ಪ್ರೊ.ಟಿ.ಆರ್. ಚಂದ್ರಶೇಖರ
ಸಾರ್ವಜನಿಕ ರಾಜಸ್ವ ಸೊರಗುತ್ತಿದ್ದರೆ ಸಾರ್ವಜನಿಕ ಋಣ ಸೊಕ್ಕಿ ಏರಿಕೆಯಾಗುತ್ತಿದೆ. ಏಕೀಕರಣದ 1956 ರಿಂದ 2013-14ರವರೆಗೆ, ಅಂದರೆ ಸುಮಾರು 57 ವರ್ಷಗಳಲ್ಲಿನ ರಾಜ್ಯದ ಋಣ ರೂ. 1.36 ಲಕ್ಷ ಕೋಟಿ. ಕಳೆದ ಹತ್ತು ವರ್ಷಗಳಲ್ಲಿ ಏರಿಕೆ ರೂ. 3.76 ಲಕ್ಷ ಕೋಟಿಯಾಗಿದೆ. ಸರ್ಕಾರಗಳು ಸಾಲ ಮಾಡಬೇಕು. ಆದರೆ ಎತ್ತಿದ ಸಾಲವನ್ನು ಆಸ್ತಿ ನಿರ್ಮಾಣಕ್ಕೆ, ಬಂಡವಾಳ ಸೃಜನೆಗೆ ಹೂಡಿಕೆ ಮಾಡಿದರೆ ಸರಿ. ಇದಕ್ಕೆ ಬದಲಾಗಿ ರೆವಿನ್ಯೂ ಕೊರತೆಯನ್ನು ತುಂಬಲು, ಹಿಂದಿನ ಸಾಲದ ಬಡ್ಡಿಗೆ, ಮತ್ತು ಸಾಲದ ಮರುಪಾವತಿಗೆ ನೀಡಿದರೆ ಅಲ್ಲಿ ವಿತ್ತೀಯ ಶಿಸ್ತು ಇರುವುದಿಲ್ಲ. 2023-24ರ ಬಜೆಟ್ ಮಾಹಿತಿ ಪ್ರಕಾರ ಸಾಲದ ಬಡ್ಡಿ ರೂ. 34,023 ಕೋಟಿ ಮತ್ತು ಸಾಲ ಮರುಪಾವತಿ ರೂ. 22,441 ಕೋಟಿ. ಒಟ್ಟು ರೂ. 56,464 ಕೋಟಿ. ಎತ್ತಿದ ಸಾಲ ರೂ. 78,000 ಕೋಟಿಯಲ್ಲಿ ರೂ. 56,464 ಕೋಟಿ ಹೀಗೆ ವೆಚ್ಚವಾದರೆ ಬಂಡವಾಳ ಹೂಡಿಕೆಗೆ ಉಳಿಯುವುದು ಕೇವಲ ರೂ. 22,464 ಕೋಟಿ ಮಾತ್ರ.
ನಮ್ಮ ಆರ್ಥಿಕತೆಯಲ್ಲಿ ಅಭಿವೃದ್ಧಿ ನಡೆಯುತ್ತಿದೆ. ಇದು ಜನರ ಪರಿಶ್ರಮದಿಂದ ರೂಢಿಗತವಾಗಿ ನಡೆಯುತ್ತಿದೆ. ಇದು ಸರ್ಕಾರದ ನೀತಿ-ಕ್ರಮಗಳಿಂದ ನಡೆಯುತ್ತಿಲ್ಲ. ಆರ್ಥಿಕ ನಿರ್ವಹಣೆಯು ಸರ್ಕಾರದ ಆದ್ಯತೆಯಾಗಿ ಉಳಿದಿಲ್ಲ. ಸರ್ಕಾರದ ನೀತಿ-ಕಾರ್ಯಕ್ರಮಗಳು ಇಲ್ಲದಿದ್ದರೂ ಅಭಿವೃದ್ಧಿಯು ಯಥಾ ಪ್ರಕಾರ ನಡೆಯುತ್ತದೆ ಎಂಬುದು ನಮ್ಮ ನಂಬಿಕೆ. ಮಳೆರಾಯ ಮಳೆ ತರುತ್ತಾನೆ, ರೈತರು-ಕೂಲಿಕಾರರು ದುಡಿಯುತ್ತಾರೆ. ಆಹಾರ ಉತ್ಪಾದನೆ ನಡೆಯುತ್ತಿರುತ್ತದೆ. ಕೈಗಾರಿಕೆಗಳಲ್ಲಿ ಕೆಲಸ ನಡೆಯುತ್ತಿರುತ್ತದೆ. ಸರ್ಕಾರಿ ನೌಕರರು ಕೆಲಸ ಮಾಡುತ್ತಿರುತ್ತಾರೆ. ಇಂದು ಅಭಿವೃದ್ಧಿ ನಡೆಯುತ್ತಿರುವುದು ಹೀಗೆಯೇ! ಜನರ ಬದುಕು-ಬವಣೆಗಳು ಸರ್ಕಾರಕ್ಕೆ ಸಮಸ್ಯೆಯಾಗುತ್ತಿಲ್ಲ. ಅದಕ್ಕೆ ಸಮಸ್ಯೆ ಯಾವುವೆಂದರೆ: ಊರು-ಕೇರಿಗಳ ಹೆಸರು ಬದಲಾಯಿಸುವುದು, ದೇವಸ್ಥಾನಗಳನ್ನು ನಿರ್ಮಿಸುವುದು, ಮಸೀದಿಗಳನ್ನು ಹಳೆಯ ದೇವಾಲಯಗಳೆಂದು ಆಕ್ರಮಿಸಿಕೊಳ್ಳುವುದು, ರಸ್ತೆಗಳು, ಅಣೆಕಟ್ಟೆಗಳನ್ನು ಜನರು ಕೇಳಬಾರದು. ಲವ್ ಜಿಹಾದ್ ಬಗ್ಗೆ, ಹಿಜಾಬ್ ಬಗ್ಗೆ, ಆಜಾನ್ ಬಗ್ಗೆ ಜನರು ಗಮನ ನೀಡಬೇಕು ಎಂಬುದು ಈ ಸರ್ಕಾರ ಜನರಿಗೆ ನೀಡುತ್ತಿರುವ ಸಂದೇಶ. ಮಾಧ್ಯಮಗಳನ್ನು ಅಡಿಯಾಳುಗಳನ್ನಾಗಿ ಮಾಡಿಕೊಳ್ಳುವುದು ಇದರ ಮತ್ತೊಂದು ತಂತ್ರ. ಪಠ್ಯ ಪುಸ್ತಕಗಳಲ್ಲಿ ಕೋಮುವಾದವನ್ನು-ಮೌಢ್ಯವನ್ನು ತುಂಬುವುದು ಇದರ ಇನ್ನೊಂದು ಷಢ್ಯಂತ್ರ. ಸರ್ಕಾರದ-ಆಳುವ ಪಕ್ಷದ ಈ ಜಾಯಮಾನಕ್ಕೆ ಜನರೂ ಒಗ್ಗಿಕೊಳ್ಳುತ್ತಿರುವಂತೆ ಕಾಣುತ್ತದೆ. ಧರ್ಮ-ಧರ್ಮಗಳ ನಡುವೆ, ಜಾತಿ-ಜಾತಿಗಳ ನಡುವೆ ವಿಷ ಬಿತ್ತುವುದು, ಜಗಳ ಹುಟ್ಟು ಹಾಕುವುದು ಇತ್ಯಾದಿ. ಇದಕ್ಕೆ ನಿದರ್ಶನಗಳು-ಉದಾಹರಣೆಗಳನ್ನು ನೀಡುವ ಅಗತ್ಯವಿಲ್ಲ. ಇವೆಲ್ಲ ಜಗಜ್ಜಾಹೀರಾಗಿವೆ. ಆರ್ಥಿಕತೆಯ ಬಗ್ಗೆ ಬರೀ ಸುಳ್ಳುಗಳನ್ನು ಹೇಳುವುದು ಸರ್ಕಾರಕ್ಕೆ ರೂಢಿಯಾಗಿ ಬಿಟ್ಟಿದೆ. ಈ ಪಟ್ಟಿಯನ್ನು ಹೀಗೆ ಬೆಳೆಸುತ್ತಾ ಹೋಗಬಹುದು. ಇಷ್ಟು ಸಾಕು!
ಇದನ್ನು ಓದಿ: ರಾಜ್ಯ ಬಜೆಟ್-2023-24: ರೈತರಿಗೆ ₹5 ಲಕ್ಷ ಬಡ್ಡಿ ರಹಿತ ಸಾಲ
(1). ಆರ್ಥಿಕತೆ ಎಂತಹ ದುಸ್ಥಿತಿಲ್ಲಿದೆ ಎಂದರೆ –
ಇಂದು ನಮ್ಮ ಆರ್ಥಿಕತೆಯು ಕುಸಿಯುತ್ತಾ ನಡೆದಿದೆ. ಈ ಕೆಳಗಿನ ಪಟ್ಟಿ ನೋಡಿ:
ಮೂಲ: ಮಧ್ಯಮಾವಧಿ ವಿತ್ತೀಯ ಯೋಜನೆ: 2023-2027
ಕರ್ನಾಟಕದಲ್ಲಿ 2022-23 ಸಾಮಾನ್ಯ ವರ್ಷವಾಗಿದೆ. ಯಾವುದೇ ವಿಪತ್ತು-ವಿಕೋಪ ಸಂಭವಿಸಿಲ್ಲ. ಕೋವಿಡ್ ಪೆಂಡಮಿಕ್ ನಿಂದ ಆರ್ಥಿಕತೆ ಚೇತರಿಸಿಕೊಂಡಿದೆ ಎಂದು ಸರ್ಕಾರ ಹೇಳಿಕೊಳುತ್ತಿದೆ. ಆದರೂ ಆರ್ಥಿಕತೆ ಏಕೆ ಹಿಂಜರಿತವನ್ನು ಅನುಭವಿಸಿದೆ? ಜಿಎಸ್‌ಡಿಪಿ ಸೇರಿಸಿಕೊಂಡು ಆರ್ಥಿಕತೆಯ ಮೂರು ವಲಯಗಳು ಕುಸಿತವನ್ನು ಕಂಡಿವೆ.
(2) ರಾಜ್ಯದ 2018-19ರ ಬಜೆಟ್ ಗಾತ್ರ ರೂ. 2.09 ಲಕ್ಷ ಕೋಟಿ. ಇದು ಸದರಿ ವರ್ಷದ ಜಿಎಸ್‌ಡಿಪಿಯ ಶೇ. 14.85 ರಷ್ಟಿತ್ತು. ಆದರೆ 2023-24ರ ಬಜೆಟ್ ಗಾತ್ರ ಜಿಎಸ್‌ಡಿಪಿಯಲ್ಲಿ ಶೇ. 13.24 ರಷ್ಟಾಗಿದೆ. ಬಜೆಟ್ಟಿನ ಗಾತ್ರವೇನೋ ಮೊತ್ತದಲ್ಲಿ ಏರಿಕೆಯಾಗಿದೆ. ಆದರೆ ಹಣದುಬ್ಬರ ಮತ್ತು ಸಾಪೇಕ್ಷವಾಗಿ ಹೆಚ್ಚಿಗೆಯಾಗಿಲ್ಲ. ಸಾಮಾನ್ಯ ವರ್ಷದಲ್ಲಿಯೇ ಹೀಗಾದರೆ ವಿಪತ್ತು-ವಿಕೋಪ ಸಂಭವಿಸಿದಾಗ ಏನಾಗಬಹುದು?
ಇದನ್ನು ಓದಿ: 2022-23 ರಾಜ್ಯ ಬಜೆಟ್: ತೆರಿಗೆ ಹೆಚ್ಚಳ ಇಲ್ಲ-5 ಲಕ್ಷ ಹೊಸ ಮನೆ ನಿರ್ಮಾಣ-ಮೈಷುಗರ್ ಕಾರ್ಖಾನೆ ಪುನಶ್ಚೇತನ
(3) ಬಜೆಟ್ಟಿನಲ್ಲಿ ಸಾಲ ಮತ್ತು ಬಡ್ಡಿ ಪ್ರಮಾಣಗಳಲ್ಲಿ ವಿಪರೀತ ಏರಿಕೆಯಾಗುತ್ತಿದೆ. ಒಟ್ಟು ರಾಜಸ್ವ ಸ್ವೀಕೃತಿಯಲ್ಲಿ ಸಾಲದ ಪ್ರಮಾಣ 2018-19ರಲ್ಲಿ ಶೇ. 25.42 ರಷ್ಟ್ಟಿದ್ದುದು 2023-24ರಲ್ಲಿ ಇದು ಶೇ. 34.53 ರಷ್ಟಾಗಿದೆ. ಇದೇ ಅವಧಿಯಲ್ಲಿ ಬಡ್ಡಿ ವೆಚ್ಚವು 2018-19ರಲ್ಲಿ ಒಟ್ಟು ರಾಜಸ್ವ ಸ್ವೀಕೃತಿಯಲ್ಲಿ ಶೇ. 9.35ರಷ್ಟಿದ್ದುದು 2023-24ಲ್ಲಿ ಇದು ಶೇ. 15.06 ರಷ್ಟಾಗಿದೆ.
(4) ಒಕ್ಕೂಟದಿಂದ ಕರ್ನಾಟಕಕ್ಕೆ 2018-19ರಲ್ಲಿ ವರ್ಗಾವಣೆಯಾಗಿದ್ದ ಒಟ್ಟು ತೆರಿಗೆಗಳಲ್ಲಿನ ಪಾಲು ಮತ್ತು ಸಹಾಯಾನುದಾನ ರೂ. 50,621 ಕೋಟಿ. ಇದು 2023-24ರಲ್ಲಿ ರೂ. 50,257 ಕೋಟಿ. ಕಳೆದ 5 ವರ್ಷಗಳಲ್ಲಿ ಏರಿಕೆಯಾಗಿಲ್ಲ. ರಾಜ್ಯದ 2018-19ರ ರಾಜಸ್ವದಲ್ಲಿ ವರ್ಗಾವಣೆ ಪ್ರಮಾಣ ಶೇ. 30.68 ರಷ್ಟಿದ್ದುದು ಮುಂದಿನ ವರ್ಷದಲ್ಲಿ ಇದು ಶೇ. 19.63ಕ್ಕಿಳಿದಿದೆ. ಪ್ರಧಾನಮಂತ್ರಿ ಅವರು ತಮ್ಮ ಆಡಳಿತದಲ್ಲಿ ರಾಜ್ಯಗಳಿಗೆ ಸಂಪನ್ಮೂಲ ವರ್ಗಾವಣೆ ಹೆಚ್ಚಿದೆ ಎನ್ನುತ್ತಾರೆ. ಎಲ್ಲಿ ಹೆಚ್ಚಿದೆ?
(5) ರಾಜ್ಯದ ಸ್ವಂತ ತೆರಿಗೆ ರಾಶಿಯು 2018-19ರ ಜಿಎಸ್‌ಡಿಪಿಯ ಶೇ. 7.64 ರಷ್ಟಿದ್ದುದು 2023-24ರಲ್ಲಿ ಇದು ಶೇ. 7.05ಕ್ಕಿಳಿದಿದೆ. ವಾಣಿಜ್ಯ ತೆರಿಗೆಯಲ್ಲಿಯೂ ಕುಸಿತ ಉಂಟಾಗಿದೆ. ಅಬಕಾರಿ, ಮೋಟಾರು ವಾಹನ ತೆರಿಗೆ ಮತ್ತು ನೋಂದಣಿ- ಮುಂದ್ರಾಂಕ ತೆರಿಗೆಗಳಲ್ಲಿ ಕನಿಷ್ಟ ಏರಿಕೆಯಾಗಿದೆ.
ಈ ಮೇಲಿನ ಅಂಶಗಳು ರಾಜ್ಯದ ರೆವಿನ್ಯೂ ಸಂಗ್ರಹ ಸೊರಗುತ್ತಿರುವುದನ್ನು ತೋರಿಸುತ್ತದೆ. ಸಾರ್ವಜನಿಕ ವೆಚ್ಚವು ಮಾತ್ರ ಏರಿಕೆಯಾಗುತ್ತಿರುತ್ತದೆ. ಈ ವೆಚ್ಚಕ್ಕೆ ರಾಜ್ಯ ಸಂಗ್ರಹಿಸುತ್ತಿರುವ ರಾಜಸ್ವ ಸಾಕಾಗುವುದಿಲ್ಲ. ಇದಕ್ಕಾಗಿ ಸರ್ಕಾರವು ಸಾಲದ ಮೊರೆ ಹೋಗುತ್ತಿದೆ. ಸಾರ್ವಜನಿಕ ರಾಜಸ್ವ ಸೊರಗುತ್ತಿದ್ದರೆ ಸಾರ್ವಜನಿಕ ಋಣ ಸೊಕ್ಕಿ ಏರಿಕೆಯಾಗುತ್ತಿದೆ.
ಇದನ್ನು ಓದಿ: ಅಭಿವೃದ್ಧಿ ಕಾರ್ಯಗಳಿಗೆ ಸರಕಾರದ ಬಳಿ ಹಣವಿಲ್ಲವೆ? ವಿಪಕ್ಷ ನಾಯಕ ಸಿದ್ಧರಾಮಯ್ಯ ಪ್ರಶ್ನೆ
(6) ಏಕೀಕರಣದ 1956ರಿಂದ 2013-14ರವರೆಗೆ, ಅಂದರೆ ಸುಮಾರು 57 ವರ್ಷಗಳಲ್ಲಿನ ರಾಜ್ಯದ ಋಣ ರೂ. 1.36 ಲಕ್ಷ ಕೋಟಿ. ಆದರೆ ಇದು 2017-18ರಲ್ಲಿ ರೂ. 2.42 ಲಕ್ಷ ಕೋಟಿಗೆ ಮತ್ತು 2022-23ರಲ್ಲಿ ಇದು ರೂ. 5.12 ಲಕ್ಷ ಕೋಟಿಗೇರಿದೆ. ಅಂದರೆ ಕಳೆದ ಹತ್ತು ವರ್ಷಗಳಲ್ಲಿ ಏರಿಕೆ ರೂ. 3.76 ಲಕ್ಷ ಕೋಟಿಯಾಗಿದೆ. ಸರ್ಕಾರಗಳು ಸಾಲ ಮಾಡಬೇಕು. ಆದರೆ ಎತ್ತಿದ ಸಾಲವನ್ನು ಆಸ್ತಿ ನಿರ್ಮಾಣಕ್ಕೆ, ಬಂಡವಾಳ ಸೃಜನೆಗೆ ಹೂಡಿಕೆ ಮಾಡಿದರೆ ಸರಿ. ಇದಕ್ಕೆ ಬದಲಾಗಿ ರೆವಿನ್ಯೂ ಕೊರತೆಯನ್ನು ತುಂಬಲು, ಹಿಂದಿನ ಸಾಲದ ಬಡ್ಡಿಗೆ, ಮತ್ತು ಸಾಲದ ಮರುಪಾವತಿಗೆಗೆ ನೀಡಿದರೆ ಅಲ್ಲಿ ವಿತ್ತೀಯ ಶಿಸ್ತು ಇರುವುದಿಲ್ಲ. ಉದಾ: 2023-24ರ ಬಜೆಟ್ ಮಾಹಿತಿ ಪ್ರಕಾರ ಸಾಲದ ಬಡ್ಡಿ ರೂ. 34,023 ಕೋಟಿ ಮತ್ತು ಸಾಲ ಮರುಪಾವತಿ ರೂ. 22,441 ಕೋಟಿ. ಒಟ್ಟು ರೂ. 56,464 ಕೋಟಿ. ಎತ್ತಿದ ಸಾಲ ರೂ. 78,000 ಕೋಟಿಯಲ್ಲಿ ರೂ. 56,464 ಕೋಟಿ ಹೀಗೆ ವೆಚ್ಚವಾದರೆ ಬಂಡವಾಳ ಹೂಡಿಕೆಗೆ ಉಳಿಯುವುದು ಕೇವಲ ರೂ. 22,464 ಕೋಟಿ ಮಾತ್ರ.
(7) ಸರ್ಕಾರದ ಇಲಾಖೆಗಳಲ್ಲಿ ಖಾಲಿಯಿರುವ ಹುದ್ದೆಗಳು
ಒಟ್ಟು ಮಂಜೂರಾದ 7.72 ಲಕ್ಷ ಹುದ್ದೆಗಳಲ್ಲಿ ಖಾಲಿಯಿರುವ ಹುದ್ದೆಗಳು 2.59 ಲಕ್ಷ (ಶೇ. 33.15). ಶಿಕ್ಷಣ ಇಲಾಖೆ ಮತ್ತು ಆರೋಗ್ಯ ಇಲಾಖೆಗಳಲ್ಲಿನ ಖಾಲಿ ಹುದ್ದೆಗಳ ಪ್ರಮಾಣ ಅನುಕ್ರಮವಾಗಿ ಶೇ. 23.33 ಮತ್ತು ಶೇ. 47.05. ಈ ಸ್ಥಿತಿಯಲ್ಲಿ ಯಾವ ಬಗೆಯ ಅಭಿವೃದ್ಧಿ ಕಾರ್ಯಕ್ಷಮತೆ ಸಾಧ್ಯ? ಮೀಸಲಾತಿಯ ವಿಷಯವನ್ನು ಬಿಡಿಸಲಾಗದ ಗೊಂದಲದ ಗೂಡನ್ನಾಗಿ ಸರ್ಕಾರ ಮಾಡಿದೆ. ಮೀಸಲಾತಿ ಪ್ರಮಾಣ ಏರಿಕೆಯಾದರೂ ಅಲ್ಲಿ ದೊರೆಯುವ ಉದ್ಯೋಗಗಳು ಕ್ವಚಿತ್ತಾಗಿವೆ.
ಇದನ್ನು ಓದಿ: ನವ ಉದಾರೀಕರಣದಿಂದ ನಿರುದ್ಯೋಗ – ಖಾಲಿ ಹುದ್ದೆ – ಆಡಳಿತ ಯಂತ್ರದ ಕುಸಿತ
(8) ಕಾಮಗಾರಿ-ಕಾಂಟ್ರಾಂಕ್ಟ್ ಗಿರಿ ಸರ್ಕಾರ
ಈ ಬಜೆಟ್ಟಿನಲ್ಲಿ ಸುಮಾರು ರೂ. 3000 ಕೋಟಿ ಅನುದಾನವನ್ನು ಮಹತ್ವಾಕಾಂಕ್ಷಿ (ಹಿಂದುಳಿದ) ತಾಲ್ಲೂಕುಗಳಿಗೆ ಮೀಸಲಿಟ್ಟಿದೆ. ಹಿಂದುಳಿದ ತಾಲ್ಲೂಕುಗಳ ಅಭಿವೃದ್ದಿಗೆ ಅಡ್ಡಿಯಾಗಿರುವ ಅಂಶಗಳೆಂದರೆ ಶಿಕ್ಷಣ, ಆರೋಗ್ಯ, ಆಹಾರ ಭದ್ರತೆ, ಕುಡಿಯುವ ನೀರಿನ ಕೊರತೆಗಳು. ಈ ರೂ. 3000 ಕೋಟಿಯಲ್ಲಿ ಮುಕ್ಕಾಲು ಮೂರು ವೀಸೆ ಪಾಲು ಹಣವನ್ನು ಕಟ್ಟಡಗಳ ನಿರ್ಮಾಣಕ್ಕೆ ಹಂಚಲಾಗಿದೆ. ಉದಾ: ಗುಣಮಟ್ಟದ ಶಿಕ್ಷಣ ಎಂದರೆ ಸರ್ಕಾರಕ್ಕೆ ಹಾಸ್ಟೆಲ್‌ಗಳ ಕಟ್ಟಡ, ಕಾಲೇಜುಗಳ ಕಟ್ಟಡ, ನವೋದಯ ಶಾಲಾ ಕಟ್ಟಡ, ವಸತಿ ಶಾಲಾ ಕಟ್ಟಡ, ಮಹಿಳೆ-ಮಕ್ಕಳ ಅಭಿವೃದ್ಧಿ ಅಂದರೆ ಅಂಗನವಾಡಿಗಳ ನಿರ್ಮಾಣ, ಕಾರ್ಮಿಕ ಕಲ್ಯಾಣ ಎಂದರೆ ಕೌಶಲ್ಯ ಅಭಿವೃದ್ದಿ – ಹೀಗೆ ಮಹತ್ವಾಕಾಂಕ್ಷಿ ತಾಲ್ಲೂಕುಗಳ ಅಭಿವೃದ್ಧಿಯನ್ನು ಯೋಜಿಸಲಾಗಿದೆ. ಇಲ್ಲಿ ಜನರ ಮತ್ತು ಅವರ ಜೀವನೋಪಾಯದ ಸ್ಪರ್ಶವೇ ಇಲ್ಲ. ಒಟ್ಟು ವೆಚ್ಚದಲ್ಲಿ ಒಕ್ಕೂಟ ಹಾಗೂ ರಾಜ್ಯ ಸೇರಿ ಪೋಷಣ್ ಕಾರ್ಯಕ್ರಮಕ್ಕೆ ಅನುದಾನ ರೂ. 1.96 ಕೋಟಿ(ಶೇ. 0.07).
(9). ಮಿತಿ ಮೀರಿದ ಬಹುಮುಖಿ ಬಡತನ
ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳ 2021ರ ಜನಸಂಖ್ಯೆ(ಅಂದಾಜು) ಅನುಕ್ರಮವಾಗಿ 14.45 ಲಕ್ಷ ಮತ್ತು 22.28 ಲಕ್ಷ. ಒಕ್ಕೂಟ ಸರ್ಕಾರದ ನೀತಿ ಆಯೋಗದ ವರದಿಯಂತೆ ಯಾದಗಿರಿ ಜಿಲ್ಲೆಯಲ್ಲಿ ಬಹುಮುಖಿ ಬಡವರ ಪ್ರಮಾಣ ಶೇ. 41.67 ಮತ್ತು ರಾಯಚೂರಿನ ಬಹುಮುಖಿ ಬಡವರ ಪ್ರಮಾಣ ಶೇ. 32.19. ಅಂದರೆ ಯಾದಗಿರಿ ಜಿಲ್ಲೆಯ 14.45 ಲಕ್ಷ ಜನಸಂಖ್ಯೆಯಲ್ಲಿ ಬಡವರ ಸಂಖ್ಯೆ 6.02 ಲಕ್ಷ. ಇದೇ ರೀತಿಯಲ್ಲಿ ರಾಯಚೂರು ಜಿಲ್ಲೆಯಲ್ಲಿನ ಒಟ್ಟು ಜನಸಂಖ್ಯೆ 22.28 ಲಕ್ಷದಲ್ಲಿ 7.17 ಲಕ್ಷ ಬಡವರಿದ್ದಾರೆ. ಈ ಬಡತನದ ನಿವಾರಣೆಗೆ ಸರ್ಕಾರ ರೂಪಿಸಿರುವ ‘’ಮಹತ್ವಾಕಾಂಕ್ಷೆ” ಯೋಜನೆಯಲ್ಲಿ ಯಾವುದೇ ಕಾರ್ಯಕ್ರಮಗಳಿಲ್ಲ. ಸರ್ಕಾರ ‘ಎವಿಡೆನ್ಸ್-ಲೆಡ್ ಪಾಲಿಸಿ ಅನಾಲಿಸಿಸ್’ ಎಂದು ಹೇಳುತ್ತದೆ. ಆದರೆ ಮಹತ್ವಾಕಾಂಕ್ಷೆ ಜಿಲ್ಲೆಗಳಲ್ಲಿನ ಪುರಾವೆಗಳೇ ಬೇರೆ ಮತ್ತು ಸರ್ಕಾರ ರೂಪಿಸಿರುವ ಕಾರ್ಯಯೋಜನೆಗಳೇ ಬೇರೆ. ಈ ಜಿಲ್ಲೆಗಳಲ್ಲಿ ದುಸ್ಥಿತಿ ಅಂಚಿನಲ್ಲಿರುವ ಜನರ(ವಲ್‌ನರಬಲ್ ಸೆಕ್ಷನ್)ಪ್ರಮಾಣ ಶೇ. 50ಕ್ಕಿಂತ ಅಧಿಕ. ಈ ಪುರಾವೆಗಳನ್ನು(ಎವಿಡೆನ್ಸ್)ಗಳನ್ನು ಗಮನಕ್ಕೆ ತೆಗೆದುಕೊಳ್ಳದೆ, ಕೇವಲ ‘ಕಾಮಗಾರಿ-ನಿರ್ಮಾಣ-ಕಾಂಟ್ರಾಕ್ಟ್ ಗಿರಿ’ ಯೋಜನೆಗಳನ್ನು ಹಮ್ಮಿಕೊಂಡರೆ ಬಡತನ. ಅಪೌಷ್ಟಿಕತೆ, ನಿರುದ್ಯೋಗ, ಆಹಾರ ಅಭದ್ರತೆ, ಹಸಿವು ಕಡಿಮೆಯಾಗುವುದಿಲ್ಲ.
ನಮಗೆ ಅಗತ್ಯವಾಗಿರುವುದು ಮಹಿಳೆಯರನ್ನು ಸೇರಿಸಿಕೊಂಡು ‘ಜನರನ್ನು’ ಕೇಂದ್ರವಾಗಿಟ್ಟುಕೊಂಡ ಅಭಿವೃದ್ದಿ ಕಾರ್ಯಕ್ರಮ. ಆದರೆ ಬಜೆಟ್ಟಿನಲ್ಲಿ ಇಂತಹ ಕಾರ್ಯಯೋಜನೆ ಕಾಣುತ್ತಿಲ್ಲ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ