ಗುರುರಾಜ ದೇಸಾಯಿ
2026–27ನೇ ಸಾಲಿನ ಕರ್ನಾಟಕ ರಾಜ್ಯ ಬಜೆಟ್‌ನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ್ದಾರೆ. ಇದು ಅವರ 17ನೇ ಬಜೆಟ್ ಮಂಡನೆ ಆಗಿದ್ದು ದಾಖಲೆಗೆ ಸೇರ್ಪಡೆಯಾಗಿದೆ. ಆದರೆ ಈ ಬಜೆಟ್ ಸರ್ಕಾರದ ರಾಜಕೀಯ ಮತ್ತು ಆರ್ಥಿಕ ಆದ್ಯತೆಗಳನ್ನು ಸ್ಪಷ್ಟವಾಗಿ ತೋರಿಸುವ ದಾಖಲೆಯಂತೆ ಕಾಣುತ್ತದೆ. ಒಂದು ಕಡೆ ಗ್ಯಾರಂಟಿ ಯೋಜನೆಗಳ ಮೂಲಕ ಜನಕಲ್ಯಾಣವನ್ನು ಮುಂದುವರಿಸುವ ಪ್ರಯತ್ನ ಕಾಣುತ್ತದೆ; ಇನ್ನೊಂದು ಕಡೆ ಸಾಲ, ರಾಜಸ್ವ ಕೊರತೆ ಮತ್ತು ಹಣಕಾಸಿನ ಒತ್ತಡಗಳ ವಾಸ್ತವಿಕ ಚಿತ್ರಣವೂ ತೆರೆದಿಡುತ್ತದೆ. ಇದರಿಂದ ಹಲವು ಪ್ರಶ್ನೆಗಳು ಎದ್ದುಕಾಣುತ್ತವೆ.
ಕರ್ನಾಟಕದ 2026–27ರ ಬಜೆಟ್‌ನ್ನು ಕೇವಲ ಹೊಸ ಘೋಷಣೆಗಳ ಪಟ್ಟಿಯಾಗಿ ನೋಡಲು ಸಾಧ್ಯವಿಲ್ಲ. ಪ್ರತಿ ಬಜೆಟ್‌ನಂತೆ ಇದಕ್ಕೂ ಒಂದು ಮುಖ್ಯ ಪ್ರಶ್ನೆ ಇದೆ . ಕಳೆದ ವರ್ಷ ಘೋಷಿಸಿದ ಯೋಜನೆಗಳ ಸ್ಥಿತಿ ಏನು? ರಾಜಕೀಯದ ಹೆಸರಿನಲ್ಲಿ ಘೋಷಣೆಗಳು ದೊಡ್ಡದಾಗಿದ್ದರೂ ಅವು ತಳಮಟ್ಟದಲ್ಲಿ ಎಷ್ಟು ಸಾಕಾರವಾಗಿವೆ ಎಂಬುದನ್ನು ಪರಿಶೀಲಿಸುವುದು ಅಗತ್ಯ. ಈ ದೃಷ್ಟಿಯಿಂದ ನೋಡಿದರೆ ಈ ಬಜೆಟ್ ಆಶಾವಾದ ಮತ್ತು ಅನುಷ್ಠಾನದ ಮಧ್ಯೆ ನಿಂತಿರುವಂತಿದೆ.
ಗ್ಯಾರಂಟಿ ಯೋಜನೆಗಳು: ಜನಪರ ರಾಜಕೀಯದ ಬಲ, ಹಣಕಾಸಿನ ಸವಾಲು
ಕಾಂಗ್ರೆಸ್ ಸರ್ಕಾರದ ಆಡಳಿತವನ್ನು ಗುರುತಿಸುವ ಪ್ರಮುಖ ಅಂಶ ಗ್ಯಾರಂಟಿ ಯೋಜನೆಗಳು. ಗೃಹಲಕ್ಷ್ಮಿ, ಶಕ್ತಿ, ಗೃಹಜ್ಯೋತಿ ಮತ್ತು ಅನ್ನಭಾಗ್ಯ ಯೋಜನೆಗಳು ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ತಕ್ಷಣದ ಆರ್ಥಿಕ ನೆರವು ನೀಡಿವೆ. ಕಳೆದ ಬಜೆಟ್‌ನಲ್ಲಿ ಗ್ಯಾರಂಟಿ ಯೋಜನೆಗಳಿಗೆ ಸುಮಾರು ₹51,300 ಕೋಟಿ ಮೀಸಲಿಡಲಾಗಿತ್ತು. ಈಗಾಗಲೇ ಈ ಯೋಜನೆಗಳಿಗೆ ₹1.21 ಲಕ್ಷ ಕೋಟಿಗೂ ಹೆಚ್ಚು ವೆಚ್ಚವಾಗಿದೆ ಎಂಬುದು ಸರ್ಕಾರದ ಅಂಕಿ–ಅಂಶ. ಇದು ಜನಪರ ರಾಜಕೀಯದ ಬಲವನ್ನೂ ತೋರಿಸುತ್ತದೆ; ಆದರೆ ರಾಜ್ಯದ ಹಣಕಾಸಿನ ಮೇಲೆ ಅದರ ಭಾರವನ್ನೂ ಒಂದೇ ಸಮಯದಲ್ಲಿ ಹೊರಹಾಕುತ್ತದೆ.
ಐದು ಗ್ಯಾರಂಟಿಗಳಲ್ಲಿ ನಾಲ್ಕು ಗ್ಯಾರಂಟಿಗಳು ಮಾತ್ರ ಯಶ ಕಂಡಿವೆ. ಫಲಾನುಭವಿಗಳನ್ನು ಬಲವಂತವಾಗಿ ತೆಗೆಯಲಾಗುತ್ತಿದೆ ಎಂಬ ಆರೋಪದ ನಡುವೆಯೂ, ರಾಜ್ಯದ ಜನತೆ ಇದರ ಲಾಭ ಪಡೆದಿದ್ದಾರೆ. ಯುವ ನಿಧಿಗೆ ಮೂರು ವರ್ಷದಿಂದ ಒಂದು ಪೈಸೆ ಹಣವನ್ನು ತೆಗೆದಿಟ್ಟಿಲ್ಲ. ರಾಜ್ಯದಲ್ಲಿ ಲಕ್ಷಾಂತರ ಹುದ್ದೆಗಳು ಖಾಲಿ ಇವೆ. ಈ ಬಜೆಟ್‌ನಲ್ಲಿ 56 ಸಾವಿರ ಹುದ್ದೆಗಳ ನೇಮಕದ ಪ್ರಸ್ತಾಪ ಇದೆ.ಇವು ಯಾವ ರೀತಿಯ ನೇಮಕಾತಿಗಳಾಗಲಿವೆ ಎಂಬುದು ಸ್ಪಷ್ಟವಾಗಿಲ್ಲ. ಅಂದರೆ ಅವು ನೇರ ಸರಕಾರಿ ಶಾಶ್ವತ ನೇಮಕಾತಿಗಳಾಗುತ್ತವೆಯೇ, ಅಥವಾ ಗುತ್ತಿಗೆ, ಹೊರಗುತ್ತಿಗೆ (ಔಟ್‌ಸೋರ್ಸಿಂಗ್) ಅಥವಾ ತಾತ್ಕಾಲಿಕ ವ್ಯವಸ್ಥೆಗಳ ಮೂಲಕವೇ ಭರ್ತಿ ಮಾಡಲಾಗುತ್ತದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಇತ್ತೀಚಿನ ವರ್ಷಗಳಲ್ಲಿ ಹಲವು ಇಲಾಖೆಗಳು ಶಾಶ್ವತ ನೇಮಕಾತಿಗಳ ಬದಲು ಗುತ್ತಿಗೆ ಮತ್ತು ಔಟ್‌ಸೋರ್ಸಿಂಗ್ ವ್ಯವಸ್ಥೆ ಮೇಲೆ ಹೆಚ್ಚು ಅವಲಂಬಿತವಾಗಿರುವುದು ಗಮನಾರ್ಹ. ಇದೇ ಮಾದರಿ ಮುಂದುವರಿದರೆ ಶಿಕ್ಷಕರ ಕೊರತೆಯ ಮೂಲ ಸಮಸ್ಯೆ ಪರಿಹಾರವಾಗುವ ಬದಲು, ಅಸ್ಥಿರ ಉದ್ಯೋಗ ವ್ಯವಸ್ಥೆ ಹೆಚ್ಚುವ ಸಾಧ್ಯತೆ ಇದೆ.
ಜನರಿಗೆ ನೆರವಾಗುವ ಯೋಜನೆಗಳ ವಿರುದ್ಧ ಯಾರಿಗೂ ವಿರೋಧ ಇರಲು ಸಾಧ್ಯವಿಲ್ಲ. ಆದರೆ ಇದೇ ಸಮಯದಲ್ಲಿ ರಾಜ್ಯದ ಆದಾಯ ಹೆಚ್ಚಿಸುವ ಕ್ರಮಗಳು ಸಮರ್ಪಕವಾಗಿ ನಡೆಯದಿದ್ದರೆ, ಈ ಯೋಜನೆಗಳ ನಿರಂತರತೆ ಭವಿಷ್ಯದಲ್ಲಿ ಸವಾಲಾಗುವ ಸಾಧ್ಯತೆ ಇದೆ. ರಾಜಕೀಯವಾಗಿ ಇದು ಯಶಸ್ವಿಯಾದ ಮಾದರಿಯಾಗಬಹುದು. ಆದರೆ ಆರ್ಥಿಕವಾಗಿ ಅದು ಯಶಸ್ವಿಯಾಗಲು ಸರ್ಕಾರ ಕಲ್ಯಾಣ ಮತ್ತು ಹೂಡಿಕೆಗಳ ನಡುವಿನ ಸೂಕ್ಷ್ಮ ಸಮತೋಲನವನ್ನು ಕಾಯ್ದುಕೊಳ್ಳಬೇಕು. ಇಲ್ಲವಾದರೆ ಗ್ಯಾರಂಟಿಗಳು ಜನರಿಗೆ ಭರವಸೆ ನೀಡಿದರೂ ರಾಜ್ಯದ ಹಣಕಾಸಿಗೆ ಭಾರವಾಗುವ ಸಾಧ್ಯತೆಯನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ.

ಶಿಕ್ಷಣ ಕ್ಷೇತ್ರ: ಘೋಷಣೆಗಳಿಗಿಂತ ಗುಣಮಟ್ಟ ಮುಖ್ಯ
ಶಿಕ್ಷಣ ಕ್ಷೇತ್ರದಲ್ಲಿ ಸರ್ಕಾರ ಕೆಲವು ವಿಸ್ತರಣಾ ಯೋಜನೆಗಳನ್ನು ಘೋಷಿಸಿದೆ. ಮೌಲಾನಾ ಆಜಾದ್ ಮಾದರಿ ಶಾಲೆಗಳು ಮತ್ತು ಉರ್ದು ಶಾಲೆಗಳನ್ನು ಸುಮಾರು ₹600 ಕೋಟಿ ವೆಚ್ಚದಲ್ಲಿ ಉನ್ನತೀಕರಿಸುವ ಕಾರ್ಯ ಆರಂಭಿಸಲಾಗಿದೆ. ಇದೇ ಮಾದರಿಯಲ್ಲಿ ಇನ್ನೂ 100 ಶಾಲೆಗಳನ್ನು ಸುಮಾರು ₹400 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಯೋಜನೆಯೂ ಇದೆ.
ಈ ಕ್ರಮಗಳು ಶಿಕ್ಷಣ ಮೂಲಸೌಕರ್ಯ ಸುಧಾರಣೆಗೆ ಸಹಾಯಕವಾಗಬಹುದು. ಆದರೆ ರಾಜ್ಯದ ಶಿಕ್ಷಣ ಕ್ಷೇತ್ರದ ದೊಡ್ಡ ಸಮಸ್ಯೆ ಶಾಲೆಗಳ ಕಟ್ಟಡವಲ್ಲ; ಗುಣಮಟ್ಟದ ಬೋಧನೆ, ಶಿಕ್ಷಕರ ಕೊರತೆ ಮತ್ತು ಗ್ರಾಮೀಣ ಪ್ರದೇಶಗಳ ಶಿಕ್ಷಣ ವ್ಯವಸ್ಥೆಯ ಬಲಹೀನತೆ. ಈ ಮೂಲಭೂತ ಪ್ರಶ್ನೆಗಳ ಬಗ್ಗೆ ಬಜೆಟ್ ಹೆಚ್ಚು ಸ್ಪಷ್ಟ ಉತ್ತರ ನೀಡುವುದಿಲ್ಲ. ಸರ್ಕಾರಿ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸುವ ಉದ್ದೇಶದಿಂದ ಕೆಲ ವರ್ಷಗಳ ಹಿಂದೆ “ಕರ್ನಾಟಕ ಪಬ್ಲಿಕ್ ಶಾಲೆ” ಎಂಬ ಯೋಜನೆ ಘೋಷಿಸಲಾಗಿತ್ತು. ಆದರೆ ಆರಂಭಿಸಿದ ಶಾಲೆಗಳಿಗೆ ಸರಿಯಾದ ಮೂಲಸೌಲಭ್ಯಗಳನ್ನು ಒದಗಿಸದೆ ಸಿಎಸ್‌ಆರ್ ನಿಧಿಗಳ ಮೂಲಕವೇ ಅವುಗಳನ್ನು ನಡೆಸಲಾಗುತ್ತಿದೆ ಎಂಬ ಟೀಕೆ ಇದೆ. ಈ ಬಾರಿ ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸಿ ಅವುಗಳನ್ನು ಕೆಪಿಎಸ್ ಶಾಲೆಗಳಾಗಿ ಪರಿವರ್ತಿಸುವುದಾಗಿ ಘೋಷಿಸಲಾಗಿದೆ. ಇದರ ಪರಿಣಾಮವಾಗಿ 7,500ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳು ಮುಚ್ಚಲ್ಪಡಬಹುದು ಎಂಬ ಆರೋಪವೂ ಕೇಳಿಬರುತ್ತಿದೆ.
“ಉತ್ತಮ ಕಲಿಕೆ – ಉಜ್ವಲ ಭವಿಷ್ಯ” ಎಂಬ ಘೋಷವಾಕ್ಯದೊಂದಿಗೆ ಒಂದೇ ಸೂರಿನಡಿ ಗುಣಮಟ್ಟದ ಶಿಕ್ಷಣ ಒದಗಿಸುವ ಉದ್ದೇಶದಿಂದ ಕರ್ನಾಟಕ ಪಬ್ಲಿಕ್ ಶಾಲೆಗಳ ವಿಸ್ತರಣೆಗೆ ಸರ್ಕಾರ ಮುಂದಾಗಿದೆ. ಎಡಿಬಿ ನೆರವಿನೊಂದಿಗೆ 500 ಶಾಲೆಗಳು, KKRDB ನಿಧಿಯಿಂದ 200 ಶಾಲೆಗಳು ಹಾಗೂ KMERC ನಿಧಿಯಿಂದ 100 ಶಾಲೆಗಳು ಸೇರಿ ಒಟ್ಟು 800 ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳಾಗಿ ಉನ್ನತೀಕರಿಸಲು ಯೋಜಿಸಲಾಗಿದೆ. ಈ ಯೋಜನೆಗೆ ಮುಂದಿನ ಮೂರು ವರ್ಷಗಳಲ್ಲಿ ಒಟ್ಟಾರೆ ₹3,900 ಕೋಟಿ ವೆಚ್ಚ ಮಾಡುವುದಾಗಿ ಸರ್ಕಾರ ಘೋಷಿಸಿದೆ.
ಒಂದೇ ಸೂರಿನಡಿ ಪ್ರಾಥಮಿಕದಿಂದ ಪ್ರೌಢಶಾಲೆಯವರೆಗೆ ಶಿಕ್ಷಣ ಒದಗಿಸುವ ಮಾದರಿಯನ್ನು ಬಲಪಡಿಸುವ ಪ್ರಯತ್ನವಾಗಿ ಇದನ್ನು ನೋಡಬಹುದು. ಮೂಲಸೌಕರ್ಯ ಸುಧಾರಣೆ, ಲ್ಯಾಬ್‌ಗಳು, ಡಿಜಿಟಲ್ ತರಗತಿಗಳು, ಗ್ರಂಥಾಲಯಗಳು ಹಾಗೂ ಕ್ರೀಡಾ ಸೌಲಭ್ಯಗಳನ್ನು ಒದಗಿಸುವ ಮೂಲಕ ಸರ್ಕಾರಿ ಶಾಲೆಗಳ ಗುಣಮಟ್ಟವನ್ನು ಹೆಚ್ಚಿಸುವ ಸಾಧ್ಯತೆ ಇದೆ. ವಿಶೇಷವಾಗಿ ಗ್ರಾಮೀಣ ಮತ್ತು ಹಿಂದುಳಿದ ಪ್ರದೇಶಗಳ ವಿದ್ಯಾರ್ಥಿಗಳಿಗೆ ಉತ್ತಮ ಸೌಲಭ್ಯಗಳಿರುವ ಶಾಲೆಗಳಲ್ಲಿ ಓದುವ ಅವಕಾಶ ದೊರಕಬಹುದು. ಈ ದೃಷ್ಟಿಯಿಂದ ನೋಡಿದರೆ ಸರ್ಕಾರಿ ಶಿಕ್ಷಣ ವ್ಯವಸ್ಥೆಯನ್ನು ಸ್ಪರ್ಧಾತ್ಮಕವಾಗಿಸಲು ಇದು ಒಂದು ಹೆಜ್ಜೆಯಾಗಬಹುದು.
ಈ ಯೋಜನೆಗೆ ಸಂಬಂಧಿಸಿದಂತೆ ಕೆಲವು ಆತಂಕಗಳೂ ವ್ಯಕ್ತವಾಗುತ್ತಿವೆ. ಈಗಿರುವ ಸಣ್ಣ ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸಿ ಅವುಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳಾಗಿ ಪರಿವರ್ತಿಸುವ ಪ್ರಕ್ರಿಯೆ ನಡೆದರೆ ಹಲವಾರು ಗ್ರಾಮೀಣ ಪ್ರದೇಶಗಳಲ್ಲಿ ಶಾಲೆಗಳ ಸಂಖ್ಯೆ ಕಡಿಮೆಯಾಗುವ ಸಾಧ್ಯತೆ ಇದೆ. ಇದರಿಂದ ವಿದ್ಯಾರ್ಥಿಗಳು ದೂರದ ಶಾಲೆಗಳಿಗೆ ಹೋಗಬೇಕಾಗುವ ಪರಿಸ್ಥಿತಿ ನಿರ್ಮಾಣವಾಗಬಹುದು. ವಿಶೇಷವಾಗಿ ಪ್ರಾಥಮಿಕ ಹಂತದ ಮಕ್ಕಳಿಗೆ ಇದು ಅಡಚಣೆಯಾಗುವ ಭಯವಿದೆ. ಇದಷ್ಟೆ ಅಲ್ಲದೆ ಗ್ರಾಮೀಣ ಪ್ರದೇಶದ ಶಿಕ್ಷಣ ಖಾಸಗೀಕರಣವಾಗುವ ಅಪಾಯವಿದೆ.
ಆರೋಗ್ಯ ಕ್ಷೇತ್ರ: ವ್ಯವಸ್ಥೆಯ ಬಲವರ್ಧನೆ ಇನ್ನೂ ಅಗತ್ಯ
ಆರೋಗ್ಯ ಕ್ಷೇತ್ರದಲ್ಲೂ ಸರ್ಕಾರ ಆಸ್ಪತ್ರೆಗಳ ಅಭಿವೃದ್ಧಿ ಮತ್ತು ವೈದ್ಯಕೀಯ ಸೇವೆಗಳ ವಿಸ್ತರಣೆಗೆ ಒತ್ತು ನೀಡಿದಂತೆ ಬಜೆಟ್‌ನಲ್ಲಿ ಕಾಣುತ್ತದೆ. ಹೊಸ ವೈದ್ಯಕೀಯ ಕಾಲೇಜುಗಳು, ವಿಶೇಷ ಚಿಕಿತ್ಸಾ ಘಟಕಗಳು, ಆಸ್ಪತ್ರೆಗಳ ಸಾಮರ್ಥ್ಯ ವೃದ್ಧಿ ಮೊದಲಾದ ಘೋಷಣೆಗಳು ಸರ್ಕಾರದ ಉದ್ದೇಶವನ್ನು ಸೂಚಿಸುತ್ತವೆ.
ನಗರ ಪ್ರದೇಶಗಳ ದೊಡ್ಡ ಆಸ್ಪತ್ರೆಗಳ ಮೂಲಸೌಕರ್ಯ ಸುಧಾರಣೆ, ಆಧುನಿಕ ಉಪಕರಣಗಳ ಖರೀದಿ ಮತ್ತು ಚಿಕಿತ್ಸಾ ಸೇವೆಗಳ ವಿಸ್ತರಣೆಗೆ ಕ್ರಮ ಕೈಗೊಳ್ಳುವುದಾಗಿ ಹೇಳಲಾಗಿದೆ. ಇದರಿಂದ ರಾಜ್ಯದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸುವ ಆಶಯ ವ್ಯಕ್ತವಾಗುತ್ತದೆ.
ಆದರೆ ಇದರ ನಡುವೆಯೂ ಗ್ರಾಮೀಣ ಆರೋಗ್ಯ ವ್ಯವಸ್ಥೆಯ ಮೂಲಭೂತ ಸಮಸ್ಯೆಗಳು ಇನ್ನೂ ಗಂಭೀರವಾಗಿಯೇ ಉಳಿದಿವೆ. ಕೋವಿಡ್ ಅನುಭವದ ನಂತರವೂ ಪ್ರಾಥಮಿಕ ಆರೋಗ್ಯ ಕೇಂದ್ರಗಳು (PHC) ಮತ್ತು ತಾಲೂಕು ಆಸ್ಪತ್ರೆಗಳ ಸ್ಥಿತಿ ಹಲವೆಡೆ ಬದಲಾಗಿಲ್ಲ. ವೈದ್ಯರ ಕೊರತೆ, ಅಗತ್ಯ ಸಿಬ್ಬಂದಿಯ ಅಭಾವ, ಪರೀಕ್ಷಾ ಸೌಲಭ್ಯಗಳ ಕೊರತೆ ಹಾಗೂ ಆಸ್ಪತ್ರೆಗಳ ಮೂಲಸೌಕರ್ಯದ ಅಭಾವ ಜನರಿಗೆ ತೊಂದರೆ ಉಂಟುಮಾಡುತ್ತಿದೆ. ಹೀಗಾಗಿ ದೊಡ್ಡ ಘೋಷಣೆಗಳಿಗಿಂತಲೂ ಗ್ರಾಮೀಣ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸುವ ದಿಕ್ಕಿನಲ್ಲಿ ಈ ಬಜೆಟ್ ಸ್ಪಷ್ಟವಾಗಿ ಕಾಣುವುದಿಲ್ಲ.

ಪ್ರಾದೇಶಿಕ ಅಭಿವೃದ್ಧಿಯ ನಿಧಾನಗತಿ
ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕ ಪ್ರದೇಶಗಳ ಸರ್ವಾಂಗೀಣ ಅಭಿವೃದ್ಧಿಗೆ ಹಿಂದಿನಿಂದಲೂ ಬಜೆಟ್‌ನಲ್ಲಿ ಅನುದಾನ ಘೋಷಿಸಲಾಗುತ್ತಿದೆ. ಆದರೆ ಅದರ ಜಾರಿಯನ್ನು ಗಮನಿಸಿದರೆ ಅದು ಆಮೆ ನಡಿಗೆಯಂತೆಯೇ ಕಾಣುತ್ತದೆ.
ಶಿಕ್ಷಣ, ನೀರಾವರಿ, ರಸ್ತೆ ಮತ್ತು ಕುಡಿಯುವ ನೀರಿನ ಯೋಜನೆಗಳಿಗೆ ಅನುದಾನ ನೀಡಲಾಗಿದೆ. ಆದರೆ ದಶಕಗಳಿಂದ ಹಿಂದುಳಿದಿರುವ ಈ ಪ್ರದೇಶಗಳಲ್ಲಿ ಅಭಿವೃದ್ಧಿಯ ವೇಗ ಇನ್ನೂ ನಿರೀಕ್ಷಿತ ಮಟ್ಟಕ್ಕೆ ತಲುಪಿಲ್ಲ ಎಂಬ ಟೀಕೆ ಮುಂದುವರಿಯುತ್ತಿದೆ. ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ಮತ್ತು ಅನುದಾನ ಇದ್ದರೂ ತಳಮಟ್ಟದಲ್ಲಿ ಬದಲಾವಣೆ ನಿಧಾನವಾಗಿರುವುದು ವಾಸ್ತವ.
ಇದನ್ನೂ ಓದಿ : Karnataka Budget 2026 Live Updates : ರಾಜ್ಯ ಬಜೆಟ್ 2026-27 | ಬಜೆಟ್ ಗಾತ್ರ 4 ಲಕ್ಷ ಕೋಟಿ
ಮನರೇಗಾ: ಬಲಗೊಳ್ಳದ ಗ್ರಾಮೀಣ ಉದ್ಯೋಗದ ಆಶ್ರಯ
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಹಂಚಿಕೆಯನ್ನು ಗಮನಿಸಿದರೆ ಬಜೆಟ್‌ನಲ್ಲಿರುವ ಮತ್ತೊಂದು ಪ್ರಮುಖ ವೈರುಧ್ಯ ಗೋಚರಿಸುತ್ತದೆ. 2025–26ರ ಸಾಲಿನಲ್ಲಿ ಈ ಇಲಾಖೆಗೆ ₹26,735 ಕೋಟಿ ಅನುದಾನ ನೀಡಲಾಗಿತ್ತು. ಆ ಸಮಯದಲ್ಲಿ ಗ್ರಾಮೀಣ ಉದ್ಯೋಗದ ಪ್ರಮುಖ ಆಧಾರವಾಗಿದ್ದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಮನರೇಗಾ)ಗೆ ಕೇಂದ್ರ ಸರ್ಕಾರ ಶೇ.90 ಮತ್ತು ರಾಜ್ಯ ಸರ್ಕಾರ ಶೇ.10ರಷ್ಟು ಹಣ ನೀಡುವ ವ್ಯವಸ್ಥೆ ಇತ್ತು.
ಆದರೆ 2026–27ರ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಮನರೇಗಾ ಯೋಜನೆ ಸ್ಥಗಿತಗೊಂಡಿದ್ದು ಅದರ ಬದಲಿಗೆ ವಿಕಸಿತ ಭಾರತ ಗ್ರಾಮೀಣ ಉದ್ಯೋಗ ಮಿಷನ್ (ವಿ.ಬಿ. ಗ್ರಾಮ್‌ಜಿ) ಎಂಬ ಹೊಸ ವ್ಯವಸ್ಥೆ ತರಲಾಗಿದೆ. ಈ ಯೋಜನೆಯಡಿ ಕೇಂದ್ರ ಮತ್ತು ರಾಜ್ಯಗಳ ಅನುದಾನ ಹಂಚಿಕೆಯ ಅನುಪಾತವೂ ಬದಲಾಗಿದೆ — ಈಗ ಕೇಂದ್ರ ಸರ್ಕಾರ ಶೇ.60 ಮತ್ತು ರಾಜ್ಯ ಸರ್ಕಾರ ಶೇ.40ರಷ್ಟು ಹಣ ನೀಡಬೇಕಾಗಿದೆ. ಈ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರ ತನ್ನ ಹಂಚಿಕೆಯನ್ನು ಹೆಚ್ಚಿಸುವ ನಿರೀಕ್ಷೆ ಸಹಜ. ಆದರೆ 2026–27ರ ಬಜೆಟ್‌ನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಕೇವಲ ₹26,559 ಕೋಟಿ ಮಾತ್ರ ಮೀಸಲಿಡಲಾಗಿದೆ. ಇದು ಕಳೆದ ವರ್ಷದ ₹26,735 ಕೋಟಿಯ ಹಂಚಿಕೆಗೆ ಹೋಲಿಸಿದರೆ ₹176 ಕೋಟಿ ಕಡಿಮೆ.
ಒಂದು ಕಡೆ ಕೇಂದ್ರದ ಪಾಲು ಕಡಿಮೆಯಾಗಿ ರಾಜ್ಯದ ಹೊರೆ ಹೆಚ್ಚುತ್ತಿರುವಾಗ, ಮತ್ತೊಂದೆಡೆ ರಾಜ್ಯ ಸರ್ಕಾರವೇ ಈ ಇಲಾಖೆಯ ಒಟ್ಟು ಅನುದಾನವನ್ನು ಕಡಿಮೆ ಮಾಡಿರುವುದು ಸ್ಪಷ್ಟವಾಗುತ್ತದೆ. ಗ್ರಾಮೀಣ ಆರ್ಥಿಕತೆಯ ದೃಷ್ಟಿಯಿಂದ ಇದು ಗಂಭೀರ ಪ್ರಶ್ನೆಯನ್ನು ಎಬ್ಬಿಸುತ್ತದೆ. ಗ್ರಾಮೀಣ ಉದ್ಯೋಗ, ಕಾಮಗಾರಿಗಳು ಮತ್ತು ಪಂಚಾಯತ್ ಮಟ್ಟದ ಅಭಿವೃದ್ಧಿ ಕಾರ್ಯಕ್ರಮಗಳು ಬಹುಪಾಲು ಇಂತಹ ಯೋಜನೆಗಳ ಮೇಲೆಯೇ ಅವಲಂಬಿತವಾಗಿವೆ. ಕೇಂದ್ರದ ಪಾಲು ಕಡಿಮೆಯಾಗಿರುವ ಸಂದರ್ಭದಲ್ಲಿ ರಾಜ್ಯದ ಪಾಲು ಹೆಚ್ಚಿಸಿ ಗ್ರಾಮೀಣ ಉದ್ಯೋಗವನ್ನು ಬಲಪಡಿಸುವ ಬದಲು ಅನುದಾನವೇ ಕಡಿಮೆಯಾಗಿರುವುದು, ಗ್ರಾಮೀಣಾಭಿವೃದ್ಧಿಗೆ ಸರ್ಕಾರ ನೀಡುತ್ತಿರುವ ಆದ್ಯತೆ ಬಗ್ಗೆ ಸಂಶಯ ಹುಟ್ಟಿಸುತ್ತದೆ.
ಕೃಷಿ: ಘೋಷಣೆಗಳ ನಡುವೆಯೇ ಉಳಿದಿರುವ ಮೂಲ ಪ್ರಶ್ನೆಗಳು
ಈ ಬಜೆಟ್‌ನಲ್ಲಿ ಕೃಷಿ ಕ್ಷೇತ್ರವನ್ನು ರಾಜ್ಯದ ಆರ್ಥಿಕತೆಯ ಪ್ರಮುಖ ಆಧಾರವೆಂದು ಹೇಳಲಾಗಿದ್ದರೂ, ಅದರ ಅನುದಾನ ಮತ್ತು ನೀತಿಗಳ ಸ್ವರೂಪವನ್ನು ಗಮನಿಸಿದರೆ ಕೆಲವು ಪ್ರಮುಖ ಪ್ರಶ್ನೆಗಳು ಎದುರಾಗುತ್ತವೆ. ರೈತರ ಆದಾಯ ಹೆಚ್ಚಿಸುವುದು, ನೀರಾವರಿ ವಿಸ್ತರಣೆ, ಬೆಳೆ ವೈವಿಧ್ಯತೆ ಮತ್ತು ಕೃಷಿ ಮೌಲ್ಯವರ್ಧನೆ ಕುರಿತಂತೆ ಹಲವು ಘೋಷಣೆಗಳು ಕೇಳಿಬಂದಿವೆ. ಕೃಷಿ ಮೂಲಸೌಕರ್ಯ, ಸಂಗ್ರಹಣಾ ವ್ಯವಸ್ಥೆ, ಮಾರುಕಟ್ಟೆ ಸೌಲಭ್ಯಗಳು ಮತ್ತು ಕೃಷಿ ತಂತ್ರಜ್ಞಾನಗಳ ಬಳಕೆಯನ್ನು ಹೆಚ್ಚಿಸುವುದಾಗಿ ಸರ್ಕಾರ ಹೇಳಿದೆ.
ಆದರೆ ರೈತರ ಪ್ರಮುಖ ಸಮಸ್ಯೆಗಳಾದ ಉತ್ಪಾದನಾ ವೆಚ್ಚದ ಏರಿಕೆ, ಬೆಳೆಗಳಿಗೆ ಖಚಿತ ಬೆಲೆ, ಸಾಲದ ಒತ್ತಡ ಮತ್ತು ಹವಾಮಾನ ಬದಲಾವಣೆಯಿಂದ ಉಂಟಾಗುತ್ತಿರುವ ಅಪಾಯಗಳ ಬಗ್ಗೆ ಬಜೆಟ್ ಹೆಚ್ಚು ಸ್ಪಷ್ಟ ಉತ್ತರ ನೀಡುವುದಿಲ್ಲ ಎಂಬ ಟೀಕೆ ಕೇಳಿಬರುತ್ತಿದೆ. ಕೃಷಿ ಕ್ಷೇತ್ರದಲ್ಲಿ ಘೋಷಣೆಗಳು ಇದ್ದರೂ, ರೈತರ ಆದಾಯವನ್ನು ಸ್ಥಿರವಾಗಿ ಹೆಚ್ಚಿಸುವ ಸಮಗ್ರ ನೀತಿಯ ಕೊರತೆ ಇನ್ನೂ ಸ್ಪಷ್ಟವಾಗಿದೆ.
ಮತ್ತೊಂದು ಅಂಶವೆಂದರೆ ಕೃಷಿ ಮತ್ತು ಗ್ರಾಮೀಣ ಉದ್ಯೋಗದ ನಡುವಿನ ಸಂಬಂಧ. ಗ್ರಾಮೀಣ ಪ್ರದೇಶಗಳಲ್ಲಿ ಕೃಷಿಯ ಹೊರತಾದ ಉದ್ಯೋಗಾವಕಾಶಗಳು ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ, ಕೃಷಿಯ ಮೇಲಿನ ಅವಲಂಬನೆ ಹೆಚ್ಚುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಕೃಷಿಗೆ ಸಂಬಂಧಿಸಿದ ಸಹಾಯಕ ಚಟುವಟಿಕೆಗಳಾದ ಪಶುಸಂಗೋಪನೆ, ಹಾಲು ಉತ್ಪಾದನೆ, ತೋಟಗಾರಿಕೆ ಮತ್ತು ಸಣ್ಣ ಕೃಷಿ ಉದ್ಯಮಗಳಿಗೆ ಇನ್ನಷ್ಟು ಬಲ ನೀಡುವ ಅಗತ್ಯವಿದೆ. ರೈತರ ಜೀವನದಲ್ಲಿ ಮೂಲಭೂತ ಬದಲಾವಣೆ ತರಬಲ್ಲ ದೀರ್ಘಾವಧಿ ನೀತಿಗಳು ಎಷ್ಟು ಪರಿಣಾಮಕಾರಿಯಾಗಿ ಜಾರಿಯಾಗುತ್ತವೆ ಎಂಬುದೇ ಪ್ರಮುಖ ಪ್ರಶ್ನೆಯಾಗಿ ಉಳಿದಿದೆ.
ಮಂಕಾದ ಮಹಿಳಾ ಸಬಲೀಕರಣದ ಯೋಜನೆಗಳು
ಹಿಂದಿನ ವರ್ಷಗಳಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಬಡತನ ನಿವಾರಣೆಯ ಹಲವಾರು ಯೋಜನೆಗಳಲ್ಲಿ ಮಹಿಳಾ ಸ್ವಸಹಾಯ ಸಂಘಗಳು ಪ್ರಮುಖ ಕೊಂಡಿಯಾಗಿದ್ದವು. ಮಹಿಳಾ ಸಮೂಹಗಳನ್ನು ಗುರಿಯಾಗಿಸಿಕೊಂಡು ಉಳಿತಾಯ, ಸಾಲ ಚಟುವಟಿಕೆಗಳು, ಸಣ್ಣ ಉದ್ಯಮಗಳು, ಪೌಷ್ಟಿಕತೆ ಕಾರ್ಯಕ್ರಮಗಳು, ಗ್ರಾಮೀಣ ಉತ್ಪಾದನಾ ಘಟಕಗಳು ಇತ್ಯಾದಿ ಹಲವು ಯೋಜನೆಗಳನ್ನು ಜಾರಿಗೆ ತರುವ ಪ್ರಯತ್ನಗಳು ನಡೆದವು. ಮಹಿಳೆಯರನ್ನು ಆರ್ಥಿಕ ಚಟುವಟಿಕೆಯಲ್ಲಿ ಭಾಗಿಯಾಗಿಸುವುದು, ಕುಟುಂಬದ ಆದಾಯವನ್ನು ಹೆಚ್ಚಿಸುವುದು ಮತ್ತು ಗ್ರಾಮೀಣ ಸಮಾಜದಲ್ಲಿ ಮಹಿಳೆಯರ ನಿರ್ಧಾರ ಸಾಮರ್ಥ್ಯವನ್ನು ಬಲಪಡಿಸುವುದು ಇದರ ಮೂಲ ಉದ್ದೇಶವಾಗಿತ್ತು.
ಆದರೆ ಇತ್ತೀಚಿನ ವರ್ಷಗಳಲ್ಲಿ ಈ ರೀತಿಯ ಯೋಜನೆಗಳ ಚಟುವಟಿಕೆಗಳು ಬಹುಮಟ್ಟಿಗೆ ನಿಧಾನಗೊಂಡಿರುವುದು ಗೋಚರಿಸುತ್ತದೆ. ಮಹಿಳಾ ಸಮೂಹಗಳ ಮೂಲಕ ನಡೆಯುತ್ತಿದ್ದ ಉತ್ಪಾದನಾ ಘಟಕಗಳು, ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳು ಮತ್ತು ಸ್ಥಳೀಯ ಆರ್ಥಿಕ ಚಟುವಟಿಕೆಗಳಿಗೆ ಹಿಂದಿನಂತೆ ಆದ್ಯತೆ ಸಿಗುತ್ತಿಲ್ಲ ಎಂಬ ಅಭಿಪ್ರಾಯ ಗ್ರಾಮೀಣ ಪ್ರದೇಶಗಳಲ್ಲಿ ಕೇಳಿಬರುತ್ತಿದೆ. ಹಲವಾರು ಕಡೆಗಳಲ್ಲಿ ಸ್ವಸಹಾಯ ಸಂಘಗಳು ಕೇವಲ ಬ್ಯಾಂಕ್ ಸಾಲ ಪಡೆಯುವ ವ್ಯವಸ್ಥೆಗೆ ಮಾತ್ರ ಸೀಮಿತವಾಗುತ್ತಿರುವುದು ಕಂಡುಬರುತ್ತಿದೆ.
ಇದರಿಂದ ಒಂದು ದೊಡ್ಡ ಪ್ರಶ್ನೆ ಉದ್ಭವಿಸುತ್ತದೆ. ಮಹಿಳೆಯರನ್ನು ಕೇಂದ್ರವಾಗಿಟ್ಟುಕೊಂಡು ರೂಪಿಸಲಾದ ಅಭಿವೃದ್ಧಿ ಮಾದರಿ ದುರ್ಬಲಗೊಂಡರೆ, ಅದರ ಪರಿಣಾಮ ಗ್ರಾಮೀಣ ಆರ್ಥಿಕತೆಯ ಮೇಲೆಯೇ ಬೀಳುತ್ತದೆ. ಸ್ವಸಹಾಯ ಸಂಘಗಳ ಚಟುವಟಿಕೆಗಳು ಕುಂಠಿತವಾದರೆ ಮಹಿಳೆಯರ ಉದ್ಯೋಗಾವಕಾಶಗಳು ಕಡಿಮೆಯಾಗುತ್ತವೆ, ಸ್ಥಳೀಯ ಮಟ್ಟದ ಸಣ್ಣ ಉದ್ಯಮಗಳು ಕುಸಿಯುತ್ತವೆ ಮತ್ತು ಗ್ರಾಮೀಣ ಕುಟುಂಬಗಳ ಆದಾಯದ ಮೇಲೂ ಪರಿಣಾಮ ಬೀರುತ್ತದೆ. ಹೀಗಾಗಿ ಮಹಿಳಾ ಸಮೂಹಗಳನ್ನು ಗುರಿಯಾಗಿಸಿಕೊಂಡಿದ್ದ ಯೋಜನೆಗಳನ್ನು ಮತ್ತೆ ಸಕ್ರಿಯಗೊಳಿಸುವುದು, ಅವರಿಗೆ ಮಾರುಕಟ್ಟೆ, ತರಬೇತಿ ಮತ್ತು ಹಣಕಾಸಿನ ಬೆಂಬಲ ಒದಗಿಸುವುದು ಅಗತ್ಯವಾಗಿದೆ. ಇಲ್ಲವಾದರೆ ಮಹಿಳಾ ಸಬಲೀಕರಣದ ಹೆಸರಿನಲ್ಲಿ ನಿರ್ಮಿಸಲಾದ ವ್ಯವಸ್ಥೆಗಳು ಕೇವಲ ಕಾಗದದಲ್ಲಿನ ಯೋಜನೆಗಳಾಗಿಯೇ ಉಳಿಯುವ ಅಪಾಯವಿದೆ.
ಹಣಕಾಸಿನ ನಿಜ ಚಿತ್ರ: ಜನರ ಮೇಲೆ ಸಾಲದ ಹೊರೆ
ಈ ಎಲ್ಲಾ ಘೋಷಣೆಗಳು ಮತ್ತು ಜನಪರ ಯೋಜನೆಗಳ ನಡುವೆ ರಾಜ್ಯದ ಹಣಕಾಸಿನ ನಿಜ ಸ್ಥಿತಿಯನ್ನು ಗಮನಿಸದೆ ಹೋಗಲು ಸಾಧ್ಯವಿಲ್ಲ. ಕಳೆದ ಕೆಲವು ವರ್ಷಗಳಿಂದ ಕರ್ನಾಟಕದ ಒಟ್ಟು ಸಾಲದ ಪ್ರಮಾಣ ನಿರಂತರವಾಗಿ ಏರಿಕೆಯಾಗುತ್ತಿದೆ. 2024–25ರಲ್ಲಿ ಸುಮಾರು ₹5 ಲಕ್ಷ ಕೋಟಿ, 2025-26 ರಲ್ಲಿ 7ಲಕ್ಷ ಕೋಟಿ ಮಟ್ಟದಲ್ಲಿದ್ದ ರಾಜ್ಯದ ಒಟ್ಟು ಸಾಲ, ಈಗ 2026–27ರ ವೇಳೆಗೆ ಸುಮಾರು ₹8,24,389 ಕೋಟಿಯ ಗಡಿಯನ್ನು ತಲುಪುವ ಹಂತದಲ್ಲಿದೆ ಎಂದು ಅಂದಾಜಿಸಲಾಗಿದೆ. ಅಂದರೆ ಸರ್ಕಾರದ ವೆಚ್ಚವನ್ನು ಸಾಗಿಸಲು ಸಾಲವೇ ಪ್ರಮುಖ ಆಧಾರವಾಗುತ್ತಿರುವುದು ಸ್ಪಷ್ಟವಾಗುತ್ತದೆ.
ರಾಜಸ್ವ ಕೊರತೆಯೂ ಇದೇ ರೀತಿಯಲ್ಲಿ ಏರಿಕೆಯಾಗುತ್ತಿರುವುದು ಮತ್ತೊಂದು ಪ್ರಮುಖ ಅಂಶ. ಸರ್ಕಾರಕ್ಕೆ ತೆರಿಗೆ ಮತ್ತು ಇತರೆ ಮೂಲಗಳಿಂದ ಬರುವ ಆದಾಯಕ್ಕಿಂತ ಖರ್ಚು ಹೆಚ್ಚಾದಾಗ ಉಂಟಾಗುವ ಈ ಕೊರತೆ ಸರ್ಕಾರದ ಹಣಕಾಸಿನ ಆರೋಗ್ಯವನ್ನು ಅಳೆಯುವ ಪ್ರಮುಖ ಸೂಚಕವಾಗಿದೆ.
ಸಾಲದ ಪ್ರಮಾಣ ಹೆಚ್ಚಾದಂತೆ ಅದರ ಮೇಲಿನ ಬಡ್ಡಿ ಹೊರೆ ಕೂಡ ಹೆಚ್ಚಾಗುತ್ತದೆ. ಸರ್ಕಾರದ ಒಟ್ಟು ಆದಾಯದಲ್ಲಿ ಗಮನಾರ್ಹ ಭಾಗ ಈಗ ಬಡ್ಡಿ ಪಾವತಿಗೆ ಮೀಸಲಾಗುತ್ತಿದೆ. ಅಂದರೆ ಶಿಕ್ಷಣ, ಆರೋಗ್ಯ, ಕೃಷಿ ಮುಂತಾದ ಮೂಲಭೂತ ಕ್ಷೇತ್ರಗಳಿಗೆ ಬಳಸಬಹುದಾದ ಸಂಪನ್ಮೂಲಗಳ ಒಂದು ಭಾಗ ಸಾಲದ ಬಡ್ಡಿಗೆ ಹೋಗುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ.
ಹೀಗಾಗಿ ಒಂದು ಮೂಲಭೂತ ಪ್ರಶ್ನೆ ಎದುರಾಗುತ್ತದೆ, ಕಲ್ಯಾಣ ಯೋಜನೆಗಳನ್ನು ಮುಂದುವರಿಸುವುದರ ಜೊತೆಗೆ ರಾಜ್ಯದ ಆದಾಯವನ್ನು ಹೇಗೆ ಹೆಚ್ಚಿಸಲಾಗುವುದು? ಕೈಗಾರಿಕೆಗಳ ವಿಸ್ತರಣೆ, ಉದ್ಯೋಗ ಸೃಷ್ಟಿ ಮತ್ತು ತೆರಿಗೆ ಆಧಾರದ ವಿಸ್ತರಣೆ ಇಲ್ಲದೆ ಕೇವಲ ಸಾಲದ ಮೇಲೆ ಅವಲಂಬಿತವಾದ ಹಣಕಾಸು ವ್ಯವಸ್ಥೆ ದೀರ್ಘಾವಧಿಯಲ್ಲಿ ಸ್ಥಿರವಾಗಲು ಕಷ್ಟ.
ಕಳೆದ ವರ್ಷದ ಘೋಷಣೆಗಳು – ಜಾರಿಯಾಗಿದ್ದೆಷ್ಟು?
2025–26ರ ಬಜೆಟ್‌ನಲ್ಲಿ ಘೋಷಿಸಲಾದ ಹಲವು ಯೋಜನೆಗಳು ಈಗ ಅನುಷ್ಠಾನ ಹಂತದಲ್ಲಿವೆ ಎಂದು ಸರ್ಕಾರ ಹೇಳುತ್ತಿದೆ. ಉದಾಹರಣೆಗೆ, ಸಾರ್ವಜನಿಕ ಕಾಮಗಾರಿಗಳ ಇಲಾಖೆಯ ಮೂಲಕ 216 ಸೇತುವೆಗಳ ನಿರ್ಮಾಣ, 288 ಸೇತುವೆಗಳ ದುರಸ್ತಿ ಹಾಗೂ 386 ಕಾಲುಸಂಕಗಳ ನಿರ್ಮಾಣಕ್ಕೆ ಸುಮಾರು ₹2,000 ಕೋಟಿ ವೆಚ್ಚದಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಸರ್ಕಾರ ಹೇಳಿದೆ.
ವಿದ್ಯುತ್ ಕ್ಷೇತ್ರದಲ್ಲಿ ಪ್ರಸರಣ ಜಾಲವನ್ನು ವಿಸ್ತರಿಸಲು 2025–26ರಲ್ಲಿ 100 ಹೊಸ ಉಪಕೇಂದ್ರಗಳನ್ನು ಸ್ಥಾಪಿಸುವ ಕಾರ್ಯ ಪ್ರಾರಂಭಿಸಲಾಗಿದ್ದು, ಇದೇ ಯೋಜನೆಯನ್ನು ಈ ವರ್ಷವೂ ಮುಂದುವರಿಸುವುದಾಗಿ ಘೋಷಿಸಲಾಗಿದೆ. ಪುನರುತ್ಪಾದಕ ವಿದ್ಯುತ್ ಕ್ಷೇತ್ರದಲ್ಲಿ 1,000 ಮೆಗಾವಾಟ್ ಗಂಟೆಗಳ ಬ್ಯಾಟರಿ ಶಕ್ತಿ ಸಂಗ್ರಹ ವ್ಯವಸ್ಥೆಯನ್ನು ಕೆಲವು ಸಬ್‌ಸ್ಟೇಷನ್‌ಗಳಲ್ಲಿ ಆರಂಭಿಸಲಾಗಿದೆ. ಮುಂದಿನ ಹಂತದಲ್ಲಿ 2,000 MWh ಸಾಮರ್ಥ್ಯದ ಯೋಜನೆಯನ್ನು ₹3,400 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳುವ ಯೋಜನೆಯೂ ಘೋಷಿಸಲಾಗಿದೆ.
ನಗರ ಬಡವರಿಗೆ ಮನೆ ನಿರ್ಮಾಣದ ಕ್ಷೇತ್ರದಲ್ಲೂ ಕೆಲವು ಪ್ರಗತಿ ಕಂಡುಬಂದಿದೆ. ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಸುಮಾರು 79,000ಕ್ಕೂ ಹೆಚ್ಚು ಮನೆಗಳನ್ನು ಪೂರ್ಣಗೊಳಿಸಲಾಗಿದೆ ಎಂದು ಸರ್ಕಾರ ಹೇಳಿದೆ. ಆದರೆ ಈ ಎಲ್ಲಾ ಯೋಜನೆಗಳು ಘೋಷಿಸಿದ ಪ್ರಮಾಣದಲ್ಲಿ ಮತ್ತು ನಿರೀಕ್ಷಿಸಿದ ವೇಗದಲ್ಲಿ ನಡೆಯುತ್ತಿವೆಯೇ ಎಂಬ ಪ್ರಶ್ನೆ ಇನ್ನೂ ಉಳಿದಿದೆ. ಹಲವಾರು ಯೋಜನೆಗಳು ಆರಂಭಿಕ ಹಂತದಲ್ಲೇ ಉಳಿದಿರುವುದು ಆಡಳಿತಾತ್ಮಕ ವಿಳಂಬವನ್ನು ಸೂಚಿಸುತ್ತದೆ.
ಈ ಎಲ್ಲಾ ಅಂಶಗಳನ್ನು ಒಟ್ಟುಗೂಡಿಸಿ ನೋಡಿದಾಗ 2026–27ರ ಕರ್ನಾಟಕ ಬಜೆಟ್ ಒಂದು ಮಿಶ್ರ ಚಿತ್ರವನ್ನು ನೀಡುತ್ತದೆ. ಸರ್ಕಾರ ಜನಪರ ಯೋಜನೆಗಳು, ಮೂಲಸೌಕರ್ಯ ಮತ್ತು ವಿವಿಧ ಕ್ಷೇತ್ರಗಳ ಅಭಿವೃದ್ಧಿಯ ಕುರಿತು ಹಲವು ಘೋಷಣೆಗಳನ್ನು ಮಾಡಿದೆ. ಆದರೆ ಅಂಕಿ–ಅಂಶಗಳ ಒಳನೋಟ ನೀಡುವ ಸಂದೇಶ ವಿಭಿನ್ನವಾಗಿದೆ.
ಕಳೆದ ಬಜೆಟ್‌ನಲ್ಲಿ ಘೋಷಿಸಿದ ಹಲವಾರು ಯೋಜನೆಗಳ ಪ್ರಗತಿ ಸ್ಪಷ್ಟವಾಗಿಲ್ಲ; ಕೆಲವು ಯೋಜನೆಗಳು ರೂಪಾಂತರಗೊಂಡಿವೆ, ಕೆಲವು ಅಳಿದು ಹೋಗಿವೆ. ಶಿಕ್ಷಣ, ಆರೋಗ್ಯ, ಗ್ರಾಮೀಣಾಭಿವೃದ್ಧಿ ಮತ್ತು ಕಲ್ಯಾಣ ಕರ್ನಾಟಕದಂತಹ ಪ್ರಮುಖ ಕ್ಷೇತ್ರಗಳಲ್ಲಿ ಹೆಚ್ಚುವರಿ ನಿರೀಕ್ಷೆಗಳಿದ್ದರೂ ಅನುದಾನ ಹಂಚಿಕೆ ಮತ್ತು ಅದರ ಪರಿಣಾಮಗಳನ್ನು ನೋಡಿದರೆ ಅವುಗಳಿಗೆ ತಕ್ಕ ಮಟ್ಟಿನ ಬಲ ದೊರಕಿದೆಯೇ ಎಂಬ ಪ್ರಶ್ನೆ ಉದ್ಭವಿಸುತ್ತದೆ.
ಇದೇ ವೇಳೆ ರಾಜ್ಯದ ಹಣಕಾಸಿನ ಸ್ಥಿತಿಯೂ ಮತ್ತೊಂದು ದೊಡ್ಡ ಚರ್ಚೆಯ ವಿಷಯವಾಗಿದೆ. ಸಾಲದ ಪ್ರಮಾಣ ಏರಿಕೆಯಾಗುತ್ತಿರುವುದು ಮತ್ತು ರಾಜಸ್ವ–ವಿತ್ತೀಯ ಕೊರತೆಗಳು ಹೆಚ್ಚುತ್ತಿರುವುದು ಬಜೆಟ್‌ನ ದೀರ್ಘಾವಧಿ ಸ್ಥಿರತೆ ಬಗ್ಗೆ ಆತಂಕ ಹುಟ್ಟಿಸುತ್ತದೆ.
ಹೀಗಾಗಿ ಬಜೆಟ್ ಕೇವಲ ಘೋಷಣೆಗಳ ಪುಸ್ತಕವಾಗಬಾರದು. ಅವು ತಳಮಟ್ಟದಲ್ಲಿ ಬದಲಾವಣೆ ತರಬೇಕಾದ ಸಾಧನವಾಗಬೇಕು. ಇಲ್ಲವಾದರೆ ಪ್ರತಿ ವರ್ಷ ಹೊಸ ಯೋಜನೆಗಳು ಘೋಷಣೆಯಾಗುತ್ತಲೇ ಇರುತ್ತವೆ; ಆದರೆ ಜನರ ಬದುಕಿನಲ್ಲಿ ನಿರೀಕ್ಷಿತ ಬದಲಾವಣೆ ಕಾಣುವುದಿಲ್ಲ.
ಇದನ್ನೂ ನೋಡಿ : ವಿಧಾನಸಭೆ ಬಜೆಟ್ ಅಧಿವೇಶನದ ನೇರಪ್ರಸಾರ #KarnatakaBudget2026
