ಕೋವಿಡ್‌ನಿಂದ ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡ 50 ಮಕ್ಕಳು ಪತ್ತೆ: ಶಶಿಕಲಾ ಜೊಲ್ಲೆ

ಬೆಂಗಳೂರು: ಕೊರೊನಾ ಎರಡನೇ ಅಲೆಯಿಂದ ತಂದೆ ತಾಯಿ ಇಬ್ಬರನ್ನು ಕಳೆದುಕೊಂಡ ಒಟ್ಟು 50 ಮಕ್ಕಳನ್ನು ಪತ್ತೆ ಮಾಡಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.

ತಂದೆ ತಾಯಿ ಕಳೆದುಕೊಂಡ ಮಕ್ಕಳಿಗೆ ಮಾಸಿಕ 3500 ರೂ. ನೀಡುವುದು. 10 ವರ್ಷದ ಒಳಗಿನ ಮಕ್ಕಳ ಶಿಕ್ಷಣಕ್ಕೆ ಸರ್ಕಾರಿ ವಸತಿ ಶಾಲೆಗಳಲ್ಲಿ ವ್ಯವಸ್ಥೆ ಕಲ್ಪಿಸುವುದು ಹಾಗೂ 21 ವರ್ಷ ಪೂರೈಸಿರುವ ತಂದೆ ತಾಯಿಗಳನ್ನು ಕಳೆದುಕೊಂಡ ಹೆಣ್ಣು ಮಕ್ಕಳಿಗೆ 1 ಲಕ್ಷ ರೂ. ಸಹಾಯಧನವನ್ನು ನೇರವಾಗಿ ಅವರ ಅಕೌಂಟ್‌ಗೆ ತಲುಪಿಸಲು ಇಲಾಖೆಯಿಂದ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುತ್ತಿದೆ.

ಅಲ್ಲದೇ, ಪೋಷಕರನ್ನು ಕಳೆದುಕೊಂಡ 21 ವರ್ಷ ಮೇಲ್ಪಟ್ಟ ಹೆಣ್ಣುಮಕ್ಕಳಿಗೆ 1 ಲಕ್ಷ ರೂಪಾಯಿ ಸಹಾಯಧನ ನೀಡಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ. ಒಂದು ವೇಳೆ ಇಬ್ಬರೂ ಪೋಷಕರನ್ನು ಕಳೆದುಕೊಂಡ ಮಕ್ಕಳನ್ನು ನೋಡಿಕೊಳ್ಳಲು ಅವರ ಕುಟುಂಬಸ್ಥರಿಗೆ ಸಾಧ್ಯವಾಗದೇ ಇದ್ದಲ್ಲಿ, ಅಂತಹ ಮಕ್ಕಳನ್ನು ದತ್ತು ಯೋಜನೆಯ ಭಾಗವಾಗಿಸಲಾಗುವುದು. ಸಹೃದಯರು ಅಂತಹ ಮಕ್ಕಳ ಜವಾಬ್ದಾರಿ ತೆಗೆದುಕೊಳ್ಳುವುದಾಗಿ ಅದಕ್ಕಾಗಿ ಸರಕಾರ ಸಹಾಯವನ್ನು ಕಲ್ಪಸಲಿದೆ ಎಂದು ಸಚಿವರು ತಿಳಿಸಿದರು.

ಕೋವಿಡ್‌ ಸಾಂಕ್ರಾಮಿಕ ರೋಗದ ಮೊದಲ ಅಲೆಗಿಂತ ಎರಡನೇ ಅಲೆ ಹೆಚ್ಚು ಆತಂಕ ಸೃಷ್ಟಿಸಿದೆ. ದೇಶದಲ್ಲಿ ಎಷ್ಟೋ ಕುಟುಂಬಗಳ ಆಧಾರಸ್ತಂಭಗಳಾಗಿದ್ದವರೇ ಮರಣ ಹೊಂದಿದ್ದಾರೆ. ಮಧ್ಯವಯಸ್ಕರ ಮರಣ ಪ್ರಮಾಣವೂ ಹೆಚ್ಚಾಗುತ್ತಲೇ ಇವೆ. ಕೊರೊನಾ ಸೋಂಕು ವೃದ್ದರು ಮತ್ತು ದೇಹದ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ, ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಹೆಚ್ಚು ಅಪಾಯಕಾರಿ ಎಂದು ನಂಬಿಕೊಂಡಿದ್ದು ಎರಡನೇ ಅಲೆ ವೇಳೆಗೆ ಬದಲಾಗಿದೆ.

ಕೊರೊನಾ ಮೂರನೇ ಅಲೆ ಮಕ್ಕಳಿಗೆ ಹೆಚ್ಚು ತೊಂದರೆ ಉಂಟುಮಾಡಬಹುದು ಎಂಬ ಅಂಶಗಳಿರುವುದರಿಂದ ಸರ್ಕಾರ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ತಾಲ್ಲೂಕು ಮಟ್ಟದಲ್ಲಿಯೇ ತಜ್ಞ ವೈದ್ಯರನ್ನು ಗುರುತಿಸುವ ಕೆಲಸ ಆಗುತ್ತಿದೆ. ಮಕ್ಕಳಿಗೆಂದೇ ಪ್ರತ್ಯೇಕ ಘಟಕ ಸ್ಥಾಪಿಸಲು ಸಾಕಷ್ಟು ಸಲಹೆ ಬಂದಿದೆ. ಅದನ್ನು ಮುಖ್ಯಮಂತ್ರಿ ಬಳಿ ತುರ್ತಾಗಿ ಚರ್ಚಿಸಿ ನಿರ್ಧರಿಸುತ್ತೇವೆ ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

ಸಚಿವೆ ಶಶಿಕಲಾ ಜೊಲ್ಲೆ ಅವರು ಇಂದು ಕೋವಿಡ್-19 ನಿಂದಾಗಿ ಪೋಷಕರನ್ನು ಕಳೆದುಕೊಂಡ ಮಕ್ಕಳು ಹಾಗೂ ಅವರನ್ನು ಪಾಲನೆ ಮಾಡುತ್ತಿರುವ ಪಾಲಕರ ಜೊತೆಗೆ ವಿಡಿಯೋ ಸಂವಾದವನ್ನು ಸಚಿವೆ ಶಶಿಕಲಾ ಜೊಲ್ಲೆ ಅವರು ನಡೆಸಿದರು. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ತಂದೆ ತಾಯಿಗಳನ್ನು ಕಳೆದುಕೊಂಡ 19 ಮಕ್ಕಳ ಜೊತೆಗೆ ಸಚಿವರು ಸುಮಾರು ಮೂರು ಗಂಟೆಗಳ ಕಾಲ ವಿಡಿಯೋ ಸಂವಾದ ನಡೆಸಿದರು.

ಮಕ್ಕಳನ್ನು ಕಳೆದುಕೊಂಡ ಪಾಲಕರಿಗೆ ಸಾಂತ್ವನ ಹೇಳಿ, ಆತ್ಮಸ್ಥೈರ್ಯ ತುಂಬಿ, ಅವರ ಮನಸ್ಸಿನ ನೋವು, ಸಮಸ್ಯೆಗಳನ್ನು ಮನಗಂಡು, ಸರ್ಕಾರದಿಂದ ನೀಡಲಾಗುವ ನೆರವಿನ ಕುರಿತು ಮಾಹಿತಿ ನೀಡಿದರು.

ಸರ್ಕಾರದಿಂದ ಸಿಗಬೇಕಾಗಿದ್ದ ಸೌಲಭ್ಯಗಳನ್ನು ಅತೀ ಶೀಘ್ರದಲ್ಲಿ ನೀಡುತ್ತೇವೆ. ಮುಂದೇನಾದರೂ ಅಗತ್ಯವಿದ್ದಲ್ಲಿ ಅಗತ್ಯ ನೆರವು ನೀಡಲು ಸರ್ಕಾದ ಸದಾ ಸಿದ್ಧವಿದೆ ಎಂದು ಸಚಿವರು ತಿಳಿಸಿದರು. ಈ ಸಂದರ್ಭದಲ್ಲಿ ಮಕ್ಕಳ ರಕ್ಷಣಾ ನಿರ್ದೇಶನಾಲಯದ ನಿರ್ದೇಶಕಿ  ಪಲ್ಲವಿ ಆಕೃತಿ, ನೋಡಲ್ ಅಧಿಕಾರಿಗಳಾದ ಮೋಹನರಾಜ, ವಿವಿಧ ಜಿಲ್ಲೆಗಳ ಡಿ.ಸಿ.ಪಿ.ಓ. ಹಾಗೂ ಸಿ.ಡಿ.ಪಿ.ಓ ಅಧಿಕಾರಿಗಳು ಹಾಜರಿದ್ದರು.

Donate Janashakthi Media

Leave a Reply

Your email address will not be published. Required fields are marked *