ಬೆಂಗಳೂರು : ಕರ್ನಾಟಕದಲ್ಲಿ 50,000 ಗಡಿ ದಾಟಿದ್ದ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ ಇದೀಗ 35 ಸಾವಿರದ ಆಸುಪಾಸಿನಲ್ಲಿದೆ. ಅರೇ ಇದೇನಿದು. ಕೋವಿಡ್ ಪ್ರಕರಣಗಳಲ್ಲಿ ಇಷ್ಟೊಂದು ಇಳಿಕೆ. ಲಾಕ್‌ಡೌನ್ ಹಾಗೂ ರಾಜ್ಯ ಸರಕಾರದ ಕಟ್ಟು ನಿಟ್ಟಿನ ಕ್ರಮಗಳಿಂದ ಕೋವಿಡ್ ಪ್ರಕಣದಲ್ಲಿ ಇಳಿಮುಖವಾಯಿತೆ? ಈ ಅಂಕಿ-ಸಂಖ್ಯೆ ನೆಚ್ಚಿಕೊಂಜಡು ರಾಜ್ಯದಲ್ಲಿ ಕೊವಿಡ್-19 ಪ್ರಭಾವ ತಗ್ಗಿದೆ ಎಂದು ಅಂದಾಜು ಹಾಕಿದರೆ ಅದು ಮೂರ್ಖತನದ ಕೆಲಸವಾಗುತ್ತೆ.
ಮೇ 17ರ ಅಂಕಿ-ಅಂಶಗಳ ಪ್ರಕಾರ,ಕಳೆದ 24 ಗಂಟೆಯ ಅವಧಿಯಲ್ಲಿ 38603 ಹೊಸ ಪ್ರಕರಣಗಳು ದಾಖಲಾಗಿವೆ. ಅಲ್ಲದೆ, 476 ಮಂದಿ ಮರಣ ಹೊಂದಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಅಧಿಕೃತವಾಗಿ ತಿಳಿಸಿದೆ. ರಾಜ್ಯದಲ್ಲಿ ಇದುವರೆಗೆ ಒಟ್ಟಾರೆಯಾಗಿ 22,42,065 ಕೋವಿಡ್ ಪ್ರಕರಣಗಳು ದಾಖಲಾಗಿವೆ. 16,16,092 ಕೋವಿಡ್ ಸೋಂಕಿತರು ಗುಣಮುಖರಾಗಿ ಚೇತರಿಸಿಕೊಂಡಿದ್ದಾರೆ. 6,03,639 ಸೋಂಕಿತರ ಸಕ್ರಿಯ ಪ್ರಕರಣಗಳು ಅಂದರೆ ಶೇ.39.70ರಷ್ಟು ಜಾಲ್ತಿಯಲ್ಲಿದ್ದು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಇದುವರೆಗೆ ರಾಜ್ಯದಲ್ಲಿ 22,313 ಮಂದಿ ಮರಣ ಹೊಂದಿದ್ದಾರೆ. ಎಂದು ಇಲಾಖೆಯು ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ : ವೆಂಟಿಲೇಟರ್ ಸಿಗದೇ ಸರಕಾರಿ ಆಸ್ಪತ್ರೆಯಲ್ಲಿ ಮೂರು ಮಂದಿ ಸಾವು
ಏಪ್ರಿಲ್ ಮೂರನೇ ವಾರದಲ್ಲಿ 50. ಸಾವಿರ ಸೋಂಕುಗಳು ಪತ್ತೆಯಾಗುತ್ತಿದ್ದವು. ಈಗ 35 ಸಾವಿರಕ್ಕೆ ಪ್ರಕರಣಗಳ ಸಂಖ್ಯೆ ಇಳಿದಿದೆ. ರಾಜ್ಯದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ ಇಳಿಮುಖ ಆಗಿರುವುದರ ಹಿಂದೆ ಒಂದು ಪ್ರಬಲ ಕಾರಣವಿದೆ. ಅದು ಏನು ಅಂದರೆ ಕೋವಿಡ್ ಪರೀಕ್ಷೆಯ ಬಗ್ಗೆ ತಗ್ಗಿದ ಪರಿಣಾಮ ಸೋಂಕಿನ ಪ್ರಮಾಣ ಇಳಿಕೆಯಾಗುತ್ತಿದೆ ಎಂಬುದು ಅಸಲಿ ಕಾರಣ.
ರಾಜ್ಯದಲ್ಲಿ ತಗ್ಗಿದ ಕೊರೊನಾವೈರಸ್ ಪರೀಕ್ಷೆ ವೇಗ : ಕರ್ನಾಟಕದಲ್ಲಿ ಕೊರೊನಾವೈರಸ್ ಸೋಂಕಿನ ತಪಾಸಣೆ ವೇಗವನ್ನು ತಗ್ಗಿಸಲಾಗಿದೆ. ಕಳೆದ ಐದು ದಿನದಲ್ಲಿನ ಮಾಹಿತೆಯನ್ನು ಹೆಕ್ಕಿ ನೋಡುವುದಾದರೆ. ಮೇ 12 ರಂದು 1,34,792 ಜನರಿಗೆ ಮಾಡಿಸಿದ್ದರೆ ನಂತರದ ದಿನಗಳಲ್ಲಿ ಕ್ರಮವಾಗಿ ಮೇ 13 ಕ್ಕೆ 1,27,668, ಮೇ 14 ಕ್ಕೆ 1,27,105, ಮೇ 15 ಕ್ಕೆ 1,18, 345, ಮೇ 16 ಕ್ಕೆ 1,13, 219 ಹೀಗೆ ಪರೀಕ್ಷೆಯಲ್ಲಿ ಇಳಿಕೆಯಾಗುತ್ತಿರುವುದನ್ನು ಕಾಣುತ್ತಿದ್ದೇವೆ. ಮೇ 17 ರಂದು 97, 236 ಕ್ಕೆ ಇಳದಿದೆ.
ಕಳೆದ ಏಪ್ರಿಲ್ 20ರಿಂದ ಈಚೆಗೆ ದಿನದಿಂದ ದಿನಕ್ಕೆ ಸೋಂಕಿನ ತಪಾಸಣೆ ಸಂಖ್ಯೆ ಇಳಿಮುಖವಾಗುತ್ತಿರುವುದು ಉತ್ತಮ ಲಕ್ಷಣವಲ್ಲ ಎಂದು ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಹಾಗೂ ತಾಂತ್ರಿಕ ಸಲಹಾ ಸಮಿತಿ ಸದಸ್ಯ ಡಾ.ಗಿರಿಧರ್ ಆರ್ ಬಾಬು ತಿಳಿಸಿದ್ದಾರೆ. ಈ ಹಂತದಲ್ಲಿ ಕೊರೊನಾವೈರಸ್ ಪರೀಕ್ಷೆಯನ್ನು ಕಡಿಮೆ ಮಾಡಿದಷ್ಟು ಸೋಂಕಿನ ತೀವ್ರತೆ ಬಗ್ಗೆ ಲೆಕ್ಕ ಸಿಗದಂತೆ ಆಗುತ್ತದೆ. ಬೆಂಗಳೂರಿನಂತಾ ನಗರದಲ್ಲಿ ಕೊವಿಡ್-19 ಸೋಂಕು ತಪಾಸಣೆ ಕಡಿಮೆಯಾದರೆ ಸೋಂಕಿತರ ಗರಿಷ್ಠ ಪ್ರಮಾಣವನ್ನು ಸ್ಪಷ್ಟವಾಗಿ ಹೇಳುವುದಕ್ಕೆ ಸಾಧ್ಯವಾಗುವುದಿಲ್ಲ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ಕೋವಿಡ್ ನಿರ್ವಹಣೆ : ಮೃತರ ವಿಚಾರದಲ್ಲಿ ಸುಳ್ಳು ಹೇಳಿ, ತನ್ನದೆ ಇಲಾಖೆಯ ಅಂಕಿ ಅಂಶಗಳಿಂದ ಬೆತ್ತಲಾದ ಗುಜರಾತ್ ಮಾಡೆಲ್
ರಾಜ್ಯದಲ್ಲಿ ಕೊರೊನಾ ಸೋಂಕಿತರ ಪ್ರಮಾಣ ತಗ್ಗಿದೆಯಾ? ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡುವ ಹೆಲ್ತ್ ಬುಲೆಟಿನ್ ಪ್ರಕಾರ, ರಾಜ್ಯದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ. ಆದರೆ ಸೋಂಕಿತ ಪ್ರಕರಣಗಳನ್ನು ನೋಡುವ ಮೊದಲು ಎಷ್ಟು ಜನರಿಗೆ ಕೊವಿಡ್-19 ಪರೀಕ್ಷೆ ಮಾಡಲಾಗಿದೆ ಎನ್ನುವುದನ್ನು ಒಮ್ಮೆ ಕಣ್ಣಾಡಿಸಿ ನೋಡಿ. ವೈದ್ಯಕೀಯ ಪರೀಕ್ಷೆ ಪ್ರಮಾಣ ಇಳಿಮುಖವಾದಲ್ಲಿ ಮಾತ್ರ ಸೋಂಕಿತ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ. ಸರಾಸರಿ ಸೋಂಕಿತರ ಸಂಖ್ಯೆ ಯಥಾವತ್ತಾಗಿದೆ ಎಂದು ಜಯದೇವ ಇನ್ಸ್ ಟಿಟ್ಯೂಟ್ ನಿರ್ದೇಶಕ ಡಾ. ಮಂಜುನಾಥ್ ಸಿಎನ್ ತಿಳಿಸಿದ್ದಾರೆ. ಕರ್ನಾಟಕ ಲಾಕ್‌ಡೌನ್‌ನಿಂದ ಖಂಡಿತವಾಗಿ ಪ್ರಯೋಜನವಾಗಲಿದೆ. ಆದರೆ ಯಾವುದೇ ಕಾರಣಕ್ಕೂ ಸೋಂಕಿನ ಪರೀಕ್ಷೆಯನ್ನು ಕಡಿಮೆ ಮಾಡುವಂತಿಲ್ಲ ಎಂದು ಹೇಳಿದ್ದಾರೆ.
ಲಸಿಕೆಗಾಗಿ ನಿಲ್ಲದ ಹಾಹಾಕಾರ : ಕೋವಿಡ್-19 ನ ಎರಡನೇ ಅಲೆಯ ಹೊಡೆತಕ್ಕೆ ನಲುಗಿರುವ ಕರ್ನಾಟಕಕ್ಕೆ ಮೂರನೆ ಅಲೆಯೂ ಅಪ್ಪಳಿಸುವ ಅಪಾಯಬಿದೆ. ಈ ನಡುವೆ ಕೋವಿಡ್-19 ಲಸಿಕೆಗೆ ಅರ್ಹತೆ ಇರುವ ಶೇ.82 ರಷ್ಟು ಮಂದಿ ಲಸಿಕೆ ಪಡೆಯುವುದಕ್ಕೆ ಕಾಯುತ್ತಿದ್ದಾರೆ.
ರಾಜ್ಯಾದ್ಯಂತ 5.11 ಕೋಟಿ ಮಂದಿ (18 ವರ್ಷದ ಮೇಲ್ಪಟ್ಟವರೂ ಸೇರಿ) ಲಸಿಕೆ ಪಡೆಯುವುದಕ್ಕೆ ಅರ್ಹರಿದ್ದಾರೆ. ಲಸಿಕೆ ಅಭಿಯಾನ ಪ್ರಾರಂಭವಾದಾಗಿನಿಂದ (ಜನವರಿ ತಿಂಗಳಿನಿಂದ) ಮೇ.16 ವರೆಗೂ 1,11,88,143 ಮಂದಿಗೆ ಲಸಿಕೆ ನೀಡಲಾಗಿದ್ದು, ಇನ್ನೂ 4.22 ಕೋಟಿ ಮಂದಿಗೆ ಲಸಿಕೆ ನೀಡಬೇಕಿದ್ದು, ಶೇ.82 ರಷ್ಟು ಮಂದಿ ಲಸಿಕೆಗಾಗಿ ಕಾಯುತ್ತಿದ್ದಾರೆ. ಈ ಪೈಕಿ 66.4 ಲಕ್ಷ ಮಂದಿ ಫಲಾನುಭವಿಗಳು ಎರಡನೇ ಡೋಸ್ ಗಾಗಿ ಕಾಯುತ್ತಿದ್ದಾರೆ. ಲಸಿಕೆ ಅಭೊಯಾನವನ್ನು ಚುರುಕುಗೊಳಿಸುವುದು ಆರೋಗ್ಯ ಇಲಾಖೆಗೆ ಸವಾಲಿನ ಸಂಗತಿಯಾಗಿದೆ.
ಆರೋಗ್ಯ ಇಲಾಖೆಯ ಮಾಹಿತಿಯ ಪ್ರಕಾರ 8.6 ಲಕ್ಷ ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್-19 ಲಸಿಕೆ ನೀಡುವ ಗುರಿ ಹೊಂದಲಾಗಿತ್ತು. ಆದರೆ ಈವರೆಗೂ 4,60,437 ಮಂದಿಗೆ ಅಷ್ಟೇ ಎರಡೂ ಡೋಸ್ ಗಳ ಲಸಿಕೆ ದೊರೆತಿದೆ. ಕನಿಷ್ಟ 2.4 ಲಕ್ಷ ಆರೋಗ್ಯ ಕಾಳಜಿ ಕಾರ್ಯಕರ್ತರು ಎರಡನೇ ಡೋಸ್ ಲಸಿಕೆಗೆ ಕಾಯುತ್ತಿದ್ದರೆ 1.6 ಲಕ್ಷ ಮಂದಿ ಇನ್ನೂ ಮೊದಲ ಡೋಸ್ ಗಾಗಿಯೇ ಕಾಯುತ್ತಿದ್ದಾರೆ. ಈ ಸಂಖ್ಯೆಗಳನ್ನು ತಲುಪುವುದಕ್ಕೆ ಸರ್ಕಾರಕ್ಕೆ ತಕ್ಷಣಕ್ಕೆ 5.6 ಲಕ್ಷ ಡೋಸ್ ಗಳಷ್ಟು ಲಸಿಕೆ ಅವಶ್ಯಕತೆ ಇದೆ.
ಸೋಮವಾರ ಒಟ್ಟು 67,582 ಮಂದಿಗೆ ಕೋವಿಡ್ ಲಸಿಕೆ ನೀಡಲಾಗಿದೆ. ಈ ಪೈಕಿ 16,107 ಮಂದಿ ಎರಡನೇ ಡೋಸ್ ಮತ್ತು 51,475 ಮಂದಿ ಮೊದಲ ಡೋಸ್ ಲಸಿಕೆ ಪಡೆದಿದ್ದಾರೆ. ಯಾರಿಗೂ ಗಂಭೀರ ಅಡ್ಡ ಪರಿಣಾಮ ಕಾಣಿಸಿಕೊಂಡಿಲ್ಲ. ಆರೋಗ್ಯ ಕಾರ್ಯಕರ್ತರು 1,077, ಮುಂಚೂಣಿ ಕಾರ್ಯಕರ್ತರು 4,100, 18 ವರ್ಷದಿಂದ 44 ವರ್ಷದೊಳಗಿನ 2,821, 45 ವರ್ಷ ಮೇಲ್ಪಟ್ಟ43,477 ಮಂದಿ ಮೊದಲ ಡೋಸ್ ಸ್ವೀಕರಿಸಿದ್ದಾರೆ. ಆರೋಗ್ಯ ಕಾರ್ಯಕರ್ತರು 645, ಮುಂಚೂಣಿ ಕಾರ್ಯಕರ್ತರು 925, 45 ವರ್ಷ ಮೇಲ್ಪಟ್ಟ14,537 ಮಂದಿ ಎರಡನೇ ಡೋಸ್ ಸ್ವೀಕರಿಸಿದ್ದಾರೆ.