ಕರ್ನಾಟಕ : ಮತಗಳಿಕೆಯಲ್ಲಿ ಕುಸಿದ ಬಿಜೆಪಿ, ಚೇತರಿಕೆ ಕಂಡ ಕಾಂಗ್ರೆಸ್‌

ಗುರುರಾಜ ದೇಸಾಯಿ
18ನೇ ಲೋಕಸಭಾ ಚುನಾವಣೆಯಲ್ಲಿ, ಕಳೆದ 2019ರ ಲೋಕಸಭಾ ಚುನಾವಣೆಗಿಂತ ಕಾಂಗ್ರೆಸ್‌ ತನ್ನ ಸ್ಥಾನಗಳನ್ನು ಹೆಚ್ಚಿಸಿಕೊಂಡಿದೆ ಮತ್ತು ತನ್ನ ಮತಪ್ರಮಾಣವನ್ನು ಹೆಚ್ಚಿಸಿಕೊಂಡಿದೆ. ಆದರೆ, 2023ರ ವಿಧಾನಸಭಾ ಚುನಾವಣೆಗೆ ಹೋಲಿಸಿದರೆ, ಕಾಂಗ್ರೆಸ್ ಗಳಿಸಿದ ಮತಪ್ರಮಾಣ ಶೇ. 2.55 ರಷ್ಟು ಕುಸಿತ ಕಂಡಿದೆ. ಕಾಂಗ್ರೆಸ್ ತಾನು ನಿರೀಕ್ಷಿಸಿದ ಸ್ಥಾನಗಳು ಬರಲಿಲ್ಲ ಎಂಬ ಅಂಶವನ್ನು ಅಲ್ಲಗಳೆಯುವಂತಿಲ್ಲ. ಯಾಕೆಂದರೆ ಕಾಂಗ್ರೆಸ್‌ 20 ಸ್ಥಾನಗಳಲ್ಲಿ ಗೆಲ್ಲುವ ವಿಶ್ವಾಸವನ್ನು ವ್ಯಕ್ತಪಡಿಸಿತ್ತು. ಒಟ್ಟಿನಲ್ಲಿ, ಕರ್ನಾಟಕದ ಚುನಾವಣೆಯನ್ನು ಎರಡು ಪ್ರಭಲ ಜಾತಿಗಳು ನಿರ್ದರಿಸುತ್ತವೆ ಎಂಬುದನ್ನು ಈ ಚುನಾವಣೆ ಮತ್ತೊಮ್ಮೆ ಸಾಬೀತು ಮಾಡಿತು.  ಕರ್ನಾಟಕ

ಕರ್ನಾಟಕದಲ್ಲಿ 18ನೇ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ 19 ಸ್ಥಾನಗಳನ್ನು ಗೆದ್ದು ಬೀಗಿದೆ. ಅದರಲ್ಲಿ 17 ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿದ್ದು, ಅದರ ಮಿತ್ರಪಕ್ಷವಾದ ಜೆಡಿಎಸ್ 2 ಸ್ಥಾನಗಳಲ್ಲಿ ಜಯ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಇದೇವೇಳೆ ಕಳೆದ ಬಾರಿಯ ಚುನಾವಣೆಯಲ್ಲಿ ಕೇವಲ 1 ಸ್ಥಾನವನ್ನಷ್ಟೇ ಗೆಲ್ಲಲು ಸಫಲವಾಗಿದ್ದ ಕಾಂಗ್ರೆಸ್ ಈ ಬಾರಿ 9 ಸ್ಥಾನಗಳನ್ನು ಗೆದ್ದು ಚೇತರಿಕೆ ಕಂಡಿದೆ.

2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಶೇ. 31.88 ಮತಗಳನ್ನು ಪಡೆದು, ಒಂದು ಸ್ಥಾನದಲ್ಲಿ ಗೆಲುವು ಸಾಧಿಸಿತ್ತು.  2024ರ ಚುನಾವಣೆಯಲ್ಲಿ ಶೇ. 45.43 ಮತಗಳನ್ನು ಪಡೆಯುವ ಮೂಲಕ ತನ್ನ ಮತ ಪ್ರಮಾಣವನ್ನು ಶೇ. 13.55 ಹೆಚ್ಚಿಸಿಕೊಂಡಿದೆ. ಜೊತೆಗೆ ಅದು 8 ಸ್ಥಾನಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ. ಮತ್ತೊಂದಡೆ ಬಿಜೆಪಿ 2019ರ ಚುನಾವಣೆಯಲ್ಲಿ ಪಡೆದಿದ್ದ ಮತ ಪ್ರಮಾಣ ಶೇ. 51.38 ರಿಂದ 2024ರ ಚುನಾವಣೆಯಲ್ಲಿ ಶೇ. 46.06 ಕ್ಕೆ ಇಳಿಕೆಯಾಗಿದೆ. ಬಿಜೆಪಿ ಮತಪ್ರಮಾಣ ಶೇ. 5.32 ರಷ್ಟು ಕಡಿಮೆಯಾಗಿದೆ. ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡರೂ ಬಿಜೆಪಿ ಮತಗಳು ಕುಸಿದಿರುವುದನ್ನು ಕಾಣಬಹುದಾಗಿದೆ. ಇದರೊಂದಿಗೆ ಬಿಜೆಪಿ 25 ಸ್ಥಾನಗಳಿಂದ 17 ಸ್ಥಾನಗಳಿಗೆ ಕುಸಿದಿದೆ.

2023ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಶೇ. 42.88 ರಷ್ಟು ಮತಗಳನ್ನು ಪಡೆದಿತ್ತು. ಇದಕ್ಕೆ ಹೋಲಿಸಿದರೆ, ಇಂದಿನ ಲೋಕಸಭಾ ಚುನಾವಣೆಯಲ್ಲಿ ಅದರ ಮತಪ್ರಮಾಣ ಶೇ. 2.55 ರಷ್ಟು ಕಡಿಮೆಯಾಗಿದೆ. ಬಿಜೆಪಿ ಮತಪ್ರಮಾಣ ಶೇ. 10.6 ರಷ್ಟು ಹೆಚ್ಚಳವಾಗಿದೆ. ಜೆಡಿಎಸ್ ಜೊತೆಗಿನ ಮೈತ್ರಿಯೂ ಈ ಹೆಚ್ಚಳಕ್ಕೆ ಕಾರಣ. ಜೆಡಿಎಸ್ ಮೂರು ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಶೇ. 5.60 ರಷ್ಟು ಮತಗಳನ್ನು ಪಡೆದಿದೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಶೇ. 13.29 ಮತಗಳನ್ನು ಪಡೆದಿತ್ತು. ಕರ್ನಾಟಕ

ಸುಳ್ಳಾದ ಮತಗಟ್ಟೆ ಸಮೀಕ್ಷೆ

ಮತಗಟ್ಟೆ ಸಮೀಕ್ಷೆಗಳು ಬಿಜೆಪಿಗೆ  23ರಿಂದ 25 ಸ್ಥಾನ, ಕಾಂಗ್ರೆಸ್ ಗೆ 3ರಿಂದ 5 ಸ್ಥಾನಗಳ ಭವಿಷ್ಯ ನುಡಿದಿದ್ದವು. ಇನ್ನು ಜೆಡಿಎಸ್ 2 ಸ್ಥಾನ ಗೆಲ್ಲುವ ಸಾಧ್ಯತೆ ಇದೆ ಎಂದು ಹೇಳಿದ್ದವು. ಈ ಸಮೀಕ್ಷೆ ಹುಸಿಯಾಗಿ ಕಾಂಗ್ರೆಸ್‌ 9 ಸ್ಥಾನಗಳನ್ನು ಗಳಿಸಿದೆ.  ಆದರೆ ನಿರೀಕ್ಷಿತ ಸ್ಥಾನಗಳು ಬರಲಿಲ್ಲ ಎಂಬ ಅಂಶವನ್ನು ಅಲ್ಲಗಳೆಯುವಂತಿಲ್ಲ. ಯಾಕೆಂದರೆ ಕಾಂಗ್ರೆಸ್‌ 20 ಸ್ಥಾನಗಳಲ್ಲಿ ಗೆಲ್ಲುವ ವಿಶ್ವಾಸವನ್ನು ವ್ಯಕ್ತಪಡಿಸಿತ್ತು.

ಕಳೆದೆರಡು ದಶಕಗಳ ಚುನಾವಣಾ ಫಲಿತಾಂಶಗಳನ್ನು ಪರಿಶೀಲಿಸಿದರೆ ಕರ್ನಾಟಕದ ಮತದಾರನ ನಾಡಿಮಿಡಿತ ಹೇಗಿದೆ ಎಂಬುದು ನಮಗೆ ತಿಳಿಯುತ್ತದೆ. ಒಂದೇ ವರ್ಷದ ಅಂತರದಲ್ಲಿ ನಡೆದ ವಿಧಾನಸಭೆ ಮತ್ತು ಲೋಕಸಭೆಗಳಲ್ಲಿ ಭಿನ್ನಭಿನ್ನವಾದ ಫಲಿತಾಂಶಗಳು ಬಂದಿವೆ. ಅಂದರೆ ಈ ರಾಜ್ಯದ ಮತದಾರ ರಾಷ್ಟ್ರ ರಾಜಕಾರಣ ಮತ್ತು ರಾಜ್ಯ ರಾಜಕಾರಣವನ್ನು ಒಂದೇ ತಕ್ಕಡಿಯಲ್ಲಿಟ್ಟು ತೂಗುವುದಿಲ್ಲ ಎಂಬುದು ಇದರಿಂದ ಸ್ಪಷ್ಟವಾಗಿದೆ.

ಕಲ್ಯಾಣ ಕರ್ನಾಟಕದಲ್ಲಿ ಬಿಜೆಪಿ ವಾಶೌಟ್‌ 

ಕಲ್ಯಾಣ ಕರ್ನಾಟಕದ 5 ಕ್ಷೇತ್ರಗಳಲ್ಲಿ ಬಿಜೆಪಿ ಹೀನಾಯವಾಗಿ ಸೋಲುಂಡಿದೆ. ಕಳೆದ ಬಾರಿ ಇಲ್ಲಿ ಕಾಂಗ್ರೆಸ್‌ ವಾಶೌಟ್‌ ಆಗಿತ್ತು. ಆದರೆ ಬಿಜೆಪಿ ಈ ಬಾರಿ ವಾಶೌಟ್‌ ಆಗುವುದಿಲ್ಲ ಬದಲಿಗೆ ಒಂದರೆಡು ಸ್ಥಾನಗೆಲ್ಲಬಹುದು ಎಂದು ಅಂದಾಜಿಸಲಾಗಿತ್ತು. ಕಲ್ಯಾಣ ಕರ್ನಾಟಕದಲ್ಲಿ, ಬಿಜೆಪಿ ನಾಯಕರ “ಸಂವಿಧಾನವನ್ನು ಬದಲಾಯಿಸುವ” ಹೇಳಿಕೆಗಳ ಮೇಲೆ ಪಕ್ಷದ ಪರವಾಗಿ ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು ಮತ್ತು ಮುಸ್ಲಿಂ ಮತಗಳನ್ನು ಮತ್ತಷ್ಟು ಕ್ರೋಢೀಕರಿಸಿರುವುದು ಕಾಂಗ್ರೆಸ್‌ನ ಒಟ್ಟು ಪ್ರಾಬಲ್ಯಕ್ಕೆ ಕಾರಣವಾಗಿದೆ.

ಬೀದರ್ ನಲ್ಲಿ ಸಚಿವ ಈಶ್ವರ್ ಖಂಡ್ರೆಯವರ ಪುತ್ರ ಸಾಗರ್ ಖಂಡ್ರೆಯವರು ಗೆದ್ದಿದ್ದು ಅಚ್ಚರಿಯೇ ಸರಿ. ಕೇವಲ 25 ವರ್ಷದ ಸಾಗರ್ ಖಂಡ್ರೆ ಅವರು ಗೆದ್ದಿರುವುದು ಕೇಂದ್ರ ಸಚಿವ ಭಗವಂತ ಖೂಬಾ ವಿರುದ್ಧ! 2019ರ ಲೋಕಸಭಾ ಚುನಾವಣೆಯಲ್ಲಿ ಖೂಬಾ ಎದುರು ನಿಂತಿದ್ದ ಈಶ್ವರ್ ಖಂಡ್ರೆ ಸೋಲು ಕಂಡಿದ್ದರು. ಹಾಗಾಗಿಯೇ, ಈ ಬಾರಿಯ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಖೂಬಾ ಅವರು, 2019ರಲ್ಲಿ ಅಪ್ಪನಿಗೆ ಸೋಲು ತೋರಿಸಿದ್ದೆ. ಈ ಬಾರಿ ಮಗನಿಗೆ ಸೋಲು ತೋರಿಸುತ್ತೇನೆ ಎಂದು ಹೇಳಿದ್ದರು. ಇದನ್ನು ಸವಾಲಾಗಿ ಸ್ವೀಕರಿಸಿದ ಈಶ್ವರ್ ಖಂಡ್ರೆಯವರು ಮಗನ ಜಯಕ್ಕಾಗಿ ಭಾರೀ ಸಾಹಸ ಮಾಡಿದ್ದರು. ಅದರ ಪರಿಣಾಮವಾಗಿ, ಸಾಗರ್ ಖಂಡ್ರೆಯವರು ಗೆಲುವು ಸಾಧಿಸಿ ಸಂಸತ್ ಪ್ರವೇಶಿಸಿದ್ದಾರೆ.

ಬಿಜೆಪಿಯ ಭದ್ರಕೋಟೆ ಕೊಪ್ಪಳದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ್ ಗೆಲುವು ಸಾಧಿಸಿದ್ದು ಅಚ್ಚರಿ ಎನ್ನಲಾಗುತ್ತಿದೆ. ಲಿಂಗಾಯತ ಮತಗಳ ಪ್ರಾಬಲ್ಯವಿರುವ ಈ ಕ್ಷೇತ್ರದಲ್ಲಿ ಹಿಂದುಳಿದ ವರ್ಗದವರು ಗೆಲುವು ಸಾದಿಸಿದ್ದು ಕಡಿಮೆಯೆ. 18 ಲೋಕಸಭಾ ಚುನಾವಣೆಯಲ್ಲಿ 15 ಬಾರಿ ಲಿಂಗಾಯತರು ಗೆಲುವು ಸಾಧಿಸಿದರೆ, ಮೂರು ಬಾರಿ ಮಾತ್ರ ಹಿಂದುಳಿದ ವರ್ಗಕ್ಕೆ ಗೆಲುವು ದಕ್ಕಿದೆ. ರಾಜಶೇಖರ್‌ ಹಿಟ್ನಾಳ್ ಕಳೆದ ಎರಡು ಚುನಾವಣೆಯಲ್ಲಿ ಅಲ್ಪಮತಗಳಿಂದ ಸೋಲುಂಡಿದ್ದರು, ಹಾಗಾಗಿ ಈ ಬಾರಿ ಅನುಕಂಪ ಅವರನ್ನು ಕೈ ಹಿಡಿದಿದೆ. ಹಿಟ್ನಾಳ್ ಅವರು, ತಮ್ಮ ಸಮೀಪದ ಪ್ರತಿಸ್ಪರ್ಧಿಯಾಗಿದ್ದ ಬಿಜೆಪಿಯ ಡಾ. ಬಸವರಾಜ  ವಿರುದ್ಧ 46,357 ಮತಗಳ ಅಂತರದಿಂದ ಜಯ ಗಳಿಸಿದ್ದಾರೆ. ಕರ್ನಾಟಕ

ರಾಯಚೂರಿನಲ್ಲಿ ನಿವೃತ್ತ ಐಎಎಸ್ ಅಧಿಕಾರಿಯಾಗಿ ಜಿ. ಕುಮಾರ್ ನಾಯ್ಕ್ ಅವರು ಹಾಲಿ ಸಂಸದ ಹಾಗೂ ಬಿಜೆಪಿ ಅಭ್ಯರ್ಥಿ ರಾಜಾ ಅಮೇಶ್ವರ ನಾಯಕ್ ಅವರ ವಿರುದ್ಧ 79,781 ಮತಗಳ ಅಂತರದಲ್ಲಿ ಗೆದ್ದಿದ್ದಾರೆ. ಈ ಕ್ಷೇತ್ರವೂ ಕೂಡ ಬಿಜೆಪಿಯ ಭದ್ರಕೋಟೆಯಾಗಿತ್ತು. ಆದರೆ ಸಂಸದರು ಸರಿಯಾಗಿ ಕೆಲಸ ಮಾಡದಿರುವುದು, ಜನರೊಟ್ಟಿಗೆ ಬೆರೆಯದಿರುವುದು ಅವರ ಸೋಲಿಗೆ ಕಾರಣವಾಯಿತು. ಜಿ.ಕುಮಾರ್‌ ನಾಯ್ಕ್‌ ಅಧಿಕಾರಿಯಾಗಿದ್ದಾಗ ಉತ್ತಮ ಕೆಲಸ ಮಾಡಿದ್ದ ಕಾರಣ ಅವರಿಗೆ ಅಧಿಕಾರ ನೀಡಿದರು. ರಾಯಚೂರು ಕ್ಷೇತ್ರ ಸುಧಾರಿಸಬಹುದು, ಅಪೌಷ್ಟಿಕತೆ, ಶಿಕ್ಷಣ ಅಸಮಾನತೆ ನಿವಾರಿಸಬಹುದು ಎಂದು ಮತ ನೀಡಿದ್ದಾರೆ. ಕಾಂಗ್ರೆಸ್‌ ಗ್ಯಾರಂಟಿಗಳೂ ಇಲ್ಲಿನ ಮತದಾರರ ಮೇಲೆ ಪ್ರಭಾವ ಬೀರಿವೆ.

ಕಲಬುರ್ಗಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪರವಾಗಿ ಕಣಕ್ಕಿಳಿದಿದ್ದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಅಳಿಯ ರಾಧಾಕೃಷ್ಣ ದೊಡ್ಡಮನಿ. ಕಳೆದ ಬಾರಿ ಬಿಜೆಪಿಯನ್ನು ಗೆಲ್ಲಿಸಿದ್ದ ಇಲ್ಲಿನ ಮತದಾರರು ಈ ಬಾರಿ ರಾಧಾಕೃಷ್ಣ ಅವರನ್ನು ಗೆಲ್ಲಿಸಿದ್ದಾರೆ. ರಾಧಾಕೃಷ್ಣ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಹಾಗೂ ಹಾಲಿ ಸಂಸದರಾಗಿದ್ದ ಉಮೇಶ್ ಜಾಧವ್ ವಿರುದ್ಧ ಜಯ ಗಳಿಸಿದ್ದಾರೆ. ಉಮೇಶ್ ಜಾಧವ್ ಅವರಿಗೆ 70,313 ಮತಗಳು ಬಂದಿದ್ದರೆ, ರಾಧಾಕೃಷ್ಣ ಅವರು 1,22,042 ಮತಗಳನ್ನು ಪಡೆಯುವ ಮೂಲಕ, 51,729 ಮತಗಳ ಅಂತರದಲ್ಲಿ ಜಯ ಗಳಿಸಿದ್ದಾರೆ. ಈ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು ಎಂಟು ವಿಧಾನಸಭಾ ಕ್ಷೇತ್ರಗಳಿದ್ದು, ಅವುಗಳಲ್ಲಿ ಒಂದು ಜೆಡಿಎಸ್, ಮತ್ತೊಂದರಲ್ಲಿ ಬಿಜೆಪಿ ಶಾಸಕರಿದ್ದಾರೆ. ಉಳಿದ ಆರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರೇ ಇದ್ದಾರೆ. ಖರ್ಗೆಯವರ ಭಾವನಾತ್ಮಕ ಭಾಷಣಕ್ಕೆ ಇಲ್ಲಿನ ಮತದಾರ ಸೋತಂತೆ ಕಾಣುತ್ತದೆ. ಮತ ಕೊಡಿ ಇಲ್ಲವೆ ಒಂದು ಹಿಡಿ ಮಣ್ಣು ಕೊಡಿ ಎಂದು ಖರ್ಗೆ ಭಾಷಣ ಮಾಡಿದ್ದರು. ಕಾಂಗ್ರೆಸ್‌ ಗ್ಯಾರಂಟಿ, ಇಬ್ಬರು ಸಚಿವರು, ಮಲ್ಲಿಕಾರ್ಜುನ ಖರ್ಗೆಯವರ ಪ್ರಭಾವ ಇಲ್ಲಿ ವರ್ಕೌಟ್‌ ಆಗಿದೆ. ಆದಾಗ್ಯೂ ದೊಡ್ಡ ಅಂತರದ ಗೆಲುವಿನ ನಿರೀಕ್ಷೆ ಈಡೇರಿಲ್ಲ ಎಂಬುದು ಗಮನಾರ್ಹ.

ಬಳ್ಳಾರಿಯೆಂದರೆ ಅದು ಗಣಿಧಣಿಗಳ ನಾಡು ಎಂದೇ ಖ್ಯಾತಿ ಪಡೆದಿದೆ. ಅಲ್ಲಿ ಈ ಬಾರಿ ಬಿಜೆಪಿಯಿಂದ ಮಾಜಿ ಸಚಿವ ಬಿ. ಶ್ರೀರಾಮುಲು ಚುನಾವಣೆಗೆ ನಿಂತಿದ್ದರು. ಅವರ ವಿರುದ್ಧ ಸಂಡೂರಿನ ಶಾಸಕ ಇ.ತುಕಾರಾಂ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿತ್ತು. ಆದರೆ, ಅಲ್ಲಿ ತುಕಾರಾಂ ಅವರ ಹೆಸರು ಅಷ್ಟಾಗಿ ಚಾಲ್ತಿಯಲ್ಲಿರಲಿಲ್ಲ. ಆದರೆ, ಅಲ್ಲಿನ ಮತದಾರರು ಲೋಕಲ್ ನಾಯಕರಾದ ಶ್ರೀರಾಮುಲು ಅವರನ್ನು ಸೋಲಿಸಿ, ವಿಜಯನಗರ ಜಿಲ್ಲೆಯಿಂದ ವಲಸೆ ಬಂದಿದ್ದ ತುಕಾರಾಂ ಅವರಿಗೆ ಮಣೆ ಹಾಕಿದ್ದಾರೆ. ತುಕಾರಾಂ 7,30,845 ಮತಗಳನ್ನು, ಶ್ರೀರಾಮುಲು 6,31,853 ಮತಗಳನ್ನು ಪಡೆದಿದ್ದಾರೆ, 98,992 ಮತಗಳ ಅಂತರದಲ್ಲಿ ತುಕಾರಾಂ ಜಯ ಗಳಿಸಿದ್ದಾರೆ. ಬಹುಶಃ ಈ ಚುನಾವಣೆ ರಾಮುಲು ಅವರ ರಾಜಕೀಯ ಭವಿಷ್ಯವನ್ನು ಅಂತ್ಯಗೊಳಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಗಣಿಧಣಿಗಳ ರಿಪಬ್ಲಿಕ್‌ ವಿರುದ್ಧ ಬಳ್ಳಾರಿಯ ಜನ ತಿರುಗಿ ಬಿದ್ದಿದ್ದಾರೆ.

ಇದನ್ನೂ ಓದಿ: ಹಿಂದಿ ರಾಜ್ಯಗಳಲ್ಲಿ ಬಿಜೆಪಿಗೆ ಭಾರೀ ಹಿನ್ನಡೆ : ಸೀಟು, ಮತಗಳಿಕೆ ಕುಸಿದ 5 ರಾಜ್ಯಗಳು

ದಕ್ಷಿಣದಲ್ಲಿ ಬಿಜೆಪಿ ಪ್ರಾಬಲ್ಯ

ದಕ್ಷಿಣ ಕರ್ನಾಟಕದಲ್ಲಿ ಎನ್‌ಡಿಎ ಪರವಾಗಿ ಒಕ್ಕಲಿಗ-ಲಿಂಗಾಯತ  ಮತಗಳು ನಿರ್ಣಾಯಕ ಪಾತ್ರ ವಹಿಸಿವೆ. ಮೂರು ದಶಕಗಳಲ್ಲಿ ಬಹುಶಃ  ಮೊದಲ ಬಾರಿಗೆ, ದಕ್ಷಿಣ ಮತ್ತು ಉತ್ತರ ಕರ್ನಾಟಕದ ಪ್ರಬಲ ಭೂಮಾಲೀಕ ಸಮುದಾಯಗಳಾದ ಲಿಂಗಾಯತ ಮತ್ತು ಒಕ್ಕಲಿಗರು ಒಟ್ಟಾಗಿ ದಕ್ಷಿಣ ಕರ್ನಾಟಕದ 14 ಕ್ಷೇತ್ರಗಳಲ್ಲಿ 12 ಕಡೆ ಬಿಜೆಪಿ ಮತ್ತು ಮಿತ್ರಪಕ್ಷ ಜೆಡಿಎಸ್‌ ಅನ್ನು ಬೆಂಬಲಿಸಿದ್ದಾರೆ. 1996ರಲ್ಲಿ ಅಖಂಡ ಜನತಾದಳ 16 ಸ್ಥಾನಗಳನ್ನು ಪಡೆದು ಎಚ್‌ಡಿ ದೇವೇಗೌಡರು ಪ್ರಧಾನಿ ಹುದ್ದೆಗೆ ಏರಿದ ನಂತರ, ಮೊದಲ ಬಾರಿಗೆ ಎರಡು ಪ್ರಬಲ ಸಮುದಾಯಗಳು ಒಂದಾಗಿವೆ ಎಂದು ರಾಜಕೀಯ ವಿಶ್ಲೇಷಕರು ವಿಶ್ಲೇಷಿಸಿದ್ದಾರೆ.

ಸತತ ಸಂಸತ್ ಚುನಾವಣೆಗಳಲ್ಲಿ ಕರಾವಳಿ ಜಿಲ್ಲೆಗಳಲ್ಲಿ ಅದರಲ್ಲೂ ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡದಲ್ಲಿ ಬಿಜೆಪಿ ತನ್ನ ಪ್ರಬಲ ಹಿಡಿತವನ್ನು ಉಳಿಸಿಕೊಂಡಿದೆ.

1991 ರ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಕ್ಷೇತ್ರವನ್ನು (ಹಿಂದಿನ ಮಂಗಳೂರು ಕ್ಷೇತ್ರ) ಕಾಂಗ್ರೆಸ್‌ನಿಂದ ವಶಪಡಿಸಿಕೊಂಡ ಬಿಜೆಪಿ, ಅಲ್ಲಿಂದ ಸತತ ಎಂಟು ಅವಧಿಗೆ ತನ್ನೊಂದಿಗೆ ಸ್ಥಾನವನ್ನು ಉಳಿಸಿಕೊಂಡಿದೆ (1996, 1998, 1999, 2004, 2009, 2014 ಮತ್ತು 2019).

ಉತ್ತರ ಕನ್ನಡದಲ್ಲಿ ಬಿಜೆಪಿ 1996 ರಲ್ಲಿ ಅನಂತಕುಮಾರ್ ಹೆಗಡೆಯವರ ಗೆಲುವಿನೊಂದಿಗೆ ಮೊದಲ ಲೋಕಸಭಾ ಸ್ಥಾನವನ್ನು ಪಡೆದುಕೊಂಡಿತು. ಅಂದಿನಿಂದ, 1999 ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಮಾರ್ಗರೇಟ್ ಆಳ್ವ ಗೆದ್ದಿದ್ದನ್ನು ಹೊರತುಪಡಿಸಿ, ಹೆಗ್ಡೆ ಅವರು ಐದು ಅವಧಿಗೆ (1998, 2004, 2009, 2014 ಮತ್ತು 2019) ಈ ಕ್ಷೇತ್ರವನ್ನು ಗೆದ್ದರು. ಈಗ ಇಲ್ಲಿ ಬಿಜೆಪಿಯಿಂದ ವಿಶ್ವೆಶ್ವರ ಹೆಗಡೆ ಕಾಗೇರಿ ಗೆಲುವು ಸಾಧಿಸಿದ್ದಾರೆ.

1998ರಲ್ಲಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಐಎಂ ಜಯರಾಮ ಶೆಟ್ಟಿ ಗೆಲುವಿನ  ಮೂಲಕ ಬಿಜೆಪಿ ತನ್ನ ಖಾತೆಯನ್ನು ತೆರೆದಿತ್ತು. ಬಿಜೆಪಿ ಅಂದಿನಿಂದ ಈ ಸ್ಥಾನವನ್ನು ನಾಲ್ಕು ಅವಧಿಗೆ (2004, 2009, 2014 ಮತ್ತು 2019) ಗೆದ್ದಿದೆ. 1999ರಲ್ಲಿ (ಅಭ್ಯರ್ಥಿ ವಿನಯ್ ಕುಮಾರ್ ಸೊರಕೆ) ಹಾಗೂ 2012ರಲ್ಲಿ ನಡೆದ ಉಪಚುನಾವಣೆಯಲ್ಲಿ (ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗ್ಡೆ) ಕಾಂಗ್ರೆಸ್ ಜಯಭೇರಿ ಬಾರಿಸಿತ್ತು. ಈ ಕ್ಷೇತ್ರದಲ್ಲಿ ಎರಡು ಬಾರಿ ಸಂಸದರಾಗಿ, ಹಾಗೂ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವರಾಗಿದ್ದ ಶೋಭಾ ಕರಂದ್ಲಾಜೆ ಪ್ರತಿನಿಧಿಸುತ್ತಿದ್ದರು. ಈಗ ಈ ಕ್ಷೇತ್ರದಲ್ಲಿ ಬಿಜೆಪಿ ತನ್ನ ಬಲವನ್ನು ಮತ್ತಷ್ಟು ಹೆಚ್ಚಿಸಿಕೊಂಡಿದ್ದು ಕೋಟ ಶ್ರೀನಿವಾಸ ಪೂಜಾರಿ ಗೆಲುವು ಸಾಧಿಸಿದ್ದಾರೆ.

ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಕೇಂದ್ರ, ಬೆಂಗಳೂರು ಗ್ರಾಮಾಂತರ, ಮಂಡ್ಯ, ಕೋಲಾರ, ಚಿಕ್ಕಬಳ್ಳಾಪುರ, ಮೈಸೂರು ಕ್ಷೇತ್ರಗಳಲ್ಲಿ ನಿರೀಕ್ಷೆಯಂತೆ ಬಿಜೆಪಿ ಗೆಲುವು ಸಾಧಿಸಿದೆ. ಕಾಂಗ್ರೆಸ್‌  ಪೈಪೋಟಿ ನೀಡಲು ಪ್ರಯತ್ನಿಸಿತ್ತು.

ಬಿಜೆಪಿಗೆ ಶಕ್ತಿ ಕೊಟ್ಟ ಹಿಂದುಳಿದ ವರ್ಗಗಳ ಮತ!

 ಇನ್ನು ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಹಿಂದುಳಿದ ವರ್ಗವಾದ ಬಿಲ್ಲವ ಸಮುದಾಯದ ಮತಗಳನ್ನು ಸೆಳೆಯಲು ಕಾಂಗ್ರೆಸ್ ತಂತ್ರಗಾರಿಕೆ ನಡೆಸಿತ್ತು. ಬಿಲ್ಲವ ಸಮುದಾಯದ ಪದ್ಮರಾಜ್ ಅವರನ್ನು ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿತ್ತು. ಚುನಾವಣೆಯಲ್ಲಿ ಬಿಲ್ಲವ ಸಮುದಾಯದ ಕ್ರೊಢೀಕರಣದ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆಗಳು ನಡೆದಿದ್ದವು. ಆದರೆ ಇದನ್ನು ಮತವಾಗಿ ಕ್ರೋಢೀಕರಿಸುವಲ್ಲಿ ಕಾಂಗ್ರೆಸ್‌ ವಿಫವಾಗಿದೆ. ಬದಲಾಗಿ ಬಿಲ್ಲವ ಮತಗಳನ್ನು ಹಿಂದಿನಂತೆ ಬಿಜೆಪಿ ತನ್ನ ತೆಕ್ಕೆಗೆ ಸೆಳೆಯುವಲ್ಲಿ ಯಶಸ್ವಿಯಾಗಿದೆ.

 ಇನ್ನು ದಕ್ಷಿಣ ಕನ್ನಡ ಜಿಲ್ಲೆಯಂತೆ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲೂ ಬಿಲ್ಲವ ಮತಗಳನ್ನು ತಮ್ಮತ್ತ ಸೆಳೆಯುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಮಂಗಳೂರಿನಲ್ಲಿ ಬಂಟ ಸಮುದಾಯದ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಇರುವ ಬಿಲ್ಲವ ಮತಗಳನ್ನು ತಮ್ಮತ್ತ ಸೆಳೆಯುವಲ್ಲಿ ಬಿಜೆಪಿ ಯಶಸ್ವಿಯಾದರೆ, ಉಡುಪಿ ಚಿಕ್ಕಮಗಳೂರಿನಲ್ಲಿ ಬಿಲ್ಲವ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಅಲ್ಲೂ ಕಾಂಗ್ರೆಸ್‌ಗೆ ಬಿಲ್ಲವ ಮತಗಳು ಹರಿದು ಹೋಗದಂತೆ ತಂತ್ರಗಾರಿಕೆ ರೂಪಿಸಿ ಬಿಜೆಪಿ ಯಶಸ್ವಿಯಾಗಿದೆ.

ಶಿವಮೊಗ್ಗದಲ್ಲೂ ಈಡಿಗ ಮತಗಳು ದೊಡ್ಡ ಪ್ರಮಾಣದಲ್ಲಿದ್ದರೂ ಅವರನ್ನು ಕ್ರೊಢೀಕರಿಸುವಲ್ಲಿ ಕಾಂಗ್ರೆಸ್ ವಿಫಲವಾಗಿದೆ. ಅದೇ ರೀತಿಯಲ್ಲಿ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲೂ ಹಿಂದುಳಿದ ವರ್ಗ ನಾಮಧಾರಿಗಳನ್ನು ತಮ್ಮತ್ತ ಸೆಳೆಯುವಲ್ಲಿ ಕಾಂಗ್ರೆಸ್ ವಿಫಲವಾಗಿದೆ.

ಹಿಂದುಳಿದ ವರ್ಗ ʻಕೈʼ ಹಿಡಿಯದ ಕಾರಣವೇನು?

 ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹಿಂದುಳಿದ ವರ್ಗಗಳು ಕಾಂಗ್ರೆಸ್‌ಗೆ ದೊಡ್ಡ ಪ್ರಮಾಣದಲ್ಲಿ ಸಾಥ್ ನೀಡಿದ್ದವು. ದಕ್ಷಿಣ ಕನ್ನಡ, ಉಡುಪಿ ಹೊರತಾಗಿ ಉತ್ತರ ಕನ್ನಡ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗದಲ್ಲೂ ಕಾಂಗ್ರೆಸ್ ಹೆಚ್ಚಿನ ಸ್ಥಾನಗಳನ್ನು ಗಳಿಸಲು ಸಾಧ್ಯವಾಗಿತ್ತು. ಹಿಂದುತ್ವದ ಭದ್ರಕೋಟೆ ಎಂದೇ ಬಿಂಬಿತವಾಗಿದ್ದ ಚಿಕ್ಕಮಗಳೂರಿನಲ್ಲಿ ಐದು ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆಲುವು ಸಾಧಿಸಿತ್ತು.

ಶಿವಮೊಗ್ಗ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳ ಪೈಕಿ 3 ಸ್ಥಾನಗಳನ್ನು ಕಾಂಗ್ರೆಸ್ ಗೆದ್ದುಕೊಂಡಿತ್ತು. ಉತ್ತರ ಕನ್ನಡ ಜಿಲ್ಲೆಯ 6 ಕ್ಷೇತ್ರಗಳ ಪೈಕಿ ಕಾಂಗ್ರೆಸ್‌ 4 ರಲ್ಲಿ ಗೆಲುವು ಸಾಧಿಸಿತ್ತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2 ಸ್ಥಾನಗಳನ್ನು ಗೆದ್ದರೆ, ಕೊಡಗು ಜಿಲ್ಲೆಯಲ್ಲೂ 2 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಆದರೆ ಉಡುಪಿಯಲ್ಲಿ ಮಾತ್ರ ಗೆಲುವು ಸಾಧ್ಯವಾಗಿರಲಿಲ್ಲ. ಲೋಕಸಭೆಯಲ್ಲಿ ಇವೆಲ್ಲವೂ ಬಿಜೆಪಿ ಪಾಲಾಗಿದೆ.

 ಈ ಕುರಿತಾಗಿ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ನಾಯಕ ಡಾ. ಸಿಎಸ್‌ ದ್ವಾರಕನಾಥ್ ಮಾತನಾಡಿ ‘ಲೋಕಸಭೆ ಚುನಾವಣೆಯಲ್ಲಿ ಹಿಂದುಳಿದ ವರ್ಗಗಳನ್ನು ತಮ್ಮತ್ತ ಸೆಳೆಯುವಲ್ಲಿ ಪಕ್ಷ ವಿಫಲವಾಗಿದೆ ಎಂಬುದು ನಿಜ. ಹಿಂದುಳಿದ ವರ್ಗಳಲ್ಲಿ 197 ಜಾತಿಗಳಿವೆ ಹಾಗೂ ಆದಿವಾಸಿ ಅಲೆಮಾರಿ ಸಮುದಾಯಗಳ 120 ಜಾತಿಗಳಿವೆ. ಪಕ್ಷ ಈ ಸಮುದಾಯಗಳನ್ನು ಸೆಳೆಯುವ ಪ್ರಯತ್ನವನ್ನು ಪೂರ್ಣ ಪ್ರಮಾಣದಲ್ಲಿ ಮಾಡಿಲ್ಲ. ಆದರೆ ಬಿಜೆಪಿ ಇದರಲ್ಲಿ ಯಶಸ್ವಿಯಾಗಿದೆ. ಸಿಎಂ ಸಿದ್ದರಾಮಯ್ಯ ಕಾರಣದಿಂದ ಒಂದು ಸಮುದಾಯ ಕಾಂಗ್ರೆಸ್‌ಗೆ ಹತ್ತಿರವಾಯಿತು. ಉಳಿದ ಸಮುದಾಯಗಳು ಕಾಂಗ್ರೆಸ್‌ಗೆ ಮತ ನೀಡಲು ಸಿದ್ದವಿದ್ದರೂ ಅವುಗಳನ್ನು ಸೆಳೆಯುವ ನಿಟ್ಟಿನಲ್ಲಿ ವಿಫಲವಾಗಿದ್ದೇವೆ. ಇದನ್ನು ಸರಿಪಡಿಸಬೇಕಾದ ಕೆಲಸವನ್ನು ಮುಂದಿನ ದಿನಗಳಲ್ಲಿ ಮಾಡುತ್ತೇವೆ’ ಎನ್ನುತ್ತಾರೆ.

ಎರಡು ಪಕ್ಷಕ್ಕೆ ಆಸರೆಯಾದ ದಲಿತ ಸಮುದಾಯದ ಮತಗಳು

ರಾಯಚೂರು, ಬಳ್ಳಾರಿ ಮತ್ತು ಅಕ್ಕಪಕ್ಕದ ಕ್ಷೇತ್ರಗಳಲ್ಲಿ ಪ್ರಬಲವಾಗಿರುವ ನಾಯಕ್ ಸಮುದಾಯವು ಕಾಂಗ್ರೆಸ್‌ಗೆ ಬೆಂಬಲವನ್ನು ಮುಂದುವರೆಸಿದಂತೆ ಕಾಣುತ್ತಿಲ್ಲ. 2023 ರ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಈ ಸಮುದಾಯ  (ಎಸ್‌ಟಿ ಮೀಸಲಾತಿಯಲ್ಲಿನ ಗೊಂದಲದಿಂದ) ಬಿಜೆಪಿಯಿಂದ ದೂರ ಸರಿದಿದೆ ಎಂದು ನಂಬಲಾಗಿದೆ. ಬಳ್ಳಾರಿಯಲ್ಲಿ (ಎಸ್‌ಟಿ) ಬಿಜೆಪಿಯ ಮಾಜಿ ಸಚಿವ ಬಿ.ಶ್ರೀರಾಮುಲು ಸೋಲು ಮತ್ತು ರಾಯಚೂರಿನಲ್ಲಿ (ಎಸ್‌ಟಿ) ಕಾಂಗ್ರೆಸ್‌ನ ಗೆಲುವನ್ನು ಈ ಹಿನ್ನೆಲೆಯಲ್ಲಿ ನೋಡಲಾಗುತ್ತಿದೆ.

ಕಲ್ಯಾಣ ಕರ್ನಾಟಕದಲ್ಲಿ ಲಿಂಗಾಯತರು ಕಾಂಗ್ರೆಸ್ ಪರವಾಗಿ ಮತ ಚಲಾಯಿಸಿದ್ದಾರೆ. ಪರಿಶಿಷ್ಟ ಪಂಗಡಕ್ಕೆ ಮೀಸಲಾದ ನಾಲ್ಕು ಕ್ಷೇತ್ರಗಳಲ್ಲಿ ಕಾಂಗ್ರೆಸ್ 2 ಮತ್ತು ಬಿಜೆಪಿ ಹಾಗೂ ಜೆಡಿಎಸ್ ತಲಾ ಒಂದನ್ನು ಗೆದ್ದಿವೆ. ಅಗಾಧ ಸಂಖ್ಯೆಯ ಪರಿಶಿಷ್ಟ ಜಾತಿಗಳು ಕಾಂಗ್ರೆಸ್‌ಗೆ ಮತ ಹಾಕಿದ್ದರೂ, ಪ್ರಬಲ ಜಾತಿಗಳು ಒಗ್ಗೂಡಿ ಬಿಜೆಪಿ ಮತ್ತು ಜೆಡಿಎಸ್  ಗೆಲುವಿಗೆ ಕಾರಣವಾಯಿತು ಎಂದು ವಿಶ್ಲೇಷಿಸಲಾಗುತ್ತಿದೆ.

ಬಿಜೆಪಿ ಬಲ ಹೆಚ್ಚಿಸಿದ ಮೈತ್ರಿ 

ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯ ಫಲ ಎರಡೂ ಪಕ್ಷಗಳಿಗೆ ದಕ್ಕಿದೆ. ಹಾಸನ ಹೊರತಾಗಿ ಒಕ್ಕಲಿಗ ಬೆಲ್ಟ್‌ನಲ್ಲಿ ಕಾಂಗ್ರೆಸ್ ನ್ನು ಕಟ್ಟಿ ಹಾಕುವಲ್ಲಿ ಮೈತ್ರಿ ಯಶಸ್ವಿಯಾಗಿದೆ.

2019 ರಲ್ಲಿ ಬಿಜೆಪಿ ಶೇ. 51.7 ರಷ್ಟು ಮತಗಳನ್ನು ಪಡೆದು 25 ಕ್ಷೇತ್ರಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಕಾಂಗ್ರೆಸ್ ಕೇವಲ 1 ಸ್ಥಾನ ಮಾತ್ರ ಗಳಿಸಿ ಶೇ.32.11 ಮತಗಳನ್ನು ಗಳಿಸಿಕೊಂಡಿತ್ತು. ಇನ್ನು ಹಾಸನದಲ್ಲಿ ಮಾತ್ರ ಗೆದ್ದಿದ್ದ ಜೆಡಿಎಸ್ ಶೇ.9.74 ಮತಗಳನ್ನು ಪಡೆದುಕೊಂಡಿತ್ತು.

ಈ ಬಾರಿಯ ಮತ ಹಂಚಿಕೆ ಲೆಕ್ಕಾಚಾರ ಗಮನಿಸಿದರೆ, ಬಿಜೆಪಿ 17 ಸ್ಥಾನಗಳನ್ನು ಪಡೆದುಕೊಂಡು ಶೇ.46.06 ಮತಗಳನ್ನು ಪಡೆದುಕೊಂಡಿದೆ. ಕಾಂಗ್ರೆಸ್ 9 ಸ್ಥಾನಗಳಲ್ಲಿ ಗೆದ್ದು ಶೇ.45.43 ಮತಗಳನ್ನು ಪಡೆದುಕೊಂಡಿದೆ. ಹಾಗೂ ಜೆಡಿಎಸ್‌ 2 ಸ್ಥಾನಗಳನ್ನು ಗೆದ್ದು ಶೇ.5.60  ಮತಗಳನ್ನು ಪಡೆದುಕೊಂಡಿದೆ.

ಮಂಡ್ಯ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ಮೈಸೂರು ಕ್ಷೇತ್ರಗಳಲ್ಲಿ ದೊಡ್ಡ ಪ್ರಮಾಣದ ಮತಗಳ ಅಂತರದಲ್ಲಿ ಮೈತ್ರಿ ಅಭ್ಯರ್ಥಿಗಳಿಗೆ ಗೆಲುವಾಗಿದೆ. ಅದರಲ್ಲೂ ಬೆಂಗಳೂರು ಗ್ರಾಮಾಂತರದಲ್ಲಿ ಎರಡೂವರೆ ಲಕ್ಷಕ್ಕೂ ಅಧಿಕ ಮತಗಗಳನ್ನು ಪಡೆದುಕೊಂಡು ಡಾ. ಸಿಎನ್ ಮಂಜುನಾಥ್ ಗೆದ್ದರೆ, ಮಂಡ್ಯದಲ್ಲೂ ಇಷ್ಟೇ ಪ್ರಮಾಣದ ಅಂತರದಲ್ಲಿ ಎಚ್‌ಡಿ ಕುಮಾರಸ್ವಾಮಿ ಗೆಲುವು ಸಾಧಿಸಿದ್ದಾರೆ.

ಬಾಂಬೆ ಕರ್ನಾಟಕ ಪ್ರದೇಶದಲ್ಲಿ, ಬಿಜೆಪಿ ಉತ್ತಮ ಪ್ರದರ್ಶನವನ್ನು ಮುಂದುವರೆಸಿದೆ ಮತ್ತು ಲಿಂಗಾಯತರ ಅಗಾಧ ಬೆಂಬಲ ಮತ್ತು ಒಬಿಸಿಗಳ ನಡುವಿನ ಒಗ್ಗಟ್ಟಿನ ಕೊರತೆ ಇದಕ್ಕೆ ಕಾರಣವಾಗಿದೆ. ಲಿಂಗಾಯತರ ವಿರೋಧ ಕಟ್ಟಿಕೊಂಡಿದ್ದ ಕೇಂದ್ರ ಸಚಿವ ಪ್ರಲ್ಹಾದ್‌ ಜೋಷಿ ಸೋಲುವ ಹಂತಕ್ಕೆ ತಲುಪಿದ್ದರು. ನೇಹಾ ಕೊಲೆಯನ್ನು ರಾಜಕೀಯವಾಗಿ ಬಳಸಿಕೊಳ್ಳದೆ ಇದ್ದಿದ್ದರೆ ಜೋಷಿ ಹೀನಾಯವಾಗಿ ಸೋಲುತ್ತಿದ್ದರು. ಕಿತ್ತೂರು ಕರ್ನಾಟಕದಲ್ಲಿ ಲಿಂಗಾಯತರು ಬಿಜೆಪಿಗೆ ಮತ್ತೆ ಮನ್ನಣೆ ನೀಡಿದ್ದಾರೆ.

ಸಚಿವರ ಮಕ್ಕಳಿಗೆ ಟಿಕೆಟ್‌ : ಈ ಬಾರಿಯ ವಿಶೇಷತೆ ಎಂದರೆ ಆರು ಹಾಲಿ ಸಚಿವರ ಮಕ್ಕಳು ಅಭ್ಯರ್ಥಿಗಳಾಗಿ ಕಣಕ್ಕಿಳಿದ್ದರು. ಆದರೆ ಕಾಂಗ್ರೆಸ್​ ಗೆ ಮಿಶ್ರ ಫಲಿತಾಂಶ ಸಿಕ್ಕಿದೆ. ಮೂವರು ಸಚಿವರ ಮಕ್ಕಳು ಗೆಲುವು ಸಾಧಿಸಿದರೆ, ಮೂವರು ಸೋಲು ಕಂಡಿದ್ದಾರೆ.

ಚಿಕ್ಕೋಡಿ ಕ್ಷೇತ್ರದಲ್ಲಿ ಸಚಿವ ಸತೀಶ್‌ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಅವರು ಬಿಜೆಪಿ ಅಭ್ಯರ್ಥಿ ಅಣ್ಣಾ ಸಾಹೇಬ್‌ ಜೊಲ್ಲೆ ಅವರನ್ನು ಸೋಲಿಸುವ ಮೂಲಕ ಗೆಲುವಿನ ನಗೆ ಬೀರಿದ್ದಾರೆ. ಈ ಮೂಲಕ ಮೊದಲ ಬಾರಿಗೆ ಸಂಸತ್‌ ಪ್ರವೇಶಿಸುತ್ತಿದ್ದಾರೆ.

ಬೆಳಗಾವಿ ಕ್ಷೇತ್ರದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃಣಾಲ್‌ ಹೆಬ್ಬಾಳ್ಕರ್‌ ಸೋಲು ಕಂಡಿದ್ದಾರೆ. ಕಾಂಗ್ರೆಸ್‌ ತೊರೆದು ಮರಳಿ ಬಿಜೆಪಿ ಸೇರಿದ್ದ ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ಇಲ್ಲಿ ಗೆಲುವು ಸಾಧಿಸಿದ್ದಾರೆ. ಬಾಗಲಕೋಟೆ ಕ್ಷೇತ್ರದಲ್ಲಿ ಸಚಿವ ಶಿವಾನಂದ ಪಾಟೀಲ್ ಪುತ್ರಿ ಸಂಯುಕ್ತಾ ಪಾಟೀಲ್‌ ಸೋಲು ಅನುಭವಿಸಿದ್ದಾರೆ. ಪ್ರತಿಸ್ಪರ್ಧಿ ಬಿಜೆಪಿ ಗೆಲುವಿನ ಸರ್ದಾರ ಪಿ ಸಿ ಗದ್ದಿಗೌಡರ್‌ ಮತ್ತೆ ಗೆಲುವಿನ ನಗೆ ಬೀರಿದ್ದಾರೆ.

ಬೀದರ್ ಕ್ಷೇತ್ರದಲ್ಲಿ ಸಚಿವ ಈಶ್ವರ್‌ ಖಂಡ್ರೆ ಪುತ್ರ ಸಾಗರ್‌ ಖಂಡ್ರೆ ಅವರು ಗೆಲುವು ಸಾಧಿಸಿದ್ದು, ರಾಜ್ಯದ ಕಿರಿಯ ಸಂಸದ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಬಿಜೆಪಿಯ ಭಗವಂತ ಖೂಬಾ ಸೋಲು ಅನುಭವಿಸಿದ್ದಾರೆ.

ಚಾಮರಾಜನಗರ ಎಸ್‌ಸಿ ಮೀಸಲು ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಸಚಿವ ಹೆಚ್‌ ಸಿ ಮಹದೇವಪ್ಪ ಪುತ್ರ ಸುನೀಲ್‌ ಬೋಸ್‌ ಗೆಲುವು ಸಾಧಿಸಿ ಮೊದಲ ಬಾರಿಗೆ ಸಂಸತ್‌ ಪ್ರವೇಶಿಸುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿ ಎಸ್‌ ಬಾಲರಾಜ್‌ ಸೋಲು ಕಂಡಿದ್ದಾರೆ.

ಬೆಂಗಳೂರು ದಕ್ಷಿಣ ಕೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಸಚಿವ ರಾಮಲಿಂಗಾರೆಡ್ಡಿ ಅವರ ಪುತ್ರಿ ಸೌಮ್ಯಾ ರೆಡ್ಡಿ ಸೋಲು ಕಂಡಿದ್ದಾರೆ. ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಎರಡನೇ ಅವಧಿಗೆ ಗೆಲುವು ಸಾಧಿಸಿ ಸಂಸತ್‌ ಪ್ರವೇಶಿಸುತ್ತಿದ್ದಾರೆ.

ಸಚಿವರ ಮಕ್ಕಳಿಗೆ ಟಿಕೆಟ್‌ ನೀಡಿದ್ದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಪಕ್ಷಕ್ಕಾಗಿ ಹಲವಾರು ವರ್ಷಗಳಿಂದ ದುಡಿದ ನಿಷ್ಟಾವಂತ ಕಾರ್ಯಕರ್ತರು ಚುನಾವಣೆಯಿಂದ ಹಿಂದೆ ಸರಿಯುವಂತಾಗಿತ್ತು. ದಾವಣಗೇರೆಯಲ್ಲಿ ಒಬ್ಬ ಕಾಂಗ್ರೆಸ್‌ ಮುಖಂಡ ಬಂಡಾಯವೆದ್ದು ಸ್ಪರ್ಧಿಸಿದ್ದರು. ಹೆಚ್ಚಿನ ಪರಿಣಾಮ ಬೀರದಿದ್ದರು, ಸಣ್ಣ ಮತಗಳಷ್ಟು ಬಿಜೆಪಿಯ ಕಡೆ ವರ್ಗಾವಣೆ ಆಗಿದೆ ಎಂಬ ಲೆಕ್ಕಾಚಾರಗಳು ಚರ್ಚೆಯಾಗುತ್ತಿವೆ.

ಒಟ್ಟಿನಲ್ಲಿ, ಕರ್ನಾಟಕದ ಚುನಾವಣೆಯನ್ನು ಎರಡು ಪ್ರಭಲ ಜಾತಿಗಳು ನಿರ್ದರಿಸುತ್ತವೆ ಎಂಬುದನ್ನು ಈ ಚುನಾವಣೆ ಮತ್ತೊಮ್ಮೆ ಸಾಬೀತು ಮಾಡಿತು.

 

Donate Janashakthi Media

Leave a Reply

Your email address will not be published. Required fields are marked *