ಕರ್ನಾಟಕ ಶಾಸಕರು ಭಾರತದ ಅತಿ ಶ್ರೀಮಂತ ಶಾಸಕರು

ನವ ಉದಾರವಾದ ನೀತಿಗಳು ಒಂದೆಡೆ ಬಹುಸಂಖ್ಯೆಯ ಜನ ವಿಭಾಗಗಳನ್ನು ತೀವ್ರ ಸಂಕಷ್ಟ, ಬಡತನದೆಡೆಗೆ ದೂಡುತ್ತಿವೆ. ಇನ್ನೊಂದೆಡೆ, ಕೆಲವೇ ಕೆಲವು ಜನ ವಿಭಾಗಗಳು ಅತಿ ಶ್ರೀಮಂತರಾಗುತ್ತಿದ್ದಾರೆ. ತೀವ್ರ ಅಸಮಾನತೆಯನ್ನು ಈ ನೀತಿಗಳು ಸೃಷ್ಟಿ ಮಾಡಿದ್ದು, ದಿನೇ ದಿನೇ ಈ ಅಂತರ ಅಪಾಯಕಾರಿ ಪ್ರಮಾಣದಲ್ಲಿ ಏರುತ್ತಿದೆ.

ಮುಂದಿನ ತಿಂಗಳು ಚುನಾವಣೆ ಎದುರಿಸಲಿರುವ ಕರ್ನಾಟಕ ರಾಜ್ಯ ವಿಧಾನಸಭೆಯಲ್ಲಿ ಶ್ರೀಮಂತ ಶಾಸಕರ ಸಂಖ್ಯೆ ಅಪಾರವಾಗಿದೆ. ಭಾರತದ ಅತಿ ಶ್ರೀಮಂತ ಶಾಸಕರುಗಳಲ್ಲಿ ಬಹುತೇಕರು ಕರ್ನಾಟಕದಲ್ಲಿದ್ದಾರೆ ಎಂಬ ಅಂಕಿ ಅಂಶಗಳನ್ನು ‘ದಿ ಹಿಂದೂ’ ಪತ್ರಿಕೆ ಮುದ್ರಿಸಿದೆ. ಸರಾಸರಿಯಾಗಿ ಕರ್ನಾಟಕದ ಓರ್ವ ಶಾಸಕ ಸುಮಾರು ರೂ. 34.6 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದು, ಎಲ್ಲಾ ರಾಜ್ಯಗಳಿಗಿಂತ ಇದು ಅತ್ಯಂತ ಹೆಚ್ಚಿನ ಪ್ರಮಾಣದ್ದಾಗಿದೆ. ಆಂದ್ರ ಪ್ರದೇಶದ ಶಾಸಕರು ಸರಾಸರಿ ರೂ 27.9 ಕೋಟಿ ಆಸ್ತಿ ಹೊಂದುವ ಮೂಲಕ ಎರಡನೆಯ ಸ್ಥಾನದಲ್ಲಿದ್ದಾರೆ. ಸರಾಸರಿ ರೂ. 22.4 ಕೋಟಿ ಆಸ್ತಿ ಹೊಂದುವ ಮೂಲಕ ಮಹಾರಾಷ್ಟ್ರ ಶಾಸಕರು ಮೂರನೇ ಸ್ಥಾನದಲ್ಲಿದ್ದಾರೆ. ಪ್ರಜಾಸತ್ತಾತ್ಮಕ ಸುಧಾರಣೆಗಳ ಒಕ್ಕೂಟವು ಶಾಸಕರ ಕುರಿತು ಹೊರತಂದಿರುವ ಹಣಕಾಸು ವರದಿಯ ಆಧಾರದ ಮೇಲೆ ಶರತ್ತುಗಳನ್ನು ಅಂಗೀಕರಿಸಲಾಗುತ್ತದೆ. ಈ ದತ್ತಾಂಶವು ಪ್ರತಿ ರಾಜ್ಯದಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ಚುನಾಯಿತರಾದ ಶಾಸಕರುಗಳನ್ನು ಒಳಗೊಂಡಿದೆಯೇ ಹೊರತು, ಹಾಲಿ ಇರುವ ಶಾಸಕರುಗಳನ್ನಲ್ಲ.

ಲೇಖನದ ಜೊತೆ ನೀಡಲಾದ ಚಾರ್ಟ್ ಒಂದರಲ್ಲಿ ಶಾಸಕರುಗಳ ಸರಾಸರಿ ಆಸ್ತಿಯನ್ನು ರಾಜ್ಯಾವಾರು ನೀಡಲಾಗಿದೆ. (ಕೋಟಿ ರೂ.ಗಳಲ್ಲಿ). ಆಸ್ತಿ ಲೆಕ್ಕದಲ್ಲಿ ದಕ್ಷಿಣ ಮತ್ತು ಪಶ್ಚಿಮ ಪ್ರದೇಶಗಳಲ್ಲಿ ಬಹುಸಂಖ್ಯೆಯ ಶ್ರೀಮಂತ ಶಾಸಕರುಗಳಿದ್ದಾರೆ. ಇದಕ್ಕೆ ಹೋಲಿಸಿದಲ್ಲಿ ಪೂರ್ವ ರಾಜ್ಯಗಳಲ್ಲಿ ಬಡ ಶಾಸಕರುಗಳಿದ್ದಾರೆ. ಉದಾಹರಣೆಗೆ, ದಕ್ಷಿಣದಲ್ಲಿ ಆಂಧ್ರಪ್ರದೇಶ ಮತ್ತು ಕರ್ನಾಟಕ ರಾಜ್ಯಗಳ ಶಾಸಕರುಗಳ ಸರಾಸರಿ ಆಸ್ತಿ ರೂ. 25 ಕೋಟಿ ದಾಟಿದೆ. ಪಶ್ಚಿಮದಲ್ಲಿ ಗೋವಾ ಮತ್ತು ಮಹಾರಾಷ್ಟ್ರಗಳಲ್ಲಿ ಶಾಸಕರುಗಳ ಸರಾಸರಿ ಆಸ್ತಿ ರೂ. 20 ಕೋಟಿ ದಾಟಿದೆ. ಆದರೆ, ಪೂರ್ವ ಭಾಗದಲ್ಲಿ, ಒಡಿಸ್ಸಾ, ಪಶ್ಚಿಮ ಬಂಗಾಳ, ಝಾರ್ಕಂಡ್ ಅಥವಾ ಬಿಹಾರದಲ್ಲಿ ಶಾಸಕರುಗಳ ಆಸ್ತಿ ಸರಾಸರಿ ರೂ. 5 ಕೋಟಿ ದಾಟಿಲ್ಲ. ಕೇರಳ ಮತ್ತು ಈಶಾನ್ಯ ರಾಜ್ಯಗಳಾದ ತ್ರಿಪುರ, ಮಣಿಪುರ, ಮಿಜೊರಾಂ ಮತ್ತು ಅಸ್ಸಾಂ ರಾಜ್ಯಗಳಲ್ಲಿಯೂ ಸಹ ಹೆಚ್ಚಿನ ಪ್ರಮಾಣದಲ್ಲಿ ಶ್ರೀಮಂತ ಶಾಸಕರುಗಳಿಲ್ಲ.

ಎರಡನೇ ಚಾರ್ಟ್ ನಲ್ಲಿ ವಿವಿಧ ಪಕ್ಷ-ರಾಜ್ಯಗಳ ಜೋಡಿಗಳು ಹೊಂದಿರುವ ಸರಾಸರಿ ಆಸ್ತಿ ರೂ. ಕೋಟಿಗಳಲ್ಲಿ ವಿವರಗಳಿವೆ. ಒಂದು ರಾಜ್ಯದಲ್ಲಿ ಕನಿಷ್ಟ 30 ಶಾಸಕರುಗಳನ್ನು ಹೊಂದಿರುವ ಪಕ್ಷಗಳನ್ನು ಮಾತ್ರ ಈ ವಿಶ್ಲೇಷಣೆಗೆ ಒಳಪಡಿಸಲಾಗಿದೆ. ಕರ್ನಾಟಕದ ಕಾಂಗ್ರೆಸ್ ಈ ಪಟ್ಟಿಯಲ್ಲಿ ಎಲ್ಲರಿಗಿಂತಲೂ ಮುಂಚೋಣಿಯಲ್ಲಿದೆ. ಕರ್ನಾಟಕದ ಕಾಂಗ್ರೆಸ್ ಶಾಸಕರು ಸರಾಸರಿಯಾಗಿ ರೂ. 60 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ಜೆಡಿ(ಎಸ್) ಶಾಸಕರ ಸರಾಸರಿ ಆಸ್ತಿ ರೂ. 23.5 ಕೋಟಿ ಇದೆ. ಬಿಜೆಪಿ ಶಾಸಕರ ಸರಾಸರಿ ಆಸ್ತಿ ರೂ. 17.4 ಕೋಟಿ ಇದೆ.

ಮಹಾರಾಷ್ಟ್ರದ ಬಿಜೆಪಿ ಶಾಸಕರು ಸರಾಸರಿ ರೂ.27 ಕೋಟಿ ಆಸ್ತಿ ಹೊಂದುವ ಮೂಲಕ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ವೈಎಸ್ ಆರ್ ಕಾಂಗ್ರೆಸ್ ಪಕ್ಷದ ಶಾಸಕರು ಸರಾಸರಿ ರೂ. 22.4 ಕೋಟಿ ಆಸ್ತಿ ಹೊಂದಿ, ಶ್ರೀಮಂತ ಶಾಸಕರುಗಳ ಪಟ್ಟಿಯಲ್ಲಿದ್ದಾರೆ.

ಇದನ್ನೂ ಓದಿ : ಜಮೀನು ಅತಿಕ್ರಮಣ ಆರೋಪ : ಬಿಜೆಪಿ ಶಾಸಕ ಶ್ರೀಮಂತ ಪಾಟೀಲ್, ಪುತ್ರರ ವಿರುದ್ಧ ಪ್ರಕರಣ ದಾಖಲು

ಮೂರನೇ ಚಾರ್ಟ್ ನಲ್ಲಿ ಮರು ಆಯ್ಕೆಯಾದ ಶಾಸಕರ ಸರಾಸರಿ ಆಸ್ತಿಯಲ್ಲಿ ಹಿಂದಿನ ಚುನಾವಣೆಗೆ ಹೋಲಿಸಿದಲ್ಲಿ ಆಗಿರುವ ಬದಲಾವಣೆಯನ್ನು ತೋರಿಸಲಾಗಿದೆ. ಯಾವ ಪಕ್ಷವು ಕನಿಷ್ಟ 5 ಮರುಚುನಾಯಿತರಾದ ಶಾಸಕರನ್ನು ಹೊಂದಿದೆಯೋ, ಆ ಪಕ್ಷಗಳನ್ನು ಮಾತ್ರ ಅದ್ಯಯನದ ಸಲುವಾಗಿ ತೆಗೆದುಕೊಳ್ಳಲಾಗಿದೆ. ಕರ್ನಾಟಕದಲ್ಲಿ ಮರು ಚುನಾಯಿರಾದ ಕಾಂಗ್ರೆಸ್ ಶಾಸಕರ ಸರಾಸರಿ ಆಸ್ತಿಯು ಹಿಂದಿನ ಚುನಾವಣೆಗೆ ಹೋಲಿಸಿದಲ್ಲಿ ರೂ. 43.5 ಕೋಟಿ ಅಥವಾ ಶೇ. 108ರಷ್ಟು ಹೆಚ್ಚಾಗಿದೆ. ತೆಲುಗು ದೇಶಂ ಪಕ್ಷದ ಮು ಚುನಾಯಿತ ಶಾಸಕರ ಸರಾಸರಿ ಆಸ್ತಿ ರೂ. 32 ಕೋಟಿ (ಶೇ. 78) ಹೆಚ್ಚಿದೆ. ಅಸ್ಸಾಂ ಬಿಜೆಪಿಯ ಮರು ಚುನಾಯಿತ ಶಾಸಕರ ಸರಾಸರಿ ಆಸ್ತಿ ರೂ. .2.5 ಕೋಟಿ (ಶೇ.124) ಹೆಚ್ಚಿದೆ. ಮಹಾರಾಷ್ಟ್ರದಲ್ಲಿ ಮರು ಚುನಾಯಿತ ಬಿಜೆಪಿ ಶಾಸಕರ ಸರಾಸರಿ ಆಸ್ತಿ ರೂ.12.4 ಕೋಟಿ (ಶೇ.81) ರಷ್ಟು, ಎನ್ ಸಿ ಪಿ ಶಾಸಕರ ಸರಾಸರಿ ಆಸ್ತಿ ರೂ. 10 ಕೋಟಿ (ಶೇ.123) ಮತ್ತು ಶಿವಸೇನಾ ಶಾಸಕರ ಸರಾಸರಿ ಆಸ್ತಿ ರೂ. 10.7 ಕೋಟಿ (ಶೇ.135) ರಷ್ಟು ಹೆಚ್ಚಿದೆ. ಮಹಾರಾಷ್ಟ್ರದ ಬಹುತೇಕ ಪಕ್ಷಗಳ ಮರು ಚುನಾಯಿತ ಶಾಸಕರ ಆಸ್ತಿ ಗಣನೀಯವಾಗಿ ಹೆಚ್ಚಾಗಿರುವುದು ತಿಳಿಯುತ್ತದೆ.

Donate Janashakthi Media

Leave a Reply

Your email address will not be published. Required fields are marked *