ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾರ್ಚ್ 4 ರಂದು ತಮ್ಮ ಚೊಚ್ಚಲ ಬಜೆಟ್ ಮಂಡನೆ ಮಾಡುವ ಸಾಧ್ಯತೆ ಇದೆ.
ಫೆಬ್ರವರಿ 9 ರಿಂದ ಸಿಎಂ ವಿವಿಧ ಇಲಾಖೆಗಳ ಬಜೆಟ್ ಪೂರ್ವಭಾವಿ ಸಭೆ ನಡೆಸುತ್ತಿದ್ದಾರೆ. ಇದಾದ ನಂತರ ಸಂಘ ಸಂಸ್ಥೆಗಳ ಜೊತೆಗೆ ಸಭೆ ನಡೆಸಿ ಪ್ರಸ್ತಾವನೆ ಸ್ವೀಕರಿಸಲಿದ್ದಾರೆ.
ಸೋಮವಾರದಿಂದ ವಿಧಾನಮಂಡಲದ ಜಂಟಿ ಅಧಿವೇಶನ ಆರಂಭವಾಗಲಿದೆ. ಫೆಬ್ರವರಿ 25ರವರೆಗೆ ವಿಧಾನಮಂಡಲ ಜಂಟಿ ಅಧಿವೇಶನ ನಡೆಯಲಿದ್ದು, ಮಾರ್ಚ್ 4ರಂದು ಬಜೆಟ್ ಅಧಿವೇಶನ ಶುರುವಾಗಲಿದೆ ಎನ್ನಲಾಗಿದೆ.
ಅಧಿವೇಶನದಲ್ಲಿ ಎರಡು ವಿಧೇಯಕಗಳು ಮಂಡನೆಯಾಗಲಿವೆ. ಜೊತೆಗೆ ಇನ್ನೂ ಕೆಲ ವಿಧೇಯಕಗಳ ಮಂಡನೆಗೆ ಸರ್ಕಾರದ ವತಿಯಿಂದ ಸಿದ್ಧತೆ ನಡೆದಿದೆ. ಸುಮಾರು 2,000 ಕ್ಕೂ ಹೆಚ್ಚು ಪ್ರಶ್ನೆಗಳು ಸರ್ಕಾರದಿಂದ ಉತ್ತರ ಬಯಸಿ ಬಂದಿವೆ. ಅಧಿವೇಶನ ವೀಕ್ಷಿಸಲು ಈ ಬಾರಿ ಸಾರ್ವಜನಿಕರಿಗೂ ಅವಕಾಶ ಕಲ್ಪಿಸಲಾಗಿದೆ.
ಮುಂದಿನ ವರ್ಷ ವಿಧಾನಸಭೆ ಚುನಾವಣೆ ಇರುವುದರಿಂದ ಈ ಬಾರಿ ಬಜೆಟ್ ನಲ್ಲಿ ಜನಪ್ರಿಯ ಯೋಜನೆಗಳ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ರಾಜ್ಯ ಬಜೆಟ್ ಮೇಲೆ ಯಾವುದೇ ನಿರೀಕ್ಷೆ ಇಲ್ಲ : 2022-23ನೇ ಸಾಲಿನ ರಾಜ್ಯ ಬಜೆಟ್ ಮೇಲೆ ಯಾವುದೇ ನಿರೀಕ್ಷೆ ಇಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಸಿದ್ದರಾಮಯ್ಯ, ಸರ್ಕಾರ ಸಾಲದ ಸುಳಿಯಲ್ಲಿ ಸಿಲುಕಿದೆ. 4 ಲಕ್ಷದ 57 ಸಾವಿರ ಕೋಟಿ ಸಾಲ ಮಾಡಿದ್ದಾರೆ.
ನಾನಿದ್ದಾಗ 2 ಲಕ್ಷದ 15 ಸಾವಿರ ಕೋಟಿ ಸಾಲ ಇತ್ತು. ಇವರು ಮೂರು ವರ್ಷದಲ್ಲಿ ಇದರ ಡಬಲ್ ಸಾಲ ಮಾಡಿದ್ದಾರೆ. ಇವರಿಂದ ಜನಪರ ಬಜೆಟ್ ನಿರೀಕ್ಷೆ ಹೇಗೆ ಸಾಧ್ಯ? ಸಾಮಾನ್ಯವಾಗಿ ರಾಜ್ಯಪಾಲರು ಇವರು ಬರೆದುಕೊಟ್ಟಿದ್ದನ್ನು ಭಾಷಣ ಮಾಡುತ್ತಾರೆ ಎಂದು ಪ್ರಶ್ನಿಸಿದ್ದಾರೆ.
ಕೇಂದ್ರಕ್ಕೆ 135 ಲಕ್ಷ 87 ಸಾವಿರ ಕೋಟಿ ಸಾಲ ಇದೆ. ಈಗ 11 ಲಕ್ಷದ 59 ಸಾವಿರ ಕೋಟಿ ಸಾಲ ಮಾಡುವುದಾಗಿ ಹೇಳಿದ್ದಾರೆ. ಕೇಂದ್ರ 9 ಲಕ್ಷ ಕೋಟಿ ಬಡ್ಡಿ ಕಟ್ಟುತ್ತಿದೆ. ಇದೇನಾ ಸಬ್ ಕಾ ಸಾಥ್ ಸಬ್ ಕಾ ವಿಕಾಸ್? ಅಚ್ಚೇ ದಿನ್ ಆಯೆಂಗೆ ಇದೇನಾ ಎಂದು ವ್ಯಂಗ್ಯವಾಡಿದ್ದಾರೆ.