ಬೆಂಗಳೂರು: ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಕಾರ್ಮಿಕರು ದೊಡ್ಡ ಪ್ರಮಾಣದಲ್ಲಿ ಹೋರಾಟಕ್ಕೆ ಮುಂದಾಗಬೇಕು ಎಂದು ರಾಜ್ಯಸಭಾ ಸದಸ್ಯರಾದ ಡಾ. ಎಲ್. ಹನುಮಂತಯ್ಯ ಕರೆ ನೀಡಿದರು.
ಇಂದು ಶಾಸಕರ ಭವನದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಸಾರ್ವಜನಿಕ ರಂಗ ಮತ್ತು ಅಭಿವೃದ್ಧಿ ಎಂಬ ವಿಷಯದ ಮೇಲೆ ನಡೆದ ದುಂಡುಮೇಜಿನ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಾ, ದೇಶದಲ್ಲಿ ಖಾಸಗಿ ಹಿಡಿತದಲ್ಲಿದ್ದ ಬ್ಯಾಂಕಿಂಗ್ ವ್ಯವಸ್ಥೆ ರಾಷ್ಟ್ರೀಕರಣದ ಪರಿಣಾಮವಾಗಿ ಬಡವರಿಗೆ ಸಹಾಯ ಧನದ ಯೋಜನೆ, ಕಡಿಮೆ ಬಡ್ಡಿ ದರದ ಸಾಲ ಯೋಜನೆಯನ್ನು ಜಾರಿಗೊಳಿಸಲಾಯಿತು. ಬಡವರು ಬ್ಯಾಂಕ್ ಖಾತೆ ತೆರೆಯುವುದೇ ಕಷ್ಟವಾಗಿದ್ದ ಸಂದರ್ಭದಲ್ಲಿ ಬ್ಯಾಂಕಿಂಗ್ ರಾಷ್ಟ್ರೀಕರಣವಾಗಿತ್ತು. ಆಗಿನ ಸಂದರ್ಭ ಬ್ಯಾಂಕಿನ ಎಂಡಿಗಳು ಒಂದು ಕಡೆ ಸಾಲಾಗಿ ನಿಲ್ಲುತ್ತಿದ್ದರು. ಬಡವರು ಮತ್ತೊಂದು ಕಡೆ ಸಾಲಾಗಿ ನಿಂತಿದ್ದರೆ ಯಾವ ಬ್ಯಾಂಕಿಗೆ ಖಾತೆ ಮಾಡಬೇಕೆಂದು ಬಡವ ನಿರ್ಧರಿಸಿದರೆ. ಆ ಬ್ಯಾಂಕಿನ ಎಂಡಿ ಅವರ ಬಳಿ ಹೋಗುತ್ತಿದ್ದ ಆ ದಿನಗಳು ಅದಾಗಿತ್ತು. ಬಡವರು, ಕೂಲಿಕಾರ್ಮಿಕರು, ಸಣ್ಣ ವ್ಯಾಪಾರಸ್ಥರಿಗೂ ಸಾಲ ತೆಗೆದುಕೊಳ್ಳುವ ಹಕ್ಕು ಬಂದಿತ್ತು.
ಇಂದಿನ ಎಲ್ಲಾ ಸರ್ಕಾರಿ ಇಲಾಖೆಗಳ ಭ್ರಷ್ಟದ ಕೂಪದಲ್ಲಿ ಮುಳುಗಿದೆ ಎಂಬ ಸಂದರ್ಭದಲ್ಲೆ ಇಂದಿಗೂ ಸಹ ಬ್ಯಾಂಕಿಂಗ್ ವ್ಯವಸ್ಥೆ ಅತ್ಯಂತ ಪ್ರಾಮಾಣಿಕವಾಗಿ ನಡೆದುಕೊಂಡು ಬರುತ್ತಿರುವುದು ಸಂತೋಷದ ಸಂಗತಿ. ಸಾರ್ವಜನಿಕ ಉದ್ದಿಮೆ ಎಂದರೆ ಬರೀ ಲಾಭ ಮಾಡುವುದಷ್ಟೆ ಅಲ್ಲ ಅದು ಸುಸ್ಥಿರವಾಗಿ ನಡೆಯುಸುವುದೇ ಒಂದು ಕ್ರಮಬದ್ಧವಾಗಿದೆ. ಸಾರ್ವಜನಿಕ ಉದ್ದಿಮೆಗಳ ನಷ್ಟದ ಅಂದಾಜು 12 ಲಕ್ಷ ಕೋಟಿಯಷ್ಟು ಎನ್‌ಪಿಎ ಇದೆ. ಆದರೆ ಬಡವರಿಗೆ ನೀಡಿದ್ದು ಒಟ್ಟಾರೆ ಸಾಲದ ಪ್ರಮಾಣವನ್ನು ಗಮನಿಸಿದರೆ 1 ಸಾವಿರ ಕೋಟಿಯೂ ಆಗುವುದಿಲ್ಲ.
ಸಾರ್ವಜನಿಕ ಉದ್ದಿಮೆಗಳ ಸ್ಥಾಪನೆಯೇ ಅತ್ಯಂತ ತಳ ಮಟ್ಟದ ಆರ್ಥಿಕ ಚಟುವಟಿಕೆಗೆ ದಾರಿ ಮಾಡಿಕೊಟ್ಟಿತು. ಇಂದಿಗೂ ಸಾರ್ವಜನಿಕ ಉದ್ದಿಮೆಗಳು ಲಾಭವಾಗಿ ನಡೆಯುತ್ತಿದೆ. ಒಂದು ಉದಾಹರಣೆಯನ್ನು ಗಮನಿಸಿದರೆ ಬಿ ಎಸ್ ಎನ್ ಎಲ್ 4 ಲಕ್ಷ ಕೋಟಿ ರೂ.ಗಳ ಅಂದಾಜು ಆಸ್ತಿ ಇದೆ. ಆದರೆ ಇದನ್ನು ಬೆಳ್ಳಿ ತಟ್ಟೆಯಲ್ಲಿ ಖಾಸಗಿಯವರಿಗೆ ದಾನ ಮಾಡಲು ಸರ್ಕಾರ ಹೊರಟಿದೆ. ಹಾಗೆಯೇ 32 ಲಕ್ಷ ಕೋಟಿ ರೂ.ಗಳ ಆಸ್ತಿಯನ್ನು ಹೊಂದಿರುವ ಎಲ್‌ಐಸಿಯನ್ನು ಸಹ ಖಾಸಗಿಕರಿಸಲು ಸರ್ಕಾರ ಹೊರಟಿದೆ. ದೇಶದ ರೈಲ್ವೆ ವ್ಯವಸ್ಥೆ ಅತಿ ಹೆಚ್ಚು ಉದ್ಯೋಗ ಸೃಷ್ಟಿ ಮಾಡಿದೆ. ಆದರೂ ಸಹ ಸರ್ಕಾರ ಅದರ ಖಾಸಗೀಕರಣಕ್ಕೆ ಮುಂದಾಗುತ್ತಿದೆ ಎಂದರು.
ಉದಾರೀಕರಣದ ಆರಂಭ ರುವಾರಿಗಳಾದ ಆಗಿನ ಪ್ರಧಾನಿ ಪಿ.ವಿ.ನರಹಿಂಹರಾವ್ ಹಾಗೂ ಹಣಕಾಸು ಮಂತ್ರಿ ಮನಮೋಹನ್ ಸಿಂಗ್ ರವರು ಜಾರಿಗೆಗೊಳಿಸಿದ ನೀತಿಯಲ್ಲಿ ಸಾರ್ವಜನಿಕರ ಉದ್ದಿಮೆಗಳ ವಿಭಾಗೀಕರಣ ಮಾಡಲಾಗಿತ್ತು. ಲಾಭದಾಯಕ ಸಂಸ್ಥೆಗಳನ್ನು ನವರತ್ನಗಳೆಂದು ಕರೆಯಲಾಯಿತು. ಸಾರ್ವಜನಿಕ ಉದ್ದಿಮೆಯ 7-8 ಸಂಸ್ಥೆಗಳು ಈಗಾಗಲೇ ಡಿಸ್‌ಇನ್ವೆಸ್ಟ್‌ಮೆಂಟ್ ಆಗಿದೆ. ಅಲ್ಲದೆ ಪ್ರಸ್ತುತ 33 ಸಂಸ್ಥೆಗಳು ಇದೇ ಹಾದಿಯಲ್ಲಿದೆ. ಅದರಲ್ಲಿ ಮುಖ್ಯವಾಗಿ ಸಿಮೆಂಟ್ ಸಂಸ್ಥೆಗಳು, ಎಲೆಕ್ಟ್ರಾನಿಕ್ಸ್, ಸ್ಟೀಲ್ ಕಂಪನಿ, ರೈಲ್ವೆ ಸಂಸ್ಥೆಗಳು, ಫಾರ್ಮಾಸ್ಟಿಕ್ ಸಂಸ್ಥೆಗಳು ಸಹ ಒಳಗೊಂಡಿದೆ. ಸರ್ಕಾರವು ಇದನ್ನು ನಡೆಸಲು ಸಾಧ್ಯವಿಲ್ಲವೆಂದು ನಿರ್ಧರಿಸಿದೆ.
ಜನಶಕ್ತಿ ಮೀಡಿಯಾ ವಾಟ್ಸಪ್ ಸೇರಿಕೊಳ್ಳಲು ಈ ಲಿಂಕ್ ಕ್ಲಿಕ್ ಮಾಡಿ
ಹಿಂದಿನ ಸರ್ಕಾರಗಳು ಸಹ ಖಾಸಗೀಕರಣ ಮಾಡಿದ್ದು ನಿಜ. ಆದರೆ ಸರ್ಕಾರಕ್ಕೆ ಒಂದು ಮಧ್ಯಮ ಮಾರ್ಗದ ನೀತಿ ಇರಬೇಕಾಗುತ್ತದೆ. ಆದರೆ ಈಗಿನ ಸರ್ಕಾರಕ್ಕೆ ಆ ಯಾವ ನೀತಿಯೂ ಇಲ್ಲದಂತಾಗಿದೆ. ಉದ್ಯೋಗ ಭದ್ರತೆ, ನೌಕರರ ಅನುಕೂಲತೆಗಳು, ಮೀಸಲಾತಿ, ಎಸ್ ಸಿ ಎಸ್ ಟಿ ಮೀಸಲಾತಿಯ ಪ್ರಮಾಣದಿಂದಾಗಿ ದೊಟ್ಟ ಮಟ್ಟದ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಸಾಧ್ಯವಾಗಿದೆ. ಆದರೆ ಕಾರ್ಮಿಕರ ಗುತ್ತಿಗೆ ಪದ್ಧತಿಯಿಂದಾಗಿ ಉದ್ಯೋಗ ಭದ್ರತೆ ಇಲ್ಲ. ಇದು ಗುಲಾಮನಾಗಿ ಕೆಲಸ ಮಾಡುವಂತದ್ದಾಗಿದೆ. ಆದರೆ ದೇಶದ ಆಳುವ ವರ್ಗ ಜನರು ಆತ್ಮವಿಶ್ವಾಸದಿಂದ ಭಾರತವನ್ನು ಕಟ್ಟಿ ಎಂದು ಹೇಳುತ್ತಿದೆ. ಆತ್ಮ ವಿಶ್ವಾಸ ಭಾರತ ಹೇಗೆ ಕಟ್ಟುವುದು. ಪ್ರಸ್ತುತ ನಡೆಯುತ್ತಿರುವ ರೈತರ ಹೋರಾಟವನ್ನು ನಾವು ಗಮನಿಸಿದರೆ ರೈತರ ಹೊಸ ಕಾನೂನುಗಳ ರದ್ದತಿ ಬಗ್ಗೆ ಚಕಾರ ಎತ್ತುತ್ತಿಲ್ಲ. ರೈತರ ಹೋರಾಟದಲ್ಲಿ ಸುಮಾರು 180 ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಲಕ್ಷಾಂತರ ರೈತರ ನಿರಂತರ ಹೋರಾಟ ಇದಾಗಿದೆ. ಸರ್ಕಾರ ಕೇವಲ ಮಾತುಕತೆಯ ನಾಟಕವಾಡುತ್ತಿದೆ ಆದರೆ ಮೂಲಭೂತ ಪ್ರಶ್ನೆಯ ಬಗ್ಗೆ ಚರ್ಚಿಸುತ್ತಿಲ್ಲ. 11 ಬಾರಿ ಮಾತುಕತೆಯಲ್ಲಿ ಮೂಲ ಪ್ರಶ್ನೆಯ ಚರ್ಚೆಗೆ ಸರ್ಕಾರ ಮುಂದಾಗಲಿಲ್ಲ. ಎರಡು ವರ್ಷ ತಡೆ ಹಿಡಿಯಲಾಗುವುದು ಎಂದು ಹೇಳುತ್ತಿದೆ ವಿನಃ ಅದನ್ನು ರದ್ದು ಮಾಡಲು ಮುಂದಾಗುತ್ತಿಲ್ಲ.
ಇದನ್ನೂ ಓದಿ : ಕಾರ್ಮಿಕರ ಕೋಟಿ ಹೆಜ್ಜೆ ನಡೆ ವಿಧಾನಸೌಧದೆಡೆ ಬಜೆಟ್ ಆಧಿವೇಶನ ಚಲೋ
ಸರ್ಕಾರ ಅಂದರೆ ಎಲ್ಲಾ ಭಾರತೀಯ ಜನರ ದನಿಯನ್ನು ತೆಗೆದುಕೊಳ್ಳಬೇಕಾಗಿತ್ತು. ಆದರೆ ಮುಂದೆ ಬಂದಿಲ್ಲ. ಮೂರು ತಿಂಗಳಿಂದ ರೈತರ ಹೋರಾಟ ನಡೆಯುತ್ತಿದೆ. ಅಲ್ಲದೆ ರೈತರ ಕಾನೂನುಗಳ ತಿದ್ದುಪಡಿ ರದ್ದಾಗುವವರೆಗೂ ನಾವು ನಿರಂತರವಾಗಿ ಧರಣಿಯನ್ನು ಮುಂದುವರೆಸುತ್ತೇವೆ ಎಂದು ರೈತರು ನಿರ್ಧರಿಸಿದ್ದಾರೆ. ಅಕ್ಟೋಬರ್ ನಲ್ಲಿ ಒಂದು ಲಕ್ಷ ಟ್ರ್ಯಾಕ್ಟರ್ ರ‍್ಯಾಲಿ ಮಾಡಲು ನಿರ್ಧರವಾಗಿದೆ. ಯಾವ ಹೋರಾಟಕ್ಕು ಜಗ್ಗದ ಈಗಿನ ಸರ್ಕಾರವು ಕಾರ್ಮಿಕರ ಸ್ಥಿತಿ ಬದಲಾದರೆ ಏನಾಗಬೇಕು. ಹಾಗಾಗಿ ಕಾರ್ಮಿಕರು ದೊಡ್ಡ ಪ್ರಮಾಣದಲ್ಲಿ ಇದನ್ನು ವಿರೋಧ ಮಾಡದಿದ್ದರೆ ದೇಶದ ಉಳಿಗಾಲವಿಲ್ಲ. ಹೋರಾಟವನ್ನು ಗಟ್ಟಿಯಾಗಿ ಕಟ್ಟಬೇಕು. ಕಾರ್ಮಿಕರ ಇಡೀ ಕುಟುಂಬ ಇದರ ಜೊತೆಯಲ್ಲಿ ಭಾಗಿಯಾಗಬೇಕು ಎಂದು ಎಲ್ ಹನಮಂತಯ್ಯ ಕರೆ ನೀಡಿದರು.
ದುಂಡು ಮೇಜಿನಸಭೆಯಲ್ಲಿ ಚಿತ್ರ ನಿರ್ದೇಶಕ ಬಿ.ಸುರೇಶ, ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್, ಸಿಐಟಿಯು ರಾಜ್ಯಾಧ್ಯಕ್ಷರಾದ ಎಸ್. ವರಲಕ್ಷ್ಮಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ, ರೈತ ಸಂಘಟನೆಯ ಮುಖಂಡರುಗಳಾದ ಜಿ.ಸಿ ಬಯ್ಯಾರೆಡ್ಡಿ, ಬಡಗಲಪುರ ನಾಗೇಂದ್ರ, ದಲಿತ ಸಂಘಟನೆಯ ಮೋಹನ್ ರಾಜ್, ಕಾರ್ಮಿಕ ಮುಖಂಡರಾದ ಆರ್.ವಿ.ಸುದರ್ಶನ್, ಗೋಪಾಲ್ ದೊಡ್ಡಮಾಲೂರು ಶ್ರೀನಿವಾಸ ಸೇರಿದಂತೆ ನೂರಾರು ಜನರಿದ್ದರು.