ಕೆಇಎ,ಸಿಇಟಿ 2025ರ ವೇಳಾಪಟ್ಟಿ ಪ್ರಕಟ: 23 ರಿಂದ ಫೆಬ್ರವರಿ 21ರ ತನಕ ಅರ್ಜಿ ಸಲ್ಲಿಕೆ ಮಾಡಬಹುದು

ಬೆಂಗಳೂರು: ಕೆಇಎ (ಕರ್ನಾಟಕ ಪರೀಕ್ಷಾ ಪ್ರಾಧಿಕಾರ ) ಸಿಇಟಿ (ಸಾಮಾನ್ಯ ಪ್ರವೇಶ ಪರೀಕ್ಷೆ) 2025ರ ವೇಳಾಪಟ್ಟಿ ಪ್ರಕಟಿಸಲಾಗಿದೆ. ಈ ಪರೀಕ್ಷೆ ಬರೆಯಲು ಬಯಸುವ ವಿದ್ಯಾರ್ಥಿಗಳು ಆನ್‌ಲೈನ್ ಮೂಲಕ ಜನವರಿ 23 ರಿಂದ ಫೆಬ್ರವರಿ 21ರ ತನಕ ಅರ್ಜಿ ಸಲ್ಲಿಕೆ ಮಾಡಿ ನೋಂದಣಿ ಮಾಡಿಕೊಳ್ಳಬಹುದು. ವೇಳಾಪಟ್ಟಿ 

ಪಶು ವೈದ್ಯಕೀಯ,ಇಂಜಿನಿಯರಿಂಗ್  ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಸಿಇಟಿ ಪರೀಕ್ಷೆಯನ್ನು ನಡೆಸಲಾಗುತ್ತದೆ. ಉನ್ನತ ಶಿಕ್ಷಣ ಸಚಿವ ಡಾ. ಎಂ. ಸಿ. ಸುಧಾಕರ್ ಗುರುವಾರ ಸಿಇಟಿ-2025ರ ವೇಳಾಪಟ್ಟಿಯನ್ನು ಘೋಷಣೆ ಮಾಡಿದರು. 2025ನೇ ಸಾಲಿನ ಸಿಇಟಿ ಪರೀಕ್ಷೆ ಏಪ್ರಿಲ್ 16, 17ರಂದು ನಡೆಯಲಿದೆ. ಪರೀಕ್ಷೆ ಬರೆಯುವ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಬೇಕು.

ಸಚಿವ ಡಾ. ಎಂ. ಸಿ. ಸುಧಾಕರ್ ಯೋಗ ಮತ್ತು ನ್ಯಾಚುರೋಪತಿ, ಬಿ-ಫಾರ್ಮ ಮತ್ತು ಫಾರ್ಮ-ಡಿ, ಕೃಷಿ ವಿಜ್ಞಾನ ಕೋರ್ಸ್ ಮತ್ತು ಬಿಎಸ್‌ಸಿ (ನರ್ಸಿಂಗ್) ಕೋರ್ಸ್‌ಗಳ ಪ್ರವೇಶಕ್ಕೂ ಸಿಇಟಿ ಪರೀಕ್ಷೆಯ ಅಂಕಗಳನ್ನು ಪರಿಗಣಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

ಸಿಇಟಿ ಪರೀಕ್ಷೆಗೆ ಅರ್ಜಿಯು ಸಾಮಾನ್ಯವಾಗಿರುತ್ತದೆ. ಆದ್ದರಿಂದ ವೈದ್ಯಕೀಯ, ದಂತ ವೈದ್ಯಕೀಯ, ಆಯುಷ್ ಪ್ರವೇಶಾತಿಗೂ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ನೋಂದಾಯಿಸಿಕೊಂಡು ಅರ್ಜಿ ಶುಲ್ಕ ಪಾವತಿ ಮಾಡಬೇಕು. ಆರ್ಕಿಟೆಕ್ಚರ್, ಬಿಪಿಟಿ, ಬಿಪಿಒ, ಬಿಎಸ್‌ಸಿ ಅಲೈಡ್, ಹೆಲ್ತ್‌ಸೈನ್ಸ್ ಕೋರ್ಸ್‌ಗಳ ಪ್ರವೇಶಾತಿಗೆ ಸಹ ಇದೇ ಅರ್ಜಿ ಅನ್ವಯವಾಗಲಿದೆ ಎಂದು ಕೆಇಎ ಹೇಳಿದೆ.

ಇದನ್ನೂ ಓದಿ : ಕಜಾವಿವಿ ವಿದ್ಯಾರ್ಥಿಗಳ ಸೆಮಿಸ್ಟರ ಫಲಿತಾಂಶ ಬಿಡುಗಡೆ, ಅಂಕಪಟ್ಟಿ ಸೇರಿದಂತೆ ಅನೇಕ ಸಮಸ್ಯೆಗಳ ಪರಿಹಾರಕ್ಕಾಗಿ ಎಸ್ಎಫ್ಐ ಮನವಿ.

ಸೀಟ್‌ ಬ್ಲಾಕಿಂಗ್‌’ ದಂಧೆಗೆ ಸಂಪೂರ್ಣ ಕಡಿವಾಣ ಹಾಕಲು ನಿರ್ಧರಿಸಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಒಂದು ಅರ್ಜಿಗೆ ಒಂದು ಮೊಬೈಲ್‌ ಸಂಖ್ಯೆ ಕಡ್ಡಾಯಗೊಳಿಸಿದೆ. ಅದೇ ಸಂಖ್ಯೆಗೆ ಬರುವ ಒಟಿಪಿ ದೃಢೀಕರಿಸಿದ ನಂತರವೇ ಅರ್ಜಿ ಭರ್ತಿ ಮಾಡಲು ಸಾಧ್ಯವಾಗುತ್ತದೆ. ಅಲ್ಲದೇ, ಪರೀಕ್ಷಾ ದಿನಾಂಕ, ಸೂಚನೆಗಳು, ಸೀಟು ಹಂಚಿಕೆ, ಪ್ರವೇಶ ಸೇರಿದಂತೆ ಎಲ್ಲ ಮಾಹಿತಿಗಳೂ ಅದೇ ಮೊಬೈಲ್‌ ಸಂಖ್ಯೆಗೆ ರವಾನೆಯಾಗಲಿವೆ. ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಇದೇ ಜ.23ರಿಂದ ಫೆ.21ರವರೆಗೆ ಅವಕಾಶ ನೀಡಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ ಮಾಹಿತಿ ನೀಡಿದ್ದಾರೆ.

ಒಬ್ಬ ಅಭ್ಯರ್ಥಿ ಒಂದು ಮೊಬೈಲ್ ಸಂಖ್ಯೆಯನ್ನು ಮಾತ್ರ ಉಪಯೋಗಿಸಬಹುದು. ಮೊಬೈಲ್ ಸಂಖ್ಯೆ ಬದಲಾವಣೆಯನ್ನು ಯಾವುದೇ ಹಂತದಲ್ಲಿ ಪರಿಗಣಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಅಭ್ಯರ್ಥಿಗಳು ನೀಡುವ ಜಾತಿ/ ಆದಾಯ/ 371 (ಜೆ) ಸಂಖ್ಯೆಯ ಆಧಾರದ ಮೇಲೆ ಮೀಸಲಾತಿ ವಿವರಗಳನ್ನು ನೀಡಲಾಗುತ್ತದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಎಲ್ಲಾ ಪಿಯುಸಿ ಕಾಲೇಜುಗಳಿಗೆ ಲಾಗಿನ್ ನೀಡಿ ಅಭ್ಯರ್ಥಿಗಳಿಂದ ಭರ್ತಿ ಮಾಡಿದ ಅರ್ಜಿಗಳನ್ನು ಪರಿಶೀಲಿಸಲು ಸೂಚಿಸಿದೆ. ಕಾಲೇಜಿನವರು ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ವಿವರಗಳನ್ನು ಪಡೆದು ಪರಿಶೀಲನೆ ಮಾಡಲು ತಂತ್ರಾಂಶವನ್ನು ಸಿದ್ಧಗೊಳಿಸಲಾಗಿದೆ. ಅಭ್ಯರ್ಥಿಗಳು ಬಿಇಒ ಕಛೇರಿಗೆ ಭೇಟಿ ನೀಡುವ ಅವಶ್ಯಕತೆ ಇರುವುದಿಲ್ಲ.

ಎನ್‌ಸಿಸಿ, ಕ್ರೀಡೆ, ಸೈನಿಕ, ಮಾಜಿ ಸೈನಿಕ ಸೇರಿದಂತೆ ವಿಶೇಷ ವರ್ಗಗಳ ಅಡಿ ಮೀಸಲಾತಿ ಬಯಸುವ ಅಭ್ಯರ್ಥಿಗಳು ಸಂಬಂಧಿಸಿದ ಪ್ರಮಾಣ ಪತ್ರಗಳನ್ನು ಕೆಇಎನಲ್ಲಿ ಖುದ್ದಾಗಿ ಸಲ್ಲಿಸಲು ಪ್ರತ್ಯೇಕವಾಗಿ ಪರೀಕ್ಷೆ ದಿನಾಂಕಗಳನ್ನು ನೀಡಲಾಗುತ್ತದೆ ಎಂದು ತಿಳಿಸಲಾಗಿದೆ. ವೇಳಾಪಟ್ಟಿ 

ಏಪ್ರಿಲ್ 16 – ಭೌತಶಾಸ್ತ್ರ (ಬೆಳಿಗ್ಗೆ 10.30) ಮತ್ತು ರಸಾಯನಶಾಸ್ತ್ರ (ಮಧ್ಯಾಹ್ನ 2.30)

ಏಪ್ರಿಲ್ 17 – ಗಣಿತ (ಬೆಳಿಗ್ಗೆ 10.30) ಮತ್ತು ಜೀವಶಾಸ್ತ್ರ (ಮಧ್ಯಾಹ್ನ 2.30)

ಏಪ್ರಿಲ್ 18 – ಹೊರನಾಡು ಮತ್ತು ಗಡಿನಾಡು ಕನ್ನಡಿಗರಿಗೆ ಕನ್ನಡ ಭಾಷಾ ಪರೀಕ್ಷೆ ನಡೆಯಲಿದೆ.

ಇದನ್ನೂ ನೋಡಿ : ಉನ್ನತ ಶಿಕ್ಷಣವನ್ನು ಕೇಂದ್ರೀಕರಣಗೊಳಿಸುವ, ಆರೆಸ್ಸೆಸ್ ಸಿದ್ಧಾಂತಕ್ಕೆ ಅವಕಾಶ ಕಲ್ಪಿಸುವ ಯುಜಿಸಿ ತಿದ್ದುಪಡಿಗಳು…

Donate Janashakthi Media

Leave a Reply

Your email address will not be published. Required fields are marked *