ಬೆಂಗಳೂರು: ಕೋವಿಡ್ ಸಂಕಷ್ಟದಿಂದ ಪಾರು ಮಾಡಲು ರಾಜ್ಯ ಸರಕಾರವು ಘೋಷಿಸಿದ ವಿವಿಧ ಪ್ಯಾಕೇಜುಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಸುಮಾರು ಎರಡೂವರೆ ಸಾವಿರ ಕೋಟಿ ರೂಪಾಯಿ ಸೆಸ್ ಹಣವನ್ನು ಬಳಕೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಸಾಕಷ್ಟು ದುಂದುವೆಚ್ಚವಾಗಿದ್ದು, ಭ್ರಷ್ಟಾಚಾರದ ಶಂಕೆ ವ್ಯಕ್ತವಾಗಿದೆ ಕೂಡಲೇ ಮಂಡಳಿಯಿಂದ ಕೈಗೊಂಡ ಎಲ್ಲಾ ಯೋಜನೆಗಳನ್ನು ತನಿಖೆಗೆ ಒಳಪಡಿಸಬೇಕೆಂದು ಜೆಸಿಟಿಯು ಸಂಘಟನೆಯು ಆಗ್ರಹಿಸಿದೆ.
ಕೊರೊನಾ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಒಂದನೇ ಮತ್ತು ಎರಡನೇ ಅಲೆಯಿಂದಾಗಿ ರಾಜ್ಯದ ಜನತೆ ಹೆಚ್ಚು ಬಾಧಿತರಾಗಿದ್ದು, ಸಂಕಷ್ಟ ಮತ್ತಷ್ಟು ಮುಂದುವರೆದಿದೆ. ಕೋವಿಡ್ ಸಂಕಷ್ಟಗಳ ನಡುವೆಯೂ ರಾಜ್ಯಾದ್ಯಂತ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಕಾರ್ಮಿಕ ಸಂಘಗಳ ಒತ್ತಡದಿಂದಾಗಿ ರಾಜ್ಯ ಸರಕಾರವು ಕೆಲವೊಂದು ಪ್ಯಾಕೇಜುಗಳನ್ನು ಘೋಷಿಸಿತು.
ಇದನ್ನು ಓದಿ: ಮಂಡಳಿ ಹಣದಿಂದ ಕೈಗೊಂಡ ವ್ಯವಹಾರವನ್ನು ತನಿಖೆ ಮಾಡಬೇಕೆಂದು ಕಟ್ಟಡ ಕಾರ್ಮಿಕ ಆಗ್ರಹ
ಮಂಡಳಿ ವತಿಯಿಂದ ಸುಮಾರು 21 ಲಕ್ಷ ಡ್ರೈರೇಶನ್ ಕಿಟ್‌ಗಳನ್ನು ಹಂಚಿಕೆ ಮಾಡಲಾಗಿದೆ. ಅದರ ಗುಣಮಟ್ಟ ತೀರಾ ಕಳಪೆಯಾಗಿದ್ದು ಅನೇಕ ಕಡೆ ಕಾರ್ಮಿಕರು ಪ್ರತಿರೋಧವನ್ನು ವ್ಯಕ್ತಪಡಿಸುತ್ತಿದ್ದಾರೆ. ಅದೇ ರೀತಿಯಲ್ಲಿ ಕಳಪೆ ಮಟ್ಟದ ಲಕ್ಷಾಂತರ ಸುರಕ್ಷಾ ಕಿಟ್‌ಗಳನ್ನು ದುಬಾರಿ ಬೆಲೆಗೆ ಖರೀದಿ ಮಾಡಲಾಗಿದೆ. ಫಲಾನುಭವಿಗಳ ನೋಂದಣಿಗೆ ಸಂಬಂಧಿಸಿದಂತೆ ಹೊಸ ಸಾಫ್ಟ್‌ವೇರ್ ಅಳವಡಿಕೆಯಲ್ಲಿಯೂ ಭ್ರಷ್ಟಾಚಾರ ನಡೆದಿದೆ ಎನ್ನಲಾಗಿದೆ ಜೆಸಿಟಿಯು ಸಂಘಟನೆಯು ಆರೋಪಿಸಿದೆ.
ಅಲ್ಲದೆ, ಅತ್ಯಂತ್ ದುಬಾರಿ ಬೆಲೆಯ 7 ಟೊಯೋಟಾ ಇನ್ನೋವಾ ಕ್ರಿಸ್ಟ್ ಕಾರುಗಳನ್ನು ಕಾರ್ಮಿಕರ ಸೆಸ್ ಹಣದಿಂದಲೇ ಖರೀದಿ ಮಾಡಲಾಗಿದೆ. ಉಪ ಕಾರ್ಮಿಕ ಆಯುಕ್ತರಿಗೆ ಈಗಾಗಲೇ ವಾಹನ ಸೌಲಭ್ಯವಿದ್ದರೂ ಮತ್ತೊಂದು ದುಬಾರಿ ಬೆಲೆಯೆ ಕಾರಿನ ಅವಶ್ಯತೆ ಇತ್ತೇ ಎಂದು ಸಂಘಟನೆಯು ಪ್ರಶ್ನೆ ಮಾಡಿದೆ.
ಲಕ್ಷಾಂತರ ಆರೋಗ್ಯ ಕಿಟ್‌ಗಳ ಖರೀದಿಯಲ್ಲಿಯೂ ಸಾಕಷ್ಟು ಭ್ರಷ್ಟಾಚಾರ ನಡೆದಿದೆ. ಅಲ್ಲದೆ, ನೂರಾರು ಟಿ.ವಿ.ಗಳನ್ನು ಖರೀದಿಸಲಾಗಿದೆ, ಅದು ಯಾವ ಪ್ರಮಾಣದಲ್ಲಿ ಬಳಕೆಗೆ ಅವಕಾಶವಿದೆ ಎಂದು ಸ್ಪಷ್ಟಗೊಂಡಿಲ್ಲ ಎಂದು ಜೆಸಿಟಿಯು ಆರೋಪಿಸಿದೆ.
ಕೆಲವೊಂದು ಬಿಲ್ಡರ್‌ಗಳು ಕೋವಿಡ್-19ರ ಸಂಕಷ್ಟದ ನೆಪವೊಡ್ಡಿ ಕಾರ್ಮಿಕರ ಸಮಸ್ಯೆ, ಲಾಕ್‌ಡೌನ್‌ಗಳಿಂದ ಕಾಮಗಾರಿ ಪೂರ್ಣಗೊಂಡಿಲ್ಲ, ಫ್ಲ್ಯಾಟ್‌ಗಳು ಮಾರಾಟವಾಗಿಲ್ಲ. ಹಾಗಾಗಿ ಕಲ್ಯಾಣ ಮಂಡಳಿಗೆ ಶಾಸನಬದ್ಧವಾಗಿ ಕಟ್ಟಬೇಕಾದ ಸೆಸ್ ಹಣವನ್ನು ಮುಂದೂಡಬೇಕೆಂದು ಉಚ್ಛನ್ಯಾಯಾಲಯದಿಂದ ತಡೆಯಾಜ್ಷೆ ತಂದಿದ್ದಾರೆ. ನಂತರದಲ್ಲಿ ಇನ್ನು ಹೆಚ್ಚಿನ ಬಿಲ್ಡರ್‌ಗಳು ಸೇರ್ಪಡೆಗೊಂಡು ಕಲ್ಯಾಣ ಮಂಡಳಿಗೆ ಸೆಸ್ ಹಣ ಸಂದಾಯ ಮಾಡಿಲ್ಲ.
ಇದನ್ನು ಓದಿ: ಆಹಾರ ಕಿಟ್ ಹಂಚಿಕೆಯಲ್ಲಿ ಭ್ರಷ್ಟಾಚಾರ: ಲೋಕಾಯುಕ್ತಕ್ಕೆ ದೂರು ನೀಡಲು ಸಿಡಬ್ಲ್ಯೂಎಫ್‌ಐ ತೀರ್ಮಾನ
ಇವೆಲ್ಲವೂಗಳ ಮಧ್ಯೆ ಹಿಂದಿನ ಕಾರ್ಮಿಕ ಸಚಿವರ ಮಧ್ಯ ಪ್ರವೇಶಿಸಬೇಕಿತ್ತು. ಅಲ್ಲದೆ, ತಡೆಯಾಜ್ಞೆ ಆದೇಶವನ್ನು ಪ್ರಶ್ನಿಸಬೇಕಾಗಿತ್ತು. ಹಾಗೆ ಮಾಡದೆ, ದಿವ್ಯಮೌನ ವಹಿಸಿದರು ಎಂದು ಜೆಸಿಟಿಯು ಆರೋಪಿಸಿದ್ದು, ಕಲ್ಯಾಣ ಮಂಡಳಿಯ ಕಾರ್ಯವೈಖರಿಯ ಬಗ್ಗೆ ಸರ್ವೋಚ್ಛ ನ್ಯಾಯಾಲಯದ ಸ್ಪಷ್ಟ ಕಟ್ಟುನಿಟ್ಟಿನ ಮಾರ್ಗಸೂಚಿಗಳಿದ್ದರೂ ಎಲ್ಲವನ್ನೂ ಗಾಳಿಗೆ ತೂರಲಾಗಿದೆ ಎಂದು ಆರೋಪಿಸಿದರು.
ಕೇಂದ್ರ ಕಾರ್ಮಿಕ ಸಂಘಟನೆಗಳು ಫಲಾನುಭವಿಗಳಿಗೆ ನೇರವಾಗಿ ಖಾತೆಗೆ ರೂ.10 ಸಾವಿರ ಸಂದಾಯ ಮಾಡಲು ಕೇಳಿಕೊಂಡರೂ ಹಿಂದಿನ ಕಾರ್ಮಿಕ ಸಚಿವರು ಅದನ್ನು ಪರಿಗಣಿಸದೆ ಈ ರೀತಿ ವ್ಯವಹರಿಸಿರುವುದು ಅತ್ಯಂತ ದುರದೃಷ್ಟಕರ ಟೆಂಟರ್ ಮೂಲಕ ಯಾವುದೇ ವಸ್ತುಗಳನ್ನು ವಿತರಿಸಬಾರದು ಎನ್ನುವ ಕೇಂದ್ರ ಸರ್ಕಾರ ಸೂಚನೆಯನ್ನು ಉಲ್ಲಂಘಿಸಲಾಗಿದೆ. ಮುಖ್ಯಮಂತ್ರಿಗಳು ಮಧ್ಯಪ್ರವೇಶಿಸಿ ತನಿಖೆ ನಡೆಸಿ ತಪ್ಪಿತಸ್ಥರನ್ನು ಶಿಕ್ಷಿಸಬೇಕು, ಕಲ್ಯಾಣ ಮಂಡಳಿಯ ಹಣ ಮುಂದೆ ದುರುಪಯೋಗ ಆಗದಂತೆ ಕ್ರಮವಹಿಸಬೇಕೆಂದು ಜೆಸಿಟಿಯು ಆಗ್ರಹಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಐಎನ್‌ಟಿಯುಸಿ ಪರವಾಗಿ ಶ್ಯಾಮಣ್ಣ ರೆಡ್ಡಿ, ಎಐಟಿಯುಸಿ ವಿಜಯಭಾಸ್ಕರ್ ಡಿ., ಸಿಐಟಿಯುನಿಂದ ಮೀನಾಕ್ಷಿ ಸುಂದರಂ, ಹೆಚ್‌ಎಂಎಸ್‌ನಿಂದ ನಾಗನಾಥ್, ಎಐಯುಟಿಯುಸಿ ಯಿಂದ ಕೆ.ವಿ. ಭಟ್, ಎಐಸಿಸಿಟಿಯು ಅಪ್ಪಣ್ಣ ಮತ್ತು ಟಿಯುಸಿಸಿ, ಹೆಚ್‌ಎಂಕೆಪಿ, ಎನ್‌ಸಿಎಲ್, ಜಿಎಟಿಡಬ್ಲ್ಯೂಯು ಸಂಘಟನೆಯ ಮುಖಂಡರು ಉಪಸ್ಥಿತರಿದ್ದರು.