ಬೆಂಗಳೂರು: ರಾಜ್ಯದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕ ಹುದ್ದೆಗಳಿಗೆ 2021-22ನೇ ಸಾಲಿಗೆ ತಾತ್ಕಾಲಿಕವಾಗಿ 23,078 ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶಿಸಿದೆ.
ಮಾಹಿತಿ ಪ್ರಕಾರ ಇಲಾಖೆಯಲ್ಲಿ ಸುಮಾರು 30 ಸಾವಿರ ಶಿಕ್ಷಕರ ಕೊರತೆ ಇದ್ದು, ಅತಿಥಿ ಉಪನ್ಯಾಸಕರಿಂದ ಈ ಕೊರತೆ ನಿಭಾಯಿಸಲು ಸರ್ಕಾರ ಮುಂದಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ತಡವಾಗಿ ಶಾಲೆಗಳು ಆರಂಭವಾಗಿದ್ದು ಆದಷ್ಟು ಬೇಗ ಪಠ್ಯಕ್ರಮ ಬೋಧನೆ ಪೂರ್ಣಗೊಳಿಸಲು ಅನುವಾಗುವಂತೆ ಅತಿಥಿ ಶಿಕ್ಷಕರ ನೇಮಕ ಮಾಡಿಕೊಳ್ಳಲು ಅನುಮತಿ ಕೋರಿ ಶಿಕ್ಷಣ ಇಲಾಖೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು.
ಇದನ್ನು ಓದಿ: ಅತಿಥಿ ಉಪನ್ಯಾಸಕರನ್ನು ಕಾಯಂಗೊಳಿಸುವಂತೆ ಆಗ್ರಹಿಸಿ ಸಿಎಂಗೆ ಸಭಾಪತಿ ಹೊರಟ್ಟಿ ಪತ್ರ
ಪ್ರಾಥಮಿಕ ಶಾಲೆಗಳಿಗೆ 18,000 ಅತಿಥಿ ಶಿಕ್ಷಕರು ಮತ್ತು ಪ್ರೌಢ ಶಾಲೆಗಳಿಗೆ ಎರಡನೇ ಹಂತದಲ್ಲಿ 5078 ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ.ವಿಶಾಲ್ ಆದೇಶ ಮಾಡಿದ್ದಾರೆ. ಮೊದಲ ಹಂತದಲ್ಲಿ ಈಗಾಗಲೇ 3200ಕ್ಕೂ ಹೆಚ್ಚು ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ.
ಸಾರ್ವಜನಿಕ ಶಿಕ್ಷಣ ಇಲಾಖೆಯು ಪ್ರತಿ ಜಿಲ್ಲೆ, ತಾಲ್ಲೂಕುಗಳ ಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ಪಟ್ಟಿಯನ್ನು ಪ್ರಕಟಿಸಿದೆ. ಆಯಾ ಶಾಲಾ ಮುಖ್ಯ ಶಿಕ್ಷಕರಿಗೆ ಅತಿಥಿ ಉಪನ್ಯಾಸಕರ ನೇಮಕಾತಿ ಹೊಣೆ ವಹಿಸಲಾಗಿದೆ. ಪ್ರಾಥಮಿಕ ಶಿಕ್ಷಕರನ್ನು ಸೆಪ್ಟೆಂಬರ್ ತಿಂಗಳಿಂದ 2022ರ ಮಾರ್ಚ್‌ವರೆಗೆ, ಪ್ರೌಢಶಾಲಾ ಶಿಕ್ಷಕರನ್ನು ಅಕ್ಟೋಬರ್ 21ರಿಂದ ಏಪ್ರಿಲ್ 2022ರವರೆಗೆ ಅನ್ವಯಿಸುವಂತೆ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಬೇಕು. ಅತಿಥಿ ಶಿಕ್ಷಕ ಹುದ್ದೆಗೆ ನಿಗದಿಪಡಿಸಿರುವ ಕನಿಷ್ಠ ವಿದ್ಯಾರ್ಹತೆಯನ್ನು ಪರಿಗಣಿಸಿ ಮೆರಿಟ್ ಆಧಾರದಲ್ಲಿ ಆಯ್ಕೆ ಮಾಡಬೇಕು ಎಂದು ತಿಳಿಸಿದ್ದಾರೆ.
ಇದನ್ನು ಓದಿ: ಹಿಂದಿನ ಅತಿಥಿ ಉಪನ್ಯಾಕರನ್ನು ಮುಂದುವರೆಸಲು ಆಗ್ರಹ
ನೇಮಕಗೊಳ್ಳುವ ಪ್ರಾಥಮಿಕ ಶಾಲಾ ಅತಿಥಿ ಉಪನ್ಯಾಸಕರಿಗೆ ತಿಂಗಳಿಗೆ ರೂ.7500, ಪ್ರೌಢಶಾಲಾ ಅತಿಥಿ ಉಪನ್ಯಾಸಕರಿಗೆ ತಿಂಗಳಿಗೆ ರೂ.8000 ಸಂಭಾವನೆ ನಿಗದಿಪಡಿಸಲಾಗಿದೆ. ತಾಲ್ಲೂಕುವಾರು ನೇಮಕೊಂಡ ಅತಿಥಿ ಉಪನ್ಯಾಸಕರ ಮಾಹಿತಿ ಸಂಗ್ರಹಿಸಿ ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳು ಜಿಲ್ಲೆಯಿಂದ ಅನುದಾನ ಬಿಡುಗಡೆಗೆ ಬೇಡಿಕೆ ಸಲ್ಲಿಸಬೇಕು. ಆರ್ಥಿಕ ಇಲಾಖೆಯಿಂದ ನೇರವಾಗಿ ತಾಲ್ಲೂಕು ಪಂಚಾಯಿತಿಗಳಿಗೆ ಸಂಭಾವನೆಯ ಹಣ ಬಿಡುಗಡೆಯಾಗಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಪ್ರಸ್ತುತ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯು ನಡೆಯುತ್ತಿದ್ದು, ಯಾವುದೇ ಶಾಲೆಯ ಖಾಲಿ ಹುದ್ದೆಗೆ ವರ್ಗಾವಣೆಯಾಗಿ ಬಂದ ಶಿಕ್ಷಕರ ಸ್ಥಾನಕ್ಕೆ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಂಡಿದ್ದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಾಲ್ಲೂಕಿಲ್ಲಿರುವ ಮತ್ತೊಂದು ಶಾಲೆಗೆ ಆ ಅತಿಥಿ ಶಿಕ್ಷಕರನ್ನು ನಿಯೋಜಿಸಬೇಕು ಎಂದು ತಿಳಿಸಲಾಗಿದೆ.
ಖಾಲಿ ಇರುವ ಶಿಕ್ಷಕರನ್ನು ಕೂಡಲೇ ನೇಮಕಾತಿ ಮಾಡಿಕೊಂಡು ಶಾಲೆಯಲ್ಲಿನ ಶಿಕ್ಷಕರ ಕೊರತೆ ನೀಗಿಸುವ ಕುರಿತು ಸದನದಲ್ಲಿ ಗಂಭೀರವಾಗಿ ಚರ್ಚೆಯೂ ನಡೆದಿದೆ. ಆದರೆ, ಸರ್ಕಾರ ಈ ಬಗ್ಗೆ ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ.
ಈಗಾಗಲೇ ಶಾಲೆಗಳು ಪೂರ್ಣಪ್ರಮಾಣದಲ್ಲಿ ಆರಂಭವಾಗಿದ್ದು ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಮುಂದಾಗಿದೆ. ಅಲ್ಲದೆ, ಖಾಲಿ ಇರುವ 30 ಸಾವಿರ ಶಿಕ್ಷಕರ ಸ್ಥಾನಗಳನ್ನು ಭರ್ತಿ ಮಾಡುವ ಬದಲು ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಮುಂದಾಗಿದೆ.