ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ; ವಿಧಾನಸಭೆ ಅಧಿವೇಶನದಲ್ಲಿ ಬಿಲ್ ಮಂಡನೆ

ಬೆಂಗಳೂರು: ಖಾಸಗಿ ವಲಯದಲ್ಲಿ ಕನ್ನಡಿಗರಿಗೆ  ಉದ್ಯೋಗ ಮೀಸಲಾತಿಗೆ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಕೈಗಾರಿಕೆಗಳು, ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗ ಮೀಸಲಾತಿಗೆ ತೀರ್ಮಾನಿಸಿದೆ. ನಿಯಮ ಉಲ್ಲಂಘಿಸಿದ್ರೆ 25 ಸಾವಿರ ತನಕ ದಂಡ ವಿಧಿಸುವ ಅಸ್ತ್ರ ಪ್ರಯೋಗ ಮಾಡಲಾಗ್ತಿದೆ. ಆದರೆ, ಸರ್ಕಾರದ ನಿರ್ಧಾರಕ್ಕೆ ಐಟಿಬಿಟಿ ವಲಯದಲ್ಲಿ ಕೆಲ ಉದ್ಯಮಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಕೈಗಾರಿಕೆಗಳ ಉದ್ಯೋಗಗಳು ಉತ್ತರ ಭಾರತದ ರಾಜ್ಯಗಳ ಪಾಲಾಗುತ್ತಿರುವ ಆತಂಕ ವ್ಯಕ್ತವಾಗಿತ್ತು. ಹಾಗಾಗಿ ರಾಜ್ಯದ ಭೂಮಿ, ಮೂಲಭೂತ ಸೌಕರ್ಯಗಳನ್ನ ಪಡೆದ ಕೈಗಾರಿಕೆಗಳಲ್ಲಿ, ಹಲವು ಖಾಸಗಿ ಸಂಸ್ಥೆಗಳಲ್ಲಿ ಸ್ಥಳೀಯರಿಗೆ ಮೀಸಲಾತಿ ನೀಡಬೇಕು ಎಂಬ ಕೂಗು ಎದ್ದಿತ್ತು. ಹಾಗಾಗಿ ರಾಜ್ಯದಲ್ಲಿನ ಎಲ್ಲಾ ಕೈಗಾರಿಕೆಗಳು ಮತ್ತು ಎಲ್ಲಾ ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡಲು ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಇದೇ ಶುಕ್ರವಾರ ಅಥವಾ ಸೋಮವಾರ ವಿಧಾನಸಭೆಯಲ್ಲಿ ಕರ್ನಾಟಕ ರಾಜ್ಯ ಕೈಗಾರಿಗಳು ಮತ್ತು ಇತರೆ ಸಂಸ್ಥೆಗಳಲ್ಲಿ ಸ್ಥಳೀಯ ಅಭ್ಯರ್ಥಿಗಳ ಉದ್ಯೋಗ ಮಸೂದೆ -2024 ಮಂಡನೆ ಆಗಲಿದೆ. ಕಾರ್ಮಿಕ ಇಲಾಖೆಯಿಂದ ವಿಧೇಯಕ ಮಂಡನೆಗೆ ಮುಂದಾಗಿದ್ದು, ಮೊನ್ನೆ ನಡೆದ ಸಂಪುಟ ಸಭೆಯಲ್ಲೂ ವಿಧೇಯಕ ಮಂಡನೆಗೆ ಒಪ್ಪಿಗೆ ಸಿಕ್ಕಿದೆ.

ಮೀಸಲಾತಿ ಮಸೂದೆಯಲ್ಲಿ ಏನಿದೆ? ಯಾರು ಅರ್ಹರು?

ಕರ್ನಾಟಕ ರಾಜ್ಯ ಉದ್ಯೋಗ ಮಸೂದೆ – 2024ರಲ್ಲಿ ಏನಿದೆ ಎಂಬುದನ್ನು ನೋಡುವುದಾದರೆ, ಕರ್ನಾಟಕದಲ್ಲಿ ಖಾಸಗಿ ವಲಯದ ಕಂಪನಿಗಳು, ಕಾರ್ಖಾನೆಗಳು ಹಾಗೂ ಸಂಸ್ಥೆಗಳ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಶೇ.50 ರಿಂದ ಶೇ.75ರವರೆಗೆ ಮೀಸಲಾತಿ ನೀಡಬೇಕು. ಮ್ಯಾನೇಜ್‌ಮೆಂಟ್‌ ಹುದ್ದೆಗಳಲ್ಲಿ ಶೇ.50ರಷ್ಟು, ನಾನ್‌ ಮ್ಯಾನೇಜ್‌ಮೆಂಟ್‌ ಹುದ್ದೆಗಳಲ್ಲಿ ಶೇ.75ರಷ್ಟು ಕನ್ನಡಿಗರಿಗೆ ಮೀಸಲಾತಿ ಸಿಗಲಿದೆ. ಇನ್ನು, ಸಿ ಮತ್ತು ಡಿ ವರ್ಗದ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಶೇ.100ರಷ್ಟು ಮೀಸಲಾತಿ ನೀಡುವ ಮಸೂದೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಸಿದ್ದರಾಮಯ್ಯ ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದರು. ಆದರೆ, ಬಳಿಕ ಆ ಪೋಸ್ಟ್‌ ಅನ್ನು ಸಿದ್ದರಾಮಯ್ಯ ಅವರು ಡಿಲೀಟ್‌ ಮಾಡಿರುವುದು ಹಲವು ಪ್ರಶ್ನೆಗಳನ್ನು ಸೃಷ್ಟಿಸಿದೆ. ಇದಕ್ಕೆ ಉದ್ಯಮಿಗಳ ವಿರೋಧ ಕಾರಣವಾ ಎಂಬ ಅನುಮಾನ ಕೂಡ ಮೂಡಿದೆ.

ಈ ಹೊಸ ಮಸೂದೆ ಪ್ರಕಾರ ಉದ್ಯೋಗ ಮೀಸಲಾತಿಗೆ ಯಾರು ಅರ್ಹರು ಎಂಬ ಅಂಶವನ್ನು ಗಮನಿಸಿದರೆ, ಕರ್ನಾಟಕದಲ್ಲಿ ಹುಟ್ಟಿದವರು, ಕರ್ನಾಟಕದಲ್ಲಿ 15 ವರ್ಷಗಳಿಂದ ವಾಸಿಸುತ್ತಿರುವವರು, ಕನ್ನಡ ಭಾಷೆಯಲ್ಲಿ ಮಾತನಾಡಲು, ಓದಲು ಹಾಗೂ ಬರೆಯಲು ಬರುವವರಿಗೆ ಮೀಸಲಾತಿ ಸಿಗಲಿದೆ. ಎಸ್‌ಎಸ್‌ಎಲ್‌ಸಿಯಲ್ಲಿ ಕನ್ನಡವನ್ನು ಅಭ್ಯಸಿಸದವರು ನೋಡಲ್‌ ಏಜೆನ್ಸಿಗಳು ನಡೆಸುವ ಕನ್ನಡ ಭಾಷಾ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಕಡ್ಡಾಯವಾಗಿದೆ. ಅಂತವರಿಗೆ ಮಾತ್ರ ಈ ಮೀಸಲಾತಿ ಸಿಗಲಿದೆ. ಈ ಕನ್ನಡ ಭಾಷಾ ಪರೀಕ್ಷೆ ಕೂಡ 10ನೇ ತರಗತಿಯ ಮಟ್ಟದಲ್ಲಿರಲಿದೆ.

ಅರ್ಹ ಅಭ್ಯರ್ಥಿ ಸಿಗದಿದ್ದರೆ ಏನು ಕಥೆ? ಉಲ್ಲಂಘನೆಗೆ ದಂಡ ಎಷ್ಟು?

ಇನ್ನು, ಖಾಸಗಿ ವಲಯದಲ್ಲಿ ಹುದ್ದೆಗೆ ಅರ್ಹ ಹಾಗೂ ಸೂಕ್ತ ಎನಿಸುವ ಅಭ್ಯರ್ಥಿ ಸಿಗದಿದ್ದರೆ ಕಂಪನಿಗಳು, ಕೈಗಾರಿಕೆಗಳು ಸರ್ಕಾರ ಅಥವಾ ಇತರೆ ಸಂಸ್ಥೆಗಳ ಜೊತೆ ಕೈ ಜೋಡಿಸಿ ಸ್ಥಳೀಯ ಅಭ್ಯರ್ಥಿಗೆ ಮೂರು ವರ್ಷದೊಳಗೆ ಕೆಲಸಕ್ಕೆ ಅಗತ್ಯವಾಗುವ ತರಬೇತಿಯನ್ನು ನೀಡಿ ಅವರನ್ನೇ ಹುದ್ದೆಯಲ್ಲಿ ಮುಂದುವರಿಸಬೇಕು ಎಂಬ ಅಂಶ ಕೂಡ ಮಸೂದೆಯಲ್ಲಿದೆ. ಅದು ಆಗದಿದ್ದಾಗ ಅಥವಾ ಯಾವುದೇ ಸ್ಥಳೀಯ ಅಭ್ಯರ್ಥಿ ಆ ಹುದ್ದೆಗೆ ಅರ್ಹನಾಗಿರದಿದ್ದರೆ ಕಂಪನಿಗಳು ಮೀಸಲಾತಿಯ ವಿನಾಯಿತಿಗಾಗಿ ಸೂಕ್ತ ದಾಖಲೆಗಳೊಂದಿಗೆ ಸರ್ಕಾರಕ್ಕೆ ಅರ್ಜಿ ಸಲ್ಲಿಸಬಹುದು. ಅದಾದ ಬಳಿಕ ಸರ್ಕಾರ ಸೂಕ್ತ ವಿಚಾರಣೆ ನಡೆಸಿ ಮ್ಯಾನೇಜ್‌ಮೆಂಟ್‌ ಪೋಸ್ಟ್‌ಗಳಲ್ಲಿ ಶೇ.25 ರಷ್ಟು ಹಾಗೂ ನಾನ್‌ ಮ್ಯಾನೇಜ್‌ಮೆಂಟ್‌ ಪೋಸ್ಟ್‌ಗಳಲ್ಲಿ ಶೇ.50ರಷ್ಟು ಮೀಸಲಾತಿಯನ್ನು ಕಡಿತಗೊಳಿಸಬಹುದು ಎಂದು ಕರಡು ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ.

Donate Janashakthi Media

Leave a Reply

Your email address will not be published. Required fields are marked *