ಕೋವಿಡ್‌ನಿಂದ 600 ಶಿಕ್ಷಕರು, 175 ಜನ ವಕೀಲರ ಸಾವು

ಬೆಂಗಳೂರು :  ಕೊರೋನಾ ವೈರಸ್ ಸೋಂಕು ಹರಡಿದ ಮೇಲೆ ಶಿಕ್ಷಣ ವ್ಯವಸ್ಥೆಯೇ ತಲೆಕೆಳಗಾಗಿದೆ. ರಾಜ್ಯದಲ್ಲಿ ಒಟ್ಟು 600 ಶಿಕ್ಷಕರು. ಕೊರೋನಾದಿಂದ ಸಾವನ್ನಪ್ಪಿದ್ದರೆ, ಒಂದುವರೆ ತಿಂಗಳಲ್ಲಿ 175 ಜನ ವಕೀಲರು ಕೋವಿಡ್‌ನಿಂದಾಗಿ ನಿಧನರಾಗಿದ್ದಾರೆ.

ರಾಜ್ಯದಲ್ಲಿ ಇತ್ತೀಚೆಗೆ ನಡೆದ ಉಪ ಚುನಾವಣೆಗೆ ನಿಯೋಜನೆಗೊಂಡು ಕೊರೊನಾಗೆ ಸಾವನ್ನಪ್ಪಿದ ಶಿಕ್ಷಕರಿಗೆ ಪರಿಹಾರ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ಗಂಭೀರವಾಗಿ ಪರಿಗಣಿಸಿದೆ. ಗುರುವಾರ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ ರಾಜ್ಯ ಸರ್ಕಾರ ಮತ್ತು ಚುನಾವಣಾ ಆಯೋಗಕ್ಕೆ ನೋಟಿಸ್ ನೀಡಿದೆ.

ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ 55 ಶಿಕ್ಷಕರು ಕೊರೊನಾ ಸೊಂಕಿಗೆ ಬಲಿಯಾಗಿದ್ದರು. ಅನೇಕರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡು ಕೊರೊನಾ ಸೋಂಕಿನಿಂದ ಮೃತಪಟ್ಟ ಶಿಕ್ಷಕರಿಗೆ ನ್ಯಾಯ ಕೊಡಿ ಎಂದು ಬೀದರ್ ಮೂಲದ ಅಂಬರೀಶ್ ಕೆಂಚ ಎಂಬಾತ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾ. ಸತೀಶ್ ಚಂದ್ರ ಶರ್ಮಾ ಮತ್ತು ನಾಗಪ್ರಸನ್ನ ಅವರನ್ನು ಒಳಗೊಂಡ ಪೀಠ ಅರ್ಜಿ ವಿಚಾರಣೆ ನಡೆಸಿ ನೋಟಿಸ್ ಜಾರಿ ಮಾಡಿದೆ.

ರಾಜ್ಯದಲ್ಲಿ 25ರಿಂದ 30 ಸಾವಿರ ಶಿಕ್ಷಕರು ಕೋವಿಡ್ ಸಂಬಂಧಿ ಕಾರ್ಯಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಆದರೆ, ಈ ಶಿಕ್ಷಕರಿಗೆ ಯಾವುದೇ ಸುರಕ್ಷತೆಯೂ ಇಲ್ಲ! ಕರೊನಾ ಮೊದಲ ಅಲೆ, ಲಾಕ್​ಡೌನ್ ಹಾಗೂ ವಿದ್ಯಾಗಮ ಜಾರಿ ಸಂದರ್ಭದಲ್ಲೂ ಸುಮಾರು ನೂರಾರು ಶಿಕ್ಷಕರು ನಿಧನರಾಗಿದ್ದರು.  ಮೃತ ಶಿಕ್ಷಕರ ಕುಟುಂಬಕ್ಕೆ 1 ಕೋಟಿ ರೂ ಪರಿಹಾರವನ್ನು ನೀಡಬೇಕು ಎಂದು ಶಿಕ್ಷಕರ ಸಂಘಟನೆಗಳು ಆಗ್ರಹಿಸಿವೆ.

175 ಜನ ವಕೀಲರು ಕೋವಿಡ್‌ಗೆ ಬಲಿ : ಕಳೆದ ಏಪ್ರಿಲ್‌ನಲ್ಲಿ ಆರಂಭವಾದ ಕೋವಿಡ್‌ ಎರಡನೇ ಅಲೆಯಿಂದ ರಾಜ್ಯದಲ್ಲಿ ಈವರೆಗೆ ಅಂದಾಜು 175ಕ್ಕೂ ಹೆಚ್ಚು ವಕೀಲರು ಹಾಗೂ 15ಕ್ಕೂ ಹೆಚ್ಚು ವಿವಿಧ ನ್ಯಾಯಾಲಯಗಳ ಸಿಬ್ಬಂದಿ ಸಾವನ್ನಪ್ಪಿರುವ ಸಂಗತಿ ‘ಬಾರ್‌ ಅಂಡ್‌ ಬೆಂಚ್‌’ಗೆ ವಿವಿಧ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ. ಇದೇ ವೇಳೆ, ರಾಜಧಾನಿ ಬೆಂಗಳೂರಿನಲ್ಲಿಯೇ ಸುಮಾರು 70 ಮಂದಿ ವಕೀಲರು ಕೊರೊನಾಗೆ ಬಲಿಯಾಗಿರುವ ಆಘಾತಕಾರಿ ಮಾಹಿತಿಯೂ ಲಭ್ಯವಾಗಿದೆ.

ರಾಜ್ಯದ ಆರು ಜಿಲ್ಲೆಗಳಲ್ಲಿ ಸಾವನ್ನಪ್ಪಿದ ವಕೀಲರ ಸಂಖ್ಯೆ ಎರಡಂಕಿ ದಾಟಿದೆ. ಬೆಂಗಳೂರಿನ ನಂತರದ ಸ್ಥಾನದಲ್ಲಿ ಬೀದರ್‌ (17), ಬೆಳಗಾವಿ (15), ಮೈಸೂರು (13), ತುಮಕೂರು (12) ಮತ್ತು ಬಾಗಲಕೋಟೆ (11) ಇರುವುದು ತಿಳಿದು ಬಂದಿದೆ.

ರಾಜ್ಯದಾದ್ಯಂತ ಸೋಂಕಿಗೆ ಒಳಗಾಗಿರುವ ವಕೀಲರು ಹಾಗೂ ನ್ಯಾಯಾಂಗ ಸಿಬ್ಬಂದಿಯ ಮಾಹಿತಿಯನ್ನು ಸಲ್ಲಿಸುವಂತೆ ಜಿಲ್ಲಾ ನ್ಯಾಯಾಲಯಗಳಿಗೆ ರಾಜ್ಯ ಹೈಕೋರ್ಟ್‌ ಸೂಚಿಸಿದೆ ಎನ್ನಲಾಗಿದೆ. ಈ ಮಾಹಿತಿ ಸಲ್ಲಿಕೆಯಾದ ಬಳಿಕವಷ್ಟೇ ಅಧಿಕೃತ ಅಂಕಿಅಂಶಗಳ ಮಾಹಿತಿ ಲಭ್ಯವಾಗಲಿದೆ.

“ಮೊದಲ ಅಲೆಯಲ್ಲಿಯೂ ಬೆಂಗಳೂರು ವಕೀಲರ ಸಂಘದಲ್ಲಿ ನೋಂದಾಯಿಸಿದ್ದ 60ಕ್ಕೂ ಹೆಚ್ಚು ವಕೀಲರು ಸಾವನ್ನಪ್ಪಿದ್ದರು. ಇದರಲ್ಲಿ ಹಿರಿಯ ವಕೀಲರ ಸಂಖ್ಯೆ ಹೆಚ್ಚಿತ್ತು. ಈ ಬಾರಿ 70 ಮಂದಿ ಸಾವನ್ನಪ್ಪಿದ್ದು, 35-50 ವಯೋಮಾನದಲ್ಲಿದ್ದ ಶೇ. 80ರಷ್ಟು ವಕೀಲರು ಉಸಿರು ಚೆಲ್ಲಿದ್ದಾರೆ. ಸಾಕಷ್ಟು ಭವಿಷ್ಯ ಹೊಂದಿದ್ದ, ವಿವಾಹವಾಗಿದ್ದ, ಸಣ್ಣ ಮಕ್ಕಳನ್ನು ಹೊಂದಿರುವ ಯುವ ವಕೀಲರು ಕೋವಿಡ್‌ಗೆ ಬಲಿಯಾಗಿದ್ದಾರೆ. ಇದು ಅತ್ಯಂತ ಬೇಸರದ ಸಂಗತಿ” ಎಂದು ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ ಪಿ ರಂಗನಾಥ್‌ ಆರೋಪಿಸಿದ್ದಾರೆ.

“ಇಂದಿಗೂ ಎಷ್ಟೋ ಕಡೆ ನೇರವಾಗಿ ತೆರಳಿ ಆಸ್ಪತ್ರೆಯಲ್ಲಿ ಹಾಸಿಗೆ ಪಡೆಯುವ ಸ್ಥಿತಿಯಿಲ್ಲ. ಹಾಸಿಗೆ ಕೊಡಿಸುವಂತೆ ನಮಗೆ ಸಾಕಷ್ಟು ಬಾರಿ ವಕೀಲರು ಕರೆ ಮಾಡುತ್ತಾರೆ. ನಾವು ಅಧಿಕಾರಿಗಳು ಮತ್ತಿತರ ಜೊತೆ ಮಾತನಾಡಿ ವ್ಯವಸ್ಥೆ ಮಾಡುವ ವೇಳೆಗೆ ಅವರು ಸ್ಥೈರ್ಯ ಕಳೆದುಕೊಂಡಿರುತ್ತಾರೆ. ಸರ್ಕಾರ ಈ ಅವ್ಯವಸ್ಥೆಯನ್ನು ಯಾವಾಗ ಸರಿಪಡಿಸುತ್ತದೋ ತಿಳಿಯದಾಗಿದೆ. ಅಲ್ಲದೇ, ವಕೀಲರನ್ನು ಫ್ರಂಟ್‌ಲೈನ್‌ ವಾರಿಯರ್ಸ್‌ ಎಂದು ಪರಿಗಣಿಸಿ ಅವರಿಗೆ ಲಸಿಕೆ ನೀಡುವುದರ ಜೊತೆಗೆ ಜೀವನ ನಿರ್ವಹಣೆಗೆ ಆರ್ಥಿಕ ಪ್ಯಾಕೇಜ್‌ ಘೋಷಿಸುವಂತೆ ಕೋರಿದ್ದ ಮನವಿಯನ್ನೂ ರಾಜ್ಯ ಸರ್ಕಾರ ಪುರಸ್ಕರಿಸಿಲ್ಲ. ನ್ಯಾಯಾಲಯದ ಚಟುವಟಿಕೆಗಳು ಸ್ಥಗಿತವಾಗಿದ್ದು, ಸಾಕಷ್ಟು ಮಂದಿಗೆ ಜೀವನ ನಿರ್ವಹಣೆಯೇ ಸಮಸ್ಯೆಯಾಗಿದೆ. ಇದು ಮುಂದುವರೆದರೆ, ವಕೀಲರ ಸಮುದಾಯ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದೆ. ಹೀಗಾಗಿ ರಾಜ್ಯ ಸರ್ಕಾರ ನಮ್ಮ ಮನವಿಯನ್ನು ಪರಿಗಣಿಸಬೇಕು” ಎಂದು ರಂಗನಾಥ್‌ ಮನವಿ ಮಾಡಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *