ಕಸ್ಟಡಿಯಲ್ಲಿ ಫಾದರ್ ಸ್ಟಾನ್ ಸ್ವಾಮಿ ಸಾವು: ಅತ್ಯಂತ ಹೊಲಸು ಸಾಂಸ್ಥಿಕ ಕೊಲೆ

ಫಾದರ್ ಸ್ವಾಮಿಯವರ ಸಾವು ಕಸ್ಟಡಿಯಲ್ಲಿ ಹತ್ಯೆ ಮತ್ತು ಸಾಂಸ್ಥಿಕ ಕೊಲೆಯ ಪಠ್ಯಪುಸ್ತಕೀಯ ನಿರೂಪಣೆಗೆ ನಿಖರವಾಗಿ ಹೊಂದಿಕೊಳ್ಳುತ್ತದೆ. ಅವರನ್ನು ತಲೋಜಾ ಜೈಲಿಗೆ ಹಾಕಿದಂದಿನಿಂದ ದಾಖಲಾಗಿರುವ ಸಂಗತಿಗಳು, ಸಾಂಸ್ಥಿಕ ಕೊಲೆಯ ಭೀಕರ ವಿವರಗಳಿಗೆ ಸಾಕ್ಷಿಗಳಾಗಿವೆ. ಭೀಮ ಕೊರೆಗಾಂವ್ ಪ್ರಕರಣ ಈಗ ಯು.ಎ.ಪಿ.ಎ., ರಾಜದ್ರೋಹದ ಕಾಯ್ದೆ , ರಾಷ್ಟ್ರೀಯ ಭದ್ರತಾ ಕಾಯ್ದೆ ಮುಂತಾದ ಕರಾಳ ಶಾಸನಗಳನ್ನು ರಾಜಕೀಯ ಭಿನ್ನಮತದ ಹುಟ್ಟಡಗಿಸಲು ನಿರ್ದಯವಾಗಿ ಬಳಸುವ ಒಂದು ವಿಧಾನವನ್ನು ಅಳವಡಿಸುವ ಕ್ರೂರ ಪ್ರಯತ್ನದ ರೂಪುರೇಷೆಯಾಗಿ ಮೂಡಿ ಬಂದಿದೆ. ವಾಸ್ತವವಾಗಿ ಶಿಕ್ಷಿಸುವುದಲ್ಲ, ಜಾಮೀನಿಲ್ಲದೆ ಜೈಲಿನಲ್ಲಿ ಕೊಳೆ ಹಾಕುವುದೇ ಇದರ ಉದ್ದೇಶವಿರುವಂತಿದೆ! ಇಂತಹ ಸನ್ನಿವೇಶದಲ್ಲಿ ಫಾದರ್ ಸ್ವಾಮಿಯವರ ಸಾಂಸ್ಥಿಕ ಕೊಲೆಯಂತದ್ದು ಒಂದಿಲ್ಲೊಂದು ದಿನ ನಡೆಯುವಂತದ್ದೇ ಆಗಿತ್ತು.

ಈ ದುರಂತ ಮತ್ತೆಂದೂ ಮರುಕಳಿಸದಂತೆ ತಡೆಯಲು ಒಂದಾಗಬೇಕು.

ನೀಲೋತ್ಪಲ ಬಸು

ಜುಲೈ 5, 2021. ಮುಂಬೈ ಹೈಕೋರ್ಟಿನ ನ್ಯಾಯಮೂರ್ತಿಗಳಾದ ಎಸ್ ಎಸ್ ಶಿಂಧೆ ಮತ್ತು ಎನ್ ಜೆ ಜಮಾದಾರ್‌ ರವರ ನ್ಯಾಯ ಪೀಠ ಎಂಟು ದಶಕಗಳನ್ನು ದಾಟಿರುವ ಸ್ಟಾನ್ ಸ್ವಾಮಿಯವರ ಜಾಮೀನು ಅರ್ಜಿಯನ್ನು ಕೈಗೆತ್ತಿಕೊಂಡಿತ್ತು. ಸ್ವಾಮಿಯವರ ವಕೀಲ, ಹಿರಿಯ ನ್ಯಾಯವಾದಿ ಮಿಹಿರ್ ದೇಸಾಯಿ ಮುಂಬೈಯ ಹೋಲಿ ಫ್ಯಾಮಿಲಿ ಹಾಸ್ಪಿಟಲ್‌ ನ ಡಾ. ಡಿಸೋಝ ಒಂದು ಪ್ರಕಟಣೆಯನ್ನು ಮಾಡ ಬಯಸುತ್ತಾರೆ ಎಂದರು. ಅವರು ಸೆರೆವಾಸದಲ್ಲಿರುವ ಈ ಜೆಸುಯಿಟ್ ಪಾದ್ರಿಯ ಶುಶ್ರೂಷೆ ಮಾಡುತ್ತಿದ್ದವರು.

“ನಾನು ಅತ್ಯಂತ ಭಾರವಾದ ಹೃದಯದಿಂದ ನಿಮಗೆ ತಿಳಿಸಬೇಕಾಗಿರುವುದೇನೆಂದರೆ, ಫಾದರ್ ಸ್ಟಾನ್ ಸ್ವಾಮಿ ತೀರಿಕೊಂಡಿದ್ದಾರೆ.”

ಅಡ್ವೊಕೇಟ್ ಮಿಹಿರ್ ದೇಸಾಯಿ, ಆಸ್ಪತ್ರೆಯಲ್ಲಿ ಶುಶ್ರೂಷೆಯ ಬಗ್ಗೆ ನಮ್ಮದೇನೂ ದೂರುಗಳಿಲ್ಲ, ಆದರೆ ಎನ್‌.ಐ.ಎ ಮತ್ತು ಪ್ರಭುತ್ವದ ಬಗ್ಗೆ ಹಾಗೆ ಹೇಳಲು ಸಾಧ್ಯವಿಲ್ಲ ಎನ್ನುತ್ತ “ನಾನು ಈ ಬಗ್ಗೆ ಒಂದು ನ್ಯಾಯಾಂಗ ತನಿಖೆಯಾಗಬೇಕು ಎಂದು ಆಗ್ರಹಿಸುತ್ತೇನೆ. ಏಕೆಂದರೆ ಅವರನ್ನು ಜೈಲಿನಿಂದ ಆಸ್ಪತ್ರೆಗೆ ಒಯ್ಯುವಲ್ಲಿ ಹತ್ತು ದಿನಗಳ ವಿಳಂಬವಾಗಿದೆ” ಎಂದರು.

ಕರಾಳ ಯು.ಎ.ಪಿ.ಎ. ಅಡಿಯಲ್ಲಿ ಆರೋಪಿತರಾಗಿರುವರಲ್ಲಿ ಅತ್ಯಂತ ಹಿರಿಯ ವಯಸ್ಸಿನವರಲ್ಲಿ ಒಬ್ಬರಾದ ಫಾದರ್ ಸ್ಟಾನ್ ಸ್ವಾಮಿ ತೀವ್ರ ಪಾರ್ಕಿನ್ಸನ್ ಕಾಯಿಲೆಯಿಂದ ನರಳುತ್ತಿದ್ದರು, ಎರಡೂ ಕಿವಿಗಳು ಕೇಳಿಸುತ್ತಿರಲಿಲ್ಲ. ಎರಡು ಹರ್ನಿಯ ಶಸ್ತ್ರಚಿಕಿತ್ಸೆಗಳಾಗಿದ್ದವು. ಸೊಂಟ ಮೂಳೆಯ ನೋವಿನಿಂದ ನರಳುತ್ತಿದ್ದರು, ಎರಡೂ ಕೈಗಳಲ್ಲಿ ನಡುಕವಿತ್ತು.

ಈ ಮೊದಲು ರಜಾ ಪೀಠದ ಎದುರು ವಿಚಾರಣೆಯಲ್ಲಿ ಅವರು ನನ್ನನ್ನು ಆಸ್ಪತ್ರೆಗೆ ಕಳಿಸಬೇಡಿ, ಮಧ್ಯಂತರ ಜಾಮೀನು ಕೊಟ್ಟು ತನ್ನವರೊಂದಿಗೆ ಇರಲು ಅವಕಾಶ ಕೊಡಿ ಎಂದಿದ್ದರು. ಜೈಲಿನಲ್ಲಿ ತನ್ನ ಪರಿಸ್ಥಿತಿ ಕ್ರಮೆಣ ಹದಗೆಡುತ್ತ ಬಂದಿದೆ, “ಇದು ಹೀಗೇ ಮುಂದುವರೆದರೆ, ಬಹುಶಃ ನಾನು ಬೇಗನೆ ಸಾಯಬಹುದು….. ನನ್ನ ಹೆಚ್ಚುತ್ತಿರುವ ನೋವು ಅವರು ಕೊಡುವ ಸಣ್ಣ ಗುಳಿಗೆಗಳಿಗಿಂತ ಹೆಚ್ಚು ಶಕ್ತಿಶಾಲಿಯಾಗಿದೆ” ಎಂದು ಹೇಳಿದ್ದರು.

ಆದರೂ ನ್ಯಾಯಮೂರ್ತಿ ಶಿಂಧೆಯವರ ಪೀಠ ಅವರನ್ನು ತಕ್ಷಣವೇ 15 ದಿನಗಳಿಗೆ ಆಸ್ಪತ್ರೆಗೆ ವರ್ಗಾಯಿಸಬೇಕು ಎಂದು ನಿರ್ದೇಶನವಿತ್ತಿತು. ಅವರ ಗಂಭೀರ ಪರಿಸ್ಥಿತಿಯಿಂದಾಗಿ ಅದನ್ನು ವಿಸ್ತರಿಸಲಾಯಿತು.

ಸ್ಟಾನ್ ಸ್ವಾಮಿಯವರನ್ನು ಅಕ್ಟೋಬರ್ 8, 2020ರಂದು ಬಂಧಿಸಲಾಗಿತ್ತು. ಅವರ ಮೇಲೆ ಭಾರತೀಯ ದಂಡ ಸಂಹಿತೆಯ ಮತ್ತು ಯು.ಎ.ಪಿ.ಎ. ಯ ಹಲವು ಕಲಮುಗಳ ಅಡಿಯಲ್ಲಿ ತಾನು ಕೆಲಸ ಮಾಡುತ್ತಿದ್ದ ವಿವಿಧ ನಾಗರಿಕ ಹಕ್ಕು ಸಂಘಟನೆಗಳ ಮೂಲಕ ನಿಷೇಧಿತ ಸಿಪಿಐ(ಮಾವೋವಾದಿ) ಯ ಗುರಿಸಾಧನೆಗೆ ನೆರವಾಗುವ ಅಪರಾಧಗಳನ್ನು ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಭೀಮ ಕೊರೆಗಾಂವ್-ಎಲ್ಗರ್ ಪರಿಷದ್ ಪ್ರಕರಣದಲ್ಲಿ ಒಳಗೊಂಡಿದ್ದಾರೆ ಎಂದು ಪೋಲೀಸರ ವಶದಲ್ಲಿರುವ 16 ಅಧ್ಯಯನಕಾರರು, ವಕೀಲರು, ಕಾರ್ಯಕರ್ತರಲ್ಲಿ ಇವರು ಒಬ್ಬರು.

ಹಿಂದಿರುಗಿ ನೋಡಿದಾಗ ಫಾದರ್ ಸ್ವಾಮಿಯವರ ಸಾವು ಕಸ್ಟಡಿಯಲ್ಲಿ ಹತ್ಯೆ ಮತ್ತು ಸಾಂಸ್ಥಿಕ ಕೊಲೆಯ ಪಠ್ಯಪುಸ್ತಕೀಯ ನಿರೂಪಣೆಗೆ ನಿಖರವಾಗಿ ಹೊಂದಿಕೊಳ್ಳುತ್ತದೆ. ತಲೋಜಾ ಜೈಲಿನಲ್ಲಿ ಅವರನ್ನು ಸೆರೆವಾಸದಲ್ಲಿ ಇಟ್ಟಂದಿನಿಂದ ಅವರ ಆರೋಗ್ಯ ಹದಗೆಡುತ್ತ ಹೋಗಿದೆ ಎಂಬುದಕ್ಕೆ ಸಾಕ್ಷ್ಯಾಧಾರಗಳು ಬಹಳಷ್ಟಿವೆ. ಕೆಲವು ನೂರು ಬಂಧಿಗಳನ್ನು ಇಡಲು ಕಟ್ಟಿದ ಈ ಜೈಲಿನಲ್ಲಿ ಈಗ ಒಟ್ಟು ಮೂರು ಸಾವಿರ ಬಂಧಿಗಳಿದ್ದಾರೆ. ಸ್ಟಾನ್ ಸ್ವಾಮಿಯವರು ಎಷ್ಟೊಂದು ಕಾಯಿಲೆಗಳಿಂದ ನರಳುತ್ತಿದ್ದರೂ, ಎನ್‌ಐಎ ಕೋರ್ಟ್ ಅವರಂತವರಿಗೆ ಅತ್ಯಗತ್ಯವಾದ ಸಿಪ್ಪರ್ (ಹೀರುನಳಿಕೆ)ಯನ್ನು ನಿರಾಕರಿಸಿತಷ್ಟೇ ಅಲ್ಲ, ಕೋರ್ಟ್ ಜೈಲಿನಲ್ಲಿನ ವೈದ್ಯಕೀಯ ಸೌಲಭ್ಯಗಳ ಬಗ್ಗೆ ವಿಚಾರಿಸಿದಾಗ, ಜೈಲು ಅಧಿಕಾರಿಗಳು ಸಾಕಷ್ಟು ಸೌಕರ್ಯಗಳಿವೆ ಎಂದರು. ವಾಸ್ತವವಾಗಿ ಕೇವಲ ಮೂವರು ಆಯುರ್ವೇದ ವೈದ್ಯರಷ್ಟೇ ಅಲ್ಲಿ ನೋಡಿಕೊಳ್ಳುತ್ತಿದ್ದರು. ಕೋವಿಡ್ ತಪಾಸಣೆಯನ್ನೂ ಮಾಡಿರಲಿಲ್ಲ. ಅವರನ್ನು ಆಸ್ಪತ್ರೆಗೆ ಸೇರಿಸಿದಾಗಲೇ ಮಾಡಿದ್ದು. ಇವೆಲ್ಲ ದಾಖಲಾಗಿರುವ ಸಂಗತಿಗಳು, ಸಾಂಸ್ಥಿಕ ಕೊಲೆಯ ಭೀಕರ ವಿವರಗಳಿಗೆ ಸಾಕ್ಷಿಗಳಾಗಿವೆ.

ಕ್ರೂರ ವಿಧಾನವೊಂದರ ರೂಪುರೇಷೆ

ಜನವರಿ 1, 2018ರಂದು ಪುಣೆಯ ಬಳಿ ನಡೆದ ಹಿಂಸಾಚಾರದ ನಂತರದ ಭೀಮ ಕೊರೆಗಾಂವ್ ಪ್ರಕರಣ ಈಗ ಯು.ಎ.ಪಿ.ಎ, ರಾಜದ್ರೋಹದ ಕಾಯ್ದೆ, ರಾಷ್ಟ್ರೀಯ ಭದ್ರತಾ ಕಾಯ್ದೆ ಮುಂತಾದ ಕರಾಳ ಶಾಸನಗಳನ್ನು ರಾಜಕೀಯ ಭಿನ್ನಮತದ ಹುಟ್ಟಡಗಿಸಲು ನಿರ್ದಯವಾಗಿ ಬಳಸುವ ಒಂದು ವಿಧಾನವನ್ನು ಅಳವಡಿಸುವ ಕ್ರೂರ ಪ್ರಯತ್ನದ ರೂಪುರೇಷೆಯಾಗಿ ಮೂಡಿ ಬಂದಿದೆ. ವಾಸ್ತವವಾಗಿ ಶಿಕ್ಷಿಸುವುದಲ್ಲ, ಜಾಮೀನಿಲ್ಲದೆ ಜೈಲಿನಲ್ಲಿ ಕೊಳೆ ಹಾಕುವುದೇ ಇದರ ಉದ್ದೇಶವಿರುವಂತಿದೆ!

ಭೀಮ ಕೊರೆಗಾಂವ್ ಒಂದು ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದೆ. 1917ರಲ್ಲಿ ಮಹಾರ್ ಸೈನಿಕರು ಬ್ರಾಹ್ಮಣ ಪೇಶ್ವೆ ಆಳರಸರ ಸೇನೆಯನ್ನು ಸೋಲಿಸಲು ಬ್ರಿಟಿಶ್‍ ಪಡೆಗಳಿಗೆ ನೆರವಾದರು. ಆ ವಿಜಯಕ್ಕೆ ಸಾಕ್ಷಿಯಾಗಿ ಒಂದು ಸ್ಮಾರಕವನ್ನು ಬ್ರಿಟಿಷರು ಸ್ಥಾಪಿಸಿದರು. ಪರ್ಯಾಯವಾಗಿ, ಮಹಾರ್ ಜನರು ತಮ್ಮ ಸ್ವಾಭಿಮಾನದ ಸಂಕೇತವಾಗಿ ಪ್ರತಿವರ್ಷ ಜನವರಿ 1ರಂದು ಇದರ ಸ್ಮರಣೆಯನ್ನು ಆಚರಿಸುತ್ತಾರೆ. ಸ್ವತಃ ಬಾಬಾ ಸಾಹೇಬ್‍ ಅಂಬೇಡ್ಕರ್ ರವರೇ 1937 ರಿಂದ ಇದನ್ನು ದಲಿತರ ಒಂದು ಸಮಾವೇಶವಾಗಿ ಆರಂಭಿಸಿದರು. 2018ರ ಜನವರಿ 1 ರಂದು ಈ ಐತಿಹಾಸಿಕ ಘಟನೆಯ ಶತಮಾನೋತ್ಸವವನ್ನು ಆಚರಿಸಲು ಲಕ್ಷಾಂತರ ದಲಿತರು ಭೀಮ ಕೊರೆಗಾಂವ್‍ ಗೆ ಬಂದು ಸೇರಿದರು.

ಆ ದಿನವೇ ಕಿಡಿಗೇಡಿಗಳು ಉದ್ರೇಕಿಸಿದ ಹಿಂಸಾಚಾರ ಶತಮಾನೋತ್ಸವ ಆಚರಣೆಯನ್ನು ಅಸ್ತವ್ಯಸ್ತಗೊಳಿಸಿತು. ಈ ಕಿಡಿಗೇಡಿಗಳ ಕೈಗಳಲ್ಲಿ ಕೇಸರಿ ಬಾವುಟಗಳೂ ಇದ್ದವು. ಈ ಹಿಂಸಾಚಾರದ ಸೂತ್ರಧಾರರು ಹಿಂದುತ್ವ ಬಣದ ಇಬ್ಬರು ಪ್ರಮುಖ ವ್ಯಕ್ತಿಗಳು, “ಶಿವ ಪ್ರತಿಷ್ಠಾನ ಹಿಂದುಸ್ತಾನ”ದ ಸಂಭಾಜಿ ಭಿಡೆ ಮತ್ತು ‘ಸಮಸ್ತ್ ಹಿಂದು ಅಗಾಡಿ’ಯ ಮಿಲಿಂದ್‍ ಎಕ್ಬೋಟೆ ಎನ್ನಲಾಗಿದೆ. ಸಂಭಾಜಿ ಭಿಡೆ ಪ್ರಧಾನ ಮಂತ್ರಿ ಮೋದಿಯವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದವರು. ಮಾರ್ಚ್ 20ರಲ್ಲಿ ಪುಣೆ ಪೋಲೀಸ್ ಈ ಇಡೀ ಬೆಳವಣಿಗೆಗಳ ಸರಣಿಗೆ ಒಂದು ಹೊಸ ತಿರುವನ್ನು ಕೊಡಲು ಪ್ರಯತ್ನಿಸಿದರು. ಭೀಮ ಕೊರೆಗಾಂವ್‍ ಘಟನೆಯ ಮೊದಲು ಪುಣೆಯಲ್ಲಿ ಡಿಸೆಂಬರ್ 28ರಂದು ನಡೆದ ಎಲ್ಗರ್ ಪರಿಷದ್‍ ಈ ಹಿಂಸಾಚಾರಕ್ಕೆ ಕಾರಣ ಎಂದು ಬಿಂಬಿಸಿದರು. ಅಲ್ಲಿ ದಲಿತರೊಂದಿಗೆ ಸೌಹಾರ್ಧದ ಭಾಷಣಗಳು ಹಿಂಸಾಚಾರದ ಮುಖ್ಯ ಕಾರಣ ಎಂದು ಬಿಂಬಿಸಲಾಯಿತು. ನಂತರ ಈ ಪ್ರಕರಣವನ್ನು ವಿಸ್ತರಿಸಿ, ಅದನ್ನು ಮಾವೋವಾದಿಗಳ ತಥಾಕಥಿತ ಪಿತೂರಿಯೊಂದಿಗೆ ತಳುಕು ಹಾಕಲಾಯಿತು; ಸರಕಾರವನ್ನು ಬೀಳಿಸುವ ಮತ್ತು ಪ್ರಧಾನ ಮಂತ್ರಿ ಮೋದಿಯವರನ್ನು ಕೊಲ್ಲುವ ಪಿತೂರಿಯೆಂದು ಬಿಂಬಿಸಲಾಯಿತು.

ಪ್ರಖ್ಯಾತ ಮಾನವ ಹಕ್ಕುಗಳ ಕಾರ್ಯಕರ್ತರು, ವಕೀಲರುಗಳು, ಅಧ್ಯಯನಕಾರರನ್ನು ಸಿಗಿಸಿ ಹಾಕಲು ಅವರ ಮೇಲೆ ಯು.ಎ.ಪಿ.ಎ. ಅಡಿಯಲ್ಲಿ ಆರೋಪಗಳನ್ನು ಹೇರಲಾಗಿದೆ. ಈ ಕೇಸಿನಲ್ಲಿ ಇತರ 15 ವ್ಯಕ್ತಿಗಳೊಂದಿಗೆ ಬಂಧಿಸಿ ಜೈಲಿಗೆ ಹಾಕಲಾಗಿರುವವರಲ್ಲಿ ಫಾದರ್ ಸ್ಟಾನ್ ಸ್ವಾಮಿ ಕೊನೆಯವರಾಗಿದ್ದರು.

ಈ ಪ್ರಕರಣದಲ್ಲಿ ನಡೆದಿರುವ ಉಲ್ಲಂಘನೆಗಳು ಹಲವಾರು. ಮಹಾರಾಷ್ಟ್ರದಲ್ಲಿ ಬಿಜೆಪಿಯೇತರ ಸರಕಾರ ಬಂದಾಗ ಈ ಕೇಸನ್ನು ರಾಜ್ಯ ಪೋಲೀಸ್‌ನಿಂದ ಎನ್‌.ಐ.ಎ.ಗೆ ವರ್ಗಾಯಿಸಲಾಯಿತು. ಆದರೆ ಇವುಗಳಲ್ಲಿ ಅತ್ಯಂತ ಕೋಲಾಹಲಕಾರಿ ಬೆಳವಣಿಗೆಯೆಂದರೆ ಆರೋಪಿಗಳ ಲ್ಯಾಪ್‌ ಟಾಪ್‌ಗಳನ್ನು ಬೇಧಿಸಿ ಅವರ ವಿರುದ್ಧ ಸುಳ್ಳು ಸಾಕ್ಷ್ಯಗಳನ್ನು ಸೃಷ್ಟಿಸಲಾಗಿದೆ ಎಂಬುದು. ಅಮೆರಿಕಾದ ಡಿಜಿಟಲ್ ಫೊರೆನ್ಸಿಕ್ ಸಂಸ್ಥೆ ಆರ್ಸೆನಲ್ ಕನ್ಸಲ್ಟಿಂಗ್‌ ನ ಇದುವರೆಗಿನ ಮೂರು ಪರೀಕ್ಷಣಾ ವರದಿಗಳು. ಇದನ್ನು ತೋರಿಸಿ ಕೊಟ್ಟಿವೆ. ಈ ಸಂಸ್ಥೆ ಮಾತ್ರವೇ ಅಲ್ಲ, ಇತರ ಸ್ವತಂತ್ರ ಸೈಬರ್ ಭದ್ರತಾ ಪರಿಣಿತರೂ ಕೂಡ ಇದು ಯಾರ ಮೇಲಾದರೂ ಸುಳ್ಳು ಸಾಕ್ಷ್ಯಗಳನ್ನು ಸೃಷ್ಟಿಸುವ ಅತ್ಯಂತ ಮೈನಡುಗಿಸುವ ಉದಾಹರಣೆಗಳಲ್ಲಿ ಒಂದು ಎಂದು ಕಂಡಿದ್ದಾರೆ.

ಈ ಎಲ್ಲ ಹೊಲಸು ಸಂಗತಿಗಳು ಎನ್‌.ಐ.ಎ. ಯ ಪಿತೂರಿಯ ಸಾರವನ್ನು ನಾಶಪಡಿಸುತ್ತವೆ ಮತ್ತು ಸಾಂಸ್ಥಿಕ ಕೊಲೆಯ ನಿಖರವಾದ ಆರೋಪವನ್ನು ಸಾಬೀತು ಮಾಡುತ್ತವೆ. ಸುಪ್ರಿಂ ಕೋರ್ಟಿನ ಒಬ್ಬ ಮಾಜಿ ನ್ಯಾಯಾಧೀಶ ಮದನ್ ಲೋಕುರ್ ಅವರು ಹೇಳಿರುವಂತೆ “ಸ್ಟಾನ್ ಸ್ವಾಮಿಯವರ ಮೇಲೆ ಆರೋಪವನ್ನು ರೂಪಿಸದೆಯೇ ಮತ್ತು ವಿಚಾರಣೆಯೇ ಇಲ್ಲದೆ ಮರಣದಂಡನೆಯನ್ನೇ ಹೇರಿದಂತಾಗಿದೆ”

ಭಿನ್ನಮತವನ್ನು ಅಪರಾಧವಾಗಿಸುವ ಹುನ್ನಾರ

ಭೀಮ ಕೊರೆಗಾಂವ್ ಪ್ರಕರಣ ಒಂದು ಅಪವಾದವಲ್ಲ, ಈ ದುರಂತ ಒಂದು ವ್ಯಾಪಕ ವಿಧಾನದ ಭಾಗವಾಗಿದೆ. ಅದೆಂದರೆ, ಯು.ಎ.ಪಿ.ಎ, ರಾಜದ್ರೋಹದ ಕಾಯ್ದೆ ಮತ್ತು ರಾಷ್ಟ್ರೀಯ ಭದ್ರತಾ ಕಾಯ್ದೆಗಳ ನಿರ್ದಿಷ್ಟ ಉಪಬಂಧಗಳನ್ನು ಬಳಸಿ ಭಿನ್ನಮತವನ್ನು ಅಪರಾಧವನ್ನಾಗಿ ಮಾಡುವ ವಿಧಾನ.

ಇವು, ನಿರ್ದಿಷ್ಟ ಅಪರಾಧಗಳಿಗಾಗಿ ತಂದ ಕಾಯ್ದೆಗಳು. ಉದಾಹರಣೆಗೆ, ಯು.ಎ.ಪಿ.ಎ. ಭಯೋತ್ಪಾದನೆ ಎಂದು ನಿರೂಪಿಸಿರುವ ಅಪರಾಧಗಳನ್ನು ಕುರಿತಾದ್ದು. ಆದರೆ ಇದನ್ನು ಅಸ್ಸಾಂ ನಲ್ಲಿ ಸಿ.ಎ.ಎ. ವಿರುದ್ಧ ಪ್ರತಿಭಟನೆ ನಡೆಸಿದ ಅಖಿಲ್ ಗೊಗೊಯ್ ವಿರುದ್ಧ ಬಳಸಲಾಯಿತು. ಅದೇ ರೀತಿಯಲ್ಲಿ ದಿಲ್ಲಿಯಲ್ಲಿ ವಿದ್ಯಾರ್ಥಿಗಳ ಭಿನ್ನಮತವನ್ನು ಕೋಮುವಾದಿ ಹಿಂಸಾಚಾರದೊಂದಿಗೆ ತಳುಕು ಹಾಕಲಾಯಿತು.

ಇದೆಲ್ಲ ನೇರವಾಗಿ ಕೇಂದ್ರ ಸರಕಾರದ , ಅಮಿತ್ ಷಾ ನೇತೃತ್ವದ ಗೃಹ ಮಂತ್ರಾಲಯದ ಉಸ್ತುವಾರಿಯಲ್ಲಿಯೇ ನಡೆಯುತ್ತಿದೆ, ಮತ್ತು ಅವರಿಗೂ ಇವು ಕೋರ್ಟಿನಲ್ಲಿ ನಿಲ್ಲುವುದಿಲ್ಲ ಎಂದೂ ಗೊತ್ತಿದೆ ಎಂಬುದು ಹೆಚ್ಚೆಚ್ಚು ಕಾಣಬರುತ್ತಿದೆ. ಆದರೂ, ಯಾವುದೇ ಕಾಲಮಿತಿಯಿಲ್ಲದೆ, ಯಾವುದೇ ವಿಚಾರಣೆಯಿಲ್ಲದೆ ಆರೋಪಿಗಳನ್ನು ಬಂಧಿಸಿಡಬಹುದು, ಅದೇ ಅವರಿಗೆ ಅಪರಾಧ ಸಾಬೀತಾಗದೆಯೇ ವಿಧಿಸುವ ಸೆರೆವಾಸವಾಗುತ್ತದೆ. ಇದು ಸಾಂವಿಧಾನಿಕ ನ್ಯಾಯವ್ಯವಸ್ಥೆಗೆ ವಿರುದ್ಧವಾದದ್ದು. ಇಂತಹ ಸನ್ನಿವೇಶದಲ್ಲಿ ಫಾದರ್ ಸ್ವಾಮಿಯವರ ಸಾಂಸ್ಥಿಕ ಕೊಲೆಯಂತದ್ದು ಇಂದಲ್ಲ ನಾಳೆ ನಡೆಯಲೇ ಬೇಕಾಗಿತ್ತು.

ಆಸಿಫ್, ದೇವಾಂಗನಾ ಮತ್ತು ನತಾಶಾ ರವರ ಜಾಮೀನು ಆದೇಶದಲ್ಲಿ ದಿಲ್ಲಿ ಹೈಕೋರ್ಟ್ “ನಮ್ಮ ದೇಶಗಳ ಬುನಾದಿಗಳು ಕಾಲೇಜು ವಿದ್ಯಾರ್ಥಿಗಳ ಒಂದು ಪಂಗಡ ಸಂಘಟಿಸುವ ಒಂದು ಪ್ರತಿಭಟನೆಯಿಂದೇನೂ ಅಲುಗಾಡುವುದಿಲ್ಲ” ಎಂದಿದೆ.

ಅಖಿಲ್ ಗೊಗೊಯ್‌ಗೆ ಜಾಮೀನು ಕೊಟ್ಟ ಗುವಾಹಾಟಿ ಹೈಕೋರ್ಟಿನ ಆದೇಶದಲ್ಲೂ ಇಂತಹುದೇ ಟಿಪ್ಪಣಿಯಿದೆ. ಈ ನಡುವೆ ಅಖಿಲ್ ಗೊಗೊಯ್ ಅಸ್ಸಾಂ ವಿಧಾನಸಭೆಗೆ ಆರಿಸಿ ಬಂದಿದ್ದಾರೆ ಎಂಬುದು ಬೇರೆ ಮಾತು.

ಕುಟಿಲತೆಯ ಕತೆ ಹೇಳುವ ಅಂಕಿ-ಅಂಶಗಳು

ಇವೆಲ್ಲ ಕೇವಲ ಒಂದೆರಡು ಹೊತ್ತಿ ಉರಿದುಹೊಗುವ ಕಿಡಿಗಳಲ್ಲ ಎಂಬುದೂ ಸುಸ್ಪಷ್ಟ. ಸರಕಾರ ರಾಜ್ಯಸಭೆಗೆ ತಿಳಿಸಿದ ರಾಷ್ಟ್ರೀಯ ಅಪರಾಧ ದಾಖಲೆಗಳ ಕಚೇರಿ(ಎನ್‌.ಸಿ.ಆರ್‌.ಬಿ) ಮಾಹಿತಿಗಳ ಪ್ರಕಾರ 2016-19ರ ನಡುವೆ ಯು.ಎ.ಪಿ.ಎ. ಅಡಿಯಲ್ಲಿ ದಾಖಲಾದ ಕೇಸುಗಳಲ್ಲಿ ಕೇವಲ 2.2ಶೇ. ಪ್ರಕರಣಗಳಲ್ಲಿ ಮಾತ್ರ ಆರೋಪಿಗಳಿಗೆ ಶಿಕ್ಷೆಯಾಗಿದೆ. 2016-19ರ ಅವಧಿಯಲ್ಲಿ 5922 ವ್ಯಕ್ತಿಗಳ ಯು.ಎ.ಪಿ.ಎ. ಅಡಿಯಲ್ಲಿ ಬಂಧಿಸಲಾಗಿದೆ, ಆದರೆ ಶಿಕ್ಷೆಗೆ ಗುರಿಯಾದವರು 132 ಮಾತ್ರ.

ರಾಜದ್ರೋಹದ ಕಾಯ್ದೆಯ ಅಡಿಯಲ್ಲೂ, 2019ರಲ್ಲಿ ಬಂಧಿಸಿದ 96 ವ್ಯಕ್ತಿಗಳಲ್ಲಿ ಇಬ್ಬರಿಗೆ ಮಾತ್ರ ಶಿಕ್ಷೆಯಾಗಿದೆ, 29 ಮಂದಿ ಖುಲಾಸೆಯಾಗಿದ್ದಾರೆ, 93 ಕೇಸುಗಳಲ್ಲಿ 40 ರಲ್ಲಿ ಮಾತ್ರ ಆರೋಪ ಪಟ್ಟಿ ಹಾಕಲಾಗಿದೆ.

ಲೋಕಸಭೆಯಲ್ಲಿ ಕೊಟ್ಟಿರುವ ಮಾಹಿತಿಗಳ ಪ್ರಕಾರ 2015ಕ್ಕೆ ಹೋಲಿಸಿದರೆ 2019ರಲ್ಲಿ ಯು.ಎ.ಪಿ.ಎ. ಅಡಿಯಲ್ಲಿ ಬಂಧನಗಳಲ್ಲಿ 72ಶೇ. ಏರಿಕೆಯಾಗಿದೆ.

ಈ ಎಲ್ಲ ಅಧಿಕೃತ ದತ್ತಾಂಶಗಳೇ ಕುಟಿಲತೆಯ ಕತೆಯನ್ನು ತೆರೆದಿಡುತ್ತಿವೆ. ಜಾಮೀನು ಕೊಡದಿರಲು ಕರಾಳ ಅಂಶಗಳನ್ನು ಬಳಸದಿದ್ದರೆ ದುಷ್ಟ ಸರ್ವಾಧಿಕಾರಶಾಹೀ ಆಕ್ರಮಣಗಳ ವಿರುದ್ಧ ರಾಜಕೀಯ ಭಿನ್ನಮತವನ್ನು ತಡೆದಿಡಲು ಸಾಧ್ಯವಿಲ್ಲ, ಟೀಕಾಕಾರರು ಜೈಲಿನಲ್ಲಿಯೆ ಕೊಳೆಯುವಂತೆ ಮಾಡಲು ಸಾಧ್ಯವಿಲ್ಲ.

ಅಂರ‍್ರಾಷ್ಟ್ರೀಯ ಮಾನವ ಹಕ್ಕುಗಳ ಸಂಸ್ಥೆಗಳಿಂದ ಕಟು ಟೀಕೆಗಳು ಬರುತ್ತಿವೆ. ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ರಕ್ಷಕರ ಬಗ್ಗೆ ವರದಿ ಮಾಡಲು ವಿಶೇಷವಾಗಿ ನೇಮಕವಾಗಿರುವ ಮೇರಿ ಲಾವ್ಲರ್ ಮತ್ತು ಯುರೋಪಿಯನ್ ಒಕ್ಕೂಟದ ಮಾನವ ಹಕ್ಕುಗಳ ವಿಶೇಷ ಪ್ರತಿನಿಧಿ ಈಮನ್ ಗಿಲ್ಮೋರ್ ಭೀಮ ಕೊರೆಗಾಂವ್ ಪ್ರಕರಣದಲ್ಲಿ ಯು.ಎ.ಪಿ.ಎ. ಯನ್ನು ಚಲಾಯಿಸುತ್ತಿರುವ ರೀತಿಯ ಬಗ್ಗೆ ಬಲವಾದ ಅಸಮ್ಮತಿಯನ್ನು ವ್ಯಕ್ತಪಡಿಸಿದ್ದಾರೆ. ಲಾವ್ಲರ್‌ರವರಂತೂ ಫಾದರ್ ಸ್ವಾಮಿಯನ್ನು ಸುಳ್ಳು ಆರೋಪಗಳ ಮೇಲೆ ಜೈಲಿಗೆ ಹಾಕಲಾಗಿದೆ ಎಂದೂ ಹೇಳಿದ್ದಾರೆ. ಆರ್ಸೆನಲ್ ವರದಿಗಳನ್ನು ಪರೋಕ್ಷವಾಗಿ ಆಧರಿಸುತ್ತ, ವಿಚಾರಣೆ ನಡೆಯುವವರೆಗೆ ಭೀಮ ಕೊರೆಗಾಂವ್ ಆರೋಪಿಗಳನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕು ಎಂಬ ಬೇಡಿಕೆಯನ್ನೂ ಎತ್ತಲಾಗುತ್ತಿದೆ.

ಈ ನಡುವೆ ಭಾರತದ ಸಂವಿಧಾನದಲ್ಲಿ ಪ್ರತಿಷ್ಠಾಪಿಸಿರುವ ಪ್ರಜಾಪ್ರಭುತ್ವ ಮತ್ತು ವೈಯಕ್ತಿಕ ಸ್ವಾತಂತ್ರ್ಯವನ್ನು ಕಾಪಾಡಿಕೊಳ್ಳ ಬಯಸುವ ಎಲ್ಲರೂ ಸಾಧ್ಯವಾದಷ್ಟು ವ್ಯಾಪಕ ಪ್ರಮಾಣದಲ್ಲಿ ಒಂದುಗೂಡಬೇಕು, ಮೋದಿ ಸರಕಾರದಿಂದ, ನಿರ್ದಿಷ್ಟವಾಗಿ ಗೃಹಮಂತ್ರಿ ಅಮಿತ್ ಷಾ ರವರಿದ ನಡೆಯುತ್ತಿರುವ ಪ್ರಹಾರಗಳನ್ನು ಹಿಮ್ಮೆಟ್ಟಿಸಲು ಒಂದಾಗಿ ನಿಲ್ಲಬೇಕು.
ಈ ದುರಂತ ಮತ್ತೆಂದೂ ಮರುಕಳಿಸಬಾರದು.

ಈ ಬಾರಿ ಬೇಕಾಗಿದ್ದಾರೆ ಜವಾಬುದಾರಿಕೆಗೆ – ವ್ಯಂಗ್ಯಚಿತ್ರ ಕೃಪೆ: ಮಂಜುಲ್

Donate Janashakthi Media

Leave a Reply

Your email address will not be published. Required fields are marked *