ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆಗೆ ಮತದಾನ ಪೂರ್ಣಗೊಂಡಿದ್ದು, ಇದರ ಬೆನ್ನಲ್ಲೇ ಚುನಾವಣೋತ್ತರ ಸಮೀಕ್ಷೆಗಳು ಹೊರಬಿದ್ದಿವೆ. 11 ಸಮೀಕ್ಷೆಗಳ ಪೈಕಿ 8 ಸಮೀಕ್ಷೆಗಳು ಕಾಂಗ್ರೆಸ್ ಪರ ಹಾಗೂ 3 ಸಮೀಕ್ಷೆಗಳು ಬಿಜೆಪಿ ಪರ ಭವಿಷ್ಯ ನುಡಿದಿವೆ. ಅಂತಿಮವಾಗಿ ಶನಿವಾರ ಫಲಿತಾಂಶ ಹೊರಬೀಳಳಿದ್ದು, ಈ ವೇಳೆ ಯಾವ ಪಕ್ಷ ಬಹುಮತದ ಸನಿಹ ಬರಬಹುದು ಎಂಬ ಕುತೂಹಲ ಹೆಚ್ಚಾಗಿದೆ. ಫಲಿತಾಂಶಕ್ಕೂ ಮುನ್ನವೇ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಮೂರು ಪಕ್ಷಗಳು ಮುಂದಿನ ಸರ್ಕಾರ ರಚನೆಗೆ ರಣತಂತ್ರ ರೂಪಿಸುತ್ತಿವೆ.
ಎಕ್ಸಿಟ್ ಪೋಲ್ಗಳು ಕಾಂಗ್ರೆಸ್ ಪರವಾದ ಫಲಿತಾಂಶ ನೀಡಿದ ಹಿನ್ನೆಲೆಯಲ್ಲಿ, ಪ್ರತಿಪಕ್ಷ ಸರ್ಕಾರ ರಚಿಸುವ ವಿಶ್ವಾಸದಲ್ಲಿದೆ. ಬಿಜೆಪಿ ಕೂಡ ಎಕ್ಸಿಟ್ ಪೋಲ್ಗಳು ತನ್ನ ಪರವಾಗಿ ಇಲ್ಲದಿದ್ದರೂ ತಾನೇ ಸರ್ಕಾರ ರಚಿಸುವ ವಿಶ್ವಾಸ ಹೊರಹಾಕುತ್ತಿದೆ. ಇನ್ನೂ ಅತಂತ್ರ ವಿಧಾನಸಭೆ ನಿರ್ಮಾಣವಾದರೆ ಯಾರ ಜೊತೆ ಹೋದರೆ ತನಗೆ ಲಾಭವಾಗಬಹುದು ಎಂದು ಜೆಡಿಎಸ್ ಲೆಕ್ಕಾಚಾರ ಹಾಕಲಾಗುತ್ತಿದೆ.
ಕಾಂಗ್ರೆಸ್ ಪಕ್ಷಕ್ಕೆ ಮ್ಯಾಜಿಕ್ ನಂಬರ್ ಗಿಂತ 4-5 ಸ್ಥಾನಗಳು ಕಡಿಮೆ ಬಂದರೆ, ಖಚಿತವಾಗಿ ಗೆಲ್ಲಬಹುದಾದ ಪಕ್ಷೇತರರು ಮತ್ತು ಇತರ ಪಕ್ಷಗಳ ಅಭ್ಯರ್ಥಿಗಳನ್ನು ಸೆಳೆಯಲು ಯೋಚಿಸುತ್ತಿದೆ. ಗೌರಿಬಿದನೂರಿನ ಪಕ್ಷೇತರ ಅಭ್ಯರ್ಥಿ ಪುಟ್ಟಸ್ವಾಮಿಗೌಡ ಮತ್ತು ರಾಣೆಬೆನ್ನೂರಿನ ಎನ್ಸಿಪಿ ಅಭ್ಯರ್ಥಿ ಆರ್ ಶಂಕರ್ ಅವರು ಗೆಲ್ಲುವ ಸಾಧ್ಯತೆ ಇರುವುದರಿಂದ ಕಾಂಗ್ರೆಸ್ ಅವರನ್ನು ಸೆಳೆಯಲು ಯತ್ನಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ಕಾಂಗ್ರೆಸ್ ಪಕ್ಷಗೆ ಸ್ಪಷ್ಟ ಬಹುಮತ ಬಾರದಿದ್ದರೆ ಗೆದ್ದವರು ಯಾವುದೇ ಬೇರೆ ಪಕ್ಷದ ಆಮಿಷಗಳಿಗೆ ಒಳಗಾಗದಂತೆ ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳಲು ಈ ಸಭೆ ನಡೆಸಲಾಗುತ್ತಿದ್ದು, ಈ ವೇಳೆ ಮುಂದಿನ ತಂತ್ರಗಾರಿಕೆ ಬಗ್ಗೆ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಸೂಚ್ಯವಾಗಿ ಸೂಚನೆ ನೀಡಲಿದ್ದಾರೆ.
ಇನ್ನೂ ಸರಕಾರ ರಚನೆಗೆ ಬಿಜೆಪಿ ಕೂಡ ಕಸರತ್ತು ನಡೆಸಿದೆ. ಮತ್ತೆ ಈ ಬಾರಿ ಆಡಳಿತ ನಡೆಸಲಿದ್ದೇವೆ ಎಂದು ಬಿಜೆಪಿಯ ನಾಯಕರು ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ. ನಮಗೆ ಬಂದಿರುವ ವರದಿ ಪ್ರಕಾರ ನಮಗೆ ಬಹುಮತ ಸಿಕ್ಕೇ ಸಿಗುತ್ತದೆ. ಮ್ಯಾಜಿಕ್ ನಂಬರ್ 112ನ್ನು ನಾವು ದಾಟುತ್ತೇವೆ. ಅಕಸ್ಮಾತ್ ಏನಾದರೂ ಹೆಚ್ಚು ಕಮ್ಮಿ ಆದರೆ ನಮ್ಮ ಕೇಂದ್ರದ ನಾಯಕರಿದ್ದಾರೆ, ಈ ಬಾರಿ ಸರ್ಕಾರ ಮಾಡಲು ಏನು ಕಸರತ್ತು ಮಾಡಬೇಕೋ ಅದನ್ನು ಮಾಡುತ್ತೇವೆ ಎಂದು ಆರ್. ಅಶೋಕ್ ಹೇಳಿರುವುದು ಸಾಕಷ್ಟು ಚರ್ಚೆಯನ್ನು ಹುಟ್ಟು ಹಾಕಿದೆ.
ಸಚಿವರೊಬ್ಬರು ಈ ರೀತಿ ಆಪರೇಷನ್ ಮುನ್ಸೂಚನೆ ನೀಡಿರುವುದು ಬಿಜೆಪಿಯ ಪ್ರಜಾಪ್ರಭಯತ್ವಕ್ಕೆ ಯಾವ ರೀತಿ ಗೌರವ ನೀಡುತ್ತಿದೆ ಎಂಬುದನ್ನು ತೋರಿಸುತ್ತಿದೆ. ಇವರಿಗೆ ಸಂವಿಧಾನದಲ್ಲಿ, ಜನರು ನೀಡಿದ ತೀರ್ಪಿನಲ್ಲಿ ನಂಬಿಕೆ ಇಲ್ಲ. ಹಣಬಲ, ಇಡಿ ಸೇರಿದಂತೆ ಸರಕಾರಿ ಸಂಸ್ಥೆಗಳನ್ನು ದುರ್ಬಳಿಕೆ ಮಾಡಿಕೊಂಡು ಸರಕಾರ ರಚಿಸುವ ಸುಳಿವು ನೀಡುತ್ತಿರುವುದು ಅಸಯ್ಯ ಹುಟ್ಟಿಸಿದೆ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ.
ನಮ್ಮ ಷರತ್ತುಗಳಿಗೆ ಒಪ್ಪುವ ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಲು ನಾವು ಸಿದ್ಧ ಎಂದು ಜೆಡಿಎಸ್ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್’ಡಿ.ಕುಮಾರಸ್ವಾಮಿಯವರು ಹೇಳಿದ್ದಾರೆ.
ಹಲವು ಸಮೀಕ್ಷೆಗಳು ಜೆಡಿಎಸ್ ಪಕ್ಷ ಬಹಳ ಕಡಿಮೆ ಸ್ಥಾನಗಳಲ್ಲಿ ಗೆಲುವು ಸಾಧಿಸಲಿವೆ ಎಂದು ಹೇಳಿವೆ. ಆದರೆ, ನಮ್ಮ ಪಕ್ಷ 50 ಸ್ಥಾನಗಳನ್ನು ಗೆಲ್ಲುವ ವಿಶ್ವಾಸವಿದೆ. ಈ ಬಾರಿ ನನ್ನ ಷರತ್ತುಗಳನ್ನು ಈಡೇರಿಸಲು ಒಪ್ಪುವ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುತ್ತೇವೆಂದು ತಿಳಿಸಿದ್ದಾರೆ.
ಸಮ್ಮಿಶ್ರ ಸರ್ಕಾರಗಳ ಅಡಿಯಲ್ಲಿ ಎರಡು ಬಾರಿ ಮುಖ್ಯಮಂತ್ರಿಯಾದಾಗ, ಒಮ್ಮೆ ಬಿಜೆಪಿ (2006) ಮತ್ತು ನಂತರ ಕಾಂಗ್ರೆಸ್ (2018) ನೊಂದಿಗೆ ಕುಮಾರಸ್ವಾಮಿ ಅವರು ಎದುರಿಸಿದ ಬಿಕ್ಕಟ್ಟುಗಳಿಂದಾಗಿ ಕುಮಾರಸ್ವಾಮಿ ಅವರು ಈ ಬಾರಿ ದಿಟ್ಟ ನಿಲುವನ್ನು ಹೊಂದಿದ್ದಾರೆ. ಹೀಗಾಗಿ ಈ ಬಾರಿ ಮೈತ್ರಿಗೆ ಸಹಿ ಹಾಕುವ ಮೊದಲು ಅವರ ಕೆಲವು ಷರತ್ತುಗಳನ್ನು ವಿಧಿಸಲು ಮುಂದಾಗಿದ್ದಾರೆ.
ಸರ್ಕಾರವನ್ನು ನಡೆಸಲು ಸ್ವತಂತ್ರ ನೀಡುವುದು, ಯಾರ ಅಪ್ಪಣೆಯೂ ತೆಗೆದುಕೊಳ್ಳುವಂತಿರಬಾರದು, ಯಾರು ಹಿಡಿತಸಾಧಿಸಬಾರದು ಎಂಬುದು ಕುಮಾರಸ್ವಾಮಿಯವರ ಷರತ್ತುಗಳಾಗಿವೆ ಎಂದು ಹೇಳಲಾಗುತ್ತಿದೆ. ಜೆಡಿಎಸ್ ಶಾಸಕರು ಜಲಸಂಪನ್ಮೂಲ, ವಿದ್ಯುತ್ ಮತ್ತು ಸಾರ್ವಜನಿಕ ಕೆಲಸಗಳಂತಹ ಖಾತೆಗಳನ್ನು ಪಡೆಯಬೇಕೆಂದು, ಜೆಡಿಎಸ್ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಗಳನ್ನು ಜಾರಿಗೆ ತರಲು ಸಮ್ಮಿಶ್ರ ಪಕ್ಷದ ಪಾಲುದಾರರು ಅವಕಾಶ ನೀಡಬೇಕು. ತಮ್ಮ ಸಮ್ಮಿಶ್ರ ಪಾಲುದಾರ ಪಕ್ಷವು ಮಂಡ್ಯ ಮತ್ತು ಹಾಸನ ಕ್ಷೇತ್ರಗಳಿಂದ ದೂರವಿರಬೇಕು. ಯಾವುದೇ ಸಿದ್ಧಾಂತಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ಚರ್ಚೆಯಿಲ್ಲದೆ ಮಾಡಬಾರದು ಎಂಬ ಷರತ್ತುಗಳನ್ನು ಮುಂದಿಟ್ಟಿದ್ದಾರೆಂದು ತಿಳಿದುಬಂದಿದೆ.