಷಿಸಬೇಕೆಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ ಆಗ್ರಹಿಸಿದೆ.

ಈ ಬಗ್ಗೆ ವಿವರವಾದ ಮನವಿ ಪತ್ರವನ್ನು ಕಾರ್ಮಿಕ ಸಚಿವರಾದ ಶಿವರಾಮ ಹೆಬ್ಬಾರ್‌ ಅವರಿಗೆ ಸಲ್ಲಿಸಿರುವ ಸಂಘಟನೆಯು ಈ ಕೂಡಲೇ ಕಟ್ಟಡ ಕಾರ್ಮಿಕರ ಸಮಸ್ಯೆಗಳ ಕುರಿತು ಶೀಘ್ರದಲ್ಲಿ ಗಮನ ನೀಡಬೇಕೆಂದು ಆಗ್ರಹಿಸಿದೆ.

ಸಂಘಟನೆಯ ಪ್ರಧಾನ ಕಾರ್ಯದರ್ಶಿ ಕೆ. ಮಹಾಂತೇಶ ಅವರು ಪತ್ರಿಕಾ ಹೇಳಿಕೆ ನೀಡಿದ್ದು ʻʻಕೊರೊನಾ ‌ಎರಡನೇ ಅಲೆಯು ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಈಗಷ್ಟೇ ಪುನಶ್ಚೇಚನಗೊಳ್ಳುತ್ತಿದ್ದ ಹಂತದಲ್ಲಿತ್ತು. ಆದರೆ, ಕೊರೊನಾ ಸಾಂಕ್ರಾಮಿಕ ರೋಗ ಹರಡುವಿಕೆ ತೀವ್ರರೀತಿಯಲ್ಲಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸರಕಾರದ ಲಾಕ್‌ಡೌನ್‌ ಘೋಷಣೆಯಿಂದಾಗಿ ಕಟ್ಟಡ ಕಾರ್ಮಿಕರಲ್ಲಿ ಆತಂಕ ಮನೆ ಮಾಡಿದ್ದು ಲಕ್ಷಾಂತರ ಕಟ್ಟಡ ‌ನಿರ್ಮಾಣ ವಲಯದ ಕಾರ್ಮಿಕರು ನಿರುದ್ಯೋಗಿಗಳಾಗಿದ್ದಾರೆ. ಇದರಿಂದ ಅವರು ದಿನ ನಿತ್ಯ ಬದುಕು ನಡೆಸುವುದು, ಅವರ ಆರೋಗ್ಗ ಮತ್ತು ಕುಟುಂಬ ನಡೆಸುವುದು ಕಷ್ಟವಾಗಿದೆ ಎಂದು ಹೇಳಿದ್ದಾರೆ.

ಲಾಕ್‌ಡೌನ್ ಪರಿಣಾಮವಾಗಿ ಮತ್ತೆ ಸಂಕಷ್ಟಕ್ಕೆ ಸಿಲುಕಿರುವ ಸಾವಿರಾರು ವಲಸೆ ಕಾರ್ಮಿಕರು ಪುನಃ ತಮ್ಮ ಊರುಗಳತ್ತ ತೆರಳುತ್ತಿದ್ದಾರೆ.

ಎರಡನೇ ಕೊವೀಡ್ ಅಲೆಯ ಅಪಾಯವು ಮುಂದಿನ‌ ಮೂರು ತಿಂಗಳವರೆಗೆ ಇರಲಿದೆ ಎಂದು ತಜ್ಞರು ಎಚ್ವರಿಕೆ ನೀಡಿರುವುದರಿಂದ ಬಹುತೇಕ ಕಟ್ಟಡ ಕಾರ್ಮಿಕರಿಗೆ ಈ‌ ಮೂರ್ನಾಲ್ಕು ತಿಂಗಳುಗಳೇ ಉದ್ಯೋಗ ಸೃಷ್ಟಿಯ ದಿನಗಳಾಗಿದ್ದವು ಎಂಬುದನ್ನು ತಾವು ಗಮನಿಸಬೇಕು. ಜೊತೆಗೆ ಮೇ ಕೊನೆಯಿಂದ ಮುಂಗಾರು ಅರಂಭಗೊಳ್ಳುವುದರಿಂದ ಮತ್ತೆ ಐದಾರು ತಿಂಗಳುಗಳ ಕಾಲ ಸಹಜವಾಗಿಯೇ ಕಟ್ಟಡ ಕಾಮಗಾರಿಗಳು ಸ್ಥಗಿತಗೊಂಡು ಕಾರ್ಮಿಕರಿಗೆ ಕೆಲಸ ಸಿಗದೇ ಅವರು ನಿರುದ್ಯೋಗಕ್ಕೆ ಸಿಲುಕಲಿದ್ದಾರೆ ಈಗಾಗಲೇ ‌ಕಷ್ಟದಲ್ಲಿ ಜೀವನ‌ ಸಾಗಿಸುತ್ತಿರುವ ಅವರ ಕುಟುಂಬಗಳು ಮತಷ್ಟು ತೊಂದರೆಗೆ ಸಿಲುಕಲಿವೆ ಎಂದು ಹೇಳಿದ್ದಾರೆ.

ಈ ಬಗ್ಗೆ ಕೆಲವು ಬೇಡಿಕೆಗಳನ್ನು ಸರಕಾರದ ಮುಂದಿಟ್ಟಿರುವ ಸಂಘಟನೆಯು ಕೂಡಲೇ ಪರಿಹರಿಸಬೇಕೆಂದು ಒತ್ತಾಯಿಸಿವೆ.

  1. ಕೂಡಲೇ ಮಂಡಳಿಯಲ್ಲಿ ನೋಂದಾಯಿತವಾದ ಎಲ್ಲಾ ಕಾರ್ಮಿಕರಿಗೂ ಕೋವಿಡ್ ಎರಡನೇ ‌ಅಲೆಯ ಪರಿಹಾರವೆಂದು ವಾರಕ್ಕೆ ತಲಾ ರೂ.2,000 ದಂತೆ‌ ತಿಂಗಳಿಗೆ‌ ರೂ.8,000 ಪರಿಹಾರ ಹಣವನ್ನು ಮುಂದಿನ ಮೂರು ತಿಂಗಳು ಹಾಲಿ ಇರುವ ಅವರ ಬ್ಯಾಂಕ್ ‌ಖಾತೆಗೆ ಮೇ 1 ರಿಂದಲೇ ಹಣ ವರ್ಗಾವಣೆ ಮಾಡಬೇಕು.
  2. ಕಳೆದ ವರ್ಷ ಘೋಷಿಸಲಾದ ಕೋವಿಡ್ ರೂ.5,000 ಪರಿಹಾರ ಹಣ ಬಾಕಿ ಇರುವ 1 ಲಕ್ಷ ಕಾರ್ಮಿಕರಿಗೆ ಕೂಡಲೇ ಹಣ ವರ್ಗಾವಣೆ ಮಾಡಬೇಕು.
  3. ಕೋವಿಡ್ ಸಮಯದಲ್ಲಿ ಶೈಕ್ಷಣಿಕ ಮತ್ತು ಪಿಂಚಣಿ, ಮದುವೆ, ವೈದ್ಯಕೀಯ ‌ಮೊದಲಾದ ಧನ ಸಹಾಯಕ್ಕಾಗಿ ಅರ್ಜಿ ಸಲ್ಲಿಸಲು ಏಪ್ರಿಲ್ 30 ರವರೆಗೆ ವಿಸ್ತರಿಸಲಾದ ಅವಧಿಯನ್ನು ಮುಂದಿನ ಮೂರು ತಿಂಗಳವರೆಗೆ ವಿಸ್ತರಿಸಿ ಆದೇಶ‌ ಮಾಡಬೇಕು.
  4. ಅರ್ಜಿ ಸಲ್ಲಿಸಿ ಇತ್ಯರ್ಥವಾಗದೇ ಉಳಿದಿರುವ ಎಲ್ಲಾ ಫಲಾನುಭವಿಗಳ ಸೌಲಭ್ಯಗಳ ಅರ್ಜಿಗಳನ್ನು‌ಕೂಡಲೇ ಇತ್ಯರ್ಥಪಡಿಸಿ‌ ಅವರ‌ ಖಾತೆಗೆ ಹಣ ಜಮಾ‌ ಮಾಡಬೇಕು.
  5. ಎರಡನೇ ಕೋವಿಡ್ ಅಲೆಯಿಂದ ಮತ್ತೆ ಸಂಕಷ್ಟಕ್ಕೆ ಸಿಲುಕಿರುವ ಅಂತರಾಜ್ಯ ಮತ್ತು‌ ಅಂತರ ಜಿಲ್ಲೆಗಳ ವಲಸೆ ಕಾರ್ಮಿಕರಿಗೆ ಊಟ, ವಸತಿ ‌ಮತ್ತು ಅವರು ತಮ್ಮ ಊರುಗಳಿಗೆ ತೆರಳಲು ಬಯಸಿದರೆ ಅಂತಹವರಿಗೆ ಉಚಿತ ಸಾರಿಗೆ ಸೌಲಭ್ಯಗಳನ್ನು ಒದಗಿಸಲು ರಾಜ್ಯದ ಬಿಲ್ಡರ್ ಅಸೋಸಿಯೇಷನ್ (ಕ್ರೇಡಾಯಿ) ಅವರ ಜೊತೆ ಮಾತುಕತೆ ನಡೆಸಿ ವ್ಯವಸ್ಥೆ ಮಾಡಬೇಕು.
  6. ಕೋವಿಡ್ ಎರಡನೇ ಅಲೆ‌ ಕುರಿತಾಗಿ ಕಟ್ಟಡ ನಿರ್ಮಾಣ ವಲಯದಲ್ಲಿ ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಕೂಡಲೇ ಕಲ್ಯಾಣ ಮಂಡಳಿ ಮತ್ತು ‌ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕ ಸಂಘಗಳ ಸಮನ್ವಯ ಸಮಿತಿ ನಾಯಕರ ಸಭೆಯನ್ನು ಈ ಕೂಡಲೇ ಕರೆದು ಚರ್ಚಿಸಬೇಕೆಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ ಪರವಾಗಿ ಕೋರಿಕೆ

ಈ ಮೇಲ್ಕಂಡ ಬೇಡಿಕೆಗಳ ಮನವಿಯನ್ನು ಕಾರ್ಮಿಕ ಸಚಿವರಿಗೆ ಸಲ್ಲಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *