ಕರ್ನಾಟಕ ರಾಜ್ಯೋತ್ಸವ – ರಾಜ್ಯದ ನೆಲ, ಜಲ, ಭಾಷೆ, ಸಂಪತ್ತನ್ನು ರಕ್ಷಿಸಲು ಪಣ ತೊಡೋಣ

-ಸಿ.ಸಿದ್ದಯ್ಯ

ರಾಜ್ಯೋತ್ಸವ ಆಚರಣೆ ಎಂದರೆ ಬರೀ ಸಂಭ್ರಮ ಸಡಗರಗಳಿಗಷ್ಟೇ ಸೀಮಿತವಾಗಬಾರದಲ್ಲವೇ? ರಾಜ್ಯದ ನೆಲ, ಜಲ, ಕನ್ನಡ ಸೇರಿದಂತೆ ಈ ನೆಲಮೂಲದ ಹಲವು ಭಾಷೆಗಳು, ಇಲ್ಲಿನ ಸಂಸ್ಕೃತಿ, ರಾಜ್ಯದ ಸಂಪತ್ತು, ರೈತರ ಭೂಮಿ, ಸಾರ್ವಜನಿಕ ಉದ್ಯಮಗಳು, ಇವುಗಳ ರಕ್ಷಣೆಗೆ ಕರ್ನಾಟಕ ರಾಜ್ಯೋತ್ಸವ ಆಚರಣೆಯ ಸಂದರ್ಭದಲ್ಲಿ ಪಣ ತೊಡಬೇಕಲ್ಲವೇ? ಒಕ್ಕೂಟ ವ್ಯವಸ್ಥೆಯಲ್ಲಿ ಸಂವಿಧಾನ ನೀಡಿರುವ ರಾಜ್ಯಗಳ ಹಕ್ಕುಗಳನ್ನು ಕಸಿದು ಕೊಳ್ಳುತ್ತಿರುವ ಒಕ್ಕೂಟ ಸರ್ಕಾರದ ನೀತಿಗಳ ಕುರಿತು ರಾಜ್ಯದ ಜನರನ್ನು ಎಚ್ಚರಿಸುವ ಕೆಲಸ ನಡೆಯಬೇಕಲ್ಲವೇ? ಒಂದು ದೇಶ-ಒಂದು ಭಾಷೆ ಹೆಸರಿನಲ್ಲಿ ಹಿಂದಿ ಭಾಷೆಯನ್ನು ಹೇರುವುದರ ವಿರುದ್ದ ಜನರನ್ನು ಎಚ್ಚರಿಸಬೇಕಲ್ಲವೇ?

ನವೆಂಬರ್ ಒಂದು ಕರ್ನಾಟಕ ರಾಜ್ಯೋತ್ಸವ. ಅಂದು, ರಾಜ್ಯ ಸರ್ಕಾರವೂ ರಾಜ್ಯೋತ್ಸವ ಆಚರಣೆ ಮಾಡುತ್ತದೆ. ಹಲವು ಸಾಧಕರನ್ನು ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿಗಳನ್ನೂ ಸರ್ಕಾರ ಕೊಡುತ್ತದೆ. ಕನ್ನಡಿಗರು ಮಾತ್ರವಲ್ಲದೆ ರಾಜ್ಯದ ಎಲ್ಲಾ ಭಾಷೆಯ ಜನರು ಬೆರೆತು ಕರ್ನಾಟಕದಲ್ಲೆಡೆ ಸಂಭ್ರಮದಿಂದ ರಾಜ್ಯೋತ್ಸವ ಕಾರ್ಯಕ್ರಮ ನಡೆಸುತ್ತಾರೆ. ಈ ಬಾರಿ ದೀಪಾವಳಿ ಹಬ್ಬದ ಸಡಗರವೂ ಇದರ ಜೊತೆ ಸೇರಿಕೊಂಡಿದೆ. ಹಲವರು ನವೆಂಬರ್ ತಿಂಗಳ ಕೊನೆಯವರೆಗೂ ರಾಜ್ಯೋತ್ಸವ ಆಚರಿಸುತ್ತಾರೆ. ರಾಜ್ಯೋತ್ಸವ ಆಚರಣೆಯ ಪ್ರಯುಕ್ತ ಆರ್ಕೆಸ್ಟ್ರಾ, ಸಂಗೀತ, ನೃತ್ಯ, ನಾಟಕ, ಹಾಡುಗಳಂತಹ ಮನೋರಂಜನೆ ಕಾರ್ಯಕ್ರಮಗಳು ನಡೆಯುತ್ತವೆ. ಸಿಹಿ ಹಂಚಿ ಸಂಭ್ರಮಿಸುತ್ತಾರೆ. ರಾಜ್ಯೋತ್ಸವ ಬರೀ ಆಚರಣೆಗಷ್ಟೇ ಸೀಮಿತಗೊಳಿಸುವುದು ಸರಿಯೇ ಎಂದು ನಮ್ಮನ್ನು ನಾವು ಪ್ರಶ್ನಿಸಿಕೊಳ್ಳಬೇಕಾಗಿದೆ.

ರಾಜ್ಯದ ನೆಲ, ಜಲ, ಕನ್ನಡ ಸೇರಿದಂತೆ ಈ ನೆಲಮೂಲದ ಹಲವು ಭಾಷೆಗಳು, ಇಲ್ಲಿನ ಸಂಸ್ಕೃತಿ, ರಾಜ್ಯದ ಸಂಪತ್ತು, ರೈತರ ಭೂಮಿ, ಅರಣ್ಯ ಸಂಪತ್ತು, ಪ್ರಕೃತಿ ಸಂಪತ್ತು, ಸಾರ್ವಜನಿಕ ಉದ್ಯಮಗಳು, ನಮ್ಮದೇ ರಸ್ತೆಗಳು … ಇವುಗಳ ರಕ್ಷಣೆಗೆ ರಾಜ್ಯೋತ್ಸವ ಆಚರಣೆಯ ಸಂದರ್ಭದಲ್ಲಿ ಪಣ ತೊಡಬೇಕಲ್ಲವೇ? ಒಕ್ಕೂಟ ವ್ಯವಸ್ಥೆಯಲ್ಲಿ ಸಂವಿಧಾನ ನೀಡಿರುವ ರಾಜ್ಯಗಳ ಹಕ್ಕುಗಳನ್ನು ಕಸಿದು ಕೊಳ್ಳುತ್ತಿರುವ ಒಕ್ಕೂಟ ಸರ್ಕಾರದ ನೀತಿಗಳ ಕುರಿತು ರಾಜ್ಯದ ಜನರನ್ನು ಎಚ್ಚರಿಸುವ ಕೆಲಸ ನಡೆಯಬೇಕಲ್ಲವೇ? ‘ಒಂದು ದೇಶ-ಒಂದು ಭಾಷೆ’ ಹೆಸರಿನಲ್ಲಿ ಹಿಂದಿ ಭಾಷೆಯನ್ನು ಹೇರುವುದರ ಮೂಲಕ ಕನ್ನಡದಂಥ ಪ್ರಾದೇಶಿಕ ಮತ್ತು ಸ್ಥಳೀಯ ಭಾಷೆಗಳನ್ನು ನಾಶ ಮಾಡುವುದರ ವಿರುದ್ದ ಜನರನ್ನು ಎಚ್ಚರಿಸಬೇಕಲ್ಲವೇ? ಕರ್ನಾಟಕ

ಇದನ್ನೂ ಓದಿ: 69 ಸಾಧಕರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ

ನವ ಉದಾರವಾದಿ ನೀತಿಗಳು, ಮುಕ್ತ ಆರ್ಥಿಕ ನೀತಿಗಳ ಜಾರಿಯ ಬಿರುಗಾಳಿಗೆ ಸಿಕ್ಕು ಹಾರಿಹೋಗುತ್ತಿರುವ ರಾಜ್ಯದ ಜನರ ಬದುಕನ್ನು ರಕ್ಷಿಸಲು ಪಣ ತೊಡಬೇಕಲ್ಲವೇ? ರಾಜ್ಯದೊಳಗಿನ ಪ್ರಾದೇಶಿಕ ಅಸಮಾನತೆ, ಜನರ ನಡುವಿನ ಅಗಾಧವಾದ ಆರ್ಥಿಕ ಅಸಮಾನತೆಯನ್ನು ಕಡಿಮೆ ಮಾಡಲು ಪಣ ತೊಡಬೇಕಲ್ಲವೇ? ಕರ್ನಾಟಕ

ಒಕ್ಕೂಟ ತತ್ವದ ಮಹತ್ವ ;

ಭಾರತದಲ್ಲಿ ಒಕ್ಕೂಟ ತತ್ವ ಏಕೆ ಮುಖ್ಯವಾದುದು ಎಂಬುದಕ್ಕೆ ಕೆಲವು ಪ್ರಮುಖ ಕಾರಣಗಳು ಇಲ್ಲಿವೆ: ಭಾರತವು ವೈವಿಧ್ಯಮಯ ಸಂಸ್ಕೃತಿಗಳು, ಭಾಷೆಗಳು, ಧರ್ಮಗಳು ಮತ್ತು ಜನಾಂಗೀಯ ಗುಂಪುಗಳನ್ನು ಹೊಂದಿರುವ ವೈವಿಧ್ಯಮಯ ದೇಶವಾಗಿದೆ. ಒಕ್ಕೂಟ ತತ್ವವು ಪ್ರತಿಯೊಂದು ಪ್ರದೇಶಕ್ಕೂ ತನ್ನದೇ ಆದ ಸರ್ಕಾರವನ್ನು ಹೊಂದಲು ಅನುವು ಮಾಡಿಕೊಡುತ್ತದೆ, ಅದು ತನ್ನ ಜನರ ಅನನ್ಯ ಅಗತ್ಯಗಳನ್ನು ಪ್ರತಿಬಿಂಬಿಸುತ್ತದೆ. ಸಂವಿಧಾನದ ಏಳನೇ ಶೆಡ್ಯೂಲ್  ನಲ್ಲಿರುವ ಪಟ್ಟಿ-I (ಯೂನಿಯನ್ ಪಟ್ಟಿ), ಪಟ್ಟಿ-II (ರಾಜ್ಯ ಪಟ್ಟಿ), ಮತ್ತು ಪಟ್ಟಿ-III (ಸಮನ್ವಯ ಪಟ್ಟಿ) ಇವುಗಳು ಕೇಂದ್ರ ಮತ್ತು ರಾಜ್ಯಗಳ ನಡುವೆ ಶಾಸಕಾಂಗ ವಿಷಯಗಳ ವಿತರಣೆಯನ್ನು ಒದಗಿಸುತ್ತದೆ. ಕರ್ನಾಟಕ

ಒಕ್ಕೂಟ ತತ್ವವು ಪ್ರಾದೇಶಿಕ ಸರ್ಕಾರಗಳು ತಮ್ಮದೇ ಆದ ಆದ್ಯತೆಗಳನ್ನು ಹೊಂದಿಸಲು ಅನುಮತಿಸುತ್ತದೆ. ಅವರು ತಮ್ಮ ಪ್ರದೇಶಗಳಲ್ಲಿ ಆರ್ಥಿಕ ಬೆಳವಣಿಗೆ ಮತ್ತು ಸಾಮಾಜಿಕ ಅಭಿವೃದ್ಧಿಯನ್ನು ಉತ್ತೇಜಿಸಲು ತಮ್ಮದೇ ಆದ ನೀತಿಗಳನ್ನು ಅಭಿವೃದ್ಧಿಪಡಿಸಬಹುದು. ಕರ್ನಾಟಕ

ಒಕ್ಕೂಟ ತತ್ವವು ಒಕ್ಕೂಟ ಸರ್ಕಾರ ಮತ್ತು ಪ್ರಾದೇಶಿಕ ಸರ್ಕಾರಗಳ ನಡುವೆ ಅಧಿಕಾರವನ್ನು ವಿಭಜಿಸುವ ಮೂಲಕ ದೌರ್ಜನ್ಯವನ್ನು ತಡೆಯಲು ಸಹಾಯ ಮಾಡುತ್ತದೆ. ಇದು ಯಾವುದೇ ಒಂದು ಹಂತದ ಸರ್ಕಾರವು ತುಂಬಾ ಶಕ್ತಿಶಾಲಿಯಾಗಲು ಹೆಚ್ಚು ಕಷ್ಟಕರವಾಗಿಸುತ್ತದೆ. ಕರ್ನಾಟಕ

ಒಕ್ಕೂಟ ತತ್ವವು ಅವರು ತಮ್ಮದೇ ಸರ್ಕಾರದಲ್ಲಿ ಧ್ವನಿ ನೀಡುವ ಮೂಲಕ ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸಲು ಸಹಾಯ ಮಾಡಬಹುದು. ಅಲ್ಪಸಂಖ್ಯಾತರು ಪ್ರಾದೇಶಿಕ ಸರ್ಕಾರಗಳಿಗೆ ತಮ್ಮದೇ ಆದ ಪ್ರತಿನಿಧಿಗಳನ್ನು ಆಯ್ಕೆ ಮಾಡಬಹುದು ಮತ್ತು ಅವರ ಹಿತಾಸಕ್ತಿಗಳಿಗಾಗಿ ಪ್ರತಿಪಾದಿಸಬಹುದು.

ಒಕ್ಕೂಟ ವ್ಯವಸ್ಥೆಯ ಮೇಲಿನ ದಾಳಿ

ಒಕ್ಕೂಟ ಸರ್ಕಾರದ ಆಡಳಿತದಿಂದ ಭಾರತದ ಒಕ್ಕೂಟ ವ್ಯವಸ್ಥೆಯ ಮೇಲೆ ತೀವ್ರವಾಗಿ ದಾಳಿ ನಡೆದಿದೆ. 2014ರಲ್ಲಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ನರೇಂದ್ರ ಮೋದಿಯವರು ಪ್ರಧಾನಿಯಾದ 10 ವರ್ಷಗಳಲ್ಲಿ ಈ ದಾಳಿ ಮತ್ತಷ್ಟು ತೀವ್ರಗೊಂಡಿದೆ. ಸಂವಿಧಾನದ ಮೂಲ ತತ್ವಗಳನ್ನು ನಾಶಮಾಡಲು ಹಲವು ರೀತಿಯ ತಂತ್ರಗಳನ್ನು ಮೋದಿ ಸರ್ಕಾರ ಮಾಡುತ್ತಾ ಬಂದಿದೆ. ಮೋದಿ ಅವರು ಹಿಂದಿನ ಯಾವುದೇ ಪ್ರಧಾನ ಮಂತ್ರಿಗಿಂತಲೂ ಹೆಚ್ಚು ಭಾರತೀಯ ಒಕ್ಕೂಟ ವ್ಯವಸ್ಥೆಯನ್ನು ದುರ್ಬಲಗೊಳಿಸಿದ್ದಾರೆ. ಇವರ ಸರ್ಕಾರವು ಭಾರತದ ಫೆಡರಲಿಸಂ ಅನ್ನು ರಾಜಕೀಯವಾಗಿ ಮತ್ತು ಆರ್ಥಿಕವಾಗಿ ಹೇಗೆ ಕಿತ್ತುಹಾಕುತ್ತಿದೆ ಎಂಬುದಕ್ಕೆ ಬಹಳಷ್ಟು ಉದಾಹರಣೆಗಳಿವೆ. ನಾವು ಅವುಗಳನ್ನು ಪಟ್ಟಿ ಮಾಡುತ್ತಾ ಹೋದರೆ ಹಲವು ಇಂತಹ ತಂತ್ರಗಳು ಕಣ್ಣಿಗೆ ಕಾಣುತ್ತವೆ. ಕರ್ನಾಟಕ

ರಾಜ್ಯಗಳ ಸಾಂಹಿಧಾನಿಕ ಅಧಿಕಾರಗಳನ್ನು ಮೊಟಕುಗೊಳಿಸುತ್ತಾ. . .

ರಾಜ್ಯಗಳ ಸಾಂವಿಧಾನಿಕ ಅಧಿಕಾರಗಳನ್ನು ಹೇಗೆಲ್ಲಾ ಮೊಟಕುಗೊಳಿಸುತ್ತಾ, ನಾಶ ಗೊಳಿಸುತ್ತಾ ಬಂದಿದೆ ಎಂಬುದು ಕಣ್ಣಿಗೆ ರಾಚುವಂತಿದೆ. ಇವುಗಳಲ್ಲಿ ಕೆಲವು ಇಲ್ಲಿವೆ.

ರಾಜ್ಯಪಾಲರ ಅಧಿಕಾರ ದುರ್ಬಳಕೆ ಮೂಲಕ ರಾಜ್ಯ ಸರ್ಕಾರಗಳ ಯೋಜನೆಗಳಿಗೆ ಅಡ್ಡಿಪಡಿಸಲಾಗುತ್ತಿದೆ.

‘ಒಂದು ದೇಶ, ಒಂದು ತೆರಿಗೆ’  ಹೆಸರಿನಲ್ಲಿ ಈಗಾಗಲೇ ಜಿಎಸ್  ಟಿ ಜಾರಿಗೆ ಬಂದಿದೆ. ಇದು ರಾಜ್ಯಗಳ ಸಂಪನ್ಮೂಲ ಸಂಗ್ರಹದ ಮೇಲೆ ಕೆಟ್ಟ ಪರಿಣಾಮ ಬೀರಿದೆ.

ಮೂರು ಕೃಷಿ ಕಾಯ್ದೆ ಜಾರಿ ವಿರೋಧಿಸಿ ನಡೆದ ರೈತರ ಹೋರಾಟದ ನಂತರ ಈ ಕಾಯ್ದೆಗಳನ್ನು ಹಿಂಪಡೆಯಲಾಗಿದೆಯಾದರೂ, ಹಿಂಬಾಗಿಲ ಮೂಲಕ ಇವುಗಳನ್ನು ಜಾರಿಗೆ ತರುವ ಪ್ರಯತ್ನ ಮಾಡಲಾಗುತ್ತಿದೆ.  ಈ ಮೂಲಕ ರಾಜ್ಯಗಳ ಹಲವು ಹಕ್ಕುಗಳನ್ನು ಕಸಿಯುವುದರ ಜೊತೆಗೆ, ರಾಜ್ಯದ ರೈತರ ಕೃಷಿ ಭೂಮಿಯನ್ನು ಕಾರ್ಪೊರೇಟ್ ಗಳು ಕಸಿದುಕೊಳ್ಳಲು ಅನುವು ಮಾಡಿಕೊಡಲಾಗುತ್ತಿದೆ.

ಇದನ್ನೂ ಓದಿ: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ ಟಿ.ಜೆ.ಅಬ್ರಹಾಂ

ಕೋವಿಡ್-19 ರ ಸಮಯದಲ್ಲಿ ಲಾಕ್ ಡೌನ್ ನಂತಹ ಒಕ್ಕೂಟ ಸರ್ಕಾರದ ಏಕಪಕ್ಷೀಯ ನಿರ್ಧಾರ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ (NDMA), ಪಿಎಂ ಕೇರ್ಸ್ ನಿಧಿ ಸ್ಥಾಪನೆ ಮತ್ತು ಅದು ನಿರ್ವಹಿಸುವ ರೀತಿ ಇವುಗಳು ರಾಜ್ಯಗಳ ಹಕ್ಕುಗಳನ್ನು ಕಸಿದುಕೊಂಡವು.

‘ಒನ್ ನೇಷನ್ ಒನ್ ರೇಷನ್’ (ಒಂದು ದೇಶ, ಒಂದು ರೇಷನ್ ಕಾರ್ಡ್) ಹೆಸರಿನಲ್ಲಿ, ಪಡಿತರ ಕುಟುಂಬಗಳನ್ನು ಆಯ್ಕೆ ಮಾಡುವ ಮತ್ತು ತಮ್ಮ ಪ್ರಜೆಗಳಿಗೆ ಅವಶ್ಯಕವಾದ ಪಡಿತರ ಪದಾರ್ಥಗಳನ್ನು ಹಂಚಿಕೆ ಮಾಡುವ ಪಡಿತರ ಹಂಚಿಕೆಯ ರಾಜ್ಯಗಳ ಆಧಿಕಾರವನ್ನು ಕ್ರಮೇಣ ಕಸಿದುಕೊಳ್ಳಲಾಗುತ್ತಿದೆ.

ಸಾರಿಗೆ ವಲಯದಲ್ಲಿ ಹಲವು ಸುಧಾರಣೆ ಹೆಸರಿನಲ್ಲಿ ರಾಜ್ಯ ಸರ್ಕಾರಗಳ ಮತ್ತು ರಾಜ್ಯ ಸಾರಿಗೆ ಇಲಾಖೆಗಳ (ಆರ್.ಟಿ.ಒ.) ಅಧಿಕಾರಗಳನ್ನು ಕಸಿದುಕೊಳ್ಳತೊಡಗಿದೆ.

ಅರಣ್ಯ ಕಾಯ್ದೆ ತಿದ್ದುಪಡಿ – ಗಣಿ ಕಾಯ್ದೆ ತಿದ್ದುಪಡಿ ಮೂಲಕ ಅರಣ್ಯಗಳ ಗಡಿ ಭಾಗದ ಗ್ರಾಮಗಳಿಗೆ ಇದುವರೆಗೂ ಇದ್ದ ಅಧಿಕಾರಗಳನ್ನು ಕಸಿದುಕೊಂಡಿದೆ. ಮಾತ್ರವಲ್ಲ, ಈ ಕಾಯ್ದೆಗಳ ಮೂಲಕ ಅರಣ್ಯ ಸಂಪತ್ತು ಮತ್ತು ಭೂಒಡಲಿನ ಪ್ರಕೃತಿ ಸಂಪತ್ತನ್ನು ದೋಚಲು ಉದ್ಯಮಿಗಳಿಗೆ ಸುಲಭ ದಾರಿ ಮಾಡಿಕೊಟ್ಟಿದೆ.

ಬ್ಯಾಂಕಿಂಗ್ ವ್ಯವಸ್ಥೆ ಸುಧಾರಣೆ ಹೆಸರಿನಲ್ಲಿ ಸಹಕಾರಿ ಸಂಸ್ಥೆಗಳ ಅಧಿಕಾರಕ್ಕೆ ಕೊಕ್ಕೆ ಹಾಕಲಾಗಿದೆ.

ವೈದ್ಯಕೀಯ ಶಿಕ್ಷಣ ಪ್ರವೇಶಕ್ಕೆ ರಾಷ್ಟ್ರ ಮಟ್ಟದಲ್ಲಿ ಒಂದೇ ಪ್ರವೇಶ ಪರೀಕ್ಷೆ ಹೆಸರಿನಲ್ಲಿ ಒಕ್ಕೂಟ ಸರ್ಕಾರವು ನೀಟ್ (ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ-NEET) ಜಾರಿಗೆ ತಂದಿದೆ. ಆ ಮೂಲಕ ರಾಜ್ಯಗಳಿಗೆ ಸಂವಿಧಾನ ಕೊಟ್ಟಿರುವ ಶಿಕ್ಷಣಕ್ಕೆ ಸಂಬಂಧಿಸಿದ ಹಕ್ಕುಗಳನ್ನು ಕಸಿದುಕೊಳ್ಳಲಾಗುತ್ತಿದೆ.

ಅಭಿವೃದ್ದಿ ಹೆಸರಿನಲ್ಲಿ ಹೆಚ್ಚಿನ ವಾಹನಗಳ ಸಂಚಾರ ಇರುವ ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಗಳನ್ನಾಗಿ ಮಾಡಿ, ಅವುಗಳನ್ನು ಟೋಲ್ ರಸ್ತೆಗಳನ್ನಾಗಿ ಪರಿವರ್ತನೆ ಮಾಡುವ ಮೂಲಕ ಆ ರಸ್ತೆಗಳ ಮೇಲಿನ ರಾಜ್ಯಗಳ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ.

ಇವುಗಳಲ್ಲದೆ, ಏಕರೂಪ ನಾಗರೀಕ ಸಂಹಿತೆ –ಯುಸಿಸಿ, ಪೌರತ್ವ ತಿದ್ದುಪಡಿ ಖಾಯ್ದೆ (ಸಿಎಎ), ಲೈಸೆನ್ಸ್-ಪರ್ಮಿಟ್ ರಾಜ್ ಅನ್ನು ಕಿತ್ತುಹಾಕುವುದು ಹಾಗೂ “ಒಂದು ರಾಷ್ಟ್ರ, ಒಂದು ಚುನಾವಣೆ” ಹೆಸರಿನಲ್ಲಿ ವಿವಿಧ ಹಂತಗಳಿಗೆ ಏಕಕಾಲದಲ್ಲಿ ಚುನಾವಣೆಗಳಿಗೆ ಕರೆ, ಇದು ದೇಶದ ಫೆಡರಲ್ ರಚನೆಯನ್ನು ದುರ್ಬಲಗೊಳಿಸುವ “ನಿರ್ಲಜ್ಯ ಪ್ರಯತ್ನ” ವಾಗಿದೆ.

ಹಲವು ಯೋಜನೆಗಳು ನೇರವಾಗಿ ಪ್ರಧಾನಿ ಹೆಸರಿನಲ್ಲಿ

ರಾಜ್ಯಗಳ ಹಕ್ಕುಗಳನ್ನು ಮೊಟಕುಗೊಳಿಸುವ ಹಲವು ಯೋಜನೆಗಳನ್ನು ಮೋದಿ ನೇತೃತ್ವದ ಒಕ್ಕೂಟ ಸರ್ಕಾರ ಜಾರಿಗೆ ತಂದಿದೆ. ಹಲವು ಯೋಜನೆಗಳು ನೇರವಾಗಿ ಪ್ರಧಾನಿ ಹೆಸರಿನಲ್ಲಿ ಘೋಷಣೆಯಾದವುಗಳು. ಉದಾಹರಣೆಗೆ: ಪಿಎಂ ಜನ್ ಧನ್ ಯೋಜನೆ, ಪಿಎಂ ಜನ ಆರೋಗ್ಯ ಯೋಜನೆ, ಪಿಎಂ ಕಿಸಾನ್ ಸಮ್ಮಾನ್ ಯೋಜನೆ, ಪಿಎಂ ಜನೌಷಧಿ ಕೇಂದ್ರ, ಪಿಎಂ ಉಜ್ವಲ ಯೋಜನೆ, ಪಿಎಂ ಆವಾಸ್ ಯೋಜನೆ, ಪಿಎಂ ಶ್ರಮ ಯೋಗಿ ಮಾನ್-ಧನ್, ಪಿಎಂ ಕೌಶಲ ವಿಕಾಸ್, ಪಿಎಂ ವಿಶ್ವ ಕರ್ಮ, ಪಿಎಂ ಮುದ್ರಾ ಯೋಜನೆ, ಇತ್ಯಾದಿ. ಈ ರೀತಿಯಲ್ಲಿ ವಿವಿಧ ಹೆಸರಿನ ಯೋಜನೆಗಳ ಮೂಲಕ ರಾಜ್ಯಗಳ ಆರೋಗ್ಯ ಸೇವೆಗಳನ್ನು ಕೇಂದ್ರ ಸರ್ಕಾರದ ಯೋಜನೆಗಳ ಒಳಗೆ ಸೇರ್ಪಡೆ ಮಾಡಲಾಗಿದೆ.

ಶಿಕ್ಷಣ, ಆರೋಗ್ಯ, ಸಮಾಜ ಕಲ್ಯಾಣಕ್ಕೆ ಸಂಬಂಧಿಸಿದ ಯೋಜನೆಗಳನ್ನು ನರೇಂದ್ರ ಮೋದಿಯವರ ಛಾಯಾಚಿತ್ರದೊಂದಿಗೆ ವೈಯಕ್ತೀಕರಿಸಿದ ಬ್ರ್ಯಾಂಡಿಂಗ್ ಮತ್ತು ಅವರ ಕಾರ್ಯಾಚರಣೆಯ ಡೊಮೇನ್ ರಾಜ್ಯಗಳಲ್ಲಿದೆ. ಇದು ಆಳವಾದ ಸರ್ವಾಧಿಕಾರಿ ಮನಸ್ಥಿತಿ ಮತ್ತು ಇದರ ಲಾಭ ಪಡೆದುಕೊಳ್ಳುವುದನ್ನು ಪ್ರತಿಬಿಂಬಿಸುತ್ತದೆ.

ಕರ್ನಾಟಕ ರಾಜ್ಯೋತ್ಸವ ಬರೀ ಉತ್ಸವವಾಗಿರದೆ, ರಾಜ್ಯದ ಸಾಂವಿಧಾನಿಕ ಹಕ್ಕುಗಳ ರಕ್ಷಣೆಗೆ, ಒಕ್ಕೂಟ ವ್ಯವಸ್ಥೆಯ ರಕ್ಷಣೆಗೆ, ನೆಲ, ಜಲ, ಭಾಷೆ, ಸ್ಥಳೀಯ ಸಂಸ್ಕೃತಿಗಳ ರಕ್ಷಣೆಗೆ ಪಣತೊಡುವ ಉತ್ಷವವಾಗಲಿ.

ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು.

ಇದನ್ನೂ ನೋಡಿ: ಸ್ವತಂತ್ರ ಡಿಜಿಟಲ್ ಮಾಧ್ಯಮದ ಮುಂದಿರುವ ಸವಾಲುಗಳು” – ನವೀನ್ ಸೂರಿಂಜೆ ಮಾತುಗಳು Janashakthi Media

Donate Janashakthi Media

Leave a Reply

Your email address will not be published. Required fields are marked *