ವಿ.ಶ್ರೀಧರ್ (ಮೂಲ: ದಿ ಫೆಡೆರೆಲ್)
ಅನುವಾದ : ಟಿ.ಸುರೇಂದ್ರರಾವ್
ಕರ್ನಾಟಕದ ಹಿಂದಿನ ಜಾಗತಿಕ ಹೂಡಿಕೆಗಳ ಸಭೆಗಳ ಲಕ್ಷಣಗಳು – ನಂಬಲನರ್ಹ ಅಂಕಿಅಂಶಗಳು ಮತ್ತು ಹೂಡಿಕೆಯ ಅಪಾಯಕಾರಿ ಕೇಂದ್ರೀಕರಣಗಳು – ಈ ಬಾರಿಯೂ ಪುನರಾವರ್ತನೆಯಾಗುತ್ತಿವೆ –
ಕರ್ನಾಟಕ ರಾಜ್ಯ ಸರ್ಕಾರವು ನವೆಂಬರ್ 2ರಿಂದ ಮೂರು ದಿನಗಳ ಕಾಲ ಆಯೋಜಿಸಿದ್ದ ‘ಜಾಗತಿಕ ಹೂಡಿಕೆದಾರರ ಸಭೆ’ (ಜಿ.ಐ.ಎಂ)ಯು ಭಾರಿ ಸಂಭ್ರಮ, ಸಡಗರ ಹಾಗೂ ಅಬ್ಬರದ ಪ್ರಚಾರದೊಂದಿಗೆ ಮುಗಿದಿದೆ. ಭರವಸೆಗಳ ಮಹಾಪೂರವೇ ಹರಿದಿದೆ. ಆದರೆ ಈ ಹಿಂದಿನ ಅಂತಹ ಹಲವಾರು ಸಭೆಗಳ ಅನುಭವಗಳನ್ನು ಪರಿಶೀಲಿಸಿದಾಗ ‘ಗುಡ್ಡ ಅಗೆದು ಇಲಿ ಹಿಡಿದಂತೆ’ ಎಂಬ ಗಾದೆಯಂತೆ ಆಗಲಿವೆ ಎನ್ನುವುದಕ್ಕೆ ಬೇರೆ ಪುರಾವೆಗಳು ಬೇಕಿಲ್ಲ.
ಮುಂಬರಲಿರುವ ವಿಧಾನ ಸಭಾ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಈ ಸಭೆ ನಡೆಯಿತು ಎನ್ನುವುದಕ್ಕೆ ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮಾಡಿದ ಉದ್ಘಾಟನಾ ಭಾಷಣವೇ ಸಾಕ್ಷಿ: ‘ಡಬಲ್ ಇಂಜಿನ್ ಸರ್ಕಾರದೊಂದಿಗೆ ಅದ್ಭುತ ಕೈಗಾರಿಕಾ ಅಭಿವೃದ್ಧಿಯಾಗಲಿದೆ’ ಎಂದು ಅವರು ಭರವಸೆ ನೀಡಿದ್ದಾರೆ.
ಅಂತರ‍್ರಾಷ್ಟ್ರೀಯ ಹೂಡಿಕೆದಾರರು ಚೈನಾ ಹಾಗೂ ಯೂರೋಪಿನಿಂದ ಬಂಡವಾಳ ಹಿಂತೆಗಿದಿದ್ದರಿಂದ ದೊರೆತ ಅವಕಾಶಗಳನ್ನು ಬಳಸಿಕೊಳ್ಳಿ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೈಗಾರಿಕೋದ್ಯಮಿಗಳಿಗೆ ಕರೆ ನೀಡಿದ್ದಾರೆ. ಕೆಲವೇ ವಾರಗಳ ಹಿಂದಷ್ಟೆ ನಿರ್ಮಲಾ ಸೀತಾರಾಮನ್ ಅವರು ‘ತನ್ನ ಸರ್ಕಾರ ಎಷ್ಟೇ ಆಮಿಷ ಒಡ್ಡಿದರೂ ಖಾಸಗಿ ಕೈಗಾರಿಕೋದ್ಯಮಿಗಳು ಹೂಡಿಕೆ ಮಾಡಿಲ್ಲ’ ಎಂಬ ಹತಾಶ ಭಾವನೆ ಹೊಂದಿದ್ದರು.
‘ಕಾಗದದ ಮೇಲಿನ ಈ ಹೂಡಿಕೆಯನ್ನು’ ವಾಸ್ತವಕ್ಕೆ ಪರಿವರ್ತಿಸಲು ಸರ್ಕಾರ ಉತ್ಸುಕವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಅಂಕಿಅಂಶಗಳನ್ನು ನಂಬಬಹುದೆ?
ಕರ್ನಾಟಕ ಸರ್ಕಾರದ ಪ್ರಕಾರ ಮೊದಲ ದಿನದ ಕೊನೆಯಲ್ಲೇ ಪ್ರಸ್ತಾಪಿತ ಹೂಡಿಕೆಯ ಒಪ್ಪಂದಗಳ ಮೊತ್ತವು ರೂ.2.1 ಲಕ್ಷ ಕೋಟಿ ಸಾಕಾರಗೊಂಡಿದೆ. ಅದರ ಆಧಾರದಲ್ಲಿ ಮೂರು ದಿನಗಳ ನಂತರ ಬಹಳ ಸುಲಭವಾಗಿ ಅದು ರೂ.5 ಲಕ್ಷ ಕೋಟಿ ಗುರಿಯನ್ನು ತಲುಪುತ್ತದೆ. ಈ ಭರವಸೆಗಳನ್ನು ಗಮನಿಸಿದರೆ ಈ ಹಿಂದೆ 2010 ಹಾಗೂ 2012ರಲ್ಲಿ ಆಗಿನ ಬಿಜೆಪಿ ಸರ್ಕಾರ ಆಯೋಜಿಸಿದ್ದ ಜಾಗತಿಕ ಹೂಡಿಕೆದಾರರ ಸಭೆಯಲ್ಲಿ ಮಾಡಿದ ಅಂದಾಜಿನಂತೆಯೇ ಇದೆ ಎಂಬುದು ಸ್ಪಷ್ಟ.
ವಾಸ್ತವದಲ್ಲಿ, ಈ ಹಿಂದಿನ 2010 ಹಾಗೂ 2012ರ ಸಭೆಯ ಸಂದರ್ಭದಲ್ಲಿಯೂ ಸಚಿವರಾಗಿದ್ದ ಈಗಿನ ರಾಜ್ಯ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿಯವರು ಈ ತಂತ್ರಗಳ ಬಗ್ಗೆ ಅರಿವಿದ್ದವರಾಗಿ ‘ಸರ್ಕಾರ ಈಗಾಗಲೇ ರೂ.8 ಲಕ್ಷ ಕೋಟಿಯಷ್ಟು ಹೂಡಿಕೆಯ ಪ್ರಸ್ತಾಪಗಳನ್ನು ಪಡೆದುಕೊಂಡಿದೆ’ ಎಂದು ತಿಳಿಸಿದರು. ಇದೇ ವೇಗದಲ್ಲಿ ಅದು ಮುಂದುವರಿದಿದ್ದೇ ಆದರೆ ಸಮಯ ಮುಗಿಯುವುದರೊಳಗೆ ಅದು ರೂ.10 ಲಕ್ಷ ಕೋಟಿ ತಲುಪುವುದರಲ್ಲಿ ಯಾವುದೇ ಅಚ್ಚರಿಪಡಬೇಕಾಗಿಲ್ಲ.
ನಿಜ ಸಂಗತಿಯೇನೆಂದರೆ ಒಬ್ಬರು ರೂ.2.1 ಲಕ್ಷಕೋಟಿ ಹೂಡಿಕೆ ಪ್ರಸ್ತಾಪಗಳನ್ನು ಒಪ್ಪಿಕೊಳ್ಳಲಾಗಿದೆ ಎಂದು ಹೇಳುತ್ತಿರುವಾಗ, ಅತ್ತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಆ ಸಂಖ್ಯೆಯನ್ನು ರೂ.2.8 ಲಕ್ಷ ಕೋಟಿ ಎಂದು ತಿಳಿಸುತ್ತಿದ್ದಾರೆ. ಸ್ವಲ್ಪ ಹೊತ್ತಿನ ನಂತರ ನಿರ್ಮಲಾ ಸೀತಾರಾಮನ್ ಅವರು ಹೇಳಿದ್ದಾರೆಂದು ಮಾಧ್ಯಮಗಳ ವರದಿಗಳು ರೂ.7.5 ಲಕ್ಷ ಕೋಟಿ ಮೊತ್ತದ ಸಂಖ್ಯೆಯನ್ನು ಪ್ರಸಾರ ಮಾಡುತ್ತಿದ್ದಾರೆ. ಇಂತಹ ಅಂಕಿಅಂಶಗಳನ್ನು ನಂಬಬಹುದೇ?
ಹೂಡಿಕೆಗಳ ಅಪಾಯಕಾರಿ ಕೇಂದ್ರೀಕರಣ
ಈ ಅಂಕಿಅಂಶಗಳನ್ನು ಗಂಭೀರವಾಗಿಯೇ ತೆಗೆದುಕೊಂಡರೂ ಕೂಡ, ಏರುಪೇರಾದ ಆದ್ಯತೆಗಳ ಹೊಸದೇನೂ ಅಲ್ಲದ ಸಮಸ್ಯೆ ಹಾಗೆಯೇ ಉಳಿಯುತ್ತದೆ. ‘ಅನುಮೋದಿಸಲ್ಪಟ್ಟ’ ಯೋಜನೆಗಳತ್ತ ಕಣ್ಣು ಹಾಯಿಸಿದರೆ, ಕ್ಷೇತ್ರಗಳಲ್ಲಿ ಮಾತ್ರವಲ್ಲ ವಾಗ್ದಾನ ಮಾಡಿದ ಕಾರ್ಪೊರೇಟ್ ಸಂಸ್ಥೆಗಳಲ್ಲಿ ಕೂಡ ಈ ಹಿಂದಿನಂತೆಯೇ ಈ ಬಾರಿ ಕೂಡ, ಪ್ರಸ್ತಾಪಗಳ ಭಾರಿ ಕೇಂದ್ರೀಕರಣ ಇರುವುದನ್ನು ಕಾಣುತ್ತೇವೆ.
ಮೊದಲನೆಯ ದಿನ ಹೂಡಿಕೆಯ ವಾಗ್ದಾನ ಮಾಡಿದ ಒಟ್ಟು ಪ್ರಸ್ತಾಪಗಳಲ್ಲಿನ ಐದನೇ ಮೂರು ವೇದಾಂತ ಗುಂಪು ಮತ್ತು ಎಬಿಸಿ ಕ್ಲೀನ್‌ಟೆಕ್ ಕಂಪನಿಗಳಿಗೆ ಸೇರಿದವಾಗಿವೆ. ವೇದಾಂತವು ಸುಪ್ರಸಿದ್ಧ ಕೈಗಾರಿಕಾ ವಾಣಿಜ್ಯ ಕೂಟವಾಗಿದೆಯಾದರೂ ಎಬಿಸಿ ಕ್ಲೀನ್‌ಟೆಕ್ ಹೈದರಾಬಾದ್ ಕೇಂದ್ರಿತ ಖಾಸಗಿ ಕಂಪನಿಯಾಗಿದ್ದು ಕೇವಲ ಏಳು ತಿಂಗಳ ಹಿಂದಷ್ಟೇ ಸ್ಥಾಪಿಸಲ್ಪಟ್ಟಿದ್ದು.
ಈ ಎರಡೂ ಕಂಪನಿಗಳ ಪ್ರಸ್ತಾಪಗಳ ಒಟ್ಟು ಹೂಡಿಕೆಯು–ವೇದಾಂತ ರೂ.80,000 ಕೋಟಿ ಮತ್ತು ಕ್ಲೀನ್‌ಟೆಕ್ ರೂ.50,000 ಕೋಟಿ– ಮೊದಲ ದಿನದ ವಾಗ್ದಾನ ಮಾಡಿದ ಹೂಡಿಕೆಯ ಬಹುಪಾಲು ಮೊತ್ತವಾಗಿದೆ ಮಾತ್ರವಲ್ಲ, ಅವೆರಡೂ ನವೀಕರಿಸಬಹುದಾದ ರಂಗದಲ್ಲಿದ್ದು ಒಂದೇ ವಲಯದ್ದಾಗಿವೆ. ವೇದಾಂತದ ಹೂಡಿಕೆಯಲ್ಲಿನ ನಿಜವಾದ ಅಂಕಿಅಂಶಗಳು ಸ್ಪಷ್ಟವಾಗಿಲ್ಲವಾದರೂ, ಜಾಗತಿಕ ಹೂಡಿಕೆ ಸಭೆಯಲ್ಲಿನ ವದಂತಿಯೇನೆಂದರೆ ರಾಜ್ಯದಲ್ಲಿನ ‘ಹಸಿರು’ ಜಲಜನಕ ಯೋಜನೆಗಳಲ್ಲಿ ಭಾರಿ ಹೂಡಿಕೆಯ ಪ್ರಸ್ತಾಪಗಳು ಇವೆ ಎಂಬುದಾಗಿದೆ. ಪಾಲ್ಗೊಳ್ಳುತ್ತಿರುವ ಗುಂಪುಗಳು ಮತ್ತು ವಲಯಗಳ ಕೇಂದ್ರೀಕರಣದ ಪರಿಭಾಷೆಯಲ್ಲಿ ಹೇಳುವುದಾದರೆ ಪ್ರಸ್ತಾಪಿತ ಹೂಡಿಕೆಗಳ ಏರುಪೇರಾದ ಸ್ವರೂಪವು ಈ ಹಿಂದಿನ ಸಭೆಗಳಲ್ಲಿ ಕಾಡಿದ ಅದೇ ಹಳೆಯ ಪ್ರಶ್ನೆಗಳನ್ನು ಎತ್ತುತ್ತವೆ.
ತೀರ ಪರಿಚಿತಕ್ಷಣ
2012ರಲ್ಲಿ ಕರ್ನಾಟಕ ಬಿಜೆಪಿ ಸರ್ಕಾರ ಆಯೋಜಿಸಿದ್ದ ಜಾಗತಿಕ ಹೂಡಿಕೆದಾರರ ಸಭೆ ಮುಗಿದ ಕೂಡಲೇ, ಒಪ್ಪಿರುವ ಯೋಜನೆಗಳ ಜಾರಿಯಲ್ಲಿ ‘ಪಾರದರ್ಶಕತೆಯ ಕೊರತೆ’ಯ ಬಗ್ಗೆ ಹಲವಾರು ಕೈಗಾರಿಕಾ ಸಂಸ್ಥೆಗಳು ತಮ್ಮ ಆತಂಕ ವ್ಯಕ್ತಪಡಿಸಿದ್ದವು. ಆಗ ರೂ.8.27 ಕೋಟಿ ಮೊತ್ತದ ಪ್ರಸ್ತಾಪಗಳನ್ನು ಇರಿಸಲಾಗಿತ್ತು. ಹೂಡಿಕೆದಾರರ ಸಭೆಯನ್ನು ಆಯೋಜಿಸುವಲ್ಲಿ ರಾಜ್ಯ ಸರ್ಕಾರದೊಂದಿಗೆ ಪಾಲುದಾರರಾಗಿದ್ದ ಭಾರತೀಯ ಉದ್ದಿಮೆದಾರರ ಒಕ್ಕೂಟ (ಕನ್ಫೆಡರೇಷನ್ ಆಫ್ ಇಂಡಿಯನ್ ಇಂಡಸ್ಟ್ರೀ)ದ ಹಿರಿಯ ಅಧಿಕಾರಿಯೊಬ್ಬರು “ನಂಬಲರ್ಹವಾದ ಅಂಕಿಅಂಶಗಳ ಕೊರತೆಯೇ ಬಹು ದೊಡ್ಡ ಸವಾಲು” ಎಂದು ಆವಾಗಲೇ ಹೇಳಿದ್ದರು.
ಹೆಚ್ಚು ಪ್ರಮಾಣದ ಹೂಡಿಕೆಗಳು ಅನಿಲ ಆಧಾರಿತ ವಿದ್ಯುತ್ ಯೋಜನೆಗಳಿಗೆ ಕೇಂದ್ರೀಕರಣವಾಗಿವೆ, ಆದರೆ ಆ ಯೋಜನೆಗಳಿಗೆ ಅನಿಲದ ಲಭ್ಯತೆ ಬಗ್ಗೆ ಯಾವುದೇ ಖಾತರಿ ಸಿಕ್ಕಿಲ್ಲ ಎಂಬ ಅಂಶವನ್ನು ಗಮನಿಸಬೇಕು. ಈ ಹಿಂದೆ, 2012ರ ಜಿಐಎಂ ಸಭೆಯಲ್ಲಿ ಏರೋಸ್ಪೇಸ್ ವಲಯಕ್ಕೆ ಆದ್ಯತೆ ನೀಡಲಾಗಿತ್ತು. ಆಗಿನ ಕೈಗಾರಿಕಾ ಸಚಿವ ನಿರಾಣಿಯವರು ಆ ನಿಟ್ಟಿನಲ್ಲಿ ಒಂದು ವಿಶ್ವವಿದ್ಯಾಲಯವನ್ನೇ ಆರಂಭಿಸುವುದಾಗಿ ಆಶ್ವಾಸನೆ ನೀಡಿದ್ದರು. ಆ ಭರವಸೆ ಐದು ವರ್ಷಗಳ ನಂತರವೂ ಇನ್ನೂ ಭರವಸೆಯಾಗಿಯೇ ಉಳಿದಿದೆಯೇ ವಿನಃ ಬೆಳಕು ಕಾಣಲೇ ಇಲ್ಲ.
2010ರ ಜಿಐಎಂ ಸಭೆಯಲ್ಲಿ ಹೆಚ್ಚಿನ ಆದ್ಯತೆ ಅಂದರೆ ಸರಿಸುಮಾರು ಮೂರನೇ ಎರಡರಷ್ಟು ಯೋಜನೆಗಳು ಕಬ್ಬಿಣ ಮತ್ತು ಉಕ್ಕು ಕ್ಷೇತ್ರಗಳಿಗೆ ನೀಡಲಾಗಿತ್ತು. ಆದರೆ ಆ ನಂತರ ರಾಜ್ಯದಲ್ಲಿ ಉದ್ಭವಿಸಿದ ಗಣಿ ಹಗರಣದಿಂದಾಗಿ ನಿರಾಣಿಯವರು ಮಾತ್ರವಲ್ಲದೇ ಆಗಿನ ಮುಖ್ಯಮಂತ್ರಿ ಯಡಿಯೂರಪ್ಪನವರೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾದ ಶೋಚನೀಯ ಪರಿಸ್ಥಿತಿ ಉಂಟಾಗಿತ್ತು. ಇಡೀ ಕಬ್ಬಿಣ ಅದಿರು ಗಣಿಗಳನ್ನೇ ಮುಚ್ಚಬೇಕಾದ ಅನಿವಾರ್ಯತೆ ಉಂಟಾಗಿ 2010 ಜಿಐಎಂ ತೀರ್ಮಾನಗಳು ಮೂಲೆಗುಂಪಾದವು ಎನ್ನುವುದನ್ನು ಕರ್ನಾಟಕದ ಜನರು ಮರೆತಿಲ್ಲ.
‘ಹಸಿರು’ ಜಲಜನಕದ ಸಡಗರ
ಈ ಬಾರಿಯ ಜಿಐಎಂ ಸಭೆಯಲ್ಲಿ ಹಸಿರು ಜಲಜನಕ ಬಹಳ ಸದ್ದು ಮಾಡಿತು. ಸರ್ಕಾರದ ಮೂಲಗಳ ಪ್ರಕಾರ ಏಳು ಕಂಪನಿಗಳು ಈ ವಲಯದಲ್ಲಿ ಆಸಕ್ತಿ ವ್ಯಕ್ತಪಡಿಸಿವೆ ಮತ್ತು ಮಂಗಳೂರಿನಲ್ಲಿ ಸ್ಥಾಪಿಸುವುದಾಗಿ ಪ್ರಕಟಿಸಿವೆ ಕೂಡ. ಅವು ಸರಿಸುಮಾರು ರೂ.2.91 ಲಕ್ಷ ಕೋಟಿ ಹೂಡಿಕೆ ಮಾಡುವುದಾಗಿ ಹೇಳಿದ್ದಾವಾದರೂ ಕೇವಲ ಹಸಿರು ಜಲಜನಕ ಮಾತ್ರವಲ್ಲದೇ ‘ಹಸಿರು’ ಅಮೋನಿಯಾ ಯೋಜನೆಗಳಿಗೂ ಬಳಸುವುದಾಗಿ ಹೇಳಿವೆ. ರಾಜ್ಯ ಸರ್ಕಾರವು ಆ ಗುಂಪನ್ನು ಕಾಡಿ ಬೇಡಿ ಜಪಾನ್, ದಕ್ಷಿಣ ಕೊರಿಯ ಹಾಗೂ ಯೂರೋಪಿನ ಮಾರುಕಟ್ಟೆಗಳಿಗೂ ರಫ್ತು ಮಾಡುವ ಸಾಮರ್ಥ್ಯ ಪಡೆಯಬೇಕು ಎಂದಿದೆ.
ಆದರೆ ವಾಸ್ತವವೇ ಬೇರೆ. ಆ ಉದ್ದಿಮೆಯ ಒಂದು ಮೂಲದ ಪ್ರಕಾರ ಕಲ್ಲಿದ್ದಲಿಗೆ ಪರ್ಯಾಯವಾಗಿ ಈಗ ತಾನೇ ಹುಟ್ಟಿರುವ ‘ಹಸಿರು’ ಜಲಜನಕ ಉದ್ದಿಮೆಯೆದುರು ಹಲವಾರು ಅಂದಾಜು ಮಾಡಲಾಗದ ಅಡಚಣೆಗಳಿವೆ. ಮೊದಲನೆಯದಾಗಿ ಅದು ಹೆಚ್ಚು ಬಂಡವಾಳ ಬೇಡುವ ಉದ್ದಿಮೆ. ಎರಡನೆಯದಾಗಿ ಅದು ಉಕ್ಕು, ಸಿಮೆಂಟ್, ರಸಗೊಬ್ಬರ ಮತ್ತು ಪ್ಲ್ಯಾಸ್ಟಿಕ್ ನಂತಹ ಕಲ್ಲಿದ್ದಲು ಆಧಾರಿತ ಉದ್ದಿಮೆಗಳು ಅದರ ಸಂಭಾವ್ಯ ಗ್ರಾಹಕ ಉದ್ಯಮಗಳು. ಇವುಗಳಲ್ಲಿ ಕೆಲವು ಉದ್ದಿಮೆಗಳು ಹೊಸ ಇಂಧನದ ದುಬಾರಿ ವೆಚ್ಚವನ್ನು ತಡೆದುಕೊಳ್ಳುವ ಸ್ಥಿತಿಯಲ್ಲಿ ಇಲ್ಲ.
ಹೊಸ ಇಂಧನದ ಉತ್ಪಾದನೆಯಾಗುವ ತನಕ ಈ ಉದ್ದಿಮೆಗಳು ಕಾರ್ಯಾರಂಭಕ್ಕೆ ಕಾಯಬೇಕಾಗುತ್ತದೆ. ಅದಲ್ಲದೇ, ಜಲಜನಕದ ಸಾಂದ್ರತೆ ಬಹಳ ಕಡಿಮೆ ಇರುವುದರಿಂದ ಮೋಟಾರು ಉದ್ದಿಮೆಗಳು ಎದುರಿಸುತ್ತಿರುವ ಬ್ಯಾಟರಿಗಳ ಸಮಸ್ಯೆಯನ್ನು ಈ ಉದ್ದಿಮೆಗಳೂ ಎದುರಿಸಬೇಕಾಗುತ್ತದೆ. ‘ಹಸಿರು’ ಜಲಜನಕದ ಸಾಗಾಣಿಕೆಗೆ ಪೈಪ್ ಲೈನುಗಳು ಅಥವಾ ಬೇರಾವುದಾದರೂ ದಾರಿ ಹುಡುಕಬೇಕಾಗುತ್ತದೆ. ಒಟ್ಟಿನಲ್ಲಿ, ಈ ಉದ್ದಿಮೆ ಆರಂಭವಾಗಿ ಯಶಸ್ವಿಯಾಗಲು ಕನಿಷ್ಠ ಮೂಲಸೌಕರ್ಯಗಳನ್ನು ಹೊಂದಿರಬೇಕು. ಜಿಐಎಂ ಸಭೆಗೆ ಬಂದಿದ್ದ ಒಬ್ಬರು “ಕುದುರೆ ಮುಂದೆ ಗಾಡಿಯನ್ನು ಕಟ್ಟಿದಂತೆ” ಎಂದು ವ್ಯಂಗ್ಯ ಮಾಡಿದರು.
ನರೇಂದ್ರ ಮೋದಿ ಸರ್ಕಾರವು ‘ಹಸಿರು’ ಜಲಜನಕ ನೀತಿಯನ್ನು ಅನಾವರಣ ಮಾಡಿದೆಯಾದರೂ, ಅದರ ರೂಪರೇಷೆಗಳು ಇನ್ನೂ ಸ್ಪಷ್ಟವಾಗಿಲ್ಲ. ಬಹಳ ಮುಖ್ಯವಾಗಿ ಸಾಮರ್ಥ್ಯ ಗಳಿಸುವ ಸಲುವಾಗಿ ಪ್ರೋತ್ಸಾಹಧನ ಅಥವಾ ಸಬ್ಸಿಡಿಗಳನ್ನು ಹೇಗೆ ರೂಪಿಸುವುದು ಎಂಬುದನ್ನು ಇನ್ನೂ ಸ್ಪಷ್ಟಡಪಡಿಸಿಲ್ಲ. ಕಲ್ಲಿದ್ದಲು ಆಧಾರಿತ ಸಾಮರ್ಥ್ಯ ಗಳಿಸಿದಷ್ಟು ಸರಾಗವಾಗಿ ಈ ಇಂಧನದ ಸಂಗ್ರಹ ಹಾಗೂ ಸಾಗಾಣಿಕೆಯ ವೆಚ್ಚಗಳನ್ನು ಭರಿಸುವುದು ನಿರ್ಣಾಯಕ ಅಂಶ. ಆದರೆ ಈ ಕುರಿತು ಯಾವುದೇ ಸ್ಪಷ್ಟತೆ ಇಲ್ಲದಿರುವುದರಿಂದ ಅದು ಆರಂಭವಾಗುವುದು ಸುಲಭವಲ್ಲ.
ಹೂಡಿಕೆದಾರರ ಸಭೆಯು ‘ಮದುವೆ ಸಮಾರಂಭದಂತೆ’
ಇಷ್ಟೆಲ್ಲಾ ತಕರಾರುಗಳು ಇರುವಾಗ ಉದ್ದಿಮೆದಾರರು ಇಂತಹ ಅದ್ದೂರಿ ಸಮಾರಂಭಗಳಲ್ಲಿ ಭಾಗವಹಿಸಿದ್ದಾದರೂ ಎಕೆ?
ಇದೇ ರೀತಿಯ ಹೂಡಿಕೆದಾರರ ಸಭೆಯನ್ನು ಕರ್ನಾಟಕ, ಗುಜರಾತ್ ಮತ್ತು ಉತ್ತರ ಪ್ರದೇಶ ರಾಜ್ಯಗಳಲ್ಲಿ ಭಾಗವಹಿಸಿದ್ದ ಬೆಂಗಳೂರು ನೆಲೆಯ ಕೈಗಾರಿಕೋದ್ಯಮಿಯೊಬ್ಬರು ಹೇಳುತ್ತಾರೆ “ಸಹ ಕೈಗಾರಿಕೋದ್ಯಮಿಗಳೊಂದಿಗಿನ ಅನುಭವ ಹಾಗೂ ಸಂವಾದಗಳ ಆಧಾರದಲ್ಲಿ ನನ್ನ ಅಭಿಪ್ರಾಯವೇನೆಂದರೆ ಈ ಭರವಸೆಗಳಲ್ಲಿ ಶೇ. 10ಕ್ಕೂ ಕಡಿಮೆಯ ಹೂಡಿಕೆಯ ಆಶ್ವಾಸನೆಗಳು ಮಾತ್ರ ನಿಜವಾಗಿಯೂ ಈಡೇರುತ್ತವೆ.”
ಹಿರಿಯ ಯಂತ್ರೋಪಕರಣಗಳ ಉತ್ಪಾದಕರೊಬ್ಬರು ಹೇಳುತ್ತಾರೆ “ಉದ್ದಿಮೆಯ ಸಂಘಗಳು – ಬಹುಪಾಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು – ಆ ಸಮಾರಂಭಗಳು ಯಶಸ್ವಿಯಾಗುವುದನ್ನು ಉತ್ತೇಜಿಸುವ ಮೂಲ ಉದ್ದೇಶದಿಂದಲೇ ಇಂತಹ ವಾಣಿಜ್ಯ ಪ್ರದರ್ಶನಗಳನ್ನು ಸಂಘಟಿಸುತ್ತವೆ. ಈ ‘ಯಶಸ್ಸಿನ’ ಮಾನದಂಡಗಳೇನೆಂದರೆ ‘ಎಷ್ಟು ಜನ ಭಾಗವಹಿಸಿದ್ದರು’, ‘ಒಪ್ಪಂದಗಳ ಸಹಿಯೊಂದಿಗೆ ಎಷ್ಟು ಹೂಡಿಕೆಯ ಭರವಸೆಗಳು ಬಂದವು’ ಎಂಬುದಾಗಿವೆ. “ನೀವು ಆ ಒಪ್ಪಂದಗಳನ್ನು ನಿಜವಾಗಿಯೂ ನೋಡಿದರೆ, ಅವುಗಳಲ್ಲಿ ‘ಆದರೆ ಮತ್ತು ಹೋದರೆ’ ಎಂಬುದನ್ನು ಹೆಚ್ಚು ಕಾಣುತ್ತೀರಿ, ಆದರೆ ಆ ‘ಆದರೆ ಮತ್ತು ಹೋದರೆ’ಗಳು ಎಂದಿಗೂ ಸಾಕಾರವಾಗುವುದಿಲ್ಲ.”
ಹಾಗಾದರೆ ಏಕೆ ಕೈಗಾರಿಕೋದ್ಯಮಿಗಳು ಇಂತಹ ಭಾರಿ ಸಮಾರಂಭಗಳಲ್ಲಿ ಭಾಗವಹಿಸುವ ಬಲವಂತವಾದರೂ ಏನು ಎಂದು ಕೇಳಿದರೆ ಭಾರತೀಯ ಪಾರಂಪರಿಕ ಮದುವೆಯ ಉದಾಹರಣೆಯನ್ನು ಅವರು ನೀಡಿದರು. “ನಿಮಗೆ ಇಷ್ಟವಿರಲಿ ಅಥವಾ ಇಲ್ಲದಿರಲಿ, ಅಂತಹ ಮದುವೆಗಳಲ್ಲಿ ನೀವು ಭಾಗವಹಿಸಲೇಬೇಕು ಎನ್ನುವಂತೆ” ಅದು ಎಂದರು.
“ಸಂಘಟಕರು ಯಾರು ಎನ್ನುವುದು ನಿಮಗೆ ಗೊತ್ತು, ಹಾಗಾಗಿ ಭಾಗವಹಿಸಲೇಬೇಕು. ಸಂಘಟಕರಿಗೂ ಅದು ಗೊತ್ತು. ಹೂಡಿಕೆ ನಿರೀಕ್ಷಿತ ಮಟ್ಟದಲ್ಲಿ ಬರುವುದಿಲ್ಲ ಎಂದು ಅವರಿಗೂ ಗೊತ್ತಿರುತ್ತದೆ. ಬಹಳ ಜನರು ಭಾಗವಹಿಸಿದ ಒಂದು ಉತ್ತಮವಾದ ಸಮಾರಂಭ ಮಾಡಿದೆವು ಎಂಬ ಸಮಾಧಾನ ಅವರಿಗೆ ಅಷ್ಟೆ. ಈ ಕಾರಣಕ್ಕಾಗಿಯೇ, ನನ್ನ ಅಂದಾಜಿನ ಪ್ರಕಾರ ಶೇ. 50 ರಿಂದ ಶೇ. 60 ರಷ್ಟು ಜನರು ಇದರಲ್ಲಿ ಭಾಗವಹಿಸುತ್ತಾರೆ.” ಎಂದು ಹೇಳಿದರು.
ಮತ್ತೊಂದು ಬಹು ಮುಖ್ಯ ಅಂಶವೆಂದರೆ ಕೈಗಾರಿಕೋದ್ಯಮಿಗಳು ಭಾಗವಹಿಸುವುದು ಅಧಿಕಾರದಲ್ಲಿರುವವ ರಜತೆ ಕಾಲ ಕಳೆಯುವ ಮೂಲಕ ತಮ್ಮ ‘ವ್ಯವಹಾರ ಸಂಪರ್ಕ’ ಗಳಿಸಬಹುದು ಎಂಬ ಕಾರಣಕ್ಕಾಗಿ.
ಆಡಳಿತ ಪ್ರಕ್ರಿಯೆಗಳಲ್ಲಿ ಕಡಿಮೆ ವಿಶ್ವಾಸ
“ಹೂಡಿಕೆಯ ಸಾಮರ್ಥ್ಯವು ಒಟ್ಟಾರೆ ಸಮಸ್ಯೆಯ ಒಂದು ಆಯಾಮವಷ್ಟೆ. ಸ್ಪರ್ಧಾತ್ಮಕತೆ ಈಗ ನಮ್ಮ ದೇಶದ ಗಡಿಗಳಗಷ್ಟೇ ಸೀಮಿತವಾಗಿಲ್ಲ. ತಂತ್ರಜ್ಞಾನದ ಲಭ್ಯತೆ, ವಸ್ತುಗಳ ವೆಚ್ಚ, ಮೂಲಸೌಕರ್ಯದ ವೆಚ್ಚ, ಮತ್ತು ನುರಿತ ಕೆಲಸಗಾರರ ಲಭ್ಯತೆ ಮುಂತಾದವುಗಳೆಲ್ಲ ಹೂಡಿಕೆಯ ಮಟ್ಟವನ್ನು ನಿರ್ಧರಿಸುತ್ತವೆ. ಸಹಾಯ ಧನಗಳಂತಹ ಪ್ರೋತ್ಸಾಹಕಗಳಾಗಲೀ ಅಥವಾ ಜಿ.ಎಸ್.ಟಿ.ಯನ್ನು ಕೆಲವು ವರ್ಷ ಕಡಿಮೆ ಮಾಡುವುದಾಗಲೀ ಉತ್ಪಾದನೆಯನ್ನು ಆರಂಭಿಸಲು ಸಾಕಾಗುವುದಿಲ್ಲ.” ಎಂದು ಅನುಭವಿ ಕೈಗಾರಿಕೋದ್ಯಮಿಯೊಬ್ಬರು ಉದ್ದಿಮೆಗಳ ಸಮಸ್ಯೆಗಳನ್ನು ತೆರೆದಿಟ್ಟರು.
ಮತ್ತೊಂದು ಬಹಳ ಮುಖ್ಯವಾದ ವಿಷಯವೆಂದರೆ ‘ಸಂಶೋಧನೆ ಮತ್ತು ಅಭಿವೃದ್ಧಿಗೆ ನಾವು ಹೆಚ್ಚಿನ ಗಮನ ನೀಡುತ್ತಿಲ್ಲ. ಸಾಗಾಣಿಕೆ ವ್ಯವಸ್ಥೆ ಹಾಗೂ ಮೂಲಸೌಕರ್ಯಗಳು ಕೂಡ ಯಾವುದೇ ಕೈಗಾರಿಕೆಗೆ ಬಹಳ ಅಗತ್ಯ’ ಎಂದು ಈ ಬಾರಿಯ ಜಿಐಎಂನಲ್ಲಿ ಭಾಗವಹಿಸಿದವರೊಬ್ಬರು ಹೇಳಿದರು.
ಸಣ್ಣ ಕೈಗಾರಿಕೆಗಳ ಸಮಸ್ಯೆಗಳ ನಿರ್ಲಕ್ಷ್ಯ
ಕೋವಿಡ್-19ರ ಅವಧಿಯಲ್ಲಿ ಸಣ್ಣ ಕೈಗಾರಿಕೆಗಳು ಬಹಳ ಹೊಡೆತ ತಿಂದವು. ಆರ್ಥಿಕತೆಯಲ್ಲಿ ಹೆಚ್ಚು ಉದ್ಯೋಗ ಸೃಷ್ಟಿಸುವ ಹಾಗೂ ರಫ್ತು ಮಾಡುವ ಸಣ್ಣ ಕೈಗಾರಿಕೆಗಳ ಬಗ್ಗೆ ಸರ್ಕಾರ ನಿರ್ಲಕ್ಷ್ಯ ತಾಳಿವೆ. “ಮುಖ್ಯ ಎಂಜಿನ್ನಿಗೇ ಸಾಮರ್ಥ್ಯದ ಕೊರತೆ ಇರುವಾಗ ಡಬಲ್ ಎಂಜಿನ್ ಏನು ಮಾಡಕ್ಕಾಗುತ್ತೇ” ಎಂದು ಸಣ್ಣ ಕೈಗಾರಿಕೆಗಳ ಮಾಲೀಕರೊಬ್ಬರು ಮಾರ್ಮಿಕವಾಗಿ ನುಡಿದರು.