ಬೆಂಗಳೂರು: ಇಂದು ಕ್ವಿಟ್ ಇಂಡಿಯಾ ಚಳುವಳಿಯ ನೆನಪಿನ ಅಂಗವಾಗಿ ದೇಶದ ಪ್ರಮುಖ ಕಾರ್ಮಿಕ-ರೈತ-ಕೃಷಿ ಕೂಲಿಕಾರರ ಸಂಘಟನೆಗಳು ಸರ್ಕಾರದ ನೀತಿಗಳ ವಿರುದ್ಧ ರಾಷ್ಟ್ರವ್ಯಾಪಿಯಾಗಿ ಸತತ ಎರಡು ವಾರಗಳು ಪ್ರಚಾರಾಂದೋನ ನಡೆಸಿ ರೈತರು, ಕೂಲಿಕಾರರು, ಕಾರ್ಮಿಕರ ಬೇಡಿಕೆಗಳನ್ನು ಪರಿಹರಿಸಬೇಕೆಂದು ಪ್ರತಿಭಟನಾ ಧರಣಿಯನ್ನು ನಡೆಸಿದರು.
ಕಳೆದ ಜುಲೈ 25 ರಿಂದ ಆಗಸ್ಟ್ 8 ರವರೆಗೆ ಪ್ರಚಾರಾಂದೋಲನವನ್ನು ನಡೆಸಿದ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್(ಸಿಐಟಿಯು), ಕರ್ನಾಟಕ ಪ್ರಾಂತ ರೈತ ಸಂಘ(ಕೆಪಿಆರ್‌ಎಸ್), ಅಖಿಲ ಭಾರತ ಕೃಷಿಕೂಲಿಕಾರರ ಸಂಘಟನೆ(ಎಐಎಡಬ್ಲ್ಯೂಯು) ವತಿಯಿಂದ ಕೋಟ್ಯಾಂತರ ಜನರಲ್ಲಿ ಜಾಗೃತಿ ಮೂಡಿಸಿದರು. ಹೋರಾಟದ ಮುಂದುವರೆದ ಭಾಗವಾಗಿ ಇಂದು ರಾಜ್ಯದ ಎಲ್ಲಾ ಜಿಲ್ಲಾ ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆಗಳನ್ನು ನಡೆಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿಪತ್ರವನ್ನು ಸಲ್ಲಿಸಿದರು.
ಬೆಂಗಳೂರು, ದಕ್ಷಿಣ ಕನ್ನಡ, ತುಮಕೂರು, ಮೈಸೂರು, ಮಂಡ್ಯ, ಉಡುಪಿ, ಉತ್ತರ ಕನ್ನಡ ಸೇರಿದಂತೆ ಹಲವು ಜಿಲ್ಲೆ ತಾಲ್ಲೂಕು ಮಟ್ಟದಲ್ಲಿ ಪ್ರತಿಭಟನಾ ಧರಣಿಗಳು ನಡೆದಿವೆ.
ಪ್ರತಿಭಟನೆಯ ಹಕ್ಕೊತ್ತಾಯಗಳು
- ಕೃಷಿ ರಂಗದಲ್ಲಿ ಸುಧಾರಣೆಗಳನ್ನು ಜಾರಿಗೆ ತರುವ ಹೆಸರಿನಲ್ಲಿ ಕೇಂದ್ರ ಸರ್ಕಾರ ಅಂಗೀಕರಿಸಿರುವ ಮೂರು ನೂತನ ಕೃಷಿ ಕಾನೂನುಗಳು ರೈತ ವಿರೋಧಿಯಾಗಿವೆ ಮಾತ್ರವಲ್ಲ ನಮ್ಮ ವ್ಯವಸಾಯ ರಂಗವನ್ನು ಕಬಳಿಸಲು ಹೊಂಚು ಹಾಕುತ್ತಿರುವ ಕಾರ್ಪೋರೇಟ್ ಕಂಪನಿಗಳ ಪರವಾಗಿವೆ ಎಂದು ಆರೋಪಿಸಲಾಗಿದೆ.
ಹೊಸ ಕೃಷಿ ಕಾನೂನುಗಳು ರೈತರಿಗೆ ತಮ್ಮ ಉತ್ಪನ್ನಗಳನ್ನು ಎಲ್ಲಿ ಬೇಕಾದಲ್ಲಿ, ಯಾರಿಗೆ ಬೇಕೋ ಅವರಿಗೆ ಮಾರಾಟ ಮಾಡುವ ಸ್ವಾತಂತ್ರ್ಯ ನೀಡುತ್ತದೆ. ರೈತರಿಗೆ ಇದರಿಂದ ಒಳ್ಳೆಯ ಬೆಲೆ ಸಿಗುತ್ತದೆ ಎಂದು ಪ್ರಚಾರ ಮಾಡಲಾಗುತ್ತಿದೆ. ಆದರೆ, ಕೃಷಿ ಕ್ಷೇತ್ರದೊಳಗೆ ಕಾರ್ಪೋರೇಟ್ ಕಂಪನಿಗಳ ಪ್ರವೇಶಕ್ಕೆ ಮುಕ್ತ ಅವಕಾಶ ನೀಡಲಾಗಿದೆ. ರೈತರ ಉತ್ಪನ್ನಗಳನ್ನು ಖರೀದಿ ಮಾಡುವ ಕಂಪನಿಗಳು ರೈತರೊಂದಿಗೆ ಒಪ್ಪಂದ ಮಾಡಿಕೊಳ್ಳಬಹುದು. ಒಪ್ಪಂದಕ್ಕೆ ತಕ್ಕಂತೆ ಬೆಲೆ ನೀಡಲು ಖರೀದಿದಾರ ಕಂಪನಿ ನಿರಾಕರಿಸಿದರೆ ರೈತರಿಗೆ ಯಾವುದೆ ರಕ್ಷಣೆ ಇಲ್ಲ. ದೈತ್ಯ ಕಂಪನಿಗಳ ವಿರುದ್ದ ನ್ಯಾಯ ಪಡೆಯಲು ರೈತರು ನ್ಯಾಯಾಲಯಗಳಿಗೆ ಅಲೆದಾಡಿ, ಸುಸ್ತಾಗಿ ಆತ್ಮಹತ್ಯೆಗಳಿಗೆ ಶರಣಾಗುತ್ತಿದ್ದಾರೆ. ಅಗತ್ಯ ವಸ್ತುಗಳ ಕಾಯ್ದೆಯನ್ನು ತಿದ್ದುಪಡಿ ಮಾಡಲಾಗಿದೆ. ಇದರಿಂದಾಗಿ ಅಗತ್ಯ ವಸ್ತುಗಳನ್ನು ಬೃಹತ್ ಪ್ರಮಾಣದಲ್ಲಿ ಖಾಸಗಿ ಉಗ್ರಾಣಗಳಲ್ಲಿ ಬಚ್ಚಿಟ್ಟು, ಮಾರುಕಟ್ಟೆಯಲ್ಲಿ ಕೃತಕವಾದ ಅಭಾವವನ್ನು ಉಂಟುಮಾಡಿ, ಅಗತ್ಯ ವಸ್ತುಗಳ ಬೆಲೆಗಳನ್ನು ಗಗನಕ್ಕೇರಿಸಿ ಶ್ರೀಮಂತರು ಲಾಭಮಾಡಿಕೊಳ್ಳಲು ಸರ್ಕಾರ ಈ ಕೃಷಿ ಕಾಯ್ದೆಯ ಮೂಲಕ ಅನುಕೂಲ ಮಾಡಿಕೊಟ್ಟಿದೆ.
ರೈತರ ಉತ್ಪನ್ನಗಳಿಗೆ ಡಾ. ಸ್ವಾಮಿನಾಥನ್ ಆಯೋಗದ ಶಿಫಾರಸ್ಸಿನಂತೆ ಲಾಭದಾಯಕ ಬೆಲೆ ಸಿಗುವುದಿಲ್ಲ. ಕೃಷಿ ಉತ್ಪನ್ನಗಳಿಗೆ ಕನಿಷ್ಟ ಬೆಂಬಲ ಬೆಲೆ ದೊರೆಯುವಂತೆ ರೈತ ಪರ ಕಾನೂನು ಜಾರಿಗೆ ತರಲು ರೈತರು ಬೆಳೆದ ದವಸ ಧಾನ್ಯಗಳನ್ನು, ಹಣ್ಣು ಹಂಪಲು, ತರಕಾರಿಗಳನ್ನು ಸರ್ಕಾರವೇ ಖರೀದಿ ಮಾಡುವ ಪ್ರಸ್ತಾಪವೇ ಇಲ್ಲ. ಕೃಷಿ ಉತ್ಪನ್ನಗಳನ್ನು ಎಪಿಎಂಸಿ ಗಳಿಗೆ ತರುವ ಅಗತ್ಯ ಇಲ್ಲದಂತಾಗಿ ನಿಧಾನವಾಗಿ ಎಲ್ಲಾ ಎಪಿಎಂಸಿಗಳು ಮುಚ್ಚಲ್ಪಡುತ್ತದೆ. ಹಾಗೂ ಸರ್ಕಾರವು ಆದಾಯ ಹಾಗು ಅಗತ್ಯ ವಸ್ತುಗಳ ಬೆಲೆಯನ್ನು ನಿಯಂತ್ರಣ ಮಾಡುವ ಪರಮಾಧಿಕಾರವನ್ನು ಕಳೆದುಕೊಳ್ಳುತ್ತದೆ.
- ಬೇಸಾಯದಲ್ಲಿ ಕೃಷಿ ಕೂಲಿಕಾರರು ಮುಖ್ಯ ಪಾತ್ರ ನಿರ್ವಹಿಸುತ್ತಾರೆ. ಆದರೆ ಕೇಂದ್ರ ಸರ್ಕಾರ ಕೃಷಿ ಕೂಲಿಕಾರರನ್ನು ಗಣನೆಗೇ ತೆಗೆದುಕೊಳ್ಳುವುದಿಲ್ಲ. ದೇಶದಲ್ಲಿ ಋಣಮುಕ್ತಿ ಕಾನೂನು ಇಲ್ಲದೆ ಇರುವುದರಿಂದ ಕೂಲಿಕಾರರು ಮಾಡಿದ ಸಾಲವನ್ನು ವಾಪಸ್ ಕೊಡಲಾಗದೆ ಆತ್ಮಹತ್ಯೆ ಹಾದಿ ತುಳಿಯುತ್ತಾರೆ. ರೈತರು ಬೆಳೆದ ದವಸ ಧಾನ್ಯಗಳನ್ನು ಸರ್ಕಾರವೇ ಕೊಂಡುಕೊಳ್ಳುವ ವ್ಯವಸ್ಥೆ ಇಲ್ಲದಿರುವುದರಿಂದ ಕ್ರಮೇಣ ಪಡಿತರ ಪದ್ಧತಿ ರದ್ದಾಗಲಿದೆ. ಇದರಿಂದ ಎಪಿಎಂಸಿಗಳು ಕ್ರಮೇಣ ಬಂದ್ ಆಗಿ ಅಲ್ಲಿ ಕೂಲಿಕಾರರಿಗೆ, ಹಮಾಲಿ ಕಾರ್ಮಿಕರಿಗೆ ಕೆಲಸ ಸಿಗದಂತಾಗಲಿದೆ. ಕೃಷಿ ರಂಗ ಕಾರ್ಪೋರೇಟೀಕರಣ ಗೊಳ್ಳುವುದರಿಂದ ಯಾಂತ್ರೀಕರಣವೂ ಹೆಚ್ಚಾಗಲಿದ್ದು ಕೂಲಿ ಕಾರ್ಮಿಕರಿಗೆ ಕೃಷಿ ರಂಗದಲ್ಲಿ ಕೆಲಸ ಇಲ್ಲದಂತಾಗಿ ಅವರು ಮತ್ತು ಅವರ ಕುಟುಂಬಗಳು ಬೀದಿಗೆ ಬೀಳಲಿವೆ.
- ಕೈಗಾರಿಕಾ ರಂಗದ ಖಾಸಗೀಕರಣ ಮತ್ತು ಕಾರ್ಪೋರೇಟಿಕರಣ: `ದೇಶದಲ್ಲಿ ಉದಾರೀಕರಣದ ನೀತಿಗಳು ಜಾರಿಯಾದ ಬಳಿಕ ಕೈಗಾರಿಕ ರಂಗದಲ್ಲಿ ಖಾಸಗೀಕರಣ ಮತ್ತು ಕಾರ್ಪೋರೇಟೀಕರಣ ರಭಸದಿಂದ ಅನುಸ್ಠಾನಗೊಳಿಸಲಾಗುತ್ತಾ ಬರಲಾಯಿತು. ತಮ್ಮ ಸರ್ಕಾರದ ಅವಧಿಯಲ್ಲಿ ಖಾಸಗೀಕರಣದ ವೇಗ ಹೆಚ್ಚಾಗಿದೆ. ಈ ದೇಶದ ನೆಲ, ಜಲ, ಇಂಧನ, ಖನಿಜ ಮೊದಲಾದವುಗಳನ್ನು ಉದಾರವಾಗಿ ಅತಿ ಕಡಿಮೆ ದರದಲ್ಲಿ ಕೈಗಾರಿಕೋಧ್ಯಮಿಗಳಿಗೆ ಪೂರೈಸಲು ಸರ್ಕಾರ ಮುಂದಾಯಿತು. ಈ ರೀತಿಯ ಮಾಲಿಕರನ್ನು ಓಲೈಸುವ ನೀತಿಗಳಿಂದಾಗಿ ನಿರುದ್ಯೋಗ ಹೆಚ್ಚಾಗಿದೆ, ಮೀಸಲಾತಿ ಅವಕಾಶಗಳು ಕಡಿತವಾಗಿವೆ. ದೇಶದ ಕಾರ್ಮಿಕ ಕಾನೂನುಗಳಲ್ಲಿ ಸುಧಾರಣೆಗಳನ್ನು ತರುವ ಹೆಸರಿನಲ್ಲಿ ಕಾರ್ಮಿಕ ಕಾನೂನುಗಳನ್ನು ಬಂಡವಾಳದ ಪರವಾಗಿ ಬದಲಾಯಿಸಲಾಗಿದೆ. ದೇಶದ ಕಾರ್ಮಿಕ ವರ್ಗ ಅನೇಕ ಹೋರಾಟಗಳಿಂದ ಗಳಿಸಿದ ಹಕ್ಕುಗಳನ್ನು ಕಿತ್ತುಕೊಳ್ಳುವ ಅಮಾನವೀಯ ಕ್ರಮ ಇದಾಗಿದೆ. ಸುಮಾರು 29 ಕಾರ್ಮಿಕ ಕಾನೂನುಗಳನ್ನು ಬದಲಾಯಿಸಿ ಕೇವಲ 4 ಸಂಹಿತೆಗಳಾಗಿ ಪರಿವರ್ತಿಸಲಾಗಿದೆ.
- ದೇಶದ ಕಾರ್ಮಿಕರು ವಿಶೇಷವಾಗಿ ಅಸಂಘಟಿತ ವಲಯದ ಕಾರ್ಮಿಕರು ಕಳೆದ ಎರಡು ವರ್ಷಗಳ ಅವಧಿಯಲ್ಲಿ ಕೊರೊನಾ ಸಾಂಕ್ರಾಮಿಕಕ್ಕೆ ಬಾಧಿತರಾಗಿ ತೀವ್ರ ಸಂಕಷ್ಟಕ್ಕೆ ಒಳಗಾಗಿ ಕೋಟ್ಯಾಂತರ ಜನ ಕೆಲಸ ಕಳೆದುಕೊಂಡಿದ್ದಾರೆ. ಅವರು ನಿತ್ಯದ ಆದಾಯದಿಂದ ವಂಚಿತರಾಗಿದ್ದಾರೆ. ಊಟಕ್ಕಿಲ್ಲದೆ. ವಾಪಾಸ್ ಊರಿಗೆ ಹೋಗಲು ವಾಹನ ವ್ಯವಸ್ಥೆ ಇಲ್ಲದೆ ನರಕಯಾತನೆ ಅನುಭವಿಸಿದ್ದಾರೆ. ಬೀದಿಗೆ ಬಿದ್ದ ಇವರಿಗೆ ಸಮರ್ಪಕವಾದ ಪರಿಹಾರ, ಅಗತ್ಯ ಉಚಿತ ವೈದ್ಯಕೀಯ ಸೇವೆ ದೊರಕಿಸಲು ಸರ್ಕಾರ ವಿಫಲವಾಗಿದೆ. ಹೀಗಾಗಿ ಲಕ್ಷಾಂತರ ಜನ ಸಾಯುವಂತಾಯಿತು. ಮೃತಪಟ್ಟವರಿಗೆ ಗೌರವಯುತವಾದ ಅಂತ್ಯಸAಸ್ಕಾರ ಮಾಡುವುದಕ್ಕೂ ಸರಕಾರ ಆಸಕ್ತಿ ವಹಿಸಲಿಲ್ಲ. ಯುದ್ಧ ಯೋಧರಂತೆ ಜೀವದ ಹಂಗುತೊರೆದು ಕೆಲಸ ಮಾಡಿದ ಆಶಾ, ಅಂಗನವಾಡಿ, ಮಕ್ಕಳಿಗೆ ಬಿಸಿಯೂಟ ಪೂರೈಸುವ ತಾಯಂದಿರು, ಗ್ರಾಮಪಂಚಾಯತಿ ನೌಕರರು, ಪುರಸಭಾ ಸಿಬ್ಬಂದಿಗಳು ಮುಂತಾದವರಿಗೆ ಈಗಲಾದರೂ ಕಾಯಂ ನೌಕರರಾಗಿ ಪರಿಗಣಿಸಿ ಸರಿಯಾದ ವೇತನ ಸಿಗುವಂತೆ ಮಾಡುವ ಮಾನವೀಯತೆ ಕೆಲಸವನ್ನು ಈ ಸರ್ಕಾರ ಮಾಡಲಿಲ್ಲ.
- ಈ ಹಿಂದಿನ ಕೇಂದ್ರ ಸರ್ಕಾರಗಳು ಆರಂಭಮಾಡಿದ ನವ ಉದಾರೀಕರಣ ನೀತಿಗಳನ್ನೆ ಇವತ್ತಿನ ಸರ್ಕಾರ ತುಂಬಾ ವೇಗವಾಗಿ ಜಾರಿ ಮಾಡುತ್ತಿದೆ. ಸರ್ಕಾರ ಬದಲಾದರು ಜನರ ನಿರೀಕ್ಷೆಗಳನ್ನು ಪೂರೈಸುವ ನಿಟ್ಟಿನಲ್ಲಿ ನೀತಿಗಳು ಬದಲಾಗಿಲ್ಲ.
ಸರ್ಕಾರದ ದುರಾಡಳಿತದ ವಿರುದ್ಧ ದೇಶಾದ್ಯಂತ ಸಿಐಟಿಯು, ಎಐಕೆಎಸ್ ಮತ್ತು ಎಐಎಡಬ್ಲ್ಯೂಯು ಸಂಘಟನೆಗಳು ಜಂಟಿಯಾಗಿ ತಾಲೂಕು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಬೃಹತ್ ಮತ ಪ್ರದರ್ಶನಗಳನ್ನು ನಡೆಸಿವೆ. ದೆಹಲಿ ಗಡಿಗಳಲ್ಲಿ ರೈತರು ನಡೆಸುತ್ತಿರುವ ತ್ಯಾಗಮಯ ಹೋರಾಟ ನಿಲ್ಲುವುದಿಲ್ಲ ಎಂದು ಅವರು ಘೋಷಿಸಿದ್ದಾರೆ. ಅವರ ಹೋರಾಟವನ್ನು ಬೆಂಬಲಿಸುವುದರೊಂದಿಗೆ ಈ ಕೆಳಕಂಡ ಜನಪರ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕೆಂದು ಒತ್ತಾಯಿಸಿದ್ದಾರೆ.
ಪ್ರತಿಭಟನೆಯ ಪ್ರಮುಖ ಬೇಡಿಕೆಗಳು
1.ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ಸಂಹಿತೆಗಳು ಹಾಗೂ ಜನ ವಿರೋಧಿ ಕೃಷಿ ಕಾನೂನುಗಳು ಮತ್ತು ವಿದ್ಯುತ್ ತಿದ್ದುಪಡಿ ಮಸೂದೆಯನ್ನು ರದ್ದುಪಡಿಸಬೇಕು.2. ರೈತರ ಎಲ್ಲಾ ಬೆಳೆಗಳಿಗೂ ಖಾತರಿ ಖರೀದಿಯೊಂದಿಗೆ ಸಮಗ್ರ ಉತ್ಪಾದನಾ ವೆಚ್ಚ ಮತ್ತು ಶೇಕಡಾ 50% ಪ್ರಕಾರ (ಅ2+50%) ನಿಗದಿಪಡಿಸಿದ ಕನಿಷ್ಠ ಬೆಂಬಲ ಬೆಲೆ (ಒSP) ಯನ್ನು ಖಾತರಿಯಾಗಿ ದೊರೆಯುವಂತೆ ಕಾಯ್ದೆ ಮಾಡಬೇಕು. ಮತ್ತು ಋಣಮುಕ್ತ ಕಾಯ್ದೆಯನ್ನು ಅಂಗೀಕರಿಸಿ ಜಾರಿಗೊಳಿಸಬೇಕು.3. ರಾಜ್ಯ ಸರ್ಕಾರ ಶ್ರೀಮಂತರಿಗೆ ಅನುಕೂಲವಾಗುವಂತೆ ಭೂಸುಧಾರಣ ಕಾಯ್ದೆಗೆ ಮಾಡಿರುವ ತಿದ್ದುಪಡಿಯನ್ನು ಹಿಂಪಡೆಯಬೇಕೆAದೂ, ಭೂಮಿ ಇಲ್ಲದ ಬಡವರು ಸಾಗುವಳಿ ಮಾಡುತ್ತಿರುವ ಸರ್ಕಾರಿ ಭೂಮಿಗೆ ಸಾಗುವಳಿ ಚೀಟಿನೀಡಿ ಸಕ್ರಮಗೊಳಿಸಬೇಕು ನಿವೇಶನ ರಹಿತರಿಗೆ ನಿವೇಶನ/ವಸತಿ ಹಂಚಿಕೆ ಮಾಡಲು “ಸಮಗ್ರ ಯೋಜನೆ” ಯೊಂದನ್ನು ಘೋಷಣೆ ಮಾಡಬೇಕು.4. ರಾಜ್ಯದ ಭೂಸುಧಾರಣೆ ಕಾಯ್ದೆ, ಎಪಿಎಂಸಿ ಕಾಯ್ದೆ, ಜಾನುವಾರು ಹತ್ಯಾ ಕಾಯಿದೆಗಳ ಜನವಿರೋಧಿ ತಿದ್ದುಪಡಿಯನ್ನು ರಾಜ್ಯ ಸರ್ಕಾರ ವಾಪಸ್ಸು ಪಡೆಯಬೇಕು.5. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ಖಾದ್ಯ ತೈಲ ಇತ್ಯಾದಿ ಎಲ್ಲಾ ಅಗತ್ಯ ಸರಕುಗಳ ಬೆಲೆಯಲ್ಲಿ ಆಗಿರುವ ತೀವ್ರ ಏರಿಕೆಯನ್ನು ನಿವಾರಿಸಬೇಕು.6. ಉದ್ಯೋಗ ಕಡಿತ ಅಥವಾ ವೇತನ ಕಡಿತ ಮಾಡಬಾರದು. ಕರೋನಾ ಪಿಡುಗಿನ ಅವಧಿಯಲ್ಲಿ ಆದ ಉದ್ಯೋಗ ಹಾಗೂ ವೇತನ ನಷ್ಟಕ್ಕೆ ಪರಿಹಾರ ನೀಡಬೇಕು. ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಬೇಕು. ಸರ್ಕಾರಿ ಹಾಗೂ ಸಾರ್ವಜನಿಕ ಕ್ಷೇತ್ರದಲ್ಲಿ ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು. ಗ್ರಾಮಪಂಚಾಯಿತಿ ನೌಕರರನ್ನು ಖಾಯಂಗೊಳಿಸಬೇಕು. ಹಾಗೂ ಬಾಕಿ ಇರುವ ವೇತನವನ್ನು ಕೂಡಲೇ ಪಾವತಿಸಬೇಕು.7. ಎಲ್ಲಾ ವಲಸೆ ಹಾಗೂ ಅಸಂಘಟಿತ ವಲಯಗಳ ಕಾರ್ಮಿಕರನ್ನು ನೊಂದಣಿ ಮಾಡಬೇಕು. ಮತ್ತು ಪರಿಹಾರ ನೀಡಬೇಕು. ದಿನಗೂಲಿ, ಗುತ್ತಿಗೆ, ಯೋಜನಾ ಕಾರ್ಮಿಕರು, ಅಸಂಘಟಿತ ಕಾರ್ಮಿಕರು ಸೇರಿದಂತೆ ಎಲ್ಲಾ ಕಾರ್ಮಿಕರಿಗೆ ಕನಿಷ್ಠ ವೇತನ, ಸಾಮಾಜಿಕ ಸುರಕ್ಷೆ ಮತ್ತು ಪಿಂಚಣಿಯನ್ನು ಖಾತರಿಪಡಿಸಬೇಕು. ಆಹಾರ ಕಿಟ್‌ಗಳನ್ನು ನೀಡಬೇಕು. ಕರ್ನಾಟಕದಲ್ಲಿ ಕಟ್ಟಡ ಕಾರ್ಮಿಕರಿಗೆ ನೀಡಲಾದ ಆಹಾರ ಕಿಟ್, ಟೂಲ್ ಕಿಟ್‌ಗಳ ಅವ್ಯವಹಾರವನ್ನು ತನಿಖೆಗೊಳಪಡಿಸಬೇಕು ಮತ್ತು ಬೋಗಸ್ ಕಾರ್ಡ್ಗಳನ್ನು ನಿಯಂತ್ರಣಗೊಳಪಡಿಸಿ ಎಲ್ಲಾ ನೈಜ ಕಾರ್ಮಿಕರಿಗೆ ಎಲ್ಲ ಸೌಲಭ್ಯಗಳನ್ನು ಖಾತ್ರಿಗೊಳಿಸಬೇಕು. 8. ಮಹಾತ್ಮಾಗಾಂಧಿ ಉದ್ಯೋಗ ಖಾತ್ರಿ ಯೋಜನೆಗೆ ಬಡ್ಜೆಟ್ ಅನುದಾನವನ್ನು ಹೆಚ್ಚಿಸಿ ದಿನಕ್ಕೆ 600 ರೂ. ನಂತೆ ಕನಿಷ್ಠ 200 ದಿನಗಳ ಕೆಲಸ ಖಾತರಿಪಡಿಸಬೇಕು. ನಗರ ಉದ್ಯೋಗ ಖಾತರಿ ಕಾಯ್ದೆಯನ್ನು ಅಂಗೀಕರಿಸಬೇಕು. ನರೇಗಾದಲ್ಲಿ ಜಾತಿ ಆಧಾರಿತ ಕೆಲಸ ಹಾಗೂ ಕೂಲಿ ಪಾವತಿಯ ತಾರತಮ್ಯದ ಸಲಹಾ ಪ್ರಸ್ತಾಪವನ್ನು ವಾಪಸ್ಸು ಪಡೆಯಬೇಕು. 9. ಆದಾಯ ತೆರಿಗೆ ವ್ಯಾಪ್ತಿಯಿಂದ ಹೊರಗಿರುವ ಎಲ್ಲಾ ಕುಟುಂಬಗಳಿಗೆ ತಿಂಗಳಿಗೆ 10,000 ರೂ. ನಂತೆ ನಗದು ವರ್ಗಾವಣೆ ಮಾಡಬೇಕು. 10. ಕರೋನಾ ಪಿಡುಗಿನ ಅವಧಿ ಇರುವವರೆಗೂ ತಿಂಗಳಿಗೆ ಪ್ರತಿ ವ್ಯಕ್ತಿಗೆ 10 ಕೆಜಿ ಉಚಿತ ಆಹಾರ ಧಾನ್ಯ ಒದಗಿಸಬೇಕು.11. ಎಲ್ಲ ಮುಂಚೂಣಿ ಕೋವಿಡ್ ದುಡಿಮೆಗಾರರಿಗೆ ಆದ್ಯತೆ ನೀಡಿ ತಕ್ಷಣವೇ ಎಲ್ಲರಿಗೂ ಉಚಿತ ಹಾಗೂ ಸಾರ್ವತ್ರಿಕ ಲಸಿಕೆ ಒದಗಿಸುವುದನ್ನು ಖಾತರಿಪಡಿಸಬೇಕು. ಒಂದು ನಿರ್ದಿಷ್ಟ ಕಾಲಾವಧಿಯಲ್ಲಿ ಎಲ್ಲರೂ ಉಚಿತ ಲಸಿಕೆ ಪಡೆಯುವಂತಾಗಲೂ ಲಸಿಕೆ ಉತ್ಪಾದನೆಯನ್ನು ಗಣನೀಯವಾಗಿ ಹೆಚ್ಚಿಸಿ, ವಿತರಣೆಯನ್ನು ಸರ್ಕಾರದ ನಿಯಂತ್ರಣಕ್ಕೆ ಒಳಪಡಿಸಬೇಕು.12. ಆರೋಗ್ಯ ಕ್ಷೇತ್ರಕ್ಕೆ ಜಿಡಿಪಿಯ ಶೇಕಡಾ 6 ರಷ್ಟನ್ನು ನಿಗದಿಪಡಿಸಬೇಕು. ಕೋವಿಡ್ ತೀವ್ರ ಏರಿಕೆ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸುವಂತಹ ಸಮರ್ಪಕ ಹಾಸಿಗೆ ಸೌಲಭ್ಯ, ಆಕ್ಸಿಜನ್ ಹಾಗೂ ಇತರೆ ವೈದ್ಯಕೀಯ ಸೌಲಭ್ಯಗಳನ್ನು ಖಾತರಿಪಡಿಸಲು ಅಗತ್ಯ ಆರೋಗ್ಯ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಬೇಕು. ಕೋವೀಡ್ ಮತ್ತು ಕೋವಿಡ್ ಯೇತರ ಕಾರಣದಿಂದ ಮೃತಪಟ್ಟ ಎಲ್ಲ ಕುಟುಂಬಗಳಿಗೂ ಕನಿಷ್ಟ 5 ಲಕ್ಷ ಪರಿಹಾರ ನೀಡಬೇಕು. ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಮತ್ತು ಆರೋಗ್ಯ ಮೂಲಭೂತ ಸೌಕರ್ಯಗಳನ್ನು ಬಲಪಡಿಸಬೇಕು.13. ಖಾಸಗೀಕರಣ ಹಾಗೂ ಸಾರ್ವಜನಿಕ ವಲಯಗಳ ಉದ್ದಿಮೆಗಳ, ಸರ್ಕಾರಿ ಇಲಾಖೆಗಳ ಬಂಡವಾಳ ವಾಪಸ್ಸಾತಿಗಳನ್ನು ನಿಲ್ಲಿಸಬೇಕು. ಕರಾಳ ಅಗತ್ಯ ರಕ್ಷಣಾ ಸೇವಾ ಸುಗ್ರೀವಾಜ್ಞೆ ಅನ್ನು (ಇಆSಔ) ವಾಪಸ್ಸು ಪಡೆಯಬೇಕು. ಎಂದು ಒತ್ತಾಯಿಸಲಾಗಿದೆ.
ಸರ್ಕಾರವು ಈ ಮೇಲಿನ ಬೇಡಿಕೆಗಳನ್ನು ಈಡೇರಿಸದೇ ಇದ್ದಲ್ಲಿ ದೇಶದ ಜನತೆ ಮತ್ತಷ್ಟು ತೀವ್ರವಾದ ಜನಚಳುವಳಿಗಳಿಗೆ ಮುಂದಾಗಲಿದ್ದಾರೆ ಎಂದು ಪ್ರತಿಭಟನೆಯಲ್ಲಿ ಮಾತನಾಡಿದ ಮುಖಂಡರು ವಿಚಾರವನ್ನು ಮಂಡಿಸಿದರು.