ಬೆಂಗಳೂರು: ಸಿಐಟಿಯು ಸಂಘಟನೆಯ ಅಖಿಲ ಭಾರತ ಸಮ್ಮೇಳನ ಜನವರಿಯಲ್ಲಿ ಬೆಂಗಳೂರಿನಲ್ಲಿ ನಡೆಯಲಿದೆ. ಇದರ ಅಂಗವಾಗಿ ಬಹುಭಾಷ ಕವಿಗೋಷ್ಠಿಯನ್ನು 2022ರ ಡಿಸೆಂಬರ್ 24ರಂದು ಬಸವನಗುಡಿ ನ್ಯಾಷನಲ್ ಕಾಲೇಜು, ಹೆಚ್.ಎನ್. ಮಲ್ಟಿ ಮೀಡಿಯಾ ಸಭಾಂಗಣದಲ್ಲಿ ಜರುಗಿತು.
ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ ಸಾಹಿತಿ ಹಾಗೂ ಚಲನಚಿತ್ರ ನಿರ್ದೇಶಕರಾದ ಬರಗೂರು ರಾಮಚಂದ್ರಪ್ಪ ಅವರು ಮಾತನಾಡಿ, ಚಿಂತಕರನ್ನು ಕೊಲ್ಲಬಹುದು ಚಿಂತನೆಯನ್ನು ಕೊಲ್ಲಲು ಸಾಧ್ಯವಿಲ್ಲ. ಯಾಕೆಂದರೆ ಕವಿಗಳು ಇದ್ದಾರಲ್ಲ. ದೇಹ ಮತ್ತು ಮನಸ್ಸು ಎರಡು ಒಳಗೊಂಡಿದೆ. ದೇಹವನ್ನು ಬಂಧನದಲ್ಲಿ ಇಡಬಹುದು, ಆದರೆ ಮನಸ್ಸು ಸದಾ ಚಲಿಸುತ್ತಿಲೇ ಇರುತ್ತದೆ. ಅಂತಹದೊಂದು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಣೆ ಮಾಡಿಕೊಂಡು ಬಂದತಂಥಹ. ಅಭಿವ್ಯಕ್ತಿಸಿದಂತಹ ಒಂದು ಪರಂಪರೆಗೆ ರೂಪಕವಾಗುವ ರೀತಿಯಲ್ಲಿ ಇಂದಿನ ಕವಿಗೋಷ್ಟಿ ನಡೆದಿದೆ ಎಂದು ತಿಳಿಸಿದರು.
ಕವಿಗೋಷ್ಟಿಗೆ ಬೇರೆ ಬೇರೆ ಆಯಾಮಗಳು ಇರುತ್ತವೆ. ಆದರೆ ಇಂದಿನ ಈ ಕವಿಗೋಷ್ಟಿ ಅತ್ಯಂತ ಮುಖ್ಯವಾದದ್ದು. ಇವತ್ತು ಅಪವಾಖ್ಯಾನ ಕಾಲದಲ್ಲಿ ಬದುಕುತಿದ್ದೇವೆ. ಕವಿಗಳನ್ನು ಬಂಧನದಲ್ಲಿ ಇಡುತ್ತಾರೆ ಎನ್ನುತ್ತಾರಲ್ಲ. ಇಲ್ಲಿ ಇರುವವರಿಗೆ ಯಾರಿಗಾದರೂ ಭಯವಿತ್ತೆ. ಕವಿಗಳು ಅನುವಾದ ಓದಬೇಡಿ ಎಂದರೂ ಓದಿದರು. ಒಂದು ಕವಿತೆ ಓದಿ ಎಂದರೆ ಎರಡೆರಡು ಓದಿದರು. ಅಂದರೆ ಇದನ್ನೇ ಸ್ವಾತಂತ್ರ್ಯ ಅಂತ ಕರೆಯುವುದು ನಾವು. ನೀವು ಏನೇ ನಿಯಂತ್ರಣವನ್ನು ಮಾಡಬಹುದು. ಅದರೆ ಅದನ್ನು ಮೀರಿ ನಮಗೆ ಏನೋ ಒಂದು ಇದೆ ನಮ್ಮೊಳಗಡೆ ಅಡಗಿರುವುದನ್ನು ನಾವು ಹೇಳೆ ಹೇಳುತ್ತೇವೆ ಅನ್ನುವುದು ಇದೆಯಲ್ಲಾ ಅದೂ ನಿಜವಾದ ಸ್ವಾತಂತ್ರ್ಯವೇ ಆಗಿದೆ ಎಂದರು.
ಇದನ್ನು ಓದಿ: ಸಿಐಟಿಯು ಅಖಿಲ ಭಾರತ ಸಮ್ಮೇಳನ ಅಂಗವಾಗಿ ಕಲಾ ಜಾಥಾ, ಬಹುಭಾಷಾ ಕವಿಗೋಷ್ಟಿ, ಚಿತ್ರಕಲೆ ರಚನೆ-ಕಿರುಚಿತ್ರ ಸ್ಪರ್ಧೆ
ಸಂವಿಧಾನದಲ್ಲಿ ಕೆಲವುಗಳಿಗೆ ನಿರ್ಬಂಧಗಳು ಇರುತ್ತದೆ. ಅವುಗಳನ್ನು ಮೀರುವ ಶಕ್ತಿ ಎಲ್ಲರಲ್ಲೂ ಒಂದಲ್ಲಾ ಒಂದ ಸಂದರ್ಭದಲ್ಲಿ ಎದುರಾಗುತ್ತದೆ. ಹಾಗೆ ಕವಿಗಳಿಗೆ ಹೇರಿದರೂ ಸಹ ಅದನ್ನು ಮೀರಿ ತಮ್ಮೊಳಗಿನ ತಹತಹವನ್ನು ಹಂಚಿಕೊಂಡಿದ್ದಾರೆ. ಅದನ್ನು ಕೇಳಿರುವ ನಿಮಗೂ ಅವೆಲ್ಲವೂ ಮನ್ನಣೆಗೆ ಒಳಗಾಗಿದ್ದು ಎಂದು ನಾನು ಭಾವಿಸುವೇನು. ಇಂದಿನ ಸಂದರ್ಭ ಎಲ್ಲವನ್ನೂ ಅಪವಾಖ್ಯಾನ ಮಾಡಲಾಗುತ್ತಿದೆ. ಸ್ವಾತಂತ್ರ್ಯವನ್ನು ಅಪವಾಖ್ಯಾನ ಮಾಡಲಾಗುತ್ತಿದೆ. ಧರ್ಮವನ್ನು, ಸಂಸ್ಕೃತಿಯನ್ನು, ಸತ್ಯವನ್ನು ಅಪವಾಖ್ಯಾನ ಮಾಡಲಾಗುತ್ತಿದೆ. ಪ್ರಜಾಪ್ರಭುತ್ವ ಅಪವಾಖ್ಯಾನಕ್ಕೆ ಒಳಗಾಗಿದೆ ಎಂದು ಬರಗೂರು ರಾಮಚಂದ್ರಪ್ಪ ತಿಳಿಸಿದರು.
ಧರ್ಮದ ಹೆಸರಿನಲ್ಲಿ ಅಧರ್ಮವನ್ನು ಹೇರುವ, ಸಂಸ್ಕೃತಿಯ ಹೆಸರಿನಲ್ಲಿ ಹುಸಿ ಸಂಸ್ಕೃತಿಯನ್ನು ಹೇರುವ, ಬಹುಸಂಸ್ಕೃತಿಯನ್ನು ನಿರಾಕರಿಸುವ ಏಕ ಸಂಸ್ಕೃತಿಯ ವೀರರನ್ನು ನಾವು ಈಗ ಕಾಣುತ್ತಿದ್ದೇವೆ. ಸುಳ್ಳಿಗೆ ಸಾಕ್ಷಿ ಬೇಕಾಗಿಲ್ಲ ಇವತ್ತು. ಸತ್ಯಕ್ಕೆ ಸಾಕ್ಷಿ ಕೇಳುವ ಕಾಲದಲ್ಲಿದ್ದೇವೆ ಇಂದು. ಅವಿವೇಕವನ್ನು ವಿವೇಕ ಎಂದು ಹೇಳಲಾಗುತ್ತಿದೆ. ಹೀಗೆ ಎಲ್ಲವೂ ಪಲ್ಲಟ್ಟಗೊಂಡಂತಹ ಭಾರತದಲ್ಲಿ ನಾವು ಬದುಕುತ್ತಿದ್ದೇವೆ. 70-80ರ ದಶಕದಲ್ಲಿ ನಾವು ಸಮಾನತೆಯ ಕುರಿತು ಮಾತನಾಡುತ್ತಿದ್ದೇವು. ಇಂದಿನ ಅನೇಕ ಕವಿತೆಗಳು ಆಗಿನ 70-80ರ ದಶಕದಲ್ಲಿ ರೂಪುಗೊಳ್ಳುತ್ತಿದ್ದಂತ ಆಶಯಗಳು ಒಳಗೊಂಡ ಕವಿತೆಗಳಾಗಿಯೇ ಇವೆ. ಆಗ ಸಮಾನತೆಯ ಕುರಿತು ಮಾತನಾಡುತ್ತಿದ್ದ ನಾವು ಈಗ ಮಾತನಾಡುತ್ತಿರುವುದು ಸಹಿಷ್ಣುತೆಯನ್ನು. ಅಂತಹ ಪಲ್ಲಟವಾಗಿರುವ ದೇಶದಲ್ಲಿ ನಾವು ಇದ್ದೇವೆ.
ಆದರೆ, ನಿಜವಾದ ಸಹಿಷ್ಣುತೆ ಇದೆಯಲ್ಲ. ಆ ಸಹಿಷ್ಣತೆಯ ಆಶಯದ ಒಳಗೆ ಸಮಾನತೆ ಇದೆ. ಸಮಾನತೆಯಿಲ್ಲದೆ ಸಹಿಷ್ಣುತೆಯನ್ನು ಸಾಧಿಸಲು ಸಾಧ್ಯವಾಗಲಿಲ್ಲ. ಖಲೀಲ್ ಇಬ್ರಾನ್ ಹೀಗೆ ಹೇಳಿದ್ದ ʻನನ್ನ ತಾಯಿ ಒಂದೂ ಕವಿತೆಯನ್ನು ಬರೆಯಲಿಲ್ಲ. ನೂರಾರು ಕವಿತೆಗಳ ಒಳಗೆ ಬದುಕಿದ್ದಾಳೆʼ ಎಂದು. ಆ ನೂರಾರು ಕವಿತೆಗಳಲ್ಲಿ ಬದುಕುವ ಮನಸ್ಥಿತಿ ಇದೇ ಅಲ್ಲ ಅದು ತಾಯಿತನದ ಮನಸ್ಥಿತಿ. ನಿಜವಾದ ತಾಯಿತನ ಅಂದರೆ ಅದು ನಿಜವಾದ ಸಮಾನತೆ ಮತ್ತು ಸಹಿಷ್ಣುತೆಯಾಗಿದೆ.
ಮಾಕ್ಸಿಂ ಗಾರ್ಕಿ ಹೀಗೆ ಹೇಳಿದ್ದಾರೆ, ಒಬ್ಬ ಕವಿಯ ಮತ್ತು ಒಬ್ಬ ಸಾಹಿತಿಯ ಜವಾಬ್ದಾರಿ ಏನು ಅಂದರೆ, ಅದು ನಿಜವಾದ ಅರ್ಥದಲ್ಲಿ ಕಾಲದ ದನಿಯಾಗಿರಬೇಕು. ಯಾವುದೇ ಸಾಹಿತ್ಯ ಹೆಚ್ಚುಕಾಲ ಬಾಳೋದು ಯಾವಾಗ ಅದನ್ನು ನೋಡಬೇಕು. ಅದು ಕಾಲಕ್ಕೆ ಕಾಲಲ್ಲದ ದನಿಯಾಗಿರಬೇಕು. ಕಲಾಕಾರರು ಇದಾರಲ್ಲ ಅವರು ಕಾಲದ ದನಿ. ಕಾಲದ ದನಿ ಎಂದರೆ, ತನ್ನ ಧರ್ಮಕ್ಕೆ, ತನ್ನ ವರ್ಗಕ್ಕೆ, ತನ್ನ ಕಿವಿಗೆ ಹಾಗೂ ತನ್ನ ಹೃದಯಕ್ಕೆ ಧಕ್ಕೆ ತರುವ ಯಾವುದೇ ವಿಷಯಗಳಿಗೆ ಯಾರು ದನಿಯಾಗುತ್ತಾರೋ ಅದನ್ನು ಕಾಲದ ದನಿ ಎನ್ನುತ್ತೇವೆ. ಕಾಲದ ದನಿಯಾಗಿ ಅಕ್ಷರ ರೂಪವನ್ನು ಕೊಡುತ್ತಾರಲ್ಲಾ ಅದು ನಿಜವಾದ ಕಾಲದ ದನಿ. ಅಕ್ಷರ ರೂಪವನ್ನು ಕೊಡಲಾಗದಿದ್ದರೂ ಕಾಲದ ದನಿಯಾಗಬೇಕಾಗಿರುವ ಅಗತ್ಯ ನಮ್ಮೆಲ್ಲರ ಮೇಲಿದೆ ಎಂದು ತಿಳಿಸಿದರು.
ಇದನ್ನು ಓದಿ: ಸಿಐಟಿಯು ಅಖಿಲ ಭಾರತ ಸಮ್ಮೇಳನ ನಿಧಿ ಸಂಗ್ರಹಕ್ಕೆ ಸಾಥ್ ನೀಡಿದ ಚಿಣ್ಣರು
ಇಂದು ಕೇಳುವ ಸ್ಥಿತಿಗಳಿಲ್ಲ. ಮಾತನಾಡುವ ನಾಲಿಗೆಗಳಿವೆ. ಪ್ರಜಾಪ್ರಭುತ್ವ ಯಾವತ್ತು ಜಾಗರೂಕರಾಗಿರುತ್ತದೆ. ಅಂದರೆ, ಕಿವಿಗಳು ಜಾಗರೂಕರಾಗಿದ್ದಾಗ ಪ್ರಜಾಪ್ರಭುತ್ವ ಜಾಗರೂಕರಾಗಿರುತ್ತದೆ. ಆದರೆ ನಾಲಗೆಗಳು ಜಾಗರೂಕವಾಗಿದೆ ಇಂದು, ಅದು ಎಂಥಹುದ್ದು ಅಂದರೆ ನಾಗರ ನಾಲಿಗೆಗಳು. ಇಂಥಹ ಕಾಲದಲ್ಲಿ ನಾವು ಇದ್ದೇವೆ.
ಇಂದಿನ ಸ್ಥಿತಿ ಹೇಗಾಗಿದೆ ಎಂದರೆ, ಕೇವಲ ಆರ್ಥಿಕ ಭ್ರಷ್ಟಾಚಾರ ನಡೆಯುತ್ತಿಲ್ಲ. ಭಾಷಿಕ ಭ್ರಷ್ಟಾಚಾರ, ಸಾಂಸ್ಕೃತಿಕ ಭ್ರಷ್ಟಾಚಾರ ನಡೆಯುತ್ತಿದೆ. ಭಾಷಿಕ ಭ್ರಷ್ಟಾಚಾರ ಇಂದು ದ್ವೇಷ ಭಾಷಣದಲ್ಲಿ ವಿಜೃಂಭಿಸುತ್ತಿವೆ. ಧರ್ಮಗಳ ಧರ್ಮಗಳ ನಡುವೆ ದ್ವೇಷನ್ನು ತಂದು ಇಡುವುದು. ಭಾಷೆಯನ್ನು ಹೇಗೆ ಬಳಸಬೇಕೋ ಹಾಗೆ ಬಳಸದೇ ಆ ಭಾಷೆಯ ಮೇಲೆ ಅತ್ಯಾಚಾರ ನಡೆಸಲಾಗುತ್ತಿದೆ. ಇಂಥಹ ಸಂದರ್ಭದಲ್ಲಿ ಕಾಲದ ದನಿಯಾಗಬೇಕು ಅಂದರೆ, ಕಾಲದ ಕಾಲ ಬುಡದಲ್ಲಿ ಕುಳಿತುಕೊಳ್ಳುವುದಲ್ಲ. ಕಾಲದ ಜೊತೆಯಲ್ಲಿದ್ದು, ಕಾಲವನ್ನು ಯಾರು ಮೀರುತ್ತಾರೆ ಅವಾಗ ಅವನು ಒಳ್ಳೆ ಕವಿಯಾಗಬಲ್ಲ.
ಡಿ ಡಿ ಕೋಸಾಂಬಿ ಅವರು, ಇತಿಹಾಸಕಾರರ ಕರ್ತವ್ಯದ ಬಗ್ಗೆ ಬರೆದಿದ್ದಾರೆ. ಅದು ಅತ್ಯಂತ ಮಹತ್ವಪೂರ್ಣವಾದದ್ದು, ಅದು ಕೇವಲ ಇತಿಹಾಸಕಾರರಿಗೆ ಮಾತ್ರವಲ್ಲ, ಎಲ್ಲರಿಗೂ ಅನ್ವಯಿಸುತ್ತದೆ. ಇಂದು ನಮಗೆ ಬೇಕಾಗಿರುವ ಗುಣ ಪ್ರತಿನಾಯಕತ್ವದ ಗುಣ ಬೇಕಾಗುತ್ತದೆ. ಸಮಾಜ ನಾಯಕ, ಕವಿ ಪ್ರತಿನಾಯಕ ಅಥವಾ ಪ್ರತಿನಾಯಕಿಯಾಗಿರುತ್ತಾರೆ. ಅಂದರೆ, ಕಾಲಕ್ಕೆ ಎದುರಾಗಿರುತ್ತಾ ಇರಬೇಕಾಗುತ್ತದೆ. ಅಂತಹದೊಂದು ಪ್ರತಿನಾಯಕತ್ವದ ಗುಣವನ್ನು ಕನ್ನಡ ಸಾಹಿತ್ಯ ಬಹಳ ಹಿಂದಿನಿಂದ ಕೊಡುತ್ತಾ ಬಂದಿದೆ. ಜನರ ಮದ್ಯೆ ನಾವು ಹೋಗಲು ಬೇಕಾಗಿರುವ ಪರಂಪರೆಯ ಪ್ರಜ್ಞೆ, ಅಂದರೆ, ಸಮಾನತೆ ಮತ್ತು ಸಹಿಷ್ಣುತೆ ಆಶಯ ಮುಖಾಮುಖಿಯಾಗಿ ಹೋದರೆ ಜನರನ್ನು ಹೆಚ್ಚು ತಲುಪಲು ಸಾಧ್ಯ.
ಇದನ್ನು ಓದಿ: ಬೆಂಗಳೂರು ದುಡಿಯುವ ವರ್ಗದ ಕೇಂದ್ರ: ಸಿಐಟಿಯು ಪ್ರಧಾನ ಕಾರ್ಯದರ್ಶಿ ತಪನ್ ಸೇನ್
ಹಿಂದೆ ನಾವು ಸ್ವಾಮೀಜಿಗಳ ಜೊತೆ ಕೂರುತ್ತಿರಲಿಲ್ಲ. ಇಂದು ನಾವು ಅವರೊಂದಿಗೆ ಕೂತುಕೊಳ್ಳುವ ಸ್ಥಿತಿ ಬಂದಿದೆ. ಅಷ್ಟೇ ಅಲ್ಲ ಅವರು, ಎಂದೆರಡು ಒಳ್ಳೆ ವಿಚಾರ ತಿಳಿಸಿದರೆ ಸಾಕು ಎನ್ನುವ ಸ್ಥಿತಿಗೆ ಬಂದಿದ್ದೇವೆ. ಅವರಿಗೆ ನಾವು ಪ್ರಗತಿಪರ ಸ್ವಾಮೀಜಿಗಳು ಎಂಬ ಹಣೆಪಟ್ಟಿಯನ್ನು ಕೊಡುತ್ತೇವೆ. ಇದು ಈಗ ಆಗಿರುವ ಪಲ್ಲಟ. ನಾವು ಎದುರುಸುವ ಸವಾಲು 70-80ರ ದಶಕಕ್ಕಿಂತ ಭಿನ್ನವಾದ ಸವಾಲನ್ನು ಎದುರಿಸುತ್ತಿದ್ದೇವೆ.
ಇಂದು ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಪ್ರಜಾಪ್ರಭುತ್ವ ಎಂದರೆ ಚುನಾವಣೆ ಎಂದುಕೊಂಡಿದ್ದೇವೆ. ಪಾರ್ಲಿಮೆಂಟ್ ಸಹ ಚುನಾವಣಾ ಭಾಷಣ ಮಾಡುವ ವೇದಿಕೆಗಳಾಗಿ ಮಾರ್ಪಟ್ಟಿದೆ. ಅದಕ್ಕೆ ಇದ್ದ ಘನತೆಯೂ ಇಲ್ಲದಿರುವ ಸ್ಥಿತಿಯಲ್ಲಿ ನಾವು ಇದ್ದೇವೆ. ನಿಜವಾದ ಅರ್ಥದ ಸಂವಿಧಾನ ಬದ್ಧವಾಗಿರುವ ಸಂಸದೀಯತೆಯ ವೇದಿಕೆಗಳು ಸಹ ದುರುಪಯೋಗ ಆಗುತ್ತಿರುವ ಸಂದರ್ಭದ ಒಳಗೆ ನಾವು ಇದ್ದೇವೆ. ಅದರಲ್ಲೂ ಮುಖ್ಯವಾಗಿ ರಾಜಕೀಯ ನಾಯಕತ್ವವನ್ನು ಆರ್ಥಿಕ ನಾಯಕತ್ವ ಮತ್ತು ಧಾರ್ಮಿಕ ನಾಯಕತ್ವ ನಿಯಂತ್ರಿಸುತ್ತಿದೆ. ಹಾಗಾಗಿಯೇ ಇಂದು ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ಹೇಳುತ್ತಿರುವುದು. ನಮ್ಮಲ್ಲೂ ಸಾಂಸ್ಕೃತಿಕ ರಾಜಕಾರಣವಿದೆ. ಅದು ಬೇರೆ ವಿಷಯ. ಆದರೆ ನಮಗೊಂದು ಜವಾಬ್ದಾರಿ ಇದೆ ಎಂಬುದನ್ನು ಸದಾ ಅರ್ಥೈಸಿಕೊಂಡಿರಬೇಕು.
ಕಾಲದ ದನಿಯಾಗುವುದು ಎಂದರೆ, ಕರುಳಿನ ದನಿಯಾಗುವುದು ಎಂದು ಅರ್ಥ. ಇಡೀ ಇಂದಿನ ಗೋಷ್ಠಿಯೇ ಬಹುತ್ವದ ಗೋಷ್ಠಿಯಾಗಿದೆ. ಮಾತನಾಡುತ್ತಿರುವ ಸಂದರ್ಭದಲ್ಲಿಯೂ ನಮ್ಮ ಮುಂದೆ ದೊಡ್ಡ ಸವಾಲುಗಳು ಇರುವುದನ್ನು ನಾವು ನೋಡುತ್ತಿದ್ದೇವೆ. ಅಂಥಹ ದನಿಯನ್ನು ಅಷ್ಟು ಸುಲಭವಾಗಿ ಅಡಗಿಸುವುದಕ್ಕೆ ಸಾಧ್ಯವಿಲ್ಲ ಎಂಬ ಆಶಾವಾದಿ ನಾನು. ನಾವೆಲ್ಲರೂ ಒಬ್ಬ ನಿಜವಾದ ಮನುಷ್ಯನಾಗಿರಬೇಕು.
ಇದನ್ನು ಓದಿ: ಬೆಂಗಳೂರಿನಲ್ಲಿ ಸಿಐಟಿಯು ಅಖಿಲ ಭಾರತ ಸಮ್ಮೇಳನ : ಉತ್ಸಾಹ ತುಂಬಿದ ಸ್ವಾಗತ ಸಮಿತಿ ರಚನಾ ಸಭೆ
ನೋಮ್ ಚಾಮ್ಸ್ಕಿ ಹೇಳುತ್ತಾರೆ. ಜನರಿಗೆ ಸತ್ಯವನ್ನು ಹೇಳಲು ನಾವು ಸಾಹಿತಿಗಳು ಮಧ್ಯವರ್ತಿಗಳಾಗಬೇಕು ಎಂದು ಹೇಳುತ್ತಾರೆ. ನಾವು ನಿಜವಾದ ಅರ್ಥದಲ್ಲಿ ಮದ್ಯವರ್ತಿಗಳು ಅಂದರೆ, ಸತ್ಯವನ್ನು ಜನರಿಗೆ ತಿಳಿಸುವ ಮದ್ಯವರ್ತಿಗಳು. ಅದು ಮರ್ಯಾದಸ್ಥ ಮನುಷ್ಯನ ಕೆಲಸವಾಗಿದೆ. ನೋಮ್ ಚಾಮ್ಸ್ಕಿ ಹೇಳಿದಂತೆ ನಾವೆಲ್ಲಾ ಮರ್ಯಾದಸ್ಥ ಮನುಷ್ಯರಾಗೋಣ ಎಂದು ಬರೂಗೂರು ರಾಮಚಂದ್ರಪ್ಪ ತಿಳಿಸಿದರು.
ಬಹುಭಾಷ ಕವಿಗೋಷ್ಠಿಯ ಸಂಚಾಲಕರಾದ ಕೆ. ಷರೀಫಾ ಅವರು ಆಶಯ ನುಡಿಗಳನ್ನು ಆಡಿದರು. ಸಿಐಟಿಯು ಅಖಿಲ ಭಾರತ ಸಮ್ಮೇಳನ ಅಂಗವಾಗಿ ಬಹುಭಾಷಾ ಕವಿಗೋಷ್ಠಿಯನ್ನು ಹಮ್ಮಿಕೊಂಡಿದ್ದೇವೆ. ಸಮ್ಮೇಳನಕ್ಕೆ ಹೆಚ್ಚಿನ ಪ್ರಚಾರ ಸಿಗುತ್ತಿದೆ. ಬೇರೆ ಬೇರೆ ರಾಜ್ಯಗಳಿಂದ ಬಂದವರು ಜನರ ದನಿಯಾಗಿ ಉತ್ಸಾಹದಿಂದ ಭಾಗಿಯಾಗುತ್ತಿದ್ದಾರೆ. ರೈತರು, ಕಾರ್ಮಿಕರು, ಮಹಿಳೆಯರು, ವಿದ್ಯಾರ್ಥಿ, ಯುವಜನರು, ಆದಿವಾಸಿಗಳು, ದಲಿತರು, ದಮನಿತರು, ಮಾನವ ಹಕ್ಕುಗಳಿಗಾಗಿ ಕಾವ್ಯ ಸಾಗುತ್ತಿದೆ. ಇಂತಹ ಹಕ್ಕುಗಳಿಗಾಗಿ ಉತ್ತರ ಹುಡುಕುವ ಕೆಲಸವಾಗುತ್ತಿದೆ ಎಂದರು.
ಇಂದಿನ ಸಮಾಜದಲ್ಲಿ ಜನರಿಗೆ ತಮ್ಮ ವೈರಿ ಯಾರೆಂದು ಗುರುತಿಸಲಾರದಷ್ಟು ಮುಗ್ಧರೇನಲ್ಲ. ತಮ್ಮ ವೈರಿಯನ್ನು ಗುರುತಿಸುತ್ತಿದ್ದಾರೆ. ಆ ವೈರಿಯನ್ನು ಗುರುತಿಸುವುದು, ಮತ್ತು ಆ ಜನ ವಿರೋಧಿ ನಡೆಗಳನ್ನು ಎದುರಿಸುವುದು ನಮ್ಮ ಕರ್ತವ್ಯವಾಗಿದೆ. ನಾವು ಸುಮ್ಮನಿದ್ದರೆ ಆಗೋದಿಲ್ಲ. ಜನವಿರೋಧಿ ನಡೆಗಳನ್ನು ನೀವು ವಿರೋಧಿಸುತ್ತಿದ್ದರೆ ಜನರು ಅವುಗಳು ಒಂದಷ್ಟು ತಟ್ಟುತ್ತದೆ. ಎಲ್ಲೆಡೆ ಇಂದು ಬಂಧನದ ಭೀತಿ ಎದುರಾಗಿದೆ. ಇಂತಹವುಗಳ ನಡುವೆ ಕವಿಗೋಷ್ಠಿಗಳು ಸಾಗುತ್ತಿವೆ ಎಂದರು.
ಕವಿಗೋಷ್ಠಿಯ ಉದ್ದೇಶ ಕುರಿತು ನೀಲಾ ಕೆ ಕಲಬುರಗಿ ಇವರು ಮಾತನಾಡಿ, ಮನಸ್ಸಿನ ಮಾತುಗಳಿಗೆ ಸಲಾಂ. ಉತ್ತರ ಕರ್ನಾಟಕ ಭಾಗದಲ್ಲಿ ಕನ್ನಡ ಇಲ್ಲ ಎಂಬ ವಾದದ ಸಂದರ್ಭದಲ್ಲಿ 150 ವರ್ಷಗಳ ಹಿಂದೆ ಚೆನ್ನೂರ್ ಲಾಲ್ ಸಾಬ್ ಅವರು ಕವಿತೆಯನ್ನು ರಚಿಸಿದರು. ಅದರಲ್ಲಿ ಸ್ಥಳೀಯ ಎಲ್ಲಾ ಭಾಷೆಗಳ ಮಿಶ್ರಣದಂತೆ ಬೆರೆತು ಜನರ ಭಾಷೆಯನ್ನು ಅಳವಡಿಸಿಕೊಂಡು ಕವಿತೆಗಳನ್ನು ರಚಿಸಿದರು. ನಮ್ಮಲ್ಲಿ ಬಹುತ್ವದ ಪರಂಪರೆ ತುಂಬಾ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಮೊಹಮ್ಮದ್ ರಫೀ ಅವರು, ಸೂಫಿಗಳು, ಗಾಲಿಬ್, ಕಬೀರ್ ನಂಥವರ ಪ್ರೀತಿ ಪದಗಳ ಕವಿತೆಗಳು ಜನತೆದ ದನಿಯಾಗಿದ್ದವು. ಅವರು ಕವನಗಳನ್ನು ಜನರ ಬಳಿಗೆ ಕೊಂಡ್ಯುತ್ತಿದ್ದರು. ಅದು ಇಂದಿಗೂ ಜನ ಮಾನಸದ ಸೂಪ್ತ ಸ್ಥಿತಿಯಲ್ಲಿ ಉಳಿದುಕೊಂಡು ಬಂದಿದೆ ಎಂದರು.
ಇದನ್ನು ಓದಿ: ಹಣಕಾಸಿನ ನೆರವಿಲ್ಲದ ಲಾಕ್‌ಡೌನ್ ಘೋಷಣೆ – ಕಾರ್ಮಿಕ ವರ್ಗದ ಬದುಕಿನ ಮೇಲೆ ಬರೆ: ಸಿಐಟಿಯು ಟೀಕೆ
ದೇಶವೆಂದರೆ, ಕೋಟೆ ಕೊತ್ತಲುಗಳು, ಕಲ್ಲು ಮಣ್ಣುಗಳಲ್ಲ. ದೇಶವೆಂದರೆ ಮನುಷ್ಯರು. ಅನ್ನ, ಅರಿವು ಬೇರ್ಪಡಿಸುವ ಕೆಲಸ ನಡೆದುಕೊಂಡು ಬರುತ್ತಿವೆ. ಭಾಷೆ ಅನ್ನೋದು ಬದುಕು. ಭಾಷಾ ಯಜಮಾನಿಕ ಸಂಸ್ಕೃತಿಯ ಸೊಕ್ಕು ಅಡಗಿಸಬೇಕಾಗಿದೆ. ಬಸವಣ್ಣ ಅವರಿಂದ ಹಿಡಿದು, ಮೊನ್ನೆ ಮೊನ್ನೆಯ ವರೆಗೆ ಎಂ.ಎಂ. ಕಲಬುರ್ಗಿ, ಗೌರಿ ಲಂಕೇಶ್, ಗೋವಿಂದ ಪನ್ಸಾರೆ, ನರೇಂದ್ರ ದಾಬೋಲ್ಕರ್ ಅಂಥವರನ್ನು ಕೊಲ್ಲುವ ಮೂಲಕ ಜನಪರ ಚಿಂತನೆಗಳನ್ನು ನಾಶಪಡಿಸುವ ಕಾರ್ಯ ನಡೆದುಕೊಂಡು ಬರುತ್ತಿದೆ. ಆದರೂ ಜನರ ಭಾವೈಕ್ಯತೆಯ ಮನಸ್ಸುಗಳಿಗೆ ಸ್ಪಂದಿಸುವ ಅಸಂಖ್ಯಾ ಕವಿಗಳು ಇಂದಿಗೂ ಇದ್ದಾರೆ ಎಂದರು.
ಸಾಹಿತ್ಯದಲ್ಲಿ ನಾವು ಶತ್ರು ಮತ್ತು ಮಿತ್ರರನ್ನು ಗುರುತಿಸಬೇಕಾದ ಅವಶ್ಯಕತೆ ಇದೆ. ಅದರಲ್ಲೂ ಸಜ್ಜನರ ಮಹಾ ಮೌನ ಅತ್ಯಂತ ಅಪಾಯಕಾರಿಯಾದದ್ದು. ಶ್ರಮದಿಂದ ಮೂಡಿಬರುವ ಕಾವ್ಯದ ಮಹತ್ವ ಜನರ ಬದುಕಿನೊಂದಿಗೆ ಬೆರೆತುಕೊಂಡಿದೆ. ವಾಜಪೇಯಿ ಅವರನ್ನು ನಾನು ಕವಿಎಂದು ಸ್ವೀಕರಿಸುವುದಿಲ್ಲ. ಕಾವ್ಯಗಳಲ್ಲಿ ಜನತೆಯ ಶತ್ರುಗಳನ್ನು ಗುರುತಿಸುವ ಶಕ್ತಿ ಅಡಗಿದೆ ಎಂದು ತಿಳಿಸಿದರು.
ಫೈಜ್ ಅಹಮ್ಮದ್ ಫೈಜ್ ಅವರ ವಾಕ್ಯಗಳನ್ನು ಉಲ್ಲೇಖಿಸಿದ ಕೆ. ನೀಲಾ ಅವರು, ಸಾಂಸ್ಕೃತಿಕ ಯಜಮಾನಿಕೆಯ ವಿರುದ್ಧ ಚಳುವಳಿಯ ರೂಪದಲ್ಲಿ ಕಾವ್ಯಗಳು ಬೀದಿಗೆ ಬರುತ್ತವೆ. ಜನತೆಯೊಂದಿಗೆ ಬೆರೆಯಬೇಕಾಗಿದೆ ಎಂದು ಹೇಳಿ, ಕೊರೊನಾ ಸಾಂಕ್ರಾಮಿಕ ರೋಗ ಹರಡುವಿಕೆ ಭೀಕರತೆಯ ಸಂದರ್ಭದಲ್ಲಿ ಗಂಗಾ ನದಿಯಲ್ಲಿ ಸಾಗಿಬಂದ ಹೆಣಗಳ ರಾಜಿಯ ಕುರಿತಂತೆ ರಚಿಸಿದ ಕವಿತೆಯೊಂದನ್ನು ಓದಿದರು.
ಕವಿಗೋಷ್ಠಿಯಲ್ಲಿ….
ಎಲ್ ಎನ್ ಮುಕುಂದರಾಜ್ ʻತಾತಾ ಬಿನ್ನಹʼ ಎಂಬ ಕನ್ನಡ ಕವಿತೆಯನ್ನು, ಶಾಯಿಸ್ತಾ ಯೂಸಫ್ ಉರ್ದು ಕವಿತೆಯನ್ನು, ಎಸ್ ಕೆ ಸಲೀಮಾ ʻಶ್ರಮವೇ ಸೌಂದರ್ಯಂʼ ಎಂಬ ತೆಲುಗು ಕವಿತೆಯನ್ನು, ಸುಷ್ಮಾ ಶಂಕರ್ ʻನರಬಲಿ ಜೊತೆ ನಾರಿ ಬಲಿʼ ಎಂಬ ಮಲೆಯಾಳಂ ಕವಿತೆಯನ್ನು, ಮಮತಾ ಜಿ ಸಾಗರ ʻಕಾಡುʼ ಎಂಬ ಕನ್ನಡ ಕವಿತೆಯನ್ನು, ವಿಲ್ಸನ್ ಕಟೀಲ್ ʻಕಿತ್ತಳೆ ಹಣ್ಣಿನ ಅಚ್ಚೆದಿನ್ʼ ಎಂಬ ಕನ್ನಡ ಕವಿತೆಯನ್ನು, ಮಲರ್ ವಿಳಿ ʻಇರಿಂಬಡಿಕ್ಕಿಂʼ, ʻರೋಜಾ ಕಳ್ʼ ಎಂಬ ತಮಿಳು ಕವಿತೆಯನ್ನು, ಸರ್ದಾರ್ ವಹಾಬ್ ದಾನಿಶ್ ಉರ್ದು ಕವಿತೆಯನ್ನು, ಮಂಜುಳಾ ಹುಲಿಕುಂಟೆ ʻಬನ್ನಿ ಎದುರುಗೊಳ್ಳಿʼ ಎಂಬ ಕನ್ನಡ ಕವಿತೆಯನ್ನು, ದಾದಾ ಪೀರ್ ಜೈಮನ್ ʻನಾವಾಗʼ, ʻಕಲ್ಲಂಗಡಿ ಪರಮಾತ್ಮʼ ಎಂಬ ಕನ್ನಡ ಕವಿತೆಯನ್ನು, ಚಾಂದ್ ಪಾಷಾ ʻನಾ ಅಮ್ಮಕು ಎವರು ಚಪ್ಪಕಂಡಿʼ ಎಂಬ ತೆಲುಗು ಕವಿತೆಯನ್ನು, ಚೈತ್ರ ಶಿವಯೋಗಿಮಠ ʻನಮ್ಮ ಅರಸʼ, ʻಬಣ್ಣʼ ಎಂಬ ಕನ್ನಡ ಕವಿತೆಯನ್ನು ವಾಚನ ಮಾಡಿದರು.
ಕವಿಗೋಷ್ಟಿ ನಂತರ ಸಮುದಾಯ ಬೆಂಗಳೂರು ಪ್ರಸ್ತು ಪಡಿಸಿದ, ಶಶಿಧರ ಭಾರಿಘಾಟ್ ನಿರ್ದೇಶನದ ʻತಂದೆ ಇವರನ್ನ ಕ್ಷಮಿಸಿʼ ಬೀದಿ ನಾಟಕವನ್ನು ಪ್ರಸ್ತುಪಡಿಸಿದರು.
ಬಹುಭಾಷಾ ಕವಿಗೋಷ್ಠಿ ಕಾರ್ಯಕ್ರಮದ ಆರಂಭದಲ್ಲಿ ಕೆ.ಎಸ್. ಲಕ್ಷ್ಮಿ ಮತ್ತು ಈ ಬಸವರಾಜು ಸಂಗಡಿಗರು ಕ್ರಾಂತಿ ಗೀತೆಗಳನ್ನು ಪ್ರಸ್ತುತಪಡಿಸಿದರು. ಸಿಐಟಿಯು ಮುಖಂಡ ಲಿಂಗರಾಜು ಅವರು ಸ್ವಾಗತಕೋರಿದರು. ಕಾರ್ಯಕ್ರಮದ ನಿರೂಪಣೆಯನ್ನು ಕವಿಯತ್ರಿ ದೀಪದ ಮಲ್ಲಿ ಅವರು ನಡೆಸಿಕೊಟ್ಟರು. ಸಿಐಟಿಯು ರಾಜ್ಯ ಕಾರ್ಯದರ್ಶಿ ಕೆ. ಮಹಾಂತೇಂಶ ಅವರು ಸಿಐಟಿಯು ಅಖಿಲ ಭಾರತ ಸಮ್ಮೇಳನದ ತಯಾರಿ ಹಾಗೂ ಅದರ ಅಂಗವಾಗಿ ರಾಜ್ಯದ ವಿವಿಧ ಕಡೆಗಳಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮಗಳ ಬಗ್ಗೆ ತಿಳಿಸಿದರು.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ
ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಸಮಿತಿ ಸಂಚಾಲಕರಾದ ಗುಂಡಣ್ಣ ಚಿಕ್ಕಮಗಳೂರು, ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ, ರಾಜ್ಯ ಖಜಾಂಚಿ, ಪಿ.ಕೆ. ಪರಮೇಶ್ವರ್, ರಾಜ್ಯ ಪದಾಧಿಕಾರಿಗಳಾದ ಕೆ. ಪ್ರಕಾಶ್, ಬಿ ಎನ್ ಮಂಜುನಾಥ್, ಪಿ ಮುನಿರಾಜು, ಮಹಿಳಾ ಸಂಘಟನೆ ರಾಜ್ಯ ಮುಖಂಡರಾದ ಗೌರಮ್ಮ, ಕೆ.ಎಸ್. ವಿಮಲ, ಸಮುದಾಯ ಕರ್ನಾಟಕ ಸಂಘಟನೆಯ ಟಿ ಸುರೇಂದ್ರರಾವ್ ಹಾಗೂ ಸಿಐಟಿಯು ಸಂಘಟನೆಯ ರಾಜ್ಯ ಜಿಲ್ಲಾ ಮುಖಂಡರು, ಕಾರ್ಯಕರ್ತರು, ಮಹಿಳಾ, ವಿದ್ಯಾರ್ಥಿ ಸಂಘಟನೆಯ ಮುಖಂಡರು ಭಾಗವಹಿಸಿದ್ದರು.
ವರದಿ : ವಿನೋದ ಶ್ರೀರಾಮಪುರ