ಪ್ರೊ. ಟಿ.ಆರ್. ಚಂದ್ರಶೇಖರ
ನಮ್ಮ ರಾಜ್ಯದ 2022-23ನೆಯ ಸಾಲಿನ ಬಜೆಟ್ಟಿನಲ್ಲಿ ಶಿಕ್ಷಣ(ವಿಶೇಷ ಶೈಕ್ಷಣಿಕ ಕಾರ್ಯಕ್ರಮ), ಆರೋಗ್ಯ, ಒಣಭೂಮಿ ಬೇಸಾಯ, ಮಹಿಳೆಯರ ಮತ್ತು ಮಕ್ಕಳ ಪೌಷ್ಟಿಕಾ ಕಾರ್ಯಕ್ರಮ, ಆಹಾರ ಭದ್ರತೆ, ಉದ್ಯೋಗಗಳನ್ನು ಆದ್ಯತೆಯಾಗಿ ಪರಿಗಣಿಸಬೇಕು. ನರೇಗ ರೀತಿಯ ಉದ್ಯೋಗ ಖಾತ್ರಿ ಯೋಜನೆಯನ್ನು ನಗರ ಪ್ರದೇಶದಲ್ಲಿ ಆರಂಭಿಸಬೇಕು. ಈಗಾಗಲೆ ಕೇರಳ(2010), ಒಡಿಸ್ಸಾ(2020). ಹಿಮಾಚಲ ಪ್ರದೇಶ(2020). ಜಾರ್ಖಂಡ್(2020) ರಾಜ್ಯಗಳು ಇಂತಹ ನಗರ ಉದ್ಯೋಗ ಖಾತ್ರಿ ಯೋಜನೆಗಳನ್ನು ಆರಂಭಿಸಿವೆ.
ಪ್ರಸ್ತುತ ಸರ್ಕಾರಕ್ಕೆ ಹಿಜಾಬ್, ಮತಾಂತರ, ದೇವಾಲಯಗಳ ಖಾಸಗೀಕರಣ, ಲವ್ ಜಿಹಾದ್, ಆರತಿ ಮಂಟಪ, ಉಳ್ಳವರಿಗೆ ಭೂಮಿ, ಖಾಸಗಿ ಕಂಪನಿಗಳಿಗೆ ಎ.ಪಿ.ಎಮ್.ಸಿ, ಮುಂತಾದವು ಅಭಿವೃದ್ಧಿಯ ಆದ್ಯತೆಗಳಾಗಿರುವಾಗ 2022-23ನೆಯ ಸಾಲಿನ ಬಜೆಟ್ಟಿನಲ್ಲಿ ನಾವೇನು ನಿರೀಕ್ಷಿಸಬಹುದು? ಈ ಸರ್ಕಾರಕ್ಕೆ ಅಭಿವೃದ್ಧಿ ಎನ್ನುವುದು ಕಾಮಗಾರಿ-ಕಾಟ್ರಾಕ್ಟ್ ಗಿರಿಗೆ ಸೀಮಿತವಾದ ಕಾರ್ಯ ಚಟುವಟಿಕೆಯಾಗಿದೆ. ಅಭಿವೃದ್ಧಿ ಎನ್ನುವುದು ಜಿಡಿಪಿ/ಜಿಎಸ್‌ಡಿಪಿ, ನಾಲ್ಕು-ಆರು ಪಥದ ರಸ್ತೆಗಳು, 50 ಅಂತಸ್ತುಗಳ ಕಟ್ಟಡಗಳಲ್ಲ. ಇವೆಲ್ಲ ಅಭಿವೃದ್ಧಿಯ ಸಾಧನಗಳು. ಅವು ಅಭಿವೃದ್ಧಿಗೆ ಬೇಕು. ಆದರೆ ಅವೇ ಅಭಿವೃದ್ಧಿಯಲ್ಲ. ಅಭಿವೃದ್ಧಿ ಎನ್ನುವುದು ಜನರಿಗೆ, ಜನರ ಜೀವನೋಪಾಯಕ್ಕೆ, ಜನರ ಆರೋಗ್ಯ-ಸಂತಾನೋತ್ಪತ್ತಿ ಹಕ್ಕುಗಳಿಗೆ, ಶಿಕ್ಷಣಕ್ಕೆ, ಆಹಾರ ಭದ್ರತೆಗೆ, ಮಹಿಳೆಯರ ದೈಹಿಕ ಭದ್ರತೆಗೆ ಸಂಬಂಧಿಸಿದ ಸಂಗತಿಯಾಗಿದೆ. ಆದರೆ ಡಬಲ್ ಎಂಜಿನ್ ಸರ್ಕಾರಗಳು ಕೇವಲ ಭೌತಿಕ ಅಭಿವೃದ್ಧಿ ಬಗ್ಗೆ ಕಾಳಜಿ ವಹಿಸುತ್ತಿವೆ. ಸಮಾಜದಲ್ಲಿರುವ ಸಾಮಾಜಿಕ-ಆರ್ಥಿಕ ಶ್ರೇಣಿಕರಣದ ಬಗ್ಗೆ ಕುರುಡಾಗಿದೆ. ಇದರ ಪ್ರಧಾನ ಪ್ರಣಾಳಿಕೆ ‘ಎಲ್ಲ ಜಾತಿಗಳಲ್ಲಿಯೂ ಬಡವರಿದ್ದಾರೆ’ ಎಂಬುದಾಗಿದೆ. ಇದನ್ನು ಯಾರೂ ಅಲ್ಲಗಳೆಯಲು ಬರುವುದಿಲ್ಲ. ಆದರೆ ದಲಿತರ, ಆದಿವಾಸಿಗಳ, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಬಡತನಕ್ಕೆ ಮತ್ತು ಉನ್ನತ ಜಾತಿ-ವರ್ಗಗಳಲ್ಲಿನ(ತ್ರೈರ್ಣೀಕರ) ಬಡತನಕ್ಕೂ ನಡುವೆ ಗುಣಾತ್ಮಕ ಭಿನ್ನತೆಯಿದೆ. ಆದ್ದರಿಂದ ಜಾನ್‌ರಾಲ್ಸ್ ಹೇಳುವ ‘ಭಿನ್ನತೆಯ ನಿಯಮ’ದಲ್ಲಿ ಅಭಿವೃದ್ಧಿಯನ್ನು ಯೋಚಿಸಬೇಕು. ಇದನ್ನು ಧಿಕ್ಕರಿಸುತ್ತಿರುವ ಡಬಲ್ ಎಂಜಿನ್ ಸರ್ಕಾರವು ದಲಿತರಿಗೆ ಆದಿವಾಸಿಗಳಿಗೆ ಮತ್ತು ಅಲ್ಪಸಂಖ್ಯಾತರಿಗೆ ಅನ್ಯಾಯ ಮಾಡುತ್ತಿದೆ.
ನಮ್ಮದು ಡಬಲ್ ಎಂಜಿನ್ ಸರ್ಕಾರ ಆಗಿರುವುದರಿಂದ ಇದು ಒಕ್ಕೂಟ ಸರ್ಕಾರದ ಜೀತದಾಳಿನಂತೆ ಕೆಲಸ ಮಾಡುತ್ತಿದೆ. ಒಕ್ಕೂಟ ಸರ್ಕಾರದಿಂದ ರಾಜ್ಯಕ್ಕೆ ನಿಯಮಿತವಾಗಿ ಬರಬೇಕಾದ ಹಣಕಾಸು ಸಂಪನ್ಮೂಲವನ್ನು ಒತ್ತಾಯಿಸುವ ಛಾತಿಯನ್ನೇ ಕರ್ನಾಟಕ ರಾಜ್ಯವು ಕಳೆದುಕೊಂಡು ಬಿಟ್ಟಿದೆ. ಉದಾ: 15ನೆಯ ಹಣಕಾಸು ಆಯೋಗವು ತನ್ನ ಸಂಪನ್ಮೂಲ ವರ್ಗಾವಣೆ ಸೂತ್ರವನ್ನು ಬದಲಾಯಿಸಿದ್ದರಿಂದ ಕರ್ನಾಟಕಕ್ಕೆ ಅನ್ಯಾಯವಾಗುತ್ತದೆ ಎಂದು ತಾನೇ ಭಾವಿಸಿ 2020-21ನೆಯ ಸಾಲಿಗೆ ವಿಶೇಷ ಅನುದಾನವಾಗಿ ರೂ.5495 ಕೋಟಿಯನ್ನು ಶಿಫಾರಸ್ಸು ಮಾಡಿತ್ತು. ಆದರೆ ಕರ್ನಾಟಕವನ್ನು ಪ್ರತಿನಿಧಿಸುವ ವಿತ್ತ ಮಂತ್ರಿ ಇದನ್ನು ನಿರಾಕರಿಸಿದರು. ಸಂವಿಧಾನಬದ್ಧ ಸಂಸ್ಥೆಯ ಶಿಫಾರಸ್ಸಿನ ಉಲ್ಲಂಘನೆಯಾದಾಗ ಅದನ್ನು ಗಟ್ಟಿಯಾಗಿ ಕೇಳಿ ಪಡೆಯುವ ಹಕ್ಕನ್ನೇ ನಮ್ಮ ಸರ್ಕಾರ ಚಲಾಯಿಸಲಿಲ್ಲ. ಹೀಗಿರುವಾಗ ಮಾರ್ಚ್ 04ರಂದು ಮಂಡನೆಯಾಗಲಿರುವ ರಾಜ್ಯದ 2022-23ನೆಯ ಸಾಲಿನ ಬಜೆಟ್ ಹೇಗಿರುತ್ತದೆ ಎಂಬುದನ್ನು ಊಹಿಸಿಕೊಳ್ಳುವುದು ನಮಗೆ ಕಷ್ಟವಾಗಬಾರದು.
ಒಕ್ಕೂಟ ಸರ್ಕಾರದ ವರ್ಗಾವಣೆಯಲ್ಲಿ ಕುಸಿತ
ನಮ್ಮ ರಾಜಕೀಯ ವ್ಯವಸ್ಥೆಯಲ್ಲಿ ಹಣಕಾಸಿನ ಮೂಲಗಳು ಒಕ್ಕೂಟಕ್ಕೆ ಹೆಚ್ಚಿದ್ದರೆ ರಾಜ್ಯಗಳಿಗೆ ಕಡಿಮೆಯಿವೆ. ಇದೀಗ ‘ಒಂದು ದೇಶ; ಒಂದು ತೆರಿಗೆ’ ನೀತಿಯಲ್ಲಿ ಜಿಎಸ್‌ಟಿಯನ್ನು ರಾಜ್ಯ ಸರ್ಕಾರಗಳಿಂದ ಒಕ್ಕೂಟವು ತನ್ನ ವಶಪಡಿಸಿಕೊಂಡಿದ್ದರಿಂದ ರಾಜ್ಯಗಳ ಹಣಕಾಸು ಮೂಲಗಳು ಅತ್ಯಂತ ಸೀಮಿತವಾಗಿವೆ. ಸಂಪನ್ಮೂಲಕ್ಕಾಗಿ ರಾಜ್ಯಗಳಿಗೆ ಒಕ್ಕೂಟವನ್ನು ಕೈಚಾಚಿ ಬೇಡುವ ಸ್ಥಿತಿ ಬಂದಿದೆ. ಒಕ್ಕೂಟ ಸರ್ಕಾರದಿಂದ ಕರ್ನಾಟಕಕ್ಕೆ ವರ್ಗಾವಣೆಯಾಗುತ್ತಿದ್ದ ಸಂಪನ್ಮೂಲವು ರಾಜ್ಯದ 2017-18ರ ಒಟ್ಟು ಬಜೆಟ್ಟ್ ವೆಚ್ಚದ ಶೇ. 25.27 ರಷ್ಟಿದ್ದುದು 2021-22ರಲ್ಲಿ ಇದು ಶೇ. 16.17ಕ್ಕಿಳಿದಿದೆ. ಒಕ್ಕೂಟ ಸರ್ಕಾರದ ಬಜೆಟ್ ವೆಚ್ಚವು ಏರಿಕೆಯಾಗುತ್ತಾ ನಡೆದಿದೆ. ಆದರೆ ಅದು ರಾಜ್ಯಗಳಿಗೆ ವರ್ಗಾವಣೆ ಮಾಡುತ್ತಿರುವ ಸಂಪನ್ಮೂಲ ಕಡಿಮೆಯಾಗುತ್ತಾ ನಡೆದಿದೆ. ಇದರ ಜೊತೆಗೆ 2020-21ರಿಂದ ಒಕ್ಕೂಟ ಸರ್ಕಾರವು ಜಿಎಸ್‌ಟಿ ಸಂಬಂಧಿಸಿದ ಕೊರತೆಯ ಪರಿಹಾರವನ್ನು ತುಂಬಿ ಕೊಡುವ ಜವಾಬ್ದಾರಿಯಲ್ಲಿ ವಿಫಲವಾಗಿದೆ. ಇದನ್ನು ಸಾಲದ ರೂಪದಲ್ಲಿ ನೀಡುತ್ತಿದೆ. ತಮ್ಮದೇ ಶಾಸನಬದ್ಧವಾದ ಹಣವನ್ನು ಸಾಲದ ರೂಪದಲ್ಲಿ ಪಡೆದು ಅದನ್ನು ಬಡ್ಡಿ ಸಮೇತ ತೀರಿಸುವ ಸ್ಥಿತಿ ರಾಜ್ಯಕ್ಕೆ ಬಂದಿದೆ. ಸಂವಿಧಾನದ ಒಕ್ಕೂಟ ತತ್ವವನ್ನು ಭಾರತ ಸರ್ಕಾರವು ಪಾಲಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯದ 2022-23ರ ಬಜೆಟ್ ಬಗ್ಗೆ ಚರ್ಚೆ ಮಾಡಬೇಕಾಗಿದೆ.
ರಾಜ್ಯದ 2021-22ನೆಯ ಸಾಲಿನ ಬಜೆಟ್
ನಮ್ಮ ರಾಜ್ಯದ ಒಟ್ಟು ರಾಜ್ಯ ಆಂತರಿಕ ಉತ್ಪನ್ನ(ಜಿಎಸ್‌ಡಿಪಿ)ವು ಚಾಲ್ತಿ ಬೆಲೆಗಳಲ್ಲಿ 2018-19 ರಿಂದ 2020-21ರಲ್ಲಿ ಶೇ. 9.26ರಷ್ಟು ಏರಿಕೆಯಾಗಿದ್ದರೆ 2020-21 ರಿಂದ 2021-22ರಲ್ಲಿ ಇದರ ಏರಿಕೆ ಶೇ. 2.27. ರಾಜ್ಯದ ಬಜೆಟ್ ವೆಚ್ಚವು 2017-18 ರಿಂದ 2018-19ರಲ್ಲಿ ಶೇ. 15.5 ರಷ್ಟು ಏರಿಕೆಯಾಗಿದ್ದರೆ 2019-20 ರಿಂದ 2020-21ರಲ್ಲಿನ ಏರಿಕೆ ಶೇ. 9.8. ಈ ಎರಡು ಸೂಚಿಗಳು ರಾಜ್ಯದ ಆರ್ಥಿಕ ಬೆಳವಣಿಗೆ ಸ್ಥಿತಿಯು ಆರೋಗ್ಯಕರವಾಗಿಲ್ಲ ಎಂಬುದನ್ನು ಸೂಚಿಸುತ್ತವೆ. ಒಂದು ಆರೋಗ್ಯಕರ ಬಜೆಟ್ಟಿನ ಮುಖ್ಯ ಸೂಚಿಯೆಂದರೆ ಬಜೆಟ್ಟಿನಲ್ಲಿನ ರಾಜಸ್ವ ಕೊರತೆಯ ಸ್ಥಿತಿ. ಕರ್ನಾಟಕವು ಕಳೆದ 10-15 ವರ್ಷಗಳಿಂದಲೂ ಬಜೆಟ್ಟಿನ ರೆವಿನ್ಯೂ ಖಾತೆಯಲ್ಲಿ ಆದಿಕ್ಯವನ್ನು ಸಾಧಿಸಿಕೊಂಡು ಬಂದಿತ್ತು. ಆದರೆ ಇಂದು ಅದು ಕೊರತೆಯನ್ನು ತೋರಿಸುತ್ತಿದೆ. ರಾಜ್ಯದ ಬಜೆಟ್ಟಿನಲ್ಲಿನ ಕೊರತೆ ಲೆಕ್ಕಾಚಾರವು ಸರ್ಕಾರದ ಕೈಮೀರಿಹೋಗುತ್ತಿದೆ. ಉದಾ: 2020-21ರಲ್ಲಿನ ರೆವಿನ್ಯೂ ಕೊರತೆಯ ಬಜೆಟ್ ಅಂದಾಜು ರೂ. 143 ಕೋಟಿ. ಆದರೆ ಪರಿಷ್ಕೃತ ಅಂದಾಜಿನಲ್ಲಿ ಇದು ರೂ.19485 ಕೋಟಿಯಾಗಿದೆ. ಅಂದರೆ ರೆವಿನ್ಯೂ ಕೊರತೆಯು ಪರಿಷ್ಕೃತ ಅಂದಾಜಿನಲ್ಲಿ ಬಜೆಟ್ ಅಂದಾಜಿಗಿಂದ 136.26 ಪಟ್ಟು ಹೆಚ್ಚಾಗಿದೆ. ಇದೇ ರೀತಿಯಲ್ಲಿ 2021-22ರಲ್ಲಿನ ರೆವಿನ್ಯೂ ಕೊರತೆಯ ಬಜೆಟ್ ಅಂದಾಜು ರೂ. 15133 ಕೋಟಿ. ಇದು ಪರಿಷ್ಕೃತ ಅಂದಾಜಿನಲ್ಲಿ ಎಷ್ಟಾಗುತ್ತದೆ ಎಂಬುದನ್ನು ಮಾರ್ಚ್ 04ರಂದು ಮಂಡನೆಯಾಗುವ 2022-23ನೆಯ ಸಾಲಿನ ಬಜೆಟ್ಟಿನಲ್ಲಿ ನೋಡಬೇಕಾಗಿದೆ.
ಕಳೆದ ಎರಡು ವರ್ಷಗಳಿಂದ ರಾಜ್ಯವು ಕೋವಿಡ್ ಮಹಾಸೋಂಕಿನಿಂದ ಜನರು ಆರೋಗ್ಯಕ್ಕೆ ಸಂಬಂಧಿಸಿದಂತೆ ಇನ್ನಿಲ್ಲದ ಕಷ್ಟ-ಕಾರ್ಪಣ್ಯಗಳನ್ನು ಅನುಭವಿಸುತ್ತಿದ್ದಾರೆ. ಇದೇ ರೀತಿಯಲ್ಲಿ ಕೋವಿಡ್‌ನಿಂದಾಗಿ ರಾಜ್ಯದ ಗ್ರಾಮೀಣ ಭಾಗದ, ಅದರಲ್ಲೂ ಪರಿಶಿಷ್ಟ ಜಾತಿ(ಪ.ಜಾ) ಮತ್ತು ಪರಿಶಿಷ್ಟ ಪಂಗಡ(ಪ.ಪಂ.) ಸಮುದಾಯದ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಆನ್‌ಲೈನ್ ಪಾಠಗಳನ್ನು ಕೇಳುವುದು ಅವರಿಗೆ ಸಾಧ್ಯವಾಗಿಲ್ಲ. ಕುಟುಂಬಗಳ ವರಮಾನ ಕುಸಿತದಿಂದಾಗಿ ಮತ್ತು ಉದ್ಯೋಗ ನಷ್ಟದಿಂದಾಗಿ ಮಕ್ಕಳು ಕೂಡ ಕೆಲಸಕ್ಕೆ ಸೇರಬೇಕಾದ ಪ್ರಮೇಯ ಉಂಟಾಯಿತು. ಆದರೆ ಸರ್ಕಾರವು ಪೆಂಡಮಿಕ್ ವರ್ಷಗಳಲ್ಲಿಯೂ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಅನುದಾನವನ್ನು ಬಜೆಟ್ಟಿನಲ್ಲಿ ಹೆಚ್ಚಿಸಲಿಲ್ಲ. ಬಜೆಟ್ಟಿನ ಒಟ್ಟು ವೆಚ್ಚದಲ್ಲಿ ಶಿಕ್ಷಣಕ್ಕೆ ನೀಡಲಾದ ಅನುದಾನ 2018-19ರಲ್ಲಿ ಶೇ. 10.27ರಷ್ಟಿದ್ದುದು 2021-22ರಲ್ಲಿ ಇದು ಶೇ. 10.73 ರಷ್ಟಾಗಿದೆ. ಇದೇ ರೀತಿಯಲ್ಲಿ ಆರೋಗ್ಯ ಕ್ಷೇತ್ರದಲ್ಲಿನ ಅನುದಾನ 2018-19ರ ಒಟ್ಟು ಬಜೆಟ್ ವೆಚ್ಚದಲ್ಲಿ ಶೇ. 3.39 ರಷ್ಟಿದ್ದುದು 2020-21ರಲ್ಲಿ ಶೇ. 3.48ರಷ್ಟಾಗಿದ್ದರೆ 2021-22ರಲ್ಲಿ ಇದು ಶೇ. 3.99 ರಷ್ಟಾಗಿದೆ.
ಮಹಾಸೋಂಕು ಸಂಬಂಧಿ ವಿಶೇಷ ಬೃಹತ್ ಶೈಕ್ಷಣಿಕ ಕಾರ್ಯಕ್ರಮ
ಶಿಕ್ಷಣದಿಂದ ಎರಡು ವರ್ಷ ವಂಚಿತರಾದ ಗ್ರಾಮೀಣ ಮತ್ತು ಪ.ಜಾ. ಮತ್ತು ಪ.ಪಂ. ಮಕ್ಕಳಿಗೆ ವಿಶೇಷ ಕಾರ್ಯಕ್ರಮ ರೂಪಿಸಬೇಕು. ನಗರ ಪ್ರದೇಶದ ಮಕ್ಕಳು ಹಾಗೂ ಉಳ್ಳವರ ಕುಟುಂಬದ ಮಕ್ಕಳು ಶಾಲೆಯ ಸೌಲಭ್ಯವಿಲ್ಲದೆಯೂ ತಮ್ಮ ಶೈಕ್ಷಣಿಕ ಸಾಧನೆಯನ್ನು ಸಾಧಿಸಿಕೊಳ್ಳಬಲ್ಲರು. ಕೋವಿಡ್ ಮಹಾಸೋಂಕಿನ ಸಂದರ್ಭದಲ್ಲಿ ಉಂಟಾಗಿರುವ ಸಮಾಜದ ಅಂಚಿನಲ್ಲಿರುವ ವಂಚಿತ ಕುಟುಂಬಗಳ ಮಕ್ಕಳ ಮತ್ತು ಡಿಜಿಟಲೈಸ್ಡ್ ಮಕ್ಕಳ ನಡುವಿನ ಶೈಕ್ಷಣಿಕ ಅಸಮಾನತೆಯನ್ನು ಊಹಿಸಿಕೊಳ್ಳುವುದು ಸಾಧ್ಯವಿಲ್ಲ. ಅಸಮಾನತೆಯನ್ನು ‘ಆರ್ಥಿಕ ದೌರ್ಜನ್ಯ’ ಎಂದು ಪರಿಗಣಿಸಲಾಗಿದೆ. ಈ ಬಗ್ಗೆ ನಮ್ಮ ಶಿಕ್ಷಣ ಮಂತ್ರಿಗಳಿಗೆ ರವಷ್ಟು ಕಾಳಜಿ ಇದ್ದಂತಿಲ್ಲ. ಇವರಿಗೆ ಉಳ್ಳವರ ಮಕ್ಕಳ ಶಿಕ್ಷಣದಲ್ಲಿ ವ್ಯತ್ಯಯವಾಗಬಾರದೆಂದು ಕಳೆದ ಎರಡು ವರ್ಷಗಳಿಂದ ‘ಪರೀಕ್ಷೆ-ಪರೀಕ್ಷೆ’ ಎಂದು ಹಲುಬುತ್ತಾ ಅವರ ಹಿತಾಸಕ್ತಿಗಾಗಿ ಶ್ರಮಿಸುತ್ತಿದ್ದಾರೆ. ನಮ್ಮ ರಾಜ್ಯದಲ್ಲಿ 1 ರಿಂದ 10ನೆಯ ತರಗತಿಯಲ್ಲಿ ಕಲಿಯುತ್ತಿರುವ ದಲಿತ ಮತ್ತು ಆದಿವಾಸಿ ಮಕ್ಕಳ ಸಂಖ್ಯೆಯ 25 ಲಕ್ಷ ಮೀರುತ್ತದೆ. ಈ ಮಕ್ಕಳಿಗೆ ಹೆಚ್ಚುವರಿ ಶಿಕ್ಷಣಕ್ಕೆ ಅಗತ್ಯವಾದ ವಿಶೇಷ ಪಠ್ಯಪುಸ್ತಕಗಳಿಗೆ, ಸಮವಸ್ತ್ರಗಳಿಗೆ, ಮಧ್ಯಾಹ್ನದ ಬಿಸಿಯೂಟಕ್ಕೆ ಹಾಗೂ ಪ್ರೋತ್ಸಾಹಕ ಧನಸಹಾಯ ನೀಡುವಂತಹ ‘ಮಹಾಸೋಂಕು ಸಂಬಂಧಿ ವಿಶೇಷ ಶೈಕ್ಷಣಿಕ ಕಾರ್ಯಕ್ರಮ’ವನ್ನು ಮುಂಬರುವ ಬಜೆಟ್ಟಿನಲ್ಲಿ ಸರ್ಕಾರ ಹಮ್ಮಿಕೊಳ್ಳಬೇಕು. ಈ ಬಗ್ಗೆ ಶಿಕ್ಷಣ ಇಲಾಖೆಯಾಗಲಿ, ಸರ್ಕಾರವಾಗಲಿ ಅಥವಾ ಆಳುವ ಪಕ್ಷವನ್ನು ಸೇರಿಸಿಕೊಂಡು ರಾಜಕೀಯ ಪಕ್ಷಗಳು ಕಿಂಚಿತ್ತೂ ಯೋಜಿಸಿಲ್ಲ, ಚರ್ಚೆ ನಡೆಸಿಲ್ಲ ಮತ್ತು ಈ ಸಮಸ್ಯೆಯನ್ನು ಗುರುತಿಸಿಲ್ಲ. ಈ ಕಾರ್ಯಕ್ಕಾಗಿ ಬಜೆಟ್ಟಿನಲ್ಲಿ ವಿಶೇಷ ಅನುದಾನ ಕನಿಷ್ಟ ರೂ. 10 ಸಾವಿರ ಕೋಟಿ ಮೀಸಲಿಡಬೇಕು. ಈ ಕಾರ್ಯಕ್ರಮವನ್ನು ನಾವು ಹಮ್ಮಿಕೊಳ್ಳದಿದ್ದರೆ, ಹೆಚ್ಚು ಅನುದಾನ ನೀಡದಿದ್ದರೆ ಸಮಾಜದಲ್ಲಿ ಶೈಕ್ಷಣಿಕ ಅಸಮಾನತೆಯು ತೀವ್ರಗೊಳ್ಳುವ ಸಾಧ್ಯತೆಯಿದೆ. ಮಹಾಸೋಂಕಿನ ವಿರುದ್ಧದ ಯುದ್ಧ ನಿಜಕ್ಕೂ ಈಗ ಆರಂಭವಾಗಬೇಕಾಗಿದೆ. ಮಹಾಸೋಂಕು ಮರೆಯಾಗಿರಬಹುದು. ಆದರೆ ಅದು ಸಮಾಜದಲ್ಲಿ ಉಂಟು ಮಾಡಿರುವ ಆರೋಗ್ಯ, ಉದ್ಯೋಗ, ವರಮಾನ ಮತ್ತು ಶೈಕ್ಷಣಿಕ ರಂಗಗಳಿಗೆ ಸಂಬಂಧಿಸಿದ ಅಸಮಾನತೆ ರಣಭಯಂಕರವಾಗಿದೆ. ಈ ಬಗ್ಗೆ ಸರ್ಕಾರ ತಜ್ಞರ ಸಲಹೆ-ಮಾರ್ಗದರ್ಶನ ಪಡೆಯಬೇಕು. ಇದು ‘ಪಠ್ಯಪುಸ್ತಕಗಳಲ್ಲಿನ ನಿರ್ದಿಷ್ಟ ಪಾಠಗಳನ್ನು ತೆಗೆದು ಹಾಕುವುದರಿಂದ ಅಥವಾ ಮಕ್ಕಳಲ್ಲಿ ಧಾರ್ಮಿಕ ಅಮಲನ್ನು ತುಂಬುದರಿಂದ’ ಸಮಸ್ಯೆಯನ್ನು ಪರಿಹರಿಸುವುದು ಸಾಧ್ಯವಿಲ್ಲ. ಒಕ್ಕೂಟ ಬಜೆಟ್ಟಿನಲ್ಲಿ ಇದರ ಬಗ್ಗೆ ಮಾತನಾಡಲಾಗಿದೆ. ಆದರೆ ಇದಕ್ಕೆ ಪರಿಹಾರವನ್ನು ಅದು ವಿಷಯವಾರು 200 ಟಿ.ವಿ ವಾಹಿನಿಗಳನ್ನು ಆರಂಭಿಸುವ ಬಗ್ಗೆ ಯೋಚಿಸುತ್ತಿದೆ. ಇದು ಸಮಸ್ಯೆಗೆ ಪರಿಹಾರವಲ್ಲ. ಏಕೆಂದರೆ ನಮ್ಮಲ್ಲಿ ಇಂದು ‘ಡಿಜಿಟಲ್ ಅಸಮಾನತೆ’ ತೀವ್ರವಾಗಿದೆ.
ಪ್ರಾದೇಶಿಕ ಅಸಮಾನತೆ ನಿವಾರಣಾ ಕಾರ್ಯಕ್ರಮ
ಭಾರತದಲ್ಲಿ ಬಹುಮುಖಿ ಬಡತನದ ವರದಿಯನ್ನು ನೀತಿ ಆಯೋಗವು 2022ರಲ್ಲಿ ಬಿಡುಗಡೆ ಮಾಡಿದೆ. ಇದರ ಪ್ರಕಾರ ಕರ್ನಾಟಕದಲ್ಲಿ 09 ಜಿಲ್ಲೆಗಳಲ್ಲಿ ಬಹುಮುಖಿ ಬಡತನವು ಶೇ. 20 ಕ್ಕಿಂತ ಅಧಿಕವಿದೆ. ಇವುಗಳಲ್ಲಿ ಬೆಳಗಾವಿ ವಿಭಾಗದಲ್ಲಿ 04 ಜಿಲ್ಲೆಗಳಿದ್ದರೆ ಕಲ್ಯಾಣ ಕರ್ನಾಟಕ ವಿಭಾಗದಲ್ಲಿ 5 ಜಿಲ್ಲೆಗಳಿವೆ. ಯಾದಗಿರಿ ಜಿಲ್ಲೆಯಲ್ಲಿ ಇದು ಶೇ. 41.67ರಷ್ಟಿದ್ದರೆ ರಾಯಚೂರು ಜಿಲ್ಲೆಯಲ್ಲಿ ಇದು ಶೇ. 32.19ರಷ್ಟಿದೆ. ಇದೇ ರೀತಿಯಲ್ಲಿ 2019-20ರ ಎನ್.ಎಫ್.ಎಚ್.ಎಸ್. 5 ವರದಿ ಪ್ರಕಾರ 6 ರಿಂದ 59 ತಿಂಗಳು ವಯೋಮಾನದ ಒಟ್ಟು ಮಕ್ಕಳಲ್ಲಿ ಅನಿಮಿಯ ಎದುರಿಸುತ್ತಿರುವ ಮಕ್ಕಳ ಪ್ರಮಾಣ ಶೇ. 70 ಕ್ಕಿಂತ ಅಧಿಕವಿರುವ ರಾಜ್ಯದಲ್ಲಿನ 6 ಜಿಲ್ಲೆಗಳಲ್ಲಿ 02 ಬೆಳಗಾವಿ ವಿಭಾಗದಲ್ಲಿದ್ದರೆ 04 ಕಲ್ಯಾಣ ಕರ್ನಾಟಕ ವಿಭಾಗದಲ್ಲಿದೆ. ರಾಜ್ಯದಲ್ಲಿ 15 ರಿಂದ 49 ವಯೋಮಾನದ ಒಟ್ಟು ಮಹಿಳೆಯರಲ್ಲಿ ಅನಿಮಿಯ ಎದುರಿಸುತ್ತಿರುವ ಮಹಿಳೆಯರ ಪ್ರಮಾಣ ಶೇ. 50ಕ್ಕಿಂತ ಅಧಿಕವಿರುವ ಜಿಲ್ಲೆಗಳು 11. ಇವುಗಳಲ್ಲಿ 06 ಬೆಳಗಾವಿ ವಿಭಾಗದಲ್ಲಿದ್ದರೆ 05 ಕಲ್ಯಾಣ ಕರ್ನಾಟಕ ವಿಭಾಗದಲ್ಲಿವೆ. ಸದ್ಯದಲ್ಲಿನ ಪ್ರಾದೇಶಿಕ ಅಸಮಾನತೆ ಚಿತ್ರವನ್ನು ಇದಕ್ಕಿಂತ ಬೇರೆ ರೂಪದಲ್ಲಿ ಮಂಡಿಸುವುದು ಸಾಧ್ಯವಿಲ್ಲ. ಈ ಬಗ್ಗೆ ಸರ್ಕಾರವು ಮೌನ ವಹಿಸಿದೆ. ಇವೆರಡೂ ಸಂಗತಿಗಳಲ್ಲಿ ಕಲ್ಯಾಣ ಕರ್ನಾಟಕ ತೀವ್ರ ಸಂಕಷ್ಟ ಎದುರಿಸುತ್ತಿದೆ. ಈ ವಿಭಾಗದಲ್ಲಿನ ರಾಜಕಾರಣವೂ ಇದರ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಅಭಿವೃದ್ಧಿ ಮಂಡಳಿಗಳಿಗೆ ‘ಅಭಿವೃದ್ಧಿ ಎಂದರೆ ಜನರು’ ಎಂಬುದರ ಬಗ್ಗೆ ನಂಬಿಕೆಯಿಲ್ಲ. ಉದಾ: ಎಂಟು ವರ್ಷಗಳ ವಿಶೇಷ ಅಭಿವೃದ್ಧಿ ಯೋಜನೆಯಲ್ಲಿ ಕಳೆದ 15 ವರ್ಷಗಳಲ್ಲಿ ವೆಚ್ಚವಾದ ಮೊತ್ತ ರೂ. 27326.26 ಕೋಟಿ. ಇದರಲ್ಲಿ ಶಿಕ್ಷಣ ಮತ್ತು ಆರೋಗ್ಯಕ್ಕೆ ನೀಡಿರುವ ಅನುದಾನ ಶೇ. 9.78. ಆದರೆ ಭಾರಿ ನೀರಾವರಿ, ಪಿ.ಡಬ್ಲು.ಡಿ.ಗಳಿಗೆ ನೀಡಿರುವ ಅನುದಾನದ ಪ್ರಮಾಣ ಶೇ. 30.84. ಕಲ್ಯಾಣ ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ಮಂಡಳಿಯಲ್ಲಿ ಶೇ. 70ರಷ್ಟು ಕಾಮಗಾರಿ-ಕಾಂಟ್ರಾಕ್ಟ್ ಗಿರಿಗಳಿಗೆ ಎಂದು ನಿಯಮವನ್ನೇ ಮಾಡಲಾಗಿದೆ. ಈ ಕ್ರಮಗಳ ಮೂಲಕ ಹಿಂದುಳಿದ ಪ್ರದೇಶಗಳ ದುಸ್ಥಿತಿಯನ್ನು ನಿವಾರಿಸುವುದು ಸಾಧ್ಯವಿಲ್ಲ. ಹಿಂದುಳಿದಿರುವ ಪ್ರದೇಶದಲ್ಲಿ ಅಗತ್ಯವಾಗಿರುವುದು ಶಿಕ್ಷಣ ಮತ್ತು ಆರೋಗ್ಯ ಕಾರ್ಯಕ್ರಮಗಳು, ಈಗಲೂ ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಪಿಯುಸಿ ಪರೀಕ್ಷಾ ಫಲಿತಾಂಶ ಶೇ. 50 ಮೀರಿಲ್ಲ. ಇವೆಲ್ಲವೂ ಪುರುಷ-ಪ್ರಧಾನ ಕಾರ್ಯಕ್ರಮಗಳಾಗಿವೆ. ಪ್ರಾದೇಶಿಕ ಅಭಿವೃದ್ಧಿ ಮಂಡಳಿಯ ಕಾರ್ಯಕ್ರಮಗಳಲ್ಲಿ ಮಹಿಳೆಯರು ಸಂಪೂರ್ಣವಾಗಿ ಕಾಣೆಯಾಗಿದ್ದಾರೆ.
ನಮ್ಮ ರಾಜ್ಯದಲ್ಲಿ, ಅದರಲ್ಲೂ ಹಿಂದುಳಿದ ಪ್ರದೇಶಗಳ ಅಭಿವೃದ್ಧಿಯನ್ನು ಪರಿಭಾವಿಸಿಕೊಂಡಿರುವ ಕ್ರಮವೇ ಸಮಸ್ಯಾತ್ಮಕವಾಗಿದೆ. ಈ ದೃಷ್ಟಿಕೋನವನ್ನು ಬದಲಾಯಿಸಬೇಕು. ಕೃಷಿ ಎಂದರೆ ಭಾರಿ ನೀರಾವರಿ ಯೋಜನೆ ಎಂಬ ಪ್ರಣಾಳಿಕೆಯನ್ನು ಪಕ್ಕಕ್ಕೆ ಬಿಸಾಕಬೇಕು. ಒಣಭೂಮಿ ಬೇಸಾಯಕ್ಕೆ ಹೆಚ್ಚು ಗಮನ ನೀಡಬೇಕು. ನಮ್ಮ ರಾಜ್ಯದ 2022-23ನೆಯ ಸಾಲಿನ ಬಜೆಟ್ಟಿನಲ್ಲಿ ಶಿಕ್ಷಣ(ವಿಶೇಷ ಶೈಕ್ಷಣಿಕ ಕಾರ್ಯಕ್ರಮ), ಆರೋಗ್ಯ, ಒಣಭೂಮಿ ಬೇಸಾಯ, ಮಹಿಳೆಯರ ಮತ್ತು ಮಕ್ಕಳ ಪೌಷ್ಟಿಕಾ ಕಾರ್ಯಕ್ರಮ, ಆಹಾರ ಭದ್ರತೆ, ಉದ್ಯೋಗಗಳನ್ನು ಆದ್ಯತೆಯಾಗಿ ಪರಿಗಣಿಸಬೇಕು.
ಉದ್ಯೋಗದ ಬಗ್ಗೆ ಮಾತನಾಡುವಾಗ ನಾವು ನಗರ ಪ್ರದೇಶದ ಬಗ್ಗೆ ಗಮನ ನೀಡಬೇಕು. ಅನೇಕ ತಜ್ಞರು(ಜೀನ್‌ಡ್ರೀಜ್, ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ‘ಸ್ಟೇಟ್ ಆಫ್ ವರ್ಕಿಂಗ್ ಇಂಡಿಯಾ’ ವರದಿಗಳು) ನರೇಗ ರೀತಿಯ ಉದ್ಯೋಗ ಖಾತ್ರಿ ಯೋಜನೆಯನ್ನು ನಗರ ಪ್ರದೇಶದಲ್ಲಿ ಆರಂಭಿಸಲು ಒತ್ತಾಯಿಸುತ್ತಿದ್ದರೆ. ಈಗಾಗಲೆ ಕೇರಳ(2010), ಒಡಿಸ್ಸಾ(2020). ಹಿಮಾಚಲ ಪ್ರದೇಶ(2020). ಜಾರ್ಖಂಡ್(2020) ರಾಜ್ಯಗಳು ಇಂತಹ ನಗರ ಉದ್ಯೋಗ ಖಾತ್ರಿ ಯೋಜನೆಗಳನ್ನು ಆರಂಭಿಸಿವೆ. ಜೀನ್‌ಡ್ರೀಜ್ ಅವರು ಈ ಬಗ್ಗೆ ವಿಶೇಷ ಕಾರ್ಯ ಯೋಜನೆಯನ್ನು ತಯಾರಿಸಿದ್ದಾರೆ. ನಗರ ಪ್ರದೇಶಗಳಲ್ಲಿ ಸಾರ್ವಜನಿಕ ಸ್ಥಳಗಳಾದ ಶಾಲೆಗಳು, ಆಸ್ಪತ್ರೆಗಳು, ಬಸ್ ನಿಲ್ದಾಣಗಳು ರೈಲು ನಿಲ್ದಾಣಗಳು, ಪಾರ್ಕುಗಳು, ಸರ್ಕಾರಿ ಕಚೇರಿಗಳು ಮುಂತಾದವುಗಳಲ್ಲಿ ಸ್ವಚ್ಛತೆಯ ಕಾರ್ಯವನ್ನು ನಗರ ಪ್ರದೇಶಗಳಲ್ಲಿನ ನಿರುದ್ಯೋಗಿಗಳಿಗೆ ನೀಡಬಹುದು. ಇದರಲ್ಲಿ ಮಹಿಳೆಯರಿಗೆ ಆದ್ಯತೆ ಇರಬೇಕು. ನಮ್ಮ ರಾಜ್ಯದಲ್ಲಿಯೂ ಇಂತಹ ಕಾರ್ಯ ಯೋಜನೆಯ ಅಗತ್ಯವಿದೆ. ಮುಂದಿನ 2022-23ರ ಬಜೆಟ್ಟಿನಲ್ಲಿ ಇಂತಹ ವಿಶಿಷ್ಟವಾದ ಕಾರ್ಯಕ್ರಮಗಳ ಬಗ್ಗೆ ಸರ್ಕಾರ ಯೋಚಿಸಬೇಕು. ಮಠಮಾನ್ಯಗಳಿಗೆ, ದೇವಾಲಯಗಳಿಗೆ, ಕೋಮು ಸಂಘಟನೆಗಳಿಗೆ ನೀಡುವ ಅನುದಾನವನ್ನು ನಿಲ್ಲಿಸಿ ತುರ್ತಾಗಿ ರಾಜ್ಯಕ್ಕೆ ಅಗತ್ಯವಿರುವ ಕಾರ್ಯಯೋಜನೆಗಳ ಬಗ್ಗೆ ಬಜೆಟ್ಟಿನಲ್ಲಿ ಅವಕಾಶ ನೀಡಬೇಕು.