ಕರ್ನಾಟಕದ ಆತ್ಮಕ್ಕೆ ಕಂಟಕಪ್ರಾಯವಾದ ಪಠ್ಯಪುಸ್ತಕಗಳು

ಪ್ರೊ.ಜಿ.ಎನ್.ದೇವಿ
(ಅನುವಾದ : ಡಾ.ಎಂ.ಜಿ.ಹೆಗಡೆ, ಕೃಪೆ : ಡೆಕ್ಕನ್ ಹೆರಾಲ್ಡ್)

ಕರ್ನಾಟಕದ ಮಧ್ಯಕಾಲವನ್ನು ಕುರಿತ ಅತ್ಯುತ್ತಮ ಪಾಂಡಿತ್ಯವು ಹಳೆಯ ಪಠ್ಯಗಳ ಯಾಂತ್ರಿಕ ಅಳವಡಿಕೆಗೂ ವಿಸ್ತರಣೆಗೂ ಮನಸ್ಸು ಮಾಡದೆ ಅವುಗಳ ಬುಡಮೇಲಾಗಿಸುವ ಸೃಷ್ಟಿಶೀಲವಾದ ಮರುವ್ಯಾಖ್ಯಾನಗಳಿಗೆ ಮೀಸಲಾಗಿದೆ. ಕರ್ನಾಟಕದಲ್ಲಿ ಕಲಿಕೆಯ ಆತ್ಮವೇ ಆದ ಈ ಚಾರಿತ್ರಿಕ ವಾಸ್ತವವನ್ನೂ, ಡಾ.ಬಿ.ಆರ್‌ ಅಂಬೇಡ್ಕರ್‌ರವರು ಸಂವಿಧಾನದಲ್ಲಿ ಅಳವಡಿಸಿರುವ ಎಲ್ಲರನ್ನು ಒಳಗೊಳ್ಳುವ ತತ್ವವನ್ನೂ ರೋಹಿತ್‌ ಚಕ್ರತೀರ್ಥ ಸಮಿತಿಯು ಬದಿಗಿಟ್ಟಂತೆ ತೋರುತ್ತದೆ.

ಹೊಚ್ಚಹೊಸ ಪಠ್ಯಪುಸ್ತಕದ ಪುಟಗಳಿಂದ ಹೊಮ್ಮುವ ಅಚ್ಚಿನ ಶಾಯಿಯ ಹಿತವಾದ ಕಂಪು ಉದ್ದೀಪಕವಾದುದು. ನಮ್ಮ ಶಾಲಾ ದಿನಗಳ ಅವಿಸ್ಮರಣೀಯ ಭಾಗವದು. ಆದರೆ ಈಗ ಪುಸ್ತಕಗಳು ಮಕ್ಕಳ ಕೈಸೇರುವ ಮೊದಲೇ ಗಂಭೀರವಾದ ವಿವಾದವು ಭುಗಿಲೆದ್ದಿದೆ. ಕೇವಲ ರಾಜಕೀಯ ವಾಗಾಡಂಬರವೆಂದು ಅದನ್ನು ತಳ್ಳಿಹಾಕುವಂತಿಲ್ಲ. ಅದರಲ್ಲಿ ಕಾಣಿಸಿಕೊಂಡ ವಾದಗಳು ಪ್ರತಿಯೊಬ್ಬ ಪೌರನೂ ಗಮನಿಸಬೇಕಾದವು. ಬಹುಶಃ ಈ ಚರ್ಚೆಯ ಬಹುಮುಖ್ಯ ಎಳೆಯು ಆಧುನಿಕ ಕರ್ನಾಟಕದ ನಿರ್ಮಾಣಕ್ಕೆ ಸಂಬಂಧಿಸಿದೆ.

ಕೋವಿಡ್‌ ಸಾಂಕ್ರಾಮಿಕ ರೋಗದಿಂದಾಗಿ ತೀವ್ರ ವ್ಯತ್ಯಯಗೊಂಡಿದ್ದ ಕರ್ನಾಟಕದ ಶಾಲೆಗಳ ದಿನನಿತ್ಯದ ಕೆಲಸಗಳು ಈಗಷ್ಟೇ ಪುನರಾರಂಭಗೊಂಡಿವೆ. ಬಾಕಿ ಇದ್ದ ಪರೀಕ್ಷೆಗಳು ಮುಗಿದು ಫಲಿತಾಂಶಗಳು ಹೊರಬಿದ್ದು ಹೊಸ ಶೈಕ್ಷಣಿಕ ವರ್ಷ ಆರಂಭವಾಗುತ್ತಿದ್ದಂತೆ ಒಂದು ಕೋಟಿಗೂ ಹೆಚ್ಚು ಮಕ್ಕಳು ಮತ್ತು ಹದಿಹರೆಯದವರು ಎಪ್ಪತ್ತೇಳು ಸಾವಿರ ಶಾಲೆಗಳಿಗೆ ಮರಳಿದ್ದಾರೆ.

ʻʻಎರ‍್ಲೊ ಬಿನ್‌ ನಾರಾಯಣʼʼ ಎಂಬ ಹೆಸರು ಸರಕಾರದ ಗಮನವನ್ನು ಸೆಳೆಯಲಿಕ್ಕಿಲ್ಲ. ಅದರೆ ಅದು ಸೆಳೆಯಬೇಕು. ಎರ‍್ಲೊ ಧಾರವಾಡ ಜಿಲ್ಲೆಯ (ಈಗ ಪರಿಶಿಷ್ಠ ಜಾತಿ ಎಂದಾಗಿರುವ) ಮಹಾರ ಸಮುದಾಯಕ್ಕೆ ಸೇರಿದ ಹುಡುಗ. 1856ರಲ್ಲಿ ಅವನಿಗೆ ಶಾಲಾ ಪ್ರವೇಶವನ್ನು ನಿರಾಕರಿಸಲಾಗಿತ್ತು. ಆತ ಬಾಂಬೆಯ ಗವರ್ನರ್‌ ಮೌಂಟ್‌ ಸ್ಟುವರ್ಟ್‌ ಎಲ್ಫಿನ್‌ ಸ್ಟೋನ್‌ ರಿಗೆ ದೂರು ನೀಡಿದ್ದ.

ಗವರ್ನರ್‌ ಕಛೇರಿ ಮತ್ತು ಲಂಡನ್ನಿನ ಶಿಕ್ಷಣ ಕಾರ್ಯದರ್ಶಿ ಇವರ ನಡುವೆ ನಡೆದ ಮೂರು ವರ್ಷಗಳ ಪತ್ರ ವ್ಯವಹಾರದ ನಂತರ ಎರ‍್ಲೊಗೆ ಪ್ರವೇಶ ನೀಡಬೇಕೆಂದಾಯಿತು. ಆದರೆ ಅಷ್ಟರಲ್ಲಿ ಎರ‍್ಲೊ ಮಾಯಾವಾಗಿ ಬಿಟ್ಟಿದ್ದ. ಏಳು ದಶಕಗಳ ನಂತರ ಡಾ. ಬಿ.ಆರ್.‌ ಅಂಬೇಡ್ಕರ್‌ರಿಗೆ ಬಾಂಬೆ ಸರಕಾರದ ಕಡತದಲ್ಲಿ ಇವನ ಪತ್ರ ದೊರಕಿತು. ಎರ‍್ಲೊ ಕುಟುಂಬವನ್ನು ಹುಡುಕಿಕೊಂಡು ಅವರು ಮಾಡಿದ ಧಾರವಾಡ ಪ್ರಯಾಣವು ಫಲಪ್ರದವಾಗಲಿಲ್ಲ. ಆದರೆ ಶಿಕ್ಷಣವನ್ನು ಪಡೆಯಲೇಬೇಕೆಂದು ಆ ಹುಡುಗ ಮಾಡಿದ ಹೋರಾಟವು ಮಾತ್ರ ಅಂಬೇಡ್ಕರರ ಮನಸ್ಸಿನಲ್ಲಿ ಶಾಶ್ವತವಾಗಿ ಸ್ಥಾನ ಪಡೆಯಿತು.

ಶಿಕ್ಷಣವನ್ನು ಸಮವರ್ತಿ ಪಟ್ಟಿಯಲ್ಲಿ ಇರಿಸಿ ಶಾಲಾ ಶಿಕ್ಷಣದ ಹೊಣೆಯನ್ನು ಪ್ರಧಾನವಾಗಿ ರಾಜ್ಯಗಳಿಗೂ ಉನ್ನತ ಶಿಕ್ಷಣದ ಹೊಣೆಯನ್ನು ಮುಖ್ಯವಾಗಿ ಕೇಂದ್ರ ಸರಕಾರಕ್ಕೂ ವಹಿಸಿಕೊಟ್ಟಿರುವುದು ಶಿಕ್ಷಣಾವಕಾಶವು ಯಾರಿಗೂ ನಿರಾಕೃತವಾಗುತ್ತಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳಲು. ಎರ‍್ಲೊನ ಕಾಲದಿಂಚೀಚೆ ಕರ್ನಾಟಕವು ತುಂಬ ದೂರ ಮುಂದೆ ಸಾಗಿ ಬಂದಿದೆ.

ಪ್ರತಿಗಾಮಿ ಪಯಣ

ಅದರೆ ಪಠ್ಯಪುಸ್ತಕ ಪರಿಷ್ಕರಣೆಯನ್ನು ಸುತ್ತುವರಿದಿರುವ ವಿವಾದವು ರಾಜ್ಯವೀಗ ಪ್ರತಿಗಾಮಿ ಪಯಣವನ್ನು ಆರಂಭಿಸಿದೆ ಎಂಬುದರ ಸೂಚಕವಾಗಿದೆ.

ಈ ಪಯಣವು ಯಾಕೆ ವಿರುದ್ಧ ದಿಶೆಯಲ್ಲಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಪಠ್ಯಪುಸ್ತಕಗಳ ಕಲ್ಪನೆಯ ವಿಕಾಸವನ್ನು ನೋಡುವುದು ಅವಶ್ಯಕ. ‘ಟೆಕ್ಸ್ಟ್‌’ ಅಥವಾ ʻಪಠ್ಯʼವು ಲ್ಯಾಟಿನ್‌ನ ʻಟೆಕ್ಸ್‌ಟೈಲ್‌ʼ ಮತ್ತು ʻಟೆಕ್ಸ್‌ಚರ್‌ʼ ಗಳಿಂದ ಪಡೆದುಕೊಂಡ ಒಂದು ಪದ. ʻಒಟ್ಟಿಗೆ ನೇಯ್ದಿರುವʼ ಸ್ಥಿತಿಯನ್ನು ಸೂಚಿಸಲು ಬಳಕೆಯಾಗುತ್ತಿದ್ದ ಪದವದು.

ಪಠ್ಯಪುಸ್ತಕಗಳಿಗೆ-ಅದು ಪಾಣಿನಿಯ ʻಸೂತ್ರಪಥʼವಿರಲಿ ಅಥವಾ ಪ್ರಾಚೀನ ರೋಮನ್‌ ʻಟೆಕ್ಸ್‌ಟಮ್‌ʼ ಅಗಿರಲಿ, ಅಮೆರಿಕಾದ ಶುರವಾತಿನ ʻದಿ ನ್ಯೂ ಇಂಗ್ಲೆಂಡ್‌ ಪ್ರೈಮರ್‌ʼ ಅಗಿರಲಿ, ಅಥವಾ ಧರ್ಮಪಾಲರು ವಸಾಹತುಪೂರ್ವ ಶಿಕ್ಷಣವನ್ನು ಕುರಿತ ತಮ್ಮ ಕೃತಿಯಲ್ಲಿ ಚರ್ಚಿಸುವ ವಸಾಹತುಶಾಹಿ ಪಠ್ಯಪುಸ್ತಕಗಳಿರಲಿ-ಎಲ್ಲವಕ್ಕೂ ಸಾಮಾನ್ಯ ಉದ್ದೇಶವೊಂದಿರುತ್ತದೆ. ಅದೆಂದರೆ ಪ್ರಬಲ ರಾಷ್ಟ್ರೀಯ ಅಥವಾ ಸಾಂಸ್ಕೃತಿಕ ಕಥನದೊಳಗೆ ಮಕ್ಕಳ ಮನಸ್ಸುಗಳನ್ನು ಒಟ್ಟಾಗಿ ಹೆಣೆಯುವುದು.

ಎಲ್ಲಾ ಪಠ್ಯಗಳೂ ಒಳ್ಳೆಯ ಮತ್ತು ಕೆಟ್ಟ ಕಾಲಗಳೆರಡರಲ್ಲೂ ಇದೇ ತತ್ತ್ವವನ್ನು ಆಧರಿಸಿರುತ್ತವೆ. ಹೀಗಾಗಿಯೇ ಮಹಾತ್ಮಾ ಗಾಂಧಿಯವರು 1937ರಲ್ಲೇ ʻʻಪಠ್ಯಪುಸ್ತಕಗಳಷ್ಟನ್ನೇ ಜ್ಞಾನವಾಹಕವನ್ನಾಗಿ ಬಳಸುವುದಾದರೆ ಶಿಕ್ಷಣದಲ್ಲಿ ಶಿಕ್ಷಕರ ಮನಸ್ಸಿನ ಜೀವಂತ ಉಪಸ್ಥಿತಿಗೆ ಜಾಗವೇ ಇರುವುದಿಲ್ಲʼʼ ಎಂದು ಬರೆದಿದ್ದರು.

ಪಠ್ಯದ ಸಾಂಸ್ಕೃತಿಕ ಸಂದರ್ಭ

ಬಸವಣ್ಣನ ನಂತರದ ಸುಮಾರು ಒಂದು ಸಾವಿರ ವರ್ಷಗಳ ಕಾಲ ಕರ್ನಾಟಕವು ʼಶಿಕ್ಷಕರ ಮನಸ್ಸಿನ ಜೀವಂತ ಉಪಸ್ಥಿತಿ,ʼ ಮತ್ತು ಪ್ರಬಲ ರಾಷ್ಟ್ರೀಯ ಕಥನಗಳ ನಡುವಿನ ಉಜ್ವಲ ತತ್ವಜಿಜ್ಞಾಸೆಯ ಮೂಲಕ ತನ್ನ ಆಸ್ಮಿತೆಯನ್ನು ರೂಪಿಸಿಕೊಂಡಿತು. ಕರ್ನಾಟಕವನ್ನು ನಿರ್ವಚಿಸುವುದು ಇವರೆಡರ ನಡುವಿನ ಕರ್ಷಣದ ಶ್ರೀಮಂತ ಚರಿತ್ರೆಯೇ.

ಕರ್ನಾಟಕದ ಮಧ್ಯಕಾಲವನ್ನು ಕುರಿತ ಅತ್ಯುತ್ತಮ ಪಾಂಡಿತ್ಯವು ಹಳೆಯ ಪಠ್ಯಗಳ ಯಾಂತ್ರಿಕ ಅಳವಡಿಕೆಗೂ ವಿಸ್ತರಣೆಗೂ ಮನಸ್ಸು ಮಾಡದೆ ಅವುಗಳ ಬುಡಮೇಲಾಗಿಸುವ ಸೃಷ್ಟಿಶೀಲವಾದ ಮರುವ್ಯಾಖ್ಯಾನಗಳಿಗೆ ಮೀಸಲಾಗಿದೆ. ಕರ್ನಾಟಕದಲ್ಲಿ ಕಲಿಕೆಯ ಆತ್ಮವೇ ಆದ ಈ ಚಾರಿತ್ರಿಕ ವಾಸ್ತವವನ್ನೂ, ಡಾ.ಬಿ.ಆರ್‌ ಅಂಬೇಡ್ಕರ್‌ರವರು ಸಂವಿಧಾನದಲ್ಲಿ ಅಳವಡಿಸಿರುವ ಎಲ್ಲರನ್ನೂ ಒಳಗೊಳ್ಳುವ ತತ್ವವನ್ನೂ ರೋಹಿತ್‌ ಚಕ್ರತೀರ್ಥ ಸಮಿತಿಯು ಬದಿಗಿಟ್ಟಂತೆ ತೋರುತ್ತದೆ.

ಸ್ವಲ್ಪ ಮಟ್ಟಿಗೆ ಇದೇ ಬಗೆಯ ಪಠ್ಯ ಪುಸ್ತಕದ ವಿವಾದವೊಂದು 2017ರಲ್ಲಿ ಯುರೋಪ್‌ನಲ್ಲಿ ಎದ್ದಿತ್ತು. ಜರ್ಮನಿಯ ಪಠ್ಯಪುಸ್ತಕಗಳು ಮಾರ್ಟಿನ್‌ ಶುಲ್ಝ್ ರ ʼ2025ರಷ್ಟರಲ್ಲಿ ಯುನೈಟೆಡ್‌ ಸ್ಟೇಟ್‌ ಆಫ್‌ ಯುರೋಪ್‌ ʼ ಅಸ್ತಿತ್ವಕ್ಕೆ ಬರಬೇಕೆಂಬ ವಿಸ್ತರಣಾವಾದಿ ಕಲ್ಪನೆಯನ್ನು ಇನ್ನೂ ಉತ್ತೇಜಿಸುತ್ತಿದ್ದಾಗ ಬ್ರಿಟನ್‌ ಯುರೋಪಿಯನ್‌ ಒಕ್ಕೂಟದಿಂದ ನಿರ್ಗಮಿಸಿತು. ಈ ಬ್ರೆಕ್ಸಿಟ್ (ಬ್ರಿಟನ್‌ +ಎಕ್ಸಿಟ್=ಬ್ರಿಟನ್‌ ನಿರ್ಗಮನ) ಹಿನ್ನೆಲೆಯಲ್ಲಿ ಬ್ರಿಟಿಷ್‌ ಪಠ್ಯಪುಸ್ತಕಗಳು ಏಕೀಕೃತ ಯುರೋಪ್‌ನ ಹೆಚ್ಚು ವಿಮರ್ಶಾತ್ಮಕ ಚರ್ಚೆಗೆ ಎಡೆ ಮಾಡಿಕೊಟ್ಟವು. ಈ ಎರಡು ದೇಶಗಳಲ್ಲಿನ ಶಿಕ್ಷಣ ತಜ್ಞರ ಉದ್ದೇಶವು ಯುವ ಕಲಿಕಾರ್ಥಿಗಳನ್ನು ಅವರವರ ರಾಷ್ಟ್ರೀಯ ಸಿದ್ಧಾಂತಗಳ ನಿಯಂತ್ರಣಕ್ಕೆ ಒಳಪಡಿಸುವುದಾಗಿತ್ತು.

ಹೆಡೆಯೆತ್ತಿದ ಪ್ರಶ್ನೆಗಳು

ಪಠ್ಯಪುಸ್ತಕ ಪರಿಷ್ಕರಣೆ ವಿರುದ್ಧದ ಪ್ರತಿಭಟನೆಗಳು ನಿರರ್ಥಕವಲ್ಲ. ಹೊರಬೀಳಲು ಸಿದ್ಧವಾಗಿರುವ ಹೊಸ ಪಠ್ಯಗಳನ್ನು ವಿರೋಧಿಸುತ್ತಿರುವ ಕನ್ನಡ ಲೇಖಕರು ಸೂಕ್ತ ಪ್ರಶ್ನೆಗಳನ್ನೇ ಎತ್ತುತ್ತಿದ್ದಾರೆ: ಯಾವುದು ಕರ್ನಾಟಕದ ನಿರೂಪಣೆ? ಕರ್ನಾಟಕದ ಆತ್ಮವನ್ನೂ ಇರವನ್ನೂ ಯುವ ಕಲಿಕಾರ್ಥಿಗಳ ಮನಸ್ಸಿನಲ್ಲಿ ಹೆಣೆಯುವುದಾದರೆ ಪಠ್ಯಪುಸ್ತಕಗಳು ಏನೆಲ್ಲವನ್ನು ಒಳಗೊಂಡಿರಬೇಕು? ಯಾವ ಬಗೆಯ ಪಠ್ಯಗಳು ಅವರನ್ನು ‘ರಾಜ್ಯ ಒಕ್ಕೂಟ’ವೆಂದು ಸಂವಿಧಾನದಿಂದ ವ್ಯಾಖ್ಯಾನಿಸಲ್ಪಟ್ಟಿರುವ ಭಾರತದಲ್ಲಿ ವಾಸವಾಗಿರುವ ಕರ್ನಾಟಕ ರಾಜ್ಯಕ್ಕೆ ಸೇರಿದ ವಿಶ್ವ ಪೌರನನ್ನಾಗಿ ಸಾಮಾಜೀಕರಿಸಬಲ್ಲವು.

ಪಠ್ಯವೊಂದರಲ್ಲಿ ಕೆ.ವಿ. ಪುಟ್ಟಪ್ಪ ಅವರ ಬರಹವು ಮೊಟಕುಗೊಳಿಸಲ್ಪಟ್ಟಿದ್ದರೆ ಓದುಗರ ಮನಸ್ಸಿನಲ್ಲಿ ವಿಶ್ವಮಾನವತೆಗೆ ಸ್ಥಾನ ದೊರಕೀತೆ? ತಮ್ಮದೇ ನೆಲ ಕನ್ನಡ ನಾಡಿನೊಂದಿಗೆ ಪವಿತ್ರ ಭಾಂಧವ್ಯ ಬೆಳೆದೀತೆ? ಪ್ರಸ್ತುತ ಪ್ರಭುತ್ವದಲ್ಲಿ ವ್ಯಾಪಕವಾಗಿ ಕಾಣುವ ಪ್ರವೃತ್ತಿಯಾದ ಸಂಸ್ಕೃತ ಮೂಲದ ಆಡಂಬರ ಪದಗಳ ಅಥವಾ ಅಸಂಬಂದ್ಧ ಆಂಗ್ಲ ಸಂಕ್ಷಿಪ್ತಗಳ ಬಳಕೆಯಿಂದ ಕರ್ನಾಟಕ ಪ್ರೀತಿ ಮೊಳೆಯಲಾರದು.

ಅಭಿವ್ಯಕ್ತಿ ಸ್ವಾತಂತ್ರ್ಯದ ಸಮರ್ಥಕರೂ ಅಪ್ರತಿಮ ಲೇಖಕರೂ ಆದ ದೇವನೂರು ಮಹಾದೇವ ಅವರು ತಮ್ಮ ‘ಎದೆಗೆ ಬಿದ್ದಅಕ್ಷರ’ವನ್ನು ಪಠ್ಯಪುಸ್ತಕಗಳಲ್ಲಿ ಬಳಸಲು ಅನುಮತಿ ಹಿಂತೆಗೆದುಕೊಂಡಿದ್ದಾರೆ. ಇದು ಸೈದ್ಧಾಂತಿಕ ಶುದ್ಧೀಕರಣ ಮತ್ತು ಪರಿಷ್ಕರಣ ಕಾರ್ಯಕ್ರಮವನ್ನು ನಿಲ್ಲಿಸಲು ಸರ್ಕಾರಕ್ಕೆ ಸಾಕಷ್ಟು ಪ್ರಬಲ ಕಾರಣವಾಗಬೇಕು.

ವಿವಾದಗಳ ಕಾವಿನಲ್ಲಿ ಸಿಟ್ಟು ಏರುತ್ತದಲ್ಲದೇ ವಿವೇಕಪೂರ್ಣ ಸಲಹೆಗಳು ನಿರ್ಲಕ್ಷಿಸಲ್ಪಡುತ್ತವೆ. ಹೀಗಾಗಿಯೇ ವಿವಿಧ ಬರಹಗಾರರು ಅನುಮತಿಯನ್ನು ಹಿಂತೆಗೆದುಕೊಂಡಿರುವುದನ್ನು ಟ್ರೋಲ್‍ಗಳಿಂದ ಜಾತಿ ಮತ್ತು ಪಕ್ಷ ರಾಜಕಾರಣದ ಪ್ರಶ್ನೆಗಳಿಗೆ ಸಂಕುಚಿತಗೊಳಿಸಲಾಗಿದೆ.

ಶಿಕ್ಷಕರ ಸಂದಿಗ್ಧತೆ

ಪಠ್ಯ ಪರಿಷ್ಕರಣೆಯು ತರಗತಿಯ ವಹಿವಾಟುಗಳು ಮತ್ತು ವಿದ್ಯಾರ್ಥಿಗಳ ಅರಿವಿನ ಸಾಮರ್ಥ್ಯಗಳ ಬೆಳವಣಿಗೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಉದಾಹರಣೆಗೆ ಕೆ.ಬಿ. ಹೆಡಗೆವಾರ್‌ರ ʻನಿಜವಾದ ಆದರ್ಶ ಪುರುಷ ಯಾರಾಗಬೇಕು?ʼ ಉಪನ್ಯಾಸದ ಕನ್ನಡಾನುವಾದವನ್ನು ಪಠ್ಯದಲ್ಲಿ ಸೇರಿಸಿರುವುದರ ಕುರಿತು ಯೋಚಿಸಿ. ಈ ಪಾಠವು ʻಆದರ್ಶಗಳʼ ಸ್ವರೂಪವನ್ನು ಪರಿಶೀಲಿಸಲು ಅನುವು ಮಾಡಿಕೊಡುತ್ತದೆ ಎಂದು ಭಾವಿಸಲಾಗಿದೆ. ಈ ಉಪನ್ಯಾಸದ ಸಾರವೆಂದರೆ ವ್ಯಕ್ತಿಗಿಂತ ತತ್ತ್ವವೇ ಮುಖ್ಯ. ಇದು ಹತ್ತನೆಯ ತರಗತಿಯ ಒಂದು ಪಾಠವಾಗಿರುವುದರಿಂದ ಶಿಕ್ಷಕರು ಈ ಪಾಠವನ್ನು ಆರಂಭಿಸುವುದಕ್ಕೂ ಮೊದಲು ಲೇಖಕರು ಇದನ್ನು ಏಕೆ ಮತ್ತು ಯಾವಾಗ ಹೇಳಿದರು ಎಂಬ ಕುರಿತು ಹಿನ್ನೆಲೆ ಸಂಶೋಧನೆಯನ್ನು ಮಾಡಬೇಕಾಗುತ್ತದೆ.

ಹೀಗೆ ಸಂಶೋಧನೆ ಮಾಡಿದಾಗ ಆತ್ಮಸಾಕ್ಷಿಯುಳ್ಳ ಯಾವ ಶಿಕ್ಷಕನೇ ಆದರೂ ಇದಿಷ್ಟು ಕಂಡುಕೊಳ್ಳುತ್ತಾನೆ: ಮಹಾತ್ಮಾ ಗಾಂಧಿಯವರ ದಂಡಿಯಾತ್ರೆಯಲ್ಲಿ ಪಾಲ್ಗೊಳ್ಳಲು ಹೆಡಗೆವಾರ್‌ರು ನಿರಾಕರಿಸಿದ್ದರು. ಆದರೂ ಅದರಲ್ಲಿ ಪಾಲ್ಗೊಳ್ಳಲೇಬೇಕೆಂಬ ಅವರದೇ ಸ್ವಯಂಸೇವಕರ ಒತ್ತಡಕ್ಕೆ ಒಳಗಾಗಿದ್ದರು. ಆರ್‌.ಎಸ್‌.ಎಸ್‌.ನ ಬೆಳವಣಿಗೆಯ ಬಗ್ಗೇ ಹೆಚ್ಚು ಕಾಳಜಿಯಿದ್ದ ಅವರು ಮಹಾತ್ಮರ ಬೆಳೆಯುತ್ತಿರುವ ವರ್ಚಸ್ಸಿನ ಬಗ್ಗೆ ಚಿಂತಿತರಾಗಿದ್ದರು. ಮುಂದೆ ಗಾಂಧೀಜಿಯವರ ಕುರಿತ ಅವರ ಜಿಗುಪ್ಸೆ ಹೆಚ್ಚುತ್ತಲೇ ಹೋಯಿತಲ್ಲದೇ ಆರ್‌.ಎಸ್‌.ಎಸ್‌. ಪರಿಸರದಲ್ಲಿ ಪೋಷಿತರಾದ ವ್ಯಕ್ತಿಗಳು ಅವರನ್ನು ತೊಡೆದುಹಾಕಲು ಪಿತೂರಿ ನಡೆಸಿದರು. ಇದಿಷ್ಟನ್ನು ಕಂಡುಕೊಂಡ ಆತ್ಮಸಾಕ್ಷಿಯುಳ್ಳ ಶಿಕ್ಷಕನಿಗೆ ಈ ಪಾಠವನ್ನು ಕಲಿಸುವುದು ಆನಂದದಾಯಕವೆನಿಸಬಹುದೇ?

ಜಿಜ್ಞಾಸುವಾದ ವಿದ್ಯಾರ್ಥಿ ಹೀಗೆ ಕೇಳುವುದು ಸಾಧ್ಯ: ʻಮುಖ್ಯವಾದುದು ವ್ಯಕ್ತಿಯಲ್ಲ, ತತ್ತ್ವ ಎನ್ನುತ್ತೀರಾ? ಹಾಗಾದರೆ ಇಲ್ಲಿ ಲೇಖಕರು ಯಾವ ತತ್ತ್ವವನ್ನು ಸೂಚಿಸುತ್ತಿದ್ದಾರೆ?ʼʼ ಆಗ ಶಿಕ್ಷಕರು ಸತ್ಯನಿಷ್ಠರಾಗಿ ʻʻಉಗ್ರ ಹಿಂದುತ್ವ ತತ್ತ್ವʼʼ ಎಂದು ಹೇಳಬೇಕೆ?

ಒಂದು ವೇಳೆ ಶಿಕ್ಷಕಿಯು ನಿಜಕ್ಕೂ ಅದೇ ಭಾರತಕ್ಕೆ ಸರಿಯಾದ ಮುಂದಿನ ದಾರಿ ಎಂದು ನಂಬಿದ್ದರೆ ಆಗ ಅವಳು ಹಿಂಸಾತ್ಮಕ ʻಕಾನೂನುಬಾಹಿರʼ ಚಟುವಟಿಕೆಗಳನ್ನು ನಡೆಸಲು ಸಿದ್ಧರಿರುವ ಸರಕಾರೇತರ ಕ್ರಿಯಾಭಾಗಿಗಳ ಸಂಖ್ಯೆ ಹೆಚ್ಚಾಗುವುದಕ್ಕೆ ಕೊಡುಗೆ ನೀಡಿದಂತಾಗುವುದಿಲ್ಲವೆ?

ಇವೆಲ್ಲ ಗಂಭೀರ ಶೈಕ್ಷಣಿಕ ಪ್ರಶ್ನೆಗಳು. ಕರ್ನಾಟಕದ ಸಾಂಸ್ಕೃತಿಕ ಅಸ್ಮಿತೆಯನ್ನು ಕುರಿತ ತನ್ನ ತಿಳಿವಳಿಕೆ ಏನೆಂಬುದನ್ನು ಕರ್ನಾಟಕ ಸರಕಾರವು ನಿರ್ಧರಿಸಬೇಕಿದೆ. ಕರ್ನಾಟಕವನ್ನು ಆಧುನಿಕ, ಮಾನವೀಯ, ಎಲ್ಲರನ್ನೂ ಒಳಗೊಳ್ಳುವ ರಾಜ್ಯವನ್ನಾಗಿ ನಿರ್ಮಿಸಲು ಕಳೆದ ಸಹಸ್ರಮಾನದುದ್ದಕ್ಕೂ ನಡೆದ ಸಾಮಾಜಿಕ, ತಾತ್ತ್ವಿಕ, ಸಾಂಸ್ಕೃತಿಕ ಹೋರಾಟಗಳನ್ನು ತಾನು ನಿರಾಕರಿಸಬಯಸುತ್ತೇನೆಯೇ ಎಂಬುದನ್ನೂ ಸಹ ಕರ್ನಾಟಕ ಸರಕಾರವು ನಿರ್ಣಯಿಸಬೇಕಾಗಿದೆ.

Donate Janashakthi Media

Leave a Reply

Your email address will not be published. Required fields are marked *