ಬೆಂಗಳೂರು: ಕರ್ನಾಟಕ ಸೇರಿದಂತೆ ದೇಶಾದ್ಯಂತ ಕೊರೋನಾ ಎರಡನೇ ಅಲೆ ತೀವ್ರವಾಗಿ ಹೆಚ್ಚಳವಾಗಿದ್ದರಿಂದ ಲಾಕ್ ಡೌನ್ ಮಾಡುವುದು ಅನಿವಾರ್ಯವಾಗಿತ್ತು. ಈ ಲಾಕ್ ಡೌನ್ ನಿಂದ ಹಲವು ಅಸಂಘಟಿತ ವಲಯಗಳಿಗೆ, ರೈತರಿಗೆ, ದಿನಗೂಲಿ ನೌಕರರಿಗೆ, ಬಡವರು-ನಿರ್ಗತಿಕರಿಗೆ ತೀವ್ರ ಸಂಕಷ್ಟವಾಗಿರುವ ಹಿನ್ನೆಲೆಯಲ್ಲಿ ಸರ್ಕಾರ 1,250 ಕೋಟಿ ರೂ.ಗೂ ಅಧಿಕ ವಿಶೇಷ ಪರಿಹಾರ ಪ್ಯಾಕೇಜ್ ನ್ನು ವಿವಿಧ ವರ್ಗಗಳ ಹಿತರಕ್ಷಣೆಗೆ ಬಿಡುಗಡೆ ಮಾಡಿದೆ.
ಇಂದು ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಇಂದು ಸಚಿವ ಸಂಪುಟದ ಸಹೋದ್ಯೋಗಿಗಳ ಜೊತೆ ಸಭೆ ನಡೆಸಿ ಚರ್ಚೆ ಮಾಡಿ ತೆಗೆದುಕೊಂಡ ತೀರ್ಮಾನಗಳು, ಪರಿಹಾರಗಳನ್ನು ಮಾಧ್ಯಮ ಪ್ರತಿನಿಧಿಗಳ ಮುಂದೆ ಪ್ರಕಟಿಸಿದರು.
ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದ್ದು: ಕೊರೋನಾ ಸೋಂಕಿನ ತೀವ್ರವಾದ ಎರಡನೇ ಅಲೆಯಿಂದ ತಪ್ಪಿಸಿಕೊಳ್ಳಲು ಜಾರಿ ಮಾಡಿರುವ ಲಾಕ್ ಡೌನ್ ಮೇ 24ರವರೆಗೆ ಜಾರಿಯಲ್ಲಿದ್ದು, ರಾಜ್ಯದ ಜನತೆಯ ಆರೋಗ್ಯ ಹಿತದೃಷ್ಟಿಯಿಂದ ಈ ತೀರ್ಮಾನ ತೆಗೆದುಕೊಂಡೆವು. ಈ ನಿರ್ಬಂಧದಿಂದ ವ್ಯಾಪಾರ-ವಾಣಿಜ್ಯ ಚಟುವಟಿಕೆಗಳು ಕ್ಷೀಣಿಸಿ ಸಮಾಜದ ಹಲವು ವರ್ಗಗಳ ಜನರ ಬದುಕಿನ ಮೇಲೆ ತೀವ್ರ ಹೊಡೆತ ಬಿದ್ದಿರುವ ಬಗ್ಗೆ ಸರ್ಕಾರಕ್ಕೆ ಅರಿವಿದೆ, ಸರ್ಕಾರ ಯಾವತ್ತಿಗೂ ಜನರ ಪರವಾಗಿರುತ್ತದೆ ಎಂದು ಆಶ್ವಾಸನೆ ನೀಡುತ್ತೇನೆ ಎಂದರು.
ಜನಶಕ್ತಿ ಮೀಡಿಯಾ ವಾಟ್ಸಪ್ ಸೇರಿಕೊಳ್ಳಲು ಈ ಲಿಂಕ್ ಕ್ಲಿಕ್
ಮುಖ್ಯಮಂತ್ರಿಗಳು ಇಂದು ಪ್ರಕಟಿಸಿದ ಪರಿಹಾರ ಪ್ಯಾಕೇಜ್ ನಲ್ಲಿ ಯಾರ್ಯಾರಿಗೆ ಎಷ್ಟೆಷ್ಟು?: 1,250 ಕೋಟಿಗೂ ಹೆಚ್ಚು ವಿಶೇಷ ಆರ್ಥಿಕ ಪ್ಯಾಕೇಜ್ ನಲ್ಲಿ ಸರ್ಕಾರದಿಂದ ಹೊಸ ಕಾರ್ಯಕ್ರಮ ಮಾಡಲು ತೀರ್ಮಾನಿಸಿದೆ. ಸರಕಾರ ವಿಶೇಷ ಪ್ಯಾಕೇಜ್ ಬುತ್ತಿಯಲ್ಲಿ ಯಾರಪಾಲು ಎಷ್ಟು ಎಂಬುದು ಈ ಕೆಳಗಿನಂತಿದೆ.
ರಾಜ್ಯದ ಅನೇಕ ಜಿಲ್ಲೆಗಳಲ್ಲಿನ ಹೂವು ಬೆಳೆಗಾರರಿಗೆ ಪ್ರತಿ ಹೆಕ್ಟೇರ್ ಹೂವು ಹಾನಿಗೆ 10 ಸಾವಿರದಂತೆ ಸಹಾಯಧನ-ಇದರಿಂದ ಸುಮಾರು 20 ಸಾವಿರ ರೈತರಿಗೆ ಇದರಿಂದ ಸಹಾಯ-12.73 ಕೋಟಿ ರೂ ಇದರಿಂದ ಸರ್ಕಾರಕ್ಕೆ ಖರ್ಚು.
-ಹಣ್ಣು ಮತ್ತು ತರಕಾರಿ ಬೆಳೆಗಾರರಿಗೆ ಉಂಟಾಗಿರುವ ನಷ್ಟಕ್ಕೆ ಕನಿಷ್ಠ 1 ಹೆಕ್ಟೇರ್ ನಿಂದ ಪ್ರತಿ ಹೆಕ್ಟೇರ್ ಗೆ 10 ಸಾವಿರ ರೂಪಾಯಿಗಳಂತೆ ಧನಸಹಾಯ, ಇದರಿಂದ 60ರಿಂದ 70 ಸಾವಿರ ರೈತರಿಗೆ ಅನುಕೂಲ-70 ಕೋಟಿ ರೂ ಖರ್ಚು.
-ಆಟೋ, ಟ್ಯಾಕ್ಸಿ, ಮ್ಯಾಕ್ಸಿ ಕ್ಯಾಬ್ ಚಾಲಕರಿಗೆ, ಲೈಸೆನ್ಸ್ ಹೊಂದಿರುವವರಿಗೆ ನೋಂದಣಿ ಮಾಡಿಸಿದ ಪ್ರತಿಯೊಬ್ಬ ಚಾಲಕನಿಗೆ ತಲಾ 3 ಸಾವಿರ ರೂಪಾಯಿಗಳಂತೆ ಸರ್ಕಾರಕ್ಕೆ 65 ಕೋಟಿ ರೂ.ಖರ್ಚು.
-ಕಟ್ಟಡ ಕಾರ್ಮಿಕರಿಗೆ ತಲಾ 3 ಸಾವಿರದಂತೆ ಕರ್ನಾಟಕ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಣಿ ಮಾಡಿಸಿಕೊಂಡವರಿಗೆ ಕೊಡಲು ತೀರ್ಮಾನ ಇದಕ್ಕೆ 494 ಕೋಟಿ ರೂ ಖರ್ಚು.
-ಅಸಂಘಟಿತ ವಲಯ ಕಾರ್ಮಿಕರಿಗೆ ತಲಾ 2 ಸಾವಿರ ರೂಪಾಯಿಗಳಂತೆ 3 ಲಕ್ಷದ 5 ಸಾವಿರ ಜನಕ್ಕೆ 61 ಕೋಟಿ ರೂಪಾಯಿ ಖರ್ಚು ಮಾಡಲು ಸರ್ಕಾರ ತೀರ್ಮಾನ
-ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುವವರಿಗೆ ತೊಂದರೆಯಲ್ಲಿದ್ದಾರೆ ಎಂಬ ಕಾರಣಕ್ಕೆ ತಲಾ 2 ಸಾವಿರ ರೂಪಾಯಿಗಳಂತೆ 2 ಲಕ್ಷದ 20 ಸಾವಿರ ಜನರಿಗೆ 45 ಕೋಟಿ ರೂಪಾಯಿ ಖರ್ಚಿನಂತೆ ನೀಡಲಿದ್ದೇವೆ.
-ಕಲಾವಿದರು, ಕಲಾವಿದರ ತಂಡಗಳಿಗೆ ತಲಾ 3 ಸಾವಿರ ರೂಪಾಯಿಗಳಂತೆ 16 ಸಾವಿರ ಜನಕ್ಕೆ ಸರ್ಕಾರ ಧನಸಹಾಯ ನೀಡಲಿದ್ದು 4 ಕೋಟಿ 85 ಲಕ್ಷ ಸರ್ಕಾರ ವಿನಿಯೋಗಿಸಲಿದೆ.
-ರೈತರು, ಸ್ವಸಹಾಯ ಸಂಘಗಳು, ಪ್ರಾಥಮಿಕ ಕೃಷಿ ಪತ್ತಿನ ಬ್ಯಾಂಕುಗಳು, ಭೂ ಅಭಿವೃದ್ಧಿ ಬ್ಯಾಂಕುಗಳಿಂದ ಸಾಲ ಪಡೆದಿರುವ ರೈತರ ಸಣ್ಣ ಮತ್ತು ಮಧ್ಯಮ ಗಾತ್ರದ ಸಾಲ ಮರುಪಾವತಿ ದಿನಾಂಕ 1.5.2020ರಿಂದ ಮರುಪಾವತಿ ಸಾಲದ ಕಂತಿನ ದಿನಾಂಕವನ್ನು 31.7.2021ರವರೆಗೆ ವಿಸ್ತರಣೆ, 4.25 ಲಕ್ಷ ಜನರಿಗೆ ಇದರಿಂದ ಅನುಕೂಲ, ಸುಮಾರು 135 ಕೋಟಿ ರೂ ಖರ್ಚು
-ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ಕೇಂದ್ರ ಸರ್ಕಾರದಿಂದ ಮೇ ಮತ್ತು ಜೂನ್ ತಿಂಗಳಿಗೆ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡು ಹೊಂದಿರುವವರಿಗೆ 5 ಕೆಜಿ ಅಕ್ಕಿ ಉಚಿತವಾಗಿ ನೀಡಲಾಗುತ್ತಿದ್ದು, ರಾಜ್ಯದ 30 ಲಕ್ಷ ಜನರಿಗೆ ಹೆಚ್ಚುವರಿಯಾಗಿ ಈ ಯೋಜನೆ ನೀಡಲಾಗಿದ್ದು ಇದಕ್ಕಾಗಿ ಸರ್ಕಾರ 180 ಕೋಟಿ ಖರ್ಚು ಮಾಡುತ್ತಿದೆ .
ಪತ್ರಿಕಾಗೋಷ್ಠಿಯಲ್ಲಿ ಆರೋಗ್ಯ ಸಚಿವ ಡಾ. ಸುಧಾಕರ್. ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಡಾ. ಅಶ್ವಥ್ ನಾರಾಯಣ್, ಗೃಹಸಚಿವ ಬಸವರಾಜ ಬೊಮ್ಮಾಯಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.