ಬೆಂಗಳೂರು: ರಾಜ್ಯದಲ್ಲಿ ನವೆಂಬರ್ 1ರ ಕರ್ನಾಟಕ ರಾಜ್ಯೋತ್ಸವಕ್ಕೆ ಕೆಲವೇ ದಿನಗಳು ಹತ್ತಿರವಿದ್ದು, ರಾಜ್ಯ ಸರ್ಕಾರದ ವತಿಯಿಂದ ಅಭೂತಪೂರ್ವ ಕನ್ನಡ ಉತ್ಸವ ನಡೆಸಲು ಸಕಲ ಸಿದ್ಧತೆಗಳೂ ನಡೆದಿವೆ. ʻಕನ್ನಡಕ್ಕಾಗಿ ನಾವುʼ ಎಂಬ ಅಭಿಯಾನದ ಅಂಗವಾಗಿ ನಾಳೆ ಲಕ್ಷ ಕಂಠಗಳ ಕನ್ನಡ ಗೀತಗಾಯನ ಕಾರ್ಯಕ್ರಮ ನಡೆಯಲಿದೆ.
ನಾಳಿನ ಕಾರ್ಯಕ್ರಮದ ಬಗ್ಗೆ ಈಗಾಗಲೇ ರಾಜ್ಯದ ಎಲ್ಲ 31 ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.
ರಾಜ್ಯದ ಸಾವಿರಕ್ಕೂ ಹೆಚ್ಚು ಸ್ಥಳಗಳಲ್ಲಿ ಐದು ಲಕ್ಷಕ್ಕೂ ಅಧಿಕ ಮಂದಿ ಈ ಗೀತಗಾಯನದಲ್ಲಿ ಭಾಗವಹಿಸಲಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ವಿವಿಧ ಇಲಾಖೆಗಳ ಜೊತೆ ಸಮನ್ವಯ ಸಾಧಿಸಿ ಈ ಕಾರ್ಯಕ್ರಮ ರೂಪಿಸಲಾಗಿದೆ.
ನಾಳೆ ನಡೆಯಲಿರುವ ಈ ಗೀತಗಾಯನ ಕೇವಲ ಸರ್ಕಾರದ ಅಧಿಕಾರಿ ಸಿಬ್ಬಂದಿಗಳು ಮಾಡುವ ಸರ್ಕಾರಿ ಕಾರ್ಯಕ್ರಮವಾಗದೇ ಕನ್ನಡ ನಾಡಿನ ಎಲ್ಲಾ ಜನತೆಯ ಭಾಗವಹಿಸುವಿಕೆಯ ಅಭಿಮಾನದ ಕಾರ್ಯಕ್ರಮವಾಗಿ ರೂಪುಗೊಳ್ಳಲಿದೆ. ಸ್ವಯಂ ಸೂರ್ತಿಯಿಂದ ಎಲ್ಲರೂ ಈ ಗೀತಗಾಯನದಲ್ಲಿ ಹಾಡುವ ಮೂಲಕ ತಮ್ಮ ಅಭಿಮಾನ ಮತ್ತು ಕನ್ನಡ ಭಾಷೆ ಬಗೆಗಿನ ಪ್ರೀತಿಯನ್ನು ಅಭಿವ್ಯಕ್ತಿಗೊಳಿಸಲು ವೇದಿಕೆಗಳು ರೂಪುಗೊಂಡಿದೆ.
ಅದಕ್ಕೆ ಬೇಕಾದ ಪೂರ್ವಸಿದ್ಧತೆ, ಮಾಹಿತಿ ನೀಡುವಿಕೆ ಮತ್ತು ಕಾರ್ಯಕ್ರಮ ಆಯೋಜನೆಗೆ ಪೂರ್ಣ ಬದ್ಧತೆಯೊಂದಿಗೆ ಕೆಲಸ ಮಾಡಬೇಕೆಂದು ಜಿಲ್ಲಾಡಳಿತಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಗ್ರಾಮಪಂಚಾಯಿತಿ ಮಟ್ಟದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಈ ಕಾರ್ಯಕ್ರಮದ ಜವಾಬ್ದಾರಿ ವಹಿಸಲಿದ್ದಾರೆ.
ಇದಕ್ಕಾಗಿ ಪ್ರತ್ಯೇಕ ನೋಡಲ್ ಅಧಿಕಾರಿಗಳನ್ನು ನೇಮಿಸಿ ಹಾಡುವ ತಂಡಗಳ ಮಾಹಿತಿ, ಅವರಿಗೆ ಬೇಕಾದ ಕನಿಷ್ಠ ಅಗತ್ಯಗಳು ಮತ್ತು ಈ ಕಾರ್ಯಕ್ರಮದ ಪ್ರಚಾರ ಕಾರ್ಯನಿರ್ವಹಿಸಬೇಕೆಂದು ಸೂಚಿಸಲಾಗಿದೆ.
ರಾಷ್ಟ್ರಕವಿ ಕುವೆಂಪು ಅವರ ʻಬಾರಿಸು ಕನ್ನಡ ಡಿಂಡಿಂಮವʼ, ನಿಸಾರ್ ಅಹಮ್ಮದ್ ಅವರ ʻಜೋಗದ ಸಿರಿ ಬೆಳಕಿನಲ್ಲಿʼ ಹಾಗೂ ಡಾ. ಹಂಸಲೇಖ ಅವರ ʻಹುಟ್ಟಿದರೇ ಕನ್ನಡ ನಾಡಲ್ಲಿ ಹುಟ್ಟಬೇಕುʼ ಈ ಮೂರು ಗೀತೆಗಳು ನಾಳೆ ಬೆಳಿಗ್ಗೆ 11 ಗಂಟೆಗೆ ಏಕಕಾಲದಲ್ಲಿ ರಾಜ್ಯಾದ್ಯಂತ ಮೊಳಗಲಿವೆ.
ಇದಕ್ಕೆ ಬೇರ ಬೇರೆ ರಾಜ್ಯಗಳಲ್ಲಿ ನೆಲೆಸಿರುವ ಹಾಗೂ ವಿಶ್ವಾದ್ಯಂತ ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರು, ಕನ್ನಡ ಕೂಟಗಳು ತಮಗೆ ಒದಗಿಸಿರುವ ನಿರ್ದಿಷ್ಟ ಜಾಲತಾಣ ಸಂಪರ್ಕದ ಮೂಲಕ ಒಟ್ಟಿಗೆ ಸೇರಿ ಹಾಡುವ ತಾಂತ್ರಿಕ ಸಂಯೋಜನೆಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರೂಪಿಸಿದೆ.
ಇದರ ಮೂಲಕ ಒಂದೇ ಬಾರಿ ವಿಶ್ವದಾದ್ಯಂತ ಕನ್ನಡ ಗೀತೆಗಳು ಲಕ್ಷ ಲಕ್ಷ ಕಂಠಗಳಲ್ಲಿ ಮೊಳಗಲಿದೆ. ಇದು ಈ ಹಿಂದೆ ಎಂದೂ ನಡೆದಿರದ ಬೃಹತ್ ಹಾಗೂ ಅವಿಸ್ಮರಣೀಯ ಕಾರ್ಯಕ್ರಮವಾಗಲಿದೆ.
ನಾಡಿನ ಎಲ್ಲ ಸರ್ಕಾರಿ ಕಚೇರಿಗಳಲ್ಲಿ, ಶಾಲಾ- ಕಾಲೇಜುಗಳ ಆವರಣದಲ್ಲಿ, ವಿಶ್ವವಿದ್ಯಾಲಯಗಳ ಆವರಣಗಳಲ್ಲಿ, ತಾಂತ್ರಿಕ ಹಾಗೂ ವೈದ್ಯಕೀಯ ಕಾಲೇಜುಗಳ ಆವರಣಗಳಲ್ಲಿ ಹಾಗೂ ಮೈಸೂರಿನ ಅರಮನೆಯ ಮುಂಭಾಗ ಮತ್ತು ವಿಶ್ವವಿಖ್ಯಾತ ಹಂಪಿಯ ಕಲ್ಲಿನ ರಥ ಹಾಗೂ ಮಹಾನವಮಿ ದಿಬ್ಬವೂ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಸುಪ್ರಸಿದ್ಧ ಸ್ಮಾರಕಗಳ ಮುಂದೆ ಸಾವಿರಾರು ಜನರು ಒಟ್ಟಿಗೆ ನಿಂತು ಈ ಗೀತಗಾಯನದಲ್ಲಿ ಭಾಗವಹಿಸಲಿದ್ದಾರೆ.
ಶಾಲಾ, ಕಾಲೇಜುಗಳಲ್ಲಿ ವಿದ್ಯಾರ್ಥಿಗಳು, ಮೈಸೂರು ಅರಮನೆ, ಹಂಪಿ ಹಾಗೂ ಸಾಂಸ್ಕೃತಿಕ ತಾಣಗಳಲ್ಲಿ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಬೆಂಗಳೂರು ಮೆಟ್ರೋ, ಉಡುಪಿ ಶ್ರೀ ಕೃಷ್ಣ ಮಂದಿರ, ಸಿದ್ಧಗಂಗಾ ಮಠ ಹಾಗೂ ಚಿತ್ರದುರ್ಗ ಕೋಟೆಗಳಲ್ಲಿ ಸಾವಿರರು ಜನ ಒಟ್ಟಿಗೆ ನಿಂತು ಈ ಕನ್ನಡ ಗೀತೆಗಳ ಗಾಯನ ಮಾಡಲಿದ್ದಾರೆ.
ಬೆಂಗಳೂರಿನಲ್ಲಿ ವಿಧಾನಸೌಧದ ಮೆಟ್ಟಿಲುಗಳ ಮೇಲೆ, ವಿಧಾನಸೌಧದ ಹತ್ತಿರ ಗಾಂಧಿ ಪ್ರತಿಮೆಯ ಮುಂಭಾಗ ಅಧಿಕಾರಿಗಳುಇ, ವಿಧಾನಸೌಧ ಸಿಬ್ಬಂದಿಗಳು ಗಾಯನದಲ್ಲಿ ಭಾಗವಹಿಸಲಿದ್ದಾರೆ.
ಬೆಂಗಳೂರಿನ ಎಲ್ಲಾ 28 ವಿಧಾನಸಭಾ ಕ್ಷೇತ್ರಗಳು ಹಾಗೂ 198 ಬಿಬಿಎಂಪಿ ವಾರ್ಡುಗಳಲ್ಲಿ ಸ್ಥಳೀಯ ಶಾಸಕರು ಮತ್ತು ಮಾಜಿ ಸದಸ್ಯರ ಸಹಯೋಗದೊಂದಿಗೆ ಈ ಗೀತಗಾಯನದ ಜೊತೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಬೆಂಗಳೂರಿನ ಎಲ್ಲಾ ಮಾಹಿತಿ ಮತ್ತು ತಂತ್ರಜ್ಞಾನ /ಜೈವಿಕ ತಂತ್ರಜ್ಞಾನ ಸಂಸ್ಥೆಗಳ ಮುಂಭಾಗದ ಆವರಣಗಳಲ್ಲಿ ಸಾವಿರ ಸಾವಿರ ಸಂಖ್ಯೆಯ ಉದ್ಯೋಗಿಗಳು, ಆಡಳಿತ ಮಂಡಳಿಯ ಸದಸ್ಯರು, ಎಲ್ಲಾ ಆಸಕ್ತ ಸಾರ್ವಜನಿಕರು ಒಂದಾಗಿ ಸೇರಿ ಗೀತೆಗಳನ್ನು ಹಾಡಲಿದ್ದಾರೆ.