ಜಿಪಂ ತಾಪಂ ಚುನಾವಣೆ : ಗರಿಗೆದರಿದ ರಾಜಕೀಯ ಚಟುವಟಿಕೆ

ಬೆಂಗಳೂರು : ಜಿಪಂ ಮತ್ತು ತಾಪಂ ಸದಸ್ಯ ಸ್ಥಾನಗಳ ಚುನಾವಣೆಗೆ  ಮೀಸಲಾತಿ  ಕರುಡು ಪ್ರಕಟವಾಗುತ್ತಿದ್ದಂತೆ ರಾಜ್ಯದಲ್ಲಿ ರಾಜಕೀಯದ ಚಟುವಟಿಕೆಯ ಕಾವು ಏರತೊಡಗಿದೆ. ರಾಜ್ಯ ಚುನಾವಣಾ ಆಯೋಗ ಮೀಸಲಾತಿ ಕರುಡು ಆದೇಶ ಹೊರಡಿಸಿರುವುದರಿಂದ ಕಾಂಗ್ರೆಸ್‌, ಜೆಡಿಎಸ್‌ ಮತ್ತು ಬಿಜೆಪಿ ಸೇರಿದಂತೆ ಇತರ ರಾಜಕೀಯ ಪಕ್ಷಗಳ ಮುಖಂಡರು ಹಾಗೂ ರಾಜಕೀಯಾಸ್ತಕರು ಚುನಾವಣಾ ಗುಂಗಿನಲ್ಲಿ ತೇಲುತ್ತಿದ್ದಾರೆ.

ವಿಧಾನಸಭೆ ಉಪ ಚುನಾವಣೆ, ನಗರ ಸ್ಥಳೀಯ ಸಂಸ್ಥೆ ಚುನಾವಣೆ, ಗ್ರಾಮ ಪಂಚಾಯಿತಿ ಚುನಾವಣೆ ಬಳಿಕ ಇದೀಗ ತಾಲೂಕು, ಜಿಲ್ಲಾ ಪಂಚಾಯಿತಿ ಚುನಾವಣೆಗೆ ರಾಜಕೀಯ ಪಕ್ಷಗಳು ಮೈಕೊಡವಿ ನಿಂತಿವೆ. ಎಲ್ಲಾ ಪಕ್ಷಗಳಲ್ಲೂ ಬಿರುಸಿನ ಚಟುವಟಿಕೆಗಳು ಆರಂಭಗೊಂಡಿವೆ. ಹಲವು ಜನರು ತಮಗೆ ಯಾವ ಪಕ್ಷದಿಂದ ಟಿಕೆಟ್‌ ನೀಡುತ್ತೀರಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸಮೀಕ್ಷೆಗೆ ಮುಂದಾಗಿದ್ದಾರೆ. ಕೆಲವರು ಗೆಲುವು ಪಕ್ಕಾ ಎಂದರೆ ಕೆಲವರು ಪೂಪೋಟಿ ನೀಡುವ ಕ್ಷೇತ್ರ ಎಂದೆಲ್ಲ ಪ್ರಚಾರ ಆರಂಭಿಸಿರುವುದು ಚುನಾವಣೆಯ ಗುಂಗು ಎಷ್ಟು ಹಿಡಿದಿದೆ ಎಂಬುದನ್ನು ತೋರಿಸುತ್ತದೆ.

ಕೋವಿಡ್ ಕಾರಣದಿಂದ 6 ತಿಂಗಳು ಚುನಾವಣೆ ಮುಂದೂಡುವಂತೆ ಸರ್ಕಾರ ಮನವಿ ಮಾಡಿಕೊಂಡಿದೆ. ಸೀಮಾ ಪುನರ್ವಿಂಗಡಣೆ, ಮೀಸಲು ನಿಗದಿ ಕಾರಣಗಳಿಂದ ಜಿಪಂ ಮತ್ತು ತಾಪಂ ಚುನಾವಣೆಗಳು ಅಕ್ಟೋಬರ್ ಅಥವಾ ನವೆಂಬರ್​ನಲ್ಲಿ ನಡೆಯುವ ಸಾಧ್ಯತೆ ದಟ್ಟವಾಗಿದೆ. ಈ ನಡುವೆ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್​ನಲ್ಲಿ ಚುನಾವಣಾ ಸಿದ್ಧತೆ ಶುರುವಾಗಿದೆ. ಮೀಸಲು ಕರಡು ಪ್ರಕಟಗೊಂಡಿರುವುದರಿಂದ ಗ್ರಾಮೀಣ ಪ್ರದೇಶದಲ್ಲಿ ರಾಜಕೀಯ ಗರಿಗೆದರಿದೆ. ಟಿಕೆಟ್ ಆಕಾಂಕ್ಷಿಗಳು ತಮ್ಮಪಕ್ಷಗಳ ನೇತಾರರ ಬೆನ್ನು ಬಿದ್ದಿದ್ದಾರೆ. ಸ್ಥಳೀಯ ಸಂಸ್ಥೆಗಳಲ್ಲಿ ಅಧಿಕಾರ ಹಿಡಿದರೆ 2023ರ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಲೀಸು ಎಂಬ ದೃಷ್ಟಿಯಿಂದ ಈ ಚುನಾವಣೆಯತ್ತ ಎಲ್ಲ ಪಕ್ಷಗಳ ಕಣ್ಣು ನೆಟ್ಟಿದೆ.

ರಾಜ್ಯದಲ್ಲಿ  3,285 ತಾಪಂ ಮತ್ತು 1,191 ಜಿ.ಪಂ. ಕ್ಷೇತ್ರಗಳಿಗೆ ರಾಜ್ಯ ಚುನಾವಣಾ ಆಯೋಗ ಮೀಸಲು ಕರಡು ಪ್ರಕಟಿಸಿ, ಆಕ್ಷೇಪಣೆ ಆಹ್ವಾನಿಸಿದೆ. ಜುಲೈ 08 ರಂದು ಆಕ್ಷೇಪಣೆ ಸಲ್ಲಿಸಲು ಅಂತಿಮ ದಿನವಾಗಿದೆ.  ಮೀಸಲು ಅಂತಿಮ ಪಟ್ಟಿ ಪ್ರಕಟಿಸಿ 45 ದಿನ ತರುವಾಯ ವೇಳಾಪಟ್ಟಿ ಪ್ರಕಟಿಸಬಹುದು.

ಎಲ್ಲ ತಾ.ಪಂಗಳಿಗೆ ಹೊಸದಾಗಿ ಮೀಸಲು ನಿಗದಿಪಡಿಸಿರು ವುದರಿಂದ ಮೀಸಲು ಪುನರಾವರ್ತನೆಯಾಗುವ ಸಾಧ್ಯತೆಗಳಿಲ್ಲ ಎಂದು ಮೂಲಗಳು ಖಚಿತಪಡಿಸಿವೆ. ಆದಾಗ್ಯೂ ಅನೇಕರು ಮೀಸಲು ನಿಗದಿಗೆ ಆಕ್ಷೇಪಣೆ ಸಲ್ಲಿಸಲಿದ್ದಾರೆ. ಇವುಗಳನ್ನು ಆಯೋಗ ಪರಿಶೀಲಿಸಿ ತೀರ್ಪು ಪ್ರಕಟಿಸಲಿದೆ. ಆಡಳಿತ ಪಕ್ಷದ ಕೆಲವು ಶಾಸಕರೇ ಮೀಸಲು ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದು, ನ್ಯೂನತೆ ಸರಿಪಡಿಸುವಂತೆ ಗ್ರಾಮೀಣಾಭಿವೃದ್ಧಿ ಸಚಿವರ ಮೇಲೆ ಒತ್ತಡ ತಂದಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *