ನನ್ನ ಗೆಳೆಯನೊಬ್ಬ ಗಾಂಧೀ ವಿರೋಧಿ. ಗಾಂಧಿಯನ್ನು ಖಳ ನಾಯಕನಂತೆ ಕಂಡವ. ಈತನಿಗೆ ಬರಗೂರರ ಕಸ್ತೂರ ಬಾ v/s ಗಾಂಧೀ ಕಾದಂಬರಿ ಕೊಂಡು ಓದಲು ಒತ್ತಾಯಿಸಿದೆ. ಕೊಂಡರೆ ಹಣ ಓದಿದರೆ ಸಮಯ ನಷ್ಟ ಎಂದ. ನಾನೂ ಮಂಡ. ಬಿಡಲಿಲ್ಲ. ಪುಸ್ತಕ ಪುಕ್ಕಟೆ ಕೊಟ್ಟೆ. ನನ್ನ ಒತ್ತಾಯಕ್ಕೆ ಓದಿದ. 15 ದಿನದ ನಂತರ ಫೋನಾಯಿಸಿ ಗಾಂಧಿ ಬಗೆಗಿದ್ದ ನನ್ನ ಅಭಿಪ್ರಾಯ ಬದಲಾಗಿದೆ. ಒಳ್ಳೆಯ ಪುಸ್ತಕ ಹಣ ಕಳಿಸುವೆ ಎಂದ. ಹಣಕ್ಕಿಂತಲೂ ಹೆಚ್ಚು ಕೊಟ್ಟಿರುವೆ ಎಂದೆ. ಗಾಂಧೀ ಎಂದಾಕ್ಷಣ ನಮ್ಮ ಪ್ರಜ್ಞಾವಲದಲ್ಲಿ ಒಂದು ರೀತಿಯ ಅರಿವು ಮೂಡುತ್ತದೆ. ಇದಕ್ಕೆ ಶಿಕ್ಷಣ, ಶಿಕ್ಷಣೇತರ ವಿಚಾರ. ಸ್ವಾತಂತ್ರ್ಯ ಹೋರಾಟದ ಕೆಲ ಬರಹಗಳು ಕಾರಣವಾಗಿರ
ಬಹುದು. ವಿಚಾರಗಳ ಅನುಷ್ಠಾನವನ್ನು ಹುದುಗಿಟ್ಟ ವಿಕಾರಗಳೇ ವಿಜೃಂಬಿಸುತ್ತಿರುವ ದಿನಮಾನದಲ್ಲಿ ಯುವಕರ ಅರಿವಿನಲ್ಲಿ ಗಾಂಧೀ ಚಿತ್ರಣ ವಿಚಿತ್ರವಾಗಿ ಮೂಡಿದೆ.
ಒಂದು ಸಂಪೂರ್ಣ ಆಕರಣೆ ಇನ್ನೊಂದು ಸಂಪೂರ್ಣ ನಿರಾಕರಣೆ. ಒಂದು ಭಕ್ತಿ ಭಾವದ ಉದ್ವೇಗ ಇನ್ನೊಂದು ನಕಾರಾತ್ಮಕ ವಿಕೃತಿಯ ಭಾವುಕತೆ. ಎರೆಡೂ ಐತಿಹಾಸಿಕ ವಾಸ್ತವದ ವಿಶ್ಲೇಷಣೆಯಿಂದ ದೂರ ಸರಿದವಗಳು. ಕಾರಣ ಎರೆಡೂ ಅಪಾಯಕಾರಿ. ಇಂಥಹ ಸಂದರ್ಭದಲ್ಲಿ ಕಸ್ತೂರ್ ಬಾ ಮೂಲಕ ಗಾಂಧಿಯನ್ನು ನೋಡುವ, ಸ್ತ್ರೀ ಸಂವೇದನೆಯ ನೆಲೆಯಲ್ಲಿ ರೂಪಗೊಂಡ ಬರಗೂರರ ಕಸ್ತೂರ ಬಾ v/s ಗಾಂಧೀ ಕಾದಂಬರಿ ಅತ್ಯಂತ ಮೌಲಿಕ ಕೃತಿಯಾಗಿದೆ. ಅಲ್ಲದೆ ಗಾಂಧೀ ವ್ಯಕ್ತಿತ್ವದ ತಾತ್ವಿಕ ದರ್ಶನ ನೀಡುವಲ್ಲಿ ಜಾಡಿಗೆ ಓದುಗರನ್ನು ಕೊಂಡೊಯ್ಯುತ್ತದೆ.
ಸ್ವಾತಂತ್ರ್ಯ ಹೋರಾಟದ ಇತಿಹಾಸದ ಭಾಗವಾಗಿರುವ ಗಾಂಧೀ ಮರುವ್ಯಾಖ್ಯಾನಗೊಳ್ಳುತ್ತಲೇ ಇದ್ದಾರೆ. ಹಾಗಾಗಿ ಗಾಂಧೀ ಹುಡುಕಾಟದ ತೀವ್ರತೆಯೂ ಹೆಚ್ಚಾಗಿದೆ. ಈ ಎಲ್ಲದರ ಫಲವೇ ಈ ಕಾದಂಬರಿ ಮಹತ್ವವಾಗಿದೆ.
1920ರ ಗಾಂಧಿಗೂ 1930ರ ಗಾಂಧಿಗೂ ಸಾಕಷ್ಟು ಸ್ಥಿತ್ಯಂತರವಿದೆ. ಇದಕ್ಕೆ ಅಂದಿನ ಇತಿಹಾಸದ ಘಟನೆಗಳು ಕಾರಣ. ಈ ಸ್ಥಿತ್ಯಂತರದ ಪ್ರಕ್ರಿಯೆಯಲ್ಲಿ ಕಸ್ತೂರ ಬಾ ರೊಂದಿಗಿನ ಸಂವಾದವೂ ಸೇರ್ಪಡೆಯಾಗಿದೆ. ಕಸ್ತೂರ್ ಬಾ ರ ನೋಟದಲ್ಲಿ ಗಾಂಧಿ ಮರಹುಟ್ಟು ಪಡೆಯುತ್ತಾರೆ ಎಂದರೂ ತಪ್ಪಾಗಲಾರದು.
ರಾಷ್ಟ್ರೀಯ ಚಳುವಳಿಯ ಕಾವು ಪಡೆದಿದ್ದ ನವೋದಯ ಸಾಹಿತ್ಯ ಗಾಂಧೀಯವರನ್ನು ಸಕಾರಾತ್ಮಕವಾಗಿ ವಿಜೃಂಬಿಸಿದರೆ, ನಂತರದ ನವ್ಯ ಸಾಹಿತ್ಯ ಗಾಂಧಿ ಬಗ್ಗೆ ಮಾತನಾಡಿದ್ದು ಕಡಿಮೆಯೇ. ಅಷ್ಟಿಷ್ಟು ಮಾತನಾಡಿದ್ದರೂ ಗಾಂಧಿಈ ಮಿತಿಗಳನ್ನೆ ಮುಂದು ಮಾಡಿ. ಬಂಡಾಯ ಸಾಹಿತ್ಯ ಗಾಂಧಿಯನ್ನು ಗೌರವಯುತವಾಗಿ ವೀಮರ್ಶಿಸುವ ಮೂಲಕ ಪ್ರಸ್ತುತಕ್ಕೆ ಒಗ್ಗಿಸಿಕೊಳ್ಳುವ ಪ್ರಜ್ಞಾವಂತಿಕೆ ತೋರಿತು.
ಪ್ರಾರಂಭದಿಂದಲೂ ಅಚ್ಚರಿ, ವಿಸ್ಮಯ, ಉತ್ಸಾಹ ಮತ್ತು ಕುತೂಹಲವನ್ನು ತುಂಬಿಕೊಂಡ ಕಾದಂಬರಿ, ಎಲ್ಲಿಯೂ ಬೇಸರಿಸದೆ ಒಂದೇ ಉಸುರಲ್ಲಿ ಭಾವನಾತ್ಮಕವಾಗಿ ಓದಿಸಿಕೊಂಡು, ಇನ್ನಷ್ಟು ಬೇಕಿತ್ತು ಎನ್ನುವ ಹಸಿವನ್ನು ಉಳಿಸಿಯೆ ಮುಕ್ತಾಯಗೊಳ್ಳುತ್ತದೆ. ಈ ಹಸಿವು ಕಾದಂಬರಿಕಾರನ ವಿಶಿಷ್ಟ ಬರಹದ ಸಾರ್ಥಕತೆಯಾಗಿದೆ. ಸಾಮಾನ್ಯವಾಗಿ v/s ಎಂಬ ಪದ ವೈರುಧ್ಯಗಳ ಸಂಘರ್ಷ ಎಂಬ ಅರ್ಥವನ್ನು ಧ್ವನಿಸುತ್ತದೆ. ಆದರೆ ಬರಗೂರರು ಇದನ್ನು ಸಂವಾದ ಹಾಗೂ ಅನುಸಂಧಾನದ ಅರ್ಥದಲ್ಲಿ ಬಳಸಿದ್ದಾರೆ. ಇಲ್ಲಿ ಗಂಡು-ಹೆಣ್ಣು, ಕೌಟುಂಬಿಕ ಸಮಸ್ಯೆ-ಸಾಮಾಜಿಕ ಸಮಸ್ಯೆ, ಮಾತು-ಮೌನ, ಕಸ್ತೂರ ಬಾ-ಗಾಂಧೀ ನಡುವಿನ v/s ಆಗಿದೆ. ಕಾದಂಬರಿಯುದ್ದಕ್ಕೂ ನಡೆದ ಈ v/s ನ ಜಿದ್ದಾಜಿದ್ದಿ ಸಂವಾದ ಅನುಸಂಧಾನದಲ್ಲಿ ಹೊಸ ಅರ್ಥ ಪಡೆದು ಸಾಗುತ್ತದೆ. ಕಸ್ತೂರ್ ಬಾ ಮತ್ತು ಗಾಂಧೀ ನಡುವಿನ ಸಿಟ್ಟು, ಸೆಡವು, ಸಂಕಟ ಗುಡುಗು,ಸಿಡಿಲು ಸಂಬಂಧಗಳನ್ನು ಘಾಸಿಗೊಳಿಸದೆ ಮಾತು ಮತ್ತು ಮೌನದಲ್ಲಿ ಹೆಪ್ಪಾಗಿ ಕರಗಿ ನೀರಾಗಿ ಬದುಕು ಕಟ್ಟುವ ಕ್ರಿಯೆಗೆ ಘನಗೊಳ್ಳುತ್ತವೆ. ಇಲ್ಲಿ ಗಾಂಧೀ ಕಸ್ತೂರರು ಸ್ತ್ರೀಸಂವೇದನೆ ನೆಲೆಯಲ್ಲಿ ಮರುವ್ಯಾಖ್ಯಾನಗಳ್ಳುತ್ತಾರೆ.
ಇಬ್ಬರಲ್ಲೂ ಉಂಟಾಗುವ ಪರಿವರ್ತನೆಯು ಗಾಂಧಿಯನ್ನು ಕಸ್ತೂರ್ ಬಾ ಆಗಿ ಕಸ್ತೂರ್ ಬಾ ಗಾಂಧಿಯಾಗಿ ರೂಪಗೊಳ್ಳುವುದನ್ನು ಕಾಣುತ್ತೇವೆ. ಕಸ್ತೂರರ ಮಾತಿನ ಚಾಟಿ ಗಾಂಧೀ ಗೆ ಮೈ ಕೊರೆಯದೆ ಅವರನ್ನು ಬುಗುರಿಯಂತೆ ಗಿರ್ರನೆ ಆಡಿಸುತ್ತದೆ. ಆಡುವ ಭರದಲ್ಲಿ ಪುಟಿವ ಸಿಟ್ಟು ಸಂಕಟವೆಲ್ಲವೂ ಒಂದು ಕೇಂದ್ರದಲ್ಲಿ ಲೀನವಾಗಿ ಬುಗುರಿ ಧ್ಯಾನಸ್ಥಿತಿಗೆ ತಲುಪುದನ್ನು ಕಾಣುತ್ತೇವೆ. ಕಾದಂಬರಿಯಲ್ಲಿ ಇಬ್ಬರ ನಡುವಿನ ಸಂವಾದದ ಕೊಂಡಿಯಾಗಿ ಲೇಖಕರ ಹಿನ್ನಲೆಯಲ್ಲಿ ನಿಂತು ಸೃಜನಶೀಲ ಪಾತ್ರ ನಿರ್ವಹಿಸಿದ್ದಾರೆ. ಇಲ್ಲಿನ ಮಾತು ಮತ್ತು ಮೌನ ಅಂತರಂಗದಿಂದ ಬಹಿರಂಗಕ್ಕೆ ಬಹಿರಂಗದಿಂದ ಅಂತರಂಗಕ್ಕೆ ಜಿಗಿದಾಡುತ್ತವೆ. ಬಾಯಿಗೆ ನಿಲುಕದ ಅದೆಷ್ಟೊ ಮಾತುಗಳು ಮೌನದ ಮರೆ ಪಡೆದು ಬದುಕಿನ ಹಾಡಾಗುತ್ತವೆ. ಒಂದೇ ಧಾರ್ಮಿಕ ಚೌಕಟ್ಬಿನಲ್ಲಿ ಬೆಳೆದ ಇಬ್ಬರ ನಡುವಿನ ತಾತ್ವಿಕ ಹಸಿವು ಕುಟುಂದ ಹಸಿವಾಗಿ ಸಮಾಜಿಕ ಹಸಿವಿನ ರೂಪ ಪಡೆಯುತ್ತವೆ. ಕಾದಂಬರಿ ಓದುತ್ತಾ ಹೋದಂತೆ ಪ್ರತಿ ಘಟನೆಯ ಹೆಪ್ಪಾಗಿ ಬರುವ ಚಿಕ್ಕ ಚಿಕ್ಕ ಕವಿತೆಗಳು ಓದುಗನ ಹೃದಯವನ್ನು ತಟ್ಟುತ್ತವೆ. ಕಥನ ಮತ್ತು ಕಾವ್ಯ ಒಳಗೊಂಡ ಜೈವಿಕ ಬರಹದಿಂದ ಕಾದಂಬರಿ ಮೈತುಂಬಿ ಕೊಂಡಿದೆ. ಅಲ್ಲದೆ ಕಾದಂಬರಿ ಬರಹಕ್ಕೆ ಹೊಸ ಶೈಲಿಯೊಂದನ್ನು ಹೆತ್ತು ಕೊಟ್ಟಿದೆ.
*****
“ಸುಧಾರಕರು ಸಮಾಜದ ಎದುರು ಕಟ್ಟಿಕೊಳ್ಳುವ ಸಂಯಮದ ಕಟ್ಟೆ, ಒಮ್ಮೊಮ್ಮೆ ಸಂಸಾರದಲ್ಲಿ ಒಡೆದು ಬಿಡುತ್ತೆ.”
ಇದು ಗಾಂಧೀಗೆ ಕಸ್ತೂರ್ ಬಾ ಹೇಳುವ ಮಾತು.
ಒಂದೇ ಧಾರ್ಮಿಕ ಚೌಕಟ್ಟಿನಲ್ಲಿ ಬೆಳೆದ ಕಸ್ತೂರ್ ಬಾ ಹಾಗೂ ಗಾಂಧೀ ನಡುವೆ ಸಾಕಷ್ಟು ಭಿನ್ನಾಭಿಪ್ರಾಯಗಳಿದ್ದವು. ಆದರೆ ಅವೆಂದೂ ಅವರ ಸಂಬಂಧವನ್ನು ಘಾಸಿಗೊಳಿಸಲಿಲ್ಲ.
ಅದೆಷ್ಟೋ ತಾತ್ವಿಕ ಬದ್ಧತೆ ಹೊಂದಿದ ಸಾಮಾಜಿಕ ಹೋರಾಟಗಾರರ ಕುಟುಂಬಗಳಲ್ಲಿ ಸಂಬಂಧಗಳು ಹಳಸಿರುವುದಕ್ಕೆ ಸಾಕಷ್ಟು ಉದಾಹರಣೆಗಳಿವೆ. ಕುಟುಂಬ ಸದಸ್ಯರ ವಿಭಿನ್ನ ನಿಲುವುಗಳು ಅನುಸಂಧಾನಗೊಳ್ಳದೆ ಸಂಘರ್ಷಕ್ಕೀಡಾಗಿ ಒಡಕಿನಲ್ಲಿ ಉತ್ತರ ಕಂಡು ಉರಿವ ಸಂಕಟವನ್ನು ಒಡಲಲ್ಲಿ ಕಟ್ಟಿಕೊಂಡು ಜೀವಿಸುತ್ತಿರುವ ಕುಟುಂಬದ ಕಥೆಗಳು ಇಂದು ನೂರಾರಿವೆ. ಆದರೆ ಇಲ್ಲಿ ಒಡಕಿಗೆ ಆಸ್ಪದವಿಲ್ಲ. ಇಬ್ಬರ ನಡುವಿನ ಭಿನ್ನಾಭಿಪ್ರಾಯ ಪ್ರತಿ ಹಂತಲ್ಲೂ ವೈಯುಕ್ತಿಕತೆಯಿಂದ ಸಾಮಾಜಿಕತ್ವಕ್ಕೆ ಹೀಚುತ್ತಾ ಹೊಸರೂಪ ಪಡೆದು ಒಂದಾಗುವ ತಾತ್ವಿಕ ಗುಣದಲ್ಲಿ ಘನಗೊಳ್ಳುತ್ತದೆ. ಇಲ್ಲಿನ ಸಂಘರ್ಷಗಳು ತಾತ್ವಿಕ ಅನುಸಂಧಾನದ ಆಲಯದಲ್ಲಿ ಬದುಕಿನ ಹಾಡಾಗುತ್ತವೆ. ಒಂದೆಡೆ ಮಕ್ಕಳು, ಗಂಡ ಒಟ್ಟು ಕುಟುಂಬದ ವಾರ್ತೆ ಇನ್ನೊಂದೆಡೆ ಗಂಡನ ಸಮಾಜಿಕ ಹೋರಾಟ ಎರಡನ್ನೂ ಸಮನ್ವಗೊಳಿಸಲು ಕಸ್ತೂರ್ ಬಾ ಸಂಯಮ ಸ್ತ್ರೀ ಸಂವೇದನೆಯ ಒಂದು ಮಾದರಿಯಾಗಿದೆ.
ಕುಟುಂದಲ್ಲಿ ಸಂಯಮ ತಪ್ಪಿದ ಗಾಂಧೀಯನ್ನು ಎಚ್ಚರಿಸುವಲ್ಲಿ ಕಸ್ತೂರ್ ಹೂಡಿದ ಮಾತಿನ ಬಾಣಗಳು ಯಾರನ್ನು ಕುಟುಕದೆ ಬದುಕು ಕಟ್ಟುವ ನುಡಿ ಬಾಣಗಳಾಗಿ ಕುಟುಂಬದ ಸಂಬಂಧವನ್ನು ಗಟ್ಟಿಗೊಳಿಸಿವೆ.
ಹಿರಿ ಮಗನ ಮದುವೆ, ಕಾಫೀ, ಸಿಹಿ ತಿನ್ನುವದನ್ನು ಬಿಡುವ , ಆಶ್ರಮವಾಸಿಗಳ ಸೇವೆ ವಿಷಯದಲ್ಲಿ ಕಸ್ತೂರ್ ಬಾ ರ ಸ್ವತಂತ್ರ ಮನೋಭಾವದ ಮೇಲೆ ಗಾಂಧಿ ನಡೆಸುವ ಸರ್ವಾಧಿಕಾರಿ ಧೋರಣೆ ವಿರುದ್ಧ ಸಂವಾಧಿಸುತ್ತಲೆ ಅವುಗಳ ಸಮಾಜಿಕ ಧೊರಣೆ ಅರಿತು ತಮ್ಮನ್ನು ತಾವು ಸೇವೆಗೆ ಒಗ್ಗಿಸಿಕೊಳ್ಳುತ್ತಲೆ ಗಾಂಧಿಗೆ ಮಾದರಿಯಾಗುತ್ತಾರೆ. ಈ ಪ್ರಕ್ರಿಯೆಯಲ್ಲಿ ಇಬ್ಬರ ನಡುವೆ ಹುಟ್ಟುವ ಸಿಟ್ಬು ಬೆಂಕಿಯೊಂದಿಗಿರದೆ ಬೆಳಕಿನ ತಂಪಿನೊಂದಿಗೆ ಬೆಸೆಯುತ್ತದೆ. ಈ ಅನುಸಂಧಾನ ಪ್ರತಿಯೊಬ್ಬ ಸಮಾಜಿಕ ಹೋರಾಟಗಾರನ ಕುಟುಂಬಕ್ಕೆ ಬೆಳಕಾಗುತ್ತದೆ.
ಇಲ್ಲಿ ಗಾಂಧಿ “ರಾಷ್ಟ್ರಪಿತರಾದರೂ ಪುತ್ರಪಿತ” ರಾಗುವಲ್ಲಿ ವಿಫಲರಾಗುತ್ತಾರೆ. ಆದರೆ ಸ್ತ್ರೀಸಂವೇಧನೆಯ ಧ್ವನಿಯಾದ ಕಸ್ತೂರ್ ಬಾ ರಾಷ್ಟ್ರಮಾತೆ ಹಾಗೂ ಪುತ್ರ ಮಾತೆಯಾಗಿ ಗಾಂಧೀ ವ್ಯಕ್ತಿತ್ವವನ್ನು ಸತ್ಯಾನ್ವೇಷಣೆಗೆ ಒಡ್ಡುತ್ತಾರೆ.
“ಶ್ಯಾಸ್ತ್ರ ಅಸ್ತ್ರವಾಗಬಾರದು”
ಇದೊಂದು ಸಾಮಾನ್ಯ ಹೇಳಿಕೆ ಅನಿಸದು.
ಇದು ಕಾದಂಬರಿಯಲ್ಲಿ ಗಾಂಧಿಯ ಉನ್ನತ ವ್ಯಾಸಂಗದ ಪ್ರಸಂಗಕ್ಕೆ ಸಬಂಧಿಸಿದ ಮಾತಾಗಿದ್ದರೂ, ಕಾಂದಬರಿಯೇತರ ವಿಚಾರಗಳತ್ತ ಓದುಗನನ್ನು ಕೊಂಡೊಯ್ಯುತ್ತದೆ. ಯುಗಗಳಿಂದ ಶಿಕ್ಷಣದಿಂದ ವಂಚಿತಗೊಂಡ ಬೃಹತ್ ದಲಿತ ಸಮುದಾಯದ ಮೌನ ವೇದನೆಯ ಇತಿಹಾಸ ಚಿಂತನೆಗೆ ಓದುಗನನ್ನು ಹೊರಳಿಸುತ್ತದೆ. ಇದಕ್ಕೆ
ಶ್ಯಾಸ್ತ್ರಗಳನ್ನು ಅಸ್ತ್ರವಾಗಿಸಿದ್ದು ಕಾರಣವಾಗಿದೆ. ಶ್ಯಾಸ್ತ್ರಗಳು ಸಾಕಷ್ಟಿವೆ ತತ್ವಶಾಸ್ತ್ರ, ರಾಜ್ಯ, ಆರ್ಥಿಕ, ಮಾನವ ಶ್ಯಾಸ್ತ್ರ ಇತ್ಯಾದಿ. ಇವೆಲ್ಲವೂ ಮಾನವನ ಅಭ್ಯುದಯವನ್ನು ಬಯಸುತ್ತವೆ. ಆದರೆ ಇವು ಆಳುವ ವರ್ಗದ ಹಾಗೂ ಧರ್ಮಾಂಧ ಪಂಡಿತರ ಕೈಗೆ ಸಿಲುಕಿದರೆ? ಕಾಡುವ ಅಸ್ತ್ರಗಳಾಗುತ್ತವೆ. ಅಭ್ಯುದಯವನ್ನು ಅಳಿಸಿ ಹಾಕುತ್ತವೆ. ಮುಕ್ತ ಶೋಷಣೆಯ, ಸ್ಥಾನ ಭದ್ರ. ಪಡಿಸಿಕೊಳ್ಳುವ, ಪ್ರಗತಿಗೆ ಕಂಟಕವಾಗುವ ಅಸ್ತ್ರಗಳಾಗುತ್ತವೆ.
ಪ್ರಸ್ತುತ ಸಂದರ್ಭದಲ್ಲಿ ಆಳುವ ವರ್ಗದ ಕೈಯಲ್ಲಿ ಅಂಧಾನುಸಾಧನದ ಶ್ಯಾಸ್ತ್ರಗಳು ಅಸ್ತ್ರಗಳಾಗಿ ಸೃಷ್ಟಿಸಿದ ಜಡ ಪ್ರಜ್ಞೆಯನ್ನೆ ಸಾಮೂಹಿಕ ಸನ್ನೆಗೆ ಒಳಪಡಿದ್ದು ನಮ್ಮ ಕಣ್ಮುಂದಿದೆ.
ಕೋವಿಡ್-19 ದೇಶದಲ್ಲಿ ಯಮಪಾಶ ಹೊಸೆದು ಸಾವು ಬಿತ್ತುತ್ತಿರುವ ಸಂದರ್ಭದಲ್ಲಿ ನಮ್ಮನ್ನು ಆಳುವ ದೊರೆ ಶ್ಯಾಸ್ತ್ರಗಳ ಮೊರೆಹೋಗಿದ್ದು ರೋಗದ ವಿರುದ್ಧ ಮುಂಜಾಗ್ರತೆ ವಹಿಸಿ ವಿಜ್ಞಾನ ಶ್ಯಾಸ್ತ್ರವನ್ನು ಅಸ್ತ್ರವಾಗಿಸಿಕೊಳ್ಳುವ ಬದಲು ಚಪ್ಪಾಳೆ ತಟ್ಟಿ, ಶಂಖ ಊದಿ, ದೀಪ ಬೆಳಗಿ ಎಂದು ನಾಗರೀಕ ಸಮಾಜವನ್ನೇ ಅಂಧ ಶ್ಯಾಸ್ತ್ರದ ಸನ್ನಿ ಹಿಡಿಸಿದರು. ಅವರ ಹಿಂಬಾಲಕ ಕೆಲ ಶಾಸಕರು ಯಗ್ನಯಾಗಾದಿಗಳಿಗೆ, ಕೊನೆಗೆ ದನದ ಉಚ್ಚೆ ಕುಡಿವ ಶ್ಯಾಸ್ತ್ರವನ್ನು ಪಾಲಿಸಿದರು ಪ್ರತಿಪಾದಿಸಿದರು. ಇದಕ್ಕೆ ನಾವೇನು ಕಡಿಮೆ ಎನ್ನುವ ಹಾಗೆ ಪ್ರಜೆಗಳು ಕೊರೊನ ದೇವತೆಯ ಗುಡಿ ನಿರ್ಮಿಸಿದರು. ಹಸಿವು ನೀಗಿಸುವ ಅನ್ನವನ್ನು ತೂರಾಡಿ ಚೆಲ್ಲಿದರು.
ಅಮಾಯಕ ಪ್ರಾಣಿಗಳನ್ನು ಬಲಿ ಕೊಟ್ಟರು.
ಈ ಶ್ಯಾಸ್ತ್ರ ಎನ್ನುವ ಅಸ್ತ್ರ ಶತಮಾನಗಳ ಹೋರಾಟದ ಫಲವಾದ ಸಾರ್ವಜನಿಕ ಶಿಕ್ಷಣದ ಮೇಲು ದಾಳಿ ನಡೆಸಲು ಪ್ರಾರಂಭಿಸಿದೆ. ಇಲ್ಲಿವರೆಗೆ ನಡೆದ ಸಾಮಾಜಿಕ ಚಳುವಳಿಯನ್ನು ಧಾರ್ಮಿಕ ಕಣ್ಣೋಟದಿಂದಲೇ ನೋಡುವ ದರ್ಶನ ಶ್ಯಾಸ್ತ್ರ ನಿರ್ಮಾಣಕ್ಕೂ ಕೈ ಹಾಕಿದೆ. 12ನೇ ಶತಮಾನದ ಕಾಯಕ ಜೀವಿಗಳ ಚಳವಳಿಯ ವಿವಿಧ ಮಗ್ಗಲುಗಳನ್ನು ನೋಡದೇ ಕೇವಲ ಧಾರ್ಮಿಕ ಸುಧಾರಣೆಯಿಂದಷ್ಟೇ ಹೇಳುವ ಆಕಾಡಮಿಕ್ ಪ್ರಜ್ಞೆಗೇನು ಬರವಿಲ್ಲ.
ಸಂಚಾರಿತನವನ್ನು ಕಳಚಿಕೊಂಡು ಜಡತ್ವವನ್ನು ಪ್ರತಿಪಾದಿಸುವ ಸಾಂಸ್ಥಿಕ ಧರ್ಮ ಶ್ಯಾಸ್ತ್ರ ಪಂಡಿತರು ಪ್ರಜಾಸತ್ತಾತ್ಮಕವಾದ ಸರ್ವರ ಶಿಕ್ಷಣದ ಒಡಲಲ್ಲಿ ದ್ವೇಷಯುಕ್ತ ಧಾರ್ಮಿಕತೆ ಬೆರೆಸುತ್ತಿರುವುದನ್ನು ನೋಡಿದ್ದೇವೆ. ಇದೇನು ಕಾದಂಬರಿಯಲ್ಲಿ ಅನಾವರಣಗೊಂಡಿಲ್ಲವಾದರೂ ಇಂಥಹದೊಂದು ಧಾರ್ಮಿಕ ಶ್ಯಾಸ್ತ್ರದ ಅಸ್ತ್ರವೆ ಧಾರ್ಮಿಕ ವ್ಯಕ್ತಿಯಾಗಿದ್ದ ಗಾಂಧಿಯನ್ನು ಜಾತಿಭ್ರಷ್ಟ ಮಾಡಿದ ಕಥೆ ಪ್ರಸ್ತುತ ಸನ್ನಿವೇಶಕ್ಕೆ ಓದುಗನನ್ನು ಕೊಂಡೊಯ್ಯುತ್ತದೆ. ಇದು ಕಾದಂಬರಿಯ ವಿಶೇಷತೆಯೂ ಹೌದು. ಮೇಲ್ಜಾತಿ ಕುಟುಂಬದಲ್ಲಿ ಹುಟ್ಟಿದ ಗಾಂಧಿ ಉನ್ನತ ವ್ಯಾಸಂಗಕ್ಕೆ ವಿದೇಶ ಪಯಣ ಕೈಗೊಂಡಾಗ ಸಮುದ್ರದಾಟಲೇ ಬೇಕಾದ ಅನಿವಾರ್ಯತೆ. ಸಮುದ್ರಯಾನ ನಿಷೇಧವೆಂದು ಧರ್ಮಶ್ಯಾಸ್ತ್ರ ಹೇಳುತ್ತದೆ. ಗಾಂಧೀಗೆ ತನ್ನ ವ್ಯಾಸಂಗಕ್ಕೆ ಅಸ್ತ್ರದಂತೆ ಅಡ್ಡಿಯಾಗಿದ್ದು ಇಂಥಹದೇ ಶ್ಯಾಸ್ತ್ರ. ಗಾಂಧಿ ಇದರ ವಿರುದ್ಧ ಸೆಡ್ಡು ಹೊಡೆದದಕ್ಕೆ ಪಂಡಿತರು ಜಾತಿ ಭ್ರಷ್ಟತೆ ಶಿಕ್ಷೆ ನೀಡುತ್ತಾರೆ. ಇದಕ್ಕೆ ಗಾಂಧಯಷ್ಟೇ ಅಲ್ಲ ಹುಟ್ಟಿದ ಹಸುಗೂಸಿನಿಂದ ಹಿಡಿದು ಇಡೀ ಕುಟುಂಬ ಬಾಧಿತವಾಗುತ್ತದೆ. ಆದರೆ ಇದಕ್ಕೆ ಯಾರೂ ವಿಚಲಿತರಾಗುವುದಿಲ್ಲ. ಮುಖ್ಯವಾಗಿ ಅಕ್ಷರ ಶಿಕ್ಷಣದ ಬಗ್ಗೆ ಹಾಗೂ ಗಾಂಧಿ ವಿದೇಶದ ವ್ಯಾಸಂಗದ ಅಷ್ಟು ಆಸಕ್ತಿ ತೋರದ ಕಸ್ತೂರ್ ಬಾ ನಿಲುವು ಎಲ್ಲರದಕ್ಕಿಂತಲೂ ಮಿಗಿಲಾಗಿ ಬದಲಾಗುತ್ತದೆ. ಗಂಡನ ವ್ಯಾಸಂಗಕ್ಕೆ ತವರಿನ ಉಡುಗೊರೆಯಾದ ನಗವನ್ನು ನೀಡಿ ತಮ್ಮತನವನ್ನು ದೃಡಪಡಿಸುತ್ತಾರೆ. ಅನುಭವದ ವಿದ್ಯೆಯನ್ನು ಮನ್ನಲೆಗೆ ತರುತ್ತಾರೆ.
“ಅನುಭವ ಅಕ್ಷರದ ಸಂಯೋಜನೆ.”
ಕಾದಂಬರಿಯಲ್ಲಿ ಶಿಕ್ಷಣ ಕುರಿತು ಇಬ್ಬರ ನಡುವೆ ನಡೆದ ವಾಗ್ವಾದ ಶಿಕ್ಷಣಕ್ಕೆ ಹೊಸ ಅಯಾಮವನ್ನು ಸಂವಾದಿಸಿದೆ. ಕಸ್ತೂರ್ ಬಾರಿಗೆ ಅಕ್ಷರ ವಿದ್ಯೆ ಕಲಿಸಬೇಕೆಂಬ ಗಾಂಧೀ ಹೆಬ್ಬಯಕೆ ವಿಫಲಗೊಳ್ಳುತ್ತದೆ. ಇಲ್ಲಿ ಇಬ್ಬರ ನಡುವೆ ಬೆರಗಿನ ಸಂವಾದ ನಡೆಯುತ್ತದೆ. ಕಸ್ತೂರ್ ಬಾ ಅಕ್ಷರ ಶಿಕ್ಷಣ ವಿರೋಧಿಯಲ್ಲ. ಅನುಭವ ಶಿಕ್ಷಣಕ್ಕೆ ಒತ್ತುಕೊಡುತ್ತಾರೆ. ಗಾಂಧೀ ಅನುಭವಕ್ಕೆ ಅಕ್ಷರದ ಅಗತ್ಯವನ್ನು ಹೇಳುತ್ತಾರೆ. ಆಕ್ಷರ ಶಿಕ್ಷಣ ಕಲಿತವರು ಅನುಭವ ಶಿಕ್ಷಣದಲ್ಲಿ ಸೋತಿರುವ ಉದಾಹರಣೆಗಳಿವೆ. ಈ ಚರ್ಚೆ ಇಂದಿನ ಶಿಕ್ಷಣದಲ್ಲಿ ಅನುಭವ ಹಾಗೂ ಅಕ್ಷರ ಸಂಯೋಜಿತ, ಆರ್ಗ್ಯಾನಿಕ್ ಮತ್ತು ಅಕಾಡೆಮಿಕ್ ಸಂಯೋಜಿತ ಶಿಕ್ಷಣದ ಅಗತ್ಯವನ್ನು ಧ್ವನಿಸುತ್ತದೆ.
*******
(4)“ಸೇವೆಯ ಸರ್ವಾಧಿಕಾರಿಯಾಗ ಬೇಡಿ”
ಈ ಮಾತು ಕಸ್ತೂರಬಾ ಮಾತಿನ ಚಾಟಿ. ಗಂಡನೆಂಬ ಅಧಿಕಾರದಿಂದ ಹೆಂಡತಿಯ ಸೇವೆ ಬಯಸುವ ಎಲ್ಲ ಗಂಡಂದಿರಿಗೂ ಬೀಸುವ ಚಾಟಿ. ಸ್ತ್ರೀಸಂವೇದನೆಯ ನೆಲೆಯಲ್ಲಿ ಹುರಿಗೊಂಡ ಚಾಟಿ. ಗಾಂಧೀ ಆಪ್ತ ವಿನ್ಸೆಂಟ್ನ ಮಲಕೋಡ ಸುಚಿಗೊಳಿಸುವ ಹಾಗೂ ಅಶ್ರಮದ ಮತ್ತೆರೆಡು ಪ್ರಕರಣದಲ್ಲಿ ಗಾಂಧಿ ಕಸ್ತೂರರನ್ನು ಹಿಂಸಿಸುತ್ತಾರೆ. ಸಾರ್ವಜನಿಕರೆದುರಲ್ಲೇ ನಿಂದಿಸುತ್ತಾರೆ. ಇದೆಲ್ಲವನ್ನೂ ಸಹಿಸಿದ ಕಸ್ತೂರ್ ಬಾ ಗಾಂಧಿಯೊಂದಿಗೆ ವಾಗ್ವಾದ ನಡೆಸುತ್ತಾರೆ. ಸೇವಾ ಭಾವನೆ ಅಧಿಕಾರಯುತವಾಗಿ ಹೇರುವುದಲ್ಲ. ಅದು ವ್ಯಕ್ತಿಯಲ್ಲಿ ಸಹಜ ವ್ಯಕ್ತಿತ್ವವಾಗಿ ಅರಳಬೇಕು. ಇದು ಕಸ್ತೂರರ ವ್ಯಕ್ತಿ ಸ್ವಾತಂತ್ರ್ಯದ ಮಾತಿನಲ್ಲಿ ವ್ಯಕ್ತವಾಗುತ್ತದೆ.
ತಮ್ಮ ಆದರ್ಶವನ್ನು ಯಾರೂ ತಪ್ಪದೇ ಪಾಲಿಸಬೇಕೆಂಬುದು ಗಾಂಧೀ ಹಟ, ಚಟವಾಗಿ ಸರ್ವಾಧಿಕಾರಿ ಧೋರಣೆ ತಾಳಿದಾಗ ಕಸ್ತೂರರ ವಿರೋಧ ಸಹಜವಾಗಿ ವ್ಯಕ್ತವಾಗುವ ಪರಿ. ಈ ವಾಗ್ವಾದವು ಗಾಂಧೀಯನ್ನು ಎಚ್ಚರವಾಗೊಳಿಸುತ್ತದೆ ಮಾತ್ರವಲ್ಲ, ಕಸ್ತೂರ್ ಗಾಂಧೀ ಆದರ್ಶದ ಉದ್ದೇಶವರಿತು ತಮ್ಮನ್ನು ತಾವು ಮೀರಿ ಗಾಂಧಿಗೆ ಮಾದರಿಯಾಗುತ್ತಾರೆ.
ಸೇವೆ, ಸರ್ವಾಧಿಕಾರ ಎರಡು ವಿರುದ್ಧಾರ್ಥಕ ಪದಗಳು. ಕಾದಂಬರಿಯುದ್ಧಕ್ಕೂ ಇಂಥಹ ವಿರುದ್ಧಾರ್ಥಕ ಪದಗಳ ಝರಿಯೇ ಹರಿದಿದೆ. ಮಾತು – ಮೌನ, ಕತ್ತಲು- ಬೆಳಕು, ಆಕಾರವುಳ್ಳ ಹಾವು-ಆಕಾರವಿರದ ಕತ್ತಲು, ಬಿಸಿಲು-ತಂಪು, ಬೆಂಕಿ-ಬೆಳಕು ಇತ್ಯಾದಿ. ಇಂಥಹ ವಿರೋಧಾತ್ಮಕ ಪದಗಳನ್ನು ಒಗ್ಗೂಡಿಸಿ ವಿಶೇಷ ಅರ್ಥ ಹೊರಡಿಸುವ ಜಾಣ್ಮೆಯನ್ನು ಚೇತನಾತ್ಮಕವಾಗಿ ಹೆಣೆದಿರುವುದು ಕಾದಂಬರಿ ಕಾರರ ವಿಶೇಷ ಕಣ್ಣೋಟವಾಗಿದೆ.
*******
“ವಿಭಿನ್ನ ದ್ರುವಗಳ ಅನುಸಂಧಾನ”
ಇಂದಿನ ಸಾಮಾಜಿಕ ಬದಲಾವಣೆಯ ಹೋರಾಟದ ತಾತ್ವಿಕತೆ ಒಳಗೊಳ್ಳ ಬೇಕಾದ ಅನುಸಂಧಾನ ಮಾರ್ಗವಿದು ಎನಿಸುತ್ತದೆ. ಅರೆ ಬೆತ್ತಲೆಯ ಸಮುದಾಯದಿಂದ ಬಂದು ಸೂಟ್ ಧಾರಿ ಅಂಬೇಡ್ಕರ್. ಉಟ್ಟು ಉಣ್ಣುವ ಸಮುದಾಯದಿಂದ ಬಂದು ಅರೆ ಬೆತ್ತಲ ಗಾಂಧಿ. ಇವೆರೆಡು ಈ ದೇಶದ ಒಳನೋಟದ ಬಹು ಮುಖ್ಯ ಸಂಕೇತಗಳು ಎನಿಸುತ್ತದೆ. ಏಕೆಂದರೆ ಇಲ್ಲಿ ‘ಬಟ್ಟೆ’ ತೊಡುವ ಬಟ್ಟೆಯಷ್ಟೇ ಅಲ್ಲ ಈ ದೇಶ ನಡೆವ ಬಟ್ಟೆಯೂ ಹೌದು. ಇವೆರೆಡೂ ಬಾರತೀಯ ಜೀವನ ದರ್ಶನಗಳಾಗುತ್ತವೆ, ಚಾರಿತ್ರಿಕವಾಗುತ್ತವೆ. ಕಾದಂಬರಿಯಲ್ಲಿ ಎರೆಡೂ ವ್ಯಕ್ತಿತ್ವಗಳು ಅನುಭಾವಿ ಸಂತರಂತೆ ಕಾಣುತ್ತಾರೆ. ಇಂಥಹ ವ್ಯಕ್ತಿತ್ವಗಳ ಅನುಸಂಧಾನದ ಕೊಂಡಿಯಾದ ಕಸ್ತೂರ್ ಬಾ?
ಗಾಂಧಿಯನ್ನು ಫುಲ್ ಸೂಟಧಾರಿಯಾದ ಅಂಬೇಡ್ಕರ್ ಉಡುಪಿನಲ್ಲಿ ನೊಡ ಬಯಸುತ್ತಾರೆ. ಈ ಬಯಕೆ ಈ ದೇಶದ ಅಸಂಖ್ಯಾತ ಶೋಷಿತ ಸಮುದಾಯದ ಬಯಕೆ ಅಲ್ಲವೆ? ಕಾದಂಬರಿಯಲ್ಲಿ ಗಾಂಧೀ ಹಾಗೂ ಅಂಬೇಡ್ಕರ್ ನಡುವಿನ ಭಿನ್ನಾಭಿಪ್ರಾಯಕ್ಕೆ ಕಸ್ತೂರ್ ಬಾ ಅನುಸಂಧಾನದ ಕೊಂಡಿಯಾಗಿ ನಿಲ್ಲುತ್ತಾರೆ.
ಹೊಸರೂಪ ಧರಿಸಿ ಇಂದಿಗೂ ಮನುಷ್ಯತ್ವಕ್ಕೆ ಸವಾಲಾಗಿರುವ ಅಸ್ಪೃಶ್ಯತೆ ಬಗ್ಗೆ ಎರೆಡು ವ್ಯಕ್ತಿತ್ವದ ವಿಚಾರಧಾರೆ ಕುರಿತು ಕಾದಂಬರಿ ಮಾತನಾಡುತ್ತದೆ. ಈ ಸಂಧರ್ಭದಲ್ಗಿ ಗಾಂಧೀಗೆ “ನೀವು ಅಂಬೇಡ್ಕರ್ ಸಾಹೇಬ್ರಿಗೆ ಓರೆಗಲ್ಲು”
ಎನ್ನುವ ಕಸ್ತೂರ್ ಬಾ ಮಾತು ಸ್ತ್ರೀ ಸಂವೇಧನೆಯ ನೆಲೆಯಲ್ಲೆ ಮೂಡಿಬಂದ ಎರೆಡು ವ್ಯಕ್ತಿತ್ವದ ವಿಚಾರಗಳ ಅನುಸಂಧಾನದ ಮಾತಾಗಿದೆ.
ಇಲ್ಲಿ ಗಾಂಧೀ, ತಾವು ಆಸ್ಪೃಶ್ಯ ಆಚರಣೆ ವರ್ಗದಿಂದ ಹುಟ್ಟಿದವರೆಂಬ ಪಾಪ ಪ್ರಜ್ಞೆಯಿಂದಾಗಿ ಮೊದಲು ತಾನು ಸುಧಾರಿಸುತ್ತಲೆ ಸಮಾಜವನ್ನು ಸುಧಾರಿಸುವ ಪ್ರಯತ್ನ ನಡೆಸುತ್ತಾರೆ. ಈ ಪ್ರಯತ್ನ ದಾರ್ಮಿಕ ಚೌಕಟ್ಟಿನಲ್ಲಿ ಪಸರಿಸಬೇಕೆಂಬ ತಹತಹ ಹೊಂದುತ್ತಾರೆ. ಆದರೆ ಅಂಬೇಡ್ಕರ್ ಸಂಪರ್ಕ ಬೆಳೆದ ನಂತರ ಗಾಂಧೀ ನಿಲುವು ಬದಲಾಗುತ್ತದೆ. ಈ ಸಂದರ್ಭದಲ್ಲಿ ಇಬ್ಬರ ನಡುವಿನ ಸಂವಾಧ ಮೌಲಿಕ ಚಿಂತನೆಗೆ ಈಡುಮಾಡುತ್ತದೆ.ಗಾಂಧೀ : ” ಅಸ್ಪೃಶ್ಯತೆ ಅನ್ನೋದು ದೊಡ್ಠ ಪಾಪ ಮತ್ತು ಶಾಪ …………….ಅಸ್ಪೃಶ್ಯತೆ ಉಳಿದರೆ ಹಿಂದು ಧರ್ಮ ಉಳಿಯೊಲ್ಲ…………..” ಅಂಬೇಡ್ಕರ್: “….ಧರ್ಮದಲ್ಲೇ ಆ ಪಾಪದ ಬೀಜ ಇದೆ ಅಂದ್ಮೇಲೆ ಆ ಧರ್ಮ ಯಾಕೆ ಬೇಕು….. …………….” ಗಾಂಧೀ: ” ……………ನಾನು ಜಾತಿ ಪದ್ಧತಿಗೆ, ವರ್ಣಾಶ್ರಮ ಪದ್ಧತಿಗೆ ಬೇರೆ ಅರ್ಥನೇ ಕೊಡ್ತಿದ್ದೆ ನಿಜ, ಒಂದು ಹಂತದವರೆಗೆ ಅವು ಅನಿವಾರ್ಯ……ನಿಮ್ಮ ವಿಚಾರ ಕೇಳ್ತಾ ನಾನೂ ಬದಲಾಗಿದೀನಿ…..”
ಈ ಸಂವಾದದಲ್ಲಿ ಗಾಂಧೀ ಕೊನೆಯ ಮಾತು: ” ……..ಜಾತಿ ಧರ್ಮ ಅಂತ ತಾರತಮ್ಯ ಮಾಡೋದೇ ಶ್ಯಾಸ್ತ್ರಬದ್ಧ ಅನ್ನೋದಾದ್ರೆ ನನಗೆ ಅಂಥ ಶ್ಯಾಸ್ತ್ರನೂ ಬೇಡ, ಅದನ್ನು ಅನುಸರಿಸೋ ಧರ್ಮನೂ ಬೇಡ………”
ಬಾಲ್ಯದಲ್ಲಿ ಮಲ ಹೊತ್ತವನ ಕಂಡಾಗ ಅವರೊಳಗೆ ಜಾಗೃತಗೊಂಡ ಗಾಂದೀಯೊಳಗಿನ ಮನುಷ್ಯತ್ವ ವೈಯುಕ್ತಿಕ ನೆಲೆಯಲ್ಲಿ ಈ ಪದ್ಧತಿಯನ್ನು ವಿರೋಧಿಸುತ್ತದೆ. ಇದು ಅವರಿಗೆ ಸಮಾಜಿಕ ಸಮಸ್ಯೆ ಎನ್ನುವ ಅರಿವು ಮೂಡಿಸುತ್ತಿದ್ದಂತೆ ವೈಯುಕ್ತಿಕತೆಯಿಂದ ಸಮಾಜಿಕ ಪ್ರಜ್ಞೆಗೆ ಜಿಗಿತಗೊಂಡು ಅವರು ಧಾರ್ಮಿಕ ಸುಧಾರಣೆಯ ನೆಲೆಯಲ್ಲಿ ಪ್ರಯತ್ನ ನಡೆಸುತ್ತಾರೆ. ಅಂಬೇಡ್ಕರ್ ಸಂಪರ್ಕ ದೊರೆತ ನಂತರ ಅವರ ಹೋರಾಟದ ಜಾಡು ಬದಲಾಗುತ್ತದೆ.
ಇಲ್ಲಿ ಅಂಬೇಡ್ಕರ್ ಹಾಗೂ ಗಾಂಧೀ ನಡುವಿನ ಸಂವಾದ ಪ್ರಸ್ತುತ ಸಂಧರ್ಭಕ್ಕೆ ಒಗ್ಗಿಸಿಕೊಳ್ಳುವ ಅಗತ್ಯವನ್ನು ಕಾದಂಬರಿ ಧ್ವನಿಸುತ್ತದೆ. ಆಳುವ ವರ್ಗ ತನ್ನ ಸ್ಥಾನವನ್ನು ಗಟ್ಟಿಗೊಳಿಸುವ ತಂತ್ರವಾಗಿ ಜಾತಿ ಭಾವನೆಯನ್ನು ಗಟ್ಟಿಗೊಳಿಸಿ ತನ್ನಲ್ಲಿ ದೃವೀಕರಿಸಿಕೊಳ್ಳಲು ಹೆಣಗುತ್ತಿರುವ ಫಲವಾಗಿ ಅಂಬೇಡ್ಕರ್ ಮತ್ತು ಗಾಂಧೀ ವಿಚಾರವಾದಿಗಳ ಪ್ರಜ್ಞೆಯಲ್ಲಿ ವೈರತ್ವದ ಗೋಡೆ ನಿರ್ಮಿಸಿವೆ. ಕಾದಂಬರಿ ಈ ಗೋಡೆಯನ್ನು ಸೀಳುವ ಕೆಲಸ ಮಾಡಿದೆ. ಅಲ್ಲದೆ ಇಬ್ಬರ ವಿಚಾರಗಳ ತಾತ್ವಿಕ ಅನುಸಂಧಾನದ ಅಗತ್ಯದ ಧ್ವನಿ ಹೋರಾಟಗಾರರ ಎದೆ ಭಾಷೆಯಾಗಬೇಕೆಂದು ಬಯಸುತ್ತದೆ. ಇದು ವಿಶಾಲ ತಳಹದಿಯ ಪ್ರಜಾಸತ್ತಾತ್ಮಾಕ ಐಕ್ಯತೆಗೆ ಅಂಬೇಡ್ಕರ್ ವಾದಿ ಹಾಗೂ ಗಾಂಧೀವಾದಿಗಳನ್ನು ಬೆಸೆವ ಬುನಾದಿಯಾಗಿದೆ.
ಈ ಘಟನೆಯಲ್ಲಿ ಕಸ್ತೂರಾ ಬಾ ಮುಖ್ಯ ಪಾತ್ರ ವಹಿಸುತ್ತಾರೆ. ಇಬ್ಫರ ನಡುವಿನ ಭಿನ್ನಾಭಿಪ್ರಾಯದಲ್ಲಿ ಉಪವಾಸ ಸತ್ಯಾಗ್ರಹ ಕುಳಿತ ಗಾಂಧೀ ಜೀವ ಉಳಿಸುವ ಸಲುವಾಗಿ ಅಂಬೇಡ್ಕರ್ ಮನೆಗೆ ಹೋಗಿ ರಾಜಿಗೆ ಅಲವತ್ತಿಕೊಳ್ಳುತ್ತಾರೆ.
ಇದಕ್ಕೆ ಅಂಬೇಡ್ಕರ್ ಒಪ್ಪುತ್ತಾರೆ. ಇಂಥಹದೊಂದು ಮೌಲಿಕ ಕಾದಂಬರಿಯ ಬರಹದ ಹಿಂದೆ ಲೇಖಕಕರ ಅಗಾಧ ಪರಿಶ್ರಮವಿದೆ. ಆಕರಗಳ ಸಂಗ್ರಹ ಅಗಾಧವಾದ ಓದು ಎರೆಡನ್ನು ಸಂಗ್ರಹಿಕೊಂಡ ಒಟ್ಟು ದರ್ಶನವನ್ನು ಪ್ರಸ್ತುತ ಪರಿಸ್ಥಿತಿಗೆ ಒಗ್ಗಿಸಿಕೊಳ್ಳುವಲ್ಲಿ ನಡೆಸಿದ ಲೇಖಕರ ಪರಿಶ್ರಮದ ಫಲ ಇದಾಗಿದೆ.
ಕಸ್ತೂರ್ ಬಾರ ನೆಲೆಯಲ್ಲಿ ಗಾಂಧೀ ವ್ಯಕ್ತಿತ್ವದ ಸತ್ಯಾನ್ವೇಷಣೆಯನ್ನು ಸ್ತ್ರೀ ಸಂವೇದನೆಯ ಹೊಸ ಪರಿಭಾಷೆಯಲ್ಲಿ ಕಾದಂಬರಿ ಅನಾವರಣ ಗೊಂಡಿದೆ. ಇಂಥಹ ಕಾದಂಬರಿ ಕನ್ನಡದ ಮನಸ್ಸುಗಳಷ್ಟೇ ಓದಿದರೆ ಸಾಲದು. ದೇಶದ ಇತರ ಮನಸ್ಸುಗಳು ತಮ್ಮದಾಗಿಸಿಕೊಳ್ಳಬೇಕಾದ ಅಗತ್ಯವಿದೆ ಎಂಬುದು ನನ್ನ ಭಾವನೆ. ಸ್ತ್ರೀ ಕೇಂದ್ರವಾಗಿಸಿಕೊಂಡು ಬರೆದ ಅನೇಕ ಕಾದಂಬರಿಗಳು ನಮ್ಮ ಮುಂದಿವೆ. ಯಾರ ಭಾವನೆಗೂ ಬೋರ್ಡ ಹಾಕುವ ಅಗತ್ಯವಿಲ್ಲ. ಆದರೆ ಅವೆಲ್ಲವೂ ಮರು ವ್ಯಾಖ್ಯಾನಗೊಳ್ಳುವ ಅಗತ್ಯವಿದೆ ಎಂದಷ್ಟೆ ಹೇಳಬಹುದು.
ಲೇಖನ : ಪಿಆರ್.ವೆಂಕಟೇಶ್.