2024-25ನೇ ಸಾಲಿನ ರಾಜ್ಯ ಬಜೆಟ್ ಮಂಡನೆ ಆರಂಭವಾಗಿದ್ದು, ವಿಪಕ್ಷಗಳ ಗದ್ದಲದ ನಡುವೆಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಭಾಷಣವನ್ನು ಮುಂದುವರೆಸಿದ್ದಾರೆ. ಕರ್ನಾಟಕ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಮಂಡನೆಗೆ ಸೂಟ್‌ಕೇಸ್ ಬದಲು ಬ್ಯಾಗ್ ಹಿಡಿದು ತೆರಳುವ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ. ಸರ್ಕಾರಿ ಸ್ವಾಮ್ಯದ ಲಿಡ್ಕರ್ ಕಂಪನಿಯ ಬ್ಯಾಗ್‌ನಲ್ಲಿ ಬಜೆಟ್ ಪ್ರತಿ ಇರಿಸಲಾಗಿತ್ತು. 2024-25ನೇ ಸಾಲಿನ ರಾಜ್ಯ ಬಜೆಟ್ ಗಾತ್ರ 3,71,383 ಕೋಟಿ ರೂ ಆಗಿದ್ದು, ಈ ಬಾರಿಯೂ ವಲಯವಾರು ವಿಂಗಡಣೆ ಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಸಕ್ತ ಸಾಲಿನ ಬಜೆಟ್ ಮಂಡನೆ ಮಾಡುತ್ತಿದ್ದಾರೆ.
ಬಜೆಟ್ ಮಂಡನೆ ವೇಳೆ ಸದನದಲ್ಲಿ ವಿಪಕ್ಷ ನಾಯಕರು ಬಜೆಟ್ಗೆ ಬಹಿಷ್ಕಾರ ಹಾಕಿದ್ದು, ಸರ್ಕಾರದ ವಿರುದ್ಧ ಧಿಕ್ಕಾರ ಕೂಗುತ್ತಾ ಬಿಜೆಪಿ ನಾಯಕರು ಸದನದಿಂದ ಹೊರಬಂದಿದ್ದಾರೆ. ‘ಏನಿಲ್ಲಾ ಏನಿಲ್ಲಾ, ಬುರುಡೆ ಬುರುಡೆ’ ಎಂದು ಕೂಗುತ್ತಾ ಸಭಾತ್ಯಾಗ ಮಾಡಿದರು. ವಿಧಾನಸಭೆ ಪ್ರವೇಶದ್ವಾರದ ಬಾಗಿಲಿಗೆ ಬಿಜೆಪಿ ಶಾಸಕರು ಪೋಸ್ಟರ್ ಅಂಟಿಸಿದ ಘಟನೆಯೂ ಜರುಗಿತು.
ಇಷ್ಟೆಲ್ಲ ಗದ್ದಲವಾಗುತ್ತಿದ್ದರೂ, ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡನೆ ಮುಂದುವರೆಸಿದ್ದಾರೆ. ಬಜೆಟ್‌ನ ಮುಖ್ಯಾಂಶಗಳು ಈ ರೀತಿ ಇವೆ…
- ಬಜೆಟ್ ಮೊತ್ತ 3.71 ಲಕ್ಷ ಕೋಟಿ
2024–25ನೇ ಸಾಲಿನ ಬಜೆಟ್ ಮೊತ್ತ ₹ 3,71, 383 ಕೋಟಿಯಾಗಿದೆ. ರಾಜಸ್ವ ವೆಚ್ಚ ₹ 2,90,531, ಬಂಡವಾಳ ವೆಚ್ಚ ₹ 55,877 ಹಾಗೂ ಸಾಲ ಮರುಪಾವತಿ ₹ 24,974 ಕೋಟಿ - ₹ 2.32 ಲಕ್ಷ ಕೋಟಿ ಹೂಡಿಕೆ
2023ರ ಸೆಪ್ಟೆಂಬರ್ ವರೆಗೆ ಬಹುರಾಷ್ಟ್ರೀಯ ಕಂಪನಿಗಳಿಂದ ಕರ್ನಾಟಕದಲ್ಲಿ ₹ 2.32 ಲಕ್ಷ ಕೋಟಿ ಹೂಡಿಕೆಯಾಗಿದೆ. - ‘ಗ್ಯಾರಂಟಿ ಯೋಜನೆಗಳಿಗೆ ವ್ಯಾಪಕ ಮೆಚ್ಚುಗೆ’
ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿರುವ ₹ 50,000 ರಿಂದ ₹ 55,000 ಕೋಟಿ ಮೊತ್ತದ ಗ್ಯಾರಂಟಿ ಯೋಜನೆಗಳ ಲಾಭ ರಾಜ್ಯದ ಜನರಿಗೆ ಲಭಿಸುತ್ತಿದೆ. ಈ ಯೋಜನೆಗಳನ್ನು ವಿರೋಧ ಪಕ್ಷಗಳು ‘ಬಿಟ್ಟಿ ಭಾಗ್ಯಗಳು’ ಎಂದು ಅಪಹಾಸ್ಯ ಮಾಡಿದ್ದವು. ಆದರೆ, ನಮ್ಮ ಕಲ್ಯಾಣ ಯೋಜನೆಗಳನ್ನು ಇಡೀ ಜಗತ್ತೇ ಮೆಚ್ಚಿದೆ ಎಂದರು - ಕೇಂದ್ರದಿಂದ ₹ 67,000 ಕೋಟಿ ಬಾಕಿ
ಕರ್ನಾಟಕದಿಂದ ಕೇಂದ್ರ ಸರ್ಕಾರಕ್ಕೆ ಹೆಚ್ಚಿನ ಪ್ರಮಾಣ ತೆರಿಗೆ ಪಾವತಿಯಾಗುತ್ತಿದೆ. ಆದರೂ, ರಾಜ್ಯದ ಪಾಲನ್ನು ಸಮರ್ಪಕವಾಗಿ ಒದಗಿಸುತ್ತಿಲ್ಲ. 15ನೇ ಹಣಕಾಸು ಆಯೋಗದಲ್ಲಿ ಕೇಂದ್ರವು ರಾಜ್ಯಕ್ಕೆ ನೀಡಬೇಕಿದ್ದ ₹ 67,000 ಕೋಟಿ ಬಾಕಿ ಉಳಿಸಿಕೊಂಡಿದೆ. - ವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ ₹400 ಕೋಟಿ ಅನುದಾನ
- ಮಂಡ್ಯದಲ್ಲಿ ಕೃಷಿ ವಿವಿ ಸ್ಥಾಪಿಸಿಲು ತಜ್ಞರ ಸಮಿತಿ
- ಬೆಂಗಳೂರಿನಲ್ಲಿ ₹233 ಕೋಟಿ ವೆಚ್ಚದಲ್ಲಿ ಸೈನ್ಸ್ ಸಿಟಿ ನಿರ್ಮಾಣ
- ಕಲಬುರಗಿಯಲ್ಲಿ ವಚನ ಸಂಗ್ರಹಾಲಯ ಸ್ಥಾಪನೆ
- 2024 -25ರಲ್ಲಿ 3 ಲಕ್ಷ ಮನೆಗಳ ನಿರ್ಮಾಣದ ಗುರಿ
- ಶೇ 60ರಷ್ಟು ಕನ್ನಡ ಬಳಕೆ ಮಾಡುವುದು ಕಡ್ಡಾಯ ಅನುಷ್ಠಾನ ಕಚೇರಿ, ಬೋರ್ಡ್‌ಗಳಲ್ಲಿ ಕನ್ನಡ ಬಳಕೆ ಕಡ್ಡಾಯ
- ಬೆಂಗಳೂರು ಮತ್ತು 10 ಪಾಲಿಕೆಗಳಲ್ಲಿ ರಾತ್ರಿ 1 ಗಂಟೆವರೆಗೆ ವ್ಯಾಪಾರ– ವಹಿವಾಟಿಗೆ ಅನುಮತಿ
- ವಿವಿಧ ಇಲಾಖೆಗಳಿಗೆ ನೀಡಲಾದ ಅನುದಾನದ ಮಾಹಿತಿ ಇಲ್ಲಿದೆ
- ಶಿಕ್ಷಣ ಕ್ಷೇತ್ರಕ್ಕೆ ₹44,422 ಕೋಟಿ ಮೀಸಲು
- ಇಂಧನ ಇಲಾಖೆಗೆ ₹23,159 ಕೋಟಿ ಮೀಸಲು
- ಗ್ರಾಮೀಣಾಭಿವೃದ್ಧಿ ಇಲಾಖೆಗೆ ₹21,160 ಕೋಟಿ ಮೀಸಲು
- ಗೃಹ ಮತ್ತು ಸಾರಿಗೆ ಇಲಾಖೆಗೆ ₹19,777 ಕೋಟಿ ಮೀಸಲು
- ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ₹34,406 ಕೋಟಿ ಮೀಸಲು
- ಕಂದಾಯ ಇಲಾಖೆಗೆ ₹16,170 ಕೋಟಿ ಮೀಸಲು
- ಆರೋಗ್ಯ ಇಲಾಖೆಗೆ ₹15,145 ಕೋಟಿ ಮೀಸಲು
- ಸಮಾಜ ಕಲ್ಯಾಣ ಇಲಾಖೆಗೆ ₹39,121 ಕೋಟಿ ಮೀಸಲು
- ಗ್ರಾಮೀಣ ಪತ್ರಕರ್ತರ ದಶಕಗಳ ಕನಸು ನನಸು, ಗ್ರಾಮೀಣ ಭಾಗದ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಯೋಜನೆಯನ್ನು ಸಿಎಂ ಸಿದ್ದರಾಮಯ್ಯ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದಾರೆ.
- ಕೆಫೆ ಸಂಜೀವಿನಿ : 7.50 ಕೋಟಿ ರೂ. ವೆಚ್ಚದಲ್ಲಿ ಕೆಫೆ ಸಂಜೀವಿನಿ ಹೆಸರಿನ 50 ಮಹಿಳಾ ಕೆಫೆಗಳನ್ನು ಈ ವರ್ಷದಲ್ಲಿ ರಾಜ್ಯಾದ್ಯಂತ ಪ್ರಾರಂಭಿಸಲಾಗುವುದು ಎಂದು ಸಿದ್ದರಾಮಯ್ಯ ಘೋಷಿಸಿದ್ದು, ಈ ಕ್ಯಾಂಟೀನ್‌ಗಳು ಗ್ರಾಮೀಣ ಪ್ರದೇಶಗಳಲ್ಲಿನ ಬೇಡಿಕೆ ಮತ್ತು ಪೂರೈಕೆಯ ಕೊರತೆಯನ್ನು ನೀಗಿಸಲಿದ್ದು, ಆರೋಗ್ಯಕರ, ಆರೋಗ್ಯಕರ ಮತ್ತು ಕೈಗೆಟುಕುವ ದರದಲ್ಲಿ ಗ್ರಾಹಕರಿಗೆ ಬೇಯಿಸಿದ ಆಹಾರ ಮತ್ತು ಸಾಂಪ್ರದಾಯಿಕ ಸ್ಥಳೀಯ ಪಾಕಪದ್ಧತಿಯನ್ನು ಪರಿಚಯಿಸಲಿದೆ.
- ಗ್ಯಾರಂಟಿ ಯೋಜನೆಗಳಿಗೆ 57 ಸಾವಿರ ಕೋಟಿ ಬಳಸಲಾಗುತ್ತಿದೆ: ಸಿದ್ದರಾಮಯ್ಯ
- ಮೀನುಗಾರಿಕೆ ಕ್ಷೇತ್ರಕ್ಕೆ ಬಜೆಟ್‌ನಲ್ಲಿ 3 ಸಾವಿರ ಕೋಟಿ ಯೋಜನೆ ಘೋಷಣೆ ಮಾಡಲಾಗಿದೆ. ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳುವ ಮೀನುಗಾರರನ್ನು ತುರ್ತು ಸಂದರ್ಭಗಳಲ್ಲಿ ರಕ್ಷಣೆಗೆ ಮಾಡುವುದಕ್ಕಾಗಿ ಅತ್ಯಾಧುನಿಕ ಸಮುದ್ರ ಆಂಬುಲೆನ್ಸ್ ಖರೀದಿಸಲಾಗುವುದು ಎಂದು ಸಿದ್ದರಾಮಯ್ಯ ಅವರು ಹೇಳಿದರು.
- ಮಹಿಳೆಯರಿಗೆ ಸರ್ಕಾರದಿಂದಲೇ ಶೇ. 6 ರಷ್ಟು ಬಡ್ಡಿ ರಹಿತ ಸಾಲ, ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್ ಫೋನ್ 90 ಕೋಟಿ ವೆಚ್ಚದಲ್ಲಿ 75,938 ಸ್ಮಾರ್ಟ್ ಫೋನ್ ವಿತರಣೆ. ಅಂಗನವಾಡಿ ಕಾರ್ಯಕರ್ತೆಯರಿಗೆ ಗ್ರ್ಯಾಚುಟಿ ಸೌಲಭ್ಯಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಹೇಳಿದರು
- ಸುಳ್ಳು ಸುದ್ದಿ ತಡೆಗಟ್ಟಲು ಐಟಿಬಿಟಿ ಇಲಾಖೆಯ ಸಹಯೋಗದಲ್ಲಿ ಸತ್ಯ ಶೋಧನಾ ತಂಡ ಹಾಗೂ ವಿಶೇಷ ಕೋಶ ರಚನೆ ಮಾಡಲಾಗುವುದು. ಅಲ್ಲದೆ ಡೀಪ್ ಫೇಕ್ ಹಾಗೂ ಸೈಬರ್ ಕ್ರೈಂ ತಡೆಗೆ 43 ಹೊಸ ಪೊಲೀಸ್ ಸಿಇಎನ್ ಠಾಣೆ ಆರಂಭಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.
- ನೀರಾವರಿಗೆ :ಮೇಕೆದಾಟು ಯೋಜನೆ ಶೀಘ್ರವೇ ಜಾರಿಗೆ ಕ್ರಮ. ಎತ್ತಿನಹೊಳೆ ಯೋಜನೆಯ ಎಲ್ಲ ಲಿಫ್ಟ್ ಕಾಮಗಾರಿ ಪೂರ್ಣಗೊಳಿಸಲು ತೀರ್ಮಾನ. ಕಳಸಾ-ಬಂಡೂರಿ ಯೋಜನೆ ಜಾರಿಯ ಅಡೆತಡೆ ನಿವಾರಣೆ
- 44 ಕಿಮೀ ನಮ್ಮ ಮೊಟ್ರೋ ಹೊಸ ಮಾರ್ಗ, 7 ಪಟ್ಟಣಗಳಲ್ಲಿ ಸ್ಯಾಟಲೈಟ್ ಟೌನ್‌ಶಿಫ್
- ಮಾಜಿ ದೇವದಾಸಿಯರ ಕಲ್ಯಾಣಕ್ಕಾಗಿ ವಿವಿಧ ಕಾರ್ಯಕ್ರಮಗಳನ್ನು ಅನುಷ್ಠಾನ • ಪ್ರಸ್ತುತ ನೀಡುತ್ತಿರುವ ಮಾಸಾಶನವನ್ನು 1500 ರೂ.ಗಳಿಂದ 2000 ರೂ.ಗಳಿಗೆ ಹೆಚ್ಚಿಸಲಾಗುವುದು. ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಮೂಲಕ ವಿಶೇಷ ಪ್ಯಾಕೇಜ್ ಅನ್ನು ನೀಡಲಾಗುವುದು. ನಿವೇಶನ ಹೊಂದಿರುವ ವಸತಿರಹಿತರಿಗೆ ರಾಜೀವ್ ಗಾಂಧಿ ವಸತಿ ನಿಗಮದಿಂದ ವಸತಿ ಸೌಲಭ್ಯ ಕಲ್ಪಿಸಲಾಗುವುದು. ಅವರ ಸಾಮಾಜಿಕ, ಆರ್ಥಿಕ ಸ್ಥಿತಿಗತಿ ಕುರಿತಂತೆ ನಿಖರ ಮಾಹಿತಿ ಸಂಗ್ರಹಿಸಿ, ಪುನರ್ವಸತಿ ಕಲ್ಪಿಸಲು ಮರುಸಮೀಕ್ಷೆ ನಡೆಸಲಾಗುವುದು.
- ವಕ್ಫ್ ಆಸ್ತಿಗಳ ಸಂರಕ್ಷಣೆ ಹಾಗೂ ಅಭಿವೃದ್ಧಿಗೆ 100 ಕೋಟಿ ರೂ. : ವಕ್ಫ್ ಆಸ್ತಿಗಳ ಸಂರಕ್ಷಣೆ ಹಾಗೂ ಅಭಿವೃದ್ಧಿಗೆ 100 ಕೋಟಿ ರೂ. ಒದಗಿಸಲು ನಿರ್ಧಾರ. ಜೈನ್ ಅಭಿವೃದ್ಧಿಗಾಗಿ 50 ಕೋಟಿ ರೂಪಾಯಿ ಅನುದಾನ ಜತೆಗೆ ಕ್ರಿಶ್ಚಿಯನ್ ಸಮುದಾಯದ ಅಭಿವೃದ್ಧಿಗೆ 200 ಕೋಟಿ ರೂ. ನೀಡಲಾಗುವುದು ಎಂದು ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ.
- 100 ಹಾಸಿಗೆಗಳ ತಾಲೂಕಾ ಆಸ್ಪತ್ರೆ ಆನೇಕಲ್, ನೆಲಮಂಗಲ, ಹೊಸಕೋಟೆ, ಶೃಂಗೇರಿ, ಖಾನಾಪುರ, ಶಿರಹಟ್ಟಿ, ಯಳಂದೂರು ತಾಲೂಕುಗಳಲ್ಲಿ ಒಟ್ಟು 280 ಕೋಟಿ ವೆಚ್ಚದಲ್ಲಿ 100 ಹಾಸಿಗೆಗಳ ತಾಲೂಕಾ ಆಸ್ಪತ್ರೆ ನಿರ್ಮಿಸಲಾಗುವುದು.
- ಮದ್ಯಪ್ರಿಯರಿಗೆ ಕರ್ನಾಟಕ ಸರ್ಕಾರ ಶಾಕ್ ನೀಡಿದೆ. ನೆರೆ ರಾಜ್ಯಗಳಲ್ಲಿನ ಮದ್ಯದ ಬೆಲೆ ಅನುಗುಣವಾಗಿ ಕರ್ನಾಟಕದಲ್ಲೂ ಎಲ್ಲ ವಿಧದ ಮದ್ಯದ ಬೆಲೆ ಹೆಚ್ಚಿಸಲಾಗುವುದು. ಬಿಯರ್ ಬೆಲೆಯು ಹೆಚ್ಚಾಗಲಿದೆ ಎಂದು ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
- 2024-25ನೇ ಸಾಲಿನಲ್ಲಿ ಯಾವ ಕ್ಷೇತ್ರಕ್ಕೆ ಎಷ್ಟು ಖರ್ಚು?ಸಾಲ ತೀರಿಕೆ-18 ಪೈಸೆ, ನೀರು ಪೂರೈಕೆ ಮತ್ತು ನೈರ್ಮಲ್ಯ – 3 ಪೈಸೆ, ಶಿಕ್ಷಣ-11ಪೈಸೆ, ಆರೋಗ್ಯ-4 ಪೈಸೆ, ಇತರೆ ಸಾಮಾಜಿಕ ಸೇವೆಗಳು- 3 ಪೈಸೆ, ಕೃಷಿ ನೀರಾವರಿ, ಮತ್ತು ಗ್ರಾಮೀಣಾಭಿವೃದ್ಧಿ- 14ಪೈಸೆ, ಇತರೆ ಆರ್ಥಿಕ ಸೇವೆಗಳು- 15ಪೈಸೆ, ಸಮಾಜ ಕಲ್ಯಾಣ-15 ಪೈಸೆ, ಇತರೆ ಸಾಮಾನ್ಯ ಸೇವೆಗಳು- 17 ಪೈಸೆ.
ಬಜೆಟ್ ನೇರ ಪ್ರಸಾರ : ಕರ್ನಾಟಕ ಬಜೆಟ್ ಅಧಿವೇಶನ: ವಿಧಾನಸಭೆ ಕಲಾಪದ ನೇರ ಪ್ರಸಾರ