ಪಿಎಸ್‌ಐ ನೇಮಕಾತಿ ಅಕ್ರಮಕ್ಕೆ ಶಾಲೆ ಮುಖ್ಯ ಶಿಕ್ಷಕ ಕಾಶೀನಾಥ್‌ ಪ್ರಮುಖ ಪಾತ್ರ

ಕಲಬುರಗಿ: ಪಿಎಸ್‌ಐ ನೇಮಕಾತಿ ಪರೀಕ್ಷೆ ಸಂದರ್ಭದಲ್ಲಿ ನಡೆದ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಸಿಐಡಿ ಅಧಿಕಾರಿಗಳ ಮುಂದೆ ಹಲವು ಮಹತ್ವದ ಅಂಶಗಳನ್ನು ಬಾಯ್ಬಿಟ್ಟಿದ್ದಾರೆ

ಆರೋಪಿ ದಿವ್ಯಾ ಹಾಗರಗಿ ಜ್ಞಾನ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಸ್ಥೆ. ಇದೇ ಶಾಲೆಯಲ್ಲಿ ಅಕ್ರಮ ನಡೆದಿದೆ. ಪರೀಕ್ಷೆ ಅಕ್ರಮದಲ್ಲಿ ದೊಡ್ಡ ಮೊತ್ತದ ಹಣ ಪಡೆದಿರುವ ಬಗ್ಗೆ ದಿವ್ಯಾ ಹಾಗರಗಿ ಒಪ್ಪಿಕೊಂಡಿದ್ದಾರೆಂದು ತಿಳಿದುಬಂದಿದೆ.

ಎರಡು ತಂಡಗಳ ಮೂಲಕ ದೊಡ್ಡ ಮೊತ್ತದ ಹಣ ಪಡೆದಿರುವ ಬಗ್ಗೆ ದಿವ್ಯಾ ಬಾಯಿಬಿಟ್ಟಿದ್ದಾರೆ. ಆ ಎರಡು ತಂಡದ ರೂವಾರಿಗಳು ಯಾರೆಂದರೆ, ಆರ್.ಡಿ. ಪಾಟೀಲ್ ಮತ್ತು ಮಂಜುನಾಥ್. ಈ ಇಬ್ಬರು ವ್ಯಕ್ತಿಗಳಿಂದ ದಿವ್ಯಾ ಅವರಿಗೆ ದೊಡ್ಡ ಮಟ್ಟದ ಹಣ ಸಂದಾಯವಾಗಿದೆಯಂತೆ.

ಆರ್ ಡಿ ಪಾಟೀಲ್ ಮತ್ತು ಮಂಜುನಾಥ್ ಬಳಿಯಿಂದ ಜ್ಞಾನ ಜ್ಯೋತಿ ಆಂಗ್ಲ ಮಾಧ್ಯಮ‌ ಶಾಲೆಯ ಮುಖ್ಯ ಶಿಕ್ಷಕ ಕಾಶಿನಾಥ್ ಹಣ ಕೊಡಿಸಿದ್ದ. ದಿವ್ಯಾ ಹಾಗರಗಿ, ಆರ್.ಡಿ.ಪಾಟೀಲ್ ಹಾಗೂ ಮಂಜುನಾಥ್ ಮಧ್ಯೆ ಕಾಶೀನಾಥ್​ ಮಧ್ಯವರ್ತಿಯಾಗಿ ಕೆಲಸ ಮಾಡಿದ್ದ. ಈ ಕಾಶಿನಾಥ್ ಕೂಡ ಅಕ್ರಮದಲ್ಲಿ‌ ದೊಡ್ಡ ಮೊತ್ತದ ಹಣ ಪಡೆದಿರುವುದು‌ ಬೆಳಕಿಗೆ ಬಂದಿದೆ.

ಸದ್ಯ ಪ್ರಕರಣ ಬಯಲಾಗುತ್ತಿದ್ದಂತೆಯೇ ಕಾಶೀನಾಥ್​ ತೆಲೆ‌ಮರೆಸಿಕೊಂಡಡಿದ್ದಾನೆ. ಈ ಪ್ರಕರಣದ ಬಗ್ಗೆ ದಿವ್ಯಾ ಹಾಗರಗಿಯಿಂದ ಸಿಐಡಿ ಅಧಿಕಾರಿಗಳು ಇಂಚಿಂಚು ಮಾಹಿತಿಯನ್ನು ಪಡೆಯುತ್ತಿದ್ದಾರೆ. ಪರೀಕ್ಷೆಯಲ್ಲಿ ನಡೆದ ಅಕ್ರಮದ ಬಗ್ಗೆ ದಿವ್ಯಾ, ಒಂದೊಂದಾಗಿ ಮಾಹಿತಿ ನೀಡುತ್ತಿದ್ದಾರೆ. ಕಾಶೀನಾಥ್​ ಮಾತು ಕೇಳಿ ಅಕ್ರಮ ಎಸಗಿರುವುದಾಗಿ ದಿವ್ಯಾ ಬಾಯಿ ಬಿಟ್ಟಿದ್ದಾರೆ.

ಕಾಶೀನಾಥ್​ ಮುಖಾಂತರ ಅಕ್ರಮ ಎಸಗಲು ಇಂಜಿನಿಯರ್​ ಮಂಜುನಾಥ್​ ಸಿದ್ಧತೆಗಳನ್ನು ಮಾಡಿಕೊಂಡಿದ್ದನು. ಪರೀಕ್ಷೆಯಲ್ಲಿ ಓಎಂಆರ್ ಶೀಟ್ ತಿದ್ದುವ ಬಗ್ಗೆ ಕಾಶೀನಾಥ್​ ಹಾಗೂ ಮಂಜುನಾಥ್ ನಡುವೆ ಮಾತುಕತೆ ನಡೆದಿತ್ತು. ಇದಕ್ಕಾಗಿ ಕಾಶೀನಾಥ್ ದಿವ್ಯಾ ಜತೆ ಮಾತನಾಡಿ ಹಣಕಾಸಿನ ವ್ಯವಹಾರ ಕುದುರಿಸಿದ್ದರು. ದಿವ್ಯಾ ಹಾಗರಗಿ ಒಡೆತನದ ಜ್ಞಾನ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪರೀಕ್ಷೆ ಬರೆಯುವ ತನ್ನ ಅಭ್ಯರ್ಥಿಗಳಿಗೆ ಸಹಾಯ ಮಾಡುವಂತೆ ಕಾಶೀನಾಥ್ ಬಳಿ ಮಂಜುನಾಥ್​ ಕೇಳಿಕೊಂಡಿದ್ದ.

ಕಾಶೀನಾಥ ಹೇಳಿದಂತೆ ಪರೀಕ್ಷೆಯಲ್ಲಿ ಓಎಂಆರ್ ನಲ್ಲಿ ತಿದ್ದಲು ದಿವ್ಯಾ ಒಪ್ಪಿಗೆ ನೀಡಿದ್ದರು. ಇಡೀ ಕೇಂದ್ರವನ್ನು ಮೇಲ್ವಿಚಾರಣೆ ಮಾಡುತಿದ್ದ ಕಾಶೀನಾಥ್, ಅಭ್ಯರ್ಥಿಗಳು ಯಾವ ಯಾವ ರೂಮ್​ನಲ್ಲಿದ್ದಾರೆ, ಅಭ್ಯರ್ಥಿಗಳ ಹಾಲ್ ಟಿಕೆಟ್ ನಂಬರ್ ಏನಿದೆ ಅಂತ ಎಲ್ಲವೂ ತಿಳಿದುಕೊಂಡಿದ್ದನು. ಬಳಿಕ ಅಭ್ಯರ್ಥಿಗಳಿದ್ದ ರೂಮ್​ನಲ್ಲಿ ತಮಗೆ ಬೇಕಾದ ಶಿಕ್ಷಕಿಯರನ್ನು ಮೇಲ್ವಿಚಾರಕರಾಗಿ ಹಾಕುತ್ತಿದ್ದ.

ಮೇಲ್ವಿಚಾರಕಿಯರಿಗೆ ಅಭ್ಯರ್ಥಿಗಳ ಓಎಂಆರ್ ಶೀಟ್ ನಂಬರ್ ಹೇಳ್ತಿದ್ದ. ಪರೀಕ್ಷೆ ಬರೆದು ಪರಿಕ್ಷಾರ್ಥಿಗಳು ಹೊರಗೆ ಹೋದ ಬಳಿಕ ಕಾಶೀನಾಥ್​ ನೀಡಿದ ಉತ್ತರವನ್ನು ಓಎಂಆರ್​ನಲ್ಲಿ ಮೇಲ್ವಿಚಾರಕಿಯರು ತಿದ್ದುತ್ತಿದ್ದರು. ಇದಿಷ್ಟು ಮಾಹಿತಿಯನ್ನು ಸಿಐಡಿ ವಿಚಾರಣೆ ವೇಳೆ ದಿವ್ಯಾ ಹಾಗರಗಿ ಬಾಯ್ಬಿಟ್ಟಿದ್ದಾರೆ.

 

Donate Janashakthi Media

Leave a Reply

Your email address will not be published. Required fields are marked *