ಇಂದು ರಾಜ್ಯ ಬಜೆಟ್ ಮಂಡನೆ : ಬೆಟ್ಟದಷ್ಟು ನಿರೀಕ್ಷೆ

ಬೆಂಗಳೂರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಚೊಚ್ಚಲ ಬಜೆಟ್ ಮಂಡಿಸಲಿದ್ದಾರೆ. ಮೊದಲ ಬಜೆಟ್​ನಲ್ಲಿ ಬೊಮ್ಮಾಯಿ ಯಾರಿಗೆ ಏನು ಕೊಡುತ್ತಾರೆ ಎಂಬ ಕುತೂಹಲ ಮೂಡಿದೆ.

ಇಂದು ಮಧ್ಯಾಹ್ನ 12.30 ರಿಂದ ಸಿಎಂ ವಿಧಾನಸಭೆಯಲ್ಲಿ 2022-23ನೇ ಸಾಲಿನ ಆಯವ್ಯಯ ಮಂಡಿಸಲಿದ್ದಾರೆ. ಇದಕ್ಕೂ ಮುನ್ನ ಬಜೆಟ್​ಗೆ ಅನುಮೋದನೆ ನೀಡಲು 12.10ಕ್ಕೆ ಸಚಿವ ಸಂಪುಟ ವಿಶೇಷ ಸಭೆ ನಡೆಯಲಿದೆ.

ಬೆಟ್ಟದಷ್ಟು ನಿರೀಕ್ಷೆ : ಸಿಎಂ ಬಸವರಾಜ ಬೊಮ್ಮಾಯಿ ಅವರು ಕರೊನಾ ಸಂಕಷ್ಟ ಕಾಲದಲ್ಲಿ ಸಮತೋಲಿತ ಆಯವ್ಯಯವನ್ನು ಮಂಡಿಸುವರೇ? ಜನಸಾಮಾನ್ಯರ ನಿರೀಕ್ಷೆಗಳಿಗೆ ಸ್ಪಂದಿಸುವರೆ? ಎಂಬ ನಿರೀಕ್ಷೆ ಗರಿಗೆದರಿದೆ. ಬಜೆಟ್ ಪೂರ್ವಭಾವಿಯಾಗಿ ಇಲಾಖಾವಾರು ಸಭೆ ನಡೆಸಿರುವ ಅವರು ಆಯಾ ಇಲಾಖೆಯ ಅಗತ್ಯಗಳು, ಕುಂದುಕೊರತೆಗಳನ್ನು ಪರಿಶೀಲಿಸಿದ್ದಾರೆ. ಕೋವಿಡ್ ಸಂಬಂಧಿತ ನಿರ್ಬಂಧಗಳು ಸಡಿಲಿಕೆಯಾಗಿರುವ ಪರಿಣಾಮ ಇತ್ತೀಚಿನ ಕೆಲ ತಿಂಗಳುಗಳಲ್ಲಿ ಆರ್ಥಿಕ ಚಟುವಟಿಕೆಗಳು ವೇಗ ಪಡೆದಿವೆಯಾದರೂ, ಕಳೆದ ಎರಡು ವರ್ಷಗಳಲ್ಲಿ ಕರೊನಾ ತಂದೊಡ್ಡಿದ ಸಂಕಷ್ಟದಿಂದ ಆದ ನಷ್ಟ ಅಷ್ಟಿಷ್ಟಲ್ಲ. ಹಾಗಾಗಿ, ಸಣ್ಣ, ಮಧ್ಯಮ, ಬೃಹತ್ ಕೈಗಾರಿಕೆ ಸೇರಿದಂತೆ ಎಲ್ಲ ರಂಗಗಳ ಪುನಶ್ಚೇತನಕ್ಕೆ ಈ ಬಜೆಟ್ ಹಾದಿಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಆರೋಗ್ಯ ವ್ಯವಸ್ಥೆಯನ್ನು ಸದಾ ಸನ್ನದ್ಧವಾಗಿ ಇರಿಸಿಕೊಳ್ಳುವ ಪಾಠವನ್ನು ಕರೊನಾ ಕಾಲ ಕಲಿಸಿದೆ. ಇಂದಿಗೂ, ಗ್ರಾಮೀಣ ಪ್ರದೇಶ ಹಾಗೂ ಹಲವು ತಾಲೂಕು ಕೇಂದ್ರಗಳು ಆರೋಗ್ಯದ ಮೂಲಸೌಕರ್ಯಕ್ಕಾಗಿ ಪರಿತಪಿಸುತ್ತಿರುವುದು ವಾಸ್ತವ. ಈ ನಿಟ್ಟಿನಲ್ಲಿ ಆರೋಗ್ಯ ವ್ಯವಸ್ಥೆ ಸುಧಾರಣೆಗೆ ಹೆಚ್ಚಿನ ಒತ್ತು ನೀಡಬೇಕಿದೆ. ಶೈಕ್ಷಣಿಕ ವಲಯವು ಹಲವು ಸ್ಥಿತ್ಯಂತರಗಳನ್ನು ಕಂಡಿದೆ. ಮೂಲಸೌಲಭ್ಯಗಳಿಲ್ಲದೆ ಸರಕಾರಿ ಶಾಲಾ – ಕಾಲೇಜ್ – ವಿವಿ – ಹಾಸ್ಟೇಲ್ ಗಳು ನರಳುತ್ತಿವೆ. ತರಾತುರಿಯಲ್ಲಿ
ರಾಷ್ಟ್ರೀಯ ಹೊಸ ಶಿಕ್ಷಣ ನೀತಿ ಜಾರಿ ಮಾಡಿರುವ ಸರಕಾರ ಅನೇಕ ದೋಷಗಳನ್ನು ನಿವಾರಿಸುವತ್ತ ಗಮನ ನೀಡುತ್ತಾ ಎಂಬ ನಿರೀಕ್ಷೆ ವಿದ್ಯಾರ್ಥಿ ಸಮುದಾಯದಲ್ಲಿದೆ.

ಕೃಷಿಉತ್ಪನ್ನಗಳಿಗೆ ನ್ಯಾಯಯುತ ಬೆಲೆ ಸಿಗದೆ ರೈತರು ಪರದಾಡುತ್ತಿದ್ದು, ಕೃಷಿ ವೆಚ್ಚವೂ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಉತ್ತಮ ಮಾರುಕಟ್ಟೆ ವ್ಯವಸ್ಥೆ, ಸ್ಪರ್ಧಾತ್ಮಕ ಬೆಲೆ ಕಲ್ಪಿಸುವ ಮೂಲಕ ಕೃಷಿಕರ ಶ್ರಮಕ್ಕೆ ನ್ಯಾಯ ಒದಗಿಸುವುದು ಅಗತ್ಯವಾಗಿದೆ. ಹವಾಮಾನ ಬದಲಾವಣೆಯಿಂದ ಪ್ರಾಕೃತಿಕ ವಿಕೋಪಗಳು ಹೆಚ್ಚಿದ್ದು, ಕಳೆದ ಐದು ವರ್ಷಗಳಲ್ಲಂತೂ ಅಪಾರ ಹಾನಿಯಾಗಿದೆ. ಇದಕ್ಕೆ ಬಜೆಟ್ ನಲ್ಲಿ ಯಾವರೀತಿ ಪರಿಹಾರ ನೀಡಲಿದ್ದಾರೆ ಎಂದು ಜನ ಕಾಯುತ್ತಿದ್ದಾರೆ.

ಜನರ ಮೇಲೆ ತೆರಿಗೆ ಭಾರವನ್ನು ಹಾಕದೆ, ಬಸ್ ಸೇರಿದಂತೆ ಯಾವುದೇ ಸಾರಿಗೆಗಳ ದರ ಏರಿಕೆ ಮಾಡದೆ, ವಿದ್ಯುತ್ ಸೇರಿದಂತೆ ಇತರ ದರಗಳನ್ನು ಏರಿಕೆ ಮಾಡದೆ ಸಂಪನ್ಮೂಲ ಕ್ರೋಢೀಕರಣಕ್ಕೆ ಬಜೆಟ್‍ನಲ್ಲಿ ಆದ್ಯತೆ ನೀಡುವ ಸಾಧ್ಯತೆ ಇದೆ. ಕರ್ನಾಟಕ ಬಜೆಟ್‍ನ ಗಾತ್ರ 2.50 ಲಕ್ಷ ಕೋಟಿ ದಾಟಲಿದೆ ಎಂದು ಅಂದಾಜಿಸಲಾಗಿದೆ. ಬಜೆಟ್‍ನಲ್ಲಿ ಯಾವ ಹೊಸ ಯೋಜನೆ ಘೋಷಣೆಯಾಗಲಿದೆ ಎಂಬ ಕುರಿತು ಮುಖ್ಯಮಂತ್ರಿಗಳು ಸುಳಿವು ಬಿಟ್ಟುಕೊಟ್ಟಿಲ್ಲ. ಚುನಾವಣೆ ಹತ್ತಿರವಿರುವುದರಿಂದ ಬಜೆಟ್ ಮೇಲೆ ಅಪಾರವಾದ ನಿರೀಕ್ಷೆ ಇದೆ.

ಅಡುಗೆ ಅನಿಲ, ಪೆಟ್ರೋಲ್, ಡಿಸೇಲ್, ದಿನಸಿ ವಸ್ತುಗಳ ಬೆಲೆ ಏರುತ್ತಲೆ ಇದೆ. ಹಾಗಾಗಿ ಈ ಬಾರಿಯಾದರು ಏರಿಕೆಗೆ ವಿರಾಮ ಹಾಕಬಹುದು ಎಂದು ಜನ ಕಾಯುತ್ತಿದ್ದಾರೆ. ನಿರುದ್ಯೋಗ ನಿವಾರಣೆ ಮಾಡುವುದಕ್ಕಾಗಿ ಉದ್ಯೋಗ ಸೃಷ್ಟಿಗೆ ಏನೆಲ್ಲಾ ಯೋಜನೆ ಹಾಕಬಹುದು ಎಂಬ ನಿರೀಕ್ಷೆಯಲ್ಲಿ ರಾಜ್ಯದ ಯುವಜನರಿದ್ದಾರೆ.

ಬಿಜೆಪಿ ಸರ್ಕಾರದ ಕಳೆದ ವರ್ಷದ ಬಜೆಟ್ ಘೋಷಣೆ ಪೈಕಿ ಹಲವು ವಿಚಾರಗಳಿಗೆ ಇನ್ನೂ ಚಾಲನೆ ಸಿಕ್ಕಿಲ್ಲ. ಕೆಲ ಸಣ್ಣಪುಟ್ಟ ವಿಚಾರಗಳಿಗೂ ಹಣಕಾಸು ಕೊರತೆ ಕಾರಣ ನೀಡಿ ಬಾಕಿ ಇಡಲಾಗಿದೆ. 2018-19ರಲ್ಲಿ ರಾಜ್ಯದ ಒಟ್ಟು ಸಾಲ 2,92,220 ಕೋಟಿ ರೂ. ಇತ್ತು. 2020-21ನೇ ವರ್ಷದಲ್ಲಿ ಅದು 3,68,692 ಕೋಟಿಗೆ ಏರಿಕೆಯಾಗಿತ್ತು. 2021-22ನೇ ಸಾಲಿಗೆ ಇದು 4,57,899 ಕೋಟಿಗೆ ಏರಿಕೆಯಾಗುವ ಸಾಧ್ಯತೆ ಇದೆ. ಸಾಲದ ನಡುವೆಯೂ ರಾಜ್ಯದ ಅಭಿವೃದ್ಧಿಗೆ ಯಾವ ರೀತಿ ಗಮನ ಕೊಡಲಿದ್ದಾರೆ ಎಂಬುದು ಮಹತ್ವದ ವಿಷಯವಾಗಿದೆ.

ಬಜೆಟ್ ಕುರಿತು ಕ್ಷಣ ಕ್ಷಣದ ಮಾಹಿತಿಗಾಗಿ ಜನಶಕ್ತಿ‌ ಮೀಡಿಯಾ ಗೆ (www.janashakthimedia.com) ಭೇಟಿ ಕೊಡಿ.

Donate Janashakthi Media

Leave a Reply

Your email address will not be published. Required fields are marked *