ಉಪಚುನಾವಣೆ – ಲೆಕ್ಕಾಚಾರ ಹೇಗಿದೆ? ‘ಸಿಡಿ’ಯುತ್ತಾ ಅಸ್ತ್ರ, ಜಾತಿ, ಹಣದ್ದೆ ಕಾರ್ಬಾರು

ರಾಜ್ಯದಲ್ಲಿ ಉಪ ಚುನಾವಣೆಯ ಕಣ ಸಜ್ಜಾಗಿದೆ. ಕಾಂಗ್ರೆಸ್‌ ಮತ್ತು ಬಿಜೆಪಿಗೆ ಗೆಲುವಿನ ಪ್ರತಿಷ್ಟೆಯಾದ್ರೆ?  ಜೆಡಿಎಸ್‌ಗೆ  ಅಸ್ತಿತ್ವ ಸಾಬೀತುಪಡಿಸುವ ಸವಾಲಿನ ಪ್ರಶ್ನೆಯಾಗಿದೆ. ಮೂರು ಕ್ಷೇತ್ರಗಳನ್ನು ಗೆಲ್ಲಲು ಹೆಣದಿರುವ ತಂತ್ರಗಳೇನು? ಉಪಚುನಾವಣೆಯ ವಾತವರಣ ಹೇಗಿದೆ?

ಉಪ ಚುನಾವಣೆ ಫ‌ಲಿತಾಂಶದಿಂದ ದೊಡ್ಡ ಮಟ್ಟದ ರಾಜಕೀಯ ಬದಲಾವಣೆ ಆಗೋದಿಲ್ಲ. ಆದರೆ ಸಿ.ಡಿ. ಪ್ರಕರಣ ಎಬ್ಬಿಸಿರುವ ರಾಡಿಯ ಹಿನ್ನೆಲೆಯಲ್ಲಿ ಮತದಾರನ ನಾಡಿ ಮಿಡಿತ ಯಾರ ಕಡೆ ವಾಲಬಹುದು ಎಂಬ ಪ್ರಶ್ನೆಗಳು ಹುಟ್ಟಿಕೊಳ್ಳುತ್ತಿವೆ. ಮೂರೂ ಕ್ಷೇತ್ರಗಳಲ್ಲಿ ಫ‌ಲಿತಾಂಶದ ಮೇಲೆ ಜಾತಿ ರಾಜಕಾರಣ, ಸಿ.ಡಿ. ಪ್ರಕರಣ ಪ್ರಭಾವ ಬೀರುವ ಸಾಧ್ಯತೆಗಳಿವೆ. ಜತೆಗೆ ಪಕ್ಷ ಮತ್ತು ವೈಯಕ್ತಿಕ ವರ್ಚಸ್ಸು ಪರಿಣಾಮ ಬೀರಲಿದ್ದು, ಕಾಂಗ್ರೆಸ್‌ ಮತ್ತು ಬಿಜೆಪಿ ನಾಯಕರ ದಂಡು ಮೂರೂ ಕ್ಷೇತ್ರಗಳಿಗೆ ಈಗಾಗಲೆ ಲಗ್ಗೆ ಇರಿಸಿದೆ. ಕೆಲ ನಾಯಕರು ಅಲ್ಲಿಯೇ ಟೆಂಟ್‌ ಹಾಕಿದ್ದಾರೆ. ಏಪ್ರಿಲ್‌ 17 ರಂದು ಮೂರು ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದೆ, ಮೇ 02 ರಂದು ಫಲಿತಾಂಶ ಪ್ರಕಟವಾಗಲಿದೆ.

ಮೂರುಕ್ಷೇತ್ರಗಳಲ್ಲಿ ವಾತಾವರಣ ಹೇಗಿದೆ? ಎನ್ನುದನ್ನು ನೋಡೋಣ. ಮೊದಲಿಗೆ ಮಸ್ಕಿ ಕ್ಷೇತ್ರದತ್ತ ಕಣ್ಣುಹಾಯಿಸೋಣ. ಮಸ್ಕಿ ಉಪಚುನಾವಣೆ ಕಣದಲ್ಲಿ ರಾಜಕೀಯ ಚಟುವಟಿಕೆ ಬಿರುಸಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ತುರ್ವಿಹಾಳ ಹಾಗೂ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ ಅವರು ಸೋಮವಾರ ಒಂದೇ ದಿನ ಪ್ರತ್ಯೇಕವಾಗಿ ನಾಮಪತ್ರ ಸಲ್ಲಿಸಿದ್ದಾರೆ. 2008ರಲ್ಲಿ ಕ್ಷೇತ್ರ ಮರುವಿಂಗಡಣೆ ವೇಳೆ ಉದಯವಾಗಿದ್ದ ಎಸ್‌ಟಿ ಮೀಸಲು ವಿಧಾನಸಭಾ ಕ್ಷೇತ್ರ ಮಸ್ಕಿಯಲ್ಲಿ ಇದುವರೆಗೂ ಮೂರು ಬಾರಿ ಸಾರ್ವತ್ರಿಕ ಚುನಾವಣೆ ನಡೆದಿವೆ. ಆದರೆ ಇದೇ ಮೊದಲ ಬಾರಿಗೆ ಉಪಚುನಾವಣೆ ನಡೆಯುತ್ತಿದೆ. ಆರೋಪ ಪ್ರತ್ಯಾರೋಪಗಳ ನಡುವೆ ಚುನಾವಣ ಕಣ ರಂಗೇರಿದೆ.

ಮಸ್ಕಿ ವಿಧಾನಸಭೆ ಕ್ಷೇತ್ರ ರಚನೆ ಬಳಿಕ ಮೊದಲ ಬಾರಿ ಬಿಜೆಪಿ, ಮತ್ತೆರಡು ಬಾರಿ ಕಾಂಗ್ರೆಸ್‌ಗೆ ಒಲವು ತೋರಿದ್ದ ಇಲ್ಲಿನ ಮತದಾರ ಈ ಬಾರಿ ಯಾರ ಕೊರಳಿಗೆ ವಿಜಯ ಮಾಲೆ ಹಾಕಲಿದ್ದಾನೆ ಎನ್ನುವ ಕುತೂಹಲ ಉಂಟಾಗಿದೆ. ಪ್ರತಿ ಚುನಾವಣೆಯಲ್ಲೂ ಮೂರು ಪಕ್ಷಗಳ ಅಭ್ಯರ್ಥಿಗಳ ಅಖಾಡದಲ್ಲಿರುತ್ತಿದ್ದರು. ಆದರೆ, ಈ ಬಾರಿ ಇದುವರೆಗೂ ಜೆಡಿಎಸ್‌ನಿಂದ ಅಭ್ಯರ್ಥಿ ಘೋಷಣೆಯಾಗಿಲ್ಲ. ಬಿಜೆಪಿ ಮತ್ತು ಕಾಂಗ್ರೆಸ್‌ ಇಬ್ಬರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಇವರಿಬ್ಬರ ನಡುವೆ ನೇರಾ ನೇರಾ ಫೈಟ್ ನಡೆಯಲಿದೆ. ಮಸ್ಕಿಯಲ್ಲಿ ಹಿಂದೆ ನಡೆದ ಚುನಾವಣೆಗಳು ಹೇಗಿದ್ದವು ಕ್ಷೇತ್ರದ ಇತಿಹಾಸ ಹೇಗಿದೆ ಎಂಬುದನ್ನು ನಾವೀಗ ನೋಡೊಣ

2008ರ ಪೂರ್ವ, ಸಿಂಧನೂರು, ಲಿಂಗಸುಗೂರು, ಮಾನ್ವಿ ವಿಧಾನಸಭೆ ಕ್ಷೇತ್ರದಲ್ಲಿ ಹಂಚಿ ಹೋಗಿದ್ದ ಹಳ್ಳಿಗಳನ್ನು ಕ್ರೋಡೀಕರಿಸಿ ಹೊಸ ಮಸ್ಕಿ ವಿಧಾನಸಭೆ ಕ್ಷೇತ್ರ ರಚನೆ ಮಾಡಲಾಯಿತು. ಕ್ಷೇತ್ರ ರಚನೆಯಾದ 2008ರ ಮೊದಲ ಚುನಾವಣೆಯಲ್ಲಿ ಆಗಿನ ಬಿಜೆಪಿ ಅಭ್ಯರ್ಥಿಯಾಗಿದ್ದ ಪ್ರತಾಪಗೌಡ ಪಾಟೀಲ್‌ ಗೆದ್ದು ವಿಧಾನಸಭೆ ಪ್ರವೇಶಿಸಿದ್ದರು. ಇವರ ಜತೆ ಅಖಾಡಕ್ಕೆ ಇಳಿದಿದ್ದ ಕಾಂಗ್ರೆಸ್‌ನ ತಿಮ್ಮಯ್ಯ ನಾಯಕ, ಜೆಡಿಎಸ್‌ ನ ಅಯ್ಯನಗೌಡ ಆಯನೂರು ಸೋಲು ಅನುಭವಿಸಿದ್ದರು. ಬಳಿಕ 2013ರ ಸಾರ್ವತ್ರಿಕ ಚುನಾವಣೆ ಘೋಷಣೆ ವೇಳೆ ಬಿಜೆಪಿಯಲ್ಲಿದ್ದ ಪ್ರತಾಪಗೌಡ ಪಾಟೀಲ್ ಕಾಂಗ್ರೆಸ್‌ ಬಾಗಿಲು ಬಡಿದು ಟಿಕೆಟ್‌ ಗಿಟ್ಟಿಸಿದರು. ಆಗಿನ ಕೈ ಪಕ್ಷದ ಅಲೆಯಲ್ಲಿ ಮತ್ತೂಮ್ಮೆ ಗೆದ್ದು ಶಾಸಕರಾದರು. ಆಗ ಬಿಜೆಪಿಯಿಂದ ಶಂಕರ್‌ ಮ್ಯಾದರ್‌, ಕೆಜೆಪಿಯಿಂದ ಮಹಾದೇವಪ್ಪಗೌಡ, ಬಿಎಸ್ಸಾರ್‌ನಿಂದ ಶೇಖರಪ್ಪ ತಳವಾರ, ಜೆಡಿಎಸ್‌ನಿಂದ ಅಮರೇಶ್ ಕಣಕ್ಕೆ ಇಳಿದು ಸೋಲು ಅನುಭವಿಸಿದ್ದರು. ಇನ್ನು 2018ರ ಸಾರ್ವತ್ರಿಕ ಚುನಾವಣೆ ಎದುರಾದಾಗ ಮತ್ತೂಮ್ಮೆ ಕಾಂಗ್ರೆಸ್ ನಿಂದಲೇ ಪ್ರತಾಪಗೌಡ ಪಾಟೀಲ್‌ ಕಣಕ್ಕೆ ಇಳಿದು ಬಿಜೆಪಿ ಅಭ್ಯರ್ಥಿಯಾಗಿದ್ದ ಆರ್‌.ಬಸನಗೌಡ ತುರುವಿಹಾಳ ವಿರುದ್ಧ ಕೇವಲ 213 ಮತಗಳ ಅಂತರದಲ್ಲಿ ಗೆಲುವು ದಾಖಲಿಸಿದ್ದರು. ಒಟ್ಟು ಮೂರು ಚುನಾವಣೆಯಲ್ಲೂ ಮಸ್ಕಿಯ ಮತದಾರರು ಪ್ರತಾಪಗೌಡ ಪಾಟೀಲ್‌ ಅವರನ್ನು ಬೆಂಬಲಿಸಿ ಹ್ಯಾಟ್ರಿಕ್ ವಿಜಯಕ್ಕೆ ನಾಂದಿ ಹಾಡಿದ್ದರು.

ಸತತ ಮೂರು ಬಾರಿ ಗೆದ್ದ ಪ್ರತಾಪಗೌಡ ಪಾಟೀಲ್‌ 2018ರಲ್ಲಿ ಗೆದ್ದ ಕೆಲವೇ ದಿನಗಳಲ್ಲಿ ಅಪರೇಷನ್‌ ಕಮಲಕ್ಕೆ ಬಲಿಯಾದರು. ಕೈ ತೊರೆದು ಬಿಜೆಪಿ ಸೇರುವ ಮೂಲಕ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ನಂತರ ನಡೆದ ಹಲವು ಕಾನೂನು ಹೋರಾಟಗಳನ್ನು ದಾಟಿ ಬಂದಿದ್ದಾರೆ. ಈಗ ಇಷ್ಟು ಘಟನೆಗೆ ಸಾಕ್ಷಿಯಾದ ಮಸ್ಕಿ ಮೊದಲ ಬಾರಿಗೆ ಉಪಚುನಾವಣೆ ಎದುರಿಸುತ್ತಿದೆ. ಈ ಉಪಚುನಾವಣೆಯಲ್ಲೂ ಪ್ರತಾಪಗೌಡ ಪಾಟೀಲ್‌ ಮತ್ತು ಆರ್‌.ಬಸನಗೌಡ ತುರುವಿಹಾಳ ಕಣಕ್ಕೆ ಇಳಿದಿದ್ದು, ಹಳೆಯ ವ್ಯಕ್ತಿಗಳಾಗಿದ್ದರೂ ಪಕ್ಷ ಮತ್ತು ಚಿಹ್ನೆಗಳು ಅದಲು-ಬದಲಾಗಿವೆ.

ಎರಡು ಚುನಾವಣೆಯ ಮತಗಳಿಕೆಯನ್ನು ನೋಡುವುದಾದರೆ,

2003 2018
ಬಿಜೆಪಿ 4.03% ಕೆಜಿಪಿ ಸ್ಪರ್ಧೆ ಮಾಡಿತ್ತು 24.97% 44.01%
ಕಾಂಗ್ರೆಸ್ 43.08 44,17%
ಜೆಡಿಎಸ್ 3.3 8‌,33%

ಮಸ್ಕಿ ಕ್ಷೇತ್ರದಲ್ಲಿ ಅಭ್ಯರ್ಥಿಗಳು ಅದಲು ಬದಲಾಗಿದ್ದು, ಪಕ್ಷವೂ ಬದಲಾಗಿದೆ. ಕಾಂಗ್ರೆಸ್‌ನಿಂದ ಗೆದ್ದಿದ್ದ ಪ್ರತಾಪ ಗೌಡ ಪಾಟೀಲ್‌ ಬಿಜೆಪಿಯಿಂದ ಟಿಕೆಟ್‌ ಪಡೆದಿದ್ದರೆ, ಬಿಜೆಪಿಯಿಂದ ಸ್ಪರ್ಧಿಸಿ ಸೋತಿದ್ದ ಬಸವನಗೌಡ ತುರವಿಹಾಳ್‌ ಕಾಂಗ್ರೆಸ್‌ ಟಿಕೆಟ್‌ ಪಡೆದಿದ್ದಾರೆ. ಈ ಕ್ಷೇತ್ರವನ್ನು ಮತ್ತೆ ವಶಕ್ಕೆ ಪಡೆಯಲು ಕಾಂಗ್ರೆಸ್‌, ಬಿಜೆಪಿಯಲ್ಲಿದ್ದ ತುರವಿಹಾಳ್‌ ಅವರನ್ನು ಕರೆತಂದಿದ್ದರೆ ಆಪರೇಷನ್‌ ಕಮಲ ಮೂಲಕ ಬಂದಿರುವ ಪ್ರತಾಪಗೌಡ ಪಾಟೀಲ್‌ ಅವರನ್ನು ಗೆಲ್ಲಿಸಲು ಬಿಜೆಪಿ ಪಣ ತೊಟ್ಟಿದೆ.

ಜಾತಿ ಲೆಕ್ಕಾಚಾರ ಹೇಗಿದೆ? ಎನ್ನುವದನ್ನು ನೋಡುವುದಾದರೆ, ಮಸ್ಕಿ ಕ್ಷೇತ್ರದಲ್ಲಿ ಲಿಂಗಾಯತ ಮತ್ತು ಎಸ್ಟಿ ಸಮುದಾಯದ ಮತಗಳೇ ಇಲ್ಲಿ ಅಧಿಕ. ಈ ಎರಡು ಸಮುದಾಯದವರ ವೋಟ್‌ಗಳು ಅಭ್ಯರ್ಥಿಗಳ ಗೆಲುವು-ಸೋಲಿನ ಹಿಂದೆ ನಿರ್ಣಾಯಕವಾಗಿವೆ. ಮಸ್ಕಿಯಲ್ಲಿ ಒಟ್ಟು 2,06,988 ಮತದಾರರಿದ್ದು, ಇದರಲ್ಲಿ 1,01,234 ಪುರುಷ, ಮಹಿಳೆಯರು-1,04,941 ಇದ್ದು, ಇತರೆ-28 ಮತಗಳಿವೆ. ಜಾತಿ ಆಧಾರಿತ ಅಂದಾಜು ಮತಗಳು ಹೀಗಿವೆ. ಲಿಂಗಾಯತ-52 ಸಾವಿರ, ಪರಿಶಿಷ್ಟ ಜಾತಿ-45 ಸಾವಿರ, ಪರಿಶಿಷ್ಠ ಪಂಗಡ-49 ಸಾವಿರ, ಕುರುಬರು-20 ಸಾವಿರ, ಅಲ್ಪಸಂಖ್ಯಾತರು-14 ಸಾವಿರ, 26 ಸಾವಿರ ಇತರೆ ಮತಗಳಿವೆ. ಈ ಎಲ್ಲ ಮತಗಳ ಸಮೀಕರಣದ ಆಧಾರದ ಮೇಲೆ ಚುನಾವಣೆ ನಡೆಯಲಿದೆ. ಜೊತೆಗೆ ಹಣದ ಆರ್ಬಟವೂ ಜೋರಿದೆ.

ಇನ್ನೂ ಬಸವ ಕಲ್ಯಾಣದಲ್ಲಿ ಚುನಾವಣಾ ಕಾವು ಜೋರಾಗಿದೆ.  ಜೆಡಿಎಸ್‌ ಅಲ್ಪಸಂಖ್ಯಾತ ಸಮುದಾಯದ ಅಭ್ಯರ್ಥಿ ಕಣಕ್ಕೆ ಇಳಿಸಿರುವುದರಿಂದ ಯಾರಿಗೆ ನಷ್ಟ ಎಂಬ ಚರ್ಚೆ ಆರಂಭವಾಗಿವೆ. ಕಾಂಗ್ರೆಸ್‌ ಅನುಕಂಪದ ಅಲೆ ನಂಬಿ ನಾರಾಯಣ್‌ ರಾವ್‌ ಅವರ ಪತ್ನಿ ಮಲ್ಲಮ್ಮ ಅವರಿಗೆ ಟಿಕೆಟ್‌ ನೀಡಿದೆ. ಬಿಜೆಪಿ ಬಸವರಾಜ್‌ ಸಲಗರ ಅವರಿಗೆ ಟಿಕೆಟ್‌ ಕೊಟ್ಟಿದ್ದರೆ ಜೆಡಿಎಸ್‌ ಸೈಯದ್‌ ಹೆಸ್ರಲ್‌ ಅಲಿ ಖಾದ್ರಿ ಅವರನ್ನು ಕಣಕ್ಕಿಳಿಸಿದೆ.

ಬೀದರ ಕ್ಷೇತ್ರದ ಹಿನ್ನಲೆಯನ್ನು ತಿಳಿಯುವುದಾದರೆ. 12ನೇ ಶತಮಾನದಲ್ಲಿ ಕಲ್ಯಾಣ ಕ್ರಾಂತಿ ನಡೆದ ಪಟ್ಟಣವಿದು. ಜಿಲ್ಲಾಕೇಂದ್ರ ಬೀದರ್‌ನಿಂದ ಸುಮಾರು 80 ಕಿ.ಮೀ. ದೂರದಲ್ಲಿದೆ. ಪ್ರವಾಸಿಗರನ್ನು ಕೈ ಬೀಸಿ ಕರೆಯುವ ಪ್ರವಾಸಿ ತಾಣವಾಗಿದೆ. ಬಸವ ಕಲ್ಯಾಣದ ಕೋಟೆ ಪ್ರಮುಖ ಆಕರ್ಷಣೆಯ ವಸ್ತುವಾಗಿದೆ. ಬಸವಕಲ್ಯಾಣದಲ್ಲಿ ಲಾರಿಗಳು ಈ ಪಟ್ಟಣದ ಆರ್ಥಿಕತೆ ನಿರ್ಧರಿಸುತ್ತವೆ. ಒಂದು ಅಂದಾಜಿನ ಪ್ರಕಾರ 10 ಸಾವಿರಕ್ಕೂ ಅಧಿಕ ಲಾರಿಗಳು ಇಲ್ಲಿವೆ. ಹೈದರಾಬಾದ್-ಪುಣೆ ರಾಷ್ಟ್ರೀಯ ಹೆದ್ದಾರಿ ಪಟ್ಟಣಕ್ಕೆ ಹತ್ತಿರದಲ್ಲಿದೆ. ವಾಹನಗಳ ಬಿಡಿಭಾಗಗಳ ಉದ್ಯಮವೂ ಇಲ್ಲಿ ಜೋರಾಗಿದೆ. ಆದ್ದರಿಂದ, ಇಲ್ಲಿನ ಬಹುತೇಕ ಜನರು ಲಾರಿಗಳನ್ನು ಬಾಡಿಗೆಗೆ ನೀಡಿದ್ದಾರೆ. ಆದ್ದರಿಂದ, ಇಲ್ಲಿನ ಆರ್ಥಿಕತೆ ಲಾರಿಗಳ ಚಕ್ರದ ಸುತ್ತಲೇ ಗಿರಿಕಿ ಹೊಡೆಯುತ್ತದೆ.

ಬಸವ ಕಲ್ಯಾಣ 1983 ರಿಂದ 2004ರ ತನಕ ಜನತಾ ಪರಿವಾರದ ಭದ್ರ ಕೋಟೆಯಾಗಿತ್ತು. 2008ರಲ್ಲಿ ಕ್ಷೇತ್ರ ಬಿಜೆಪಿ ತಕ್ಕೆಗೆ ಸೇರಿತು. 2013ರಲ್ಲಿ ಕ್ಷೇತ್ರ ಜೆಡಿಎಸ್ ಪಾಲಾಯಿತು. ಹಾಗಾಗಿ ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಮೂರು ಪಕ್ಷಗಳ ಹಿಡಿತದಲ್ಲಿರುವ ಕ್ಷೇತ್ರವಿದು. 2013ರ ಚುನಾವಣೆಯಲ್ಲಿ ಜೆಡಿಎಸ್‌ ಮಲ್ಲಿಕಾರ್ಜುನ ಖೂಬಾ ಅವರು 37,494 ಮತಗಳನ್ನು ಪಡೆದಿದ್ದರು. ಕಾಂಗ್ರೆಸ್‌ನ ಬಿ.ನಾರಾಯಣ ರಾವ್ 21,601 ಮತ, ಬಿಜೆಪಿಯ ಸಂಜಯ್ 17,431 ಮತಗಳನ್ನು ಪಡೆದಿದ್ದಾರೆ. 2018 ರಲ್ಲಿ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ಬಿ. ನಾರಾಯಣರಾವ್‌ 61,425 ಮತಗಳನ್ನು ಪಡೆದು ಗೆಲುವು ಸಾಧಿಸಿದರು, ಜೆಡಿಎಸ್‌ ನಲ್ಲಿದ್ದ ಮಲ್ಲಿಕಾರ್ಜುನ್‌  ಖೂಬಾ ಪಕ್ಷವನ್ನು ಬದಲಿಸಿ ಬಿಜೆಪಿಯಿಂದ ಸ್ಪರ್ಧಿಸಿ 44,153 ಮತಗಳನ್ನು ಪಡೆದರೆ, ಜೆಡಿಎಸ್‌ ನ ಪಿಜಿ ಆರ್‌ ಸಿಂದ್ಯಾ 33, 414 ಮತಗಳನ್ನು ಪಡೆದರು.

ಎರಡು ಚುನಾವಣೆಯ ಮತಗಳಿಕೆಯನ್ನು ನೋಡುವುದಾದರೆ,

ಪಕ್ಷ 2013 2018
ಕಾಂಗ್ರೆಸ್ 17,12% 42‌%
ಬಿಜೆಪಿ 13,82 30%
ಜೆಡಿಎಸ್ 29,72 22%

‌ಮಲ್ಲಮ್ಮ ರವರನ್ನು ಗೆಲ್ಲಿಸಲು ಕಾಂಗ್ರೆಸ್‌ ನ ರಾಜ್ಯದ ನಾಯಕರ ದಂಡು ಸತತ ಪ್ರಯತ್ನವನ್ನು ನಡೆಸುತ್ತಿದ್ದಾರೆ.  ಜೆಡಿಎಸ್‌ ಗೆ ಇಲ್ಲಿ ನೆಲೆ ಇರುವ ಪ್ರದೇಶವಾಗಿದೆ. ಬಂಡೆಪ್ಪ ಕಾಶಂಪುರ್‌ ಮತ್ತು ಕುಮಾರಸ್ವಾಮಿಯವರ ನೇತೃತ್ವದಲ್ಲಿ ಚುನಾವಣಾ ಅಖಾಡಕ್ಕೆ ಧುಮಿಕಿದೆ. ಇಲ್ಲಿಯೂ ಬಿಜೆಪಿಯಲ್ಲಿ ಅಸಮಾಧಾನದ ಹೊಗೆ ಎದ್ದು ಕಾಣುತ್ತಿದೆ. ಟಿಕೇಟ್‌ ಹಂಚಿಕೆಯಲ್ಲಿ ಡೀಲ್‌ ಆಗಿದೆ,  ಸ್ಥಳೀಯರನ್ನು ಬಿಟ್ಟು ಹೊರಗಿನವರಿಗೆ ಟಿಕೇಟ್‌ ನೀಡುರುವುದರಿಂದ ಟಿಕೆಟ್‌ ಹಣಕ್ಕೆ ಮಾರಾಟ ಆಗಿದೆ ಎಂದು  ಟಿಕೇಟ್‌ ಆಕಾಂಕ್ಷಿಯಾಗಿದ್ದ ಮಾಜಿ ಶಾಸಕ  ಮಲ್ಲಿಕಾರ್ಜುನ್‌ ಖೂಬಾ ಬಹಿರಂಗ ಹೇಳಿಕೆ ನೀಡಿದ್ದಾರೆ.  ಬಿಜೆಪಿ ಕಾರ್ಯಕರ್ತರು ನಾವು ಹೊರಗಿನವಿರಿಗೆ ಮತಹಾಕುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದರ ಲಾಭವನ್ನು ಪಡೆಯಲು ಕಾಂಗ್ರೆಸ್‌, ಜೆಡಿಎಸ್‌ ಪ್ರಯತ್ನಿಯನ್ನು ನಡೆಸಿವೆ. ಇಲ್ಲಿಯೂ ಕಾಂಚಣದ ಸದ್ದು ಜೋರಾಗಿಯೇ ಇದೆ.

ಬೆಳಗಾವಿ ಲೋಕಸಭೆ ಕ್ಷೇತ್ರ ಹೈ ವೋಲ್ಟೇಜ್‌ನದ್ದಾಗಿದೆ. ಕಾಂಗ್ರೆಸ್‌ನಿಂದ ಸತೀಶ್‌ ಜಾರಕಿಹೊಳಿ ನಾಮಪತ್ರ ಸಲ್ಲಿಸಿದ್ದರಿಂದ ಚಿತ್ರಣವೇ ಬದಲಾಗಿದೆ. ಅವರು ಇದಕ್ಕೆ ಪ್ರತ್ಯಸ್ತ್ರವಾಗಿ ಮಂಗಳಾ ಅಂಗಡಿ ಅವರಿಗೆ ಟಿಕೆಟ್‌ ನೀಡುವ ಮೂಲಕ ಬಿಜೆಪಿ ಅನುಕಂಪದ ಅಲೆಗೆ ಶರಣಾಗಿದೆ.  ಕಮಲ ಪಾಳಯದ ಭದ್ರಕೋಟೆ ಎನಿಸಿರುವ ಬೆಳಗಾವಿ ಸತತವಾಗಿ 1998, 2004, 2009, 2013, 2018ರಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳು ಸತತವಾಗಿ ಕ್ಷೇತ್ರದಲ್ಲಿ ಗೆದ್ದಿದ್ದಾರೆ. ಈ ಪೈಕಿ ಸುರೇಶ ಅಂಗಡಿ ನಾಲ್ಕು ಸಲ ಗೆದ್ದರೆ, ಮಾಜಿ ಕೇಂದ್ರ ಸಚಿವ ಬಾಬಾಗೌಡ ಪಾಟೀಲ್ ಒಮ್ಮೆ ಲೋಕಸಭೆಗೆ ಆಯ್ಕೆಯಾಗಿದ್ದರು.

1951 ರಿಂದ 1991 ರ ವರೆಗೆ ಕಾಂಗ್ರೆಸ್‌ ಸತತವಾಗಿ ಗೆದ್ದಿರುವ ಕ್ಷೇತ್ರ ಇದಾಗಿದೆ. 1996 ರಲ್ಲಿ ಜನತಾದಳದಿಂದ ಶಿವಾನಂದ ಕೌಜಲಗಿಯವರು ಗೆಲುವು ಸಾಧಿಸಿದ್ದರು. 1998 ರಿಂದ 2019 ರ ವರೆಗೆ ಬಿಜೆಪಿ ಸತತವಾಗಿ ಗೆಲುವು ಸಾಧಿಸುತ್ತಿದೆ. ಎರಡು ಚುನಾವಣೆಯ ಮತಗಳಿಕೆಯನ್ನು ನೋಡುವುದಾದರೆ,

  2014 ರಲ್ಲಿ ಶೇ 2019 ರಲ್ಲಿ
ಬಿಜೆಪಿ 51.53% 63,22
‌ಕಾಂಗ್ರೆಸ್ 44.48% 30,76%

8 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಲೋಕಸಭಾ ಕ್ಷೇತ್ರದಲ್ಲಿ ಬೆಳಗಾವಿ ತಾಲೂಕಿನ ಮೂರು ಕ್ಷೇತ್ರಗಳಲ್ಲಿ ಮರಾಠಿ ಮತಗಳೇ ಹೆಚ್ಚಿವೆ. ಮರಾಠಿಗರಿಗೆ ಬಿಜೆಪಿ ಕಡೆಗೆ ಒಲವು ಜಾಸ್ತಿ ಇದೆ. ಲಿಂಗಾಯತ ಮತಗಳು ಹೆಚ್ಚಾಗಿರುವುದರಿಂದ ಅವರೇ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. 4.42 ಲಕ್ಷದಷ್ಟು ಲಿಂಗಾಯತ ಸಮುದಾಯವಿದ್ದರೆ, ಮರಾಠ ಸಮಯುದಾಯ 2.26 ಲಕ್ಷ., ಮುಸ್ಲಿಂ- 1.84 ಲಕ್ಷ. ಕುರುಬ ಸಮುದಾಯ-1.50 ಲಕ್ಷ. ಎಸ್ಸಿ- 1.62 ಲಕ್ಷ. ಎಸ್ಟಿ- 96 ಸಾವಿರ. ನೇಕಾರ- 70 ಸಾವಿರ ,ಉಪ್ಪಾರ- 60 ಸಾವಿರ. ಇತರೆ ಸಮುದಾಯಗಳು 3 ಲಕ್ಷದಷ್ಟು ಇದ್ದಾರೆ.

ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಜಾರಕಿಹೊಳಿ ಕುಟುಂಬದ ಎಲ್ಲರೂ ಒಟ್ಟಾಗಿ ಸತೀಶ್‌ ಪರ ಪ್ರಚಾರಕ್ಕೆ ಇಳಿಯಬಹುದಾ ಎಂಬ ಪ್ರಶ್ನೆಗಳಿವೆ. ಇವರೆಲ್ಲ ಒಗ್ಗಾಟ್ಟಾಗಿ ಚುನಾವಣೆ ಎದುರಿಸಿದರೆ ಫ‌ಲಿತಾಂಶದ ಚಿತ್ರಣವೇ ಬೇರೆ ಆಗಲಿದೆ.  ಆದರೆ ಸತೀಶ್‌ ಜಾರಕಿಹೊಳಿ ಪ್ರತಿನಿಧಿಸುವ ಯಮಕನಮರಡಿ ಕ್ಷೇತ್ರ ಬೆಳಗಾವಿ ಕ್ಷೇತ್ರದ ವ್ಯಾಪ್ತಿಗೆ ಬರುವುದಿಲ್ಲ. ಇದು ಸತೀಶ್‌  ರವರಿಗೆ ಸ್ವಲ್ಪ ಮಟ್ಟಿನ ಹಿನ್ನಡೆಯಾಗುವ ಸಾಧ್ಯತೆಯೂ ಇದೆ ಎಂದು ಹೇಳಲಾಗುತ್ತಿದೆ. ಆದರೆ ಸಹೋದರ ಬಾಲಚಂದ್ರ ಅವರ ಅರಭಾವಿ, ರಮೇಶ್‌ ಅವರ ಗೋಕಾಕ್‌ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಬರಲಿವೆ ಹೀಗಾಗಿ ಸಹೋದರರ ತೀರ್ಮಾನ ಕುತೂಹಲ ಮೂಡಿಸಿದೆ.

ಬಿಜೆಪಿಯಲ್ಲಿ ಅಸಮಾಧಾನ ಹೆಚ್ಚಾಗಿದ್ದು  ಜಗದೀಶ್‌ ಶೆಟ್ಟರ ಅವರು ತಮ್ಮ ಸೊಸೆಗೆ ಟಿಕೇಟ್‌ ನೀಡುವಂತೆ ಹೂಕಮಾಂಡ್‌ ವರೆಗೆ ಪ್ರಯತ್ನ ನಡೆಸಿದ್ದರು. ಸಚಿವ ಉಮೇಶ್‌ ಕತ್ತಿ ತಮ್ಮ ಸಹೋದರ ರಮೇಶ್‌ ಕತ್ತಿಯವರಿಗೆ ಟಿಕೆಟ್‌ ನೀಡುವಂತೆ ತೆರೆಮರೆ ಪ್ರಯತ್ನ ನಡೆಸಿದ್ದರು. ಆದರೆ ವರಿಷ್ಠರು ಅಳೆದು ತೂಗಿ ಅಂತಿಮವಾಗಿ ದಿ. ಸುರೇಶ್‌ ಅಂಗಡಿಯವರ ಹೆಂಡತಿ ಮಂಗಳಾರವರಿಗೆ ಬಿಜಿಪಿ ಟಿಕೆಟ್‌ ನೀಡಿದೆ.

ಈ ಮೂರು ಕ್ಷೇತ್ರಗಳಲ್ಲಿ ಪಕ್ಷದ ಜೊತೆಗೆ ವೈಯಕ್ತಿಕ ವರ್ಚಸ್ಸು ಹೆಚ್ಚಾಗಿರುವುದು ಕಂಡು ಬರುತ್ತಿದೆ. ಪ್ರತಿ ಚುನಾವಣೆಯಂತೆ ಜಾತಿರಾಜಕರಣ ಈ ಬಾರಿಯೂ ನಡೆಯಲಿದೆ. ಹಣ,ಹೆಂಡ, ಸೀರೆ ಹಂಚುವುದು ಆಗಲೇ ಆರಂಭವಾಗಿದೆ. ರಾಜ್ಯ ರಾಜಕಾರಣದಲ್ಲಿ ಯಾವುದೇ ಪರಿಣಾಮ ಬೀರದಿದ್ದರು ಬಿಜೆಪಿ ಮತ್ತು ಕಾಂಗ್ರೆಸ್‌ ಗೆಲುವಿಗಾಗಿ ತಂತ್ರ ಪ್ರತಿತಂತ್ರಗಳನ್ನು ಹೆಣೆಯುತ್ತಿವೆ. ಆದರೆ  ಮತದಾರನ ಮನಸ್ಸು ಯಾರ ಮೇಲಿದೆಯೋ  ಚುನಾವಣಾ ಫಲಿತಾಂಶದ ವರೆಗೆ ಕಾಯ್ದು ನೋಡಬೇಕಿದೆ.

Donate Janashakthi Media

Leave a Reply

Your email address will not be published. Required fields are marked *