ಕರ್ನಾಟಕದಲ್ಲಿ ಎಸ್ಸಿ, ಎಸ್ಟಿ ವಿರುದ್ಧದ ಅಪರಾಧ ಶೇ. 54 ಏರಿಕೆ

ಬೆಂಗಳೂರು: ಕರ್ನಾಟಕದಲ್ಲಿ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ (ಎಸ್ ಸಿ / ಎಸ್ ಟಿ) ಸಮುದಾಯದ ಜನರ ಮೇಲೆ ಅಪರಾಧ ಪ್ರಮಾಣವು ತೀವ್ರ ಪ್ರಮಾಣದಲ್ಲಿ ಏರಿಕೆಯಾಗಿದೆ, ಏಪ್ರಿಲ್ 1, 2020 ರಿಂದ ಮಾರ್ಚ್ 31, 2021 ರವರೆಗೆ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ (ಎಸ್ ಸಿ / ಎಸ್ ಟಿ) ಸಮುದಾಯದ ಜನರ 2,327 ಕೊಲೆ, ಶೋಷಣೆ ಮತ್ತು ಇತರ ಪ್ರಕರಣಗಳು ದಾಖಲಾಗಿವೆ ಎಂದು ರಾಜ್ಯ ಸರ್ಕಾರದ ಅಂಕಿ ಅಂಶಗಳು ತಿಳಿಸಿವೆ.

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋದ ಅಂಕಿಅಂಶಗಳ ಪ್ರಕಾರ, ಈ ವರ್ಷ 1,504 ಪ್ರಕರಣಗಳು ದಾಖಲಾಗಿವೆ. ಈ ಮೂಲಕ ಹಿಂದಿನ ವರ್ಷಕ್ಕಿಂತ ಶೇ. 54 ಕ್ಕಿಂತ ಅಧಿಕವಾಗಿದೆ. ಎಸ್ ಸಿ / ಎಸ್ ಟಿ ಸಮುದಾಯದ ಸದಸ್ಯರ ವಿರುದ್ಧ ಕೊಲೆ, ಶೋಷಣೆ, ಹಾಗೂ ಬೆಂಕಿ ಹಾಕಿರುವುದು ಸೇರಿದಂತೆ ಇತರ ಅಪರಾಧಗಳು ಇದರಲ್ಲಿ ಒಳಗೊಂಡಿದೆ.

ಕಳೆದ 10 ದಿನಗಳಲ್ಲಿ ಕರ್ನಾಟಕದಲ್ಲಿ ಕನಿಷ್ಟ ಎರಡು ಮರ್ಯಾದಾ ಹತ್ಯೆಗಳನ್ನು ವರದಿಯಾಗಿದೆ. ಇನ್ನು ಜಾತಿ ಹೆಸರು ಕರೆದು ನಿಂದಿಸುವುದು, ಸೇವೆ ನಿರಾಕರಿಸುವುದು ಹಾಗೂ ವಾಗ್ದಾಳಿ ನಡೆಸುವಂತಹ ಹಲವಾರು ಪ್ರಕರಣಗಳ ವಿರುದ್ದ ಇನ್ನೂ ದೂರು ದಾಖಲಾಗಿಲ್ಲ ಎಂದು ಹೇಳಲಾಗಿದೆ. ಈ ಪ್ರಕರಣಗಳೂ ಸೇರಿದರೆ ಶೇ.60ಕ್ಕೂ ಹೆಚ್ಚಾಗಲಿದೆ.

ಜೂನ್ 24 ರ ವರದಿ ಪ್ರಕಾರ, ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ತಾಲೂಕಿನ ಸಲಾಡಹಳ್ಳಿ ಗ್ರಾಮದಲ್ಲಿ ಮರ್ಯಾದಾ ಹತ್ಯೆ ಪ್ರಕರಣ ವರದಿಯಾಗಿದೆ. ಪರಸ್ಪರ ಪ್ರೀತಿಸಿದ ದಲಿತ ಸಮುದಾಯಕ್ಕೆ ಸೇರಿದ ಯುವಕ ಮತ್ತು ಮುಸ್ಲಿಂ ಯುವತಿಯನ್ನು ಆಕೆ ಕುಟುಂಬದವರು ಮತ್ತು ಇತರರು ಬಂಡೆಗಳಿಂದ ತಲೆಯನ್ನು ಜಜ್ಜಿ  ಕೊಂದು ಹಾಕಿದ್ದಾರೆ. ಇನ್ನೊಂದು ಪ್ರಕರಣದಲ್ಲಿ ಕೊಪ್ಪಳ ಜಿಲ್ಲೆಯ ಬರಗೂರು ಗ್ರಾಮದಲ್ಲಿ ಪ್ರೇಮ ಸಂಬಂಧ ಹೊಂದಿದ್ದ ಕಾರಣಕ್ಕೆ ಮಾದಿಗ ಸಮುದಾಯದ ಯುವಕ ಮತ್ತು ಕುರುಬ ಸಮುದಾಯದ ಯುವತಿಯನ್ನು  ಆಕೆಯ  ಕುಟುಂಬಸ್ಥರು ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ಸಮುದಾಯದ ವಿರುದ್ದ ನಡೆದ 2,327 ಅಪರಾಧ ಪ್ರಕರಣಗಳ ಪೈಕಿ, 87 ಕೊಲೆಗಳು, 216 ಶೋಷಣೆ ಪ್ರಕರಣಗಳು, 2,024 ಇತರ ನಿಂದನೆ ಮೊದಲಾದ ಪ್ರಕರಣಗಳು ಹಾಗೂ 3 ಬೆಂಕಿ ಹಾಕಿದ ಪ್ರಕರಣಗಳು ಆಗಿದೆ ಎಂದು ಸರ್ಕಾರದ ಅಂಕಿ ಅಂಶಗಳು ತಿಳಿಸಿವೆ.

ಇನ್ನು ಈ ಅಪರಾಧಗಳಿಗೆ ಪರಿಹಾರವಾಗಿ ಸರ್ಕಾರ ಇದುವರೆಗೆ 4 284 ಕೋಟಿಗಳನ್ನು ನಿಗದಿಪಡಿಸಿದೆ. 2019 ರಲ್ಲಿ ಎಸ್ ಸಿ / ಎಸ್ ಟಿ ಸಮುದಾಯಗಳ ವಿರುದ್ಧ ನಡೆದ ಅಪರಾಧ ಮತ್ತು ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟ 2,775 ಜನರಲ್ಲಿ ಮತ್ತು 2,945 ಆರೋಪಪಟ್ಟಿಗಳಲ್ಲಿ ಕೇವಲ 50 ಮಂದಿ ಮಾತ್ರ ಶಿಕ್ಷೆಗೊಳಗಾದರು ಮತ್ತು 1,513 ಜನರನ್ನು ಖುಲಾಸೆಗೊಳಿಸಲಾಗಿದೆ ಎಂದು ಈ ಸರ್ಕಾರದ ಅಂಕಿ ಅಂಶಗಳು ತೋರಿಸಿದೆ. ದೇಶದಲ್ಲಿ ಅದೆಷ್ಟೋ ಅಭಿವೃದ್ದಿಗಳಾಗಿದ್ದರೂ ಎಸ್ -ಎಸ್ ಟಿ ಸಮುದಾಯದ ವಿರುದ್ದದ ದೌರ್ಜನ್ಯ ನಿಂತಿಲ್ಲ.

ಪ್ರತಿದಿನ ಇಂತಹ ಜಾತಿ ಆಧಾರಿತ ದೌರ್ಜನ್ಯ ಪ್ರಕರಣಗಳು ವರದಿಯಾಗುತ್ತಲಿದೆ. ದಂಪತಿಗಳ ನಡುವಿನ ವೈವಾಹಿಕ ಭಿನ್ನಾಭಿಪ್ರಾಯಕ್ಕೆ ಯುವಕನೋರ್ವ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕು ಗೋಣಿಬೀಡಿನ ಪೊಲೀಸರಿಂದ  ಬಂಧನಕ್ಕೆ ಒಳಗಾಗಿದ್ದ ಎಸ್ -ಎಸ್ ಟಿ ಸಮುದಾಯದ ಯುವಕನ ವಿರುದ್ದ ಪೊಲೀಸರು ತೀವ್ರ ದೌರ್ಜನ್ಯ ನಡೆಸಿದ್ದರು. ಯುವಕನು ಪೊಲೀಸರಲ್ಲಿ ನೀರು ಕೇಳಿದಾಗ ಇನ್ನೋರ್ವ ವ್ಯಕ್ತಿಯ ಬಳಿ ಮೂತ್ರ ವಿಸರ್ಜಿಸಲು ಹೇಳಿ ಅದನ್ನು ನೆಕ್ಕುವಂತೆ ಯುವಕನಿಗೆ ಒತ್ತಾಯ ಮಾಡಲಾಗಿದೆ. ಈ ಹಿನ್ನೆಲೆ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಅರ್ಜುನ್ ಗೌಡಗೆ ಚಿಕ್ಕಮಗಳೂರು ಜಿಲ್ಲೆಯ ಸ್ಥಳೀಯ ನ್ಯಾಯಾಲಯವು ಜಾಮೀನು ನಿರಾಕರಿಸಿ, ಇದು ಘೋರ ಕೃತ್ಯ ಎಂದು ಹೇಳಿದೆ.

ದಲಿತ ಹಕ್ಕುಗಳ ಸಮಿತಿ ರಾಜ್ಯ ಸಂಚಾಲಕ ಗೋಪಾಲಕೃಷ್ಣ ಹರಳಹಳ್ಳಿ ಹೇಳುವಂತೆ, ದೌರ್ಜನ್ಯಗಳು ನಡೆಯುತ್ತಿವೆ ಮತ್ತು ವರದಿಯಾಗಿದೆ. ದಾಖಲಾದ ಪ್ರತಿಯೊಂದು ದೌರ್ಜನ್ಯವನ್ನು ನೋಡಿದಾಗ ಅದು ಸಾಮಾನ್ಯವಾದ ಮತ್ತು ವಾಡಿಕೆಯಂತೆ ಮಾಡಲಾದ ಇತರ ದೌರ್ಜನ್ಯಗಳಾಗಿ ಬಿಟ್ಟಿದೆ ಎಂಬುದನ್ನು ನಾವು ನೆನಪಿನಲ್ಲಿಡಬೇಕು. ತಂತ್ರಜ್ಞಾನ, ಸ್ಟಾರ್ಟ್ಅಪ್, ಏರೋಸ್ಪೇಸ್ ಮತ್ತು ಇತರ ಕ್ಷೇತ್ರಗಳಲ್ಲಿನ ಕರ್ನಾಟಕವು ತನ್ನದೇ ಆದ ಛಾಪು ಮೂಡಿಸಿದ್ದರೂ ರಾಜ್ಯದ ಗ್ರಾಮೀಣ ಭೂ ಪ್ರದೇಶದಲ್ಲಿ ಇಂತಹ ಪ್ರಕರಣಗಳು ಮಾನವ ಸಮುದಾಯಕ್ಕೆ ಕಪ್ಪುಚುಕ್ಕೆಯಾಗಿದೆ. ನೋಂದಾಯಿತ ಪ್ರಕರಣಗಳ ಸಂಖ್ಯೆ ಕಡಿಮೆ ಇದ್ದರೂ, ಇನ್ನೂ ಅದೆಷ್ಟೋ ಪ್ರಕರಣಗಳು ದಾಖಲಾಗಿಲ್ಲಎನ್ನುತ್ತಾರೆ.

ಹಾಸನ ಜಿಲ್ಲೆಯ ದಲಿತ ಹಕ್ಕುಗಳ ಕಾರ್ಯಕರ್ತ ಪೃಥ್ವಿ, ದಲಿತ ಸಮುದಾಯದ ಸದಸ್ಯರು ಹೋಟೆಲ್ ಗಳು, ದೇವಾಲಯಗಳು ಮತ್ತು ಹಳ್ಳಿಗಳ ಒಳಗೆ ಪ್ರವೇಶಿಸಲು ನಿರಾಕರಿಸಿದ ಅದೇಷ್ಟೋ ಉದಾಹರಣೆಗಳು ನಮ್ಮ ಕಣ್ಣ ಮುಂದಿದೆ. ಕಳೆದ ವಾರ ಇಬ್ಬರು ಹುಡುಗರು ಚಹಾ ಕುಡಿಯಲು ಹೋಟೆಲ್ ಗೆ ಪ್ರವೇಶಿಸಿದ್ದಕ್ಕೆ ಮೇಲ್ವರ್ಗದವರು ಎಂದು ಕರೆಯಲ್ಪಡುವ ಜನರು ಜಗಳವಾಡಿದರು. ಯುವಕರ ಮೋಟಾರು ಬೈಕಿನಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಸ್ಟಿಕ್ಕರ್ ಇತ್ತು ಎಂಬ ಕಾರಣಕ್ಕೆ ನಮ್ಮ ಸಮುದಾಯದ ಹುಡುಗ ಮತ್ತು ಬೇರೆ ಸಮುದಾಯಕ್ಕೆ ಸೇರಿದ ಆತನ ಸ್ನೇಹಿತನನ್ನು ಹೊರ ದೂಡಿದರು ಎಂದು ಪೃಥ್ವಿ ತಿಳಿಸಿದ್ದಾರೆ.

ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮಾಜಿ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ, ದೌರ್ಜನ್ಯದ ಬಗ್ಗೆ ಜನರಿಗೆ ತಿಳಿದಿಲ್ಲ ಎಂದಲ್ಲ. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ದಲಿತರು ಪೊಲೀಸ್ ಠಾಣೆಗೆ ಬರುತ್ತಿದ್ದಾರೆ. ಎಲ್ಲಾ ರೀತಿಯ ಸಾಮಾಜಿಕ ಅಶಾಂತಿ ಪ್ರಕರಣ ಹೆಚ್ಚಳವಾಗಿದೆ. ವಲಸೆ ಬಂದವರು ಆರ್ಥಿಕವಾಗಿ ಹಿಂದುಳಿದ ಜನರು ಮತ್ತು ಇದು ಹೆಚ್ಚಾಗಿ ಎಸ್ ಸಿ / ಎಸ್ ಟಿ, ಅಲ್ಪಸಂಖ್ಯಾತರು ಮತ್ತು ಇತರ ಸಮುದಾಯಗಳ ಸದಸ್ಯರು ಆಗಿದ್ದಾರೆ ಎಂದು ಹೇಳಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *