ಬೆಂಗಳೂರು: 2026-27ನೇ ಸಾಲಿನ ರಾಜ್ಯ ಬಜೆಟ್ ಗಾತ್ರ 4 ಲಕ್ಷ ಕೋಟಿ ರೂಪಾಯಿ ಆಗಿದ್ದು, ಈ ಬಾರಿಯೂ ವಲಯವಾರು ವಿಂಗಡಣೆ ಮಾಡಿ ಮುಖ್ಯಮಂತ್ರಿ ಸಿದ್ಜರಾಮಯ್ಯ ಅವರು ಪ್ರಸಕ್ತ ಸಾಲಿನ ಬಜೆಟ್ ಮಂಡನೆ ಮಾಡುತ್ತಿದ್ದಾರೆ. ಬಜೆಟ್
ರಾಜ್ಯ ವಿಧಾನಸಭೆಯಲ್ಲಿ ಪ್ರಸಕ್ತ ಸಾಲಿನ ರಾಜ್ಯದ ಆಯವ್ಯಯ ಮಂಡಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ರೈತರು, ಧಮನಿತರು, ಕಾರ್ಮಿಕ ಪರ ಬಜೆಟ್ ಇದಾಗಿದೆ ಎಂದು ಹೇಳಿದರು.
ಕಳೆದ ವರ್ಷಕ್ಕಿಂತ ಈ ವರ್ಷ 40 ಸಾವಿರ ಕೋಟಿ ರೂ. ತೆರಿಗೆ ಹೆಚ್ಚಳ. 2026-2027ನೇ ಸಾಲಿನಲ್ಲಿ 3.15 ಲಕ್ಷ ಕೋಟಿ ರಾಜಸ್ವ ಸಂಗ್ರಹ ಗುರಿ ಹೊಂದಲಾಗಿದೆ. ಈ ಸಾಲಿನ ಬಜೆಟ್ ಗಾತ್ರ 4.48 ಲಕ್ಷ ಕೋಟಿ ರೂಪಾಯಿ. 27,957 ಕೋಟಿ ರೂಪಾಯಿ ರಾಜಸ್ವ ಕೊರತೆ ಬಜೆಟ್ ಇದಾಗಿದೆ ಎಂದು ತಿಳಿಸಿದರು.
ಕರ್ನಾಟಕದ ಒಟ್ಟು ಸಾಲ 8 ಲಕ್ಷ 24,000 389 ಕೋಟಿ ರೂ. ಇದೆ, ಗಣಿಗಾರಿಕೆಯಿಂದ 11,000 ಕೋಟಿ ರೂಪಾಯಿ ಶುಲ್ಕ ಅಂದಾಜು ಬರಬಹುದೆಂದು ಅಂದಾಜಿಸಲಾಗಿದೆ ಎಂದು ಹೇಳಿದ್ದಾರೆ.
ರಾಜ್ಯದ ಸಾರಿಗೆ ನೌಕರರಿಗೆ 1,4,2025 ರಿಂದ ಜಾರಿಗೆ ಬರುವಂತೆ ವೇತನ ಪರಿಷ್ಕರಿಸಲು ನಿರ್ಣಯ ಕೈಗೊಂಡಿದ್ದಾರೆ. ವೇತನ ಬಾಕಿ ಪಾವತಿಗಾಗಿ 1271 ಕೋಟಿ ಮೀಸಲು ಇಡಲಾಗಿದೆ. 1-1-2021ರಿಂದ 28-02-2023ರ ವರೆಗಿನ ವೇತನ ಬಾಕಿ ಪಾವತಿ ಬಗ್ಗೆ ತೀರ್ಮಾನಿಸಲಾಗಿದೆ.
ಶಕ್ತಿ ಯೋಜನೆಗೆ ಈ ವರ್ಷ 5300 ಕೋಟಿ
ರಾಜ್ಯದ ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆಗೆ ಈ ವರ್ಷ 5,300 ಕೋಟಿ ಮೀಸಲು ಮಾಡಲಾಗಿದೆ. ಈಗಾಗಲೇ ಶಕ್ತಿ ಯೋಜನೆ ಭಾರೀ ಯಶಸ್ವಿಯಾಗಿದೆ. ಸುಮಾರು 684 ಕೋಟಿ ಟ್ರಿಪ್ ಗಳಲ್ಲಿ ಮಹಿಳೆಯರು ಪ್ರಯಾಣದ ಸೌಲಭ್ಯ ಪಡೆದಿದ್ದಾರೆ.
ಮೈಸೂರನ್ನ ರಾಜ್ಯದ ಎರಡನೇ IT ಸಿಟಿಯಾಗಿ ನಿರ್ಮಾಣ!
ಮೈಸೂರನ್ನ ರಾಜ್ಯದ ಎರಡನೇ IT ಸಿಟಿಯಾಗಿ ನಿರ್ಮಾಣ ಮಾಡಲು ಈ ಬಾರಿ ಬಜೆಟ್ನಲ್ಲಿ ತೀರ್ಮಾನ ಮಾಡಲಾಗಿದೆ. ಬೆಂಗಳೂರಿನ ದಟ್ಟಣೆ ಕಡಿಮೆ ಮಾಡಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ವಸತಿ ನಿಲಯ, ವಸತಿ ಶಾಲೆಗಳಲ್ಲಿ ನಿರ್ವಹಣೆಗೆ ಉನ್ನತ ಮಟ್ಟದ ಸಮಿತಿ ರಚನೆ
ವಸತಿ ನಿಲಯ, ವಸತಿ ಶಾಲೆಗಳಲ್ಲಿ ಗುಣಮಟ್ಟದ ಆಹಾರ ಪೂರೈಕೆಗಾಗಿ ಮೆಸ್ ಸಮಿತಿ ರಚನೆ ಮಾಡಲು ಸರ್ಕಾರ ಮುಂದಾಗಿದೆ. ವಿದ್ಯಾರ್ಥಿಗಳ ಮುಂದಾಳತ್ವದಲ್ಲೇ ಮೆಸ್ ಸಮಿತಿ ರಚನೆ ಮಾಡಲಾಗುತ್ತಿದೆ. ಮುಂಗಡವಾಗಿ ಅಗತ್ಯ ಅನುಧಾನ ನೀಡಿ ಪಾರದರ್ಶಕತೆ ಮತ್ತು ಜವಾಬ್ದಾರಿಯುತ ವ್ಯವಸ್ಥೆ ಜಾರಿ ಮಾಡಲು ಸರ್ಕಾರ ತೀರ್ಮಾನಿಸಿದೆ.
ಇಂದಿರಾ ಕಿಟ್ ವಿತರಣೆಗೆ 6,200 ಕೋಟಿ ಮೀಸಲು
ಅನ್ನ ಭಾಗ್ಯ ಯೋಜನೆ ಅಡಿಯಲ್ಲಿ ಇಂದಿರಾ ಕಿಟ್ ವಿತರಣೆಗೆ 2026- 27ನೇ ಸಾಲಿನಲ್ಲಿ 6,200 ಕೋಟಿ ಮೀಸಲು ಇಡಲಾಗಿದೆ. ಇದು ಬಿಪಿಎಲ್ ಕಾರ್ಡ್ ಫಲಾನುಭವಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ.
ಆರ್ಟಿಇ ಅಡಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ 19 ಕೋಟಿ ಘೋಷಣೆ
ಆರ್ಟಿಇ ಅಡಿ ಪ್ರವೇಶ ಪಡೆದ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳು 9, 10 ನೇ ತರಗತಿ ಮುಂದುವರೆಸಲು 19 ಕೋಟಿ ಘೋಷಣೆ ಮಾಡಲಾಗಿದೆ. ಪದವಿ ಪೂರ್ವ ಶಿಕ್ಷಣಕ್ಕೆ ಅನುವಾಗುವಂತೆ 31 ವಸತಿ ಶಾಲೆಗಳ ಉನ್ನತೀಕರಣ, ವಸತಿ ಶಾಲೆಗಳಿಲ್ಲದ ಹೋಬಳಿಗಳಲ್ಲಿ 40 ವಸತಿ ಶಾಲೆಗಳು ಆರಂಭ ಮಾಡಲು ಘೋಷಣೆ ಮಾಡಲಾಗಿದೆ. ಕ್ರೈಸ್ತ ವಸತಿಗಳಲ್ಲಿ K-CET, JEE, NEET ತರಭೇತಿ ನೀಡಲು Center of Excellenceಗಳನ್ನಾಗಿ ಉನ್ನತೀಕರಣ ಮಾಡಲಾಗುತ್ತಿದೆ.
ಅಬಕಾರಿ ಆದಾಯ ತೆರಿಗೆ ಹೆಚ್ಚಳದ ಬಗ್ಗೆ ಮುಕ್ತ ಅವಕಾಶ
ಅಬಕಾರಿ ಆದಾಯ ತೆರಿಗೆ ಹೆಚ್ಚಳದ ಬಗ್ಗೆ ಮುಕ್ತ ಅವಕಾಶ ನೀಡಲಾಗಿದೆ. ಮದ್ಯದ ಅಂಶ ಆಧರಿಸಿ ತೆರಿಗೆ ವಿಧಿಸಲು ನಿರ್ಧಾರ ಮಾಡಲಾಗಿದೆ. ಏಕ ರೂಪ ಅಬಕಾರಿ ಸುಂಕ ಹೆಚ್ಚಳಕ್ಕೆ ತೀರ್ಮಾನ ಮಾಡಲಾಗಿದೆ. ಎಕ್ಸ್ ಫ್ಯಾಕ್ಟರಿ ದರ ಪಟ್ಟಿ ಆಧಾರದ ಮೇಲೆ ತೆರಿಗೆ, ಮತ್ತು ಹಂತಹಂತವಾಗಿ ತೆರಿಗೆ ಹೆಚ್ಚಳಕ್ಕೆ ನಿರ್ಧಾರ ಮಾಡಲಾಗಿದೆ.
15 ಸಾವಿರ ಭೋದಕ ಹುದ್ದೆ ಭರ್ತಿಗೆ ಮುಂದಾದ ಸರ್ಕಾರ
ಈ ಬಾರಿ ಬಜೆಟ್ನಲ್ಲಿ 15 ಸಾವಿರ ಭೋದಕ ಹುದ್ದೆ ಭರ್ತಿಗೆ ರಾಜ್ಯ ಸರ್ಕಾರ ಮುಂದಾಗಿದೆ. ಶಾಲೆ, ಕಾಲೇಜು ಇಲಾಖೆಯಲ್ಲಿನ ಖಾಲಿ ಹುದ್ದೆ ಭರ್ತಿಗೆ ಸರ್ಕಾರ ಮುಂದಾಗಿದೆ. ಇದು ಶಿಕ್ಷಕ ಕ್ಷೇತ್ರಕ್ಕೆ ಭಾರೀ ಅನುಕೂಲವಾಗಲಿದೆ.
ಬೆಂಗಳೂರಿನ ಕರಗ ಉತ್ಸವಕ್ಕೆ ಅನುದಾನ
ಪ್ರಸಕ್ತ ವರ್ಷ ಬೆಂಗಳೂರಿನ ಕರಗ ಉತ್ಸವಕ್ಕೆ 2 ಕೋಟಿ ಅನುದಾನ ಮೀಸಲು ಇಡಲಾಗಿದೆ. ಸುಮಾರು ಮೂರು ಕೋಟಿ ವೆಚ್ಚದಲ್ಲಿ ತುಮಕೂರು ಗುಬ್ಬಿ ವೀರಣ್ಣ ಕಲಾಕ್ಷೇತ್ರದ ನವೀಕರಣ ಮಾಡಲಾಗುತ್ತಿದೆ. ಕರ್ನಾಟಕ ವಿದ್ಯಾವರ್ಧಕ ಸಂಘಕ್ಕೆ 2 ಕೋಟಿ, ಮೈಸೂರಿನ ಕಾವಾದಲ್ಲಿ ಹವ್ಯಕರಿಗಾಗಿ ಹವ್ಯಕ ಭಾಷಾ ಅಕಾಡೆಮಿ ನಿರ್ಮಿಸಲಾಗುತ್ತಿದೆ. ದಲಿತ ಕವಿ ಸಿದ್ದಲಿಂಗಯ್ಯ ಹೆಸರಿನಲ್ಲಿ ಟ್ರಸ್ಟ್, ಡಾ.ಡಿ.ಆರ್.ನಾಗರಾಜು ಟ್ರಸ್ಟ್ ಸ್ಥಾಪನೆಗೆ ನಿರ್ಧಾರ ಮಾಡಲಾಗಿದೆ. ದಲಿತ ಸಾಹಿತ್ಯ ಪುಸ್ತಕ ಪ್ರಕಟಣೆಗೆ 1 ಕೋಟಿ, ಗೋರ್ ಬಂಜಾರ ವಿಶ್ವಕೋಶ ಪ್ರಕಟಣೆ, ಕುವೆಂಪು ವಿವಿಯಲ್ಲಿ ಯು.ಆರ್.ಅನಂತಮೂರ್ತಿ ಅಧ್ಯಯನ ಪೀಠ, ಸಂತ ಶಿಶುನಾಳ ಷರೀಫ್ ಹೆಸರಿನಲ್ಲಿ ಪ್ರತಿಷ್ಠಾನ, ಬೆಳವಡಿ ಮಲ್ಲಮ್ಮ ಹೆಸರಲ್ಲಿ ಪ್ರತಿಷ್ಠಾನ, ಜಿಎಸ್ ಶಿವರುದ್ರಪ್ಪ ಹೆಸರಿನಲ್ಲಿ ಪ್ರಶಸ್ತಿ ನೀಡಿಕೆಗೆ 2 ಕೋಟಿ ಅನುದಾನ ಮೀಸಲಿಡಲಾಗಿದೆ.
16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ನಿಷೇಧ
ಹೆಚ್ಚುತ್ತಿರುವ ಮೊಬೈಲ್ ಬಳಕೆ ಮಕ್ಕಳ ಮೇಲೆ ಪರಿಣಾಮ ಬೀರುತ್ತಿರುವ ಹಿನ್ನಲೆಯಲ್ಲಿ ಹಾಗೂ ಅಡ್ಡಪರಿಣಾಮ ತಡೆಗಟ್ಟುವ ಹಿನ್ನೆಲೆಯಲ್ಲಿ 16 ವಯಸ್ಸಿನ ಮಕ್ಕಳಿಗೆ ಸಾಮಾಜಿಕ ಜಾಲತಾಣದ ಬಳಕೆಯನ್ನು ರಾಜ್ಯ ಸರ್ಕಾರ ನಿಷೇಧಿಸಿದೆ.
ವಿದ್ಯಾರ್ಥಿಗಳಲ್ಲಿ ಒತ್ತಡ ನಿವಾರಿಸಿ ಮಾನಸಿಕ ಆರೋಗ್ಯವನ್ನು ಸುಧಾರಿಸಲು 204 ಬಿ ಆರ್ ಸಿ ಕೇಂದ್ರಗಳಲ್ಲಿ ಓರ್ವ ಅರ್ಹ ಮಾನಸಿಕ ಆರೋಗ್ಯ ಸಲಹೆಗಾರ ನೇಮಕ ಬಜೆಟ್ನಲ್ಲಿ ಘೋಷಣೆ.
ರಾಜ್ಯ ಬಜೆಟ್ 2026-27: ಯಾವ ಇಲಾಖೆಗೆ ಎಷ್ಟು ಅನುದಾನ?
- ಶಿಕ್ಷಣ: 47,224 ಕೋಟಿ ರೂ.
- ಮಹಿಳಾ ಮತ್ತು ಮಕ್ಕಳ ಕಲ್ಯಾಣ: 34,929 ಕೋಟಿ ರೂ.
- ಇಂಧನ: 29,947 ಕೋಟಿ ರೂ.
- ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್: 26,559 ಕೋಟಿ ರೂ.
- ಲೋಕೋಪಯೋಗಿ ಮತ್ತು ಸಾರಿಗೆ: 23,100 ಕೋಟಿ ರೂ.
- ನೀರಾವರಿ: 22,436 ಕೋಟಿ ರೂ.
- ನಗರಾಭಿವೃದ್ಧಿ ಮತ್ತು ವಸತಿ: 22,203 ಕೋಟಿ ರೂ.
- ಕಂದಾಯ: 19,843 ಕೋಟಿ ರೂ.
- ಸಮಾಜ ಕಲ್ಯಾಣ: 18,612 ಕೋಟಿ ರೂ.
- ಆರೋಗ್ಯ ಮತ್ತು ಕುಟುಂಬ ಕಲ್ಯಾಣ: 17,817 ಕೋಟಿ ರೂ.
- ಒಳಾಡಳಿತ (ಗೃಹ): 11,424 ಕೋಟಿ ರೂ.
- ಕೃಷಿ ಮತ್ತು ತೋಟಗಾರಿಕೆ: 8,373 ಕೋಟಿ ರೂ.
- ಆಹಾರ ಮತ್ತು ನಾಗರಿಕ ಸರಬರಾಜು: 7,942 ಕೋಟಿ ರೂ.
- ಪಶುಸಂಗೋಪನೆ ಮತ್ತು ಮೀನುಗಾರಿಕೆ: 4,084 ಕೋಟಿ ರೂ.
ಇತರೆ ವಲಯಗಳು: 1,72,757 ಕೋಟಿ ರೂ.
ಪ್ರವಾಸೋದ್ಯಮ
ಪ್ರವಾಸೋದ್ಯಮಕ್ಕೂ ಈ ಬಾರಿ ಬಜೆಟ್ನಲ್ಲಿ ಹೆಚ್ಚಿನ ಒತ್ತು ನೀಡಲಾಗಿದೆ. ಸಮಗ್ರ ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆ, ವಾಯುಯಾನ ಹಾಗೂ ಜಲಸಾಹಸ ಯೋಜನೆ ಅನುಷ್ಠಾನ ಮಾಡಲಾಗಿದೆ. Sea plane ಮತ್ತು ಹೆಲಿ ಟ್ಯಾಕ್ಸಿ ,ಜೋಯ್ ರೈಡ್, ರಿವರ್ ಕ್ರೂಸ್ ಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಪ್ರವಾಸಿಗರಿಗೆ ಸುಮಧುರ, ಸಕಾರಾತ್ಮಕ ಅನುಭವಕ್ಕಾಗಿ ಟ್ಯಾಕ್ಸಿ ಚಾಲಕರು, ಆಟೋ ಚಾಲಕರು, ಪೊಲೀಸ್ ಸಿಬ್ಬಂದಿಗಳಿಗೆ ಕೌಶಲ್ಯ ನೀಡಲಾಗುತ್ತದೆ. ಗದಗ -ಕಪ್ಪತ್ತಗುಡ್ಡ-ಲಕ್ಕುಂಡಿ ಪ್ರವಾಸೋದ್ಯಮ ಸರ್ಕ್ಯೂಟ್ ಅಭಿವೃದ್ಧಿ ಮತ್ತು ಮುಳ್ಳಯ್ಯನಿಗಿರಿ – ಸಿತಾಳಯ್ಯನಗಿರಿ ಕೈಮರದವರೆಗೆ ರೋಪ್ ವೇ ನಿರ್ಮಾಣ ಮಾಡಲು ತೀರ್ಮಾನಿಸಲಾಗಿದೆ.
450 ಬೆಡ್ ಮಲ್ಟಿ ಸ್ಪೆಷಲ್ ಹಾಸ್ಪಿಟಲ್ ಗೆ ಅನುಮೋದನೆ
ಕಾರವಾರದಲ್ಲಿ 198 ಕೋಟಿ ವೆಚ್ಚದಲ್ಲಿ 450 ಬೆಡ್ ಮಲ್ಟಿ ಸ್ಪೆಷಲ್ ಹಾಸ್ಪಿಟಲ್ ಗೆ ಅನುಮೋದನೆ ನೀಡಲಾಗಿದೆ. ಆರೋಗ್ಯದ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಿದೆ.
ಸಮುದಾಯಗಳ ಆರ್ಥಿಕಾಭಿವೃದ್ಧಿಗೆ ಪ್ರತ್ಯೇಕ ನಿಗಮಗಳ ಸ್ಥಾಪನೆ
ಕುಂಬಾರ, ತಿಗಳ, ಗಾಣಿಗ, ಕೊಡವ, ಉಪ್ಪಾರ, ಈಡಿಗ, ಕಾಡುಗೊಲ್ಲ ಸಮುದಾಯಗಳ ಆರ್ಥಿಕಾಭಿವೃದ್ಧಿಗೆ ಪ್ರತ್ಯೇಕ ನಿಗಮಗಳ ಸ್ಥಾಪನೆ ಮಾಡಲು ಈ ಬಾರಿ ಬಜೆಟ್ನಲ್ಲಿ ತೀರ್ಮಾನ ಮಾಡಲಾಗಿದೆ. ಸವಿತಾ ಸಮಾಜದವರು ಸೆಲೂನ್ಗಳನ್ನ ತೆರೆಯಲು ಶೇ 4 ರ ಬಡ್ಡಿದರದಲ್ಲಿ ಹತ್ತು ಲಕ್ಷ ರೂ ವರೆಗೆ ಸಾಲ ಮತ್ತು ಸಹಾಯಧನ ನೀಡಲಾಗುತ್ತದೆ. ಬೆಂಗಳೂರು, ಮೈಸೂರು ದೋಬಿ ಘಾಟ್ಗಳಲ್ಲಿ ತಲಾ 75 ಲಕ್ಷ ರೂ ವೆಚ್ಚದಲ್ಲಿ ಆಧುನಿಕ ಲಾಂಡ್ರಿಗಳ ಸ್ಥಾಪನೆ ಮತ್ತು ಮಡಿವಾಳ ಸಮುದಾಯದ ನಿರುದ್ಯೋಗಿಗಳಿಗೆ ಆಧುನಿಕ ಲಾಂಡ್ರಿ ಸ್ಥಾಪನೆಗೆ ಶೇ 4. ರ ಬಡ್ಡಿ ದರದಲ್ಲಿ ಐದು ಲಕ್ಷರೂವರೆಗೆ ಸಾಲ ಸೌಲಭ್ಯ ನೀಡಲಾಗುತ್ತಿದೆ.
ಅರಣ್ಯ ಇಲಾಖೆಯಲ್ಲಿ 2000 ಹುದ್ದೆಗಳ ನೇಮಕಾತಿ
ಅರಣ್ಯ ಇಲಾಖೆಯಲ್ಲಿ 2000 ಹುದ್ದೆಗಳ ನೇಮಕಾತಿ ಮಾಡುವುದು ಎಂದು ಬಜೆಟ್ನಲ್ಲಿ ಘೋಷಣೆ ಮಾಡಲಾಗಿದೆ. ಮೈಸೂರು ಮೃಗಾಲಯ ಹಾಗೂ ಬನ್ನೇರುಘಟ್ಟ ಮೃಗಾಲಯದಲ್ಲಿ ಪ್ರವಾಸಿಗರನ್ನು ಆಕರ್ಷಿಸಲು ಪಿಪಿಪಿ ಮಾದರಿಯಲ್ಲಿ ಪ್ರಕೃತಿ ನಿರೂಪಣ ಕೇಂದ್ರ ಸ್ಥಾಪನೆ, ಬೆಂಗಳೂರಿನ ಮಾದಪ್ಪನಹಳ್ಳಿಯ 153 ಎಕರೆ ಪ್ರದೇಶದಲ್ಲಿ ಸಾಂಸ್ಕೃತಿಕ ನಾಯಕ ಬಸವಣ್ಣ ಜೈವಿಕ ಉದ್ಯಾನ ನಿರ್ಮಾಣ ಮಾಡಲಾಗುತ್ತದೆ.
ಟನಲ್ ರಸ್ತೆಗಾಗಿ 2,250 ಕೋಟಿ ಘೋಷಣೆ
ಬೆಂಗಳೂರಿನಲ್ಲಿ ಮತ್ತೆ ಟನಲ್ ರಸ್ತೆಗಾಗಿ 2,250 ಕೋಟಿ ಘೋಷಣೆ ಮಾಡಲಾಗಿದೆ. ಹೆಬ್ಬಾಳ ಜಂಕ್ಷನ್ನಿಂದ ಮೇಖ್ರಿ ಸರ್ಕಲ್ ವರೆಗೆ ಸುರಂಗ ಮಾರ್ಗ ಹಾಗೂ ಮೇಲ್ ಸೇತುವೆ ರಸ್ತೆ ನಿರ್ಮಾಣಕ್ಕೆ ಬಿಡಿಎ ಮೂಲಕ ಮಾಡಲು 2,250 ಕೋಟಿ ವೆಚ್ಚವಾಗಲಿದ್ದು, ಬಜೆಟ್ನಲ್ಲಿ ಘೋಷಣೆ ಮಾಡಲಾಗಿದೆ.
ಬೆಂಗಳೂರಿಗೆ ಬಂಪರ್, ಐದು ಪಾಲಿಕೆ ಮಾಡಿ ವಿಂಗಡಣೆ!
ಈ ಬಾರಿ ರಾಜ್ಯ ಬಜೆಟ್ನಲ್ಲಿ ಬೆಂಗಳೂರಿಗೆ ಬಂಪರ್ ಘೋಷಣೆ ಮಾಡಲಾಗಿದೆ. ಐದು ಪಾಲಿಕೆ ಮಾಡಿ ವಿಂಗಡಣೆ ಮಾಡಲಗಿದೆ. 2025-26ನೇ ಸಾಲಿಗೆ ಬೆಂಗಳೂರು ಅಭಿವೃದ್ಧಿಗೆ 3 ಸಾವಿರ ಕೋಟಿ ಬದಲು, 7ಸಾವಿರ ಕೋಟಿಗೆ ಅನುದಾನ ಹೆಚ್ಚಳ ಮಾಡಲಾಗಿದೆ. 3 ಸಾವಿರ ಕೋಟಿ ವೆಚ್ಚದಲ್ಲಿ 450 ಕಿ.ಮೀ ವೈಟ್ ಟಾಪಿಂಗ್ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. 175 ಜಂಕ್ಷನ್ ಸೌಂದರ್ಯೀಕರಣ, 500 ಕಿ.ಮೀ ಪಾದಚಾರಿ ಮಾರ್ಗ ಮೇಲ್ದರ್ಜೆಗೆ, 100 ಸ್ಕೈ ವಾಕ್ ನಿರ್ಮಾಣದ ಉದ್ದೇಶ ಇದೆ.
ವಿದ್ಯಾರ್ಥಿ ಸಂಘಗಳ ಚುನಾವಣೆ ನಡೆಸಲು ಸರ್ಕಾರ ನಿರ್ಧಾರ
ಈ ಬಾರಿ ಬಜೆಟ್ನಲ್ಲಿ ಕಾಲೇಜು ಹಾಗೂ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿ ಸಂಘಗಳ ಚುನಾವಣೆ ನಡೆಸಲು ಸರ್ಕಾರ ನಿರ್ಧಾರ ಮಾಡಿದೆ. ಕಾಲೇಜುಗಳಲ್ಲಿ ವಿದ್ಯಾರ್ಥಿ ಸಂಘಗಳ ಚುನಾವಣೆ ಮುಖ್ಯ ಎಂದು ಸರ್ಕಾರ ಹೇಳಿದೆ.
ಬೆಂಗಳೂರು ನಗರಾಭಿವೃದ್ಧಿಗೂ ಬಜೆಟ್ನಲ್ಲಿ ಒತ್ತು
ಬೆಂಗಳೂರನ್ನ ವಿಶ್ವದ ಅತ್ಯುತ್ತಮ ವಾಸಯೋಗ್ಯ ನಗರ ಮಾಡುವ ಉದ್ದೇಶ ಇದೆ ಎಂದು ಸರ್ಕಾರ ಹೇಳಿದೆ. ಬೆಂಗಳೂರಿನ ಐದು ನಗರ ಪಾಲಿಕೆಗಳಲ್ಲಿ 1,255 ಕೋಟಿ ರೂ.ಗಳ ಮೊತ್ತದ ವಾರ್ಡ್ ರಸ್ತೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿ ಮಾಡಲಾಗಿದೆ. 1,700 ಕೋಟಿ ರೂ.ಗಳ ಮೊತ್ತದಲ್ಲಿ 158 ಕಿ.ಮೀ. ಉದ್ದರ ರಸ್ತೆಯ ವೈಟ್ ಟಾಪಿಂಗ್ ಕಾಮಗಾರಿ. 1,936 ಕೋಟಿ ರೂ.ಗಳ ಮೊತ್ತದ ಮುಖ್ಯ ಮತ್ತು ಉಪಮುಖ್ಯ (Arterial and Sub Arterial) ರಸ್ತೆಗಳ ಅಭಿವೃದ್ಧಿ, ಸಿಲ್ಕ್ ಬೋರ್ಡ್ ಜಂಕ್ಷನ್ನಿಂದ ಕೆ.ಆರ್.ಪುರಂ ಮೆಟ್ರೋ ನಿಲ್ದಾಣದವರೆಗೂ ಹೊರ ವರ್ತುಲ ರಸ್ತೆಯನ್ನು ಅಭಿವೃದ್ಧಿಪಡಿಸುವ 450 ಕೋಟಿ ರೂ.ಗಳ ಯೋಜನೆ, 273 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ರಾಜಕಾಲುವೆಗಳ ಮೇಲ್ದರ್ಜೆಗೇರಿಸುವುದು ಮತ್ತು ಕರೆ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲು ಸರ್ಕಾರ ನಿರ್ಧಾರ ಮಾಡಿದೆ.
ಕರ್ನಾಟಕ ಪಬ್ಲಿಕ್ ಶಾಲೆಗಳಿಗೆ ಹೆಚ್ಚಿನ ಒತ್ತು!
2025-26ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿರುವಂತೆ 184 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳನ್ನು ಪ್ರೌಢ ಶಾಲೆಗಳನ್ನಾಗಿ ಹಾಗೂ 50 ಪ್ರೌಢ ಶಾಲೆಗಳನ್ನು ಪದವಿ ಪೂರ್ವ ಕಾಲೇಜುಗಳನ್ನಾಗಿ ಉನ್ನತೀಕರಿಸಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಅನುಕೂಲ ಕಲ್ಪಿಸಲಾಗಿದೆ. ಖಾಸಗಿ ಶಾಲೆಗಳ ಮಾನ್ಯತೆ ಪಡೆಯುವ ಹಾಗೂ ನವೀಕರಿಸುವ ಪ್ರಕ್ರಿಯೆಯನ್ನು ಆನ್ಲೈನ್ ಮೂಲಕ ಅರ್ಜಿ ಹಾಗೂ ದಾಖಲೆಗಳನ್ನು ಸಲ್ಲಿಸಲು ಅನುಮತಿಸಿ ಸರಳೀಕರಣ ಮಾಡಲಾಗಿದೆ. 2025–26ನೇ ಸಾಲಿನಲ್ಲಿ ವಿದ್ಯಾರ್ಥಿಗಳಿಗೆ ನೀಡಲಾಗುವ ವಿವಿಧ ಸವಲತ್ತುಗಳನ್ನು ಮೊದಲ ಬಾರಿಗೆ ನೇರ ನಗದು ವರ್ಗಾವಣೆ (DBT) ಮಾಡಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಗ್ರಾಮೀಣ ಪತ್ರ, ಕನ್ನಡ ಮಾಧ್ಯಮ ವ್ಯಾಸಂಗ ಪ್ರಮಾಣ ಪತ್ರಗಳನ್ನು ಆನ್-ಲೈನ್ ಮೂಲಕ ವಿತರಿಸಲಾಗಿದೆ.
ʻಉತ್ತಮ ಕಲಿಕೆ ಉಜ್ವಲ ಭವಿಷ್ಯʼ ಎಂಬ ಘೋಷವಾಕ್ಯದೊಂದಿಗೆ ಒಂದೇ ಸೂರಿನಡಿ ಗುಣಮಟ್ಟದ ಶಿಕ್ಷಣ ನೀಡಲು ADB ನೆರವಿನೊಂದಿಗೆ 500 ಶಾಲೆಗಳು, KKRDB ನಿಧಿಯಿಂದ 200 ಶಾಲೆಗಳು ಹಾಗೂ KMERC ನಿಧಿಯಿಂದ 100 ಶಾಲೆಗಳು ಒಟ್ಟಾರೆ 800 ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳನ್ನಾಗಿ ಉನ್ನತೀಕರಿಸಲಾಗುವುದು. ಇದಕ್ಕಾಗಿ ಒಟ್ಟಾರೆ 3,900 ಕೋಟಿ ರೂ.ಗಳನ್ನು ಮುಂದಿನ ಮೂರು ವರ್ಷಗಳಲ್ಲಿ ವೆಚ್ಚ ಮಾಡಲಾಗುತ್ತಿದೆ.
ವರ್ಗಾವಣೆ ಕೌನ್ಸೆಲಿಂಗ್ ಪ್ರಕ್ರಿಯೆಯ ವೇಳೆ ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿನ (KPS) ಶಿಕ್ಷಕರ ಹುದ್ದೆಗಳನ್ನು ಮಹತ್ವದ ಹುದ್ದೆಗಳೆಂದು ಪರಿಗಣಿಸಿ ಮೊದಲ ಆದ್ಯತೆಯಲ್ಲಿ ಭರ್ತಿ ಮಾಡಲಾಗುವುದು ಹಾಗೂ ಸದರಿ ಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಶಿಕ್ಷಕರ ನೇಮಕಾತಿ ಮಾಡಲು ಆದ್ಯತೆ ನೀಡಲಾಗುತ್ತದೆ.
(ಸುದ್ದಿ ಅಪ್ಡೇಟ್ ಆಗುತ್ತಿದೆ)
