ಕಲಬುರಗಿ: ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ನೇಮಕಾತಿ ಪರೀಕ್ಷೆಯಲ್ಲಿ ಬ್ಲೂಟೂತ್ ಬಳಸಿ ಪರೀಕ್ಷೆ ಬರೆಯಲು ಯತ್ನಿಸಿದ ಪ್ರಕರಣದ ಕಿಂಗ್‌ಪಿನ್ ಆರ್.ಡಿ. ಪಾಟೀಲ್ ನಗರದ ವಸತಿ ಸಮುಚ್ಚಯದಿಂದ ಸೋಮವಾರ ಪರಾರಿಯಾಗಿದ್ದು, ಆತ ಕಾಪೌಂಡ್ ಹಾರಿ ಪರಾರಿಯಾದ ಘಟನೆ ಸಿಸಿಟಿವಿಯಲ್ಲಿ ದಾಖಲಾಗಿದೆ.
ಕಲಬುರಗಿ ನಗರದ ಜೇವರ್ಗಿಯ ರಸ್ತೆಯಲ್ಲಿ ಇರುವ ವಸತಿ ಸಮುಚ್ಚಯ ಒಂದರಲ್ಲಿ ಅಡಗಿಕೊಂಡಿದ್ದ ಎಂಬ ಮಾಹಿತಿ ಲಭಿಸಿದ ಬೆನ್ನಲ್ಲಿಯೆ ಪೊಲೀಸರು ಅಲ್ಲಿಗೆ ತೆರಳಿದ್ದರು. ಪೊಲೀಸರು ಬರುತ್ತಿರುವುದನ್ನು ಗಮನಿಸಿದ ಆರ್.ಡಿ. ಪಾಟೀಲ್, ವಸತಿ ಸಮುಚ್ಚಯದ ಕಾಂಪೌಂಡ್ ಮೇಲಿಂದ ತಪ್ಪಿಸಿಕೊಂಡು ಹೋಗಿದ್ದಾನೆ. ಈ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಇದೀಗ ಆತನ ಬಂಧನಕ್ಕೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ವಸತಿ ಸಮುಚ್ಚಯ ಹಿಂಭಾಗದ ಕಾಂಪೌಂಡ್ ಮತ್ತು ಗೇಟ್ ಹತ್ತಿ ಇಳಿಯುವಾಗ ಕಾಲಿನಿಂದ ಬೂಟ್ ಕಳಚಿ ಬಿದ್ದಿದೆ. ಬೂಟ್ ಎತ್ತಿಕೊಡುವಂತೆ ಅಲ್ಲಿಯೇ ಇದ್ದ ಮಹಿಳೆಯೊಬ್ಬರಿಗೆ ಕೇಳಿದ್ದಾನೆ. ಮಹಿಳೆ ಅದಕ್ಕೆ ಸ್ಪಂದಿಸದೆ ಸ್ವಚ್ಛತೆಯಲ್ಲಿ ನಿರತವಾಗಿದ್ದು, ಮತ್ತೊಬ್ಬ ಮಹಿಳೆ ಬರುತ್ತಿದ್ದಂತೆ ಆರ್.ಡಿ. ಪಾಟೀಲ ಅಲ್ಲಿಂದ ಕಾಲ್ಕಿತ್ತಿರುವ ವಿಡಿಯೊ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಇದು ಸೋಮವಾರ ಮಧ್ಯಾಹ್ನ 1 ಗಂಟೆಯ ವೇಳಗೆ ನಡೆದಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ‘ಕಳೆದ ಒಂದು ವಾರದಿಂದ ಆರ್.ಡಿ.ಪಾಟೀಲಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಈಗಾಗಲೇ 20 ಆರೋಪಿಗಳ ಬಂಧನವಾಗಿದೆ. ಆರ್.ಡಿ. ಪಾಟೀಲ ಇರುವಿಕೆಯ ಬಗ್ಗೆ ಖಚಿತ ಮಾಹಿತಿ ಇದ್ದರೂ ಅಧಿಕಾರಿಗಳು ಉದ್ದೇಶಪೂರ್ವಕವಾಗಿ, ಬೇಜವಾಬ್ದಾರಿ ತೋರಿದ್ದು ಕಂಡುಬಂದರೇ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಕೆಇಎ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಆರೋಪ; ಪರೀಕ್ಷೆ ವೇಳೆ ಆಫ್ ಆಗಿದ್ದ ಸಿಸಿ ಕ್ಯಾಮೆರಾ
ರಾಜ್ಯದ ಕಲಬುರಗಿ, ಯಾದಗಿರಿ ಮಾತ್ರವಲ್ಲದೆ ಹುಬ್ಬಳ್ಳಿ, ವಿಜಯಪುರ, ಬೆಂಗಳೂರಿನಲ್ಲಿಯೂ ಅಕ್ರಮ ನಡೆದಿರುವ ಬಗ್ಗೆ ತನಿಖೆ ನಡೆಯುತ್ತಿದೆ. ಪೊಲೀಸ್ ತನಿಖೆಯಿಂದ ಏನು ಮಾಹಿತಿ ಬರುತ್ತದೆಯೋ ನೋಡಿಕೊಂಡು ಸಿಐಡಿಗೆ ಒಪ್ಪಿಸಬೇಕೆ, ಬೇಡವೆ ಎಂಬ ತೀರ್ಮಾನವನ್ನು ಗೃಹ ಸಚಿವರು ತೆಗೆದುಕೊಳ್ಳುತ್ತಾರೆ. ನಾವು ಅವರ ತೀರ್ಮಾನಕ್ಕೆ ಬದ್ಧರಾಗುತ್ತೇವೆ’ ಎಂದು ತಿಳಿಸಿದರು.
ಅಕ್ಟೋಬರ್ 28ರಂದು ಕೆಇಎ ನೇಮಕಾತಿ ಪರೀಕ್ಷೆ ನಡೆಯಿತು. ಅಫಜಲಪುರ, ಕಲಬುರಗಿ ನಗರದ ಕೆಲವು ಪರೀಕ್ಷಾ ಕೇಂದ್ರದಲ್ಲಿ ಅಭ್ಯರ್ಥಿಗಳು ಅಕ್ರಮವಾಗಿ ಬ್ಲೂಟೂತ್ ಡಿವೈಸ್ ಬಳಸಲು ಯತ್ನಿಸಿ ಬಂಧಿತರಾಗಿದ್ದರು. ಈ ಅಭ್ಯರ್ಥಿಗಳಿಗೆ ಬ್ಲೂಟೂತ್ ಪೂರೈಸಲು ಆರ್.ಡಿ. ಪಾಟೀಲ್ ಹಣ ಪಡೆದಿದ್ದ ಎನ್ನಲಾಗಿದ್ದು, ನವೆಂಬರ್ 19ರಂದು ನಡೆಯುವ ಪೊಲೀಸ್ ಕಾನ್‌ಸ್ಟೆಬಲ್ ಪರೀಕ್ಷೆಗೂ ಅಭ್ಯರ್ಥಿಗಳೊಂದಿಗೆ ಆರ್.ಡಿ. ಪಾಟೀಲ ಒಪ್ಪಂದ ಮಾಡಿಕೊಂಡಿದ್ದ. ಅಭ್ಯರ್ಥಿಗಳಿಗೆ ಬ್ಲೂಟೂತ್ ವ್ಯವಸ್ಥೆ ಮಾಡಿಕೊಡಲು ಕಲಬುರಗಿ ನಗರಕ್ಕೆ ಬಂದು ವಸತಿ ಸಮುಚ್ಚಯ ಒಂದರಲ್ಲಿ ತಂಗಿದ್ದ. ಬ್ಲೂಟೂತ್ ಪ್ರಕರಣ ಹೊರಬರುತ್ತಿದ್ದಂತೆ ಆರ್.ಡಿ. ಪಾಟೀಲ ತಲೆ ಮರೆಸಿಕೊಂಡಿದ್ದ.
ವಿಡಿಯೋ ನೋಡಿ: ಶಿಕ್ಷಣ ಇಲಾಖೆಯ ಜವಾಬ್ದಾರಿ ಪಂಚಾಯತ್ ರಾಜ್ ಇಲಾಖೆಗೆ! Janashakthi Media