ಬೆಂಗಳೂರು: ಮುಖ್ಯಮಂತ್ರಿಗಳು ಮಂಡಿಸಿದ 2022-23 ಸಾಲಿನಲ್ಲಿ ಬಜೆಟ್‌ನಲ್ಲಿ 2.30 ಲಕ್ಷ ನೊಂದಾಯಿತ ಕಟ್ಟಡ ಕಾರ್ಮಿಕರಿಗೆ ವಿವಿಧ ಯೋಜನೆಗಳ ಅಡಿಯಲ್ಲಿ ಅಂದಾಜು 1,610 ಕೋಟಿ ವೆಚ್ಚದಲ್ಲಿ ಅನುಷ್ಟಾನಗೊಳಿಸಲಾಗುವುದು ಎಂದು ಘೋಷಣೆ ಮಾಡಲಾಗಿದೆ. ಆದರೆ, ವಾಸ್ತವವಾಗಿ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಗೆ ವಾರ್ಷಿಕವಾಗಿ ಸಂಗ್ರಹವಾಗುವ ಸೆಸ್ ನಿಧಿಯಿಂದ ಈ ಕಾರ್ಯಕ್ರಮಗಳನ್ನು ಈಗಾಗಲೇ ಜಾರಿಗೊಳಿಸಲಾಗುತ್ತಿದೆ ಅದನ್ನೇ ರಾಜ್ಯ ಬಜೆಟ್ಟಿನಲ್ಲಿ ಮಂಡನೆಯಾಗಿದೆ ಎಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಫೆಡರೇಶನ್(ಸಿಐಟಿಯು) ಪ್ರಧಾನ ಕಾರ್ಯದರ್ಶಿ ಕೆ. ಮಹಾಂತೇಶ್ ತಿಳಿಸಿದ್ದಾರೆ.
ಹೇಳಿಕೆಯನ್ನು ಬಿಡುಗಡೆಗೊಳಿಸಿರುವ ಕೆ. ಮಹಾಂತೇಶ್ ಅವರು, ಮಂಡಳಿಯಿಂದ ಜಾರಿಯಲ್ಲಿರುವ ಕಲ್ಯಾಣ ಕಾರ್ಯಕ್ರಮಗಳನ್ನೇ ರಾಜ್ಯ ಸರ್ಕಾರ ತನ್ನ ಕಾರ್ಯಕ್ರಮಗಳೆಂದು ಬಜೆಟ್ಟಿನಲ್ಲಿ ಘೋಷಿಸಿರುವುದು ಹಾಸ್ಯಸ್ಪದವಾಗಿದೆ. ಈ ಮೂಲಕ ರಾಜ್ಯದ ಬಿಜೆಪಿ ಸರ್ಕಾರದ ಮುಖ್ಯಮಂತ್ರಿಗಳು ಮತ್ತು ಕಾರ್ಮಿಕ ಸಚಿವರು ಸತ್ಯವನ್ನು ಮರೆಮಾಚಿ ರಾಜ್ಯದ ಜನತೆಗೆ ಮತ್ತು ಲಕ್ಷಾಂತರ ಕಟ್ಟಡ ನಿರ್ಮಾಣ ವಲಯದ ಕಾರ್ಮಿಕರಿಗೆ ತಪ್ಪು ಸಂದೇಶ ನೀಡಿರುವುದು ಸ್ಪಷ್ಟ ರಾಜಕೀಯ ಉದ್ದೇಶವಿದೆ. ಇದನ್ನು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್(ಸಿಐಟಿಯು) ಖಂಡಿಸುತ್ತದೆ ಎಂದಿದ್ದಾರೆ.
ರಾಜ್ಯದ ಕಟ್ಟಡ ನಿರ್ಮಾಣ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿತರಾಗಿರುವ 24 ಲಕ್ಷ ಕಾರ್ಮಿಕರಿಗೆ ಈಗಾಗಲೇ ಘೋಷಿಸಲಾದ ವೈದ್ಯಕೀಯ, ಪಿಂಚಣಿ, ವಿದ್ಯಾರ್ಥಿ ವೇತನ, ಹೆರಿಗೆ ಭತ್ಯೆ, ಮದುವೆ, ಕಾರ್ಯಕ್ರಮಗಳು ಅರ್ಜಿ ಸಲ್ಲಿಸಿ ಆರು ತಿಂಗಳು ವರ್ಷಗಳಾದರೂ ಸಮರ್ಪಕವಾಗಿ ಜಾರಿಯಾಗುತ್ತಿಲ್ಲ ಇನ್ನೂ ಮಂಡಳಿಯಲ್ಲಿ 11 ಸಾವಿರ ಕೋಟಿಗಿಂತ ಅಧಿಕ ನಿಧಿ ಇದ್ದರೂ, 2007ರಿಂದ ಇದುವರೆಗೂ ಮನೆ ನಿರ್ಮಾಣಕ್ಕೆ ಆರ್ಥಿಕ ನೆರವನ್ನು ಒಬ್ಬ ಕಾರ್ಮಿಕ ಕುಟುಂಬಕ್ಕೂ ನೀಡಲಾಗಿಲ್ಲ.
ಕೊವೀಡ್ 19ರ ಸಂಕಷ್ಟದಲ್ಲಿ ಸಿಲುಕಿದ್ದ ಕಾರ್ಮಿಕರಿಗೆ ಘೋಷಿಸಲಾಗಿದ್ದ ರೂ 5000 ಪರಿಹಾರ 1.19 ಲಕ್ಷ ಕಾರ್ಮಿಕರ ಖಾತೆಗೆ ವರ್ಗಾಹಿಸಿಲ್ಲ ನಂತರ ಪ್ರಕಟಿಸಿದ ರೂ.3,000 ಪರಿಹಾರ ಕೂಡ ಇನ್ನೂ ಶೇ 15-20 ರಷ್ಟು ಕಾರ್ಮಿಕರ ಖಾತೆಗೆ ಜಮೆಗೊಂಡಿಲ್ಲ. ಇದರ ಜತೆಗೆ ಹೊಸ ನೋಂದಣಿ ಅರ್ಜಿ ಸಲ್ಲಿಕೆ ಸ್ಥಗಿತಗೊಂಡು ಎರಡು ತಿಂಗಳು ಕಳೆದಿದೆ. ವಿದ್ಯಾರ್ಥಿ ವೇತನಕ್ಕಾಗಿ ಜಾರಿಗೊಳಿಸಲಾದ ಹೊಸ ತಂತ್ರಾಂಶದಲ್ಲಿ ಸಾಕಷ್ಟು ಲೋಪದೋಷಗಳಿವೆ. ಮೊದಲು ಈಗಾಗಲೇ ಜಾರಿಯಲ್ಲಿರುವ ಮತ್ತು ಘೋಷಿಸಲಾದ ಕಾರ್ಯಕ್ರಮಗಳ ಸಮರ್ಪಕ ಅನುಷ್ಟಾನಗೊಳ್ಳಬೇಕೆಂದು ಎಲ್ಲ ಕಟ್ಟಡ ಕಾರ್ಮಿಕ ಸಂಘಗಳು ಆಗ್ರಹವಾಗಿದೆ. ಆದರೆ, ಅದನ್ನು ಸಮರ್ಪಕವಾಗಿ ಜಾರಿಗೊಳಿಸದೇ ಹೊಸ ಕಾರ್ಯಕ್ರಮಗಳನ್ನು ಘೋಷಿಸುತ್ತಾ ಹೋದರೆ ಅದರಿಂದ ಲಕ್ಷಾಂತರ ನಿರ್ಮಾಣ ವಲಯದ ಕಾರ್ಮಿಕರಿಗೆ ಪ್ರಯೋಜವಾಗದು ಎನ್ನುವುದು ಕಾರ್ಮಿಕರ ಒಕ್ಕೂರಲಿನ ಅಭಿಪ್ರಾಯವಾಗಿದೆ ಎಂದು ತಿಳಿಸಿದ್ದಾರೆ.
ರಾಜ್ಯದ ನಿರ್ಮಾಣ ವಲಯದಲ್ಲಿ ಕೆಲಸ ಮಾಡುತ್ತಿರುವ ವಲಸೆ ಕಾರ್ಮಿಕರಿಗೆ ಅಗತ್ಯವಿರುವ ತಾತ್ಕಲಿಕ ವಸತಿ ಬೇಡಿಕೆ ಎಷ್ಟು ಎನ್ನುವ ಯಾವ ಅಂಕಿಅಂಶಗಳು ಕಾರ್ಮಿಕ ಇಲಾಖೆಯಲ್ಲಿ ಲಭ್ಯವಿಲ್ಲ. ಹೀಗಿರುವಾಗ, ಸಂಚಾರಿ ಕಟ್ಟಡ ಕಾರ್ಮಿಕರಿಗೆ ತಾತ್ಕಲಿಕ ಸುಸಜ್ಜಿತ ವಸತಿ ಗೃಹ ನಿರ್ಮಾಣ ಮಾಡುವುದರ ಹಿಂದೆ ಹತ್ತಾರು ಕೋಟಿ ಹಣ ಭ್ರಷ್ಟಚಾರದ ಮೂಲಕ ಸಚಿವರು, ಗುತ್ತಿಗೆದಾರರು ಹಾಗೂ ಅಧಿಕಾರಿಗಳ ಜೇಬು ತುಂಬಿಸುವ ಕಾರ್ಯಕ್ರಮವಾಗಲಿದೆ.
ಇದರ ಜತೆಯಲ್ಲೇ ರಸ್ತೆ ಸಾರಿಗೆ ನಿಗಮದ ಮೂಲಕ ಕಟ್ಟಡ ಕಾರ್ಮಿಕರಿಗೆ ಬಸ್ ಪಾಸ್ ವಿತರಿಸುವ ಯೋಜನೆ ಕೂಡ ಕಲ್ಯಾಣ ಮಂಡಳಿಯ ಸಾವಿರಾರು ಕೋಟಿ ಹಣವನ್ನು ನಷ್ಟದಲ್ಲಿರುವ ರಸ್ತೆ ಸಾರಿಗೆ ನಿಗಮಗಳಿಗೆ ಧಾರೆ ಎರೆಯುವುದಾಗಿದೆ. ವೈದ್ಯಕೀಯ ಪರಿಹಾರಕ್ಕಾಗಿ ಸಲ್ಲಿಸಲಾದ ಸಾವಿರಾರು ಅರ್ಜಿಗಳಿಗೆ ಪುಡಿಕಾಸು ನೀಡುವ ಮಂಡಳಿಯು ಸಂಚಾರಿ ಕ್ಲಿನಿಕ್‌ಗಳ ಘೋಷಣೆ ಮಾಡಿ ಕೋಟ್ಯಾಂತರ ಹಣ ಖರ್ಚು ಮಾಡಲು ಹೊರಟಿರುವ ನಡೆಯು ಭ್ರಷ್ಟಚಾರಕ್ಕೆ ದಾರಿ ಮಾಡಿಕೊಡಲಿದೆ ಇವುಗಳನ್ನೆಲ್ಲ ಕೈ ಬಿಡಬೇಕು. ಒಂದು ವೇಳೆ ಇವುಗಳನ್ನು ಜಾರಿಗೊಳಿಸುವುದಾದರೆ, ಅದನ್ನು ರಾಜ್ಯ ಸರ್ಕಾರ ತನ್ನ ಹಣದಲ್ಲಿ ಜಾರಿಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್(ಸಿಐಟಿಯು) ಆಗ್ರಹಿಸಿದೆ.