ಕರ್ನಾಟಕದಲ್ಲಿ ಬಡತನ, ಹಸಿವು ಮತ್ತು ಅಪೌಷ್ಟಿಕತೆಯ ಅಟ್ಟಹಾಸ

ಪ್ರೊ. ಟಿ. ಆರ್. ಚಂದ್ರಶೇಖರ

ನೀತಿ ಆಯೋಗವು ಭಾರತದ 28 ರಾಜ್ಯಗಳು ಮತ್ತು ಅದರ ಜಿಲ್ಲೆಗಳು ಹಾಗೂ 8 ಕೇಂದ್ರಾಡಳಿತ ಪ್ರದೇಶಗಳ ಬಹುಮುಖಿ ಬಡತನ ಸೂಚ್ಯಂಕಗಳನ್ನು ಸಿದ್ಧಪಡಿಸಿರುವ ವರದಿಯನ್ನು ಬಿಡುಗಡೆ ಮಾಡಿದೆ. ಈ ಸೂಚ್ಯಂಕವು ಆರೋಗ್ಯ, ಶಿಕ್ಷಣ ಮತ್ತು ಜೀವನಮಟ್ಟ ಕ್ಷೇತ್ರಗಳ 12 ಸೂಚಿಗಳನ್ನು ಆಧರಿಸಿದ್ದಾಗಿದೆ. ಮಾನವ ಅಭಿವೃದ್ಧಿ ಸೂಚ್ಯಂಕವು ದೇಶದ ಸಾಧನೆಯನ್ನು ಮಾಪನ ಮಾಡಿದರೆ ಬಹುಮುಖಿ ಬಡತನ ಸೂಚ್ಯಂಕವು ದೇಶದಲ್ಲಿನ ಜನರ ದುಸ್ಥಿತಿಯನ್ನು ಮಾಪನ ಮಾಡುವ ಕ್ರಮವಾಗಿದೆ. ಈ ಸೂಚ್ಯಂಕದ ಪ್ರಕಾರ ದೇಶದ 30 ರಾಜ್ಯಗಳ ಪೈಕಿ ಈ ಸೂಚ್ಯಂಕದಲ್ಲಿ ಕರ್ನಾಟಕದ ಸ್ಥಾನ 19 (ಶೇ.13.16). ಒಟ್ಟಾರೆ ಬಹುಮುಖಿ ಬಡತನಕ್ಕೆ ಆರೋಗ್ಯ ಕ್ಷೇತ್ರದಲ್ಲಿನ ಕೊರತೆಯ ಕಾಣಿಕೆಯು ಅತ್ಯಧಿಕವಾಗಿದೆ. ಈ ಕ್ಷೇತ್ರದಲ್ಲಿ ಪೌಷ್ಟಿಕತೆ ಕೊರತೆಯ ಕಾಣಿಕೆ ಶೇ. 28.1 ರಷ್ಟಿದ್ದರೆ ತಾಯಂದಿರ ಆರೋಗ್ಯದಲ್ಲಿನ ಕೊರತೆಯ ಕಾಣಿಕೆ ಶೇ. 10.4 ರಷ್ಟಿದೆ. ರಾಜ್ಯದ ಒಟ್ಟು ಜನಸಂಖ್ಯೆಯ ಶೇ. 61.3 ರಷ್ಟಿರುವ ಮಕ್ಕಳು ಮತ್ತು ಮಹಿಳೆಯರಲ್ಲಿನ ತೀವ್ರತರದ ಅನಿಮಿಯವು ಬಹುಮುಖಿ ಬಡತನಕ್ಕೆ ಒಂದು ಮುಖ್ಯ ಕಾರಣವಾಗಿದೆ. ಕರ್ನಾಟಕದ 30 ಜಿಲ್ಲೆಗಳಲ್ಲಿ ಒಟ್ಟಾರೆ ಬಹುಮುಖಿ ಬಡತನ ಎದುರಿಸುತ್ತಿರುವವರ ಪ್ರಮಾಣ ಶೇ. 20 ಕ್ಕಿಂತ ಅಧಿಕವಿರುವ 8 ಜಿಲ್ಲೆಗಳಲ್ಲಿ ಐದು ಕಲ್ಯಾಣ ಕರ್ನಾಟಕ ವಿಭಾಗದಲ್ಲಿದ್ದರೆ ಮೂರು ಬೆಳಗಾವಿ ವಿಭಾಗದಲ್ಲಿವೆ.

ಇಂದು ನಮ್ಮ ದೇಶದ ಆಳುವ ಪಕ್ಷಕ್ಕೆ ಬಡತನ, ಹಸಿವು, ಮಕ್ಕಳ ಮತ್ತು ಮಹಿಳೆಯರಲ್ಲಿನ ಅಪೌಷ್ಟಿಕತೆಗಳು ಸಮಸ್ಯೆಗಳಾಗಿ ಕಾಣುತ್ತಿಲ್ಲ. ಅಭಿವೃದ್ಧಿ ಎಂದರೆ ಜಿಎಸ್‌ಡಿಪಿ(ಜಿಡಿಪಿ), ಬಂಡವಾಳ, ಉತ್ಪಾದನೆ ಮತ್ತು ಮೂಲಸೌಕರ್ಯಗಳು ಎಂದು ಸರ್ಕಾರವು ಭಾವಿಸಿದೆ. ಆದರೆ ಇಂದು ಖಚಿತವಾಗಿರುವಂತೆ ಅಭಿವೃದ್ಧಿ ಎನ್ನುವುದು ಜನರ ಬದುಕಿಗೆ ಸಂಬಂಧಿಸಿದ್ದು ಎನ್ನುವುದಾಗಿದೆ. ಒಟ್ಟು ಜನಸಂಖ್ಯೆಯ ಶೇ. 37.79 ರಷ್ಟು ಜನರು ಬಹುಮುಖಿ ಬಡತನವನ್ನು ಎದುರಿಸುತ್ತಿರುವ ಮತ್ತು ದೇಶದಲ್ಲಿಯೇ 2019-2020ರಲ್ಲಿ ಅತ್ಯಂತ ಕೆಳಮಟ್ಟದ ತಲಾವರಮಾನ(ರೂ.70,419)ವಿರುವ ಉತ್ತರ ಪ್ರದೇಶದಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಪ್ರಧಾನಮಂತ್ರಿಗೆ ಇಂದು ಅಭಿವೃದ್ಧಿಯ ಆದ್ಯತೆಯಾಗಿದೆ. ಹೀಗೆ ಇಂದು ದೇಶದಲ್ಲಿ ಅಭಿವೃದ್ಧಿಯ ಆದ್ಯತೆಗಳನ್ನು ವಿಕೃತಗೊಳಿಸಲಾಗುತ್ತಿದೆ. ಈ ಕಾರಣಕ್ಕೆ ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತದ ಸ್ಥಾನ 2020ರಲ್ಲಿ 94 ರಲ್ಲಿದ್ದುದು 2021ರಲ್ಲಿ 101ಕ್ಕಿಳಿದಿದೆ. ಇದೇ ರೀತಿಯಲ್ಲಿ ಹಸಿವನ್ನು ಸೂಚಿಸುವ ಮಕ್ಕಳು ಮತ್ತು ಮಹಿಳೆಯರಲ್ಲಿನ ಅನಿಮಿಯ(ಅಪೌಷ್ಟಿಕತೆ) ಭಾರತದಲ್ಲಿ 2015-16 ರಿಂದ 2019-2021ರ ನಡುವಿನ ಮೋದಿ ಪರ್ವದಲ್ಲಿ ತೀವ್ರ ಏರಿಕೆಯಾಗಿದೆ. ಭಾರತದಲ್ಲಿ 15 ರಿಂದ 49 ವರ್ಷಗಳ ವಯೋಮಾನದ ಒಟ್ಟು ಮಹಿಳೆಯಲ್ಲಿನ ಅನಿಮಿಯ ಎದುರಿಸುತ್ತಿರುವವರ ಪ್ರಮಾಣ 2015-16ರಲ್ಲಿ ಶೇ. 58.6 ರಷ್ಟಿದ್ದುದು 2019-2021ರಲ್ಲಿ ಶೇ. 67.1 ಕ್ಕೇರಿದೆ. ಭಾರತದಲ್ಲಿನ 6 ರಿಂದ 59 ತಿಂಗಳು ವಯೋಮಾನದ ಒಟ್ಟು ಮಕ್ಕಳಲ್ಲಿ ಅನಿಮಿಯ ಎದುರಿಸುತ್ತಿರುವವರ ಪ್ರಮಾಣ 2015-16ರಲ್ಲಿ ಶೇ. 54.1 ರಷ್ಟಿದ್ದುದು 2019-2021ರಲ್ಲಿ ಶೇ. 59ಕ್ಕೇರಿದೆ. ಒಟ್ಟು ಗರ್ಭಿಣಿ ಮಹಿಳೆಯರಲ್ಲಿನ ಅನಿಮಿಯ 2019-2021ರಲ್ಲಿ ಶೇ. 50.4 ರಷ್ಟಿದೆ (ಮೂಲ: ಭಾರತ ಸರ್ಕಾರದ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ 5).

ಇದೀಗ ನೀತಿ ಆಯೋಗವು ಭಾರತದ 28 ರಾಜ್ಯಗಳು ಮತ್ತು ಅದರ ಜಿಲ್ಲೆಗಳು ಹಾಗೂ 8 ಕೇಂದ್ರಾಡಳಿತ ಪ್ರದೇಶಗಳ ಬಹುಮುಖಿ ಬಡತನ ಸೂಚ್ಯಂಕಗಳನ್ನು 2015-16ರ ಎನ್.ಎಫ್.ಎಚ್.ಎಸ್-4 (ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ) ರ ಅಂಕಿಸಂಖ್ಯೆಗಳನ್ನು ಬಳಸಿಕೊಂಡು ಸಿದ್ಧಪಡಿಸಿರುವ ವರದಿಯನ್ನು ಬಿಡುಗಡೆ ಮಾಡಿದೆ. ಈ ಸೂಚ್ಯಂಕವು ಆರೋಗ್ಯ, ಶಿಕ್ಷಣ ಮತ್ತು ಜೀವನಮಟ್ಟ ಕ್ಷೇತ್ರಗಳ 12 ಸೂಚಿಗಳನ್ನು ಆಧರಿಸಿದ್ದಾಗಿದೆ. ಮಾನವ ಅಭಿವೃದ್ಧಿ ಸೂಚ್ಯಂಕವು ದೇಶದ ಸಾಧನೆಯನ್ನು ಮಾಪನ ಮಾಡಿದರೆ ಬಹುಮುಖಿ ಬಡತನ ಸೂಚ್ಯಂಕವು ದೇಶದಲ್ಲಿನ ಜನರ ದುಸ್ಥಿತಿಯನ್ನು ಮಾಪನ ಮಾಡುವ ಕ್ರಮವಾಗಿದೆ. ಈ ಸೂಚ್ಯಂಕದ ಪ್ರಕಾರ ದೇಶದ 30 ರಾಜ್ಯಗಳ ಪೈಕಿ ಅತ್ಯಧಿಕ ಬಹುಮುಖಿ ಬಡತನದ ಸ್ಥಾನದಲ್ಲಿ ಬಿಹಾರವಿದ್ದರೆ(ಶೇ. 51.91) ಮೂರನೆಯ ಅತಿ ಹೆಚ್ಚಿನ ಬಡವರ ಸ್ಥಾನದಲ್ಲಿ ಉತ್ತರ ಪ್ರದೇಶವಿದೆ(37.79). ಈ ಸೂಚ್ಯಂಕದಲ್ಲಿ ಕರ್ನಾಟಕದ ಸ್ಥಾನ 19(ಶೇ.13.16) ಮತ್ತು ಅತ್ಯಂತ ಕಡಿಮೆ ಬಡತನದ ರಾಜ್ಯದಲ್ಲಿ ಕೇರಳ(ಶೇ.0.71)ಮೊದಲನೆಯ ಸ್ಥಾನದಲ್ಲಿದೆ. (ವಿವಿಧ ರಾಜ್ಯಗಳ ಬಡತನದ ಪ್ರಮಾಣವನ್ನು ಕೋಷ್ಟಕ-1 ರಲ್ಲಿ ಕೊಡಲಾಗಿದೆ.)

ಕೋಷ್ಟಕ-1 :ಯಾವ ರಾಜ್ಯದಲ್ಲಿ ಎಷ್ಟು % ಬಡವರು

ರಾಜ್ಯ % ರಾಜ್ಯ % ರಾಜ್ಯ % ರಾಜ್ಯ % ರಾಜ್ಯ %
ಬಿಹಾರ 51.9 ಛತ್ತೀಸ್‌ ಘಡ 29.9 ಗುಜರಾತ್ 18.6 ಕರ್ನಾಟಕ 13.2 ಪಂಜಾಬ್ 5.6
ಜಾರ್ಖಂಡ್ 42.2 ರಾಜಸ್ಥಾನ 29.5 ಮಣಿಪುರ 17.9 ಜಮ್ಮು-ಕಾಶ್ಮೀರ 12.6 ತಮಿಳುನಾಡು 4.9
ಉತ್ತರ ಪ್ರದೇಶ 37.8 ಒಡಿಶಾ 29.4 ಉತ್ತರಾಖಂಡ 17.7 ಆಂಧ್ರ ಪ್ರದೇಶ 12.3 ದೆಹಲಿ 4.8
ಮಧ್ಯಪ್ರದೇಶ 36.7 ನಾಗಾಲ್ಯಾಂಡ್ 25.2 ತ್ರಿಪುರಾ 16.7 ಹರಿಯಾಣ 12.3 ಸಿಕ್ಕಿಂ 3.8
ಮೇಘಾಲಯ 32.7 ಅರುಣಾಚಲ ಪ್ರ. 24.3 ಮಹಾರಾಷ್ಟ್ರ 14.9 ಮಿಜೋರಾಂ 9.8 ಗೋವಾ 3.8
ಆಸ್ಸಾಂ 32.7 ಪಶ್ಚಿಮ ಬಂಗಾಳ 21.4 ತೆಲಂಗಾಣ 13.7 ಹಿಮಾಚಲ ಪ್ರ. 7.6 ಕೇರಳ 0.7

 

ಈ ವರದಿಯಲ್ಲಿನ ಕರ್ನಾಟಕ ಮತ್ತು ಅದರ 30 ಜಿಲ್ಲೆಗಳಿಗೆ ಸಂಬಂಧಿಸಿದ ಬಹುಮುಖಿ ಬಡತನದ ಸ್ಥಿತಿಗತಿಯನ್ನು ವಿವರವಾಗಿ ಚರ್ಚಿಸೋಣ. ಈ ಸೂಚ್ಯಂಕದ ಪ್ರಕಾರ ಭಾರತದಲ್ಲಿ ಬಹುಮುಖಿ ಬಡತನ ಎದುರಿಸುತ್ತಿರುವವರ ಪ್ರಮಾಣ ಶೇ. 25.1 ರಷ್ಟಿದ್ದರೆ ಕರ್ನಾಟಕದಲ್ಲಿ ಇದು ಶೇ. 13.6. ಈ ಸೂಚ್ಯಂಕವು ಬಡತನವನ್ನು ಎದುರಿಸುತ್ತಿರುವವರ ಪ್ರಮಾಣವನ್ನು ತೋರಿಸುವುದಲ್ಲದೆ ಬಡವರು ಎದುರಿಸುತ್ತಿರುವ ಬಡತನದ ತೀವ್ರತೆಯನ್ನು ತೋರಿಸುತ್ತದೆ. ಉದಾ: ಭಾರತದಲ್ಲಿ ಬಹುಮುಖಿ ಬಡತನ ಒಳಗೊಳ್ಳುವ 12 ಸೂಚಿಗಳಲ್ಲಿನ ಒಟ್ಟು ಕೊರತೆಯ ಪ್ರಮಾಣ ಶೇ. 47.13 ರಷ್ಟಿದ್ದರೆ ಕರ್ನಾಟಕದಲ್ಲಿ ಇದರ ಪ್ರಮಾಣ ಶೇ. 42.7. ಈಗಾಗಲೇ ಹೇಳಿರುವಂತೆ ಈ ಸೂಚ್ಯಂಕವನ್ನು ಆರೋಗ್ಯ ಕ್ಷೇತ್ರದ ಪೌಷ್ಟಿಕತೆ, ಹದಿಹರೆಯದ ಮಕ್ಕಳ ಮರಣ ಪ್ರಮಾಣ ಮತ್ತು ತಾಯಂದಿರ ಆರೋಗ್ಯ, ಶಿಕ್ಷಣ ಕ್ಷೇತ್ರದಲ್ಲಿನ ಪೂರೈಸಿದ ಶಾಲಾ ವರ್ಷಗಳು ಮತ್ತು ಶಾಲಾ ಹಾಜರಾತಿ ಹಾಗೂ ಜೀವನಮಟ್ಟಕ್ಕೆ ಸಂಬಂಧಿಸಿದ ಅಡುಗೆ ಇಂಧನ, ಕುಡಿಯುವ ನೀರು, ಶೌಚಾಲಯ, ವಿದ್ಯುತ್ ಸಂಪರ್ಕ, ವಸತಿ, ಆಸ್ತಿ ಮತ್ತು ಬ್ಯಾಂಕ್ ಖಾತೆಯಿರುವವರ ಪ್ರಮಾಣ ಎಂಬ ಒಟ್ಟು 12 ಸೂಚಿಗಳನ್ನು ಬಳಸಿ ಲೆಕ್ಕ ಹಾಕಲಾಗಿದೆ. ಈ 12 ಸೂಚಿಗಳಲ್ಲಿನ ಕೊರತೆಯನ್ನು ಗಣನೆ ಮಾಡಿ ಸೂಚ್ಯಂಕವನ್ನು ರೂಪಿಸಲಾಗುತ್ತದೆ. (ಬಹುಮುಖಿ ಬಡತನದ ಪ್ರಮಾಣ, ತೀವ್ರತೆ ಮತ್ತು ಸೂಚ್ಯಂಕಗಳನ್ನು ಹೇಗೆ ಅಳೆಯಲಾಗುವುದು ಎಂಬುದನ್ನು ‘ಬಹುಮುಖಿ ಬಡತನವನ್ನು ಹೇಗೆ ಅಳೆಯಲಾಗುತ್ತದೆ?’ ಎಂಬ ಬಾಕ್ಸ್ ನಲ್ಲಿ ಕೊಡಲಾಗಿದೆ)

ಬಹುಮುಖಿ ಬಡತನ ಸೂಚ್ಯಂಕವನ್ನು ಹೇಗೆ ಅಳೆಯಲಾಗುತ್ತದೆ?

ಒಂದು ಕುಟುಂಬದ ಕೊರತೆ ಇರುವ ಎಲ್ಲ ಸೂಚಕಗಳ ಸೂಚ್ಯಂಕ ಪಾಲನ್ನು ಕೂಡಿಸಿದಾಗ ಅದು 0.33 (ಅಥವಾ 33%)ಕ್ಕಿಂತ ಹೆಚ್ಚು ಬಂದರೆ ಅದನ್ನು ಬಡ ಕುಟುಂಬ ಮತ್ತು ಆ ಕುಟುಂಬದ ಎಲ್ಲರನ್ನು ಬಡವರು ಎಂದು ಪರಿಗಣಿಸಲಾಗುತ್ತದೆ. ಉದಾಹರಣೆಗೆ ಗರ್ಭಿಣಿಯ ಆರೈಕೆ (8.335%), ಶಾಲಾ ಹಾಜರಾತಿ (16.67%), ಅಡುಗೆ ಇಂಧನ (4.76), ಶೌಚಾಲಯ (4.76%), ಕುಡಿಯುವ ನೀರು (4.76%) – ಈ ಸೂಚಕಗಳಲ್ಲಿ ಒಂದು ಕುಟುಂಬಕ್ಕೆ ಕೊರತೆ ಇದ್ದರೆ, ಅವುಗಳನ್ನು ಕೂಡಿಸಿದಾಗ ಬರುವ ಸೂಚ್ಯಂಕ 0.39 (39.21%) ಆಗಿದ್ದು, ಅದು 0.33(33.33%) ಕ್ಕಿಂತ ಹೆಚ್ಚಿರುವುದರಿಂದ ಆ ಕುಟುಂಬವನ್ನು ಬಡ ಕುಟುಂಬವೆಂದೂ, ಆ ಕುಟುಂಬದಲ್ಲಿ ಇರುವ ಎಲ್ಲರನ್ನು (ಉದಾಹರಣೆಗೆ 5 ಸದಸ್ಯರಿದ್ದರೆ) ಐವರನ್ನೂ ಬಡವರು ಎಂದು ಪರಿಗಣಿಸಲಾಗುತ್ತದೆ. 0.39 ನ್ನು ಬಡತನದ ತೀವ್ರತೆ ಎಂದೂ ಪರಿಗಣಿಸಲಾಗುತ್ತದೆ.

ಒಂದು ರಾಜ್ಯ/ಜಿಲ್ಲೆಯ ಜನಸಂಖ್ಯೆಯಲ್ಲಿ ಹೀಗೆ ಲೆಕ್ಕ ಹಾಕಲಾದ ಎಲ್ಲ ಬಡವರ ಪ್ರಮಾಣ(ಅಂದರೆ ಬಡವರು/ಒಟ್ಟು ಜನಸಂಖ್ಯೆ)ವನ್ನು ಬಡತನದ ಪ್ರಮಾಣ ಎಂದು ಕರೆಯಲಾಗುತ್ತದೆ. ಬಡವರೆಂದು ಪರಿಗಣಿಸಲಾದ ಎಲ್ಲ ಬಡವರ ತೀವ್ರತೆಯ ಸರಾಸರಿಯನ್ನು ಆ ರಾಜ್ಯ/ಜಿಲ್ಲೆಯ ಬಡತನದ ತೀವ್ರತೆ ಎಂದು ಪರಿಗಣಿಸಲಾಗುತ್ತದೆ. ಬಡವರ ಪ್ರಮಾಣ ಮತ್ತು ಬಡತನದ ತೀವ್ರತೆಯನ್ನು ಗುಣಿಸಿದರೆ ಬರುವ ಸಂಖ್ಯೆಯನ್ನು ಬಡತನದ ಸೂಚ್ಯಂಕ ಎಂದು ಕರೆಯಲಾಗುತ್ತದೆ. 2015-16ರ ಎನ್.ಎಫ್.ಎಚ್.ಎಸ್-4 (ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ)ರ ಅಂಕಿಸಂಖ್ಯೆಗಳನ್ನು ಬಳಸಿಕೊಂಡು, ನೀತಿ ಆಯೋಗದ ವರದಿಯಲ್ಲಿ ಬಡತನದ ಪ್ರಮಾಣ, ತೀವ್ರತೆ ಮತ್ತು ಸೂಚ್ಯಂಕಗಳನ್ನು ಲೆಕ್ಕ ಹಾಕಲಾಗಿದೆ.

ಬಹುಮುಖಿ ಬಡತನಕ್ಕೆ ಯಾವುದರ ಕಾಣಿಕೆ ಅಧಿಕ?

ಕರ್ನಾಟಕದಲ್ಲಿನ ಬಹುಮುಖಿ ಬಡತನಕ್ಕೆ ಮೂರು ಸೂಚಿಗಳನ್ನೊಳಗೊಂಡ ಆರೋಗ್ಯ ಕ್ಷೇತ್ರದ ಕಾಣಿಕೆಯು ಶೇ.39.8 ರಷ್ಟಿದ್ದರೆ ಎರಡು ಸೂಚಿಗಳನ್ನೊಳಗೊಂಡ ಶಿಕ್ಷಣದ ಕಾಣಿಕೆ ಶೇ. 22.5. ಈ ಬಡತನಕ್ಕೆ ಏಳು ಸೂಚಿಗಳನ್ನೊಳಗೊಂಡ ಜೀವನಮಟ್ಟದ ಕಾಣಿಕೆ ಶೇ. 37.5. ಒಟ್ಟಾರೆ ಬಹುಮುಖಿ ಬಡತನಕ್ಕೆ ಆರೋಗ್ಯ ಕ್ಷೇತ್ರದಲ್ಲಿನ ಕೊರತೆಯ ಕಾಣಿಕೆಯು ಅತ್ಯಧಿಕವಾಗಿದೆ. ಈ ಕ್ಷೇತ್ರದಲ್ಲಿ ಪೌಷ್ಟಿಕತೆ ಕೊರತೆಯ ಕಾಣಿಕೆ ಶೇ. 28.1 ರಷ್ಟಿದ್ದರೆ ತಾಯಂದಿರ ಆರೋಗ್ಯದಲ್ಲಿನ ಕೊರತೆಯ ಕಾಣಿಕೆ ಶೇ. 10.4 ರಷ್ಟಿದೆ. ಈ ಸೂಚ್ಯಂಕವು ತೋರಿಸುತ್ತಿರುವ ಫಲಿತಕ್ಕೂ ಮತ್ತು ಎನ್.ಎಫ್.ಎಚ್.ಎಸ್-5 ತೋರಿಸುತ್ತಿರುವ ಫಲಿತಕ್ಕೂ ನಡುವೆ ಸಂಬಂಧವಿದೆ. ರಾಜ್ಯದ ಒಟ್ಟು ಜನಸಂಖ್ಯೆಯ ಶೇ. 61.3 ರಷ್ಟಿರುವ ಮಕ್ಕಳು ಮತ್ತು ಮಹಿಳೆಯರಲ್ಲಿನ ತೀವ್ರತರದ ಅನಿಮಿಯವು ಬಹುಮುಖಿ ಬಡತನಕ್ಕೆ ಒಂದು ಮುಖ್ಯ ಕಾರಣವಾಗಿದೆ. ಈ ಫಲಿತಗಳ ನೀತಿನಿರೂಪಣಾ ನಿರ್ದೇಶನವು ಸ್ಪಷ್ಟವಾಗಿದೆ. ನಮ್ಮ ರಾಜ್ಯದಲ್ಲಿ ಪ್ರಧಾನವಾಗಿ ಆರೋಗ್ಯ ಸೇವೆ ಮತ್ತು ಅದರಲ್ಲಿ ಪೌಷ್ಟಿಕತೆ ಕಾರ್ಯಕ್ರಮ ಆದ್ಯತೆಯ ಕಾರ್ಯಕ್ರಮವಾಗಬೇಕು ಎಂಬುದು ಈ ಎಲ್ಲ ವರದಿಗಳ ಮತ್ತು ಅಧ್ಯಯನಗಳ ನಿರ್ದೇಶನವಾಗಿದೆ. ಆದರೆ ಈ ಸತ್ಯವು ಸರ್ಕಾರಕ್ಕೆ ತಿಳಿದಂತೆ ಕಾಣುವುದಿಲ್ಲ.

ಬಹುಮುಖಿ ಬಡತನದ ಪ್ರಾದೇಶಿಕ ಆಯಾಮ

ನೀತಿ ಆಯೋಗವು ಪ್ರಕಟಿಸಿರುವ ಭಾರತದಲ್ಲಿನ ಬಹುಮುಖಿ ಬಡತನ ಸೂಚ್ಯಂಕ ವರದಿಯು ರಾಜ್ಯಗಳ ಜಿಲ್ಲಾವಾರು ಬಡವರ ವಿವರಗಳನ್ನು ಒಳಗೊಂಡಿದೆ. (ವಿವಿಧ ಜಿಲ್ಲೆಗಳ ಬಹುಮುಖಿ ಬಡತನದ ಪ್ರಮಾಣವನ್ನು ಕೋಷ್ಟಕ-2ರಲ್ಲಿ ಕೊಡಲಾಗಿದೆ) ಕರ್ನಾಟಕದ 30 ಜಿಲ್ಲೆಗಳಲ್ಲಿ ಪ್ರತಿ ಜಿಲ್ಲೆಯ ಒಟ್ಟು ಜನಸಂಖ್ಯೆಯಲ್ಲಿ ಬಹುಮುಖಿ ಬಡತನ ಎದುರಿಸುತ್ತಿರುವವರ ಪ್ರಮಾಣವನ್ನು ವರದಿಯಲ್ಲಿ ನೀಡಲಾಗಿದೆ. ಇದರ ಪ್ರಕಾರ ಅತ್ಯಧಿಕ ಬಹುಮುಖಿ ಬಡತನ ಎದುರಿಸುತ್ತಿರುವವರ ಪ್ರಮಾಣ ಶೇ.41.67 ಯಾದಗಿರಿ ಜಿಲ್ಲೆಯಲ್ಲಿದ್ದರೆ, ಅತ್ಯಂತ ಕಡಿಮೆ ಪ್ರಮಾಣ ಶೇ. 2.31 ಬೆಂಗಳೂರು ನಗರ ಜಿಲ್ಲೆಯಲ್ಲಿದೆ. ಒಟ್ಟಾರೆ ಬಹುಮುಖಿ ಬಡತನ ಎದುರಿಸುತ್ತಿರುವವರ ಪ್ರಮಾಣ ಶೇ. 20 ಕ್ಕಿಂತ ಅಧಿಕವಿರುವ 8 ಜಿಲ್ಲೆಗಳಲ್ಲಿ ಐದು ಕಲ್ಯಾಣ ಕರ್ನಾಟಕ ವಿಭಾಗದಲ್ಲಿದ್ದರೆ ಮೂರು ಬೆಳಗಾವಿ ವಿಭಾಗದಲ್ಲಿವೆ. ಇದೇ ರೀತಿಯಲ್ಲಿ ಬಹುಮುಖಿ ಬಡತನ ಎದುರಿಸುತ್ತಿರುವವರ ಪ್ರಮಾಣ ಶೇ. 10 ಕ್ಕಿಂತ ಕಡಿಮೆಯಿರುವ 9 ಜಿಲ್ಲೆಗಳಲ್ಲಿ ಐದು ಮೈಸೂರು ವಿಭಾಗದಲ್ಲಿದ್ದರೆ ಮೂರು ಬೆಂಗಳೂರು ವಿಭಾಗದಲ್ಲಿವೆ ಮತ್ತು ಒಂದು ಜಿಲ್ಲೆ ಬೆಳಗಾವಿ ವಿಭಾಗದಲ್ಲಿದೆ.

ಕೋಷ್ಟಕ-2 :ಯಾವ ಜಿಲ್ಲೆಯಲ್ಲಿ ಎಷ್ಟು % ಬಡವರು

ಜಿಲ್ಲೆ % ಜಿಲ್ಲೆ % ಜಿಲ್ಲೆ % ಜಿಲ್ಲೆ % ಜಿಲ್ಲೆ %
ಯಾದಗಿರಿ 41.7 ಗದಗ 20.3 ಚಿಕ್ಕಬಳ್ಳಾಪುರ 15.2 ಚಿಕ್ಕಮಗಳೂರು 11.2 ಬೆಂಗಳೂರು ಗ್ರಾ. 8.4
ರಾಯಚೂರು 32.1 ಬಾಗಲಕೋಟೆ 20.2 ತುಮಕೂರು 14.0 ಉಡುಪಿ 10.3 ಮೈಸೂರು 7.8
ಕೊಪ್ಪಳ 24.6 ಬೀದರ್ 19.4 ಉತ್ತರ ಕನ್ನಡ 13.2 ಕೋಲಾರ 10.3 ದಕ್ಷಿಣ ಕನ್ನಡ 6.7
ಬಳ್ಳಾರಿ 23.4 ಚಾಮರಾಜನಗರ 18.9 ಶಿವಮೊಗ್ಗ 12.7 ಧಾರವಾಡ 9.7 ಹಾಸನ 6.6
ಬಿಜಾಪುರ 22.4 ಚಿತ್ರದುರ್ಗ 15.8 ಬೆಳಗಾಂ 12.3 ರಾಮನಗರ 8.8 ಮಂಡ್ಯ 6.6
ಗುಲ್ಬರ್ಗಾ 21.8 ಹಾವೇರಿ 15.6 ದಾವಣಗೆರೆ 11.7 ಕೊಡಗು 8.7 ಬೆಂಗಳೂರು 2.3

 

ಈ ವಿವರದಿಂದ ಕರ್ನಾಟಕದಲ್ಲಿ ಬಡತನವು ಅತಿಯಾಗಿ ಕಲ್ಯಾಣ ಕರ್ನಾಟಕ ಮತ್ತು ಬೆಳಗಾವಿ ವಿಭಾಗದ ಜಿಲ್ಲೆಗಳಲ್ಲಿ ಮಡುಗಟ್ಟಿಕೊಂಡಿದ್ದರೆ, ಬೆಂಗಳೂರು ಮತ್ತು ಮೈಸೂರು ವಿಭಾಗದ ಜಿಲ್ಲೆಗಳಲ್ಲಿ ಇದು ಕಡಿಮೆ ಪ್ರಮಾಣದಲ್ಲಿದೆ. ಇದೇ ರೀತಿಯಲ್ಲಿ ಎನ್.ಎಫ್.ಎಚ್.ಎಸ್-5 ರಲ್ಲಿನ ವರದಿಯಲ್ಲಿಯೂ ರಾಜ್ಯದ ಕಲ್ಯಾಣ ಕರ್ನಾಟಕದ ಜಿಲ್ಲೆಗಳಾದ ಯಾದಗಿರಿ, ರಾಯಚೂರು, ಕೊಪ್ಪಳ ಮತ್ತು ಕಲಬುರಗಿಗಳಲ್ಲಿ 6 ರಿಂದ 59 ತಿಂಗಳು ವಯೋಮಾನದ ಮಕ್ಕಳಲ್ಲಿ ಅನಿಮಿಯ ಎದುರಿಸುತ್ತಿರುವವರ ಪ್ರಮಾಣ ಶೇ. 70 ಕ್ಕಿಂತ ಅಧಿಕವಾಗಿದೆ. ಆರೋಗ್ಯ ಶಾಸ್ತ್ರ ತೋರಿಸುತ್ತಿರುವಂತೆ  ಮಕ್ಕಳ ಮೊದಲ ಐದು ವರ್ಷ ವಯಸ್ಸಿನಲ್ಲಿ ಅವರ ಮೆದುಳು ಶೇ. 90 ರಷ್ಟು ಬೆಳವಣಿಗೆಯಾಗುತ್ತದೆ. ಅಂದಮೇಲೆ ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿನ ಮಕ್ಕಳ ಬೌದ್ಧಿಕ ಬೆಳವಣಿಗೆಯು ಯಾವ ಪ್ರಮಾಣದಲ್ಲಿ ಕುಂಠಿತಗೊಳ್ಳುತ್ತಿದೆ ಎಂಬುದು ಮೇಲಿನ ವರದಿಗಳಿಂದ ಸ್ಪಷ್ಟವಾಗುತ್ತದೆ.

ಅಪೌಷ್ಟಿಕತೆಯು ಅಂತರ ತಲೆಮಾರು ಆಯಾಮ

ತಾಯಂದಿರಲ್ಲಿನ ಅಪೌಷ್ಟಿಕತೆಗೆ ಅಂತರ ತಲೆಮಾರು ಆಯಾಮವೂ ಇದೆ. ಅಪೌಷ್ಟಿಕತೆ ಎದುರಿಸುತ್ತಿರುವ ಮಹಿಳೆಯರು ಅಪೌಷ್ಟಿಕ ತಾಯಂದಿರಾಗುತ್ತಾರೆ. ಈ ತಾಯಂದಿರುವ ಜನ್ಮ ನೀಡುವ ಮಕ್ಕಳು ಸಹ ಅಪೌಷ್ಟಿಕತೆ ಎದುರಿಸುತ್ತಿರುತ್ತಾರೆ. ಇದರಿಂದ ಹುಟ್ಟುವ ಮಕ್ಕಳು ವಯಸ್ಸಿಗೆ ಅನುಗುಣವಾದ ಎತ್ತರವಿಲ್ಲದ ಸಮಸ್ಯೆಗೆ (ಸ್ಟಂಟಿಂಗ್) ಮತ್ತು ಅಪೌಷ್ಟಿಕತೆ ಎದುರಿಸುತ್ತಿರುವ ತಾಯಂದಿರಿಗೆ ಹುಟ್ಟುವ ಮಕ್ಕಳು ಎತ್ತರಕ್ಕೆ ಅನುಗುಣವಾದ ತೂಕವಿಲ್ಲದ ಸಮಸ್ಯೆಗೆ ಬಲಿಯಾಗುತ್ತಾರೆ. ಅಪೌಷ್ಟಿಕತೆ ಎನ್ನುವುದು ಒಂದು ರೀತಿಯಲ್ಲಿ ವಿಷಚಕ್ರವಿದ್ದಂತೆ. ಈ ಎಲ್ಲ ಕಾರಣಗಳಿಂದ ಅಪೌಷ್ಟಿಕತೆಗೆ ಸಾಮಾಜಿಕ-ಆರ್ಥಿಕ ಆಯಾಮವೂ ಇದೆ. ಮಕ್ಕಳು ಮತ್ತು ಮಹಿಳೆಯರ ಆರೋಗ್ಯದ ಮೇಲೆ ಸರ್ಕಾರವು ಬಂಡವಾಳ ಹೂಡದಿದ್ದರೆ ಇದರಿಂದ ಅಭಿವೃದ್ಧಿಯು ಕುಂಠಿತಗೊಳ್ಳುತ್ತದೆ. ಅಭಿವೃದ್ಧಿಯ ದೃಷ್ಟಿಯಿಂದ ಅಪೌಷ್ಟಿಕತೆಯ ಎರಡು ಪರಿಣಾಮಗಳನ್ನು ನಾವು ಗಮನಿಸಬೇಕಾಗುತ್ತದೆ. (1). ದುಡಿಯುವ ಮಹಿಳೆಯರು ಮತ್ತು ಪುರುಷರ ಆರ್ಥಿಕ ಕಾರ್ಯಕ್ಷಮತೆಯು ಕುಸಿಯುತ್ತದೆ (2). ಇದರಿಂದ ಆರ್ಥಿಕತೆಯಲ್ಲಿ ಆರೋಗ್ಯ ವೆಚ್ಚವು ಅಧಿಕವಾಗುತ್ತದೆ.

ಒಟ್ಟಾರೆ, ಈ ಎಲ್ಲ ವರದಿಗಳು ಮತ್ತು ಅವುಗಳಲ್ಲಿನ ವಿವರಗಳು ಸ್ಪಷ್ಟವಾಗಿ ಕರ್ನಾಟಕವು ಆರೋಗ್ಯಕ್ಕೆ ಸಂಬಂಧಿಸಿದಂತೆ ತೀವ್ರ ಬಿಕ್ಕಟ್ಟನ್ನು ಎದುರಿಸುತ್ತದೆ ಎಂಬುದನ್ನು ತೋರಿಸುತ್ತಿವೆ. ಈ ಸಮಸ್ಯೆಯಲ್ಲಿ ತೀವ್ರ  ಪ್ರಾದೇಶಿಕ ಅಸಮಾನತೆಗಳಿವೆ. ಇಲ್ಲಿ ಗಮನಿಸಬೇಕಾದುದು ಎನ್.ಎಫ್.ಎಚ್.ಎಸ್-5 ಮತ್ತು ನೀತಿ ಆಯೋಗದ ಬಹುಮುಖಿ ಬಡತನ ಸೂಚ್ಯಂಕದ ಸಮೀಕ್ಷೆಗಳು ಕೊರೊನಾ ಮಹಾರೋಗ ಆರಂಭವಾಗುವುದಕ್ಕೆ ಮುಂಚಿನ ಕಾಲದ್ದಾಗಿವೆ. ಅಂದಮೇಲೆ ಕೋವಿಡ್‌ನಿಂದಾಗಿ ರಾಜ್ಯದಲ್ಲಿನ ಅಪೌಷ್ಟಿಕತೆ ಸಮಸ್ಯೆಯು ಮತ್ತಷ್ಟು ಉಲ್ಬಣಗೊಂಡಿರುವ ಸಾಧ್ಯತೆಯಿದೆ. ಆದ್ದರಿಂದ ಸರ್ಕಾರವು ಬಂಡವಾಳ ಹೂಡಿಕೆ, ಮೂಲಸೌಕರ್ಯಗಳಾದ ಎರಡು-ಮೂರು ಲೇನ್ ರಸ್ತೆಗಳು, ವಿದೇಶಿ ಬಂಡವಾಳ ಸಮಾವೇಶ ಮುಂತಾದವುಗಳಿಗೆ ನೀಡಿದಷ್ಟೆ ಗಮನವನ್ನು ಆರೋಗ್ಯ ಕ್ಷೇತ್ರಕ್ಕೆ, ಅದರಲ್ಲೂ ಮಕ್ಕಳು ಮತ್ತು ಮಹಿಳೆಯರ ಸಂತಾನೋತ್ಪತ್ತಿ ಆರೋಗ್ಯಕ್ಕೆ ನೀಡುವುದು ಅಗತ್ಯ. ಈ ವಿಷಯದಲ್ಲಿನ ಪ್ರಾದೇಶಿಕ ಅಸಮಾನತೆಯನ್ನು ಸರ್ಕಾರವು ನಿರ್ಲಕ್ಷಿಸುತ್ತಿದೆ. ಇದು ಸಲ್ಲ. ಕೊನೆಯದಾಗಿ, ಈ ಪ್ರಬಂಧದಲ್ಲಿ ಬಳಸಿರುವ ಅಂಕಿಸಂಖ್ಯೆಗಳೆಲ್ಲವೂ ಸರ್ಕಾರವೇ ಪ್ರಕಟಿಸಿರುವ ವರದಿಗಳಿಂದ ಆಯ್ಕೆ ಮಾಡಿಕೊಳ್ಳಲಾಗಿದೆ. ಇದರ ಬಗ್ಗೆ ಅನುಮಾನದ ಅಗತ್ಯವಿಲ್ಲ.


ಬಹುಮುಖಿ ಬಡತನ ಸೂಚ್ಯಂಕವನ್ನು ಹೇಗೆ ಅಳೆಯಲಾಗುತ್ತದೆ?

ಒಂದು ಕುಟುಂಬದ ಕೊರತೆ ಇರುವ ಎಲ್ಲ ಸೂಚಕಗಳ ಸೂಚ್ಯಂಕ ಪಾಲನ್ನು ಕೂಡಿಸಿದಾಗ ಅದು 0.33 (ಅಥವಾ 33%)ಕ್ಕಿಂತ ಹೆಚ್ಚು ಬಂದರೆ ಅದನ್ನು ಬಡ ಕುಟುಂಬ ಮತ್ತು ಆ ಕುಟುಂಬದ ಎಲ್ಲರನ್ನು ಬಡವರು ಎಂದು ಪರಿಗಣಿಸಲಾಗುತ್ತದೆ. ಉದಾಹರಣೆಗೆ ಗರ್ಭಿಣಿಯ ಆರೈಕೆ (8.335%), ಶಾಲಾ ಹಾಜರಾತಿ (16.67%), ಅಡುಗೆ ಇಂಧನ (4.76), ಶೌಚಾಲಯ (4.76%), ಕುಡಿಯುವ ನೀರು (4.76%) – ಈ ಸೂಚಕಗಳಲ್ಲಿ ಒಂದು ಕುಟುಂಬಕ್ಕೆ ಕೊರತೆ ಇದ್ದರೆ, ಅವುಗಳನ್ನು ಕೂಡಿಸಿದಾಗ ಬರುವ ಸೂಚ್ಯಂಕ 0.39 (39.21%) ಆಗಿದ್ದು, ಅದು 0.33(33.33%) ಕ್ಕಿಂತ ಹೆಚ್ಚಿರುವುದರಿಂದ ಆ ಕುಟುಂಬವನ್ನು ಬಡ ಕುಟುಂಬವೆಂದೂ, ಆ ಕುಟುಂಬದಲ್ಲಿ ಇರುವ ಎಲ್ಲರನ್ನು (ಉದಾಹರಣೆಗೆ 5 ಸದಸ್ಯರಿದ್ದರೆ) ಐವರನ್ನೂ ಬಡವರು ಎಂದು ಪರಿಗಣಿಸಲಾಗುತ್ತದೆ. 0.39 ನ್ನು ಬಡತನದ ತೀವ್ರತೆ ಎಂದೂ ಪರಿಗಣಿಸಲಾಗುತ್ತದೆ.

ಒಂದು ರಾಜ್ಯ/ಜಿಲ್ಲೆಯ ಜನಸಂಖ್ಯೆಯಲ್ಲಿ ಹೀಗೆ ಲೆಕ್ಕ ಹಾಕಲಾದ ಎಲ್ಲ ಬಡವರ ಪ್ರಮಾಣ(ಅಂದರೆ ಬಡವರು/ಒಟ್ಟು ಜನಸಂಖ್ಯೆ)ವನ್ನು ಬಡತನದ ಪ್ರಮಾಣ ಎಂದು ಕರೆಯಲಾಗುತ್ತದೆ. ಬಡವರೆಂದು ಪರಿಗಣಿಸಲಾದ ಎಲ್ಲ ಬಡವರ ತೀವ್ರತೆಯ ಸರಾಸರಿಯನ್ನು ಆ ರಾಜ್ಯ/ಜಿಲ್ಲೆಯ ಬಡತನದ ತೀವ್ರತೆ ಎಂದು ಪರಿಗಣಿಸಲಾಗುತ್ತದೆ. ಬಡವರ ಪ್ರಮಾಣ ಮತ್ತು ಬಡತನದ ತೀವ್ರತೆಯನ್ನು ಗುಣಿಸಿದರೆ ಬರುವ ಸಂಖ್ಯೆಯನ್ನು ಬಡತನದ ಸೂಚ್ಯಂಕ ಎಂದು ಕರೆಯಲಾಗುತ್ತದೆ. 2015-16ರ ಎನ್.ಎಫ್.ಎಚ್.ಎಸ್-4 (ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ)ರ ಅಂಕಿಸಂಖ್ಯೆಗಳನ್ನು ಬಳಸಿಕೊಂಡು, ನೀತಿ ಆಯೋಗದ ವರದಿಯಲ್ಲಿ ಬಡತನದ ಪ್ರಮಾಣ, ತೀವ್ರತೆ ಮತ್ತು ಸೂಚ್ಯಂಕಗಳನ್ನು ಲೆಕ್ಕ ಹಾಕಲಾಗಿದೆ.

ಬಡತನದ ಮುಖ ಸೂಚ್ಯಂಕದಲ್ಲಿ ಪಾಲು ಬಡತನದ ಮುಖದ ಸೂಚಕ ಸೂಚ್ಯಂಕದಲ್ಲಿ

ಪಾಲು

ಬಡತನ ಸೂಚಿಸುವ ಕೊರತೆ (ಅಥವಾ ದುಸ್ಥಿತಿ)
ಆರೋಗ್ಯ 1/3 ಪೌಷ್ಟಿಕತೆ 1/6 (16.67%) ಕುಟುಂಬದ ಯಾವುದೇ 0-59 ತಿಂಗಳವರೆಗಿನ ಮಗು, 15-49 ವರ್ಷದೊಳಗಿನ ಮಹಿಳೆ, 15-54 ವರ್ಷದೊಳಗಿನ ಪುರುಷ ಅಪೌಷ್ಟಿಕವಾಗಿದ್ದರೆ
ಮಕ್ಕಳ ಮರಣ 1/12 (8.335%) ಸಮೀಕ್ಷೆಯ ಮೊದಲಿನ ಕುಟುಂಬದ 5 ವರ್ಷದಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಗು/ಹದಿಹರೆಯದ ಹುಡುಗ/ಹುಡುಗಿ ನಿಧನ ಹೊಂದಿದ್ದರೆ
ಗರ್ಭಿಣಿಯ ಆರೈಕೆ 1/12 (8.335%) ಸಮೀಕ್ಷೆಯ ಮೊದಲಿನ 5 ವರ್ಷದಲ್ಲಿ ಕುಟುಂಬದ ಯಾವುದೇ ಮಹಿಳೆಯ ಇತ್ತೀಚಿನ ಗರ್ಭಧಾರಣೆಯಲ್ಲಿ ಕನಿಷ್ಟ 4 ಪ್ರಸವ-ಪೂರ್ವ ಗರ್ಭಿಣಿ ಆರೈಕೆಯ ಭೇಟಿ ದೊರೆಯದಿದ್ದರೆ ಅಥವಾ ಇತ್ತೀಚಿನ ಮಗುವಿನ ಜನನದ ಸಮಯದಲ್ಲಿ ತರಬೇತಿ ಪಡೆದ ವೈದ್ಯಕೀಯ ಸಿಬ್ಬಂದಿಯ ನೆರವು ಸಿಕ್ಕಿರದಿದ್ದರೆ
ಶಿಕ್ಷಣ 1/3 ಶಾಲಾ ವರ್ಷಗಳು 1/6 (16.67%) ಕುಟುಂಬದ 10 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಒಬ್ಬ ಸದಸ್ಯನೂ 6 ವರ್ಷಗಳ ಶಾಲಾಶಿಕ್ಷಣ ಪಡೆದಿರದಿದ್ದರೆ
ಶಾಲಾ ಹಾಜರಾತಿ 1/6 (16.67%) ಕುಟುಂಬದ 8ನೆಯ ತರಗತಿಯಲ್ಲಿ ಓದುವ ವಯಸ್ಸಿನ ಒಳಗಿನ ಯಾವುದೇ ಮಗು ಶಾಲೆಗೆ ಹೋಗುತ್ತಿಲ್ಲವಾದರೆ
ಜೀವನಮಟ್ಟ 1/3 ಅಡುಗೆ ಇಂಧನ 1/21 (4.76%)) ಒಣಗಿಸಿದ ಸಗಣಿ, ಪೊದೆ, ಕೃಷಿ ಬೆಳೆಗಳು, ಮರ, ಕಲ್ಲಿದ್ದಲು ಅಥವಾ ಇದ್ದಲನ್ನು ಅಡುಗೆಗೆ ಇಂಧನವಾಗಿ ಉಪಯೋಗಿಸಿದರೆ
ಶೌಚಾಲಯ 1/21 (4.76%)) ಕುಟುಂಬದ ಬಳಿ ಶೌಚಾಲಯವಿಲ್ಲ ಅಥವಾ ಅದು ಇತರ ಕುಟುಂಬಗಳೊಂದಿಗೆ ಶೌಚಾಲಯವನ್ನು ಹಂಚಿಕೊಂಡಿದೆ
ಕುಡಿಯುವ ನೀರು 1/21 (4.76%)) ಕುಟುಂಬಕ್ಕೆ ಸುಧಾರಿತ ಕುಡಿಯುವ ನೀರಿನ ಪೂರೈಕೆಯಿಲ್ಲ ಅಥವಾ ಶುದ್ಧ ಕುಡಿಯುವ ನೀರು ತರಲು ಕನಿಷ್ಠ 30 ನಿಮಿಷದ ಒಟ್ಟು ದಾರಿಯಿದೆ.
ವಿದ್ಯುತ್ 1/21 (4.76%)) ಕುಟುಂಬಕ್ಕೆ ವಿದ್ಯುತ್ ಪೂರೈಕೆಯಿಲ್ಲ
ಮನೆ 1/21 (4.76%)) ಕುಟುಂಬಕ್ಕೆ ಬೇಕಾದಷ್ಟು ಗಾತ್ರದ ಮನೆಯಿಲ್ಲ, ಮನೆಯನ್ನು ಕಚ್ಚಾ ಸಾಮಗ್ರಿಗಳಿಂದ ಮಾಡಲಾಗಿದೆ.
ಆಸ್ತಿ 1/21 (4.76%)) ರೇಡಿಯೊ, ಟಿವಿ, ಫೋನ್, ಪ್ರಾಣಿ ಎಳೆಯುವ ಗಾಡಿ, ಸೈಕಲ್, ಮೋಟಾರ್ ಬೈಕ್, ಫ್ರಿಜ್, ಕಾರು ಟ್ರಕ್ – ಇವುಗಳಲ್ಲಿ ಒಂದಕ್ಕಿಂತ ಹೆಚ್ಚು ಆಸ್ತಿಯನ್ನು ಹೊಂದಿಲ್ಲ
ಬ್ಯಾಂಕ್ ಅಕೌಂಟು 1/21 (4.76%)) ಕುಟುಂಬದ ಯಾವುದೇ ಸದಸ್ಯ ಬ್ಯಾಂಕ್ ಅಥವಾ ಪೋಸ್ಠಾಫೀಸು ಅಕೌಂಟು ಹೊಂದಿಲ್ಲ.
100%
Donate Janashakthi Media

Leave a Reply

Your email address will not be published. Required fields are marked *